Homeಅಂತರಾಷ್ಟ್ರೀಯಯುದ್ಧಕೋರ ಅಮೆರಿಕಾದ ಇರಾನ್ ಮೇಲಿನ ದುಸ್ಸಾಹಸ ಫಲ ನೀಡುವುದೇ ಇಲ್ಲ ಪೆಟ್ಟು ಕೊಡುವುದೇ?

ಯುದ್ಧಕೋರ ಅಮೆರಿಕಾದ ಇರಾನ್ ಮೇಲಿನ ದುಸ್ಸಾಹಸ ಫಲ ನೀಡುವುದೇ ಇಲ್ಲ ಪೆಟ್ಟು ಕೊಡುವುದೇ?

ಬೇರೆ ದೇಶಗಳ ಮೇಲೆ ದಾಳಿ ಮಾಡುವುದು, ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು, ತನ್ನ ಬಂಡವಾಳಕ್ಕೆ ಅನುಕೂಲಕರವಾದ ಎಲ್ಲಾ ಕಡೆಗಳಲ್ಲಿ ಆಂತರಿಕ ದಂಗೆ ಪ್ರಚೋದಿಸಿ, ಕೈಗೊಂಬೆ ಸರಕಾರಗಳನ್ನು ಸ್ಥಾಪಿಸುವುದು ಯುಎಸ್‌ಎಯ ಹಳೆಯ ಚಾಳಿ

- Advertisement -
- Advertisement -

ಯುಎಸ್‌ಎಯ ಯುದ್ಧದಾಹವು ಪಶ್ಚಿಮ ಏಷ್ಯಾದಲ್ಲಿ ಇನ್ನೊಂದು ಪೂರ್ಣಪ್ರಮಾಣದ ಯುದ್ಧಕ್ಕೆ ನಾಂದಿ ಹಾಡಿದೆ. ಅದು ಇರಾನಿನ ಸೇನೆಯ ಭಾಗವಾದ ರಿವೋಲ್ಯೂಷನರಿ ಗಾರ್ಡ್ಸ್ ಕಾಪ್ಸ್‌ನ ಕಮಾಂಡರ್ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಮತ್ತು ಪಾಪ್ಯುಲರ್ ಮೊಬಿಲೈಸೇಷನ್ ಫೋರ್ಸ್‌ನ ಹಲವಾರು ನಾಯಕರನ್ನು ಬಾಗ್ದಾದ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹತ್ಯೆ ಮಾಡಿದೆ. ಇದರ ಬೆನ್ನಲ್ಲೇ ಇರಾನ್ ಪ್ರತೀಕಾರದ ಕ್ರಮವಾಗಿ ಇರಾಕ್‌ನಲ್ಲಿರುವ ಯುಎಸ್‌ಎಯ ಸೇನಾ ನೆಲೆಗಳನ್ನು ಗುರಿ ಮಾಡಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದು ಪೂರ್ಣ ಪ್ರಮಾಣದ ಯುದ್ಧ ಭೀತಿಯನ್ನು ಹೆಚ್ಚಿಸಿದೆ.

ಇರಾನ್, ಇರಾಕ್‌ನ ಎರ್ಬಿಲ್ ಮತ್ತು ಅಲ್ ಅಸ್ಸಾದ್‌ನಲ್ಲಿರುವ ಯುಎಸ್‌ಎ ಸೇನಾ ನೆಲೆಗಳ ಮೇಲೆ 22 ಕ್ಷಿಪಣಿಗಳನ್ನು ಉಡಾಯಿಸಿದೆ. ಈ ದಾಳಿಗಳಲ್ಲಿ 80ರಷ್ಟು ಯುಎಸ್‌ಎ ಸೈನಿಕರನ್ನು ಕೊಂದಿರುವುದಾಗಿ ಇರಾನ್ ಹೇಳಿಕೊಂಡಿದ್ದರೆ, ದಾಳಿ ನಡೆದಿರುವುದು ನಿಜವಾಗಿದ್ದರೂ ತನ್ನ ಅಥವಾ ಇರಾಕಿನ ಯಾವುದೇ ಸೈನಿಕರು ಸತ್ತಿಲ್ಲ ಎಂದು ಯುಎಸ್‌ಎ ಹೇಳಿದೆ. ಇರಾನ್ ಹೆದರಿದ್ದು, ಬೇಕೆಂದೇ ತಪ್ಪು ಗುರಿಯನ್ನು ಇರಿಸಿ ದಾಳಿ ನಡೆಸಿದೆ ಎಂಬಂತಹಾ ಧಾರ್ಷ್ಟ್ಯದ ಹೇಳಿಕೆಯನ್ನು ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ, ಈ ಪ್ರದೇಶದಲ್ಲಿ ಯುಎಸ್‌ಎಯ ಪ್ರಭಾವವನ್ನು ಶಾಶ್ವತವಾಗಿ ಕಡಿಮೆ ಮಾಡಲು ಇದು ಸಕಾಲ ಎಂದು ಇರಾನಿನ ಪರಮೋಚ್ಚ ನಾಯಕ ಅಯಾತೊಲ್ಲ ಅಲ್ ಖಮೇನಿ ಹಾಗೂ ಅಧ್ಯಕ್ಷ ಹಸನ್ ರೊಹಾನಿ ಹೇಳಿದ್ದಾರೆ. ಯುಎಸ್‌ಎಯಿಂದ ತೊಂದರೆಗೆ ಒಳಗಾಗಿರುವ ಎಲ್ಲಾ ದೇಶಗಳು ಒಟ್ಟಾಗಬೇಕು ಎಂಬ ಕರೆಯನ್ನು ಇರಾನ್ ನೀಡಿದೆ. ಸದ್ಯ ಯುಎಸ್‌ಎಯ ಪಾಳಯದಲ್ಲಿ ಸೌದಿ ಅರೇಬಿಯಾ, ಇಸ್ರೇಲ್, ಕುವೈಟ್ ಮುಂತಾದ ದೇಶಗಳಿದ್ದು, ಯುಎಸ್‌ಎ ವಿರುದ್ಧ ಪ್ರತೀಕಾರಕ್ಕೆ ಬಯಸುವ ದೇಶಗಳೇ ಹೆಚ್ಚು. ಒಟ್ಟಿನಲ್ಲಿ ಭಾರತದ ಮೇಲೂ ದುಷ್ಪರಿಣಾಮ ಬೀರಬಹುದಾದ ಒಂದು ಪೂರ್ಣ ಪ್ರಮಾಣದ ಯುದ್ಧದ ಸಾಧ್ಯತೆಗೆ ಕಾರಣವಾಗಿರುವುದು ಯುಎಸ್‌ಎ ಎಂಬುದರಲ್ಲಿ ಸಂಶಯವಿಲ್ಲ.

ಏಕೆಂದರೆ, ಇರಾನಿನ ಎರಡನೇ ಅತ್ಯಂತ ಪ್ರಭಾವಿ ಮಿಲಿಟರಿ ನಾಯಕನ ಹತ್ಯೆಗೆ ಡೊನಾಲ್ಡ್ ಟ್ರಂಪ್ ನೇರವಾಗಿ ನಿರ್ದೇಶನ ನೀಡಿರುವುದಾಗಿ ಪೆಂಟಗನ್ ದೃಢಪಡಿಸಿದೆ. ಯುಎಸ್ಎಯ ಸಂಸತ್ತಿನಲ್ಲಿ ವಜಾ ವಾಗ್ದಂಡನೆ ಎದುರಿಸುತ್ತಿರುವ ಟ್ರಂಪ್ ನಾಝಿ ತಂತ್ರವನ್ನೇ ಈ ಬಾರಿ ಉಪಯೋಗಿಸಿರುವುದು ಸ್ಪಷ್ಟವಾಗಿದೆ. ಅದೆಂದರೆ, ಬೇರೆ ದೇಶಗಳನ್ನು ತೋರಿಸಿ, ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು. ತನ್ನ ಟ್ವೀಟ್‌ನಲ್ಲಿ ಯುಎಸ್‌ಎಯ ರಾಷ್ಟ್ರಧ್ವಜವನ್ನು ಬಳಸಿಕೊಂಡು ಹುಸಿ ದೇಶಪ್ರೇಮವನ್ನು ಬಡಿದೆಬ್ಬಿಸಿ, ತನ್ನ ದುರಾಡಳಿತವನ್ನು ಮರೆಮಾಚುವ ತಂತ್ರವನ್ನು ಟ್ರಂಪ್ ಉಪಯೋಗಿಸಿರುವುದು ಕೂಡಾ ಸ್ಪಷ್ಟವಾಗಿದೆ.

ಇನ್ನೊಂದು ಕಡೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭ್ರಷ್ಟಾಚಾರದ ಆರೋಪದಲ್ಲಿ ಬಂಧನವನ್ನು ಎದುರಿಸುತ್ತಿದ್ದು, ಇಸ್ರೇಲಿಗರ ಗಮನವನ್ನು ಬೇರೆಡೆ ಸೆಳೆಯಲು ಯುದ್ಧವು ಒಂದು ಅನುಕೂಲಕರ ಅವಕಾಶವಾಗಿದೆ. ಇಬ್ಬರೂ ಇರಾನನ್ನು ಯುಎಸ್‌ಎ ಮತ್ತು ಇಸ್ರೇಲಿನ ಶತ್ರು ಎಂಬಂತೆ ಬಿಂಬಿಸುತ್ತಾ ಬಂದಿದ್ದಾರೆ. ಇಲ್ಲವಾದಲ್ಲಿ ಬರಾಕ್ ಒಬಾಮ ತನ್ನ ಎರಡನೆಯ ಅವಧಿಯಲ್ಲಿ ಇರಾನ್ ಜೊತೆ ಯುದ್ಧವನ್ನು ಪ್ರಚೋದಿಸುತ್ತಿರುವುದಾಗಿ ಆರೋಪಿಸಿದ್ದ ಇದೇ ಟ್ರಂಪ್, ಈಗ ತಾನೇ ಅಂತಹ ಕ್ರಮ ಕೈಗೊಂಡಿರುವುದು ಏನನ್ನು ಸೂಚಿಸುತ್ತದೆ?

ಯುಎಸ್‌ಎ ನಡೆಸಿದ ದಾಳಿ ಗಂಭೀರ ಸ್ವರೂಪದ ಆಕ್ರಮಣವಾಗಿದ್ದು, ಇರಾನ್ ಇದನ್ನು ಸುಲಭದಲ್ಲಿ ಮರೆಯುವ ಸಾಧ್ಯತೆ ಇಲ್ಲ. ಖಾಸಿಂ ಸುಲೇಮಾನಿಯನ್ನು ಸರ್ದಾರ್ ಎಂದು ಕರೆಯಲಾಗುತಿತ್ತು. ಕಳೆದ 23 ವರ್ಷಗಳಿಂದ ಅವರು ದೇಶದ ಒಂದು ಪ್ರಮುಖ ಸೇನಾ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್‌ನ ಬೆನ್ನು ಮೂಳೆ ಮುರಿದವರು. ಐಸಿಸ್ ವಿರುದ್ಧ, ಭಯೋತ್ಪಾದನೆ ವಿರುದ್ಧ ತಾನೆಂದು ಹೇಳುವ ಯುಎಸ್‌ಎ ಅಂತವರನ್ನೇ ಯಾಕೆ ಕೊಂದಿತು? ಇರಾನ್, ಇರಾಕಿ ನೆಲದಲ್ಲಿ ತನ್ನ ಮೇಲೆ ದಾಳಿಗೆ ಬೆಂಬಲ ನೀಡುತ್ತಿದೆ ಎಂದು ಯುಎಸ್‌ಎ ಆರೋಪಿಸಿದ್ದು, ಎರಡೂ ದೇಶಗಳ ಸಂಬಂಧ ಹದಗೆಟ್ಟಿತ್ತು. ಆದರೆ, ಈ ಆರೋಪಕ್ಕೆ ಯುಎಸ್‌ಎ ಯಾವುದೇ ಸಾಕ್ಷ್ಯಾಧಾರಗಳನ್ನು ಈ ತನಕ ನೀಡಿಲ್ಲ.

ಇದಕ್ಕೂ ಹಿಂದೆ ಇರಾಕಿ ಮಿಲಿಷಿಯಾದ ಮೇಲೆ ಯುಎಸ್‌ಎ ನಡೆಸಿದ್ದ ವಾಯುದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಅದು ಬಾಗ್ದಾದ್‌ನ ಯುಎಸ್‌ಎ ರಾಯಭಾರ ಕಚೇರಿಯ ಎದುರು ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲಿ ‘ಅಮೆರಿಕಕ್ಕೆ ಸಾವು’ ಎಂಬ ಘೋಷಣೆ ಕೂಗಲಾಗಿತ್ತು ಮತ್ತು ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿತ್ತು. ಈ ಪ್ರತಿಭಟನೆಗಳಿಗೆ ಇರಾನ್ ಬೆಂಬಲ ನೀಡುತ್ತಿದೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಯುಎಸ್‌ಎ ವಿರುದ್ಧ ದ್ವೇಷದ ಭಾವನೆ ಹುಟ್ಟುಹಾಕುತ್ತಿದೆ ಎಂದು ಆರೋಪಿಸಲಾಗಿದ್ದರೂ, ಅದೊಂದು ಆರೋಪವಾಗಿಯೇ ಉಳಿದಿದೆ.

ಇದೇ ರೀತಿಯಲ್ಲಿ ಇರಾಕ್ ಸಾಮೂಹಿಕ ವಿನಾಶದ ರಾಸಾಯನಿಕ ಅಸ್ತ್ರಗಳನ್ನು ಹೊಂದಿದೆ ಎಂಬ ಆರೋಪದಲ್ಲಿ ಇರಾಕ್ ಮೇಲೆ ದಾಳಿ ಮಾಡಿದ್ದ ಯುಎಸ್‌ಎ, ಸದ್ದಾಂ ಹುಸೇನ್ ಸಾವಿಗೆ ಕಾರಣವಾಗಿತ್ತು. ಆದರೆ, ಅಲ್ಲಿ ಯಾವುದೇ ರಾಸಾಯನಿಕ ಅಸ್ತ್ರ ದೊರೆತಿರಲಿಲ್ಲ. ವಾಸ್ತವವಾಗಿ ಇಸ್ಲಾಮಿಕ್ ಕ್ರಾಂತಿಯ ಬಳಿಕ 1979ರ ನವೆಂಬರ್‌ನಲ್ಲಿ ಯುಎಸ್‌ಎಯ ಟೆಹರಾನ್ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿದ ವಿದ್ಯಾರ್ಥಿಗಳು 50ರಷ್ಟು ಯುಎಸ್‌ಎ ಪ್ರಜೆಗಳನ್ನು 444 ದಿನಗಳ ಕಾಲ ಒತ್ತೆ ಸೆರೆ ಇರಿಸಿಕೊಂಡದ್ದು ಬಿಟ್ಟರೆ, ಆ ಬಳಿಕ ಇರಾನ್, ಯುಎಸ್‌ಎಯ ಮೇಲೆ ಯಾವುದೇ ದಾಳಿಯನ್ನು ನಡೆಸಿಲ್ಲ. ಹಾಗಿದ್ದರೂ,  ಯುಎಸ್‌ಎ ಇರಾನ್ ಮೇಲೆ ಒತ್ತಾಯದ ಆರ್ಥಿಕ ದಿಗ್ಬಂಧನವನ್ನು ಹೇರಿತ್ತು ಮಾತ್ರವಲ್ಲ, ಭಾರತದ ಕೈಯನ್ನೂ ತಿರುಚಿ, ಸಾಕಷ್ಟು ಅಗ್ಗದ ಬೆಲೆಯಲ್ಲಿ ಕಚ್ಚಾತೈಲ ಪೂರೈಸುತ್ತಿದ್ದ ಇರಾನ್‌ನಿಂದ ತೈಲ ಖರೀದಿ ನಿಲ್ಲಿಸುವಂತೆ ಮಾಡಿತ್ತು.

ಬೇರೆ ದೇಶಗಳ ಮೇಲೆ ದಾಳಿ ಮಾಡುವುದು, ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು, ತನ್ನ ಬಂಡವಾಳಕ್ಕೆ ಅನುಕೂಲಕರವಾದ ಎಲ್ಲಾ ಕಡೆಗಳಲ್ಲಿ ಆಂತರಿಕ ದಂಗೆ ಪ್ರಚೋದಿಸಿ, ಕೈಗೊಂಬೆ ಸರಕಾರಗಳನ್ನು ಸ್ಥಾಪಿಸುವುದು ಯುಎಸ್‌ಎಯ ಹಳೆಯ ಚಾಳಿ. ಮಧ್ಯ ಮತ್ತು ದಕ್ಷಿಣ ಅಮೇರಿಕಾ ಹಾಗೂ ಆಫ್ರಿಕಾದ ಅನೇಕ ಚಿಕ್ಕ, ದೊಡ್ಡ ದೇಶಗಳು ಇದನ್ನು ಅನುಭವಿಸಿದ್ದು, ಅದಕ್ಕೆ ಸಡ್ಡುಹೊಡೆದು ನಿಂತದ್ದು, ವಿಯೆಟ್ನಾಂ ಮತ್ತು ಕ್ಯೂಬಾ ಮಾತ್ರ. ಎರಡನೇ ಮಹಾಯುದ್ಧದ ಬಳಿಕ ಕೊರಿಯಾ, ವಿಯೆಟ್ನಾಂ ಯುದ್ಧದಿಂದ ಹಿಡಿದು, ಈ ತನಕ ಪ್ರಪಂಚದಲ್ಲಿ ನಡೆದ ಬಹುತೇಕ ಎಲ್ಲಾ ಯುದ್ಧಗಳಲ್ಲಿ ಯುಎಸ್‌ಎಯ ಪ್ರತ್ಯಕ್ಷ ಅಥವಾ ಪರೋಕ್ಷ ಪಾತ್ರ ಇರುವುದು ಏಕೆಂದು ನಾವು ಯೋಚಿಸಬಹುದು.

1991ರಲ್ಲಿ ಇರಾಕ್ ಮೇಲೆ ದಾಳಿ ನಡೆಸಿದ ಬಳಿಕ ಯುಎಸ್‌ಎಯು ಅಫಘಾನಿಸ್ತಾನ, ಲಿಬಿಯಾ, ಸುಡಾನ್, ಈಜಿಪ್ಟ್, ಸೋಮಾಲಿಯಾ, ಯೆಮೆನ್ ಮತ್ತು ಸಿರಿಯಾದ ಮೇಲೆ ದಾಳಿ ನಡೆಸಿ ಅಲ್ಲಿನ ಆಡಳಿತಗಾರರನ್ನು ಉರುಳಿಸಿ, ಅವರ ಸಾವಿಗೆ ಕಾರಣವಾಗಿದೆ. ಅದಕ್ಕೆ ನೀಡಿದ ಕಾರಣವೆಂದರೆ, ಅವರು ಸರ್ವಾಧಿಕಾರಿಗಳು ಎಂಬುದು ಅಥವಾ ಐಸಿಸ್, ಅಲ್ ಖಾಯ್ದಾ ಉಗ್ರರನ್ನು ನಾಶಮಾಡುವುದು. ಆದರೆ, ನಿಜವಾದ ಕಾರಣವೆಂದರೆ, ಇವುಗಳಲ್ಲಿ ಬಹುತೇಕ ಎಲ್ಲವೂ ತೈಲಸಂಪನ್ನ ದೇಶಗಳಾಗಿರುವುದು. ಬಡದೇಶಗಳಲ್ಲಿ ಮಹಾ ಕ್ರೂರ ಸರ್ವಾಧಿಕಾರಿಗಳಿದ್ದರೂ, ಪ್ರಜಾಪ್ರಭುತ್ವದ ಏಕೈಕ ವಕ್ತಾರನಂತೆ ವರ್ತಿಸುವ ಯುಎಸ್‌ಎ ಮೂಸಿಯೂ ನೋಡುವುದಿಲ್ಲ. ಉದಾಹರಣೆಗೆ ರುವಾಂಡದಲ್ಲಿ ಲಕ್ಷಗಟ್ಟಲೆ ಮಂದಿಯನ್ನು ಹುಟು- ಟುಟ್ಸಿ ಅಂತಃಕಲಹದಲ್ಲಿ ಹಾದಿಬೀದಿಗಳಲ್ಲಿ ಕತ್ತರಿಸಿ ಕೊಲ್ಲಲಾಗುತ್ತಿದ್ದರೂ, ಅದನ್ನು ತಪ್ಪಿಸಲು ಏನನ್ನೂ ಮಾಡಲಿಲ್ಲ. ಅದು ಇದೀಗ ಕೊಲ್ಲಿಯಲ್ಲಿ ಇನ್ನೊಂದು ಸುಡುಮದ್ದು ರಾಶಿಗೆ ಕಿಡಿ ಹಚ್ಚಿದೆ. ಪರಿಣಾಮ ಕಾದುನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...