ಪಾತ್ರ ಸೃಷ್ಠಿ : ಲೇಖಕ, ನಿರ್ದೇಶಕ ಮತ್ತು ನಟರ ಜಂಟಿ ಪ್ರಯತ್ನ

| ರಾಜಶೇಖರ್ ಅಕ್ಕಿ |

ಒಂದು ಹಾಲಿವುಡ್ ಚಿತ್ರದ ಮೊದಲಾರ್ಧದಲ್ಲಿ ಯುದ್ಧದ ತರುವಾಯದ ಒಂದು ದೃಶ್ಯವಿದೆ. ಕಡಲತೀರದಲ್ಲಿ ನೂರಾರು ಮೃತದೇಹಗಳು ಬಿದ್ದಿವೆ. ಅನಾಥವಾಗಿ ಬಿದ್ದಿರುವ ಮೃತದೇಹಗಳನ್ನು ಒಂದು ಲಾಂಗ್‍ಶಾಟ್‍ನಲ್ಲಿ ಸೆರೆಹಿಡಿಯಲಾಗಿದೆ. ಇಬ್ಬರು ಸೈನ್ಯಾಧಿಕಾರಿಗಳು ಈ ದೃಶ್ಯವನ್ನು ನೋಡುತ್ತಿದ್ದಾರೆ. ಕೆಲಕ್ಷಣ ಮತ್ತೇನೋ ಮಾತನಾಡಿದ ನಂತರ ಒಬ್ಬ ಅಧಿಕಾರಿ ಕಡಲತೀರದ ಕಡೆ ನೋಡಿ, “ಎಂಥಾ ದೃಶ್ಯವಲ್ಲವಾ” (quite a scene eh?) ಎಂದು ಕೇಳುತ್ತಾನೆ. ಆಗ ಇನ್ನೊಬ್ಬ ಅಧಿಕಾರಿಯ ಕ್ಲೋಸ್ ಅಪ್ ಶಾಟ್ ಕಾಣಿಸಿಕೊಂಡು, ಅವನು ಹೇಳುವುದು ‘ಹೌದು, ಎಂಥಾ ದೃಶ್ಯ’ (yeah, quite scene). ಯುದ್ಧ, ಅದರ ಪರಿಣಾಮವನ್ನು ಕಡಲತೀರದ ಮೇಲೆ ಬಿದ್ದಿರುವ ನೂರಾರು ಶವಗಳ ಲಾಂಗ್ ಶಾಟ್ ಹೇಳದಿದ್ದನ್ನು ಆ ನಟನ yeah, quite scene ಎನ್ನುವ ಆ ಒಂದು ಸರಳವಾದ ಒಂದು ಡೈಲಾಗ್ ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಟ್ಟುತ್ತದೆ. ಎಲ್ಲಾ ತಾಂತ್ರಿಕ ಸಾಧನೆಗಳನ್ನು ಮೀರಿ ನಮಗೆ ತಟ್ಟುವುದು ಆ ನಟನ ಸರಳ ಅಭಿನಯ. ನಟ ಟಾಮ್ ಹ್ಯಾಂಕ್ಸ್, ಚಿತ್ರ ಸೇವಿಂಗ್ ಪ್ರೈವೆಟ್ ರ್ಯಾನ್ ಹಾಗೂ ನಿರ್ದೇಶಕ ಸ್ಟೀವನ್ ಸ್ಪೀಲ್‍ಬರ್ಗ್.

ಟಾಮ್ ಹ್ಯಾಂಕ್ಸ್‍ನ ಮನೋಜ್ಞ ಅಭಿನಯದ ಕ್ರೆಡಿಟ್ ನಟನಿಗಷ್ಟೇ ಅಲ್ಲ, ಆ ಚಿತ್ರವನ್ನು ಬರೆದ ಲೇಖಕ ಮತ್ತು ನಿರ್ದೇಶಕನಿಗೂ ಸಲ್ಲುತ್ತದೆÉ. ಹೌದು, ನಿಮಗಿಷ್ಟವಾದ ಯಾವುದೇ ಒಂದು ಪಾತ್ರವನ್ನು ತೆಗೆದುಕೊಳ್ಳಿ ಅದರ ಒಂದು ಮುಖ್ಯ ಅಂಶ ಆ ಪಾತ್ರವನ್ನು ಸೃಷ್ಟಿಸಿದ ಲೇಖಕನದ್ದು. ಪಾತ್ರವನ್ನು ಸೃಷ್ಟಿಸುವಾಗ ಒಬ್ಬ ಲೇಖಕ ಎರಡು ತಪ್ಪುಗಳನ್ನು ಮಾಡಬಹುದು. ಮೊದಲನೆಯದು, ಕಥೆಗೆ ಹೊಂದುವಂತೆ, ಪ್ರೇಕ್ಷಕರಿಗೆ ರುಚಿಸುವಂತೆ ಅಥವಾ ಮತ್ಯಾವುದೋ ಕಾರಣಕ್ಕಾಗಿ ಆ ಪಾತ್ರವನ್ನು ತಿರುಚುವುದು, ಆ ಪಾತ್ರ ತಾನು ಮಾಡಲಾಗದ ಮತ್ತು ಮಾಡಬಾರದ ಒಂದು ಕ್ರಿಯೆಯನ್ನು ಮಾಡುವುದು ಅಥವಾ ಅಂತಹ ಒಂದು ಡೈಲಾಗ್ ಹೇಳುವುದು. ಆ ಪಾತ್ರ ಅಂಥದ್ದೊಂದು ಮಾಡಿದ ಕೂಡಲೇ ಆ ಪಾತ್ರ ಸತ್ತಿತು ಎಂದರ್ಥ. ಸತ್ತ ಪಾತ್ರ ಹೇಗಾದರೂ ಇಷ್ಟವಾದಾವು? ಎರಡನೆಯದು, ಆ ಪಾತ್ರಕ್ಕೆ ಅನೇಕ ಸಾಮಥ್ರ್ಯಗಳಿವೆ ಆದರೆ ಲೇಖಕನಿಗೆ ಆ ಸಾಮಥ್ರ್ಯಗಳನ್ನು ಹೊರತರಲು ಸಾಧ್ಯವಾಗುತ್ತಿಲ್ಲ, ಆ ಪಾತ್ರಕ್ಕೆ ಏನನ್ನೋ ಹೇಳಲಿಕ್ಕಿದೆ, ಮತ್ತೇನೋ ಮಾಡಲಿಕ್ಕಿದೆ ಆದರೆ ಲೇಖಕ ಆ ಪಾತ್ರದ ಮಾತನ್ನು ಕೇಳುತ್ತಿಲ್ಲ. ಆಗಲೂ ಅದು ಜೀವಂತ ಪಾತ್ರವಾಗಿರುವುದಿಲ್ಲ. ಆ ಪಾತ್ರದ ಸಂಪೂರ್ಣ ಸಾಮಥ್ರ್ಯವನ್ನು ಹೊರತಂದಾಗ ಮಾತ್ರ ಅದೊಂದು ಜೀವಂತ ಪಾತ್ರವಾಗುವುದು.

ಇನ್ನೂ ನಿರ್ದೇಶಕರ ಪಾತ್ರವೂ ಲೇಖಕನ ಪಾತ್ರಕ್ಕಿಂತ ಹೆಚ್ಚಿಲ್ಲದಿದ್ದರೂ ಪಾತ್ರಕ್ಕೆ ಜೀವ ತುಂಬಿಸುವಲ್ಲಿ ನಿರ್ದೇಶಕರ ಸಹಕಾರವಿಲ್ಲದಿದ್ದರೆ ಒಬ್ಬ ನಟ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಲಾರ. ನಟರಿಂದ ಅತ್ಯಂತ ಮನೋಜ್ಞ ಅಭಿನಯವನ್ನು ಹೊರತೆಗೆಯುವುದಕ್ಕೆಂದೆ ಕೆಲವು ನಿರ್ದೇಶಕರು ಪ್ರಖ್ಯಾತರಾಗಿದ್ದಾರೆ. ಅದರಲ್ಲಿ ಒಬ್ಬರು ಸಿಡ್ನಿ ಲುಮೆಟ್. ದಿ ಫ್ಯುಜಿಟಿವ್ ಕೈಂಡ್ ಎನ್ನುವ ಚಿತ್ರ ಸಿನೆಮಾ ಇತಿಹಾಸದ ಶ್ರೇಷ್ಠ ನಟ ಮಾರ್ಲನ್ ಬ್ರ್ಯಾಂಡೊ ಮತ್ತು ಶ್ರೇಷ್ಠ ನಿರ್ದೇಶಕ ಸಿಡ್ನಿ ಲುಮೆಟ್ ಇಬ್ಬರೂ ಒಟ್ಟಿಗೆ ಸೇರಿದ ಚಿತ್ರ. ಆ ಚಿತ್ರದ ಒಂದು ದೃಶ್ಯದಲ್ಲಿ ಮಾರ್ಲನ್ ಬ್ರಾಂಡೊ ಒಂದು ಡೈಲಾಗ್ ಹೇಳಬೇಕಿತ್ತು. ಹಲವಾರು ಟೇಕ್‍ಗಳಾದರೂ ಬ್ರಾಂಡೊಗೆ ಪರ್ಫೆಕ್ಟ್ ಟೇಕ್ ನೀಡಲು ಆಗಲಿಲ್ಲ. ಡೈಲಾಗ್‍ನ ಒಂದು ಪಾಯಿಂಟ್‍ಗೆ ಮುಟ್ಟಿದ ತಕ್ಷಣ ಬ್ರಾಂಡೊ ತಡವರಿಸಲಾರಂಭಿಸುವುದು ಅನೇಕ ಟೇಕ್‍ಗಳ ತನಕ ಮುಂದುವರೆಯಿತು. 13 ಟೇಕ್‍ಗಳ ನಂತರ ‘ಇಂದು ಬೇಡ, ಇನ್ನೊಮ್ಮೆ ಮಾಡುವ’ ಎಂತಲೂ ಬ್ರಾಂಡೊ ಹೇಳಿದರು. ಆದರೆ ಲುಮೆಟ್ ಚಿತ್ರೀಕರಣವನ್ನು ನಿಲ್ಲಿಸಲಿಲ್ಲ. ಕೊನೆಗೆ 33 ಟೇಕ್‍ಗಳ ನಂತರ 34ನೇ ಟೇಕ್‍ನಲ್ಲಿ ಪರ್ಫೆಕ್ಟ್ ಶಾಟ್ ನೀಡಿದರು ಬ್ರಾಂಡೊ. ನಂತರ ಸೆಟ್ಟಿನಲ್ಲಿ ನಿರ್ದೇಶಕ ಲುಮೆಟ್ ನಟ ಬ್ರಾಂಡೊನನ್ನು ಭೇಟಿಯಾಗಿ ‘ಏನು ಸಮಸ್ಯೆಯಾಗುತ್ತಿದೆ ಎನ್ನುವುದು ನನಗೆ ತಿಳಿದಿತ್ತು, ಅದಕ್ಕೇನು ಮಾಡಬೇಕೆನ್ನುವುದೂ ಗೊತ್ತಿತ್ತು. ಆದರೆ ಆಗ ಅದನ್ನು ಹೇಳುವ ಹಕ್ಕು ನನಗಿಲ್ಲ ಎನಿಸಿತು ಹಾಗಾಗಿ ಏನೂ ಹೇಳಲಿಲ್ಲ.’ ಎಂದರಂತೆ. ‘ಏನನ್ನೂ ಹೇಳದೇ, ಸುಮ್ಮನಿದ್ದದ್ದಕ್ಕೆ ನಾನೆಂದಿಗೂ ಕೃತಜ್ಞ’ ಎಂದು ಉತ್ತರಿಸಿದ ಬ್ರಾಂಡೊ.

ಈ ಘಟನೆ ಏನನ್ನು ಸೂಚಿಸುತ್ತದೆ ಎನ್ನುವುದನ್ನು ಅರಿಯುವುದು ಮುಖ್ಯ. ಯಾವುದೇ ಒಳ್ಳೆಯ ನಟ ಅಭಿನಯಿಸುವಾಗ ತನ್ನದೇ ದೇಹ, ತನ್ನದೇ ಭಾವನೆಗಳನ್ನೇ ಬಳಸಿ ಆ ಪಾತ್ರವನ್ನು, ಆ ಪಾತ್ರದ ಭಾವನೆಗಳನ್ನು ವ್ಯಕ್ತಪಡಿಸುತ್ತಿರುತ್ತಾಳೆ/ನೆ. ತನ್ನ ಭಾವನೆ, ನೆನಪು, ನೋವು, ನಲಿವುಗಳನ್ನೆಲ್ಲಾ ಒರೆಗೆ ಹಚ್ಚಿ, ತನ್ನ ಆತ್ಮವನ್ನೇ ಬಿಚ್ಚಿಡುವ ಪ್ರಯತ್ನ ನಡೆಯುತ್ತಿರುವಾಗ ನಿರ್ದೇಶಕ ಸಿಡ್ನಿ ಲುಮೆಟ್‍ಗೆ ನಟನಿಗೆ ಸಹಾಯ ಮಾಡುವುದೂ ಕೆಣಕಿದಂತೆ ಅನಿಸಿರಬಹುದು. ಹಾಗೆಂದ ಮಾತ್ರಕ್ಕೆ ನಿರ್ದೇಶಕ ಇಂತಹ ಸಂದರ್ಭದಲ್ಲಿ ಸಹಾಯ ಮಾಡಬಾರದು ಎಂತೇನಲ್ಲ. ಆಗ ಸುಮ್ಮನಿರುವುದು ಆ ನಿರ್ದೇಶಕನ ಸಂವೇದನಾಶೀಲತೆಯ ಉದಾಹರಣೆ.

ಯಾವುದೇ ನೈಜ ಪಾತ್ರ, ಅದು ದುಷ್ಟನ ಪಾತ್ರವಾಗಿರಲಿ ಅಥವಾ ಸದ್ಗುಣಗಳನ್ನು ಹೊಂದಿರುವ ಪಾತ್ರವಾಗಿರಲಿ, ಅದನ್ನು ಅಭಿನಯಿಸುವ ನಟನ ಒಳಗೆಲ್ಲೋ ಹುದುಗಿರುತ್ತದೆ. ಆ ಪಾತ್ರ, ಆ ಪಾತ್ರ ಮಾಡುವ ಕೃತ್ಯಗಳು ಆ ನಟನಲ್ಲಿ ಇಲ್ಲದಿದ್ದರೆ ಅಥವಾ ತನ್ನಲ್ಲಿ ಇಲ್ಲ ಎಂದೆನಿಸಿದರೆ ಆ ಪಾತ್ರಕ್ಕೆ ನ್ಯಾಯ ಒದಗಿಸಲಾರ. ಇದಕ್ಕೆ ಒಂದು ಉದಾಹರಣೆ ಡೆಡ್ ಮ್ಯಾನ್ ವಾಕಿಂಗ್ ಎನ್ನುವ ಅದ್ಭುತ ಸಿನೆಮಾ. ಅದರಲ್ಲಿ ಸುಸಾನ್ ಸರಾಂಡನ್ ಒಬ್ಬ ನನ್. ಜೈಲುವಾಸಿಗಳೊಂದಿಗೆ ಆಧ್ಯಾತ್ಮದ ಬಗ್ಗೆ ಚರ್ಚಿಸುವುದು ಅವಳ ಒಂದು ಕೆಲಸ. ಶಾನ್ ಪೆನ್ ಮರಣದಂಡನೆಗೆ ಗುರಿಯಾಗಿರುವ ಒಬ್ಬ ಖೈದಿ. ಅವನ ಮತ್ತು ಅವನ ಸಂಗಾತಿಯ ಅಪರಾಧ- ಹದಿಹರೆಯದ ಜೋಡಿಯ ಕೊಲೆ ಮತ್ತು ಬಲಾತ್ಕಾರ. ತನಗೆ ಮರಣ ದಂಡನೆ ವಿಧಿಸುವ ಕೆಲವು ದಿವಸ ಮುಂಚೆ ಈ ನನ್‍ನೊಂದಿಗೆ ಮಾತನಾಡುವ ಇಚ್ಛೆ ವ್ಯಕ್ತಪಡಿಸುತ್ತಾನೆ. ಆಗ ಶುರುವಾಗುವುದು ಅವರಿಬ್ಬರ ನಡುವಿನ ಸೂಕ್ಷ್ಮವಾದ ಸುಂದರವಾದ ಸಂಬಂಧ. ಅದನ್ನು ಅಷ್ಟೇ ಸುಂದರವಾಗಿ ಅಭಿನಯಿಸಿದ್ದು. ಚಿತ್ರೀಕರಿಸಿದ್ದಾರೆ ನಿರ್ದೇಶಕ ಟಿಮ್ ರಾಬಿನ್ಸ್. ಆ ಚಿತ್ರದಲ್ಲಿ ಈ ಸಂಬಂಧದೊಂದಿಗೆ ಶಾನ್ ಪೆನ್ ಮತ್ತು ಅವನ ಸಂಗಡಿಗ ಸೇರಿ ಆ ಜೋಡಿಯನ್ನು ಕೊಲ್ಲುವ ಮತ್ತು ಬಲಾತ್ಕಾರ ಮಾಡುವ ದೃಶ್ಯಗಳೂ ಇವೆ. ಆದರೆ, ಸಿನೆಮಾದ ಈ ಭಾಗವನ್ನು ಗಾಢವಾದ ಬಣ್ಣದ ಫಿಲ್ಟರ್ ಬಳಸಿ ದೃಶ್ಯಗಳನ್ನು ಡಾರ್ಕ್ ಆಗಿ ಚಿತ್ರೀಕರಿಸಿದ್ದಾರೆ. ಅಲ್ಲಿ ನಟರ ಮುಖಗಳೇ ಕಾಣುವುದಿಲ್ಲ. ಈ ಇಬ್ಬರು ಮಾಡುವ ಕ್ರೌರ್ಯ ಕಾಣಿಸುವುದಿಲ್ಲ. ಖಂಡಿತವಾಗಿಯೂ ಅದೊಂದು ನಿರ್ದೇಶಕ ಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡ ನಿರ್ಧಾರ. ಆದರೆ ಏಕೆ? ಆ ಕ್ರೌರ್ಯವನ್ನು ತನ್ನದಾಗಿಸಿಕೊಳ್ಳುವ ಸಾಹಸಕ್ಕೆ ಕೈಹಾಕುವ ಧೈರ್ಯ ಅವರಿಗಿರಲಿಲ್ಲ. ಹಾಗಾಗಿ ಆ ಕ್ರೌರ್ಯಗಳು ತಟ್ಟುವುದೇ ಇಲ್ಲ. ಅದರಿಂದ ಶಾನ್ ಪೆನ್‍ನ ಅಭಿನಯವೂ ಪರಿಪೂರ್ಣ ಎಂದೆನಿಸುವುದಿಲ್ಲ. (ಯಾವುದೇ ಹಿಂಸೆಯ ದೃಶ್ಯವನ್ನು ಗ್ರಾಫಿಕ್ ಆಗಿ ತೋರಿಸಬೇಕು ಎಂದು ಹೇಳುತ್ತಿಲ್ಲ. ನಿರ್ದಿಷ್ಟ ಹಿಂಸೆಯನ್ನು ತೋರಿಸದೇ ಪರಿಣಾಮಕಾರಿಯಾಗಿ ಚಿತ್ರೀಕರಿಸುವ ಅನೇಕ ದಾರಿಗಳಿವೆ). ಇದಕ್ಕೆ ಕಾರಣ- ನಟ ಶಾನ್ ಪಾನ್‍ಗೆ, ನಿರ್ದೇಶಕ ಟಿಮ್ ರಾಬಿನ್ಸ್‍ಗೆ ಆ ಪಾತ್ರಗಳನ್ನು, ಆ ಕ್ರೌರ್ಯಗಳನ್ನು ತಮ್ಮದಾಗಿಸಬಹುದು ಎನ್ನುವ ನಂಬಿಕೆ ಇರಲಿಲ್ಲ.

ಅತ್ಯಂತ ಶ್ರೇಷ್ಠ ನಟರ ಬಗ್ಗೆ ಕೇಳಿಬರುವ ಒಂದು ದೂರೆಂದರೆ, ಅವರು ತಮ್ಮ ಎಲ್ಲಾ ಸಿನೆಮಾಗಳಲ್ಲೂ ಒಂದೇ ರೀತಿಯಾಗಿ ಅಭಿನಯಿಸುತ್ತಾರೆ ಎನ್ನುವುದು. ಆ ದೂರಿನಲ್ಲೇ ಅವರ ಶ್ರೇಷ್ಠತೆ ಅಡಗಿದೆ. ಆಯಾ ಪಾತ್ರಗಳನ್ನು ತಿಂಗಳುಗಟ್ಟಳೆ ಅಭ್ಯಸಿಸಿ, ಪಾತ್ರವು ಒಬ್ಬ ವ್ಯಕ್ತಿಯ ಜೀವನವನ್ನು ಆಧಾರಿಸಿದ್ದರೆ, ಆ ವ್ಯಕ್ತಿಯನ್ನು ಅಭ್ಯಸಿಸಿ, ಆಯಾ ಪಾತ್ರದ ಸನ್ನಿವೇಶಗಳು, ಊರು, ಉದ್ಯೋಗ ಇವೆಲ್ಲವುಗಳನ್ನು ಅಭ್ಯಸಿಸಿ (ಟ್ಯಾಕ್ಸಿ ಡ್ರೈವರ್ ಸಿನೆಮಾ ತಯಾರಿಗಾಗಿ ರಾಬರ್ಟ್ ಡಿ ನೀರೊ ಕಲೆಕಾಲ ನ್ಯೂಯಾರ್ಕ್‍ನಲ್ಲಿ ಖುದ್ದು ಟ್ಯಾಕ್ಸಿ ಚಲಾಯಿಸಿದರು). ಮಾಡಿದ ಪಾತ್ರಗಳಲ್ಲೂ ಈ ಅದ್ಭುತ ನಟರು ಬೇರೆಯವರಾಗಲು ಪ್ರಯತ್ನಿಸುವುದಿಲ್ಲ. ತಾವು ಅಭ್ಯಸಿಸಿದ ಎಲ್ಲಾ ಅಂಶಗಳನ್ನು ತಮ್ಮ ವ್ಯಕ್ತಿತ್ವದೊಳಗೇ ತೂರಿಸಿದಾಗಲೇ ಹೊಮ್ಮುವುದು ಶ್ರೇಷ್ಠ ಸಿನೆಮಾ ಮತ್ತು ಎಂದೂ ಮರೆಯಲಾಗದ ಶ್ರೇಷ್ಠ ಪಾತ್ರಗಳು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here