ಅಳಿದ ಮೇಲೂ ಇಲ್ಲಿ ಉಳಿಯುವುದಿದೆ…

| ಅಕ್ಷತಾ ಹುಂಚದಕಟ್ಟೆ |

`ಆಗೊಮ್ಮೆ ಈಗೊಮ್ಮೆ’ ಗಿರೀಶ ಕಾರ್ನಾಡರ ಲೇಖನಗಳ ಸಂಗ್ರಹದಲ್ಲಿ `ಅಳಿದ ಮೇಲೆ’ ಎಂಬೊಂದು ಲೇಖನ ಇದೆ. ಆ ಬರೆಹ ಹೀಗೆ ಸುರುವಾಗುತ್ತದೆ. `ನನ್ನ ಕಡೆಗೆ ಕಣ್ಣು ಹಾಯಿಸಿದಾಗಲೆಲ್ಲ ರಿಜವಿಯ ಕಣ್ಣಲ್ಲಿ ಒಂದು ತುಂಟ ನಗು ಕುಣಿಯುತ್ತಿತ್ತು’. ರಿಜವಿ ಮುಂಬೈ ಮಹಾನಗರದ ಒಬ್ಬ ಟೆಲಿಫಿಲ್ಮ್ ನಿರ್ದೇಶಕ. ರಿಜವಿಯ ಅಣ್ಣ ಭಾಷಾಂತರಕಾರ ಅವರು ಉರ್ದುವಿಗೆ ಅನುವಾದಿಸಿದ ಕಾರಂತರ `ಅಳಿದ ಮೇಲೆ’ ಕಾದಂಬರಿಯನ್ನು ಓದಿ ರಿಜವಿ ಹುಚ್ಚಾಗಿ ಬಿಟ್ಟಿದ್ದಾರೆ.. ಅವರಿಗೆ ಅದನ್ನು ಟೆಲಿಫಿಲ್ಮ್ ಮಾಡಬೇಕೆಂಬ ಹುಕ್ಕಿ ಬಂದುಬಿಟ್ಟಿದೆ. ಕಾದಂಬರಿಯಲ್ಲಿ ಬರುವ ಕಾರಂತರ ಪಾತ್ರಕ್ಕೆ ಗಿರೀಶ್ ಕಾರ್ನಾಡರನ್ನು, ಯಶವಂತರಾಯನ ಪಾತ್ರಕ್ಕೆ ಅನಂತ್ ನಾಗ್ ಅವರನ್ನು ಮನಸಿನಲ್ಲಿಯೇ ನಿಕ್ಕಿ ಮಾಡಿಕೊಂಡು ಬಂದು ಕಾರ್ನಾಡರನ್ನು ಕಾಣುತ್ತಾರೆ. ಮೊದಲಿಗೆ ತನ್ನ ಡಿಟೆಕ್ಟಿವ್ ಧಾರವಾಹಿಯೊಂದರಲ್ಲಿ ಪಾತ್ರ ವಹಿಸಲು ಕಾರ್ನಾಡರನ್ನು ಒಪ್ಪಿಸಿ ನಂತರ `ಅಳಿದಮೇಲೆ’ ವಿಷಯ ಪ್ರಸ್ತಾಪಿಸುತ್ತಾರೆ. ಬಹಳ ಇಂಟ್ರೆಸ್ಟಿಂಗ್ ಸಂಗತಿ ಎಂದರೆ ಉರ್ದುವಿನಲ್ಲಿ ಕಾದಂಬರಿ ಓದಿದ್ದರಿಂದ ರಿಜವಿಗೆ ಅದರ ಕನ್ನಡ ಹೆಸರು ಗೊತ್ತಿಲ್ಲ. ಕಾರ್ನಾಡರಿಗೆ ಅದರ ಉರ್ದು ಹೆಸರು ಗೊತ್ತಾಗುತ್ತಿಲ್ಲ. ರಿಜವಿ ಕಥೆಯ ಸಾರಾಂಶ ಹೇಳಿದಾಗ ಕಾರ್ನಾಡರು ಅದನ್ನು `ಅಳಿದ ಮೇಲೆ’ ಕಾದಂಬರಿ ಎಂದು ಗುರುತು ಹಿಡಿಯುತ್ತಾರೆ. ಆ ಕೂಡಲೇ ಕಾರ್ನಾಡರ ಸಹಾಯದಿಂದ ಅನಂತನಾಗ್ ಅವರ ಒಪ್ಪಿಗೆಯು ದೊರಕುತ್ತದೆ.

ಇನ್ನು ಉಳಿದದ್ದು ಕಾರಂತರ ಒಪ್ಪಿಗೆ; ಕನ್ನಡ ಸಂಸ್ಕøತಿಯ ಗಂಧ ಗಾಳಿಯಿಲ್ಲದ, ಉತ್ತರ ಪ್ರದೇಶದ ಯಾವುದೋ ಮೂಲೆ ಹಳ್ಳಿಯಿಂದ ಮುಂಬೈಗೆ ಬಂದು ತೃತೀಯ ದರ್ಜೆ ಗಲ್ಲಾಪೆಟ್ಟಿಗೆ ಚಿತ್ರಗಳನ್ನು ನಿರ್ದೇಶಿಸಿ ಹೊಟ್ಟೆ ಹೊರಕೊಳ್ಳುತ್ತಿದ್ದ ರಿಜವಿಗೆ ಕಟ್ಟುನಿಟ್ಟಿನ ಕಾರಂತರು ಖಂಡಿತಾ ಅನುಮತಿ ನೀಡುವುದಿಲ್ಲ ಎಂದು ಕಾರ್ನಾಡರು ಎಣಿಸಿದ್ದರೆ ಅಚ್ಚರಿ ಎನಿಸುವಂತೆ ಕಾರಂತರು ರಿಜವಿಯ ಒಂದು ಪತ್ರಕ್ಕೆ `ಬನ್ನಿ ಮಾತಾಡೋಣ’ ಎಂದು ಹಸಿರು ಸಿಗ್ನಲ್ ತೋರಿಸಿದ್ದಾರೆ. ರಿಜವಿಯ ಖುಷಿಗೆ ಪಾರವೇ ಇಲ್ಲವಾಗಿದೆ.

. ಅಷ್ಟರಲ್ಲಾಗಲೇ ರಿಜವಿ ಇದಕ್ಕಾಗಿಯೇ ವಿಶೇಷ ತಾಲೀಮು ಎಂಬಂತೆ ಒಂದೂ ಬಿಡದೆ ಕನ್ನಡದ ಎಲ್ಲ ಕಲಾತ್ಮಕ ಚಿತ್ರಪಟಗಳನ್ನು ನೋಡಿ ಟಿಪ್ಪಣಿ ಮಾಡಿದ್ದರು. `ಅಳಿದ ಮೇಲೆ’ಯ ಚಿತ್ರೀಕರಣಕ್ಕೆ ಪ್ರಯೋಜನಕಾರಿ ಆಗುವಂತ ಅಂಶಗಳೇನಾದರೂ ಸಿಗುತ್ತವೆಯೇ ಎಂಬುದೆ ರಿಜವಿಯ ಅಂತಿಮ ಹುಡುಕಾಟದಂತಿತ್ತು. `ಬ್ರಾಹ್ಮಣರಲ್ಲಿ ವಿಧವೆಯರಿಗೆ ಮಂಡನ ಮಾಡುತ್ತಿದ್ದರು ಆದ್ದರಿಂದ ಈ ಚಿತ್ರದಲ್ಲಿ ಬರುವ ಇಬ್ಬರೂ ವಿಧವೆಯರ ತಲೆ ಬೋಳಿಸಬೇಕು’ ಎಂದು ಕಾರ್ನಾಡರು ಹೇಳಿದರೆ ಘಟಶ್ರಾದ್ಧ ಸಿನಿಮಾ ನೋಡಿದ ರಿಜವಿ `ಈ ಸಿನಿಮಾದಲ್ಲಿ ವಿಧವೆ ಹುಡುಗಿಗೆ ತಲೆ ಬೋಳಿಸಿಲ್ಲವಲ್ಲ’ ಎಂದು ಮರುಪ್ರಶ್ನೆ ಹಾಕುತ್ತಾರೆ. ಪ್ರತಿಬಾರಿಯು ಈ ಸಿನಿಮಾದ ಬಗ್ಗೆ ಮಾತಾಡುವಾಗ ರಿಜವಿ ಗದ್ಗದಿತರಾಗುತ್ತಾರೆ `ಕಾರಂತರು ಹಳ್ಳಿಗೆ ಬರೋದು, ಮಿತ್ರ ಯಶವಂತರಾಯನ ಸಾಕುತಾಯಿಯನ್ನು ಕಾಣೋದು! ಆ ಹಣ್ಣು ಹಣ್ಣು ಮುದುಕಿಯ ಆಸೆ ಪೂರೈಸಲಿಕ್ಕೆ ಗುಡಿಯ ಜೀರ್ಣೋದ್ದಾರ ಮಾಡುವುದು. ಒಂದೇ ಊರಿನಲ್ಲಿದ್ದರೂ ವೈರಿಗಳ ಹಾಗಿದ್ದ ಆ ಇಬ್ಬರು ಹಣ್ಣು ಮುದುಕಿಯರು ಒಂದಾಗೋದು’. ಎಂಥ ಅದ್ಭುತ ಸನ್ನಿವೇಶವಿದು ಎನ್ನುವುದನ್ನು ಅರ್ಧ ಡಜನ್ ಬಾರಿ ಕೇಳಿ ಕಾರ್ನಾಡರು `ಅದು ಕಾದಂಬರಿಯ ಪೂರ್ವಾರ್ಧ ಕಣ್ರಿ. ಯಶವಂತರಾಯರ ಹೆಂಡತಿ, ಮಕ್ಕಳನ್ನು ಕಾರಂತರು ಭೇಟಿಯಾಗುವ ದೃಶ್ಯಗಳು ಇವೆ’ ಎಂದರೆ ರಿಜವಿಯದು ಅದಕ್ಕೆ ಪೂರ್ತಿ ಮೌನ. ರಿಜವಿಯ ಪಾಲಿಗೆ ದೇವಸ್ಥಾನದ ಜೀರ್ಣೋದ್ದಾರವೇ ಕಾದಂಬರಿಯ ಕೇಂದ್ರ. ಮನುಷ್ಯನ ಸ್ಪಿರಿಚ್ಯುವಲ್ ಜಾಗೃತಿಗೆ ಅದು ಸಿಂಬಲ್ ಎನ್ನುವ ರಿಜವಿಗೆ ಟೆಲಿಫಿಲ್ಮದಲ್ಲಿ ಕೂಡಾ ಅದನ್ನೇ ಕೇಂದ್ರವಾಗಿಸುವ ಕನಸು.
ಕಾರಂತರ ಅನುಮತಿ ಪಡೆಯಲು ರಿಜವಿ ಸಾಲಿಗ್ರಾಮಕ್ಕೆ ಹೊರಡುತ್ತಾರೆ. ಕಾರ್ನಾಡರು ಯಾವುದೋ ಚಿತ್ರದ ಚಿತ್ರೀಕರಣಕ್ಕಾಗಿ ಸಿಂಗಪೂರಕ್ಕೆ. ಸಾಲಿಗ್ರಾಮಕ್ಕೆ ಹೋದ ರಿಜವಿ ಮೊದಲಿಗೆ ಬೆಂಗಳೂರಿಗೆ ಹೋಗಿ ಅನಂತನಾಗ್ ಬಳಿ ಮಾತಾಡಿಕೊಂಡು, ನಂತರ ಕಾರಂತರನ್ನು ಭೇಟಿ ಮಾಡಲು ಹೋಗುವಾಗ ಬಸ್ಸಿನಲ್ಲಿ ಮೂಲ್ಕಿ ಬಳಿ ಟ್ರಂಕ್ ಒಂದು ತಲೆ ಮೇಲೆ ಬಿದ್ದು ಸತ್ತೆ ಹೋಗುತ್ತಾರೆ. ಸಿಂಗಪೂರದಿಂದ ಮರಳಿದ ಕಾರ್ನಾಡರಿಗೆ ವಿಷಯ ತಿಳಿಯುತ್ತದೆ. ಅವರು ರಿಜವಿಯ ಮನೆ ಹುಡುಕಿಕೊಂಡು ಹೊರಡುತ್ತಾರೆ.

ಇಷ್ಟರ ನಡುವೆ ದೇಶದೆಲ್ಲೆಡೆ ಈ ಸಂದರ್ಭದಲ್ಲಿ ಅಯೋಧ್ಯೆಯ ಗದ್ದಲ ಜೋರಾಗಿ ಹಬ್ಬಿದೆ. ಗಲ್ಲಿಯೊಂದರಲ್ಲಿ ಇರುವ ಹಳೆಯ ಬಾಡಿಗೆ ಮನೆಯೊಂದರಲ್ಲಿ ಕಾರ್ನಾಡರು ರಿಜವಿಯ ಹೆಂಡತಿ ಮತ್ತು ಮಗನನ್ನು ಭೇಟಿಯಾಗುತ್ತಾರೆ. ಮೂವತ್ತು ವರುಷದಿಂದ ಇಂಡಸ್ಟ್ರಿಯಲ್ಲಿದ್ದ ರಿಜವಿ ಒಂದು ಮನೆಯನ್ನು ಮಾಡಿಕೊಳ್ಳಲಿಲ್ಲ. ಬೆಳೆದ ಮಗಳ ಮದುವೆ ಮಾಡಿಲ್ಲ, ಮನೆಯವರ ಹೊಟ್ಟೆ ಪಾಡು ಕಷ್ಟವಿದೆ ಎಂಬ ಸತ್ಯ ಕಾರ್ನಾಡರ ಕಣ್ಣಿಗೆ ರಾಚುತ್ತದೆ. ಮಗ ಯಾಕೂಬ್ `ಅಳಿದ ಮೇಲೆ ಫಿಲ್ಮ್‍ಗಾಗಿ ಫೈನಾನ್ಸ್ ಕೊಡಲು ಈ ಮೊದಲೇ ಒಪ್ಪಿದ್ದ ಕೆ.ಪಿ ಫಿಲ್ಮ್ ನವರು ತಯಾರಿದ್ದಾರೆ. ರಿಜವಿ ಈಗಾಗಲೇ ಒಂದು ಲಕ್ಷ ಅಡ್ವಾನ್ಸ್ ತೆಗೆದುಕೊಂಡು ಹಂಚಿಯು ಆಗಿದೆ. ಉಳಿದ ಹಣ ಕೊಡಲು ಅವರು ತಯಾರಿದ್ದಾರೆ’ ಎನ್ನುತ್ತಾನೆ. ರಿಜವಿಯ ಹೆಂಡತಿಯು ಮಗಳ ಮದುವೆಗಾಗಿ ನೀವು ಈ ಉಪಕಾರ ಮಾಡಿರಿ ಎಂದು ಬೇಡುತ್ತಾಳೆ. ಕಾರ್ನಾಡರು ಕಾರಂತರ ಬಳಿ ಮಾತಾಡುತ್ತಾರೆ. ಕಾರಂತರು `ತಾವು ರಿಜವಿಗೆ ಒಪ್ಪಿಗೆ ಕೊಟ್ಟು ಆಗಿದೆ. ಅವರ ಕುಟುಂಬದವರ್ಯಾರಾದರೂ ಮಾಡಬಹುದು‘ ಎನ್ನುತ್ತಾರೆ. ಯಾಕೂಬನನ್ನು ಕರೆದುಕೊಂಡು ಕೆ.ಪಿ ಪ್ರೊಡಕ್ಷನ್ ಅವರ ಬಳಿ ಹೋಗಿ ಹನ್ನೊಂದು ಲಕ್ಷ ಸಾದ್ಯವೇ ಇಲ್ಲ ಹದಿನೆಂಟು ಲಕ್ಷವಾದರೆ ಈ ಫಿಲ್ಮ್ ಮುಗಿಸಿಕೊಡುತ್ತೇವೆ ಎಂದು ಕಾರ್ನಾಡರು ಶರತ್ತು ಹಾಕುತ್ತಾರೆ. ಯಾಕೂಬನಿಗೆ ಅಪ್ಪ ಅಡ್ವಾನ್ಸ ತೆಗೆದುಕೊಂಡ ಮೇಲೆ ಅದನ್ನು ಮುಗಿಸಿಕೊಡುವುದು ತನ್ನ ಜವಾಬ್ದಾರಿ ಎಂಬ ಭಾವ. ಆದರೆ ಕಾರ್ನಾಡರಿಗೆ ಅಷ್ಟರಲ್ಲಿ ಫಿಲ್ಮ್ ಮಾಡಲು ಸಾಧ್ಯವೇ ಇಲ್ಲ. ರಿಜವಿಯಂಥ ಹುಂಬ, ಹುಚ್ಚ ಮಾತ್ರ ಇಂಥ ಕನಸಿಗೆ ರೆಕ್ಕೆಕೊಟ್ಟು ಮತ್ತಷ್ಟು ಸಾಲಗಾರನಾಗುತ್ತಾನೆ ಎಂಬ ಅರಿವಿದೆ. ಈ ಹುಡುಗನನ್ನು ಸಾಲಕ್ಕೆ ನೂಕಬಾರದು ಎಂಬ ಎಚ್ಚರವಿದೆ. ಪ್ರೊಡಕ್ಷನ್ ನವರು ಒಪ್ಪುವುದಿಲ್ಲ. ಬರಿಗೈಯಲ್ಲಿ ಮರಳುತ್ತಾರೆ.

ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಲಾಗುತ್ತದೆ. ಕಾರ್ನಾಡರ ಜೊತೆ ರಿಜವಿಯ ಸಿನಿಮಾದಲ್ಲಿ ನಟಿಸುತ್ತಿದ್ದ ರಿಜವಿಯ ಹೆಂಡತಿ ಮಾಡುತ್ತಿದ್ದ ಮಾಂಸದಡುಗೆಯನ್ನು ಇಷ್ಟಪಟ್ಟು ತಿನ್ನುತ್ತಿದ್ದ, ಆ ಕಾರಣಕ್ಕಾಗಿಯೇ ರಿಜವಿಯ ಚಿತ್ರಪಟದಲ್ಲಿ ತಾನು ಭಾಗವಹಿಸುವುದು ಎನ್ನುತ್ತಿದ್ದ ಭೂಷಣ ಫೋನ್ ಮಾಡಿ `ಒಳ್ಳೆದಾಯಿತು, ಅವರಿಗೆ ಹಾಗೆ ಬುದ್ಧಿ ಕಲಿಸಬೇಕು. ಇಲ್ಲದಿದ್ದರೆ ಕಲಿಯೋದಿಲ್ಲ ಅವರು’ ಎಂದ. ತಮ್ಮ ನೆಂಟರಿಷ್ಟರು, ಮಿತ್ರರು, ಮನೆ ಮಂದಿ ಎಲ್ಲರೂ ಭೂಷಣನ ಮಾತಿಗೆ ಹೌದೆಂದು ತಲೆದೂಗುವಂತೆ, ತನ್ನ ಹಿಂಸೆಗೆ ನಿಗುರಿ ತನ್ನ ಪರಿಸರ ವೀರ್ಯಸ್ಕಲನ ಮಾಡಿಕೊಂಡ ಹಾಗೆ ಕಾರ್ನಾಡರಿಗೆ ಕಾಣುತ್ತಿತ್ತು.
ಈ ಹೊತ್ತಲ್ಲೆ ಮತ್ತೆ ಯಾಕೂಬ ಕಾರ್ನಾಡರಿಗೆ ಫೋನ್ ಮಾಡಿದ. ಅವ್ವ ಮಾಡಿದ ಸ್ಪೆಷಲ್ ಸಿಹಿಯೊಂದಿಗೆ ಹುಡುಗ ಖುಷಿಯಿಂದ ಬಂದಿದ್ದ. ಏಕೆಂದರೆ ಪ್ರೊಡಕ್ಷನ್ ಹೌಸ್‍ನವರು ಅಳಿದ ಮೇಲೆ ಫಿಲ್ಮ್ ಮಾಡಲು ಇವರು ಹೇಳಿದ ಮೊತ್ತಕ್ಕೆ ಒಪ್ಪಿಗೆ ಕೊಟ್ಟಿದ್ದರು. ಆದರೆ ಕಾರ್ನಾಡರು ಖುಷಿಯಾಗಲಿಲ್ಲ. `ಸಾರಿ ನಾನು ಟೆಲಿಫಿಲ್ಮ್ ಮಾಡಲಿಕ್ಕೊಲ್ಲೆ. ಅಳಿದ ಮೇಲೆ ಈಗಂತೂ ಸಾಧ್ಯವಿಲ್ಲ’ ಎನ್ನುತ್ತಾರೆ. ಯಾಕೂಬನಿಗೆ ಏಕೆ ಎಂದು ಅರ್ಥವೇ ಆಗುವುದಿಲ್ಲ. ಮುಗ್ಧ ಹುಡುಗ ತಂಗಿಯ ಮದುವೆ, ಮನೆಯ ಕಷ್ಟಗಳು ಎಲ್ಲವೂ ಈ ಟೆಲಿಫಿಲ್ಮ್‍ನ ನಿರ್ಮಾಣದಿಂದ ಪರಿಹಾರವಾಗುತ್ತವೆ ಎಂದುಕೊಂಡು ಬಂದವನಿಗೆ ಕಾರ್ನಾಡರ ನಿರಾಕರಣೆಯಿಂದಾಗಿ ದಣಿದು ಕೂತ.

`ನೋಡು ನಿನ್ನ ತಂದೆ ಈ ಕತೆಗೆ ಮಾರು ಹೋದದ್ದು ಒಂದೇ ಕಾರಣಕ್ಕಾಗಿ ಚಿತ್ರಪಟದ ಕೊನೆಗೆ ಪುನರ್ಜನ್ಮ ತಾಳಿ ಬರುವ ಮಂದಿರಕ್ಕಾಗಿ ಅದು ಅವನಿಗೆ ಮಾನವೀಯತೆಯ ಪ್ರತೀಕವಾಗಿತ್ತು. ಆದರೀಗ ಮಂದಿರದ ಪುನರುತ್ಥಾನ ಎಂಬ ನುಡಿಗಟ್ಟಿನ ಅರ್ಥವೇ ಬದಲಾಗಿದೆ ಬಾಬರೀ ಮಸೀದಿ ಕೆಡವಿದ ದುರುಳರು ಈಗ ಆ ಸ್ಥಾನದಲ್ಲಿ ಮಂದಿರ ಕಟ್ಟಬೇಕೆನ್ನುತ್ತಿದ್ದಾರೆ…. ಅಯೋಧ್ಯೆಯಲ್ಲಿ ನಡೆದ ಬರ್ಬರತೆಯಿಂದಾಗಿ ಮಂದಿರ ನಿರ್ಮಾಣದ ಕಲ್ಪನೆನೆ ಭ್ರಷ್ಟವಾಗಿಬಿಟ್ಟಿದೆ…. ನನ್ನಿಂದಂತೂ ಈ ಸಂದರ್ಭದಲ್ಲಿ ಈ ಚಿತ್ರಪಟ ಸಾದ್ಯವಿಲ್ಲ…‘ ಕಾರ್ನಾಡರು ಯಾಕೂಬನಿಗೆ ಹೇಳಲಾರದೆ ಹೇಳುತ್ತಾರೆ.

ಆದರೆ ಯಾಕೂಬನಿಗೆ ಇವರ ಸಂಧಿಗ್ಧ ಅರ್ಥವಾಗುವುದಿಲ್ಲ. ಮಸೀದಿ ಬಿದ್ದಿದೆ ನಿಜ ಆದರೆ ಈ ಸಿನಿಮಾದಲ್ಲಿ ಮಂದಿರ ನಿರ್ಮಾಣ ಮಾಡುವುದೆ ಕೇಂದ್ರವಾಗಿದ್ದರೆ ಅದು ಇರಲಿ. ಅದಕ್ಕೂ ಇದಕ್ಕೂ ಸಂಬಂಧವೇನಿದೆ… ಎನ್ನುವ ಭಾವ. ಮಸೀದಿ, ಮಂದಿರ ಮೀರಿ ಯಾಕೂಬನಿಗೆ ತನ್ನ ತತ್ತರಿಸುತ್ತಿರುವ ತನ್ನ ಕುಟುಂಬವನ್ನು ಎತ್ತಿ ನಿಲ್ಲಿಸಬೇಕಾಗಿದೆ. `ಈ ಸಿನಿಮಾದಿಂದ ಅಕ್ಕನ ಮದುವೆ ಆಗುತ್ತದೆ. ನೀವೆ ಗತಿ ಅಂಕಲ್ ಎಂದು ಅಂಗಲಾಚುವನು’.

ಕಾರ್ನಾಡರಿಗೆ ಇವನ ಅಸಹಾಯಕತೆ ನೋಡಿ ನೆರವಾಗುವ ಮನಸು ಆದರೆ ನಾಳೆ ಈ ಚಿತ್ರ ಟೆಲಿಪರದೆಯ ಮೇಲೆ ಪ್ರೇಕ್ಷಕರಿಗೆ ರಿಜವಿಯ ಮಗಳ ಮದುವೆಯ ಸಂದರ್ಭವನ್ನು ಯಾರು ವಿವರಿಸುತ್ತಾರೆ… ಎಲ್ಲರಿಗೂ ತಾನು ಕನ್ನಡದ ಅಮೋಘ ಕಾದಂಬರಿಯನ್ನು ಒಂದು ಲಜ್ಜಾಸ್ಪದ ಘಟನೆಯ ಹೆಗ್ಗಳಿಕೆಗೆ ಬಳಸುತ್ತೇನೆ ಎನ್ನುವುದಷ್ಟೇ ಕಾಣಿಸುತ್ತದೆ ಎನಿಸುತ್ತದೆ. `ಬಾಬರೀ ಮಸೀದಿ ಮಾತ್ರ ಅಳಿದುಹೋಗಿಲ್ಲ ಯಾಕೂಬ್ ಅದರ ಜೊತೆ ನಿನ್ನ ತಂದೆಯ ಕನಸೂ ಅಳಿದು ಹೋಗಿದೆ’ ಎಂದು ಹೇಳಲೂ ಹೋಗಿ ಹೇಳಲಾಗದೆ ಮೌನವಾಗುಳಿದ ಕಾರ್ನಾಡರನ್ನು ನೋಡಿ ಅವರಿಗೆ ಮನಸಿಲ್ಲ ಎಂಬುದನ್ನು ಅರಿತವನಂತೆ ಯಾಕೂಬ್ ಚಿತ್ರಕಥೆಯನ್ನು ಅಲ್ಲೆ ಬಿಟ್ಟು ಕಾರ್ನಾಡರು ಅದನ್ನು ತೆಗೆದುಕೊಂಡು ಹೋಗು ಎಂದರೂ ಕೇಳದೆ `ಬೇಡ ಅಂಕಲ್ ಅದರಿಂದ ಏನು ಪ್ರಯೋಜನ ‘ ಎನ್ನುತ್ತಾ ಬರಿಗೈಯಲಿ ಮರಳುವನು.
ದುರಿತ ಕಾಲದಲ್ಲಿ ಬುದ್ಧಿಜೀವಿ ಲೇಖಕರು ಕೂಡಾ ಎಷ್ಟು ಅಸಹಾಯಕರು ಎಂಬುದಕ್ಕೆ ರೂಪಕವಾಗಿಯೂ ಈ ಲೇಖನ ಮತ್ತೆ ಮತ್ತೆ ನಮಗೆ ಪ್ರಸ್ತುತವಾಗುತ್ತದೆ. ಇಂಥ ನಮ್ಮೊಳಗನ್ನು ನಮಗೆ ಕಾಣಿಸುವ ಬರೆಹ ಕನ್ನಡಿಯನ್ನಿತ್ತ ಮಹೋನ್ನತ ಲೇಖಕ ಕಾರ್ನಾಡರಿಗೆ ನಮಸ್ಕಾರ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here