ಕಾದಿದ್ದೇನೆ

- Advertisement -
- Advertisement -

ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು?
ಹೇಗೆ ನಿರೂಪಿಸಲಿ ನನ್ನ ನಂಬಿಕೆಯನ್ನು
ಒಂದೊಂದೇ ವಸ್ತ್ರ ಕಳಚಿ ಬೆತ್ತಲಾಗಿಸಿ
ದೇಹದ ಇಂಚಿಂಚನ್ನೂ ಭೂತಗನ್ನಡಿಯಲ್ಲಿ
ಉಗುರು, ಹಲ್ಲಿನ ಗುರುತಿಗಾಗಿ ತಡಕಾಡುವಾಗ
ನಾನು ಹೆಣ್ಣಾದ ನೋವು ಎದೆಯ ಗೀರನ್ನು ಆಳವಾಗಿಸಿದೆ

ಹೆಣ್ಣೆಂಬ ಆಕಾರವೇ ಜೊಲ್ಲು ಸುರಿಸುವಂತಿರುವಾಗ
ಮಧ್ಯರಾತ್ರಿಯ ಉಬ್ಬುತಗ್ಗುಗಳ ಕನವರಿಕೆಯಲ್ಲಿ
ದಕ್ಕಿಸಿಕೊಂಡ ಸುಖ, ಸುಖವೆನಿಸದೇ
ಮರ್ಮಾಂಗಕ್ಕೆ ಸಲಾಕೆ ನುಗ್ಗಿಸಿ ಪಡುವ
ತೃಪ್ತಿಯ ಅಟ್ಟಹಾಸದ ಕೆಕೆ ಯಲ್ಲಿ
ಹೆಣ್ಣೆಂಬ ಶಬ್ಧ ನನ್ನ ಮೈಗೂ ಅಂಟಿ ತಲ್ಲಣಿಸುವಂತೆ ಮಾಡಿದೆ

ಹೊರ ಪ್ರಪಂಚದ ಮಾತು ಬೇಡ
ಮನೆಯೊಳಗಣ ಜಗತ್ತೂ ಕ್ರೌರ್ಯದ ಉತ್ತುಂಗದಲ್ಲಿ
ವಿಜೃಂಭಿಸಿ ಭೀಷಣವಾಗಿ ನಗುತ್ತ
ದಿನ ತುಂಬದೆ ಹುಟ್ಟಿದ ಹಸುಳೆಯ ಬಾಯೊಳಗೆ
ಅಳ್ಳೆಯ ತುಂಬ ಕಳ್ಳಿಯ ಹಾಲೆರೆದು ನೀಲಿಗಟ್ಟಿದಾಗ
ಅಯ್ಯೋ, ನಾನು ಹುಟ್ಟಿದ್ದೂ ಹೆಣ್ಣಾಗಿಯೇ….

ಬಸಿರು ಸಂಕಟದ ಯಮಯಾತನೆಯ ಮಾತು ಬಿಡಿ
ಸೋರುವ ರಕ್ತವ ಕಾಣದಂತೆ ಪ್ಯಾಡ್‍ಗಳಲ್ಲೇ ಇಂಗಿಸಿ
ಮುಟ್ಟಿನ ಬೆನ್ನು, ಹೊಟ್ಟೆಯ ನೋವಲ್ಲೂ ಬಗ್ಗಿ
ಮುಟ್ಟಿದರೂ ನೋಯುವ ತುಂಬಿದ ಮೊಲೆಗಳ ಬಾಯಿಗಿಟ್ಟು
ಚಪ್ಪರಿಸುವ ಪರಿ ನೋಡಲಾಗದಿದ್ದರೂ
ಹಸ್ತ, ಬಾಯಿ, ಮುಖ ಮೈಥುನಕ್ಕೆ ಸಿದ್ಧಳಾಗುವವವಳ ಕಂಡಾಗ
ಎದೆ ಝಲ್ಲೆಂದು ಬೆದರುತ್ತದೆ ನಾನು ಹೆಣ್ಣಾದ ಸಂಕಟಕ್ಕೆ

ಅಲ್ಲೆಲ್ಲೋ ಹಿಂಬಾಲಿಸಿದವನಿಗೆ ಚಪ್ಪಲಿಯೇಟು ನೀಡಿದ
ಮೈ ಮುಟ್ಟಿದಾತನಿಗೆ ಮರಣಮೃದಂಗವಾಡಿಸಿದ
ದುರಾಚಾರಕ್ಕೆರಗಿದವನ ಶಿಶ್ನ ಕತ್ತರಿಸಿದ
ಮನೆಯ ನಾಲ್ಕು ಗೋಡೆಯ ಒಳಗೂ
ಬಲವಂತವ ಧಿಕ್ಕರಿಸಿ ಕೋರ್ಟಿನ ಕಟಕಟೆ ಹತ್ತಿದ ಸುದ್ದಿ
ಗಾಳಿಯೊಂದಿಗೆ ಅಲೆಅಲೆಯಾಗಿ ತೇಲಿ ಬಂದಿದೆ
ನನ್ನೊಳಗಲ್ಲೂ ಹೆಣ್ಣೆಂಬ ಅಹಂ ನಿಧಾನವಾಗಿ
ತಲೆ ಎತ್ತುವಂತೆ ಮಾಡುವ ಗಳಿಗೆಗಾಗಿ ಕಾದಿದ್ದೇನೆ

– ಶ್ರೀದೇವಿ ಕೆರೆಮನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...