Homeಅಂಕಣಗಳುಬಲಿಷ್ಠ ಕೇಂದ್ರಕ್ಕೆ ಬಲಿಯಾಗುತ್ತಿದೆಯೇ ಒಕ್ಕೂಟ ವ್ಯವಸ್ಥೆ?

ಬಲಿಷ್ಠ ಕೇಂದ್ರಕ್ಕೆ ಬಲಿಯಾಗುತ್ತಿದೆಯೇ ಒಕ್ಕೂಟ ವ್ಯವಸ್ಥೆ?

- Advertisement -
- Advertisement -

India is more a continent than a country (ಭಾರತ ಒಂದು ದೇಶ ಅನ್ನುವುದಕ್ಕಿಂತಲೂ ಹೆಚ್ಚಾಗಿ ಒಂದು ಭೂಖಂಡ ಎನ್ನಬಹುದು) ಎನ್ನುವುದುಂಟು. ಭಾರತವನ್ನು ಎಲ್ಲ ರೀತಿಯ ವೈವಿಧ್ಯತೆಗಳಿಗೂ ತವರು ಎನ್ನಬಹುದು. ಜಗತ್ತಿನ ಎಲ್ಲ ಪ್ರಮುಖ ಧರ್ಮಗಳೂ ಇಲ್ಲಿವೆ. ಭಾಷೆ, ಸಂಸ್ಕೃತಿ, ಕೃಷಿ, ಆಹಾರ, ಪರಂಪರೆ ಪ್ರತಿ ನೂರು ಕಿಲೋಮೀಟರ್‍ಗೂ ಬದಲಾಗುತ್ತದೆ ಎನ್ನುವುದು ಸಾಮಾನ್ಯದ ಮಾತು. ಆದರೆ ವರ್ತಮಾನದ ವಿದ್ಯಮಾನವೆಂದರೆ ಆರ್ಥಿಕ ಪ್ರಗತಿಯ ಜೊತೆಜೊತೆಗೆ ಹೆಚ್ಚುಹೆಚ್ಚು ಮಿಲಿಟರಿಕರಣಗೊಂಡ ರಾಷ್ಟ್ರೀಯತೆ ದೇಶದ ರಾಜಕೀಯ ಶಕ್ತಿಯನ್ನು ಕೇಂದ್ರೀಕರಿಸಿ ಬಲಿಷ್ಠ ಏಕಮುಖಿ ನಾಯಕತ್ವಕ್ಕೆ ನಾಂದಿಯಾಗುವ ಅಪಾಯವನ್ನು ನಾವು ಕಾಣುತ್ತಿದ್ದೇವೆ. ಅದು ಅಮೇರಿಕಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಂಡುಬರುವ ಟ್ರಂಪ್‍ನ ಪ್ರಭಾವವಿರಬಹುದು, ಅಥವಾ ರಷ್ಯಾದ ಪುಟಿನ್ ಇರಬಹುದು, ಹಾಗೆಯೇ ಟರ್ಕಿ ದೇಶದ ಎರ್ಡೋಗಾನ್ ಇರಬಹುದು, ಎಲ್ಲೆಡೆ ಈ ರೀತಿಯ ಬೆಳವಣಿಗೆಯನ್ನು ಕಾಣಬಹುದಾಗಿದೆ. ನಮ್ಮ ದೇಶವು ಇದಕ್ಕೆ ಹೊರತಲ್ಲ. ಕೇಂದ್ರೀಕೃತ ರಾಜಕೀಯ ಮತ್ತು ಆರ್ಥಿಕ ಶಕ್ತಿಯಿಂದ ನಮ್ಮ ರಾಷ್ಟ್ರದ ಮೂಲ ಆಶಯವಾದ ಒಕ್ಕೂಟ ವ್ಯವಸ್ಥೆಗೆ ಮತ್ತು ಎಲ್ಲಾ ರೀತಿಯ ವೈವಿಧ್ಯತೆಗೆ ಅಪಾರ ನಷ್ಟವಾಗುವ ಸಾಧ್ಯತೆಗಳಿವೆ.
ಹಾಲಿ ಅಮೆರಿಕದಲ್ಲಿ ನೆಲೆಸಿರುವ ಯಾಶಾಮಾಂಕ್ ಎಂಬ ಚಿಂತಕ ಇತ್ತೀಚೆಗೆ ತನ್ನ ‘ಪೀಪಲ್ ವರ್ಸಸ್ ಡೆಮಾಕ್ರೆಸಿ’ ಎನ್ನುವ ಪುಸ್ತಕದಲ್ಲಿ ಪ್ರಜಾಪ್ರಭುತ್ವ ಸರ್ಕಾರಗಳೇ ಹೇಗೆ ಜನಸಾಮಾನ್ಯರ ವಿರುದ್ಧ ಕೆಲಸ ಮಾಡುತ್ತಿವೆ ಎಂದು ವಿವರಿಸುತ್ತಾನೆ. ಇಂದು ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವಕ್ಕಿಂತ ಹೆಚ್ಚು ಕಂಡುಬರುವುದು ಚುನಾವಣಾ ಪ್ರಭುತ್ವ ಎನ್ನುತ್ತಾನೆ. ಜನಮೆಚ್ಚುಗೆಗಾಗಿ ಒಂದೆರಡು ಕಾರ್ಯಕ್ರಮಗಳನ್ನು ರೂಪಿಸುವ ಜೊತೆಯಲ್ಲೇ ನಿರಂಕುಶಾಧಿಕಾರ ಹರಳುಗಟ್ಟುತ್ತಿರುವ ಬಗೆಯನ್ನು ಬಿಚ್ಚಿಡುತ್ತಾರೆ. ಸಮಕಾಲೀನ ಜಗತ್ತಿನ ಹಲವಾರು ದೇಶಗಳಲ್ಲಿ popular authoritarianism (ಜನಪ್ರಿಯ ನಿರಂಕುಶತ್ವ) ರೂಪುಗೊಳ್ಳುತ್ತಿವೆ ಎಂದು ವಿವರಿಸಿದ್ದಾರೆ.
ವಿವಿಧ ರಾಜ್ಯ ಸರ್ಕಾರಗಳನ್ನು ಒಳಗೊಂಡ ಒಕ್ಕೂಟ ವ್ಯವಸ್ಥೆಯನ್ನು ಭಾರತ ತನ್ನ ಸಂವಿಧಾನದಲ್ಲಿ ಸ್ಪಷ್ಟವಾಗಿ ಒಪ್ಪಿಕೊಂಡಿದೆಯಾದರೂ ಸ್ವಾತಂತ್ರ ಬಂದ ನಂತರ 550ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಟ್ಟುಹಾಕಿ ನಮ್ಮ ರಾಷ್ಟ್ರವನ್ನು ಕಟ್ಟಿದ್ದರ ಹಿನ್ನೆಲೆಯಿಂದಾಗಿ ಬಲವಾದ ಕೇಂದ್ರ ಸರ್ಕಾರ ಮತ್ತು ಅದರ ಹಿಡಿತಕ್ಕೆ ಒತ್ತು ನೀಡಿರುವುದನ್ನು ಗಮನಿಸಬಹುದು. ಸಂವಿಧಾನದಲ್ಲಿ ಸ್ಪಷ್ಟವಾಗಿ ಕೇಂದ್ರ ಮತ್ತು ರಾಜ್ಯಗಳ ಆಡಳಿತ ಮತ್ತು ನಿರ್ವಹಣಾ ಪಾತ್ರಗಳನ್ನು ಸ್ಪಷ್ಟವಾಗಿ ವಿಂಗಡಿಸಿ ಮತ್ತು ಸುಮಾರು 52 ವಿಷಯಗಳಲ್ಲಿ ಜಂಟಿಯಾಗಿ ಸ್ಪಂದಿಸುವ ನಿಲುವನ್ನು ಕಾಣಬಹುದು. ಈ ವ್ಯವಸ್ಥೆಯನ್ನು ಭದ್ರವಾಗಿ ಕಾಪಾಡಿಕೊಳ್ಳಲು 3 ಸ್ವತಂತ್ರ ಸಂಸ್ಥೆಗಳು ಕೆಲಸ ಮಾಡುವ ಬದ್ಧತೆಯನ್ನು ಹೊಂದಿವೆ. ಅವುಗಳೆಂದರೆ, ರಾಷ್ಟ್ರಪತಿ ನೇಮಿಸುವ ಹಣಕಾಸು ಆಯೋಗ, ಚುನಾವಣಾ ಆಯೋಗ ಮತ್ತು ಸರ್ವೋಚ್ಛ ನ್ಯಾಯಾಲಯ. ಇತ್ತೀಚಿನ ದಿನಗಳಲ್ಲಿ ಮೂರೂ ಸಂಸ್ಥೆಗಳು ಪ್ರಶ್ನಾತೀತವಲ್ಲ ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಕೇಂದ್ರ ಸರ್ಕಾರ, ಕೇಂದ್ರ ಮತ್ತು ರಾಜ್ಯದ ಚುನಾವಣೆಯನ್ನು ಒಂದೇ ಬಾರಿ ನಡೆಸುವ ಉದ್ದೇಶಕ್ಕಾಗಿ, ಕಾನೂನು ತಿದ್ದುಪಡಿ ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾತ್ರವಲ್ಲದೆ, ಒಕ್ಕೂಟ ವ್ಯವಸ್ಥೆಗೂ ಪೆಟ್ಟುಕೊಡುವಂತದ್ದಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯ ತನ್ನ ಆಂತರಿಕ ಆಗುಹೋಗುಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸ್ವತಂತ್ರ ನಿರ್ಧಾರಗಳಿಗೆ ಅವಕಾಶ ಇರತಕ್ಕದ್ದು. ಅಲ್ಲಿ ತಪ್ಪು ಒಪ್ಪುಗಳು ಇರುವುದೂ ಸಹಜವೇ. ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಇರುವ ಸ್ಕಾಟ್ ಲ್ಯಾಡ್, ಐರ್‍ಲ್ಯಾಂಡ್, ವೇಲ್ಸ್‍ಗಳಲ್ಲಿ ವಿಭಿನ್ನ ರೀತಿಯ ಚುನಾವಣಾ ವ್ಯವಸ್ಥೆ ಒಂದೇ ಒಕ್ಕೂಟದ ಒಳಗೇ ಇರುವುದನ್ನು ಗಮನಿಸಬಹುದು. ಅಲ್ಲದೆ, ರಾಜಧಾನಿ ಲಂಡನ್‍ನಲ್ಲಿಯೂ ಬೇರೆ ರೀತಿಯ ಚುನಾವಣಾ ವ್ಯವಸ್ಥೆ ಇದೆ. ಆಸ್ಟ್ರೇಲಿಯಾ ದೇಶವೂ ಸಹ ತನ್ನ 6 ರಾಜ್ಯಗಳಲ್ಲಿ ಮತ್ತು ಕೆನಡಾ ದೇಶ ತನ್ನ 10 ಪ್ರಾಂತ್ಯಗಳಲ್ಲಿ ತನ್ನದೇ ಆದ ವಿಭಿನ್ನ, ವಿಶಿಷ್ಟ ಚುನಾವಣಾ ಪದ್ಧತಿಗಳನ್ನು ಅಳವಡಿಸಿಕೊಂಡಿದೆ. ಭಾರತದ ಪ್ರತಿಯೊಂದು ರಾಜ್ಯವೂ, ಜಗತ್ತಿನ ಶೇಕಡಾ 90ರಷ್ಟು ರಾಷ್ಟ್ರಗಳಿಗಿಂತ ದೊಡ್ಡದು ಎಂಬ ಅಂಶವನ್ನು ಈಗಾಗಲೇ ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಕಾನೂನಿನ ಮೂಲಕ ಒಕ್ಕೂಟದ ವ್ಯವಸ್ಥೆಯನ್ನು ಬದಲಾಯಿಸುವುದು ಸರಿ ಕಾಣುವುದಿಲ್ಲ. ಕಾನೂನಿನ ಮೂಲಕ ಮಾತ್ರ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವುದು ಅಸಾಧ್ಯವಾದ ಮಾತು.Law can be divergently different from justice (ಕಾನೂನು ಎಂಬುದು ನ್ಯಾಯದೊಂದಿಗೆ ಹೊಂದಿಕೆಯಾಗದಷ್ಟು ಭಿನ್ನವಾಗಿರಲು ಸಾಧ್ಯ.).
ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಂಬಂಧಪಟ್ಟ ತನ್ನ ಹಿಡಿತದಲ್ಲಿರುವ ಕೃಷಿ, ಹೈನುಗಾರಿಕೆ, ವಿದ್ಯಾಭ್ಯಾಸ, ಮಾನವ ಅಭಿವೃದ್ಧಿ ವಿಷಯಗಳಲ್ಲಿ ಪರೋಕ್ಷವಾಗಿ ಮೂಗು ತೂರಿಸುವುದನ್ನು ಗಮನಿಸಿದ್ದೇವೆ. ಕಳೆದ ವರ್ಷ ಪ್ರಾಣಿ ದಯಾ ವಿಷಯವನ್ನು ಮುಂದಿಟ್ಟುಕೊಂಡು ಇಡೀ ದೇಶದಲ್ಲಿ ಜಾನುವಾರಗಳ ಸಾಗಾಣಿಕೆ ಮತ್ತು ಮಾರಾಟವನ್ನು ಹತ್ತಿಕ್ಕಲಾಯಿತು. ಕೊನೆಗೂ ದುಷ್ಪರಿಣಾಮವನ್ನು ತಿಳಿದು, ಕೇಂದ್ರದ ಪರಿಸರ ಇಲಾಖೆ ಈ ಅಧಿಸೂಚನೆಯನ್ನು ಹಿಂಪಡೆಯಿತು. ಆದರೆ ಒಂದೇ ವರ್ಷದಲ್ಲಿ ಭಾರತೀಯ ರೈತರು ತಮ್ಮ ಪಶುಸಂಗೋಪನೆಯಲ್ಲಿ ಸುಮಾರು ಒಂದು ಲಕ್ಷ ಕೋಟಿಯಷ್ಟು ಹಣವನ್ನು ಕಳೆದುಕೊಂಡರು. ಈಗಿನ ಏಕಮಾತ್ರ ರಾಷ್ಟ್ರೀಯ ತೆರಿಗೆ ನೀತಿ ಜಿಎಸ್‍ಟಿಯಲ್ಲಿ ಇಂತಹದೇ ದೋಷ ಇರುವುದನ್ನು ಕಾಣಬಹುದು. ಉದಾಹರಣೆಗೆ ಸಣ್ಣ ವ್ಯಾಪಾರಿಗಳು ತಮ್ಮ ವಾರ್ಷಿಕ ವಹಿವಾಟು ಒಂದೂವರೆ ಕೋಟಿಗೂ ಕಮ್ಮಿಇದ್ದಲ್ಲಿ ಕಾಂಪೋಸಿಷನ್ ಸ್ಕೀಮ್‍ನ ಮೊರೆ ಹೋಗಬಹುದು. ಇದರ ಪ್ರಕಾರ ಉತ್ಪಾದಕರು ಕೇವಲ 2% ಮಾತ್ರ ತೆರಿಗೆ ಕಟ್ಟುವುದಾಗಿದೆ. ಆದರೆ ಇಲ್ಲಿನ ನಿರ್ಬಂಧಗಳು ವ್ಯಾಪಾರವನ್ನೇ ಹತ್ತಿಕ್ಕುವಂತಿವೆ. ಉದಾಹರಣೆಗೆ ಬೆಂಗಳೂರಿನ ವ್ಯಾಪಾರಿ ತಮಿಳುನಾಡಿನ ಹೊಸೂರಿನಲ್ಲಿ ತನಗೆ ಬೇಕಾದ ಕಚ್ಚಾವಸ್ತು ಕಮ್ಮಿ ಬೆಲೆಗೆ ಸಿಗುವಂತಿದ್ದರೆ ಅಲ್ಲಿ ಕೊಳ್ಳುವಂತಿಲ್ಲ. ದೇಶಕ್ಕೆಲ್ಲಾ ಒಂದೇ ತೆರಿಗೆ ಎಂದಮೇಲೆ ಸಣ್ಣ ವ್ಯಾಪಾರಿಗಳಿಗೆ ರಾಜ್ಯವನ್ನು ಬಿಟ್ಟು ಇನ್ನೊಂದು ರಾಜ್ಯಕ್ಕೆ ಹೋಗಬಾರದು ಎನ್ನುವ ವ್ಯಾಪಾರ ನಿರ್ಬಂಧ ಎಷ್ಟು ಸಮಂಜಸ? ಇಲ್ಲಿ ಮತ್ತೊಂದು ಅಂಶವನ್ನೂ ನಾವು ಪರಿಗಣಿಸಬೇಕು. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಸಣ್ಣ ಕೈಗಾರಿಕೆಗಳು ಹೊಡೆತ ತಿಂದರೆ ಉದ್ಯೋಗ ಸೃಷ್ಟಿಯ ಮೇಲೆ ಅದರ ನೇರ ದುಷ್ಪರಿಣಾಮ ಬೀರುತ್ತದೆ.
ಈಗ 14ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯಗಳಿಗೆ ಕೇಂದ್ರದ ಆರ್ಥಿಕ ಕೊಡುಗೆಯನ್ನು ಶೇಕಡಾ 32 ರಿಂದ 42 ರಷ್ಟು ಹೆಚ್ಚಿಸಲಾಗಿದೆಯೆಂಬುದು ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಆದರೆ, ಬಿಸಿಯೂಟ, ಮಕ್ಕಳ ಪೋಷಣೆಯಂತಹ ಕಾರ್ಯಕ್ರಮಗಳಿಗೆ ಅನುದಾನ ಕಡಿತವಾಗಿರುವ ಬಗ್ಗೆ ಪ್ರಸ್ತಾಪಿಸುವುದೇ ಕಡಿಮೆ. 2014-15 ರಿಂದ ಹೊಸ 14ನೇ ಹಣಕಾಸು ಆಯೋಗ ಅನುಷ್ಟಾನಗೊಂಡ ನಂತರ ಒಟ್ಟು ರಾಜ್ಯಗಳಿಗೆ ಕೇಂದ್ರದಿಂದ ಒದಗಿಸಿರುವ ಹಣ ಶೇಕಡಾ 55-57ರಷ್ಟಾಗಿದೆ. ಆದರೆ, 2010-12 ರಲ್ಲಿಯೇ ಕೇಂದ್ರದಿಂದ ಒಟ್ಟು ಬಿಡುಗಡೆಯಾಗಿದ್ದ ಹಣ ಶೇಕಡಾ 60ರಷ್ಟಿತ್ತು. ಅಲ್ಲದೆ, ರಾಜ್ಯ ಸರ್ಕಾರಗಳಿಗಿಂತ ಕೇಂದ್ರ ಸರ್ಕಾರ ಸಾಲ ಮಾಡುವ ಪ್ರಮಾಣ ದುಪ್ಪಟ್ಟಾಗಿರುತ್ತದೆ. ಹೀಗಾಗಿ, ‘ರಾಜ್ಯ ಸರ್ಕಾರಗಳು ಹಣಕಾಸು ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ’ ಎಂದು ಕೇಂದ್ರ ಸರ್ಕಾರ ಅಪವಾದ ಹೊರಿಸುತ್ತಿರುವುದು ಸರಿಯಲ್ಲ. ಕೇಂದ್ರ ತನ್ನ ಜಿಡಿಪಿಯ ಶೇಕಡಾ ಸುಮಾರು 50ರಷ್ಟು ಸಾಲ ಮಾಡಿದೆ. ಆದರೆ ರಾಜ್ಯ ಸರ್ಕಾರಗಳ ಸಾಲ ಪ್ರಮಾಣ ಸರಾಸರಿ ಶೇಕಡಾ 20ರಷ್ಟು ಮಾತ್ರ.
ಇತ್ತೀಚೆಗೆ 15ನೇ ಹಣಕಾಸು ಆಯೋಗಕ್ಕೆ ಕೇಂದ್ರ, ವಿವಾದಾತ್ಮಕ ಸೂಚನೆಗಳನ್ನು ಕಾನೂನು ಬಾಹಿರವಾಗಿ ಕೊಟ್ಟಿರುತ್ತದೆ. ಅವುಗಳಲ್ಲಿ, ಕೆಲವು ಅನುದಾನಗಳನ್ನು ಸಂಪೂರ್ಣವಾಗಿ ಕಡಿತಗೊಳಿಸುವುದು, ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆಗೆ ಸಂಬಂಧಿಸಿದಂತೆ 2011ರ ಜನಸಂಖ್ಯಾ ಪ್ರಮಾಣವನ್ನು ಆಧಾರವಾಗಿಟ್ಟುಕೊಳ್ಳುವುದು – ಇವು ಪ್ರಮುಖ ಅಂಶಗಳು. ಈ ಕ್ರಮಗಳು ದಕ್ಷಿಣ ರಾಜ್ಯಗಳ ಆರ್ಥಿಕ ಸಂಪನ್ಮೂಲಗಳಿಗೆ ಕೊಡಲಿ ಪೆಟ್ಟು ನೀಡಲಿವೆ. 1971ರಿಂದೀಚೆಗೆ ದಕ್ಷಿಣ ರಾಜ್ಯಗಳು ಜನಸಂಖ್ಯಾ ನಿಯಂತ್ರಣವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿವೆ. ಉದಾಹರಣೆಗೆ ಕರ್ನಾಟಕದಲ್ಲಿ ಜನನ ಮತ್ತು ಮರಣ ಅನುಪಾತಗಳು ಸರಿಸಮವಾಗಿದ್ದು ಜನಸಂಖ್ಯೆಯ ಹೆಚ್ಚಳ ನಿಯಂತ್ರಣದಲ್ಲಿದೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ಜನಸಂಖ್ಯೆಯ ನಿಯಂತ್ರಣ ಕರ್ನಾಟಕಕ್ಕಿಂತಲೂ ಹೆಚ್ಚು.
ಹೀಗಾಗಿ ಈ ಉತ್ತಮ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದಕ್ಕೆ ಕೇಂದ್ರ ಸರ್ಕಾರ ಇನ್ನೂ ಹೆಚ್ಚು ಉತ್ತೇಜನ ಕೊಡಬೇಕಾಗುತ್ತದೆ. ಆದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸು ಇದನ್ನು ತಿರುವು ಮಾಡುವ ಉದ್ದೇಶ ಹೊಂದಿದೆ.
ಉತ್ತರ ಭಾರತದ ರಾಜ್ಯಗಳಾದ ಉತ್ತರಪ್ರದೇಶ, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಬಿಹಾರ ಮೊದಲಾದ ರಾಜ್ಯಗಳಲ್ಲಿ ಜನಸಂಖ್ಯೆಯ ನಿಯಂತ್ರಣ ಸಾಧ್ಯವಾಗಲಿಲ್ಲ. ಶಿಕ್ಷಣದ ವಿಷಯದಲ್ಲೂ ಇದೇ ಸ್ಥಿತಿ. ಹೀಗೆ 2011ರ ಜನಸಂಖ್ಯೆಯ ಅನುಪಾತವನ್ನು ಪರಿಗಣಿಸುವುದಾದರೆ ಈ ರಾಜ್ಯಗಳಿಗೆ ಹೆಚ್ಚಿನ ಅನುದಾನ ಹರಿದುಹೋಗಲಿದೆ. ತೆರಿಗೆ ಸಂಗ್ರಹದ ವಿಷಯದಲ್ಲಿ ದಕ್ಷಿಣ ರಾಜ್ಯಗಳ ಕೊಡುಗೆ ಹೋಲಿಕೆಯಲ್ಲಿ ಹೆಚ್ಚಾಗಿದ್ದರೂ ಹಂಚಿಕೆ ವಿಷಯದಲ್ಲಿ ತಾರತಮ್ಯವಾಗಲಿದೆ. ಇದನ್ನು ಯಾರೂ ಒಪ್ಪಲಾಗದು. ಜನಸಂಖ್ಯೆ ಹೆಚ್ಚಿರುವ ಉತ್ತರದ ಬಹುತೇಕ ರಾಜ್ಯಗಳು ಹಾಲಿ ಬಿಜೆಪಿ ಆಡಳಿತದಲ್ಲಿರುವುದು ಕೇವಲ ಕಾಕತಾಳೀಯ ಅಷ್ಟೇ ಎಂದು ಸದ್ಯಕ್ಕೆ ಅಂದುಕೊಳ್ಳೋಣ.
ಕೇಂದ್ರತ್ವದ ವಿಷಯದಲ್ಲಿ ಮತ್ತೊಂದು ಅಂಶವನ್ನೂ ಪರಿಗಣಿಸಬೇಕು. ‘ಕೇಂದ್ರದಿಂದ ಹೊರಟ ನೂರು ರೂಪಾಯಿ ಹಳ್ಳಿಯ ಜನರಿಗೆ ತಲುಪುವಾಗ 15 ರೂಪಾಯಿಯಾಗುತ್ತದೆ’ ಎಂದು ಈ ಹಿಂದೆ ರಾಜೀವ್‍ಗಾಂಧಿಯವರು ಹೇಳಿದ್ದ ಮಾತನ್ನು ಇಲ್ಲಿ ಗಮನಿಸತಕ್ಕದ್ದು. ಹೀಗೆ ಕೇಂದ್ರೀಕೃತ ವ್ಯವಸ್ಥೆಯಿಂದ ಹರಿದು ಬರುವ ಹಣ, ಹಳ್ಳದ ರೂಪದಲ್ಲಿ ಆರಂಭವಾಗಿ ಕೊನೆಗೆ ಜನರಿಗೆ ತಲುಪುವ ವೇಳೆಗೆ ಹನಿಯ ರೂಪದಲ್ಲಿ ತೊಟ್ಟಿಕ್ಕುವಂತಾಗಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಕ್ರಮ ಕೈಗೊಂಡು, ರಾಜ್ಯ ಸರ್ಕಾರಗಳ ಜೊತೆಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಹ ಸುಸ್ಥಿರ, ಸುಭದ್ರ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕೆಲಸಗಳಾಗಬೇಕಿದೆಯೇ ಹೊರತು ಒಂದು ಕೇಂದ್ರದ ಆಲದ ಮರ ತನ್ನ ಕೊಂಬೆಗಳನ್ನು ಇನ್ನೂ ಅಗಲಕ್ಕೆ ಚಾಚಿ, ಅದರಡಿಯಲ್ಲಿ ಒಂದು ಹುಲ್ಲುಕಡ್ಡಿಯೂ ಬೆಳೆಯದಂತೆ ಮಾಡುವ ವ್ಯವಸ್ಥೆ ಪ್ರಜಾತಂತ್ರದ ಮೂಲ ಆಶಯಕ್ಕೆ ವಿರುದ್ಧ; ಭಾರತದ ವೈವಿಧ್ಯತೆಗೆ ಮಾರಕ.

-ಕೆ.ಸಿ.ರಘು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...