Homeಮುಖಪುಟಯಡ್ಯೂರಪ್ಪಗೆ ರಾಜ್ಯಪಾಲ ಹುದ್ದೆ!? ಸಿಎಂ ಗಾದಿಯಿಂದ ಕೆಳಗಿಳಿಸಲು ನಡೆದಿದೆಯಾ ಹೊಸ ಮಸಲತ್ತು...

ಯಡ್ಯೂರಪ್ಪಗೆ ರಾಜ್ಯಪಾಲ ಹುದ್ದೆ!? ಸಿಎಂ ಗಾದಿಯಿಂದ ಕೆಳಗಿಳಿಸಲು ನಡೆದಿದೆಯಾ ಹೊಸ ಮಸಲತ್ತು…

ಪ್ರಮಾಣ ವಚನದ ವಿಳಂಬ ಇರಬಹುದು, ಸಂಪುಟ ರಚನೆಗೆ ಕೊಕ್ಕೆ ಹಾಕಿದ್ದಿರಬಹುದು, ಮೂವರು ಡಿಸಿಎಂ ನೇಮಕ, ರಾಜ್ಯಾಧ್ಯಕ್ಷರ ಶಾಕಿಂಗ್ ನೇಮಕ, ಮೇಯರ್ ಆಯ್ಕೆ, ನೆರೆ ಪರಿಹಾರದ ನಿರ್ಲಕ್ಷ್ಯ ಹೀಗೆ ಸಿಎಂ ಆದ ನಂತರದಲ್ಲಿ ಯಡ್ಯೂರಪ್ಪನವರು ತಮ್ಮದೇ ಪಕ್ಷದಿಂದ ಅನುಭವಿಸುತ್ತಿರುವ ಅವಮಾನಗಳು ಒಂದೆರಡಲ್ಲ..

- Advertisement -
- Advertisement -

ಯಡ್ಯೂರಪ್ಪರನ್ನು ರಾಜ್ಯ ರಾಜಕಾರಣದಲ್ಲಿ ಮೂಲೆಗುಂಪು ಮಾಡಲು ಸಕಲ ತಯಾರಿ ನಡೆಸಿರುವ ಬಿಜೆಪಿ ಹೈಕಮಾಂಡ್, ಅದಕ್ಕಾಗಿ ಅವರನ್ನು ಯಾವುದಾದರೊಂದು ರಾಜ್ಯಕ್ಕೆ ಗೌರ್ನರ್ ಆಗಿ ನೇಮಿಸುವ ಯೋಜನೆ ಹಾಕಿಕೊಂಡಿದೆಯಾ? ಇಂತದ್ದೊಂದು ಚರ್ಚೆ ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ರಾಜ್ಯ ಕಚೇರಿ ಜಗನ್ನಾಥ್ ಭವನದ ಆಸುಪಾಸಿನಲ್ಲಿ ಹರಿದಾಡುತ್ತಿದೆ.

ಹೌದು, ಈಗ ಕೇಳಿಬರುತ್ತಿರುವ ವರ್ತಮಾನ ನಿಜವೇ ಆದಲ್ಲಿ ಯಡ್ಯೂರಪ್ಪನವರನ್ನು ಗೋವಾ ಅಥವಾ ಜಾರ್ಖಂಡ್, ಈ ಎರಡರಲ್ಲಿ ಯಾವುದಾದರು ಒಂದು ರಾಜ್ಯಕ್ಕೆ ಗೌರ್ನರ್ ಆಗಿ ಆಯ್ಕೆ ಮಾಡಲು ತಯಾರಿಗಳು ನಡೆದಿವೆ. ಬಿಜೆಪಿ ಹೈಕಮಾಂಡ್‌ಗೆ, ಕರ್ನಾಟಕದ ಯಡ್ಯೂರಪ್ಪನವರ ಸರ್ಕಾರ ಬೇಡದ ಕೂಸು. ಅದಕ್ಕಾಗಿ ಎಷ್ಟೆಲ್ಲ ನಿರ್ಲಕ್ಷ್ಯ ತೋರಲು ಸಾಧ್ಯವೋ ಅಷ್ಟೂ ನಿರ್ಲಕ್ಷ್ಯದೊಂದಿಗೆ ಯಡ್ಯೂರಪ್ಪನವರಿಗೆ ನಿರಂತರವಾಗಿ ಅವಮಾನ ಮಾಡಲಾಗುತ್ತಿದೆ. ಪ್ರಮಾಣ ವಚನದ ವಿಳಂಬ ಇರಬಹುದು, ಸಂಪುಟ ರಚನೆಗೆ ಕೊಕ್ಕೆ ಹಾಕಿದ್ದಿರಬಹುದು, ಮೂವರು ಡಿಸಿಎಂ ನೇಮಕ, ರಾಜ್ಯಾಧ್ಯಕ್ಷರ ಶಾಕಿಂಗ್ ನೇಮಕ, ಮೇಯರ್ ಆಯ್ಕೆ, ನೆರೆ ಪರಿಹಾರದ ನಿರ್ಲಕ್ಷ್ಯ ಹೀಗೆ ಸಿಎಂ ಆದ ನಂತರದಲ್ಲಿ ಯಡ್ಯೂರಪ್ಪನವರು ತಮ್ಮದೇ ಪಕ್ಷದಿಂದ ಅನುಭವಿಸುತ್ತಿರುವ ಅವಮಾನಗಳು ಒಂದೆರಡಲ್ಲ. ಅದಕ್ಕೆಲ್ಲ ಕಾರಣ ಬಿ.ಎಲ್.ಸಂತೋಷ್ ಎಂಬ ಆರೆಸ್ಸೆಸ್ ತಂತ್ರಗಾರ!

ಬಹಳ ದಿನಗಳಿಂದಲೇ ಕರ್ನಾಟಕ ಸಿಎಂ ಗಾದಿಯ ಮೇಲೆ ಕಣ್ಣಿಟ್ಟಿರುವ ಈ ಸಂತೋಷ್ ಹಂತಹಂತವಾಗಿ ರಾಜ್ಯ ಬಿಜೆಪಿಯನ್ನು ತನ್ನ ಕಬ್ಜಾಕ್ಕೆ ತೆಗೆದುಕೊಳ್ಳುತ್ತಾ ಬರುತ್ತಿದ್ದಾರೆ. ಯಡ್ಯೂರಪ್ಪ ಸಿಎಂ ಆಗುವುದು ನಿಕ್ಕಿಯಾಗುವುದಕ್ಕು ಕೆಲ ದಿನಗಳ ಮೊದಲಷ್ಟೇ ತಾನು ಬಿಜೆಪಿ ‘ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ’ಯಂತಹ ಪವರ್‌ಫುಲ್ ಹುದ್ದೆಗೆ ನೇಮಕವಾಗುವಂತೆ ನೋಡಿಕೊಂಡ ಸಂತೋಷ್, ಯಡ್ಯೂರಪ್ಪರನ್ನು ನಿಯಂತ್ರಿಸಲು ಬೇಕಾದ ಶಸ್ತ್ರಗಳನ್ನು ತನ್ನ ಬತ್ತಳಿಕೆಗೆ ಸೇರ್ಪಡೆ ಮಾಡಿಕೊಂಡಿದ್ದರು. ‘ಬ್ರಾಹ್ಮಣ’ ಜಾತಿಯ ಜೊತೆಗೆ ಸಂಘ ಪರಿವಾರದ ಪವರ್‌ಫುಲ್ ಬ್ಯಾಕ್‌ಅಪ್ ಇರುವ ಸಂತೋಷ್‌ರನ್ನು ಕರ್ನಾಟಕದಲ್ಲಿ ಸಿಎಂ ಮಾಡಿ, ಆ ಮೂಲಕ ಲಿಂಗಾಯತ ಜಾತಿಯ ಹಂಗೇ ಇಲ್ಲದೆ ಹಿಂದೂತ್ವದ ಅಜೆಂಡಾದಲ್ಲಿ ಕರ್ನಾಟಕವನ್ನು ಕಬ್ಜಾ ಮಾಡಿಕೊಳ್ಳಬೇಕೆನ್ನುವುದು ನಾಗ್ಪುರ ಹೆಡ್‌ಕ್ವಾರ್ಟರ್‌ನ ಲೆಕ್ಕಾಚಾರ.

ಹಾಗಂತ, ಯಡ್ಯೂರಪ್ಪನವರನ್ನು ಏಕಾಏಕಿ ಮೂಲೆಗುಂಪು ಮಾಡಿದರೆ ಕರ್ನಾಟಕದ ಮಟ್ಟಿಗೆ ತನ್ನ ಸುಭದ್ರ ಓಟ್‌ಬ್ಯಾಂಕ್ ಆದ ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತೆ ಅನ್ನೋದು ಬಿಜೆಪಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ವೀರೇಂದ್ರ ಪಾಟೀಲರ ವಿಚಾರದಲ್ಲಿ ಇಂಥಾ ತಪ್ಪು ಮಾಡಿದ ಕಾಂಗ್ರೆಸ್, ಲಿಂಗಾಯತರ ಒಲವು ಕಳೆದುಕೊಂಡ ಇತಿಹಾಸ ಕರ್ನಾಟಕದ ರಾಜಕೀಯ ಪುಟಗಳಲ್ಲಿದೆ. ಈಗಾಗಲೇ ಕೆಲ ಲಿಂಗಾಯತ ಸ್ವಾಮೀಜಿಗಳು ಮತ್ತು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕರಂತಹ ಜಾತ್ಯಸ್ಥ ಅಭಿಮಾನಿಗಳು ಬಹಿರಂಗವಾಗಿಯೇ `ಯಡ್ಯೂರಪ್ಪನವರಿಗೆ ತೊಂದ್ರೆ ಕೊಟ್ಟರೆ ಸುಮ್ಮನಿರಲ್ಲ’ ಎಂಬ ಸಂದೇಶಗಳನ್ನು ದಾಟಿಸುತ್ತಿದ್ದಾರೆ.  ಹಾಗಾಗಿ ಅವರನ್ನು ಬೇರೊಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಕಳಿಸಿಬಿಟ್ಟರೆ, ಗೌರವಯುತವಾಗೇ ಅವರ ರಾಜಕೀಯವನ್ನು ಸಮಾಧಿ ಮಾಡಬಹುದು, ಜೊತೆಗೆ ಲಿಂಗಾಯತರ ವಿರೋಧವೂ ಬರುವುದಿಲ್ಲ ಅನ್ನೋದು ಬಿಜೆಪಿಯ ಲೇಟೆಸ್ಟ್ ಲೆಕ್ಕಾಚಾರ.

ಸಾಮಾನ್ಯವಾಗಿ ರಾಜ್ಯಪಾಲರ ಅಧಿಕಾರಾವಧಿ ಐದು ವರ್ಷಗಳು. ಕೆಲವೊಮ್ಮೆ, ಅವರ ಅಧಿಕಾರಾವಧಿ ಮುಗಿದರು ರಾಷ್ಟ್ರಪತಿಗಳು (ಕೇಂದ್ರ ಸರ್ಕಾರದ ಶಿಫಾರಸ್ಸಿನ ಅನ್ವಯ) ಆ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವವರೆಗೆ ಅವರೇ ಮುಂದುವರೆಯುತ್ತಾರೆ. ಸದ್ಯ ಗೋವಾದ ಮೃದುಲಾ ಸಿನ್ಹಾ ಅವರ ಅಧಿಕಾರಾವದಿ ಮುಗಿದು ಒಂದೂವರೆ ತಿಂಗಳಾಗಿದ್ದರು ಹೊಸ ರಾಜ್ಯಪಾಲರನ್ನು ಇನ್ನೂ ನೇಮಕ ಮಾಡಿಲ್ಲ. ಅದೇ ರೀತಿ ಜಾರ್ಖಂಡ್‌ನ ದ್ರೌಪದಿ ಮುರ್ಮು ಅವರ ಅವಧಿ ಇನ್ನು ಆರು ತಿಂಗಳಲ್ಲಿ ಮುಗಿಯಲಿದೆ. ಯಡ್ಯೂರಪ್ಪನವರನ್ನು ಆದಷ್ಟು ಬೇಗ ಇವರೆಡರಲ್ಲಿ ಒಂದು ಸ್ಥಾನಕ್ಕೆ ನಿಯೋಜಿಸಲು ಯೋಜನೆ ಸಿದ್ಧವಾಗಿದೆ ಎನ್ನಲಾಗುತ್ತಿದೆ.

ರಾಜ್ಯಪಾಲರಾಗಬೇಕೆಂದರೆ, ಆ ವ್ಯಕ್ತಿ ಸಂಸತ್ತು ಅಥವಾ ರಾಜ್ಯ ವಿಧಾನಸಭೆಗಳ ಸದಸ್ಯನಾಗಿರಬಾರದು. ಆದರೆ ಯಡ್ಯೂರಪ್ಪ ಸದ್ಯ ಎಂಎಲ್‌ಎ. ಹೇಗೂ ಮುಂದಿನ ಜನವರಿ ಅಥವಾ ಮಾರ್ಚ್‌ನೊಳಗೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ತಯಾರಿಯಲ್ಲಿ ಬಿಜೆಪಿ ಹೈಕಮಾಂಡ್ ಇರೋದ್ರಿಂದ ಯಡ್ಯೂರಪ್ಪನವರು ಸಹಜವಾಗಿಯೇ ತಮ್ಮ ಎಂಎಲ್‌ಎ ಸ್ಥಾನದಿಂದ ತೆರವುಗೊಳ್ಳುತ್ತಾರೆ. ಆಗ ಅವರನ್ನು ರಾಜ್ಯಪಾಲರನ್ನಾಗಿ ಬೀಳ್ಕೊಟ್ಟು ಮೋದಿ-ಶಾ ನೇತೃತ್ವದಲ್ಲಿ ಚುನಾವಣೆ ಎದುರಿಸಬಹುದು. ಆಗೊಮ್ಮೆ ಬಹುಮತ ದೊರಕಿದರೆ ಆರೆಸ್ಸೆಸ್ ಆಣತಿಯಂತೆ ಸಂತೋಷ್‌ರನ್ನು ಸಿಎಂ ಮಾಡಬಹುದು ಅನ್ನೋದು ಇಡೀ ಲೆಕ್ಕಾಚಾರದ ಹಿಂದಿರುವ ಅಂಕಗಣಿತ!

ರಾಜಕಾರಣದಲ್ಲಿ ಅಸ್ತಿತ್ವದಲ್ಲಿರುವ ರೂಢಿಯ ಪ್ರಕಾರ, ಸಾಮಾನ್ಯವಾಗಿ ರಾಜ್ಯಪಾಲರ ಹುದ್ದೆ ಅನ್ನೋದು ಒಬ್ಬ ರಾಜಕಾರಣಿಯ ಸಕ್ರಿಯ ರಾಜಕಾರಣಕ್ಕೆ ಮಂಗಳ ಹಾಡಿದಂತೆ. ಹಿಂದೆ ೨೦೦೩ರಲ್ಲಿ ಎಸ್.ಎಂ.ಕೃಷ್ಣ ವಿರುದ್ಧ ದೇವೇಗೌಡರು ಇಂತದ್ದೇ ದಾಳ ಉರುಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡುವ ಸಂದರ್ಭ ಎದುರಾದಾಗ ತಮ್ಮ ಒಕ್ಕಲಿಗ ಜಾತಿ ರಾಜಕಾರಣಕ್ಕೆ ಮುಳ್ಳಾಗುತ್ತಾರೆನ್ನುವ ಕಾರಣಕ್ಕೆ ದೇವೇಗೌಡರು ಕಾಂಗ್ರೆಸ್‌ನ ಮುಂದೆ ಎಸ್.ಎಂ.ಕೃಷ್ಣರನ್ನು ರಾಜ್ಯ ರಾಜಕಾರಣದಿಂದ ದೂರ ಇಡಬೇಕೆನ್ನುವ ‘ಭೀಷ್ಮ’ ಷರತ್ತು ವಿಧಿಸಿದ್ದರು. ಅದೇ ಕಾರಣಕ್ಕೆ ಅಂದಿನ ಯುಪಿಎ ಸರ್ಕಾರ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು. ಅದಾದ ಮೇಲೆ ಕರ್ನಾಟಕದ ರಾಜಕಾರಣದಲ್ಲಿ ಕೃಷ್ಣರ ಗಾರುಡಿ ಮತ್ತೆ ಗರಿಬಿಚ್ಚಲೇ ಇಲ್ಲ.

ಯಡ್ಯೂರಪ್ಪನವರು ಗೌರ್ನರ್ ಆಫರ್‌ಗೆ ಅಷ್ಟು ಸುಲಭಕ್ಕೆ ಒಪ್ಪಲಾರರು ಎಂಬುದು ಎಷ್ಟು ಸತ್ಯವೋ ಸಿಬಿಐ, ಇಡಿಗಳ ಕರಾಮತ್ತಿನ ಮುಂದೆ ಯಡ್ಯೂರಪ್ಪನವರಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ ಅನ್ನೋದೂ ಅಷ್ಟೇ ಸತ್ಯ. ಕಡೇಪಕ್ಷ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದಾದರು ಯಡ್ಯೂರಪ್ಪನವರು ಒಪ್ಪಿಕೊಳ್ಳಲೇಬೇಕಾಗುತ್ತೆ. ಈಗಾಗಲೇ ತನ್ನ ಬ್ಯುಸಿನೆಸ್ ಪಾರ್ಟ್ನರ್ ಡಿ.ಕೆ.ಶಿವಕುಮಾರ್‌ಗೆ ಬಂದಿರುವ ಗತಿ ಕಂಡಿರುವ ಯಡ್ಯೂರಪ್ಪನವರು ೨೦೧೩ರಲ್ಲಿ ಬಂಡಾಯವೆದ್ದಂತೆ ಕೆಜೆಪಿಯನ್ನೋ, ಮತ್ತೊಂದನ್ನೋ ಕಟ್ಟಲಾರರು ಅನ್ನೋದು ಸಂತೋಷ್‌ರ ತಂಡಕ್ಕೆ ಸ್ಪಷ್ಟವಾಗಿ ಗೊತ್ತು.

ಬಿಜೆಪಿಯೊಳಗೆ ಯಡ್ಯೂರಪ್ಪನವರ ವಿರುದ್ಧ ಇಂಥಾ ಚಿತಾವಣೆಗಳು ನಡೆಯುತ್ತಿರೋದ್ರಿಂದಲೇ ಅವರನ್ನು ನಂಬಿ ತಮ್ಮತಮ್ಮ ಪಕ್ಷಗಳಿಗೆ ‘ಕೈ’ಕೊಟ್ಟು, ಅನರ್ಹತೆಯ ತೂಗುಗತ್ತಿಯಲ್ಲಿ ಹೊಯ್ದಾಡುತ್ತಿರುವ ರೆಬೆಲ್ ಶಾಸಕರಲ್ಲಿ ಒಂದಷ್ಟು ಜನ ವಾಪಾಸ್ ಮಾತೃಪಕ್ಷಗಳ ಕದ ತಟ್ಟುವ ಆಲೋಚನೆಯಲ್ಲಿರೋದು ಎನ್ನಲಾಗುತ್ತಿದೆ. ಅದೇನೆ ಆಗಲಿ, ಯಡ್ಯೂರಪ್ಪನವರನ್ನು ಗೌರವಯುತವಾಗಿಯೋ, ಜಬರ್‌ದಸ್ತಿಯಿಂದಲೋ, ಬೆದರಿಸಿಯೋ ‘ಮಾರ್ಗದರ್ಶಕ ಮಂಡಳಿ’ಯ ‘ಗೃಹಪ್ರವೇಶ’ ಮಾಡಿಸುವ ಲಕ್ಷಣಗಳು ಬಿಜೆಪಿ ಪಾಳೆಯದಲ್ಲಿ ದಿನದಿಂದ ದಿನಕ್ಕೆ ದಟ್ಟವಾಗುತ್ತಲೇ ಬರುತ್ತಿವೆ. ಹಾಗಾಗಿ ‘ಗೌರ್ನರ್’ ತರದ ಗಾಳಿಸುದ್ದಿಗಳೂ ವಿಪರೀತ ಕುತೂಹಲ ಕೆರಳಿಸುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

0
ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು...