Homeನ್ಯಾಯ ಪಥ"ಕನ್ನಡ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿ.ವಿ.ಯನ್ನಾಗಿಸುವ ಆಶಯ"- ಹೊಸ ಕುಲಪತಿ ಸ.ಚಿ.ರಮೇಶ್

“ಕನ್ನಡ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿ.ವಿ.ಯನ್ನಾಗಿಸುವ ಆಶಯ”- ಹೊಸ ಕುಲಪತಿ ಸ.ಚಿ.ರಮೇಶ್

- Advertisement -
- Advertisement -

ಬಿ ಪೀರ್‌ಬಾಷ |

ಕನ್ನಡ ವಿಶ್ವವಿದ್ಯಾಲಯವೆಂದರೆ, ಕರ್ನಾಟಕದ ಉಳಿದೆಲ್ಲ ವಿಶ್ವವಿದ್ಯಾಲಯಗಳಂತಲ್ಲ. ಭಾಷೆಯ ಹೆಸರಿನಲ್ಲಿದೆ ಎಂಬ ಕಾರಣಕ್ಕೆ ಇದು ಭಾಷೆಯ ಹೆಸರಿನಲ್ಲಿರುವ ದೇಶದ ಇತರೆಲ್ಲ ವಿಶ್ವವಿದ್ಯಾಲಯಗಳಂತೆಯೂ ಅಲ್ಲ. ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯ ಹಿಂದೆ ಅಪೂರ್ವವಾದ ದೃಷ್ಟಿಕೋನವೊಂದಿದೆ. ಈ ದೃಷ್ಟಿಕೋನವೂ ಯಾವೊಬ್ಬ ವ್ಯಕ್ತಿಮಾತ್ರರಿಂದ ರೂಪುಗೊಂಡುದಾಗಿರದೇ ಅದು ಕನ್ನಡದ, ಕರ್ನಾಟಕದ ಸಮಷ್ಟಿ ವಿವೇಕದ, ಚಿಂತನೆಯ ಸಾರವಾಗಿದೆ. ಹಾಗೆಂದೇ ಈ ಹೊತ್ತು, ಕನ್ನಡ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ಭಾರತದ ಬೌದ್ಧಿಕ ವಲಯ ವಿಶೇಷ ಆಸ್ಥೆಯಿಂದ ಗಮನಿಸುತ್ತದೆ ಮಾತ್ರವಲ್ಲ ವೈಚಾರಿಕ ಸಂವಾದಕ್ಕಾಗಿ ಗಂಭೀರವಾಗಿ ಪರಿಗಣಿಸುವಂತಾಗಿದೆ. ಇಂತಹದ್ದೊಂದು ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ಸ.ಚಿ.ರಮೇಶ್ ಈ ಜವಾಬ್ದಾರಿಯುತ ಸ್ಥಾನದಲ್ಲಿದ್ದು ವಿಶ್ವವಿದ್ಯಾಲಯದ ಆಡಳಿತವನ್ನೂ ಆಲೋಚನೆಗಳನ್ನೂ ಹೇಗೆ ಮುನ್ನಡೆಸಿಕೊಂಡು ಹೋಗಬಲ್ಲರು ಎಂಬ ಕುತೂಹಲದೊಂದಿಗೆ ನ್ಯಾಯಪಥ ಪತ್ರಿಕೆ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರ ಮಾತುಗಳೊಂದಿಗೆ, ಕನ್ನಡ ವಿಶ್ವವಿದ್ಯಾಲಯದ ಅನನ್ಯತೆಯನ್ನು ಕುರಿತಂತೆ ಇಲ್ಲಿ ವಿಶ್ಲೇಷಿಸಲಾಗಿದೆ.

“ಹಂಪಿಯ ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವ ಒಂದು ಸಂಸ್ಥೆಯೇ ಹೊರತು ಅದು ವಿದ್ಯೆಯನ್ನು ಕಲಿಸುವ ಸಂಸ್ಥೆಯಲ್ಲ. ಒಂದು ದೃಷ್ಟಿಯಿಂದ ಇದು ವಿದ್ಯೆಯನ್ನು ನಿರ್ಮಿಸುವ ಸಂಸ್ಥೆಯಾಗಿದೆ” ಎಂಬ ಖಚಿತ ವಿವರಣೆಯನ್ನು ಈ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರರು ನೀಡಿದ್ದರು. “ನಮ್ಮ ದೇಶದಲ್ಲಿ ಹಳೆಯ ಕಾಲದ ತಿಳುವಳಿಕೆಯೊಂದಿದೆ. ಅಲ್ಲದೇ ಪಶ್ಚಿಮದಿಂದ ಹರಿದು ಬರುತ್ತಿರುವ ಜ್ಞಾನ ಪ್ರವಾಹವೂ ಇದೆ. ಈ ಎರಡೂ ತಿಳುವಳಿಕೆಗಳು ಒಂದಕ್ಕೊಂದು ಸಂಧಿಸಿ ಬೆಳಕನ್ನು ಉಂಟುಮಾಡಿವೆ” ಎಂಬುದಾಗಿ ವಿವರಿಸಿಕೊಂಡ ಕಂಬಾರರು, “ಈ ತಿಳುವಳಿಕೆಗಳ ವಿವೇಕದ ವಿನಿಯೋಗ ಇಂದು ಅಗತ್ಯವಾಗಿದೆ…” ಎಂಬುದನ್ನು ಮನಗಂಡಿದ್ದರು ಹಾಗೂ “ಇಂಥ ವಿನಿಯೋಗಕ್ಕಾಗಿ ಹೊಸ ಬಗೆಯ ಶಾಸ್ತ್ರ ವಿಧಾನಗಳು ನಮಗಿಂದು ಬೇಕಾಗಿವೆ. ಕನ್ನಡ ವಿಶ್ವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಯ ಗುರಿಯೆಂದರೆ ಈ ಶಾಸ್ತ್ರ ವಿಧಾನಗಳ ನಿರ್ಮಾಣ” ಎಂಬುದಾಗಿ ಈ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶವನ್ನು ಸ್ಪಷ್ಟಪಡಿಸಿಕೊಂಡಿದ್ದರು. ಕಂಬಾರರ ನಂತರ ಕುಲಪತಿ ಸ್ಥಾನದಲ್ಲಿದ್ದು ವಿಶ್ವವಿದ್ಯಾಲಯವನ್ನು ರೂಪಿಸಿದ ಇನ್ನೊಬ್ಬ ಮಹತ್ವದ ಕನ್ನಡದ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರು ಕಂಬಾರರ ಆಶಯವನ್ನೇ, “ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವುದು” ಎಂಬ ಮಾತಿನ ಮೂಲಕ ತಮ್ಮ ಧ್ಯೇಯವನ್ನು ವಿವರಿಸಿದ್ದರು. ಅಂತೆಯೇ ಸ್ವತಃ ಸಂಶೋಧಕರಾಗಿದ್ದ ಕಲಬುರ್ಗಿಯವರು, ವಿಶ್ವವಿದ್ಯಾಲಯದ ಸಂಶೋಧನಾ ಕ್ರಿಯೆಗಳಿಗೆ ಇನ್ನಷ್ಟು ಶಿಸ್ತು ಮತ್ತು ಖಚಿತತೆಯನ್ನು ಒದಗಿಸಿದ್ದರು. ಡಾ.ಲಕ್ಕಪ್ಪಗೌಡರ ಬಳಿಕ ಈ ಸ್ಥಾನಕ್ಕೆ ಬಂದ ಡಾ.ವಿವೇಕರೈಯವರು ಕನ್ನಡ ವಿಶ್ವವಿದ್ಯಾಲಯವನ್ನು ಜಾಗತಿಕ ಮಟ್ಟದ ವಿದ್ವತ್ ಕೇಂದ್ರಗಳಲ್ಲೊಂದಾಗಿಸುವ ಪ್ರಯತ್ನಗಳನ್ನು ನಡೆಸಿದ್ದರು. ಭಾಷಾತಜ್ಞರಾದ ಡಾ.ಕೆ.ವಿ.ನಾರಾಯಣ ಅವರು ಕನ್ನಡವೆಂದರೆ ಭಾಷೆಮಾತ್ರವಲ್ಲ, ಅದು ಕರ್ನಾಟಕ ಮತ್ತು ಕನ್ನಡಿಗರನ್ನೂ ಒಳಗೊಂಡಿರುವಂಥಾದ್ದು ಎಂಬ ಮೂಲ ತಿಳುವಳಿಕೆ ಮತ್ತು ಆಶಯವನ್ನು ಇಲ್ಲಿನ ಸಂಶೋಧನೆಗಳು ಮತ್ತು ಅನ್ಯ ಶೈಕ್ಷಣಿಕ ಕ್ರಮಗಳ ಮೂಲಕ ಆಗುಮಾಡಿದ್ದರು.

ಕಂಬಾರರು ಜಾನಪದ ಪ್ರತಿಭಾ ಪರಂಪರೆಯ ವಕ್ತಾರರಾಗಿದ್ದರೆ, ಲಕ್ಕಪ್ಪಗೌಡರೂ ಜಾನಪದ ಕ್ಷೇತ್ರದಿಂದಲೇ ಬಂದವರಾಗಿದ್ದರು. ವಿವೇಕರೈಯವರೂ ಕನ್ನಡ ಜಾನಪದ ಸಂಶೋಧನೆಯ ಮೂಲಕವೇ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿಕೊಂಡವರಾಗಿದ್ದರು. ಹಿ.ಚಿ.ಬೋರಲಿಂಗಯ್ಯನವರದೂ ಜಾನಪದ ಮೂಲವೇ. ಕನ್ನಡ ವಿಶ್ವವಿದ್ಯಾಲಯಕ್ಕೂ ಜಾನಪದ ಕ್ಷೇತ್ರಕ್ಕೂ ಇರುವ ನಂಟು ಅದು ಆಕಸ್ಮಿಕವಾದುದಾಗಿರದೇ ವಿ.ವಿ.ಯ ಆಲೋಚನಾಕ್ರಮವೇ ಸಾಧ್ಯವಾಗಿಸಿದ ಒಂದು ಅರ್ಥಪೂರ್ಣ ಚಲನೆ ಎಂದು ಇದನ್ನು ಗಮನಿಸಬೇಕು. ಈ ಪರಂಪರೆಯ ಮುಂದುವರಿಕೆಯೇ ಎಂಬಂತೆ ಇದೀಗ ಉಪಕುಲಪತಿಗಳಾಗಿ ಈ ಹುದ್ದೆಯನ್ನು ಅಲಂಕರಿಸಿರುವ ಸ.ಚಿ.ರಮೇಶ್ ಕೂಡ ಜಾನಪದದ ವಿದ್ಯಾರ್ಥಿಯೇ ಆಗಿದ್ದಾರೆ. ವಿಶೇಷವೆಂದರೆ ಇಲ್ಲಿಯೇ ಅಧ್ಯಾಪಕರಾಗಿ ಇದೇ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳಾದ ಡಾ.ಕೆ.ವಿ.ನಾರಾಯಣ, ಡಾ.ಹಿ.ಚಿ.ಬೋರಲಿಂಗಯ್ಯ ಅವರಂತೆ ಇವರೂ ಇದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದವರು ಎಂಬುದಲ್ಲ, ಬದಲಾಗಿ ಈ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ವಿದ್ಯಾರ್ಥಿಯಾಗಿ ಪ್ರವೇಶ ಪಡೆದು, ಪಿ.ಎಚ್.ಡಿಯನ್ನೂ ಇಲ್ಲಿಯೇ ಮುಗಿಸಿ, ಇಲ್ಲಿಯೇ ಅಧ್ಯಾಪಕರಾಗಿ ನೌಕರಿಯನ್ನು ಮಾಡಿದ್ದಷ್ಟೇ ಅಲ್ಲದೇ ಇದೀಗ ಇದೇ ವಿಶ್ವವಿದ್ಯಾಲಯದ ಅಗ್ರಮಾನ್ಯ ಆಡಳಿತಗಾರರಾಗಿ ನೇಮಕಗೊಂಡಿರುವುದು. ಕನ್ನಡ ವಿಶ್ವವಿದ್ಯಾಲಯವನ್ನು ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ಇಂಚಿಂಚಾಗಿ ಬಲ್ಲ ಇವರೀಗ ಇಲ್ಲಿಯ ಆಡಳಿತ ನಡೆಸುವುದೇನೂ ಕಷ್ಟವಾಗಲಿಕ್ಕಿಲ್ಲ, ಆದರೆ ಕನ್ನಡ ವಿ.ವಿ.ಯ ವಿದ್ಯಾರ್ಥಿಯಾಗಿ ಇವರು ಏನನ್ನು ಕಲಿತಿದ್ದಾರೆ ಎಂಬುದೆಲ್ಲವೂ ವಿಶ್ವವಿದ್ಯಾಲಯವನ್ನು ಅದರ ಮೂಲ ಆಶಯದಲ್ಲಿ ಇವರು ಸಾಧ್ಯವಾಗಿಸಬಹುದಾದ ಶೈಕ್ಷಣಿಕ ಸ್ವರೂಪಗಳ ಮೂಲಕ ಅನಾವರಣಗೊಳಿಸಲು ಒಂದು ಅವಕಾಶ ದೊರೆತಂತಾಗಿದೆ. ಇಂತಹದ್ದೊಂದು ಅವಕಾಶ ಅದೆಷ್ಟು ಜನರಿಗೆ ದೊರೆತೀತು?

ಈ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರ ನೀಡುವಲ್ಲಿ ಕೃತಜ್ಞತಾಪೂರ್ವಕವಾಗಿ ತಮ್ಮ ’ಪೂರ್ವ ಸೂರಿ’ಗಳನ್ನು ಸ್ಮರಿಸಿಕೊಳ್ಳುತ್ತಾರೆ. ನ್ಯಾಯಪಥ ಜೊತೆಗಿನ ಮಾತುಗಳಲ್ಲಿ ’ಪೂರ್ವ ಸೂರಿ’ಗಳು ಎಂಬ ಪದವನ್ನು ಪುನರಾವರ್ತಿಸಿದ ಸ.ಚಿ.ರಮೇಶ್ ಅವರಿಗೆ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಹಿರಿಯರು ನಿಭಾಯಿಸಿದ ಜವಾಬ್ದಾರಿಯ ಬಗ್ಗೆ ಅರಿವಿದೆ ಅಂತೆಯೇ ತಾವು ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ಎಚ್ಚರಿಕೆಯೂ ಇದೆ. ವಿಶ್ವವಿದ್ಯಾಲಯದ ನೀತಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ಸಂದರ್ಭಗಳಲ್ಲಿಯೂ ತಾವು ಏನೇ ಮಾಡುವಾಗಲೂ ’ಹಿರಿಯರೊಂದಿಗೆ’ ಚರ್ಚಿಸಿ ಹೆಜ್ಜೆ ಇಡುವುದಾಗಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಹಿರಿಯರ ಸಲಹೆ ಪಡೆದು ಕಾರ್ಯವೆಸಗುವ ಕ್ರಮದಲ್ಲಿ ಹೆಚ್ಚು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ವಿಶ್ವವಿದ್ಯಾಲಯವನ್ನು ಕಟ್ಟಲು ಸಾಧ್ಯವಾಗದಾದರೂ ತಪ್ಪುಗಳಾಗಲು ಸಾಧ್ಯವಿಲ್ಲ ಮತ್ತು ಹಿರಿಯರು ಎಚ್ಚರಿಕೆಯಿಂದ ಕಟ್ಟಿದ  ವಿಶ್ವವಿದ್ಯಾಲಯದ ಹಿತಕ್ಕೆ ತಮ್ಮಿಂದ ಧಕ್ಕೆಯಾಗದಂತಿರಬೇಕು ಎಂಬ ಸೂಕ್ಷ್ಮಪ್ರಜ್ಞೆ ಇವರಲ್ಲಿ ಇದ್ದಂತೆ ತೋರುತ್ತದೆ. ಅಂತೆಯೇ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಯಾವುದೇ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಮೊದಲು ಇಲ್ಲಿನ ವಿಭಾಗದ ಮುಖ್ಯಸ್ಥರು, ನಿಕಾಯಗಳ ಮುಖ್ಯಸ್ಥರು ಮತ್ತು ಅಗತ್ಯವೆನಿಸಿದರೆ ಸಿಬ್ಬಂದಿ ವರ್ಗದೊಂದಿಗೆ ಚರ್ಚಿಸಿ ಬಳಿಕ ತೀರ್ಮಾನ ಕೈಗೊಳ್ಳುವ ’ಪ್ರಜಾಸತ್ತಾತ್ಮಕ ನಡವಳಿಕೆ’ಯತ್ತ ನಡೆಯುವ ಮಾತನ್ನಂತೂ ಯಾರಾದರೂ ಒಪ್ಪಲೇಬೇಕು. ವರ್ತಮಾನ ಸಂದರ್ಭದಲ್ಲಿ ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಶೈಕ್ಷಣಿಕ ಕ್ಷೇತ್ರದ ಘನತೆಗೆ ಧಕ್ಕೆ ತರುವಂತಿರುವ ಸಂದರ್ಭದಲ್ಲಿ ಹೊಸ ಉಪಕುಲಪತಿಗಳು ತೋರುವ ಈ ಎಚ್ಚರ ಕನ್ನಡಿಗರು ಪಾಲಿಗೆ ಸಮಾಧಾನ ಸಂಗತಿಯೇ ಸರಿ.

ಜಾನಪದ ತಜ್ಞರೇ ಗಮನಾರ್ಹ ಅವಧಿಗೆ ಉಪಕುಲಪತಿಗಳಾಗಿ ಕಟ್ಟಿದ ಈ ವಿಶ್ವವಿದ್ಯಾಲಯದ ಜಾನಪದ ಹಾಗೂ ಬುಡಕಟ್ಟು ಅಧ್ಯಯನ ವಿಭಾಗದ ವಿದ್ಯಾರ್ಥಿಗಳೇ ಅತಿಹೆಚ್ಚು ’ಪ್ರತಿಭಾ ಸಂತ್ರಸ್ತ’ರಾಗಿರುವುದು ವಿಷಾದಕರ ಸಂಗತಿ. ಈ ವಿಭಾಗದ ಎಂ.ಎ, ಪಿ.ಎಚ್.ಡಿ ಪದವಿಯು ಸರಕಾರಿ ನಿಯಮಾವಳಿಗಳ ಸಂಕೀರ್ಣತೆಯಲ್ಲಿ ಸಿಕ್ಕು ಪ್ರತಿಭಾವಂತ, ಯುವ ವಿದ್ವಾಂಸರನೇಕರು ಉದ್ಯೋಗಾವಕಾಶಗಳಿಂದ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಜಾನಪದ ವಿಭಾಗದಿಂದ ಬಂದ ಸ.ಚಿ.ರಮೇಶ್ ಈ ತೊಡಕನ್ನು ನಿವಾರಿಸಲು ಅಗತ್ಯಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡುತ್ತಾರೆ.

ಜಾನಪದ ವಿಶ್ವವಿದ್ಯಾಲಯದಲ್ಲಿದ್ದು ವಿಶ್ವಕೋಶ ರಚನೆ, ವಸ್ತು ಸಂಗ್ರಹಾಲಯ ನಿರ್ಮಾಣ, ಮೊದಲಾದ ಜವಾಬ್ದಾರಿ ವಹಿಸಿದ ಅನುಭವವಿರುವ ಸ.ಚಿ.ರಮೇಶ್, ಆ ಅನುಭವಗಳನ್ನು ಕನ್ನಡ ವಿ.ವಿ.ಯ ಸಂದರ್ಭದಲ್ಲಿ ಬಳಸಿಕೊಳ್ಳುವುದಾಗಿ ಹೇಳುತ್ತಾರೆ. ಈ ಜಾನಪದ ತಜ್ಞರ ’ದೇಸೀ’ ತಿಳುವಳಿಕೆಯು ವಿಶ್ವವಿದ್ಯಾಲಯದ ವಿಶಾಲ ಕಿರು ಅರಣ್ಯ ಸದೃಶ್ಯ ಆವರಣದಲ್ಲಿ ’ಔಷಧೀಯ ವನ’ ಬೆಳೆಸುವ ಮಹದಾಸೆಯನ್ನು ರೂಪಿಸಿರುವುದು ಗಮನಿಸಬೇಕಾದ ಸಂಗತಿ. ರಮೇಶ್ ತಮ್ಮ ಅವಧಿಯಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಲವು ಬಗೆಯ ಔಷಧೀಯ ಸಸ್ಯಗಳನ್ನು ಬೆಳೆಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ ಹಾಗೂ ಈಗಿರುವ ಮರಗಿಡಗಳಿಗೆ ಆ ಮರಗಿಡಗಳ ವೈಜ್ಞಾನಿಕ ಹೆಸರಿನ ಫಲಕಗಳನ್ನು ತೂಗಿಬಿಡುವ ಆಸಕ್ತಿಯನ್ನು ಪ್ರಕಟಿಸುತ್ತಾರೆ.

ಕನ್ನಡ ವಿಶ್ವವಿದ್ಯಾಲಯದ ವೈಶಿಷ್ಟ್ಯವೆಂದರೆ ಅದು ಅನಕ್ಷರಸ್ಥನಲ್ಲಿಯೂ ಇರಬಹುದಾದ ವಿದ್ಯೆಯನ್ನು ಗೌರವಿಸುವುದು. ಹಾಗೆಂದೇ ವಿಶ್ವವಿದ್ಯಾಲಯ ಹಲವು ಬಾರಿ ಅನಕ್ಷರಸ್ಥ, ದಮನಿತ ಸ್ತರದ ದೇಸೀ ಜ್ಞಾನಿ, ಕಲಾವಿದರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. ಕೆಲವೇ ವರ್ಷಗಳ ಹಿಂದಿನವರೆಗೂ ಯಾವ ಪದವಿಗಳಿಲ್ಲದವರಿಗೂ ಡಿ.ಲಿಟ್ ಪದವಿ ನೀಡುವ ಕ್ರಮವನ್ನು ಅನುಸರಿಸಿದೆ. ಅಂತೆಯೇ ವಿಶ್ವವಿದ್ಯಾಲಯದಿಂದ ಹೊರಗಿರುವ ಚಿಂತಕರ ಕೃತಿಗಳನ್ನು ರಚಿಸಿ, ಪ್ರಕಟಿಸಿದೆ. ಇದು ಯಾವ ವಿಶ್ವವಿದ್ಯಾಲಯಗಳಲ್ಲೂ ಕಾಣದ ಕನ್ನಡ ವಿಶ್ವವಿದ್ಯಾಲಯದ್ದೇ ಆದ ಅನನ್ಯ ಜ್ಞಾನ ಗೌರವ ಗುಣ. ಆದರೆ ಈ ಕ್ರಮ ಈ ಹೊತ್ತಿಗೆ ತಕ್ಕ ಮಟ್ಟಿಗೆ ನಿರ್ಬಂಧವನ್ನು ವಿಧಿಸಿಕೊಂಡಿರುವುದನ್ನು ಪ್ರಶ್ನಿಸಿದಾಗ, ಖಂಡಿತ ಈ ಕುರಿತಂತೆ ಜ್ಞಾನ ಮತ್ತು ಪ್ರತಿಭೆಗಳು ಎಲ್ಲಿಯೇ ಇರಲಿ ಅವುಗಳಿಗೆ ಮಾನ್ಯತೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ತಾವು ಪ್ರಯತ್ನಿಸುವದಾಗಿ ಭರವಸೆಯನ್ನು ನೀಡುತ್ತಾರೆ. ಅಂತೆಯೇ ಪ್ರಸಾರಾಂಗವನ್ನು ಇನ್ನಷ್ಟು ಸಬಲಗೊಳಿಸಿ ಜನರಿದ್ದಲ್ಲಿ ಪುಸ್ತಕವನ್ನು ಒಯ್ದು, ಮಾರಾಟ ಮಾಡುವ ಯೋಜನೆಯನ್ನು ಆರಂಭದ ದಿನಗಳಲ್ಲಿದ್ದಂತೆ ಜಾರಿಗೊಳಿಸುವ ಭರವಸೆಯನ್ನು ನೀಡುತ್ತಾರೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡಿಗರು ಹೆಮ್ಮೆ ಪಡುವಂತಹ ವಿಶ್ವವಿದ್ಯಾಲಯವೆನ್ನುವುದರಲ್ಲಿ ಎರಡು ಮಾತಿಲ್ಲ. ಈಗಲೂ ಕನ್ನಡ ವಿ.ವಿ.ವಿದ್ಯಾರ್ಥಿಯನ್ನು ಹೆಚ್ಚಿನ ಭರವಸೆಯೊಂದಿಗೆ, ಕನ್ನಡ ವಿ.ವಿ.ಸಂಶೋಧನೆಗಳನ್ನು ವಿಶೇಷ ಕುತೂಹಲಗಳೊಂದಿಗೆ ನಾಡು ಸ್ವೀಕರಿಸುತ್ತಿದೆ. ಇಲ್ಲಿನ ಜ್ಞಾನಕ್ರಮ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬೌದ್ಧಿಕ ವಲಯದಲ್ಲಿ ಗೌರವವನ್ನೂ ಗಳಿಸಿಕೊಂಡಿದೆ. ಹಾಗೆಂದು ಎಲ್ಲವೂ ಸರಿ ಇದೆ ಎನ್ನುವಂತಿಲ್ಲ. ಎಲ್ಲ ವಿಶ್ವವಿದ್ಯಾಲಯಗಳಂತೆಯೇ ಇಲ್ಲಿಯೂ ಅಧ್ಯಯನ ದುರ್ಬಲವಾಗುತ್ತಿದೆ, ಸಂಶೋಧನೆ ಕ್ಷೀಣಿಸುತ್ತಿದೆ ಎನ್ನುವುದೂ ವ್ಯಕ್ತವಾಗಿದೆ. ಸಂಶೋಧನೆಗೆಂದೇ ಮೀಸಲಾದ ವಿಶ್ವವಿದ್ಯಾಲಯ, ಬೋಧನೆಗೆ ತೆರೆದುಕೊಂಡ ಬಳಿಕ ಸಂಶೋಧನೆ ಹಿನ್ನಡೆ ಅನುಭವಿಸಿದೆ. ಸಂಶೋಧನೆಯು ಸಂಖ್ಯಾತ್ಮಕವಾಗಿ ಹೆಚ್ಚಿದ ಪರಿಣಾಮವಾಗಿ ಗುಣಾತ್ಮಕವಾಗಿ ಕುಸಿದಿದೆ ಎಂಬ ವಿವರಗಳೂ ಇವೆ. ಕಳೆದ 16ತಿಂಗಳಿಂದ ಫೆಲೋಶಿಪ್ ದೊರೆಯದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಳಮಳಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ನೀಡುವ ಫೆಲೋಶಿಪ್ಪಿನ ಮೊತ್ತವನ್ನು ಹೆಚ್ಚಿಸಬೇಕೆಂಬ ಬೇಡಿಕೆಗಳೂ ಇವೆ. ಹಲವು ಅಧ್ಯಯನ ಪೀಠಗಳು ಬಹುತೇಕ ಜಡಗೊಂಡಿವೆ ಎಂಬ ಮಾಹಿತಿಗಳಿವೆ. ಇನ್ನು ವಿಶ್ವವಿದ್ಯಾಲಯದ, ಆಚೆಗಿನ ಕೇಂದ್ರಗಳ ಕಾರ್ಯವೈಖರಿ ಕುರಿತೂ ಪ್ರಶ್ನೆಗಳಿವೆ. ಇಂತಹ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಲೋಚನಾ ಕ್ರಮವನ್ನು ವಿಸ್ತರಿಸುವ ಮಾತಿರಲಿ ಆಡಳಿತವನ್ನು ಸುಧಾರಿಸುವುದೇ ಕಷ್ಟದ ಕೆಲಸವಾದೀತು. ಈ ಕುರಿತಂತೆ ಕೇಳಿದ ಪ್ರಶ್ನೆಗೂ ಸ.ಚಿ.ರಮೇಶ್ ಭರವಸೆಯ ಮಾತುಗಳನ್ನಾಡಿದ್ದಾರೆ. ಈ ನಡುವೆ ಸರಕಾರವು ವಿಶ್ವವಿದ್ಯಾಲಯಕ್ಕೆ ನೀಡುವ ಹಣಕಾಸಿನ ಅನುದಾನದಲ್ಲಿ ಕಡಿತಗೊಳಿಸಿದೆ ಎಂಬ ಅಂಶವೂ ಅಧಿಕಾರಕ್ಕೇರುತ್ತಲೇ ರಮೇಶ್ ಅವರಿಗೆ ಸವಾಲನ್ನೊಡ್ಡಿದೆ.

ಈ ಎಲ್ಲ ಮಿತಿ, ಸವಾಲು, ನಿರೀಕ್ಷೆಗಳ ನಡುವೆ ಸ,ಚಿ.ರಮೇಶ್ ತಮ್ಮ ಮಹದಾಸೆ ಎಂಬಂತಹ, ಗಟ್ಟಿ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ಅದು, ಕನ್ನಡ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಉನ್ನತೀಕರಿಸುವುದು. ಇದನ್ನು ತಮ್ಮ ಅವಧಿಯಲ್ಲಿ ಸಾಧ್ಯವಾಗಿಸುವ ಎಲ್ಲ ಪ್ರಯತ್ನಗಳಿಗೆ ಮುಂದಾಗುವ ಉತ್ಸಾಹ ಇವರಲ್ಲಿರುವುದು ಇವರ ಧ್ವನಿಯಲ್ಲೇ ವ್ಯಕ್ತವಾಗುತ್ತದೆ.

ವಿಶ್ವವಿದ್ಯಾಲಯವೆನ್ನುವುದೇ ಒಂದು ಪರಮ ಬೌದ್ಧಿಕ ಕೇಂದ್ರ. ಸ.ಚಿ.ರಮೇಶ್ ಇಂತಹ ಬೌದ್ಧಿಕ ಕೇಂದ್ರವೊಂದರ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ಹೊತ್ತಿನಲ್ಲಿ ಪತ್ರಿಕೆ ಅವರಿಗೊಂದು ವಿಶೇಷ ಪ್ರಶ್ನೆ ಕೇಳಿತು. ಅದು, ವರ್ತಮಾನ ಸಂದರ್ಭದಲ್ಲಿ ದೇಶಾದ್ಯಂತ ಬುದ್ಧಿಜೀವಿಗಳೆಂದರೆ ರಾಜಕೀಯ ಪುಢಾರಿಗಳ ಮಾತಿನಲ್ಲಿ ಲೇವಡಿಗೀಡಾಗುತ್ತಿರುವ, ವೈಚಾರಿಕತೆಯು ಶಿಕ್ಷೆಗೀಡಾಗುತ್ತಿರುವ, ಸಂಶೋಧಕರು ಹಂತಕರ ಗುಂಡಿಗೆ ಬಲಿಯಾಗುತ್ತಿರುವ ಸಂದರ್ಭದಲ್ಲಿ  ಈ ಕುರಿತು ಅವರ ಪ್ರತಿಕ್ರಿಯೆ ಕೇಳಿದಾಗ ಆ ಉತ್ತರ ಮಾರ್ಮಿಕವಾಗಿತ್ತು. “ಎಲ್ಲ ಕಾಲದಲ್ಲೂ ಸತ್ಯದ ಪ್ರತಿಪಾದಕರು ಯುದ್ಧಭೂಮಿಯಲ್ಲಿ ನಿಂತವರೇ ಆಗಿರುತ್ತಾರೆ” ಎಂಬುದು. ನಿಜ! ಬುದ್ಧಿಜೀವಿಗಳೇನೋ ಯುದ್ಧಭೂಮಿಯಲ್ಲಿ ನಿಂತಿದ್ದಾರೆ. ಬೌದ್ಧಿಕ ಕೇಂದ್ರದ ಮುಖ್ಯಸ್ಥರಾದ ಸ.ಚಿ.ರಮೇಶ್ ತಾವು ಆಕ್ರಮಣಕ್ಕೀಡಾಗುತ್ತಿರುವ ಬುದ್ಧಿಜೀವಿಗಳ ಬೆಂಗಾವಲಿಗಿದ್ದಾರೆಂದು ಭಾವಿಸಿದರೆ ಬೌದ್ಧಿಕ ಚಟುವಟಿಕೆಗಳಿಗೆ ಒಂದಿಷ್ಟು ಧೈರ್ಯ ಲಭಿಸೀತು ಎಂದು ಪತ್ರಿಕೆ ಆಶಯ ವ್ಯಕ್ತಪಡಿಸುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...