ದೊಡ್ಡ ಶ್ರೀಮಂತ ಸೌದಿಯನ್ನು ಸೋಲಿಸುತ್ತಿರುವ ಪುಟ್ಟ ಬಡ ರಾಷ್ಟ್ರ ಯೆಮೆನ್

ಇರಾನ್ ಹೌಥಿಗಳ ಮೂಲಕ ಗಳಿಸಿರುವ ದಾಳಿಯ ಶಕ್ತಿಯು ಮುಂದೆ ಈಗ ಮುಂದುವರೆಯುತ್ತಿರುವ ಸಿರಿಯಾ, ಲೆಬನಾನ್ ಮತ್ತು ಇರಾಕ್ ಯುದ್ಧಗಳಲ್ಲಿ ಪಾಲುದಾರರಾಗಿರುವ ಇಸ್ರೇಲ್ ಮತ್ತು ಟರ್ಕಿಯನ್ನು ಎಚ್ಚರಿಕೆಯ ಸ್ಥಿತಿಯಲ್ಲಿ ಇಡಲಿದೆ.

ಯೆಮೆನ್ ಎಂಬ ಪುಟ್ಟ ರಾಷ್ಟ್ರದ ಮೇಲೆ ಹೇರಿದ ಯುದ್ಧದಲ್ಲಿ ಸೌದಿ ಅರೇಬಿಯಾ ಸೋಲುತ್ತಿರುವುದು ಮಾತ್ರವಲ್ಲ; ತನ್ನ ಮಿತ್ರರ ಬೆಂಬಲವನ್ನೂ ಕಳೆದುಕೊಳ್ಳುತ್ತಿದೆ ಎಂದು ಇತ್ತೀಚಿಗಿನ ಬೆಳವಣಿಗೆಗಳು ತೋರಿಸುತ್ತವೆ. ಸೌದಿಯ ಆಡಳಿತದ ವಿರುದ್ಧ ಹುಟ್ಟಿಕೊಂಡ ಹೌಥಿ ಅಥವಾ ಅನ್ಸಾರ್ ಅಲ್ಲಾಹ್ ಚಳವಳಿಯು ಎರಡು ದಶಕಗಳ ಯುದ್ಧದ ಬಳಿಕ ಸೌದಿಯನ್ನು ಮಂಡಿಯೂರುವಂತೆ ಮಾಡಿದೆ. ಪ್ರಪಂಚದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಯೆಮೆನ್ ಪ್ರಪಂಚದ ಅತ್ಯಂತ ಶ್ರೀಮಂತ ದೇಶವಾದ ಸೌದಿ ಅರೇಬಿಯಾವನ್ನು ಮಣಿಸಿರುವುದು ಇತ್ತೀಚಿನ ಕಾಲದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ವಿಷಯವಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಹೌಥಿಗಳು ತಮ್ಮ ಸರಣಿ ದಾಳಿಗಳ ಮೂಲಕ ಸೌದಿ ಅರೇಬಿಯಾದ ಯಾವುದೇ ಜಾಗಕ್ಕೆ ತಾವು ಪ್ರವೇಶಿಸಿಬಲ್ಲೆವು ಮತ್ತು ಅಲ್ಲಿ ದಾಳಿ ನಡೆಸಿ ಆ ದೇಶದ ಆರ್ಥಿಕತೆಯನ್ನು ಸ್ತಬ್ಧಗೊಳಿಸಲು ಶಕ್ತರಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ದಾಳಿಗಳಿಂದ ಸೌದಿಯ ರಾಜಧಾನಿ ರಿಯಾದ್ ಮತ್ತು ಆ ದೇಶದ ಎಲ್ಲಾ ತೈಲ ಕ್ಷೇತ್ರಗಳು ಮಾತ್ರವಲ್ಲ, ನೆರೆಯ ದುಬೈಯ ಅತ್ಯಂತ ವ್ಯವಸ್ಥಿತವಾಗಿರುವ ವಿಮಾನ ನಿಲ್ದಾಣ ಕೂಡಾ ತಮ್ಮ ದಾಳಿಯ ವ್ಯಾಪ್ತಿಯಲ್ಲಿವೆ ಎಂದವರು ಸಾಬೀತುಮಾಡಿದ್ದಾರೆ.

ಈ ಪ್ರದೇಶದಲ್ಲಿ ಅಮೆರಿಕದ ಪ್ರಭಾವದ ವಿರುದ್ದ ಇರಾನಿನ ಪ್ರತಿರೋಧ ಕಾರ್ಯತಂತ್ರದ ಭಾಗವಾಗಿ ಶಿಯಾ ಹೌಥಿಗಳು ಹುಟ್ಟಿಕೊಂಡಿದ್ದರು. ಭಾರೀ ಸಾವುನೋವು ಮತ್ತು ಅತ್ಯಂತ ದೊಡ್ಡ ಮಾನವ ನಿರ್ಮಿತ ದುರಂತದ ನಡುವೆಯೂ ಯೆಮೆನ್ ಮೇಲೆ ಸೌದಿಯ ದಾಳಿಯನ್ನು ನಿಯಂತ್ರಿಸಲು ಮಾತ್ರವಲ್ಲ, ಅದನ್ನು ಮಿತ್ರರಾಷ್ಟ್ರಗಳಿಂದ ಪ್ರತ್ಯೇಕಿಸಲು ಅವರೀಗ ಶಕ್ತರಾಗಿದ್ದಾರೆ. ಈಗ ನೋಡಲು ಉಳಿದಿರುವುದೇನೆಂದರೆ, ಸಂಧಾನದ ಮೇಜಿನಲ್ಲಿ ಸೌದಿ ಅರೇಬಿಯಾವು ಎಷ್ಟರ ಮಟ್ಟಿಗೆ ಈ ಯುದ್ಧವನ್ನು ಕೊನೆಗೊಳಿಸಲು ಬಯಸಿದೆ ಎಂಬುದು. ಸ್ಥಳೀಯವಾಗಿ ಸೌದಿಯ ಮಿತ್ರಪಕ್ಷಗಳಲ್ಲಿ ಮುಖ್ಯವಾಗಿರುವುದು ಯುಎಇ ಮಾತ್ರ. ಯುಎಸ್‍ಎ, ಯುಕೆ, ಫ್ರಾನ್ಸ್ ಮತ್ತು ಕೆನಡಾಗಳು ಅದಕ್ಕೆ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿವೆ.

ವಿಶ್ವಸಂಸ್ಥೆಯು ಜಗತ್ತಿನ ಅತ್ಯಂತ ದೊಡ್ಡ ಮಾನವ ನಿರ್ಮಿತ ದುರಂತವೆಂದು ಬಣ್ಣಿಸಿರುವ ಯೆಮೆನ್ ಅಂತರ್ಯುದ್ಧದ ಬೆಂಕಿಗೆ 2015ರಲ್ಲಿ ಅಂದಿನ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಎಣ್ಣೆ ಸುರಿದಿದ್ದರು. ಈ ತನಕ ಸೌದಿ ಮಿತ್ರಕೂಟವು 10,000ದಷ್ಟು ಯೆಮೆನ್ ಪ್ರಜೆಗಳನ್ನು ಕೊಂದಿದೆ. ಅದರಲ್ಲಿ 1,000ದಷ್ಟು ಮಕ್ಕಳು. 30 ಲಕ್ಷಕ್ಕೂ ಹೆಚ್ಚು ಯೆಮೆನಿಗಳು ತಮ್ಮದೇ ದೇಶದಲ್ಲಿ ನಿರಾಶ್ರಿತರಾಗಿದ್ದಾರೆ. 1.7 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಂದಿಗೆ ಆಹಾರವಾಗಲೀ, ಕುಡಿಯುವ ನೀರಾಗಲೀ ಸರಿಯಾಗಿ ಸಿಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಯೆಮೆನಿನ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ದಿಗ್ಬಂಧನ ವಿಧಿಸಿ ಉಂಟುಮಾಡಿದ ಮಾನವ ನಿರ್ಮಿತ ಬರ.

ಸೌದಿಗಳು ಯೆಮೆನಿ ಜನರ ಮೇಲೆ ಯದ್ವಾತದ್ವವಾಗಿ ಬಾಂಬ್‍ದಾಳಿ ನಡೆಸಿ, ಆ ದೇಶದ ಶಾಲೆಗಳು, ಆಸ್ಪತ್ರೆಗಳಂತಹಾ ಮೂಲಭೂತ ಸೌಕರ್ಯಗಳನ್ನು, ರಾಜಧಾನಿ ಸಾನಾವನ್ನು ಮತ್ತು ಪುರಾತನ ಸಾಂಸ್ಕೃತಿಕ ನಗರವಾದ ಸಾದ್ಹಾವನ್ನು ನಾಶ ಮಾಡಿದ್ದರು. 50 ಲಕ್ಷಕ್ಕಿಂತಲೂ ಹೆಚ್ಚು ಯೆಮೆನಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಹಸಿವಿನ ಸಾವನ್ನು ಎದುರಿಸುತ್ತಿದ್ದಾರೆ.

ಇರಾನ್ ವಿರುದ್ಧದ ಯುಎಸ್‍ಎಯ ದ್ವೇಷದ ಪರಿಣಾಮವಾಗಿ ಹೌಥಿಗಳು ಅಂತರ್ಖಂಡ ಕ್ಷಿಪಣಿಗಳೂ ಸೇರಿದಂತೆ ತಮ್ಮ ಶಸ್ತ್ರಾಸ್ತ್ರ ಬಲವನ್ನು ಪಡೆದುಕೊಂಡಿದ್ದಾರೆಂಬುದನ್ನು ಇತ್ತೀಚಿನ ಬೆಳವಣಿಗೆಗಳ ಮೂಲಕ ತೋರಿಸಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಸೌದಿಯ ಅಭಾ ವಿಮಾನ ನಿಲ್ದಾಣದ ಮೇಲೆ ಎರಡು ಬಾರಿ ದಾಳಿ ನಡೆಸಿದ್ದಾರೆ. ಆಗಸ್ಟ್ 17ರಂದು ಸೌದಿ ಅರೇಬಿಯಾದ ತೀರಾ ಒಳಗಿರುವ ತೈಲಬಾವಿಗಳ ಮೇಲೂ ದಾಳಿಯನ್ನು ನಡೆಸಿದ್ದಾರೆ. ಸೌದಿಯ ಮಿತ್ರರಾಷ್ಟ್ರ ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ದಲ್ಲಿ ಯೆಮೆನ್‍ನಿಂದ 1250 ಕಿ.ಮೀ.ನಷ್ಟು ದೂರ ಇರುವ ಸಾಯ್ಬಾ ತೈಲಕ್ಷೇತ್ರದ ಮೇಲೆ ದಾಳಿ ನಡೆಸಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ.

ಕಳೆದ ತಿಂಗಳು ಬಂದರು ನಗರ ಏಡನ್‍ನನ್ನು ಗೆದ್ದ ಬಳಿಕ ಸೌದಿಯ ಮಿತ್ರ ಯುಎಇ, ಮಿತ್ರಕೂಟದಿಂದ ಹೊರಬಂದಿದೆ. ಏಡನ್ ಸುನ್ನಿಗಳು ಬಹುಸಂಖ್ಯಾತರಾಗಿರುವ ನಗರ. ಅದನ್ನು ಯೆಮೆನಿ ಜನರ ಇಚ್ಛೆಗೆ ವಿರುದ್ಧವಾಗಿ ಎಷ್ಟು ಕಾಲ ಹಿಡಿದಿಟ್ಟುಕೊಳ್ಳಬಹುದು ಎಂಬುದನ್ನು ಮುಂದೆ ನೋಡಬೇಕಷ್ಟೆ.

ಸೌದಿ ಮತ್ತು ಅದರ ಮಿತ್ರ ಪಕ್ಷಗಳು ಯೆಮೆನಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ದುಬಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ, ಹೌಥಿಗಳು ಇತ್ತೀಚೆಗೆ ಪಡೆದುಕೊಂಡಿರುವ ಶಸ್ತ್ರಾಸ್ತ್ರಗಳಿಂದ ಸೌದಿಯು ತಮ್ಮನ್ನು ರಕ್ಷಿಸಿಕೊಳ್ಳಲು ವಿಫಲರಾಗಿದ್ದಾರೆ. ಈ ಶಸ್ತ್ರಾಸ್ತ್ರಗಳನ್ನು ಯುಎಸ್‍ಎಯ ತೀವ್ರವಾದ ಆರ್ಥಿಕ ದಿಗ್ಬಂಧನದ ಹೊರತಾಗಿಯೂ ಇರಾನ್ ಅಭಿವೃದ್ಧಿಪಡಿಸಿದೆ. 2010ರಲ್ಲಿ ಯುಎಸ್‍ಎಯ ‘ಸ್ಟೆಲ್ತ್’ ಡ್ರೋನ್ ಒಂದನ್ನು ವಶಕ್ಕೆ ತೆಗೆದುಕೊಂಡ ಮೇಲೆ, ಇರಾನ್ ತನ್ನ ಸುತ್ತ 1500 ಕಿ.ಮೀ. ವ್ಯಾಪ್ತಿಯಲ್ಲಿ ಕಾವಲಿರಿಸುವ ಡ್ರೋನ್ ತಯಾರಿಸುವ ಕಾರ್ಯಕ್ರಮದಲ್ಲಿ ಯಶಸ್ವಿಯಾಯಿತು.

ಯುಎಸ್‍ಎ ತನ್ನ ಮಿತ್ರ ಪಕ್ಷಗಳ ಜೊತೆಗೂಡಿ ಈ ಪ್ರದೇಶದಲ್ಲಿ ನಡೆಸಿದ ಎಲ್ಲಾ ಯುದ್ಧಗಳು- 2001ರಲ್ಲಿ ಅಫಘಾನಿಸ್ತಾನ, 2003ರಲ್ಲಿ ಇರಾಕ್, 2006ರಲ್ಲಿ ಲೆಬನಾನ್, 2011ರಲ್ಲಿ ಸಿರಿಯಾ, 2014ರಲ್ಲಿ ಮತ್ತೆ ಇರಾಕ್, 2015ರಲ್ಲಿ ಯೆಮೆನ್-ಇವೆಲ್ಲವೂ ಅನುದ್ದೇಶಿತವಾಗಿ ಇರಾನ್ ಮತ್ತು ಅದರ ಮಿತ್ರ ಪಕ್ಷಗಳನ್ನು ಗಟ್ಟಿಗೊಳಿಸಿವೆ. ಇರಾನ್ ಹೌಥಿಗಳ ಮೂಲಕ ಗಳಿಸಿರುವ ದಾಳಿಯ ಶಕ್ತಿಯು ಮುಂದೆ ಈಗ ಮುಂದುವರೆಯುತ್ತಿರುವ ಸಿರಿಯಾ, ಲೆಬನಾನ್ ಮತ್ತು ಇರಾಕ್ ಯುದ್ಧಗಳಲ್ಲಿ ಪಾಲುದಾರರಾಗಿರುವ ಇಸ್ರೇಲ್ ಮತ್ತು ಟರ್ಕಿಯನ್ನು ಎಚ್ಚರಿಕೆಯ ಸ್ಥಿತಿಯಲ್ಲಿ ಇಡಲಿದೆ.

ಈಗ ಸೌದಿಯು ರಾಜಕೀಯವಾದ ಶಾಂತಿ ಸಂಧಾನಕ್ಕೆ ಒಪ್ಪಬೇಕಾದ ಅನಿವಾರ್ಯತೆಗೆ ಸಿಕ್ಕಿದೆ. ಪರಿಹಾರಧನ ನೀಡಬೇಕೆಂಬ ಯೆಮೆನ್ ಬೇಡಿಕೆಗೂ ಬಲಬರಲಿದೆ. ಆದರೆ, ಈಗಾಗಲೇ ಕಚ್ಚಾ ತೈಲದ ಬೆಲೆ ಕುಸಿತದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸೌದಿ ಅರೇಬಿಯಾ ಈ ಯುದ್ಧವನ್ನು ಮುಂದುವರಿಸುವುದು ಕಾರ್ಯಸಾಧುವಲ್ಲ ಎಂಬ ಲಕ್ಷಣಗಳು ಈಗಾಗಲೇ ಕಂಡುಬರುತ್ತಿರುವುದರಿಂದಾಗಿ ಹೌಥಿಗಳ ಬೇಡಿಕೆಗಳಿಗೆ ಒಪ್ಪದೇ ಬೇರೆ ದಾರಿಯಿಲ್ಲ.

ಯುದ್ಧ ಮತ್ತು ಪ್ರತಿದಾಳಿಯ ಮುಖಾಂತರ ಹೌಥಿಗಳು ಸಾಧಿಸಿರುವ ಈ ಗೆಲುವಿನಿಂದಲಾದರೂ, ಆ ಜಾಗದಲ್ಲಿ ಶಾಂತಿ ನೆಲೆಸಿದರೆ ಮನುಕುಲ ಸ್ವಲ್ಪವಾದರೂ ನಿಟ್ಟುಸಿರೆಳೆಯಬಹುದು. ಇಲ್ಲವಾದರೆ, ಮತ್ತಷ್ಟು ರಕ್ತಪಾತ ಹಾಗೂ ಅನಿಶ್ಚಿತತೆ ಆ ಭಾಗವನ್ನು ಕಾಡುವುದರಲ್ಲಿ ಸಂದೇಹವೇ ಇಲ್ಲ.

ಅನುವಾದ: ನಿಖಿಲ್ ಕೋಲ್ಪೆ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here