Homeಅಂಕಣಗಳುದುಡಿಮೆ ಮತ್ತು ಚೆಲುವು

ದುಡಿಮೆ ಮತ್ತು ಚೆಲುವು

- Advertisement -
- Advertisement -

ರಹಮತ್ ತರೀಕೆರೆ |

ಭಾರತದ ಬೇರೆಬೇರೆ ಪ್ರದೇಶಗಳಿಂದ ಹಿಮಾಲಯ ಚಾರಣಕ್ಕೆ ಜನ ಬರುತ್ತಾರೆ. ಪರ್ವತ ಪ್ರದೇಶಗಳಲ್ಲಿ ತಿರುಗಾಟಕ್ಕೆ ಕರೆದೊಯ್ಯುವ ಮೊದಲು ಅವರ ದೇಹವು ಹಿಮಾಲಯದ ಹವಾಮಾನಕ್ಕೆ ಒಗ್ಗಿಕೊಳ್ಳಲು ಅನುವಾಗುವಂತೆ ಬೇಸ್‍ಕ್ಯಾಂಪಿನಲ್ಲಿ ಎರಡು ದಿನ ಇರಿಸಿಕೊಳ್ಳುವರು. ಆಗ ಹೊಳೆಯನ್ನು ಹಗ್ಗದ ಮೂಲಕ ದಾಟುವುದು, ಬಂಡೆ ಏರುವುದು ಇಳಿಯುವುದು, ದೌಡುವುದು ಇತ್ಯಾದಿ ತರಬೇತಿ-ವ್ಯಾಯಾಮ ಇರುತ್ತದೆ. ಸಂಜೆಗೆ, ಹಿಮಾಲಯದ ಹವಾಮಾನ, ಜೀವನಕ್ರಮ, ಸಂಸ್ಕøತಿ, ಕಾಡಿನ ವಿಶಿಷ್ಟತೆ ಪರಿಚಯಿಸುವ ತಜ್ಞ ಉಪನ್ಯಾಸಗಳು. ಕುಲು ಬೇಸ್‍ಕ್ಯಾಂಪಿನಲ್ಲಿ ಅಂತಹದೊಂದು ಉಪನ್ಯಾಸ ಮಾಡುತ್ತ ಕ್ಯಾಂಪ್ ಆಫೀಸರ್- ಮಾಜಿ ಸೇನಾಧಿಕಾರಿ- ಹೇಳಿದ: “ನೋಡಿ, ಹಿಮಾಲಯದ ಹವಾಮಾನ ಮಹಿಳೆಯಂತೆ ಚಂಚಲ. ನಂಬಲನರ್ಹ. ಯಾವಾಗಲೂ ಮಳೆ-ಹಿಮಪಾತ ಆಗಬಹುದು. ನೀವು ಸಿದ್ಧತೆ ಮಾಡಿಕೊಂಡಿರಬೇಕು’’. ಆಗ ತಂಡದಲ್ಲಿದ್ದ ಹುಡುಗರು ಹುಡುಗಿಯರತ್ತ ನೋಡುತ್ತ ಹೋ ಎಂದು ಕೇಕೆ ಹಾಕಿದರು. ಈ ಹೋಲಿಕೆಯನ್ನು ಆಫಿಸರ್ ತನ್ನ ಹಲವಾರು ಭಾಷಣಗಳಲ್ಲಿ ಈ ಹಿಂದೆ ಹೇಳಿರಬೇಕು. ಕೇಕೆ ಪ್ರತಿಕ್ರಿಯೆ ಪಡೆದಿರಬೇಕು. ನಮ್ಮ ಗುಂಪಲ್ಲಿದ್ದ ಮಹಿಳೆಯರು ಈ ಕೂಡಲೇ ಪ್ರತಿಭಟಿಸಿದರು. ಚಂಚಲ ಎಂಬುದು ಆಕೆ ಒಬ್ಬ ಗಂಡಸಿಗಷ್ಟೆ ನಿಷ್ಠಳಾಗಿರಬೇಕು ಎಂಬ ದನಿಯನ್ನು ಒಳಗೊಂಡಿತ್ತಷ್ಟೆ. ನಾವೂ ಪ್ರತಿಭಟನೆಯನ್ನು ಬೆಂಬಲಿಸಿದೆವು. ಆಫಿಸರನು ಪ್ರತಿಭಟನೆಯನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ. ತಮಾಶೆಯಲ್ಲಿ ತೇಲಿಸಿದ. ಕಾರಣ, ಸೈನಿಕ ಸಂಸ್ಕøತಿಯಲ್ಲಿ ಸಹಜವಾಗಿಯೆ ಈ ಬಗೆಯ ಸೆಕ್ಸಿಸ್ಟ್ ಜೋಕುಗಳಿರುವುದು.
ಈ ಸ್ತ್ರೀಸಂಶಿತ ನುಡಿಗಟ್ಟಿಗೆ ಚಾರಿತ್ರಿಕ ಕಾರಣಗಳಿವೆ. ಜಗತ್ತಿನ ಎಲ್ಲ ಸಮಾಜಗಳಲ್ಲೂ ಪಶುಪಾಲಕ, ಬೇಟೆಗಾರ, ವ್ಯಾಪಾರಿ ಮತ್ತು ಸೈನಿಕ ಸಂಸ್ಕøತಿಗಳು ಸ್ತ್ರೀಶಂಕೆಯ ಅಂಶವನ್ನು ಹೆಚ್ಚು ಒಳಗೊಂಡಿವೆ. ಮಾದೇಶ್ವರ ಕಾವ್ಯದಲ್ಲಿ ಬೇಟೆಗೆ ಹೋಗುವ ಮುನ್ನ ಸಂಕಮ್ಮನಿಂದ ವಚನ ಪಡೆಯುವುದು ಇದಕ್ಕೆ ಸಾಕ್ಷಿ. ವೃತ್ತಿಯ ನಿಮಿತ್ತ ಕುಟುಂಬವನ್ನು ಬಿಟ್ಟು ದೂರ ಮತ್ತು ಬಹುಕಾಲ ಹೋಗುವ ಎಲ್ಲ ಕಸುಬುಗಳೂ ಈ ಶಂಕೆಯನ್ನು ರೂಢಿಸಿಕೊಂಡಿರುತ್ತವೆ. ಇವಕ್ಕೆ ಹೋಲಿಸಿದರೆ ಗಂಡುಹೆಣ್ಣು ಕೂಡಿ ದುಡಿವ ನೇಕಾರಿಕೆ, ಕೃಷಿ, ಕುಲಕಸುಬುಗಳ ಸಮುದಾಯಗಳಲ್ಲಿ ಸ್ತ್ರೀಶಂಕೆಯ ಅಂಶ ಕಡಿಮೆ. ಸೈನಿಕ ಸಂಸ್ಕøತಿಯಂತೂ ಹೆಣ್ಣನ್ನು ರಕ್ಷಿಸುವ ಇಲ್ಲವೇ ಭೋಗಿಸುವ ಎರಡೇ ದೃಷ್ಟಿಕೋನದಲ್ಲಿ ನೋಡುತ್ತದೆ. ನಮ್ಮ ವೀರಗಲ್ಲು-ಶಾಸನಗಳು ಕೂಡ ಹೆಣ್ಣನ್ನು ರಕ್ಷಿಸುತ್ತ ಮರಣ ಅಪ್ಪುವನನ್ನು ವೀರ ಎನ್ನುತ್ತದೆ. ಯುದ್ಧದಲ್ಲಿ ಮಡಿದವರಿಗೆ ರಂಭೆ ಊರ್ವಶಿಯರ ಭೋಗ (ಜಿತೇನ ಲಭ್ಯತೇ ಲಕ್ಷ್ಮೀ ಮೃತೇನಾಪಿ ಸುರಾಂಗನಾ) ಸಿಗುತ್ತದೆ ಎನ್ನುತ್ತವೆ. ಸೈನ್ಯವು ನಾಗರಿಕ ಸಮಾಜದೊಳಗೆ ಪ್ರವೇಶಿಸಿದಾಗೆಲ್ಲ ಹೆಣ್ಣನ್ನು ಬಲಾತ್ಕರಿಸುವ, ಭೋಗಕ್ಕೆ ಒಳಪಡಿಸುವ ಘಟನೆಗಳು ಘಟಿಸುವುದನ್ನು ಎಲ್ಲ ದೇಶದ ಚರಿತ್ರೆಗಳು ದಾಖಲಿಸುತ್ತವೆ. ಯಾವುದೇ ರಾಜ್ಯವನ್ನು ಗೆದ್ದಾಗ ವಿಜೇತ ಸೈನ್ಯ ಮಾಡುತ್ತಿದ್ದ ಮೊದಲ ಕೆಲಸ, ಸೆರೆಸಿಕ್ಕ ಹೆಣ್ಣುಗಳನ್ನು ಹಂಚಿಕೊಳ್ಳುವುದು. ಆದ್ದರಿಂದ ಸ್ತ್ರೀಯರನ್ನು ಕುರಿತ ಧೋರಣೆ ಆಫಿಸರನ ವೈಯಕ್ತಿಕ ಸಮಸ್ಯೆಯಲ್ಲ. ಸೈನಿಕ ಸಂಸ್ಕøತಿಯಲ್ಲೇ ಇರುವಂಥದ್ದು.
ಈ ಪ್ರಕರಣವು ಹಿಮಾಲಯದಲ್ಲಿ ಮಹಿಳೆಯರನ್ನು ಕಾಣುವ ನನ್ನ ನೋಟಕ್ರಮವನ್ನೇ ಪ್ರಭಾವಿಸಿತು. ವಾಸ್ತವವಾಗಿ ಆಫೀಸರನ ಗ್ರಹಿಕೆಗೆ ವಿರುದ್ಧವಾಗಿ ಹಿಮಾಲಯದಲ್ಲಿ ಸ್ತ್ರೀಲೋಕವಿತ್ತು. ಅಲ್ಲಿ ಹೋಗುವ ಹೊರಗಿನ ವ್ಯಕ್ತಿಗೆ ಮಹಿಳೆಯರ ಶ್ರಮಸಂಸ್ಕøತಿ ಹೆಜ್ಜೆಹೆಜ್ಜೆಗೆ ಕಾಣುತ್ತದೆ. ಅವರು ತೇನಸಿಂಗರಂತೆ ಹಿಮಶಿಖರಗಳನ್ನು ಹತ್ತಿ ದಾಖಲೆ ನಿರ್ಮಿಸದೆ ಇರಬಹುದು, ಆದರೆ ಹಿಮಾಲಯದ ಹೊಲಗದ್ದೆಗಳಲ್ಲಿ ದನಕರು ಮೇಯಿಸುವಾಗ, ಹುಲ್ಲು ಕಟ್ಟಿಗೆ ತರುವಾಗ, ಅವರು ತೇನಸಿಂಗ್ ಬಚೇಂದ್ರಿಪಾಲರೇ. ಹಿಮಾಲಯದ ಏರಿಳಿತದ ಭೌಗೋಳಿಕತೆ, ನಾಟಕೀಯ ಹವಾಮಾನಗಳೇ ಅವರ ದೇಹ ಮತ್ತು ಮನಸ್ಸುಗಳನ್ನು ಸಮರಧೀರಗೊಳಿಸಿವೆ. ಬೆಟ್ಟಪ್ರದೇಶದಲ್ಲಿ ಮಹಿಳೆಯೇ ಕುಟುಂಬದ ಕೇಂದ್ರ. ಎಂತಲೇ ಅಲ್ಲಿ ಬಹುಪತಿತ್ವವೂ ಇದೆ. ತನ್ನ ಇಚ್ಛೆಯನರಿತ ಗಂಡನ್ನು ವರಿಸುವ ಸ್ವಾತಂತ್ರ್ಯವಿದೆ. (ಇದೂ ಪುರುವಾದಿಗಳ ಅಸೂಯೆಗೆ ಕಾರಣವಾಗಿರಬಹುದು.)
ಹಿಮಾಲಯದ ಮಹಿಳೆಯರು ಮಹಾ ದುಡಿಮೆಗಾರರು. ಬೆನ್ನಮೇಲೆ ಹೊರೆಯಿಲ್ಲದ ಹೆಣ್ಣೇ ಇಲ್ಲವೆನ್ನಬಹುದು. ಬೆನ್ನು ಹೊರುವ ಕೆಲಸಕ್ಕೆ ಚೆನ್ನಾಗಿ ಪಳಗಿವೆ. ಹೊಲಕ್ಕೆ ಗೊಬ್ಬರ ಹೊರುವ, ಗೋದಿs ಸಿವುಡುಗಳನ್ನು ಹೊಲದಿಂದ ಕಣಕ್ಕೆ ಅಡಕುವ, ಸೇಬು, ಸೌದೆ ಹುಲ್ಲುಹೊರೆ ಹೊತ್ತು ಪರ್ವತ ಇಳಿಯುವ ಮಹಿಳೆಯರು ಸಾಮಾನ್ಯವಾಗಿ ಕಾಣುವರು. ಮಲಾನಾಕ್ಕೆ ಅವರು 12 ಕಿಮೀ ದೂರದಿಂದ ತಂಪುಪಾನೀಯದ ಕೇಸುಗಳನ್ನು ಹೊತ್ತು ತರುತ್ತಿದ್ದರು. ಎಮ್ಮೆ ದನ ಕುದುರೆ ಕಾಯುತ್ತ ನಿಂತಿರುವ ಮಹಿಳೆಯರು ಎಲ್ಲಿ ಬೇಕಲ್ಲಿ ಕಾಣುವರು. ಹೀಗೆ ಕಾಯುತ್ತಿರುವಾಗಲೇ ಉಣ್ಣೆನೂಲಿನ ಚೆಂಡನ್ನು ಸಿಕ್ಕಿಸಿಕೊಂಡು ಹೆಣಿಗೆ ಮಾಡುತ್ತಿರುವರು. ಹುಲ್ಲು ಸೌದೆ ಹೊತ್ತು, ಲಯಬದ್ಧವಾಗಿ ಜೀಕುತ್ತ ಸಾಲುಗಟ್ಟಿ ಬರುವುದು ಇರುವೆಗಳು ಅಕ್ಕಿಕಾಳು ಹೊತ್ತು ಗೂಡಿಗೆ ಹೋಗುವುದನ್ನು ನೆನಪಿಸುತ್ತದೆ. .
ನದಿತೀರದ ಹೊಲಗಳಲ್ಲಿ ಕೆಲಸ ಮಾಡುವ ನೂರಾರು ಮಹಿಳೆಯರನ್ನು ನೋಡಬಹುದು. ಬಟಾಣಿ ಗೋಧಿ ಅಲೂಗೆಡ್ಡೆ ಭತ್ತ ಬೆಳೆದ ಹೊಲದಲ್ಲಿ ಕಳೆಕೀಳುತ್ತ ಕೈಗುದ್ದಲಿಯಿಂದ ಅಗೆಯುತ್ತ ಸೊಪ್ಪುŒ ತರಕಾರಿ ಬಿಡಿಸುತ್ತ, ಅವರು ಇರುವರು. ಇಲ್ಲಿನ ಬೇಸಾಯ ಹೆಂಗಸರ ಶ್ರ್ರಮದಿಂದ ನಿಂತಿದೆ. ಉಂಕಿಮಠದ ಸಮೀಪ ಗದ್ದೆಯ ಕೆಲಸ ಮಾಡಿ ವಿಶ್ರಾಂತಿಗಾಗಿ ಬಾಳೆ ಗಿಡದಡಿ ಸುಧಾರಿಸಿಕೊಳ್ಳುತ್ತಿದ್ದ ಮಹಿಳೆಯರ ಚಿತ್ರವನ್ನು ಸೆರೆಹಿಡಿಯಲು ಯತ್ನಿಸಿದೆ. ಅವರು ನಾಚಿಕೆಯಿಂದ ಗಿಡದ ಮೆರೆಗೆ ಸರಿದರು. ಒಮ್ಮೆ ಪಾರ್ವತಿ ನದಿಕಣಿವೆಯಲ್ಲಿ ಬರುವ ಫುಲಾನ್ ಎಂಬ ಹಳ್ಳಿಯಲ್ಲಿ ನಮ್ಮ ರಾತ್ರಿ ವಸತಿಯಿತ್ತು. ಹಗಲು ಹದಿನೈದು ಕಿಮೀ ನಡಿಗೆಯಾಗಿದ್ದರಿಂದ, `ಮೈಯೆಭಾರ ಮನವೆ ಭಾರ’ವಾಗಿತ್ತು. ಹೆಣಗಳಂತೆ ಬಿದ್ದುಕೊಂಡೆವು. ಗಾಜಿನ ಕಿಟಕಿಯಿಂದ ಮಂದವಾದ ಬೆಳಕು ನುಗ್ಗುವಾಗಲೇ ಎಂದು ತಿಳಿಯಿತು ಇರುಳು ಮುಗಿಯಿತೆಂದು. ಬೆಳಿಗ್ಗೆಯೆ ಎದ್ದು ಪಾರ್ವತಿ ಕಣಿವೆಯ ಸೂರ್ಯೋದಯ ನೋಡಲು ಮನಸ್ಸಾಯಿತು. ದೇಹ ಏಳಲು ನಿರಾಕರಿಸುತ್ತಿತ್ತು. ಸೇಬುತೋಟದಲ್ಲಿದ್ದ ಬುಲ್‍ಬುಲ್‍ಗಳ ಚೀಚೀಕ್ ಆಲಿಸುತ್ತ, ಸೂರನ್ನು ನೋಡುತ್ತ ಬಿದ್ದುಕೊಂಡಿದ್ದೆ. ತೋಟದಲ್ಲಿ ಯಾರೊ ಗುದ್ದಲಿ ಸದ್ದು ಲಯಬದ್ಧವಾಗಿ ಕೇಳಿಸಿತು. ಕಿಟಕಿಯಲ್ಲಿ ಇಣುಕಿದೆ. ಮಹಿಳೆ ಸೇಬುತೋಟದ ಬದುವಿನ ಅಂಚನ್ನು ಸವರುತ್ತಿದ್ದಳು.
ಹಿಮಾಲಯದ ಹೊಲಗಳಲ್ಲಿ ಗಂಡಸರನ್ನು ಕಂಡಿದ್ದು ಕಡಿಮೆ. ಹಂಪಿ ಸೀಮೆಯ ಹಳ್ಳಿಗಳಲ್ಲಿ ಇರುವಂತೆ, ಇಲ್ಲಿಯೂ ಕಟ್ಟೆಗಳ ಮೇಲೆ ಕುಳಿತ ಗಂಡಸರುಂಟು. ಹಿಮಾಲಯದ ಹಿಡುವಳಿಗಳು ಬಹಳ ಸಣ್ಣವು. ಅಲ್ಲಿ ಬಹಳ ಜನರಿಗೆ ಕೆಲಸವಿರುವುದಿಲ್ಲ. ಕಡಿದಾದ ಜಾಗದಲ್ಲಿ ದನಕೋಣ ಹೂಡಿ ನೇಗಿಲು ಮಾಡುವುದು ಕಷ್ಟ. ಹೀಗಾಗಿ ಕುರುಪಿ ಕೈಗುದ್ದಲಿಗಳಲ್ಲೇ ನೆಲ ಅಗೆಯಬೇಕು. ಬೀಜ ಬಿತ್ತಬೇಕು. ಕಳೆತೆಗೆಯಬೇಕು. ಜಮೀನು ಮನೆಯಂಗಳ ಇಲ್ಲವೇ ಹಿತ್ತಿಲುಗಳೇ ಚಾಚಿಕೊಂಡಂತೆ ಲಗತ್ತಾಗಿರುತ್ತದೆ. ಹೀಗಾಗಿ ಮಹಿಳೆಯರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು, ಮರದಡಿ ಕೂರಿಸಿಯೊ ಹೊಲಗೆಲಸ ಮಾಡುತ್ತಾರೆ. ಗಂಡಸರು ಕುರಿಕಾವಲಿಗೆ ಹೋಗುವರು.
ನಗರಗಳಲ್ಲಿ ರಾತ್ರಿ ಎಂಟರ ಮೇಲೆ ಮಹಿಳೆಯರು ತಿರುಗುವುದು ಅಪಾಯಕರ ಎಂದು ಕೆಲವು ನೈತಿಕವಾದಿಗಳು ಅಪ್ಪಣೆ ಕೊಡಿಸುತ್ತಾರೆ. ಹಿಮಾಲಯದಲ್ಲಿ ನಿರ್ಜನ ಕಾಡಿನಲ್ಲೂ ಮಹಿಳೆಯರು ಏಕಾಂಗಿಯಾಗಿ ಸುತ್ತುತ್ತಾರೆ. ಅದು ಅನಿವಾರ್ಯ ಕೂಡ. ಈ ಮಹಿಳೆಯರು ದುಡಿಮೆಗಾರರು ಮಾತ್ರವಲ್ಲ, ಧೀರರು ಕೂಡ. ನಾವು ಪಿನ್ನಿ ಎಂಬ ಹಳ್ಳಿಯ ಹೊರಗೆ, ದುರ್ಗಮವಾದ ಪರ್ವತದ ಕಿಬ್ಬದಿಯಲ್ಲಿ ಹೊಳೆ ಹುಟ್ಟುವ ಜಾಗದಲ್ಲಿ ಬೀಡುಬಿಟ್ಟಿದ್ದೆವು. ಸೂರ್ಯ ಹುಟ್ಟುವುದನ್ನು ನೋಡಲೆಂದು ಎದ್ದರೆ, ಗೋಡೆಯಂತೆ ನಮ್ಮೆದುರಿಗೆ ನಿಂತಿರುವ ಕಲ್ಲಿನ ಪಾಶ್ರ್ವ ಮಾತ್ರ ಕಂಡಿತು. ಅದರ ಮೇಲೆ ಗಿಡಮರಗಳು ಬೆಳೆದಿದ್ದವು. ಅವಕ್ಕೆ ನೀರು ಹೇಗೆ ಸಿಗುತ್ತದೆ, ಬೇರು ಹೇಗೆ ಬಿಡುತ್ತವೆ ಎಂದು ಪರಿಶೀಲಿಸುತ್ತಿದ್ದೆ. ಒಬ್ಬಾಕೆ ಮೇಕೆ ಅಟ್ಟಿಕೊಂಡು ಹಳ್ಳಿಯ ಕಡೆಯಿಂದ ಬಂದಳು. ದುರ್ಗಮವಾದ ಆ ಪರ್ವತದ ಸಂದಿಗೊಂದಿಗಳಲ್ಲಿ ಹತ್ತಿ ಹಾದಿ ಹಿಡಿದು ಮೇಕೆಗಳ ಸಮೇತ ನೋಡುತ್ತಲೇ ಮರೆಯಾದಳು.
ನಗರೋಣಿಯಲ್ಲಿ ಕಂಡ ಒಂದು ರೈತ ದಂಪತಿ- ದುರ್ಗಾದಾಸ್ ಮತ್ತು ಗೀತಾ- ಸಿನಿಮಾ ತಾರೆಯಂತೆ ಸುಂದರವಾಗಿದ್ದರು. ಅವರ ಹೊಲ ಹನ್ನೆರಡು ಸಾವಿರ ಅಡಿ ಎತ್ತರದಲಿತ್ತು. ಸುತ್ತಮುತ್ತ ಹಿಮದ ಪರ್ವತ. ನಡುವೆ ಹೊಲ- ಮನೆ. ಬೇಸಗೆಯ ನಡುಹಗಲಲ್ಲೇ ಐದು ಡಿಗ್ರಿ ಚಳಿ. ಇನ್ನು ಚಳಿಗಾಲ ಹೇಗಿದ್ದೀತು? ಪಾರ್ವತಿ ನದಿಯ ದಡದಲ್ಲಿ ಮಣಿಕರ್ಣಿಕಾಗೆ ನಡೆದು ಹೋಗುತ್ತಿರುವಾಗ ಒಂದು ಮನೆಯಂಗಳದಲ್ಲಿ ಗೋಧಿಹುಲ್ಲನ್ನು ಕೋಲುಗಳಿಂದ ಬಡಿಯುತ್ತ ಧಾನ್ಯವನ್ನು ಬೇರ್ಪಡಿಸುತ್ತಿದ್ದ ಮಹಿಳೆ ಅಪ್ರತಿಮ ಚೆಲುವೆ. ಬಾನು ಕೂಡ ಆಕೆಯನ್ನು ಕಣ್ಮಿಸುಕದೆ ನೋಡಿದಳು. ಆದರೆ ಹಾದಿಹೋಕರಾದ ನಮ್ಮತ್ತ ಆಕೆ ತಿರುಗಿಯೂ ನೋಡಲಿಲ್ಲ.
ಹಿಮಾಲಯದ ಮಹಿಳೆಯರು-ಪುರುಷರು ತಮ್ಮ ಸೌಂದರ್ಯದ ಅರಿವೇ ಇಲ್ಲದಂತೆ ಕಾಡುಹೂಗಳ ಹಾಗೆ ದುಡಿಯುತ್ತಿರುತ್ತಾರೆ. ಕೆಂಪು ಮೈಬಣ್ಣದ ಕೆಂದುಟಿಯ ಹಿಮಾಲಯದ ಸ್ತ್ರೀಯರನ್ನು ಸೇಬಿನ ಜತೆಗೆ ಹೋಲಿಸುವವರುಂಟು. ಬಣ್ಣವನ್ನು ಮಾತ್ರ ಚೆಲುವಿನ ಮಾಪಕವಾಗಿಸಿ ಹುಟ್ಟಿರುವ ಉಪಮೆಯಲ್ಲಿ ಉಪಭೋಗ ದೃಷ್ಟಿಕೋನವೂ ಇದೆ. ಹೇಳಬೇಕೆಂದರೆ, ಇಲ್ಲಿನ ಮಹಿಳೆಯರನ್ನು ಅವರÀ ದುಡಿಮೆಯೇ ಸುಂದರವಾಗಿಸಿದೆ. ಬೊಜ್ಜಿನ ಒಬ್ಬಳೇ ಮಹಿಳೆ ಕಾಣುವುದಿಲ್ಲ. ಕಣಿವೆ ಶಿಖರಗಳ ಏರುತಗ್ಗುಗಳಲ್ಲಿ ಓಡಾಡುವ ಯಾರಿಗೂ ಮೈಬರುವುದು ಸಾಧ್ಯವಿಲ್ಲ. ಒಮ್ಮೆ ಲೋಹಿಯಾ ಹಿಮಾಲಯ ಸೀಮೆಯಲ್ಲಿ ಓಡಾಡುವಾಗ, ಭಾರತದ ಕೊನೆಯ ಹಳ್ಳಿ ಮಾನಾಕ್ಕೆ ಹೋದ ಬಗ್ಗೆ ಬರೆಯುತ್ತಾರೆ. ಅಲ್ಲಿ ಅವರನ್ನು ದಾಟಿಕೊಂಡು ಭಾರಹೊತ್ತ ಒಬ್ಬ ಮಹಿಳೆ ಇಳಿದುಹೋಗುತ್ತಾಳೆ. ಅವಳ ತೋಳು ದೇಹದ ಮಾಟ ನಡಿಗೆಯನ್ನು ನೋಡಿ ಅವಳೊಬ್ಬ ಸುಂದರಿ ಇರಬಹುದು ಎಂದು ಅವರು ಊಹಿಸುತ್ತಾರೆ. ಒಮ್ಮೆ ಆಕೆ ಹಿಂತಿರುಗಿ ನೋಡಲಿ ಎಂದೂ ತವಕಿಸುತ್ತಾರೆ. ಆಕೆ ತಿರುಗಿವುದಿಲ್ಲ. ಬೆನ್ನಮೇಲೆ ಭಾರಹೊತ್ತ ಆಕೆ ತಿರುಗಿ ನೋಡುವುದೂ ಕಷ್ಟ. ಲೋಹಿಯಾ ದುಡಿಮೆಯೇ ಅವಳ ಆರೋಗ್ಯಕ್ಕೆ ಕಾರಣವಾಗಿದೆ ಎಂದು ತೀರ್ಮಾನಿಸುತ್ತಾರೆ.
ಮಹಿಳಾ ದುಡಿಮೆ ವಿಷಯದಲ್ಲಿ ದಾರುಣ ದೃಶ್ಯಗಳೂ ಕಾಣುತ್ತವೆ. ರೋಹಟಾಂಗ್ ಪಾಸಿನಲ್ಲಿ ಒಬ್ಬ ಮಹಿಳೆ, ರಸ್ತೆಯ ಮೇಲಿನ ಹಿಮವನ್ನು ಗೋರಿ ಪಕ್ಕಕ್ಕೆ ಎಸೆಯುತ್ತಿದ್ದಳು. ಅವಳ ಸೊಂಟದಲ್ಲಿ ಬಟ್ಟೆಯ ಜೋಲಿಯಲ್ಲಿ ಕಟ್ಟಿದ ವರ್ಷದ ಕೂಸಿತ್ತು. ಅದು ಜೋಲಿಯ ಹೊರಗೆ ಟೊಪ್ಪಿಗೆಯ ಅಂಚಿನ ಮೊಗದಲ್ಲಿ ಪಿಳಿಪಿಳಿ ಕಣ್ಬಿಟ್ಟುಕೊಂಡು ಹೋಗಿಬರುವ ಪ್ರವಾಸಿಗರನ್ನು ಬೆರಗಿನಿಂದ ನೋಡುತ್ತಿತ್ತು. ಮಂಕಿಕ್ಯಾಪು ಕೈಗವಸು, ಓವರ್ ಕೋಟುಗಳಿಂದ ಅಲಂಕೃತವಾಗಿ ಹಿಮದಾಟಕ್ಕೆ ಹೋದ ನಮಗೆ ನಾಚಿಕೆ ಆಗುತ್ತಿತ್ತು. ಯಮುನೋತ್ರಿಯ ಕಾಡುಗಳಲ್ಲಿ ನಾವು ಭೇಟಿಯಾದ ಅಲೆಮಾರಿ ಗುಜ್ಜರರದು ಬೇರೆಯೇ ಕತೆ. ನೀವು ಇಷ್ಟೊಂದು ಅಲೆದಾಡುತ್ತೀರಿ. ನಿಮಗೆ ಸವಾಲಿನಂಥ ಕಷ್ಟ ಯಾವುದು ಎಂದು ಕೇಳಿದೆ. ನಾನು ಕಾಡುಪ್ರಾಣಿಗಳು ಹಿಮಪಾತ ಚಳಿ ಆಹಾರಧಾನ್ಯ ಹೇಳಬಹುದು ಎಂದು ಊಹಿಸಿದ್ದೆ. ಅವರು ತಮ್ಮ ಮಹಿಳೆಯರನ್ನು ನೆಲೆನಿಂತ ಹಳ್ಳಿಗರು ಅಪಹರಿಸುವುದು ಎಂದರು. ಅವರ ಒಬ್ಬ ಬಾಲೆಯನ್ನು ಆಕೆ ಎಮ್ಮೆ ಕಾಯಲು ಹೋದಾಗ ಸ್ಥಳೀಯ ಹುಡುಗನೊಬ್ಬ ಪ್ರೀತಿಸಿದನಂತೆ. ಅವನು ದುಷ್ಟನಲ್ಲ. ಅವಳನ್ನು ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡನಂತೆ. ಆದರೆ ಗುಜ್ಜರರು ಹುಡುಗನ ಮನೆಗೆ ಮುತ್ತಿಗೆ ಹಾಕಿದರು. ಪಂಚಾಯಿತಿ ನಡೆಸಿ ದಂಡ ಹಾಕಿದರು. ದಂಡದ ಹಣವನ್ನೂ ಹುಡುಗಿಯನ್ನೂ ತೆಗೆದುಕೊಂಡು ಬಂದರು. ಮುಂದೆ ಏನಾಯಿತೊ ತಿಳಿಯದು. ಬುಡಕಟ್ಟು ಕುಲದ ನ್ಯಾಯಗಳೇ ಇಂತಹವು. ತಮ್ಮ ಹೆಣ್ಣುಗಳು ನೆಲೆನಿಂತವರ ಪಾಲಾಗುವುದನ್ನು ಅವು ಒಪ್ಪುವುದಿಲ್ಲ. ಆದರೆ ಆ ಹುಡುಗಿಯರಿಗೆ ಪ್ರಾಣಿಗಳ ಹಿಂದೆ ಕಾಡಿನಲ್ಲಿ ತಿರುಗಿ ಸಾಕಾಗಿರುತ್ತದೆಯೋ ಏನೊ? ಜಮ್ಮುವಿನಲ್ಲಿ ಗುಜ್ಜರ ಬಾಲೆಯ ಮೇಲೆ ನಡೆದ ಅತ್ಯಾಚಾರ ಮಾತ್ರ ಇವೆಲ್ಲಕ್ಕಿಂತ ಭಿನ್ನ. ಅದು ಹಿಮಾಲಯದ ಬಿಳಿಬರ್ಫದ ಮೇಲೆ ಬಿದ್ದ ರಕ್ತದ ಕಲೆ.
ತಿನ್ನುವವರ ಹೆಸರು ಕಾಳಮೇಲೆ ಬರೆದಿರುತ್ತದೆಯಂತೆ. ಬೆಳೆದವರ ಹೆಸರೇನಾದರೂ ಕಾಳಲ್ಲಿ ಬರೆಯುವುದಾಗಿದ್ದರೆ ಅವುಗಳಲ್ಲಿ ಬಹುಪಾಲು ಹಿಮಾಲಯದ ಮಹಿಳೆಯರ ಹೆಸರಲ್ಲಿರುತ್ತಿದ್ದವು. ನಮಗೆ ಬರುವ ಕೇಸರಿಯ ವರ್ಣದಲ್ಲಿ ಸೇಬಿನ ಸಕ್ಕರೆಯ ರುಚಿಯಲ್ಲಿ ಸಹ ಹಿಮಾಲಯದ ಮಹಿಳೆಯರ ಶ್ರಮದ ಪಾಲಿದೆ. ಇದನ್ನು ಅರಿಯದ ಜನ, ಹವಾಮಾನವನ್ನು ಮಹಿಳೆಯರ ಚಂಚಲತೆಗೆ ಹೋಲಿಸುವರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....