Homeಮುಖಪುಟದಾಸ ಸಾಹಿತ್ಯ ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ

ದಾಸ ಸಾಹಿತ್ಯ ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ

- Advertisement -
- Advertisement -

| ಡಾ. ಶಶಿಕಾಂತ ಕೌಡೂರು |

ಸಾಹಿತ್ಯ ಮತ್ತು ಸಂಗೀತ ಇತ್ಯಾದಿ ಪ್ರಕಾರಗಳು ತಟಸ್ಥವಾದ ಮುಗ್ಧ ಕಲಾಪ್ರಕಾರಗಳಲ್ಲ. ಅವು ನಮ್ಮ ದೈನಂದಿನ ಸಮಾಜೋ-ರಾಜಕೀಯ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಿರುತ್ತವೆ ಮತ್ತು ಸತತವಾಗಿ ರೂಪುಗೊಳ್ಳುತ್ತಿರುತ್ತವೆ ಹಾಗೆಯೇ ನಮ್ಮ ಚಟುವಟಿಕೆಗಳನ್ನೂ ರೂಪಿಸುತ್ತಿರುತ್ತವೆ. ಒಂದು ವಿಸ್ತೃತ ಉದಾಹರಣೆಯಾಗಿ ಕನ್ನಡದ ಸಾಹಿತ್ಯ ಮತ್ತು ಸಂಗೀತಕಲೆಗಳ ಭಾಗವಾಗಿರುವ ದಾಸಸಾಹಿತ್ಯ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಹೇಗೆ ಇಂಥ ಒಂದು ಪ್ರಕ್ರಿಯೆಯ ಭಾಗವಾಗಿ ಮೂಡಿಬಂತು ಎನ್ನುವುದನ್ನು ಸಂಕ್ಷಿಪ್ತವಾಗಿ ನೋಡೋಣ. ದಾಸಸಾಹಿತ್ಯ ಉದ್ಧೃತವಾದ ಸಂದರ್ಭ, ಅದನ್ನು ಸಾಹಿತ್ಯ ಮತ್ತು ಸಂಗೀತವಾಗಿ ಉಪಯೋಗಿಸಿ ಅವು ನಮ್ಮ ಸಾರ್ವಜನಿಕ ಸಂಸ್ಥೆಗಳ ಭಾಗವಾದ ರೀತಿ, ಇವೆಲ್ಲವುಗಳನ್ನು ಗಮನಿಸಿದಾಗ ಆ ಪ್ರಕಾರವು ಕೆಲವೊಂದು ಸಾಮುದಾಯಿಕ ಹಿತಾಸಕ್ತಿಗಳ ತಿಕ್ಕಾಟದ ಕ್ಷೇತ್ರವಾಗಿ ಮೂಡಿಬರುವುದನ್ನು ಕಾಣಬಹುದು: ಮೊದಲನೆಯದಾಗಿ ಕೆಲವು ಬ್ರಾಹ್ಮಣ ಮತ್ತು ಲಿಂಗಾಯತ ವಿದ್ವಾಂಸರ ನಡುವೆ; ಎರಡನೆಯದಾಗಿ ಬೆಂಗಳೂರಿನ ‘ಕನ್ನಡಾಭಿಮಾನಿಗಳು’ ಮತ್ತು ತಮಿಳರ ನಡುವೆ; ಮೂರನೆಯದಾಗಿ ಅಲ್ಪಸಂಖ್ಯಾತರ ಎದುರು ಬಹುಸಂಖ್ಯಾತರ ಸ್ವಪ್ರತಿಷ್ಠೆಗೆ.

ಮೊದಲನೆಯದನ್ನು ಮೊದಲು ನೋಡೋಣ. ಈಗಲೂ ಕೂಡಾ ದಾಸಸಾಹಿತ್ಯ ಮತ್ತು ವಚನಗಳ ಹೆಸರು ಜೊತೆಜೊತೆಯಾಗಿ ಹೋಗುತ್ತದೆ. ಇದಕ್ಕೆ ಕಾರಣ ಇವೆರಡೂ ಭಕ್ತಿ ಸಾಹಿತ್ಯಗಳೆಂಬುದು ಮಾತ್ರವಲ್ಲ; ಮೇಲೆ ತಿಳಿಸಿದಂತೆ ದಕ್ಷಿಣ ಕರ್ನಾಟಕದ ಬ್ರಾಹ್ಮಣ-ಲಿಂಗಾಯತ ತಿಕ್ಕಾಟ ಕೂಡಾ ಹೌದು. ದಾಸಸಾಹಿತ್ಯವು ಬ್ರಾಹ್ಮಣ ಸಾಹಿತ್ಯ ಹಾಗೂ ವಚನ ಸಾಹಿತ್ಯವು ಲಿಂಗಾಯತ ಅಥವಾ ವೀರಶೈವ ಸಾಹಿತ್ಯ ಎಂಬ ತೀರ್ಮಾನವನ್ನು ಹತ್ತೊಂಬತ್ತನೇ ಶತಮಾನದಲ್ಲೇ ಆರ್. ನರಸಿಂಹಾಚಾರ್ಯರು ಮಾಡಿದ್ದರು. ಕರ್ನಾಟಕದ ಏಕೀಕರಣದ ನಂತರ ಕರ್ನಾಟಕದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬಹುದಾಗಿದ್ದವರು ಹಾಗೂ ತೊಡಗಿಸಿಕೊಂಡವರು ಬ್ರಾಹ್ಮಣರು ಹಾಗೂ ಲಿಂಗಾಯತರು. ಸಾಂಸ್ಕೃತಿಕ ಬದುಕಿನಲ್ಲಿ ರಾಜ್ಯದ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳುವಾಗ ಆಗುವ ಸ್ಪರ್ಧೆ ಈ ಸಮುದಾಯಗಳ ನಡುವೆ ನಡೆಯಿತು. ಇದು 1960ರ ದಶಕದಲ್ಲಿ ಒಂದು ಶೀತಲ ಸಮರದ ರೂಪ ಪಡೆಯಿತು. ಉದಾಹರಣೆಗೆ ಅಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಬಗೆಯ ಕಾರ್ಯಕ್ರಮಗಳು, ಸ್ಪರ್ಧೆಗಳನ್ನೇರ್ಪಡಿಸುತ್ತಿತ್ತು. ದಾಸಸಾಹಿತ್ಯಕ್ಕೆ ಸಂಬಂಧಪಟ್ಟಂತೆ ವಿಶೇಷ ಭಾಷಣವಿದ್ದರೆ ಮತ್ತೆರಡು ದಿನಗಳಲ್ಲಿ ವಚನಕ್ಕೆ ಸಂಬಂಧಪಟ್ಟಂತೆ ಭಾಷಣವಿರುತ್ತಿತ್ತು. ಅಥವಾ ವಚನಗಳನ್ನು ಹಾಡುವ ಸ್ಪರ್ಧೆಯೇನಾದರೂ ಇದ್ದರೆ ಕೂಡಲೇ ದಾಸಸಾಹಿತ್ಯದ ಸ್ಪರ್ಧೆಯಿರುತ್ತಿತ್ತು. ಈ ಸಂದರ್ಭದಲ್ಲೇ ಅತೀ ಪ್ರಮುಖ ದಾಸರೆಂದು ಪರಿಗಣಿಸಲ್ಪಟ್ಟ ಪುರಂದರದಾಸರ ನಾಲ್ಕನೇ ಶತಮಾನೋತ್ಸವವನ್ನಾಚರಿಸುವ ಸಂದರ್ಭ ಬಂದಿತ್ತು. ಪುರಂದರದಾಸರು ಕರ್ನಾಟಕ ಸಂಗೀತ ಪಿತಾಮಹರೆನ್ನುವ ಘೋಷಣೆ ಹೆಚ್ಚು ಹೆಚ್ಚಾಗಿ ಕೇಳಿಬಂದದ್ದು ಇದೇ ಸಮಯದಲ್ಲಿ. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಬಿ. ಶಿವಮೂರ್ತಿ ಶಾಸ್ತ್ರಿ ಅವರು ನಿಜಗುಣ ಶಿವಯೋಗಿಗಳು ಪುರಂದರ ದಾಸರಿಗಿಂತಲೂ ಹಿಂದಿನ ಹದಿನಾಲ್ಕನೇ ಶತಮಾನದವರು ಆದ್ದರಿಂದ ಕರ್ನಾಟಕ ಸಂಗೀತದ ಆದಿಪುರುಷರು ಅವರೇ ಸರಿ ಎಂದು ಪ್ರತಿಪಾದಿಸಿದರು. ಇದೇ ಸಮಯಕ್ಕೆ ಡಾ. ಎಸ್. ಶ್ರೀಕಂಠ ಶಾಸ್ತ್ರಿ ಎಂಬುವ ಮೈಸೂರು ವಿ.ವಿ.ಯ ಇತಿಹಾಸ ಪ್ರಾಧ್ಯಾಪಕ ಪುರಂದರದಾಸರ ಅಸ್ತಿತ್ವವನ್ನೇ ಪ್ರಶ್ನಿಸುವಂಥ ಪ್ರಶ್ನೆಗಳನ್ನು ಕೇಳಿದರು. ಅವರ ಪ್ರಕಾರ ಬಸವಣ್ಣನ ಅಸ್ತಿತ್ವವನ್ನು ಐತಿಹಾಸಿಕ ದಾಖಲೆಗಳ ಮೂಲಕ ತೋರಿಸಿಕೊಡಬಹುದಾಗಿತ್ತು ಆದರೆ ಪುರಂದರ ದಾಸರ ಅಸ್ತಿತ್ವವನ್ನು ತೋರಿಸಿಕೊಡುವುದು ಐತಿಹಾಸಿಕವಾಗಿ ಸಾಧ್ಯವಿರಲಿಲ್ಲ. ಹಾಗೆಂದು ಅವರು ವಿಸ್ತೃತ ಲೇಖನವೊಂದನ್ನು ಬರೆದು ಆಗ ಪ್ರಕಟವಾಗುತ್ತಿದ್ದ ತಾಯಿನಾಡು ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರರು ಬಹಳ ತೀಕ್ಷ್ಣವಾದ ಪ್ರತಿಕ್ರಿಯೆಯೊಂದನ್ನು ‘ಐತಿಹಾಸಿಕ ಸತ್ಯಕ್ಕಿಂತ ಜನರ ನಂಬಿಕೆ ಮುಖ್ಯ’ ಎನ್ನುವ ಆಶಯದಲ್ಲಿ ಬರೆದು ಶಾಸ್ತ್ರಿಗಳನ್ನು ಸಿಕ್ಕಾಪಟ್ಟೆ ಜರೆದರು. ಶ್ರೀಕಂಠ ಶಾಸ್ತ್ರಿಯವರು ಲಿಂಗಾಯತರೇ ಅಲ್ಲದಿದ್ದರೂ ಬಸವಣ್ಣನ ಐತಿಹಾಸಿಕತೆಯನ್ನು ಕುರಿತು ಧನಾತ್ಮಕವಾಗಿ ಮಾತಾಡಿ ಪುರಂದರದಾಸರ ಕುರಿತು ಋಣಾತ್ಮಕವಾಗಿ ಮಾತಾಡಿದ್ದು ಹಲವರಿಗೆ ಒಂದು ಸಮಸ್ಯೆಯಾಗಿತ್ತು. ಈ ರೀತಿಯ ಹಲವಾರು ಸಣ್ನ ಪುಟ್ಟ ಘಟನೆಗಳು ಐವತ್ತರ ಹಾಗೂ ಅರವತ್ತರ ದಶಕದಲ್ಲಿ ನಡೆಯಿತು. ಆದ್ದರಿಂದಲೇ ಕನ್ನಡ ಸಾಹಿತ್ಯ ಪರಂಪರೆಯನ್ನು ಕುರಿತು ಸಮಕಾಲೀನರು ಮಾತಾಡುವಾಗ ದಾಸಸಾಹಿತ್ಯ ಮತ್ತು ವಚನಸಾಹಿತ್ಯದ ಹೆಸರುಗಳು ಜೊತೆಯಾಗಿಯೇ ಹೋಗುತ್ತದೆ: ಒಂದನ್ನು ಬಿಟ್ಟು ಇನ್ನೊಂದನ್ನು ಉಲ್ಲೇಖಿಸಿದರೆ ಎಲ್ಲಿ ಆ ಸಮುದಾಯ ನೊಂದುಕೊಳ್ಳುತ್ತದೋ ಎಂಬಂಥ ಒಂದು ಪ್ರಾಯೋಗಿಕ ಜಾತ್ಯತೀತತೆಯೊಂದಿಗೆ.

ಇನ್ನು ದಾಸಸಾಹಿತ್ಯ ಮತ್ತು ಸುಗಮ ಸಂಗೀತದ ಕಡೆಗೆ ಗಮನ ಹರಿಸೋಣ. ಸುಗಮಸಂಗೀತ ಎಂದು ಈಗ ಕರೆಯಲ್ಪಡುವ ಭಾವಗೀತೆಗಳಿಗೂ ಹಾಗೂ ಶಾಸ್ತ್ರೀಯ ಸಂಗೀತಕ್ಕೂ ಕೊಂಡಿ ಕಲ್ಪಿಸಿ ಕೊಟ್ಟಿದ್ದು ದಾಸಸಾಹಿತ್ಯ ಹಾಗೂ ವಚನ ಸಂಗೀತ. ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ದಾಸರ ಪದಗಳನ್ನು ಭಾವಗೀತೆಗಳು ಎಂದು ಉಲ್ಲೇಖಿಸಿದಂಥಾ ಸಂದರ್ಭಗಳಿವೆ. ಭಾವಗೀತೆ ಹಾಗೂ ಸುಗಮ ಸಂಗೀತಕ್ಕೆ ಸಂಬಂಧಿಸಿದಂತೆ 40, 50, ಹಾಗೂ 60ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಣನೀಯ ಪಾತ್ರ ವಹಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಕೆಲವು ಗಣ್ಯರು ತಮಿಳ್ನಾಡಿನ ತಮಿಳ್ ಇಸೈ ಅಂದರೆ ‘ತಮಿಳು ಸಂಗೀತ’ ಚಳವಳಿಯಿಂದ ಪ್ರಭಾವಿತರಾಗಿದ್ದರು.

ತಮಿಳ್ ಇಸೈ ಅಂದರೆ ತಮಿಳಿನಲ್ಲೇ ಸಂಗೀತವನ್ನು ಹಾಡಬೇಕೆಂದೂ, ತ್ಯಾಗರಾಜರ ಹಾಗೂ ಮತ್ತಿತರರ ತೆಲುಗು ಕೃತಿಗಳಿಗೆ ತಮಿಳ್ನಾಡಿನಲ್ಲಿ ಪ್ರೋತ್ಸಾಹ ಕೊಡಬೇಕಾಗಿಲ್ಲವೆಂದೂ ವಾದಿಸುವ ಚಳವಳಿಯಾಗಿತ್ತು. ತಮಿಳಿನಲ್ಲಿ ನಾಯನಾರರು ರಚಿಸಿದ ತೇವರಂ ತಮಿಳ್ ಇಸೈಯ ಪ್ರಧಾನ ವಸ್ತುವಾಗಿತ್ತು (ತಮಿಳ್ ಇಸೈ ಎಂಬುದು ಹುರುಳಿಲ್ಲದ್ದೆಂದೂ, ಅದು ತಮಿಳು ರಾಷ್ಟ್ರೀಯತೆಯ ಮೊಂಡುವಾದದ ಒಂದು ನಿದರ್ಶನವೆಂದೂ ಬಿ.ಜಿ.ಎಲ್. ಸ್ವಾಮಿಯವರು ಅದನ್ನು ಗೇಲಿಮಾಡಿರುವುದನ್ನು ಅವರ ತಮಿಳು ತಲೆಗಳ ನಡುವೆ ಎಂಬ ಪುಸ್ತಕದಲ್ಲಿ ಕಾಣಬಹುದು). ಇಂಥಾ ವಾದದ ಪ್ರಭಾವದಿಂದಾಗಿ ಕನ್ನಡದಲ್ಲೂ ಕೂಡಾ ಕೆಲವು ಗಣ್ಯರು ಹಾಗೂ ಲೇಖಕರು ಕನ್ನಡದಲ್ಲೇ ಹೆಚ್ಚು ಹೆಚ್ಚು ಸಂಗೀತವನ್ನು ಕೇಳುವಂಥಾಗಬೇಕು ಎಂಬ ವಾದವನ್ನು ಮಂಡಿಸತೊಡಗಿದರು. 1942ರಲ್ಲಿ ಹೈದರಾಬಾದ್ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎ.ಆರ್. ಕೃಷ್ಣಾಶಾಸ್ತ್ರಿಯವರೂ ಕೂಡಾ ಇದೇ ಅಭಿಪ್ರಾಯ ಹೊಂದಿದ್ದರು. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ತ್ಯಾಗರಾಜರ ಕೃತಿಗಳಷ್ಟೇ ಉತ್ತಮವಾಗಿ ಪುರಂದರದಾಸರ ಕೃತಿಗಳನ್ನೂ ಹಾಡುವುದೂ ಸಾಧ್ಯವಿದೆ ಮತ್ತು ಅದನ್ನು ಬಿಡಾರಂ ಕೃಷ್ಣಪ್ಪನವರು ಮಾಡಿತೋರಿಸಿದಂತೆ ಉಳಿದ ಕನ್ನಡ ಸಂಗೀತಗಾರರೂ ಮಾಡಬೇಕೆಂದೂ ಪ್ರಸ್ತಾಪಿಸಿದರು. ಅದೇ ವರ್ಷ ಮಾಸ್ತಿ ಶ್ರೀನಿವಾಸ ಅಯ್ಯಂಗಾರರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರ ಸ್ಥಾನವನ್ನು ವಹಿಸಿಕೊಂಡರು. ಅವರು ಅಧಿಕಾರ ವಹಿಸಿಕೊಂಡ ಸ್ವಲ್ಪ ದಿನಗಳಲ್ಲೇ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀ ಹರಿದಾಸರ ಕೃತಿಗಳು ಎಂಬ ಪುಸ್ತಕವೊಂದರ ಬಿಡುಗಡೆಯಾಯಿತು. ಇದು ಸ್ವರಪ್ರಸ್ತಾರದೊಂದಿಗೆ (ಕನ್ನಡದಲ್ಲಿ) ಪ್ರಕಟವಾದ ದಾಸರ ಪದಗಳ ಪ್ರಥಮ ಪುಸ್ತಕವಾಗಿತ್ತು. ಇದಕ್ಕಾಗಿ ಸ್ವರಸಂಯೋಜನೆ ಮಾಡಿದ್ದವರು ಮೈಸೂರು ಸಂಸ್ಥಾನದ ವೀಣಾ ವಿದ್ವಾಂಸ ವೀಣಾ ಲಕ್ಷ್ಮೀನಾರಣಪ್ಪನವರ ಮಗನಾದ ಎಲ್. ರಾಜಾರಾವ್ ಅವರು. ಇದಾದ ಹತ್ತು ವರ್ಷಗಳ ಅಂತರದಲ್ಲಿ, ಅಂದರೆ 1952ರಲ್ಲಿ ರಾಜಾರಾವ್ ಅವರೇ ಸಂಗೀತ ಸಂಯೋಜನೆ ಮಾಡಿದ ವಚನಗಳ ಸಂಕಲನ ಶ್ರೀ ಶಿವಶರಣರ ವಚನಗಳು ಪ್ರಕಟವಾದವು. 1956ರಲ್ಲಿ ಅಂದರೆ ಕನ್ನಡನಾಡಿನ ಏಕೀಕರಣದ ವೇಳೆ ಬಿ. ಶಿವಮೂರ್ತಿ ಶಾಸ್ತ್ರಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅವರು ಕನ್ನಡದಲ್ಲಿ ಸಂಗೀತಕ್ಕೆ ಹೆಚ್ಚು ಪ್ರೋತ್ಸಾಹ ಕೊಡುವ ಉದ್ದೇಶದಿಂದ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಸಂಗೀತದಲ್ಲಿ ತರಬೇತಿ ಕೊಡಿಸುವ ಯೋಜನೆಯೊಂದನ್ನು ಹಾಕಿಕೊಂಡರು. ಇದರ ಪ್ರಕಾರ ವಿದ್ಯಾರ್ಥಿಗಳಿಗೆ ದಾಸ ಸಾಹಿತ್ಯ ಮತ್ತು ವಚನ ಸಂಗೀತವನ್ನು ಕಲಿಸಿಕೊಡುವುದಾಗಿಯೂ ಅದಕ್ಕಾಗಿ ಶ್ರೀ ರಾಜಾರಾವ್ ಅವರನ್ನೇ ಗುರುಗಳನ್ನಾಗಿ ನೇಮಿಸುವುದಾಗಿಯೂ ತೀರ್ಮಾನಿಸಲಾಯಿತು. ಈ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಶ್ರೀ ಹನುಮಂತಯ್ಯ ಅವರೇ ಉದ್ಘಾಟಿಸಿದರು. ಈ ತರಗತಿಗಳಿಗೆ ಕೂಡಲೇ ನಲ್ವತ್ತ್ಮೂರು ಜನ ವಿದ್ಯಾರ್ಥಿಗಳಾದರು. ದೂರದ ಚಿಕ್ಕಮಗಳೂರಿನಂಥಾ ಊರಿನಿಂದ ಅಲ್ಲಿಯೂ ಇದೇ ಥರದ ತರಗತಿಗಳನ್ನು ಪರಿಷತ್ತು ಪ್ರಾರಂಭಿಸಬೇಕೆಂಬ ಬೇಡಿಕೆ ಬಂದಿತ್ತು. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನಂಥಾ ಸಂಸ್ಥೆಗೆ ದೂರದೂರುಗಳಲ್ಲಿ ಅಂಥಾ ತರಗತಿಗಳನ್ನು ನಡೆಸುವುದು ಅಸಾಧ್ಯವಾಗಿತ್ತು. ಅದು ತನ್ನ ಕಾರ್ಯಗಳನ್ನು ಬೆಂಗಳೂರಿನ ಮಟ್ಟಿಗಷ್ಟೇ ಸೀಮಿತಗೊಳಿಸಿತ್ತು. ಈ ತರಗತಿಗಳಲ್ಲದೇ ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಹಾಡುಗಾರಿಕೆಯ ಸ್ಪರ್ಧೆಗಳನ್ನೇರ್ಪಡಿಸುವುದು, ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವುದು, ಇತ್ಯಾದಿಗಳನ್ನು ಸಾಹಿತ್ಯ ಪರಿಷತ್ತು ಆಗಿಂದಾಗ್ಯೆ ಮಾಡುತ್ತಿತ್ತು.

ಸುಗಮ ಸಂಗೀತವೆಂಬುದು ನಿಜವಾಗಿಯೂ ಶಾಸ್ತ್ರೀಯ ಸಂಗೀತವು ಹೆಚ್ಚು ಜನರನ್ನು ಸೇರಬೇಕೆಂಬ ತುಡಿತದ ಫಲವೋ ಎಂಬಂತೆ ತೋರುತ್ತದೆ. ಈ ತುಡಿತ ತೀವ್ರವಾಗಿ ಕಂಡುಬಂದದ್ದು ಪ್ರಸಿದ್ಧ ಕನ್ನಡ ಲೇಖಕ ಅ.ನ. ಕೃಷ್ಣರಾಯರಲ್ಲಿ. ದೇವರನಾಮ ಮತ್ತು ವಚನ ಹಾಗೂ ಆಧುನಿಕ ಕವನಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡಬೇಕೆನ್ನುವವರಲ್ಲಿ ಅವರು ಪ್ರಮುಖರಾಗಿದ್ದರು. ಮೈಸೂರಿನ ಪ್ರಸಿದ್ಧ ಹಾಡುಗಾರರಾಗಿದ್ದ ದೇವೇಂದ್ರಪ್ಪ ಅವರು ಅ.ನ.ಕೃ ಅವರ ವಾಗ್ಸರಣಿಗೆ ಒಪ್ಪಿ ವಚನಗಳನ್ನು ಸಂಗೀತಕ್ಕೆ ಅಳವಡಿಸಿ ಕಛೇರಿಗಳಲ್ಲಿ (ಅವರ ಶಿಷ್ಯ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳೊಂದಿಗೆ) ಹಾಡಲಾರಂಭಿಸಿದರು. ಮಲ್ಲಿಕಾರ್ಜುನ ಮನ್ಸೂರರೂ ಕೂಡಾ ಅ.ನ.ಕೃ.ರೊಂದಿಗೆ ಸಹಮತ ವ್ಯಕ್ತಪಡಿಸಿದ್ದರು ಹಾಗೂ ವಚನಗಳನ್ನು ಹಿಂದುಸ್ತಾನೀ ಸಂಗೀತದಲ್ಲೂ ಪ್ರಸಿದ್ಧಿ ಪಡಿಸಿದ್ದರು. ಆದರೆ ಇದೇ ವೇಳೆ ಕನ್ನಡದ ಕೆಲವು ಅಭಿಮಾನಿಗಳು ತಮಿಳರು ದೇವರನಾಮ ಹಾಡುವುದನ್ನೂ ವಿರೋಧಿಸುತ್ತಿದ್ದರು. ಅವರ ಪ್ರಕಾರ ತಮಿಳರ ಬಾಯಲ್ಲಿ ದೇವರನಾಮಗಳು ವಿರೂಪ ತಾಳಿ ಗುರುತಿಸಲಾಗದಂಥ ರೂಪ ಹೊಂದುತ್ತಿದ್ದವು.

ಇಂಥ ವಾದದ ಪ್ರಕಾರ ‘ಚಿಂತೆ ಯಾತಕೋ ಮನುಜಾ ಭ್ರಾಂತಿ ಯಾತಕೋ’ ಎಂಬ ದಾಸರ ಹಾಡು ‘ಜಿಂದೆಯಾ ತಕೋ ಮನುಜಾ ಬ್ರಾಂದಿ ಏತಕೋ’ ಎಂದು ಉಚ್ಚರಿತವಾಗುತ್ತಿತ್ತು! ಆದರೂ ತಥ್ಯ ಏನೆಂದರೆ ಕರ್ನಾಟಕ ಸಂಗೀತಕ್ಕೆ ಅಳವಡಿಸಿದ್ದ ದೇವರ ನಾಮಗಳ ಮೊದಲ ಪುಸ್ತಕವು ತಮಿಳಿನಲ್ಲಿ ಮತ್ತು ತಮಿಳುನಾಡಿನ ಮದ್ರಾಸಿನಲ್ಲೇ ಪ್ರಕಟಗೊಂಡದ್ದು (1941ರಲ್ಲಿ), ಹಾಗೂ ಇದನ್ನು ಬೆಳಕಿಗೆ ತಂದದ್ದು ಶ್ರೀಮತಿ ಎಂ.ಎಲ್. ವಸಂತಕುಮಾರಿಯವರ ತಾಯಿಯಾದ ಶ್ರೀಮತಿ ಲಲಿತಾಂಗಿ (ಶ್ರಿಮತಿ ಲಲಿತಾಂಗಿಯವರು ದಾಸರ ಪದಗಳನ್ನು ಕಲಿತದ್ದು ಕರ್ನಾಟಕದ ದಾಸರೊಬ್ಬರಿಂದ. ಈ ದಾಸರ ಪರಿಚಯ ಅವರಿಗಾದದ್ದು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸ್ಥಾಪಕಾಧ್ಯಕ್ಷರಾಗಿದ್ದ ಹಾಗೂ ಮದ್ರಾಸ್ ಅಸೆಂಬ್ಲಿಯಲ್ಲಿ ಉಡುಪಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಯು. ರಾಮರಾಯರಿಂದ).

ಸ್ವಾತಂತ್ರ್ಯಾನಂತರದ ನೆಹರೂ ಮಾದರಿಯ ಆರ್ಥಿಕತೆಯಲ್ಲಿ ಹಲವು ದೊಡ್ಡ ದೊಡ್ಡ ಸಾರ್ವಜನಿಕ ವಲಯದ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ಬೆಂಗಳೂರಿನಲ್ಲಿ ಹುಟ್ಟಿಕೊಂಡವು. ಬೆಂಗಳೂರು ಒಂದು ಆರ್ಥಿಕ ಕೇಂದ್ರವಾಗುವ ಸೂಚನೆಗಳು ಕಂಡು ಬಂದಾಗ ಹೆಚ್ಚು-ಕಡಿಮೆ ಕೂಗಳತೆಯ ದೂರದಲ್ಲಿರುವ ಪಕ್ಕದ ತಮಿಳು ಪ್ರದೇಶಗಳಿಂದ ಬಹಳಷ್ಟು ಜನರು ಬೆಂಗಳೂರಿಗೆ ವಲಸೆ ಬಂದರು. ಈ ವಲಸೆ ಸುಮಾರು 1942ರಿಂದ 1955ರವರೆಗೆ ಗರಿಷ್ಟ ಪ್ರಮಾಣದಲ್ಲಿ ನಡೆಯಿತು. ಹೀಗೆ ವಲಸೆ ಬಂದ ತಮಿಳರು ಕೆಲಸ ಸಿಕ್ಕಲ್ಲಿ ಸೇರಿಕೊಂಡರು. 1960ರ ದಶಕಕ್ಕಾಗುವಾಗ ದೊಡ್ಡ ದೊಡ್ಡ ಸಂಸ್ಥೆಗಳಾದ ಎಚ್.ಎಮ್.ಟಿ, ಐ.ಟಿ.ಐ., ಎಚ್.ಎ.ಎಲ್., ಮೈಕೊ ಇತ್ಯಾದಿಗಳಲ್ಲಿ ಹೆಚ್ಚಿನಂಶ ತಮಿಳುನಾಡಿನಿಂದ ಬಂದ ಜನರೇ ತುಂಬಿಕೊಂಡಿದ್ದರು. ಕರ್ನಾಟಕದ ಏಕೀಕರಣದ ನಂತರ ಕರ್ನಾಟಕದ ಸಾಂಸ್ಕೃತಿಕ ಹಾಗೂ ಕನ್ನಡ ಪ್ರಜ್ಞೆ ಬೆಂಗಳೂರನ್ನು ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಿ ಕಟ್ಟುವ ಎಲ್ಲಾ ಪ್ರಯತ್ನಗಳನ್ನು ಮಾಡತೊಡಗಿತು.

ಆಗ ಬೆಂಗಳೂರಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದ ತಮಿಳರ ಅಸ್ತಿತ್ವ ಸಮಸ್ಯೆಯಾಗಿ ಕಾಡತೊಡಗಿತು. ತಮಿಳರ ಅಸ್ತಿತ್ವ ಹೆಚ್ಚಾಗಿದ್ದಲ್ಲಿ ಕನ್ನಡ ಸಂಘಗಳು ಹೆಚ್ಚಾಗಿ ಹುಟ್ಟಿಕೊಂಡವು, ಹಾಗೂ ಕನ್ನಡದ ಕೆಲಸಗಳು ಹೆಚ್ಚಿನಮಟ್ಟಿಗೆ ನಡೆಯತೊಡಗಿದವು (ಹೆಚ್ಚಿನ ಮಾಹಿತಿಗೆ ಜಾನಕಿ ನಾಯರ್ ಅವರ ದ ಪ್ರಾಮಿಸ್ ಆಫ್ ದ ಮೆಟ್ರೋಪಾಲಿಸ್: ಬ್ಯಾಂಗಲೋರ್’ಸ್ ಟ್ವೆಂಟಿಯತ್ ಸೆಂಚುರಿ ಎಂಬ ಪುಸ್ತಕ ನೋಡಬಹುದು). ಹೀಗಾಗಿ ಮೇಲೆ ಹೇಳಿದಂಥ ದೊಡ್ಡ ಸಂಸ್ಥೆಗಳಲ್ಲೆಲ್ಲ ಕನ್ನಡ ಸಂಘಗಳು ಹುಟ್ಟಿಕೊಂಡು ಕನ್ನಡ ಕಲೆ, ನಾಟಕ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವು ಮತ್ತು ಅದನ್ನು ನಾವು ಈಗಲೂ ಸ್ವಲ್ಪ ಸಣ್ಣ ಪ್ರಮಾಣದಲ್ಲಿ ನೋಡಬಹುದಾಗಿದೆ. ಇಂಥ ಕನ್ನಡ ಸಂಘಗಳು ಹಾಗೂ ಅವುಗಳಲ್ಲಿದ್ದ ಬೇರೆ ಬೇರೆ ಕಾರ್ಖಾನೆಗಳ ಸಾವಿರಾರು ಜನ ಕನ್ನಡಿಗ ನೌಕರರು 1960ರ ದಶಕದ ಕನ್ನಡ ಚಳುವಳಿಯಲ್ಲಿ ಹೆಚ್ಚಾಗಿ ಭಾಗವಹಿಸಿದರು ಮತ್ತು ಚಳುವಳಿಯ ವಕ್ತಾರರಾಗಿದ್ದ ಅ.ನ.ಕೃ. ಅವರ ಮಾತುಗಳಿಗೆ ಶ್ರೋತೃಗಳಾಗಿದ್ದರು. ಆದ್ದರಿಂದ ಸ್ವಾಭಾವಿಕವಾಗಿಯೇ ಅ.ನ.ಕೃ. ಅವರು ಹೇಳುತ್ತಿದ್ದ ಹೊಸ ತರಹದ ಕನ್ನಡ ಹಾಡುಗಳಲ್ಲಿ ಅವರಿಗೆ ಆಸಕ್ತಿ ಹುಟ್ಟಿ ಬಂತು.

ಅದೇ ಸಮಯದಲ್ಲಿ ಸಂಗೀತಕ್ಷೇತ್ರದಲ್ಲಿ ಹೊಸದಾಗಿ ಮಿನುಗಲಾರಂಭಿಸಿದ ತಾರೆ ಪಿ. ಕಾಳಿಂಗರಾಯರು. 1940ರ ದಶಕದಲ್ಲೇ ಬೆಂಗಳೂರಿಗೆ ಬಂದಿದ್ದ ಕಾಳಿಂಗರಾಯರಿಗೆ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಯಕ್ಷಗಾನ, ನಾಟಕ, ಸಿನೆಮಾ, ಹೀಗೆ ಬಹಳ ಕ್ಷೇತ್ರಗಳಲ್ಲಿ ಪರಿಶ್ರಮವಿತ್ತು. ಆದ್ದರಿಂದ ಈ ಬೇರೆ ಬೇರೆ ಸಂಗೀತಾನುಭವಗಳ ಮೊತ್ತವನ್ನು ಅವರು ಕನ್ನಡದಲ್ಲಿ ಆಧುನಿಕ ಕವಿಗಳ ಹಾಡುಗಳನ್ನು ಹಾಡುವುದಕ್ಕಾಗಿ, ಹಾಗೂ ದಾಸರ ಹಾಡುಗಳನ್ನು ಆಧುನಿಕ ರೀತಿಯಲ್ಲಿ ಹಾಡುವುದಕ್ಕಾಗಿ ಉಪಯೋಗಿಸಿದರು. ಕಾಳಿಂಗರಾಯರ ಮೇಲೂ ಕೂಡಾ ಅ.ನ.ಕೃ ಅವರ ಸ್ಪಷ್ಟ ಪ್ರಭಾವ ಕಾಣುತ್ತದೆ. ಕಾಳಿಂಗರಾಯರ ಗೆಳೆಯ ಶ್ರೀ ಬಿ. ಎಸ್. ಕೇಶವರಾವ್ ಅವರು ಹೇಳುವಂತೆ “ಅ.ನ.ಕೃ. ಅವರ ಪ್ರೇರಣೆ, ಪ್ರಚೋದನೆಯಿಂದಾಗಿ ರಾಯರು ಯಾವುದೇ ಶಾಸ್ತ್ರೀಯ ಪದ್ಧತಿಯಲ್ಲಿ ಸಂಗೀತ ಹಾಡುವುದನ್ನು ನಿಲ್ಲಿಸಿ, ಜನಸಾಮಾನ್ಯರೆಲ್ಲರಿಗೂ ರಂಜನೆ ನೀಡುವ ಜಾನಪದ ಗೀತೆ, ಭಾವಗೀತೆ, ದೇವರನಾಮಗಳಿಗೆ ರಾಗ ಸಂಯೋಜಿಸಿ ಹಾಡುವ ಪ್ರವೃತ್ತಿ ಬೆಳೆಸಿಕೊಂಡರು”. ಮ್ಯಾಂಡೊಲಿನ್ ಮತ್ತಿತರ ಪಾಶ್ಚಾತ್ಯ ವಾದನಗಳನ್ನು ಆರ್ಕೆಸ್ಟ್ರಾ ಮಾದರಿಯಲ್ಲಿ ಪ್ರಥಮವಾಗಿ ಉಪಯೋಗಿಸಿದವರು ಕಾಳಿಂಗರಾಯರು. 1949-50ರ ಸಮಯದಲ್ಲಿ ಅವರು ಮೈಸೂರು ಆಕಾಶವಾಣಿಯಲ್ಲಿ ಕನ್ನಡ ಹಾಡುಗಳ ಕಾರ್ಯಕ್ರಮ ಕೊಡಲಾರಂಭಿಸಿದರು.

ಕರ್ನಾಟಕ ಏಕೀಕರಣದ ನಂತರ ಬೆಂಗಳೂರಿನ ಕನ್ನಡ ರಾಜ್ಯೋತ್ಸವ ಆಚರಣೆಗಳಲ್ಲಿ ಕಾಳಿಂಗರಾಯರ ಕಾರ್ಯಕ್ರಮಗಳು ಅತ್ಯವಶ್ಯವಾಗಿದ್ದವು. ಶಾಸ್ತ್ರೀಯ ಸಂಗೀತವನ್ನು ಪೂರ್ತಾ ಬಿಟ್ಟುಕೊಡದೆ ಪಾಶ್ಚಾತ್ಯಸಂಗೀತದ ಸಣ್ಣ ಝಲಕ್ಕನ್ನೂ ತಂದು ಕೊಡುವ ಹೊಸ ಬಗೆಯ ಸಂಗೀತ ಬೆಂಗಳೂರಿನಲ್ಲಿ ಆಗಷ್ಟೇ ದೊಡ್ಡ ಪ್ರಮಾಣದಲ್ಲಿ ಮೇಲ್ಬರುತ್ತಿದ್ದ ಕನ್ನಡಿಗ ಮಧ್ಯಮ ವರ್ಗವನ್ನು ಬಹಳಷ್ಟು ಆಕರ್ಷಿಸಿತು. ರಾಯರ ಕಾರ್ಯಕ್ರಮದ ಆಕರ್ಷಣೆ ಎಷ್ಟಿತ್ತೆಂದರೆ 1960ರ ದಶಕದಲ್ಲೇ ಅವರ ಕಾರ್ಯಕ್ರಮವೊಂದಕ್ಕೆ ಒಂದೂವರೆ ಸಾವಿರ ರೂಪಾಯಿಗಳ ಸಂಭಾವನೆ ಸಿಗುತ್ತಿತ್ತು ಮತ್ತು ಅವರಿಗೆ ಬೆಂಗಳೂರು, ಮೈಸೂರುಗಳಲ್ಲಿ ಬೇಕೆಂದಷ್ಟು ಕಾರ್ಯಕ್ರಮಗಳು ಸಿಗುತ್ತಿದ್ದವು. ಹೀಗೆ ಸುಗಮ ಸಂಗೀತ ಎಂಬ ಒಂದು ಹೊಸ ಪ್ರಕಾರದಲ್ಲಿ ದಾಸ ಸಾಹಿತ್ಯವನ್ನು ಪ್ರಥಮವಾಗಿ ಉಪಯೋಗಿಸಿಕೊಂಡದ್ದು ಕಾಳಿಂಗರಾಯರು. ಆದರೆ ಇದೆಲ್ಲ ತಮಿಳು ಎಂಬ ಒಂದು ‘ಅನ್ಯ’ವನ್ನು ಗುರಿಯಾಗಿಸಿಯೇ ನಡೆಯಿತೋ ಎಂಬಂತೆ ತಮಿಳುನಾಡಿನ ಸಂಗೀತಗಾರರ ಬಗ್ಗೆ ಕನ್ನಡ ಚಳುವಳಿಗಾರರು 60ರ ದಶಕದಲ್ಲಿ ಉದ್ರಿಕ್ತರಾಗಿದ್ದರು. ಉದಾಹರಣೆಗೆ 1964ರಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿಯವರ ಒಂದು ಕಛೇರಿ ರಾಮನವಮಿ ಪ್ರಯುಕ್ತ ಬೆಂಗಳೂರಿನಲ್ಲಿ ಆಯೋಜಿತವಾಗಿದ್ದಾಗ ಕನ್ನಡಪರ ಹೋರಾಟಗಾರರು ಈ ಕಛೇರಿ ಸಲ್ಲದು, ಕನ್ನಡಿಗರಿಗೇ ಆದ್ಯತೆ ನೀಡಬೇಕೆಂದು ಘೋಷಣೆ ಕೂಗಿ, ಮೆರವಣಿಗೆ ಬಂದು ಕಛೇರಿ ನಡೆಯಬೇಕಾಗಿದ್ದ ಪೆಂಡಾಲ್‍ಗೆ ಬೆಂಕಿ ಹಚ್ಚಿದ್ದು ಈಗ ಇತಿಹಾಸ. ಕನ್ನಡ ಚಳುವಳಿಗಾರರು ಸಂಗೀತ ಕಛೇರಿಗಳಲ್ಲಿ ಕನ್ನಡಿಗರಿಗೆ ಮುಂಚೂಣಿಯ ಸ್ಥಾನ ಬಯಸಿದರೆ, ಸಂಗೀತ ಪರಂಪರೆಯಲ್ಲಿ ಪುರಂದರದಾಸರನ್ನು ತ್ಯಾಗರಾಜರಿಗಿಂತ ದೊಡ್ಡ ಐಕಾನ್ ಆಗಿ ಮುಂದಿಡುವ ಪ್ರಯತ್ನ 1960ರ ದಶಕದಲ್ಲಾಯಿತು.

ನಂತರ 1980ರ ದಶಕದಲ್ಲಿ ಧ್ವನಿಸುರುಳಿ ಸಂಸ್ಕೃತಿ ಬಂದ ನಂತರ ದಾಸಸಾಹಿತ್ಯವನ್ನು ಜನಪ್ರಿಯ ಮಾಡಿದವರಲ್ಲಿ ವಿದ್ಯಾಭೂಷಣ ಮತ್ತು ಪುತ್ತೂರು ನರಸಿಂಹ ನಾಯಕ್ ಪ್ರಮುಖರು. ಇವರ ಧ್ವನಿಸುರುಳಿಗಳು ಮತ್ತು ಸಿ.ಡಿ.ಗಳು ಹೆಚ್ಚಾಗಿ ಕರಾವಳಿ ಕರ್ನಾಟಕದಲ್ಲೂ, ತದನಂತರ ದಕ್ಷಿಣ ಕರ್ನಾಟಕದಲ್ಲೂ ವ್ಯಾಪಕವಾಗಿ ಚಾಲ್ತಿಯಲ್ಲಿವೆ. 2005ನೇ ಇಸವಿಯಲ್ಲಿ ಪುತ್ತೂರು ನರಸಿಂಹ ನಾಯಕ್ ಹಾಡಿದ ನೂರನೇ ಧ್ವನಿಸುರುಳಿ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕರಾವಳಿ ಕರ್ನಾಟಕದ ಅಸಂಖ್ಯಾತ ದೇವಸ್ಥಾನ, ದೈವಸ್ಥಾನ ಹಾಗೂ ಭಜನಾ ಮಂದಿರಗಳ ವರ್ಧಂತಿ, ವಾರ್ಷಿಕೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಇತ್ಯಾದಿಗಳ ಸಂದರ್ಭದಲ್ಲಿ ಈ ಹಾಡುಗಳ ಉಪಯೋಗ ದಿನನಿತ್ಯ ಆಗುತ್ತಿರುತ್ತದೆ. ಆದ್ದರಿಂದ ಅವುಗಳು ಅಪಾರ ಬೇಡಿಕೆಯಲ್ಲಿವೆ. ಈ ಬೇಡಿಕೆ ಎಷ್ಟೆಂದರೆ ದಾಸರ ಪದಗಳದೇ ಮಾದರಿಯಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದ ದೇವತೆಯನ್ನು ಹೊಗಳಿ ಹಾಡಿದ ಧ್ವನಿಸುರುಳಿಗಳು ಗಾಯಕರಿಂದ ಹಾಗೂ ಮರಿಗಾಯಕರಿಂದ ಬೇಕಾದಷ್ಟು ಹೊರಬಂದಿದೆ. ಕೋಮುವಾದವು ಹೆಚ್ಚುತ್ತಿರುವ ಕರಾವಳಿ ಕರ್ನಾಟಕದಲ್ಲಿ ಸಾಂಸ್ಕೃತಿಕ ಆಕರಗಳು ಸಮುದಾಯಗಳಿಂದ ಕೆಲವು ನಿರ್ದಿಷ್ಟ ರೀತಿಯಲ್ಲಿ ಉಪಯೋಗಿಸಲ್ಪಡುತ್ತಿವೆ: ಉದಾಹರಣೆಗೆ ಈ ಮೇಲೆ ಉದ್ಧೃತವಾದಂಥ ಧ್ವನಿಸುರುಳಿ ಅಥವಾ ಸಿ.ಡಿಯನ್ನು ಧ್ವನಿವರ್ಧಕದಲ್ಲಿ ಸಾಮುದಾಯಿಕ ಸಮರ್ಥನೆಗೋಸ್ಕರ ಅಥವಾ ಇನ್ನೂ ಮುಂದೆ ಹೋಗಿ ಅಲ್ಪಸಂಖ್ಯಾತರಿಗೆ ಸವಾಲಾಗಿ, ಅತಿರೇಕದಿಂದ ಬಳಸುವುದು, ಇತ್ಯಾದಿ ಅಲ್ಲಲ್ಲಿ ನಡೆಯುತ್ತಿದೆ (ಹೆಚ್ಚಾಗಿ ಕರಾವಳಿ ಕರ್ನಾಟಕದಲ್ಲಿ).

ಕೆಲವೊಮ್ಮೆ ಮುಸಲ್ಮಾನರ ಬಾಂಗ್ ಸುರುವಾದ ಕೂಡಲೇ ಎಲ್ಲಿಲ್ಲದ ಉತ್ಸಾಹದಿಂದ ಧ್ವನಿವರ್ಧಕದಲ್ಲಿ ಭಜನೆಗಳು ಶುರುಹಚ್ಚಿಕೊಳ್ಳುವುದಿದೆ. ಭಕ್ತಿಪಂಥದ ಹಿನ್ನೆಲೆಯಿದೆ ಎನ್ನುವಂಥ ಇಂಥ ಸಾಹಿತ್ಯ, ಸಂಗೀತ ಪ್ರಕಾರಗಳು ಹಿಂದೂ ಮೂಲಭೂತವಾದಕ್ಕೆ ಮತ್ತು ಬಹುಸಂಖ್ಯಾತ ರಾಷ್ಟ್ರೀಯತೆಗೆ ಹುರುಪುನೀಡುವಂಥ ಹಿನ್ನೆಲೆ ಸಂಗೀತವಾಗಿ ಮೂಡಿಬರುತ್ತಿರುವುದನ್ನು ಹೆಚ್ಚೆಚ್ಚು ನೋಡುತ್ತಿದ್ದೇವೆ. ಹೀಗೆ ದಾಸಸಾಹಿತ್ಯದಂಥ ಪ್ರಕಾರಗಳು ಕರ್ನಾಟಕದಲ್ಲಿ ಸಾಹಿತ್ಯ, ಸಂಗೀತದ ಭಾಗವಾಗಿದ್ದುಕೊಂಡೇ ವಿಭಿನ್ನ ಸಮಾಜೋ-ರಾಜಕೀಯ ಪ್ರಕ್ರಿಯೆಗಳ ಭಾಗವೂ ಕೂಡಾ ಆಗಿ ಮೂಡಿ ಬಂದಿದ್ದನ್ನು ಗಮನಿಸುವ ತುರ್ತು ಇದೆ. ಒಂದೇ ಸಾಹಿತ್ಯ/ಸಂಗೀತ ಪ್ರಕಾರವು ಬೇರೆ ಬೇರೆ ಸಂದರ್ಭಗಳಲ್ಲಿ ಹೇಗೆ ಬೇರೆ ಬೇರೆ ‘ಅನ್ಯ’ರನ್ನು ಸೃಷ್ಟಿಸುತ್ತದೆ ಎಂದು ಈ ಮೂಲಕ ನಾವು ಕಾಣಬಹುದು. ಕಲಾಪ್ರಕಾರಗಳ ಸಂರಚನಾ (structural) ಅಧ್ಯಯನಕ್ಕಿಂತ ಅವುಗಳನ್ನು ನಮ್ಮ ಸಾಮಾಜಿಕ ಚರಿತ್ರೆಯ ಭಾಗವಾಗಿಸುವಂಥ, ಮತ್ತು ಸಾಮಾಜಿಕ ಸಂಘರ್ಷಗಳಲ್ಲಿ ಅವು ಪಾಲ್ಗೊಳ್ಳುವ ರೀತಿಗಳನ್ನು ಒಳನೋಟಗಳ ಮೂಲಕ ತೋರಿಸಿಕೊಡಬಲ್ಲಂಥ ಅಧ್ಯಯನಗಳ ಜರೂರಿ ಮತ್ತು ಜವಾಬ್ದಾರಿ ಇಂದಿನ ಮಾನವಿಕ ಜ್ಞಾನಶಾಖೆಗಳಿಗೆ ಮತ್ತು ಅವುಗಳನ್ನು ನಡೆಸುವ ವಿಶ್ವವಿದ್ಯಾಲಯಗಳಿಗೆ ಎಂದಿಗಿಂತ ತುಸು ಹೆಚ್ಚಾಗಿಯೇ ಇದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...