ಆಸ್ಪತ್ರೆಗಾಗಿ ಆನ್‍ಲೈನ್ ಅಭಿಯಾನ ಕ್ಯಾರೇ ಎನ್ನದ ಉತ್ತರಕನ್ನಡ ಸಂಸದ, ಸಚಿವರು

ಉತ್ತರ ಕನ್ನಡವೆಂದರೆ ಉತ್ತರಗಳೇ ಇಲ್ಲದ ಸಮಸ್ಯೆಗಳ ನತದೃಷ್ಟ ಜಿಲ್ಲೆ! ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬುದು ಉತ್ತರ ಕನ್ನಡದ ಬಹುದಿನದ ಕೊರಗು.

| ಶುದ್ದೋಧನ |

ಉತ್ತರ ಕನ್ನಡವೆಂದರೆ ಉತ್ತರಗಳೇ ಇಲ್ಲದ ಸಮಸ್ಯೆಗಳ ನತದೃಷ್ಟ ಜಿಲ್ಲೆ! ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬುದು ಉತ್ತರ ಕನ್ನಡದ ಬಹುದಿನದ ಕೊರಗು. ಇದನ್ನು ಆಳುವ ಖೂಳರು ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಜಿಲ್ಲೆಯಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹೈವೇ-ಹಳ್ಳಿಗಳಲ್ಲಿ ಅಪಘಾತ ಸಾಮಾನ್ಯ ಎಂಬಂತಾಗಿದೆ. ತಲೆಗೆ ಗಂಭೀರ ಗಾಯಗಳಾದರೆ, ಹೃದಯಕ್ಕೆ ಹೊಡೆತ ಬಿದ್ದರೆ, ಹೃದಯಾಘಾತ ಸಂಭವಿಸಿದರೆ, ಹೆರಿಗೆ ಸಮಯದಲ್ಲಿ ಸಮಸ್ಯೆಯಾದರೆ, ಜೀರ್ಣಾಂಗಕ್ಕೆ ಪೆಟ್ಟಾಗಿ ರಕ್ತಸ್ರಾವ ಶುರುವಾದರೆ ಅರ್ಧ ಗಂಟೆಯಿಂದ ಎರಡು ಗಂಟೆಯೊಳಗೆ ತುರ್ತು ಚಿಕಿತ್ಸೆ ಕೊಟ್ಟರಷ್ಟೇ ಜೀವ ಉಳಿಸಬಹುದು. ವೈದ್ಯಕೀಯ ಪರಿಭಾಷೆಯ ಈ ಗೋಲ್ಡನ್ ಪಿರಿಯಡ್‍ನಲ್ಲಿ ಚಿಕಿತ್ಸೆ ವ್ಯವಸ್ಥೆ ಉತ್ತರ ಕನ್ನಡದಲ್ಲಿ ಇಲ್ಲ. ಶಿರಸಿ-ಯಲ್ಲಾಪುರ ಸೀಮೆಯವರು ಗಾಯಾಳು/ರೋಗಿಯನ್ನು ಹುಬ್ಬಳ್ಳಿ ಅಥವಾ ಧಾರವಾಡಕ್ಕೆ ಕರೆದೊಯ್ಯಲು ಮೂರು ತಾಸು ಬೇಕು. ಮಣಿಪಾಲ-ಮಂಗಳೂರು ನಾಲ್ಕೈದು ತಾಸುಗಳೇ ಬೇಕಾಗುತ್ತದೆ. ಕಾರವಾರದವರು ಪಣಜಿ ಆಸ್ಪತ್ರೆ ತಲುಪಲು ಎರಡು ಗಂಟೆಯಾದರೂ ಅವಶ್ಯ. ಸಿದ್ದಾಪುರ ಭಾಗದವರು ಶಿವಮೊಗ್ಗ ತಲುಪಬೇಕೆಂದರೆ 3 ಗಂಟೆ ಪ್ರಯಾಣ.

ಗೋಲ್ಡನ್ ಪಿರಿಯಡ್‍ನಲ್ಲಿ ಸುಸಜ್ಜಿತ ಆಸ್ಪತ್ರೆಗೆ ರೋಗಿಗಳನ್ನು/ಗಾಯಾಳುಗಳನ್ನು ಸೇರಿಸಲಾಗದೆ ವಾರ್ಷಿಕವಾಗಿ ನೂರಾರು ಜೀವಗಳು ಹೋಗುತ್ತಿವೆ. 2018ರ ಮೇ ತಿಂಗಳಿಂದ 2019ರ ಎಪ್ರಿಲ್‍ವರೆಗೆ ಜಿಲ್ಲೆಯಲ್ಲಿ ಸರಾಸರಿ ದಿನಕ್ಕೆರಡರಂತೆ ಗಂಭೀರ ಅಪಘಾತಗಳಾಗಿವೆ. 239 ಮಂದಿ ಸಾವಿಗೀಡಾಗಿದ್ದಾರೆ; 522 ಮಂದಿಯ ಅಂಗ ಊನವಾಗಿದೆ; 1,331 ಜನರು ಗಾಯಗೊಂಡು ಬಚಾವಾಗಿದ್ದಾರೆ. ತುರ್ತು ಸಮಯದಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಿರುವ ಅಂಬ್ಯುಲೆನ್ಸ್ ಸಹ ಜಿಲ್ಲೆಯವರಿಗೆ ಸಿಗುತ್ತಿಲ್ಲ, ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಒಂದಿದ್ದರೆ ಹಲವು ಜೀವಗಳನ್ನು ಖಂಡಿತ ಉಳಿಸಬಹುದಿತ್ತು. ಉತ್ತರ ಕನ್ನಡದಲ್ಲಿ ಮೆಡಿಕಲ್ ಕಾಲೇಜು ಶುರುವಾಗಿ ಮೂರು ವರ್ಷವಾಗಿದೆ. ಆದರೆ ಸುಸಜ್ಜಿತ ಆಸ್ಪತ್ರೆ, ಟ್ರಾಮಾ ಸೆಂಟರ್ ಬೇಕೆಂಬ ಬೇಡಿಕೆ ಈಡೇರಿಲ್ಲ.

ಈ ನರಕ ಯಾತನೆಯಿಂದ ಜಿಲ್ಲೆಯನ್ನು ಪಾರು ಮಾಡಲೇಬೇಕೆಂಬ ಯೋಚನೆಯಿಂದ ಒಂದಿಷ್ಟು ಯುವಕರು ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ಅಕ್ಷರ ಆಂದೋಲನ ಆರಂಭಿಸಿದ್ದಾರೆ.ಟ್ವಿಟರ್, ಫೇಸ್‍ಬುಕ್, ವಾಟ್ಸಾಪ್‍ಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. “ವಿ ನೀಡ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಇನ್ ಉತ್ತರ ಕನ್ನಡ” ಎಂಬ ಹ್ಯಾಶ್‍ಟ್ಯಾಗ್‍ನಿಂದ ಯುವಕರು ಜನಪ್ರತಿನಿಧಿಗಳ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಪರಸ್ಪರ ಪರಿಚಯವೇ ಇಲ್ಲದ ಈ ಸಮಾನ ಮನಸ್ಕರ ಸ್ವಯಂ ಪ್ರೇರಣೆಯ ಸುಸಜ್ಜಿತ ಆಸ್ಪತ್ರೆ ಬೇಡಿಕೆಯ ಸರಣಿ ಟ್ವೀಟ್‍ಗೆ ಪ್ರಧಾನಿ, ಸಿಎಂ, ಜಿಲ್ಲೆಯ ದಂಡಪಿಂಡ ಮಂತ್ರಿ ದೇಶಪಾಂಡೆ, ಕರ್ಮಗೇಡಿ ಸಂಸದ ಅನಂತ್ಮಾಣಿ ಮತ್ತು ಜಿಲ್ಲೆಯ ಐದು ಶಾಸಕರು ಗಡಿಬಿಡಿಗೆ ಬಿದ್ದಂತೆ ಎದ್ದು ಕುಂತಿದ್ದಾರೆ.

ಜೂನ್ 8ರ ಶನಿವಾರ ಸಂಜೆ 5.30ರಿಂದ 7.30 ಗಂಟೆವರೆಗೆ ಏಕಕಾಲದಲ್ಲಿ ಜಿಲ್ಲೆಯ ಜನ ಪ್ರಧಾನಿ ಕಾರ್ಯಾಲಯದಿಂದ ಸ್ಥಳೀಯ ಶಾಸಕರ ತನಕದ ಆಯಕಟ್ಟಿನ ಅಧಿಕಾರಸ್ಥರೆಲ್ಲರಿಗೆ ಸುಸಜ್ಜಿತ ಆಸ್ಪತ್ರೆಗಾಗಿ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಏಳು ಸಾವಿರಕ್ಕೂ ಹೆಚ್ಚು ಜನರು ತೊಡಗಿಕೊಂಡು ಅಧಿಕಾರಸ್ಥರು ಜಿಲ್ಲೆಯತ್ತ ತಿರುಗಿ ನೋಡುವಂತೆ ಮಾಡಿದ್ದು ದಾಖಲೆಯೇ ಸರಿ!! ಜಿಲ್ಲೆಯ ಯುವಕರು ಸಾಮಾಜಿಕ ಕಳಕಳಿಯ ಹೊಸ ಟ್ರೆಂಡ್ ಹುಟ್ಟಿಹಾಕಿದ್ದಾರೆ. ಈ ಅಭಿಯಾನದಿಂದ ಬೆಚ್ಚಿಬಿದ್ದಿರುವ ಜನಪ್ರತಿನಿಧಿಗಳು ಬೆಂಬಲ ಮಾತಾಡುತ್ತಿದ್ದಾರೆ. ಕಾರವಾರ ಶಾಸಕಿ ರೂಪಾಲಿ ನಾಯಕ್ ತಾನು ಹಿಂದೆ ವೈದ್ಯಕೀಯ ಶಿಕ್ಷಣ ಮಂತ್ರಿಯಾಗಿದ್ದ ಡಿಕೆಶಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಬರೆದ ಪತ್ರ ತೋರಿಸುತ್ತಿದ್ದರೆ, ಶಿರಸಿಯ ಕಾಗೇರಿ ಮಾಣಿ ಸುಸಜ್ಜಿತ ಆಸ್ಪತ್ರೆ ಶಿರಸಿ ಅಥವಾ ಕುಮಟಾದಲ್ಲಿ ಆಗುವ ಜರೂರಿದೆ ಎನ್ನುತ್ತಿದ್ದಾರೆ. ಭಟ್ಕಳದ ಶಾಸಕ ಸುನೀಲ್ ನಾಯ್ಕ ವೈದ್ಯಕೀಯ ಶಿಕ್ಷಣ ಮಂತ್ರಿಗೆ ಅವಸರವಸರದಲ್ಲಿ ಒಂದು ಪತ್ರ ಗೀಚಿದ್ದಾರೆ. ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ ನೆಟ್ಟಿಗರ ಬೇಡಿಕೆಗೆ ಬಲ ಕೊಟ್ಟಿದ್ದಾರೆ.

ಸಿಎಂ ಕುಮ್ಮಿ ಕಚೇರಿಯ ಅಧಿಕೃತ ಪೇಜ್‍ನಿಂದ ಆಸ್ಪತ್ರೆ ಅಭಿಯಾನಕ್ಕೆ ಸ್ಪಂದನೆ ಸಿಕ್ಕಿದೆ. “ಉತ್ತರ ಕನ್ನಡಿಗರ ಆಸ್ಪತ್ರೆ ಅಭಿಯಾನ ನನ್ನ ಗಮನಕ್ಕೆ ಬಂದಿದೆ, ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ವರದಿ ತರಿಸಿ ಕ್ರಮ ಕೈಗೊಳ್ಳಲಾಗುವುದು” ಎಂಬ ಭರವಸೆ ಬಂದಿದೆ. ಕೇಂದ್ರ ಸರ್ಕಾರದಿಂದ ಯಾವ ರೀತಿಯ ಸಹಕಾರ ನೀಡಬಹುದೆಂದು ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸುತ್ತೇನೆ. ಉತ್ತರ ಕನ್ನಡದ ಸಂಸದನ ಜತೆಯಲ್ಲಿಟ್ಟುಕೊಂಡು ಕೇಂದ್ರದ ಸಹಾಯ ಕೋರಿಸುತ್ತೇನೆ” ಅಂದಿದ್ದಾರೆ. ಆದರೆ ಜಿಲ್ಲೆಗೆ ದೊಡ್ಡ ದಂಡವಾಗಿರುವ ಮಂತ್ರಿ ದೋಷಪಾಂಡೆ ಮತ್ತು ಅನಂತ್ಮಾಣಿ ಇದ್ಯಾವುದೂ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಮೂರೂ ಮುಚ್ಚಿಕೊಂಡು ಸ್ವಂತ ‘ದಂದೆ’ಯಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ತನ್ನ ಎಂಪಿಗಿರಿ ಅನಿವಾರ್ಯ ಎಂಬಂತೆ ಒಣ ಪೋಸು ಕೊಡುವ, ಅಭಿವೃದ್ಧಿ ಹಿಂದೂತ್ವ ಎಂದು ಬೊಬ್ಬಿರಿವ ಅನಂತ್ಮಾಣಿ ಆಸ್ಪತ್ರೆಗೆ ಒತ್ತಾಯಿಸಿ ಸರಣಿ ಟ್ವಿಟ್ ಮಾಡಿದವರನ್ನು ಬ್ಲಾಕ್ ಮಾಡಿ ತನ್ನ ಅಸಲಿ ಕರ್ಮಗೇಡಿತನ ತೋರಿಸಿಕೊಂಡಿದ್ದಾನೆ.

“ಉತ್ತರ ಕನ್ನಡ ಟ್ರೋಲರ್ಸ್” ಎಂಬ ಟ್ವಟರ್ ಖಾತೆಯಿಂದ ಮಾಣಿಗೆ ಟ್ವಿಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸುವ ಯೋಗ್ಯತೆಯಿಲ್ಲದ ಸಂಸದ ಸಾಹೇಬ ಆಸ್ಪತ್ರೆ ಬೇಡಿಕೆ ಇಡುತ್ತಿರುವವರನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಿಂದ ದೂರ ಇಟ್ಟಿದ್ದಾನೆ. ಕಾರವಾರ ಮೆಡಿಕಲ್ ಕಾಲೇಜಿನ ಬಳಿಯೇ ಟ್ರೋಮಾ ಸೆಂಟರ್ ಸ್ಥಾಪನೆಗೆ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಕಳಿಸಿ ಬಹಳ ದಿನಗಳೇ ಆಗಿಹೋಗಿವೆ. ಇದಕ್ಕೆ ಜಾಗದ ತಲಾಶ್ ಸಹ ನಡೆದಿದೆ. ಬಹುಶಃ ಸಂಸದ ಮಾಣಿಗೆ ಇದೆಲ್ಲ ಗೊತ್ತಿರುವಂತಿಲ್ಲ. ಖಾಸಗಿಯವರಿಂದ ದುಬಾರಿ ಟ್ರೋಮಾ ಸೆಂಟರ್ ನಿರ್ಮಾಣ ಸಾಧ್ಯವಾಗದು. ಅದು ಕಾರವಾರ ಮೆಡಿಕಲ್ ಕಾಲೇಜಿನ ಬಳಿಯೇ ಆಗಬೇಕಾದ ಅನಿವಾರ್ಯತೆಯಿದೆ. ಜನರ ಈ ಹೋರಾಟಕ್ಕೆ ಬರೀ ಕಣ್ಣೊರೆಸುವ ಕಿತಾಪತಿ ಆಗಬಾರದೆಂಬುದು ಆಸ್ಪತ್ರೆ ಬಯಸುವವರ ಕಳಕಳಿ. ಗುರಿಮುಟ್ಟುವ ತನಕ ಜನಪ್ರತಿನಿಧಿಗಳು ಹಿಂದಡಿ ಇಡಬಾರದೆಂದು ಜನ ಬಯಸಿದ್ದಾರೆ.ಹಾಗೆಯೇ ಭಾವನಾತ್ಮಕ ಹೋರಾಟ ಜೋರಾದಾಗ ಆಳುವವರು ಟ್ರಾಮಾ ಸೆಂಟರ್ ಬೋರ್ಡ್ ಹಾಕಿ, ನಾಲ್ಕು ಡಾಕ್ಟರ್‍ಗಳ ನೇಮಿಸುವ ನಾಟಕ ಆಡದಿರಲಿ. ಉತ್ತರ ಕನ್ನಡಿಗರ ಜೀವ ಉಳಿಸುವ ಪ್ರಾಮಾಣಿಕ ಕೆಲಸ ತುರ್ತಾಗಿ ಆಗಬೇಕಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here