Homeಮುಖಪುಟದೇಶದೊಳಗಿನ ‘ಬಾಂಬು’ ಪ್ರಗ್ಯಾ ಎಂಬ ಸಾಧ್ವಿಯೂ... ಸುರಕ್ಷತೆ ಬಗ್ಗೆ ಕುಟ್ಟುತ್ತಲೇ ಇರುವ ಮೋದಿಯೂ...

ದೇಶದೊಳಗಿನ ‘ಬಾಂಬು’ ಪ್ರಗ್ಯಾ ಎಂಬ ಸಾಧ್ವಿಯೂ… ಸುರಕ್ಷತೆ ಬಗ್ಗೆ ಕುಟ್ಟುತ್ತಲೇ ಇರುವ ಮೋದಿಯೂ…

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |
ಮಾತೆತ್ತಿದರೆ ‘ದೇಶದ ಸುರಕ್ಷತೆ’ ಎನ್ನುವ ನಾಯಕ, ವಿಂಗ್ ಕಮಾಂಡರ್ ಅಭಿನಂದನರನ್ನು ತಾನೇ ಬಿಡಿಸಿದ್ದು ಎಂದು ಹುಸಿ ಪರಾಕ್ರಮ ಕೊಚ್ಚಿಕೊಳ್ಳುತ್ತಲೇ, ಪಾಕ್ ಉಗ್ರರ ದಾಳಿಗೆ ಬಲಿಯಾದ ಧೀರೋದ್ಧಾತ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆಯವರ ಬಗ್ಗೆ ಕ್ಷುಲ್ಲಕವಾಗಿ ಮಾತಾಡುವ ಬಾಂಬ್ ಸ್ಫೋಟದ ಆರೋಪಿಯೊಬ್ಬಳ ಪರ ಬಹಿರಂಗ ಭಾಷಣ ಮಾಡುತ್ತಿರುವುದು ಇವತ್ತಿನ ವ್ಯಂಗ್ಯ, ವಿರೋಧಾಭಾಸವಷ್ಟೇ ಅಲ್ಲ, ಈ ದೇಶದ ದುರಂತವೂ ಹೌದು….

ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಗ್ಯಾಸಿಂಗ್ ಎಂಬ ‘ದೇಶಭಕ್ತೆ’ಯ ಪರ ಆರೆಸ್ಸೆಸ್ ನಿಂತಿದೆ. ಈ ದೇಶದ ಪ್ರಧಾನಿ ಎಂದಿನಂತೆ, ಗೆಲ್ಲಲು ಏನಾದರೂ ವಿಷಯ ಹುಡುಕುವಂತೆ, ಪ್ರಗ್ಯಾ ಸ್ಪರ್ಧೆಯನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ‘ಹಿಂದೂತ್ವಕ್ಕೆ ಮಸಿ ಬಳಿಯಲು ‘ಕೇಸರಿ ಭಯೋತ್ಪಾದನೆ, ಹಿಂದೂ ಟೆರರ್’ ಪದಗಳನ್ನು ಹುಟ್ಟು ಹಾಕಿದ ಜನರಿಗೆ ಪ್ರಗ್ಯಾ ಸ್ಪರ್ಧೆ ಒಂದು ಪ್ರತಿಕ್ರಿಯೆಯಾಗಿದೆ’ ಎಂದು ಏನೇನೋ ಮಾತಾಡಿ ಜನರನ್ನು ಮರುಳು ಮಾಡಲು ನೋಡಿದ್ದಾರೆ.

ಇರಲಿ, ಅಷ್ಟಕ್ಕೂ ಈ ಪ್ರಗ್ಯಾ ಸಿಂಗ್ ಎಂಬ ‘ರಾಷ್ಟ್ರೀಯವಾದಿ’ಯನ್ನು ಮೊದಲು ಬಂಧಿಸಿದ್ದು ಮಧ್ಯಪ್ರದೇಶದ ಸರ್ಕಾರ. ಆಗ ಅಲ್ಲಿ ಬಿಜೆಪಿ ಸರ್ಕಾರವಿತ್ತು. ಮೊನ್ನೆ ಪ್ರಗ್ಯಾ ಅವರನ್ನು ದೇಶ ಕಟ್ಟಲೆಂದೇ ಹುಟ್ಟಿದ ಹೆಣ್ಣು ಎಂದು ಪತ್ರಿಕಾಗೋಷ್ಠಿಯಲ್ಲಿ ಬಣ್ಣಿಸಿದ ಶಿವರಾಜಸಿಂಗ್ ಚೌಹಾಣ್ ಸಿಎಂ ಆಗಿದ್ದ ಅವಧಿಯಲ್ಲೇ ಮೊದಲ ಬಾರಿ, ಎರಡನೇ ಬಾರಿ ಪ್ರಗ್ಯಾರನ್ನು ಕೊಲೆ ಕೇಸೊಂದರಲ್ಲಿ ಬಂಧಿಸಲಾಗಿತ್ತು.

ಶಿವರಾಜ್ ಸಿಂಗ್ ಚೌಹಾಣ್

ಸ್ಫೋಟ, ಕೊಲೆ ಮತ್ತು ನಕಲಿ ‘ರಾಷ್ಟ್ರೀಯತೆ’

ಪ್ರಗ್ಯಾರನ್ನು ಅಖಾಡಕ್ಕೆ ಇಳಿಸಿದ ಹಿನ್ನೆಲೆಯಲ್ಲಿ ಈ ಮೇಲಿನ ಮೂರೂ ಪದಗಳು ಒಂದಕ್ಕೊಂದು ನಂಟು ಹೊಂದಿವೆ. ಈ ನಂಟಿಗೆ ಸಂಘ ಪರಿವಾರ ತಳುಕು ಹಾಕಿಕೊಂಡಿದೆ. ಇಲ್ಲಿ ಪ್ರಸ್ತಾಪಿಸಲು ಉದ್ದೇಶಿಸಿರುವ ಬಾಂಬ್ ಸ್ಫೋಟಗಳು- ಮಲೆಗಾಂವ್, ಮೆಕ್ಕಾ ಮದೀನಾ, ಸಂಜೋತಾ ಎಕ್ಸ್‍ಪ್ರೆಸ್ ಸ್ಫೋಟಗಳು. ಇದರಲ್ಲೆಲ್ಲ ಆಪಾದಿತದರಾದವರು ಹಿಂದೂತ್ಬದ ಅಂದರೆ ಬಿಜೆಪಿಯ ಒಳಮನಸ್ಸಿನ ಕ್ಷುಲ್ಲಕ ಹಿಂದೂತ್ವದ ಪ್ರತಿಪಾದಕರು. ಮೋದಿ ಸರ್ಕಾರ ಬಂದ ನಂತರ ಅಸೀಮಾನಂದ ಎಂಬ ಖಾವಿಧಾರಿಯನ್ನು ಒಳಗೊಂಡಂತೆ ಹಲವರನ್ನು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ‘ಖುಲಾಸೆ’ ಮಾಡಿದೆ. ಇವರಿಗೂ ಮತ್ತು ಭಯೋತ್ಪಾದಕರಿಗೂ ವ್ಯತ್ಯಾಸ ಹುಡುಕತೊಡಗಿದರೆ ಅದಕ್ಕಿಂತ ಮೂರ್ಖತನ ಬೇರಿಲ್ಲ. ಏಕೆಂದರೆ ಎನ್‍ಐಎ ತನಿಖಾ ವಿಧಾನವೇ ಬದಲಾಗಿದ್ದರಿಂದಲೇ ಇವರೆಲ್ಲ ಖುಲಾಸೆ ಆದರೆಂದು, ಈ ಕೇಸಿನಲ್ಲಿ ಮೊದಲು ಪ್ರಾಸಿಕ್ಯೂಟರ್ ಆಗಿದ್ದ ಮಂಗಳೂರಿನ ವಕೀಲೆ ಸೇರಿದಂತೆ ಹಲವರು ಗಂಭೀರ ಅಪಾದನೆ ಮಾಡಿದ್ದಾರೆ.

ಅದಿರಲಿ, ಈ ಸ್ಫೋಟಗಳ ಅಪಾದಿತರು ಒಂದು ನಿರ್ದಿಷ್ಠ ಗುಂಪಿಗೆ ಸೇರಿದವರು. ಅದರಲ್ಲಿ ‘ಸಾಧ್ವಿ’ ಎಂಬ ಅರ್ಥರಹಿತ ಹೆಸರನ್ನು ಅಂಟಿಸಿಕೊಂಡಿದ್ದ ಪ್ರಗಯಾ ಠಾಕೂರ್ ಕೂಡ ಒಬ್ಬರು. ಈಗಲೂ ಮಲೆಗಾವ್ ಸ್ಫೋಟದಲ್ಲಿ ಈ ‘ಸಾಧ್ವಿ ಶಿರೋಮಣಿ’ ಅಪಾದಿತೆಯೇ! ಆದರೆ, ಕಳೆದ ವಾರ ಈಕೆಯ ಪಕ್ಕಕ್ಕೆ ನಿಂತು ‘ದೇಶ ರಕ್ಷಿಸಲೆಂದೇ ಹುಟ್ಟಿದವಳು’ ಎಂದ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಈಕೆಯ ಬಂಧನವಾಗಿತ್ತು!

ಆರೆಸ್ಸೆಸ್ಸಿಗ ಸುನೀಲ ಜೋಷಿ ಹತ್ಯೆ
ಮಧ್ಯಪ್ರದೇಶದ ಈ ಸುನೀಲ್ ಜೋಶಿ ಎಂಬಾತ ಮಲೆಗಾವ್ ಸ್ಫೋಟದ ಆರೋಪಿಗಳಲ್ಲಿ ಒಬ್ಬ. ಇನ್ನು ಅರೆಸ್ಟ್ ಆಗುವ ಮೊದಲೇ ಈತನನ್ನು ಗುಂಡಿಕ್ಕಿ ಕೊಲ್ಲಲಾಗುತ್ತದೆ! ಈ ಕೊಲೆಯ ಆರೋಪಿಗಳೆಂದು ಮಧ್ಯಪ್ರದೇಶದ ಪೊಲೀಸರು 2008ರ ಸೆಪ್ಟೆಂಬರ್ 23ರಂದು ಪ್ರಗ್ಯಾ ಸಹಿತ ಹಲವರನ್ನು ಬಂಧಿಸುತ್ತಾರೆ. ಆಗ ಮಧ್ಯಪ್ರದೇಶದಲ್ಲಿ ಇದ್ದುದು ಶಿವರಾಜಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ.

ಸುನೀಲ್ ಜೋಷಿ

ಮಲೆಗಾಂವ್ ಬಾಂಬ್‍ಸ್ಪೋಟದ ಹಿಂದಿನ ಷಡ್ಯಂತ್ರಗಳನ್ನೆಲ್ಲ ಆರೆಸ್ಸೆಸ್ ಕಾರ್ಯಕರ್ತ ಸುನೀಲ್ ಜೋಶಿ ಬಾಯಿ ಬಿಡುತ್ತಾನೆ ಎಂಬ ಸಂಶಯ ಇದ್ದುದರಿಂದ, ಮಲೆಗಾಂವ್ ಸ್ಫೋಟ್ ಇತರ ಆರೋಪಿಗಳು ಆತನ ಕೊಲೆ ಮಾಡಿಸುತ್ತಾರೆ ಎಂದು ಮಧ್ಯಪ್ರದೇಶದ ಪೊಲೀಸರ ವರದಿ ಹೇಳಿತ್ತು. ಸುನೀಲ್ ಜೋಶಿ ಕೊಲೆಯಾದ ದಿನ ಆತನ ಮನೆಗೆ ಹೋಗಿ ಅಲ್ಲಿದ್ದ ಒಂದು ಸೂಟ್‍ಕೇಸನ್ನು ಪ್ರಗ್ಯಾ ತೆಗೆದುಕೊಂಡು ಹೋಗಿದ್ದನ್ನು, ಸುನೀಲನ ಶವ ಆಸ್ಪತ್ರೆಯಲ್ಲಿ ಇರುವಾಗ ಪ್ರಗ್ಯಾ ಅಲ್ಲಿದ್ದರು ಎಂಬುದನ್ನು ಸುನೀಲನ ಕುಟುಂಬ ಹೇಳಿದ ನಂತರ ಪ್ರಗ್ಯಾ ಅರೆಸ್ಟ್ ಆಗಿತ್ತು. ಮುಂದೆ ಅವರು ಬೇಲ್ ಮೇಲೆ ಹೊರಬಂದರು. 2011ರಲ್ಲಿ ಅದೇ ಚೌಹಾಣ್ ಸಿಎಂ ಆಗಿರುವಾಗ ಮತ್ತೆ ಮಧ್ಯಪ್ರದೇಶದ ಪೊಲೀಸರು ಆಕೆ ಆರೋಪಿ ಎಂದು ಚಾರ್ಜ್‍ಶೀಟ್ ಸಲ್ಲಿಸಿದ್ದರು. ಅಷ್ಟರಲ್ಲಾಗಲೇ ಈ ‘ದೇಶಭಕ್ತ’ ತರುಣಿಯನ್ನು ಮಲೆಗಾವ್ ಸ್ಫೋಟದ ಆರೋಪಿ ಎಂದು ಜೈಲಿಗೆ ಅಟ್ಟಲಾಗಿತ್ತು! ಮುಂದೆ, ಮೋದಿ ಸರ್ಕಾರ ಬಂದ ಮೇಲೆ ಸುನೀಲ್ ಜೋಶಿ ಕೊಲೆ ಪ್ರಕರಣವು ಎನ್‍ಐಎಯಿಂದ ಮತ್ತೆ ಮಧ್ಯಪ್ರದೇಶದ ಪೊಲೀಸರ ವ್ಯಾಪ್ತಿಗೆ ಬಂದಿತು. ಆಗ ಸುನೀಲ್ ಜೋಶಿ ಹತ್ಯೆ ಪ್ರಕರಣದಲ್ಲಿ ಪ್ರಗ್ಯಾ ಸೇರಿದಂತೆ ಎಲ್ಲ ಆರೋಪಿಗಳೂ ಆರೋಪಮುಕ್ತರಾದರು!

ಹಾದಿ ತಪ್ಪಿತೇ ಎನ್‍ಐಎ?
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ‘ಕೇಸರಿ ಭಯೋತ್ಪಾದನೆ’ ಎಂದು ಕರೆಯಲ್ಪಡುತ್ತಿದ್ದ ಸ್ಫೋಟಗಳ ಪ್ರಕರಣಗಳಲ್ಲಿ ಎನ್‍ಐಎ ತನಿಖೆಯನ್ನು ಸಡಿಲಗೊಳಿಸಿದ್ದರ ಪರಿಣಾಮವಾಗಿ ಹಲವಾರು ಆರೋಪಿಗಳು ಖುಲಾಸೆಗೊಂಡರು. ಸಾಧ್ವಿ ಪ್ರಗ್ಯಾ ಕೂಡ ಆರೋಪಮುಕ್ತೆ ಆಗಿದ್ದರು! ಆದರೆ ಅದೇನೋ ಎನ್‍ಐಎ ಕೋರ್ಟು ಮತ್ತೆ ತನಿಖೆ ಮಾಡುವಂತೆ ಹೇಳಿತು. ಈಗಲೂ ಪ್ರಗ್ಯಾ ಮಲೆಗಾವ್ ಸ್ಪೋಟದ ಆರೋಪಿಯೇ! ನಡೆದಾಡಲೂ ಆಗಲ್ಲ, ದೇಹ ತುಂಬ ವೀಕ್ ಎಂದೆಲ್ಲ ಕೋರ್ಟಿಗೆ ಅಫಿಡವೆಟ್ ಸಲ್ಲಿಸಿ ಬೇಲ್ ಪಡೆದಿರುವ ಪ್ರಗ್ಯಾ ಈಗ ಭೋಪಾಲ್ ಚುನಾವಣೆಯಲ್ಲಿ ಸಕ್ರಿಯರು! ಅವರ ಪರವಾಗಿ ಶಿವರಾಜ್ ಸಿಂಗ್ ಚೌಹಾಣ್‍ರಿಂದ ಹೊಗಳಿಕೆಯ ಸುರಿಮಳೆ ಮತ್ತು ಪ್ರಚಾರ!! ಪ್ರಗ್ಯಾ ಉಮೇದುವಾರಿಕೆಯನ್ನು ಬೆಂಬಲಿಸಿ ಪ್ರಧಾನಿಗಳಿಂದ ಬಹಿರಂಗ ಭಾಷಣ!!!!

‘ನಮ್ಮವರಲ್ಲ’ ಎಂದಿದ್ದ ಆರೆಸ್ಸೆಸ್ ಈಗೆಲ್ಲಿ?
ಮಲೆಗಾವ್, ಮೆಕ್ಕಾ-ಮದೀನಾ, ಸಂಜೋತ ಎಕ್ಸ್‍ಪ್ರೆಸ್, ಅಜ್ಮೀರಾ ಬಾಂಬ್ ಸ್ಫೋಟಗಳನ್ನು ನಡೆಸಿದ ‘ಹಿಂದೂತ್ವವಾದಿ’ ಗುಂಪೊಂದು, ಆ ಸ್ಫೋಟಗಳನ್ನು ಮುಸ್ಲಿಮರ ತಲೆಗೆ ಕಟ್ಟಲು ಹುನ್ನಾರ ಮಾಡಿತ್ತು ಎಂದು ಹುತಾತ್ಮ ಹೇಮಂತ್ ಕರ್ಕರೆ ನೇತೃತ್ವದ ತನಿಖಾ ದಳ ಅಪಾದಿಸಿತ್ತಲ್ಲದೇ ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಕಲೆ ಹಾಕಿ, ಕರ್ನಲ್ ಪರೋಹಿತ್, ಸಾಧ್ವಿ ಪ್ರಗ್ಯಾರನ್ನು ಅರೆಸ್ಟು ಮಾಡಿ ವಿಚಾರಣೆ ಶುರು ಮಾಡಿತ್ತು.

ಆಗ ಇವರೆಲ್ಲ ಆರೆಸ್ಸೆಸ್ ಲಿಂಕಿನವರು ಎಂಬುದನ್ನು ತನಿಖಾ ದಳ ಸಾಬೀತು ಮಾಡುತ್ತಿರುವಾಗ, ಅಂದಿನ ಪ್ರಧಾನಿ ಮನಮೋಹನಸಿಂಗ್‍ರಿಗೆ ಫೆಬ್ರುವರಿ 9, 2011ರಂದು ಪತ್ರ ಬರೆದ ಆರೆಸ್ಸೆಸ್, ‘ದಯವಿಟ್ಟು ಗಮನಿಸಿ, ವಿವಿಧ ಬಾಂಬ್‍ಸ್ಫೋಟಗಳಲ್ಲಿ ಭಾಗಿಯಾಗಿರುವರು ಎನ್ನಲಾದ ಕರ್ನಲ್ ಶ್ರೀಕಾಂತ್ ಪುರೋಹಿತ್ ಮತ್ತು ಅವರ ಸಹಚರರಿಗೂ ಆರೆಸ್ಸೆಸ್‍ಗೂ ಸಂಬಂಧವಿಲ್ಲ. ನಮ್ಮ ಮುಖ್ಯಸ್ಥರಾದ ಮೋಹನ್ ಭಾಗವತ್ ಮತ್ತು ಇಂದ್ರೇಶ ಕುಮಾರ್ ಅವರನ್ನು ಕೊಲ್ಲಲು ಈ ಗುಂಪು ಸ್ಕೆಚ್ ಹಾಕಿತ್ತು ಎಂಬುದನ್ನು ತನಿಖಾ ದಳದ ಅಧಿಕಾರಿಯೊಬ್ಬರು ನಮಗೆ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ, ಅವರೆಲ್ಲ ಹೇಗೆ ನಮ್ಮ ಸದಸ್ಯರಾಗುತ್ತಾರೆ?’ ಎಂದು ವಿವರಣೆ ನೀಡಿತ್ತು!

ಪ್ರಗ್ಯಾ ಪುರೋಹಿತನ ಸಹಚರಿ ಅಲ್ಲವೇ?
2008ರಲ್ಲಿ ಸಂಭವಿಸಿದ ಮಲೆಗಾಂವ್ ಸ್ಫೋಟದಲ್ಲಿ ಪ್ರಮುಖ ಆರೋಪಿಗಳಾಗಿದ್ದವರು ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಗ್ಯಾ ಮತ್ತು ನಿವೃತ್ತ ಸೇನಾಧಿಕಾರಿ ರಮೇಶ ಉಪಾಧ್ಯಾಯ ಮತ್ತು ಇತರರು. ಆಗ ಆರೆಸ್ಸೆಸ್ ಹೇಳಿದಂತೆ, ಅವರ ನಾಯಕರಾದ ಮೋಹನ್ ಭಾಗವತ್ ಮತ್ತು ಇಂದ್ರೇಶ ಕುಮಾರ್ ಅವರನ್ನು ಕೊಲ್ಲಲು ಈ ಬಾಂಬ್ ಸ್ಫೋಟದ ಆರೋಪಿಗಳಾದ ಪುರೋಹಿತ ಮತ್ತು ಸಹಚರರು ಪ್ಲಾನು ಮಾಡಿದ್ದರು ಎನ್ನುವ ಮಾತೇ (ಆಗಿನ ಪ್ರಧಾನಿ ಮನಮೋಹನಸಿಂಗ್‍ರಿಗೆ ಆರೆಸ್ಸೆಸ್ ಬರೆದ ಪತ್ರದ ಪ್ರಕಾರ) ನಿಜ ಎಂದುಕೊಂಡರೆ, ಆಗ ಇದೇ ಪ್ರಗ್ಯಾಸಿಂಗ್ ಪುರೋಹಿತರ ಸಹಚರ ಆಗಿದ್ದರಲ್ಲವೇ? ಆರೆಸ್ಸೆಸ್‍ನ ಆ ಪತ್ರ ಮತ್ತು ಆ ಕುರಿತಾಗಿ ಅದು ನೀಡಿದ ಸ್ಪಷ್ಟನೆಯನ್ನು ವಿಸ್ತರಿಸುತ್ತ ಹೋದರೆ, ಆಗ ಆರೆಸ್ಸೆಸ್ ಮುಖಂಡರನ್ನು ಕೊಲ್ಲಲು ಪುರೋಹಿತ್ ಮತ್ತು ಪ್ರಗ್ಯಾ ಪ್ಲಾಟ್ ರೂಪಿಸಿದ್ದರು ಎಂದು ಅರ್ಥ ಅಲ್ಲವೇ?

ಹಾಗಿದ್ದರೆ, ಆರೆಸ್ಸೆಸ್ ಮುಖಂಡರನ್ನೇ ‘ಕೊಲ್ಲಲು ಸ್ಕೆಚ್ಚು ಹಾಕಿದ್ದ’ ಮಹಿಳೆ ಈಗ ಬಿಜೆಪಿಯ ಕ್ಯಾಂಡಿಡೇಟ್ ಆದದ್ದಾದರೂ ಹೇಗೆ?
ಒಂದರ್ಥದಲ್ಲಿ ಉತ್ತರ ಸುಲಭವೂ ಇದೆ ಮತ್ತು ಕಗ್ಗಂಟೂ ಆಗಿದೆ. ಗುರುತರ ಅಪಾದನೆಗಳಲ್ಲಿ ‘ತನ್ನವರು’ ಸಿಕ್ಕಿ ಹಾಕಿಕೊಂಡಾಗ ಆರೆಸ್ಸೆಸ್ ನೇತೃತ್ವದ ಸಂಘ ಪರಿವಾರ ಅವರು ನಮ್ಮ ಸದಸ್ಯರು ಅಲ್ಲವೆಂದು ಅವರಿಂದ ದೂರ ಉಳಿಯುತ್ತದೆ. ಕಾಲಕ್ರಮೇಣ ಅವರನ್ನು ಆಧರಿಸಿ, ಸನ್ಮಾನಿಸಿ ಪೋಷಿಸತೊಡಗುತ್ತದೆ. ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ, ಗೋಡ್ಸೆ ಮತ್ತು ಇತರರು ನಮ್ಮ ಸಂಘಟನೆಯವರಲ್ಲ ಎಂದು ಬೊಂಬಡಾ ಹೊಡೆದಿದ್ದ ಆರೆಸ್ಸೆಸ್, ಬಿಜೆಪಿ ಮತ್ತು ಹಿಂದೂ ಮಹಾಸಭಾಗಳು ನಂತರ ಗೋಡ್ಸೆಯ ಆರಾಧನೆ ಮಾಡುತ್ತಲೇ ಇವೆ. ಈಗಲೂ ಅಷ್ಟೇ, ಮಲೆಗಾವ್ ಮತ್ತಿತರ ಸ್ಫೋಟಗಳಿಗೆ ಸಂಬಂಧಿಸಿದ ಆರೋಪಿಗಳಿಗೂ ಸಂಘಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದವರು ಈಗ ಪ್ರಗ್ಯಾ ಎಂಬ ‘ಬಾಂಬರ್’ ಮೆಟಿರಿಯಲ್ಲನ್ನು ಸಂಸತ್ತಿನೊಳಗೆ ತುರುಕಲು ಹೊರಟಿದೆ.

ಒಂದು ಕಡೆ ದೇಶದ ಸುರಕ್ಷತೆಯ ಹೆಸರಲ್ಲಿ ಸೈನಿಕರ ಶ್ರಮದ ಲಾಭವನ್ನು ಪಡೆಯಲು ಹವಣಿಸುವ ನಾಯಕ, ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾದವರ ಉಮೇದುವಾರಿಕೆಗೆ ಬೆಂಬಲ ಕೊಡುತ್ತಿದ್ದಾರೆ! ಸ್ವತಃ ಆ ಮನುಷ್ಯನೇ ಈ ದೇಶದ ಆಂತರಿಕ ಮತ್ತು ಗಡಿ ಭದ್ರತೆಗೆ ಆತಂಕವಾಗಿರೋದನ್ನು ಜನ ಬೇಗ ಅರಿತುಕೊಳ್ಳುವಂತಾಗಲಿ….

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...