Homeಮುಖಪುಟಮೇ 23 ಮತ್ತು ಹೊಸ ಸಿಎಂ : ವಾಕ್ಸಮರದಲ್ಲಿ ಮೈತ್ರಿಪಕ್ಷಗಳು, ಭ್ರಮೆಯಲ್ಲಿ ಬಿಎಸ್‍ವೈ

ಮೇ 23 ಮತ್ತು ಹೊಸ ಸಿಎಂ : ವಾಕ್ಸಮರದಲ್ಲಿ ಮೈತ್ರಿಪಕ್ಷಗಳು, ಭ್ರಮೆಯಲ್ಲಿ ಬಿಎಸ್‍ವೈ

ಮೇ 23ರ ಫಲಿತಾಂಶ ರಾಜ್ಯ ಸರ್ಕಾರಕ್ಕೇನೂ ಆಪತ್ತು ತರಲಾರದು. ಇವರಿವರೇ ಕಿತ್ತಾಡಿಕೊಂಡು ಸರ್ಕಾರ ಬೀಳಬೇಕು ಅಥವಾ ಯಡಿಯೂರಪ್ಪ 21ನೇಯ ಸಪ್ಲಿಮೆಂಟರಿಯಲ್ಲಿ ಪಾಸ್ ಆಗಬೇಕು. ಸದ್ಯಕ್ಕೆ ಈ ಎರಡೂ ಆಗುವ ಸಾಧ್ಯತೆಗಳಿಲ್ಲ.

- Advertisement -
- Advertisement -

ಮೇ 23ರಂದು ಲೋಕಸಭಾ ಫಲಿತಾಂಶದ ನಂತರ ನಮ್ಮದೇ ಸರ್ಕಾರ ಎಂದು ಯಡಿಯೂರಪ್ಪ ಹೇಳಿ ಸುಸ್ತಾಗುವ ಹೊತ್ತಿಗೆ, ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಧ್ವನಿ ತೇಲಿ ಬಂತು. ಅದಕ್ಕೆ ಕೌಂಟರ್ ಎಂಬಂತೆ ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ಹೇಳಿಕೆ ನೀಡತೊಡಗಿದರು… ಮೇ 23ರ ಫಲಿತಾಂಶಕ್ಕೂ ಹೊಸ ಸಿಎಂ ಅಥವಾ ಹೊಸ ಸರ್ಕಾರಕ್ಕೂ ಅದೆಂತಹ ಸಂಬಂಧ?

ದೇಶ ಮೇ 23ರ ಮಹಾ ಚುನಾವಣಾ ಫಲಿತಾಂಶ ಏನಾಗಬಹುದು ಎಂದು ಯೋಚಿಸುವ ಸಂದರ್ಭದಲ್ಲಿ ರಾಜ್ಯದ ಮೂರೂ ಪಕ್ಷಗಳ ಹಲವು ಪ್ರಮುಖರು ಹೊಸ ಸಿಎಂ ಎಂಬ ಕಲ್ಪನೆಯ ಆಟಕ್ಕೆ ಜೋತು ಬಿದ್ದು, ಹೊಸ ಹೊಸ ಸಾಧ್ಯತೆಗಳನ್ನು ತೇಲಿ ಬಿಡುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಸ ಮುಖ್ಯಮಂತ್ರಿಯ ವಿಷಯ ವಾಕ್ಸಮರಕ್ಕೆ ಕಾರಣವಾಗಿ, ವಿಧಾನಸಭೆ ವಿಸರ್ಜನೆಯಾಗಲಿ ಬಿಡಿ ಎಂಬ ಹಂತದವರೆಗೂ ಹೋಗಿ ಬೇಸರ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಎರಡೂ ಪಕ್ಷಗಳ ‘ಹೈ ಕಮಾಂಡ್’ ವಿವಾದ, ಗೊದಲ ಸೃಷ್ಟಿಸಬೇಡಿ ಎಂದು ತಾಕೀತು ಮಾಡಿದ್ದಾರೆ.

ಇವತ್ತು ರವಿವಾರ ರಾಜ್ಯದ ನಾಯಕರನ್ನು ಕರೆಸಿಕೊಂಡು 23ರ ಫಲಿತಾಂಶದ ನಂತರದ ಮುಂದಿನ ನಡೆಯ ಬಗ್ಗೆ ಚರ್ಚಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸದ್ಯಕ್ಕೆ ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೈತ್ರಿ ಸರ್ಕಾರಕ್ಕೂ 23ರ ಫಲಿತಾಂಶಕ್ಕೂ ಯಾವ ಸಂಬಂಧವೂ ಇಲ್ಲ ಎಂಬಂತೆ ಹೇಳಿಕೆ ನೀಡಿದ್ದಾರೆ.

ಇತ್ತ ದೇವೇಗೌಡರು ಕೂಡ ಬಹಿರಂಗ ಹೇಳಿಕೆ ನೀಡದಂತೆ ತಮ್ಮ ಪಕ್ಷದ ನಾಯಕರಿಗೆ ತಾಕೀತು ಮಾಡಿದ್ದಾರೆ. ಕೇಂದ್ರದಲ್ಲಿ ಈ ಸಲ ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಎಂದು ನಂಬಿರುವ ಅವರು, ರಾಜ್ಯ ರಾಜಕಾರಣದಲ್ಲಿ ಗೊಂದಲ ಏರ್ಪಡುವುದನ್ನು ಸಹಿಸಲಾರರು. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ತಮ್ಮ ಪಕ್ಷದ ನಾಯಕರಿಗೆ ಬಾಹ್ಯವಾಗಿ ಮೈತ್ರಿ ಕುರಿತು, ಹೊಸ ಸಿಎಂ ಕುರಿತು ಮಾತನಾಡಿ ಗೊಂದಲ ಸೃಷ್ಟಿ ಮಾಡಬೇಡಿ, ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ತರುವ ಯತ್ನಕ್ಕೆ ಹಿನ್ನಡೆ ಮಾಡಬೇಡಿ ಎಂದಿದ್ದಾರೆ.

ಸದ್ಯಕ್ಕೆ ಅಂದರೆ ಇವತ್ತು ಮಧ್ಯಾಹ್ನದ ಹೊತ್ತಿಗೆ ಮೈತ್ರಿ ಪಕ್ಷಗಳ ನಾಯಕರು ವಾಕ್ಸಮರ ನಿಲ್ಲಿಸಿ ಮೌನಕ್ಕೆ ಶರಣಾಗಿದ್ದಾರೆ. ಆದರೆ, ಮೇ 23ರ ನಂತರ 20 ಶಾಸಕರು ತಮ್ಮ ಕಡೆ ಎಂದು ನಂಬಿರುವ ಯಡಿಯೂರಪ್ಪ ಮತ್ತು ಟೀಮ್ ಮಾತ್ರ ಸರ್ಕಾರ ತಮ್ಮದೇ ಎಂಬ ಗುಂಗಿನಲ್ಲಿದೆ..
ಉಪ ಚುನಾವಣೆಯಲ್ಲಿ ಸೃಷ್ಟಿ!

ಕುಂದಗೋಳ ಮತ್ತು ಚಿಂಚೋಳಿ ಉಪ ಚುನಾವಣೆಗಳ ಪ್ರಚಾರದ ಸಂದರ್ಭದಲ್ಲಿ ರಾಜ್ಯದ ಮೂರೂ ಪಕ್ಷಗಳ ನಾಯಕರು ಪ್ರಚಾರದಲ್ಲಿದ್ದಾಗ ಇದೆಲ್ಲ ರಗಳೆ ಆರಂಭವಾಗಿದೆ. ಒಂದು ಕಡೆ ಯಡಿಯೂರಪ್ಪ ಎರಡು ಸೀಟು ಗೆಲ್ಲಿಸಿ ಕೊಡಿ, ನಾನೇ ಸಿಎಂ ಎಂದು ಬಹಿರಂಗ ಪ್ರಚಾರ ಮಾಡಿದರು. ಇನ್ನೊಂದು ಕಡೆ ಸಿದ್ದರಾಮಯ್ಯ ಅಭಿಮಾನಿ ಶಾಸಕರು ಮೇ 23ರ ನಂತರ ಸಿದ್ದರಾಮಯ್ಯರೇ ಮುಖ್ಯಮಂತ್ರಿ ಎಂದು ಗುಲ್ಲು ಎಬ್ಬಿಸಿದರು. ಇದಕ್ಕೆ ಬಿಜೆಪಿಯ ಈಶ್ವರಪ್ಪ ಇನ್ನಷ್ಟು ಕಿಡಿ ಹಚ್ಚಿದರು. ಆಗ ಅಖಾಡಕ್ಕೆ ಇಳಿದ ರಾಜ್ಯ ಜೆಡಿಎಸ್ ಅಧ್ಯಕ್ಷ ವಿಶ್ವನಾಥರು, ತಮ್ಮ ಬೆಂಬಲಿಗರ ಮೂಲಕ ತಾವೇ ಮುಖ್ಯಮಂತ್ರಿ ಎಂದು ಹೇಳಿಸುವ ಮೂಲಕ ಸಿದ್ದರಾಮಯ್ಯ ಮೈತ್ರಿ ಧರ್ಮಕ್ಕೆ ಮೋಸ ಮಾಡುತ್ತಿದ್ದಾರೆ, ಅವರೇನು ಅತ್ಯುತ್ತಮ ಸಿಎಂ ಆಗಿದ್ದರೆ? ಹಾಗಿದ್ದರೆ 121ರಿಂದ 78ಕ್ಕೆ ಕಾಂಗ್ರೆಸ್ ಕುಸಿಯುತ್ತಿತ್ತೆ? ಎಂದು ಎರಡು ಮೂರು ಕಡೆ ಪ್ರತಿಪಾದಿಸಿದರು. ಆಗ ದೇವೇಗೌಡ ಮತ್ತು ಕುಮಾರಸ್ವಾಮಿ ಮೌನವಾಗಿಯೇ ಇದ್ದರು.

ಇದ್ದಕ್ಕಿದ್ದಂತೆ ಏನಾಯ್ತೋ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗಬೇಕಿತ್ತು. ಅಂಥವರಿಗೆ ಕಾಂಗ್ರೆಸ್ ಅವಕಾಶ ಮಾಡಿಕೊಡಬೇಕಿತ್ತು ಎಂದು ಬಾಂಬ್ ಹಾಕಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಎಂಬ ‘ಗುಪ್ತ’ ಆಂದೋಲನಕ್ಕೆ ಬ್ರೇಕ್ ಹಾಕಲು ಅವರು ಹೀಗೆ ಮಾಡಿದರು ಅನಿಸುತ್ತದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಎರಡರಲ್ಲೂ ಮುಖ್ಯಮಂತ್ರಿ ಆಗುವ ಅರ್ಹತೆಯುಳ್ಳ ಹಲವರಿದ್ದಾರೆ, ಜೆಡಿಎಸ್‍ನ ಎಚ್.ಡಿ. ರೇವಣ್ಣ ಕೂಡ ಅದರಲ್ಲಿ ಒಬ್ಬರು ಎಂದು ಸಿದ್ದರಾಮಯ್ಯ ಒಂದು ಟ್ವೀಟ್ ತೇಲಿಬಿಟ್ಟರು. ದಲಿತ ಮುಖ್ಯಮಂತ್ರಿ ವಿಷಯಕ್ಕೆ ಅಂತೂ ಅವರು ಸ್ಟಾಪ್ ಹಾಕಿದರು.
ಇದೆಲ್ಲದರಿಂದ ರೋಸಿದ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ, ಎರಡೂ ಪಕ್ಷಗಳಲ್ಲಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಇದು ಮೈತ್ರಿ ಸರ್ಕಾರಕ್ಕೆ ಮಾರಕ. ಈ ಕಿತ್ತಾಟದ ಬದಲು ವಿಧಾನಸಭೆ ವಿಸರ್ಜನೆಯೇ ಸೂಕ್ತ ಎಂದು ಕಿಡಿಕಾರಿದರು.. ಶನಿವಾರ ಪೂರ್ತಿ ಇದೇ ಚರ್ಚೆಯಾಯಿತು.

ಇದನ್ನು ಓದಿ: ರಾಜ್ಯ ಸರ್ಕಾರದ ಭವಿಷ್ಯ ನಿಂತಿರುವುದು ಈ ನಾಲ್ಕು ಅಂಶಗಳ ಮೇಲೆ.

ಆದರೆ ಇವತ್ತಿನ ಮಟ್ಟಿಗೆ ಎರಡೂ ಪಕ್ಷಗಳ ಹೈಕಮಾಂಡ್ ಈ ವಾಕ್ಸಮರ ನಿಲ್ಲಿಸುವಲ್ಲಿ ಸಫಲವಾಗಿದೆ. ಇತ್ತ ಕಡೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದರೂ, ಬರದಿದ್ದರೂ ಯಡಿಯೂರಪ್ಪ ಸಿಎಂ ಆಗುವ ಚಾನ್ಸೇ ಇಲ್ಲ. ಅವರಿಗೆ ಉಳಿದಿರುವುದು 20 ಶಾಸಕರ ಖರೀದಿಯ ಆಪ್ಸನ್ ಒಂದೇ. ಅದರಲ್ಲಿ 20 ಸಲ ಫೇಲಾಗಿರುವ ಅವರೀಗ ಮತ್ತೆ ಸಪ್ಲಿಮೆಂಟರಿಗೆ ತಯ್ಯಾರಿ ನಡೆಸಿಯೇ ಇದ್ದಾರೆ.

ಮೇ 23ರ ಫಲಿತಾಂಶ ರಾಜ್ಯ ಸರ್ಕಾರಕ್ಕೇನೂ ಆಪತ್ತು ತರಲಾರದು. ಇವರಿವರೇ ಕಿತ್ತಾಡಿಕೊಂಡು ಸರ್ಕಾರ ಬೀಳಬೇಕು ಅಥವಾ ಯಡಿಯೂರಪ್ಪ 21ನೇಯ ಸಪ್ಲಿಮೆಂಟರಿಯಲ್ಲಿ ಪಾಸ್ ಆಗಬೇಕು. ಸದ್ಯಕ್ಕೆ ಈ ಎರಡೂ ಆಗುವ ಸಾಧ್ಯತೆಗಳಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...