ಚಾನೆಲ್ ಚಿತ್ರಾನ್ನ : ಮೌಢ್ಯ ತುಂಬುವ ಚಾನೆಲ್ಲುಗಳು ಮತ್ತು ವಾಸ್ತು ಪೀಡೆ ಚಂದ್ರಶೇಖರ್

ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಕಂಟ್ರಾಕ್ಟರ್ ಆಗಿದ್ದ ಈ ಮನುಷ್ಯ, ಮನೆ ಕಟ್ಟಿಸುವಾಗ ಆ ಮೂಲೆ, ಈ ಮೂಲೆ ಎಂದು ಜನ ವಿಚಾರಿಸುವುದನ್ನು ನೋಡಿ, ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾನೆ.

| ಪಿ.ಕೆ ಮಲ್ಲನಗೌಡರ್ |

ಹಳೆ ವಂಚನೆ, ಹೊಸ ವೇಷ!

‘ಸರಳ ವಾಸ್ತು’ವಿನ ಹೆಸರಲ್ಲಿ ಜನರನ್ನು ಮೌಢ್ಯಕ್ಕೆ ತಳ್ಳಿ, ಮನೆಗಳನ್ನೆಲ್ಲ ಮೂರಾಬಟ್ಟೆ ಮಾಡಿದ ವಾಸ್ತು ವಂಚಕ ಚಂದ್ರಶೇಖರ್ ‘ಗುರೂಜಿ’ ಈಗ ಹೊಸ ವೇಷ ತೊಟ್ಟು ಬಂದಿದ್ದಾನೆ. ಈಗಾತ ‘ಮಾನವಾಭಿವೃದ್ಧಿ ಗುರು’ ಅಂತೆ. ವೇಷವಷ್ಟೇ ಬದಲು, ಮತ್ತದೇ ವಂಚನೆ! ಈ ಸಲ ಸುವರ್ಣ ನ್ಯೂಸ್ ಎಂಬ ರಾಜೀವ್ ಚಂದ್ರಶೇಖರನ ಚಾನೆಲ್ಲು ಈ ವಂಚಕನ ಸಂಸ್ಥೆಯ ಪಾರ್ಟನರ್ ಎಂಬಂತೆ ಬೊಗಳೆ ಬಿಡುತ್ತ ಜನರನ್ನು ಬೋಳಿಸುತ್ತಲಿದೆ.

ಇವತ್ತು ರವಿವಾರ ಮುಂಜ್‍ಮುಂಜಾನೆ ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಭೋಂಗು ಬಿಡುತ್ತಿದ್ದ ಸರಳ ವಾಸ್ತುವಿನ ಚಂದ್ರಶೇಖರ್ ಎಂಬ ಹೈಟೆಕ್ ವಂಚಕನನ್ನು ಕಂಡಾಗ ಆಶ್ಚರ್ಯವೇನೂ ಆಗಲಿಲ್ಲ. ಆದರೆ ಕೊಂಚ ಗಾಬರಿಯಾಗಿದ್ದು ಈತ ಹುಡುಕಿಕೊಂಡಿರುವ ಹೊಸ ವ್ಯಾಪಾರೀ ಮಾರ್ಗವನ್ನು ನೋಡಿದಾಗ….

ಈ ಕಾರ್ಯಕ್ರಮದ ಹೆಸರೇ ‘ಮಾನವಾಭಿವೃದ್ಧಿ ಗುರು’! ವಾವ್, ಹುಮನ್ ಡೆವೆಲಪ್ ಮೆಂಟ್ ಗುರು! ಕಳ್ಳ ನನ್ಮಗ ಅಂತ ಪ್ರೊಗ್ರಾಂ ನೋಡಿದರೆ, ಚಾನೆಲ್ಲಿನ ನಿರೂಪಕಿ ಮತ್ತು ಈ ವಾಸ್ತು ವಿಷ ಚಂದ್ರಶೇಖರ್ ಇಬ್ಬರೂ ಸೇರಿ ಜನರನ್ನು ಬಣ್ಣದ ಮಾತುಗಳಿಂದ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.

3 ಸ್ಟೆಪ್ಪು, 180 ದಿನ, 22 ಸಾವಿರ ಮುಂಡಾಮೋಚಿಂಗ್!

19 ವರ್ಷಗಳ ಕಾಲ ವಾಸ್ತು, ಸರಳ ವಾಸ್ತು ಹೆಸರಲ್ಲಿ ಜನರ ಮನೆ, ಕಚೇರಿಗಳಿಗೆ ಗತಿ ಕಾಣಿಸಿರುವ, ಅವರ ದೌರ್ಬಲ್ಯಗಳನ್ನು ಬಳಸಿಕೊಂಡು ಅವರಿಂದ ವಸೂಲಿ ಮಾಡಿರುವ ಚಂದ್ರಶೇಖರ್ ಈಗ ಹೊಸ ದಾರಿ ಕಂಡುಹಿಡಿದಿದ್ದಾನೆ. ಅದರ ಹೆಸರು ಮಾನವಾಭಿವೃದ್ಧಿ! ಕೇವಲ ಮೂರೇ ಹಂತಗಳಲ್ಲಿ ಈತ ರೈತರ ಸಮಸ್ಯೆಗಳನ್ನು, ನೌಕರರ ಆರ್ಥಿಕ ಸಂಕಟಗಳನ್ನು ಅಷ್ಟೇ ಅಲ್ಲ ಕ್ಯಾನ್ಸರ್ ಸೇರಿದಂತೆ ಇತರೆಲ್ಲ ರೋಗಿಗಳ ಆರೋಗ್ಯದ ಸಮಸ್ಯೆಗಳನ್ನು ಬಗೆಹರಿಸುತ್ತಾನಂತೆ!
ಸ್ಟೆಪ್ 1: ಈ ‘ಗುರೂಜಿ’ಯನ್ನು ಸಂಪರ್ಕಿಸುವುದು.
ಸ್ಟೆಪ್ 2: ಈತ ಮತ್ತು ಈತನ ತಂಡ ಹೇಳಿದ ‘ಮಾರ್ಗ’ದಲ್ಲಿ ನಡೆಯುವುದು.
ಸ್ಟೆಪ್ 3: 7ರಿಂದ 180 ದಿನಗಳಲ್ಲಿ ಎಲ್ಲ ಸಮಸ್ಯೆ ಫಿನಿಷ್! ಅಲ್ಲಿಗೆ ಮಾನವಾಭಿವೃದ್ಧಿ ಸಕ್ಸಸ್!

ವಾಸ್ತು ವಸೂಲಿಯ ದರಪಟ್ಟಿ, ಬಲು ತುಟ್ಟಿ!

ಮನೆಯ ಸಮಸ್ಯೆ ಇದ್ದರೆ 14 ಸಾವಿರ, ಸಣ್ಣಪುಟ್ಟ ವ್ಯಾಪಾರದ ಸಮಸ್ಯೆ ಇದ್ದರೆ 22 ಸಾವಿರ, ಮನೆಯ ನಕ್ಷೆಯನ್ನೇ ರೆಡಿ ಮಾಡಿ ಪರಿಹಾರ ಪಡೆಯಲು 22 ಸಾವಿರ ರೂಪಾಯಿ! ವೈಯಾರದಿಂದ ನಿರೂಪಕಿ ಹೇಳುತ್ತಾಳೆ: ಬಡವರಿಗಾಗಿ ಮಾನವಾಭಿವೃದ್ಧಿ ಅಂತೆ! ಅಂದರೆ, ಎರಡು ಕಂತುಗಳಲ್ಲಿ ಪೇ ಮಾಡಬಹುದು ಅಂತೆ! ದರಪಟ್ಟಿಯನ್ನೇ ಹಾಗೆ ವಿನ್ಯಾಸ ಮಾಡಿಯೂ ಬಿಟ್ಟಿದ್ದಾರೆ ಖದೀಮರು.

ಪ್ರೊಗ್ರಾಂ ನಡುನಡುವೆ ಸಮಸ್ಯೆಗಳಲ್ಲಿರುವ ಜನರ ಫೋನ್ ಕಾಲ್‍ಗಳು. ಅವರು ಸಮಸ್ಯೆ ಹೇಳುವ ಮೊದಲೇ, ಈಗ ನೀವು ನನನ್ನು ಸಂಪರ್ಕಿಸಿದಿರಲ್ಲ, ನನ್ನ ಎನರ್ಜಿ ನಿಮಗೆ ಪಾಸ್ ಆಗಿತು, ನಮ್ಮ ಕಚೇರಿಯವರು ನಿಮ್ಮನ್ನು ಸಂಪರ್ಕಿಸಿ ‘ಎಲ್ಲ’ ಮಾಡುತ್ತಾರೆ, ಡೋಂಟ್ ವರಿ ಎನ್ನುತ್ತಾನೆ ಚಂದ್ರ!

ಜನರಿಗೆ ಈ ಮಾರ್ಗ ಗೊತ್ತಿಲ್ಲದ್ದರಿಂದ ಅದನ್ನು ಕಲಿಸಲು ದೇವರೇ ಈ ಕಳ್ ನನ್ಮಗನಿಗೆ ಆದೇಶ ನೀಡಿದ್ದಾನಂತೆ! ಪಾಪ, ಸಣ್ಣಪುಟ್ಟ ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು, ಮದುವೆ ಸಮಸ್ಯೆ ಆಗಿರುವ ಹೆಣ್ಣು ಮಕ್ಕಳು, ಗಂಭೀರ ಕಾಯಿಲೆ ಇರುವವರ ಸಂಬಂಧಿಕರು ಫೋನ್ ಮಾಡಿ ಈ ಮುಠ್ಠಾಳರ ಬಲೆಗೆ ಬೀಳುತ್ತಿದ್ದರು.

ಹೀಗೆ ಇಡೀ ಜಗತ್ತಿನ ಮಾನವರ ಅಭಿವೃದ್ಧಿ ಮಾಡುವುದೇ ಚಂದ್ರನ ವಂಚಕ ಟೀಮಿನ ಗುರಿಯಂತೆ! ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಕಂಟ್ರಾಕ್ಟರ್ ಆಗಿದ್ದ ಈ ಮನುಷ್ಯ, ಮನೆ ಕಟ್ಟಿಸುವಾಗ ಆ ಮೂಲೆ, ಈ ಮೂಲೆ ಎಂದು ಜನ ವಿಚಾರಿಸುವುದನ್ನು ನೋಡಿ, ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾನೆ. ಇಷ್ಟು ದಿನ ಸರಳ ವಾಸ್ತು ಹೆಸರಲ್ಲಿ ಮೋಸ ಮಾಡಿದ್ದಾಯ್ತು, ಈಗ ಆ ಹಳೆ ಮೌಢ್ಯದ ಮದ್ಯವನ್ನು ‘ಮಾನವಾಭಿವೃದ್ಧಿ’ ಎಂಬ ಹೊಸ ಸೀಶೆಯಲ್ಲಿ ತುಂಬಿ ಮಾರ್ಕೆಟಿಂಗ್ ಮಾಡುತ್ತಿದ್ದಾನೆ!

ಈತ ಜನರಿಂದ ಯಾವ ಪರಿ ಕಿತ್ತಿದ್ದಾನೆಂದರೆ, ‘ಸರಳ ಜೀವನ’ ಎಂಬ ಚಾನೆಲ್ಲನ್ನೂ ಆರಂಭಿಸಿ, ಅದರ ಮೂಲಕವೂ ತನ್ನ ದಂಧೆಯನ್ನು ಪ್ರಮೋಟ್ ಮಾಡುತ್ತಾನೆ. ಜೊತೆಗೆ ರಾಜೀವ ಚಂದ್ರಶೇಖರನ ಸುವರ್ಣ ನ್ಯೂಸ್‍ನಂತಹ ಚಾನೆಲ್ಲುಗಳೂ ಈ ಜ್ಯೋತಿಷಿ, ವಾಸ್ತು ಪಂಡಿತರೊಂದಿಗೆ ಟೈಅಪ್ ಆಗಿವೆ!

ಇದನ್ನು ಓದಿ: ಮಾಧ್ಯಮ ಭಯೋತ್ಪಾನೆ

ಪಾಸಿಟಿವ್ ಎನರ್ಜಿ, ಕಾಸ್ಮೆಟಿಕ್ ಎನರ್ಜಿ ಅಂತೆಲ್ಲ ಮರುಳು ಮಾಡುವುದು ಇವರ ಟೆಕ್ನಿಕ್. ಇದಕ್ಕೆ ಮಾರು ಹೋಗುತ್ತಿರುವವರು ನಗರವಾಸಿ ವಿದ್ಯಾವಂತ ಜನರೇ ಎಂಬುದು ವಿಪರ್ಯಾಸ! ಮೋಡದ ಮರೆಯಲ್ಲಿ ರೇಡಾರ್‍ನಿಂದ ಬಚಾವ್ ಆಗಬಹುದು ಎನ್ನುವ ಪ್ರಧಾನಮಂತ್ರಿಯ ಮಾತನ್ನೂ ನಂಬುವ ಮೂಢ ಭಕ್ತರಲ್ಲಿ ಅದೇ ‘ಸುಶಿಕ್ಷಿತ’ರೇ ಜಾಸ್ತಿ ಇದ್ದಾರಲ್ಲ?

ನಮ್ಮ ಸಮಸ್ಯೆಗಳನ್ನು ಯಾವ ವಾಸ್ತುವೂ ಪರಿಹಾರ ಮಾಡದು. ಅದಕ್ಕೆ ನಾವೇ ಮಾರ್ಗ ಹುಡುಕಿಕೊಳ್ಳಬೇಕು. ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಇದಕ್ಕೆ ಅಗತ್ಯ. ನಿಮಗೆ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಜ್ಞಾನ ಇರುವವರ ಬಳಿ ಸಲಹೆ ಪಡೆದೋ, ಚಿಕಿತ್ಸೆ ಪಡೆದೋ ಪರಿಹಾರ ಕಂಡುಕೊಳ್ಳಬೇಕು. ಹಾಗಾಗಿ ಈ ಮೂಢ ಮಾಧ್ಯಮಗಳು ಬಿತ್ತರಿಸುವ ಇಂತಹ ಅವೈಜ್ಞಾನಿಕ ಪ್ರೊಗ್ರಾಂಗಳನ್ನು ನಂಬಬೇಡಿ. ಇದರಿಂದ ನಿಮ್ಮ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುವುದರಲ್ಲಿ ಸಂದೇಹವೆ ಇಲ್ಲ. ಚಂದ್ರಶೇಖರರಂತಹ ವಂಚಕರಿಂದ ದೂರವಿರಿ. ಇಲ್ಲದಿದ್ದಲ್ಲಿ ನಿಮ್ಮ ಆರ್ಥಿಕ ಸಮಸ್ಯೆ ಮತ್ತು ಮಾನಸಿಕ ಮೌಢ್ಯ ಹೆಚ್ಚಾಗುತ್ತವೆ ಅಷ್ಟೇ!

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

https://www.naanugauri.com/chanel-chitranna/

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here