ಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?

ದಕ್ಷಿಣದಲ್ಲಿ ಸಿನಿಮಾನಟರು ದಿಢೀರ್ ರಾಜಕೀಯ ನಾಯಕರಾದುದನ್ನು ಎನ್‍ಟಿಆರ್, ಎಂಜಿಆರ್ ಉದಾಹರಿಸಿ ಬರೆಯುವ ವೀರರಾಘವನ್ ಕರ್ನಾಟಕದಲ್ಲಿ ಅಂತಹ ಶಕ್ತಿ ಇದ್ದುದು ಡಾ ರಾಜ್‍ಗೆ ಮಾತ್ರ ಎಂದಿದ್ದರು

ಅರೆ, ವಿಚಿತ್ರವಾಗಿದೆ, ಯಾವುದಪ್ಪ ಈ ಫೋಟೊ?
ವರನಟ ಡಾ. ರಾಜ್ ಮತ್ತು ಇಂದಿರಾಗಾಂಧಿ ನಡುವೆ ನರೇಂದ್ರ ಮೋದಿ!

ಮಿಥ್ಯ: ಇಂಥದೊಂದು ಫೋಟೊ ಸಾಕಷ್ಟು ವೈರಲ್ ಆಗಿದೆ. ಅದು ಗುಜರಾತಿನಲ್ಲೇ ಹೆಚ್ಚು ಓಡಾಡುತ್ತಿದ್ದು, ಈ ಫೋಟೊ ಬಳಸುವವರ ಟಾರ್ಗೆಟ್ ನರೇಂದ್ರ ಮೋದಿ! ‘ನೋಡ್ರಪ್ಪ ನಿಮ್ಮ ಮೋದಿ ಸಾಬ್ ಕೂಡ ಕಾಂಗ್ರೆಸ್‍ಮನ್ ಆಗಿದ್ದ. ಈಗ ಏನ್ ಹೇಳ್ತೀರಿ ಭಕ್ತರೇ?’ ಎಂದು ಕಿಚಾಯಿಸುವ ಸಂದೇಶವನ್ನು ತೇಲಿಬಿಡಲಾಗಿದೆ. ‘ವೊಟ್ ಫಾರ್ ಎಐಎಂಐಎಂ’ ಫೇಸ್‍ಬುಕ್ ಪುಟದಲ್ಲಿ ಇದು 5 ಸಾವಿರಕ್ಕೂ ಹೆಚ್ಚು ಸಲ ಶೇರ್ ಆಗಿದ್ದರೆ, ಇನ್ನೊಂದು ಫೇಸ್‍ಬುಕ್ ಪುಟದಲ್ಲಿ 6 ಸಾವಿರಕ್ಕೂ ಹೆಚ್ಚು ಸಲ ಶೇರ್ ಆಗಿದೆ.

ಸತ್ಯ: ಅಂದಿನ ಪ್ರಧಾನಿ ಇಂದಿರಾಗಾಂಧಿ ಮತ್ತು ಕನ್ನಡದ ಹೆಮ್ಮೆ ಡಾ. ರಾಜಕುಮಾರ್ ಮಧ್ಯೆ ಯುವಕ ಮೋದಿ ಇರುವ ಈ ಫೋಟೋ ನಕಲಿ. ಇದನ್ನು ಫೋಟೊಶಾಪ್ ಮಾಡಲಾಗಿದೆ. ‘ಮೋದಿಯೂ ನಮ್ಮವನೇ ಆಗಿದ್ದ’ ಎಂದು ಕಾಂಗ್ರೆಸ್‍ನವರು ಈ ಕೆಲಸ ಮಾಡಿರಲಿಕ್ಕಿಲ್ಲ. ಆದರೆ ಎಐಎಂಐಎಂ ಫೇಸ್‍ಬುಕ್ ಪೇಜ್‍ನಿಂದ ಹೆಚ್ಚು ಶೇರ್ ಆಗಿರುವುದನ್ನು ನೋಡಿದರೆ, ಆ ಪಾರ್ಟಿ ಕಡೆಯವರು ಮಾಡಿರುವ ಸಾಧ್ಯತೆ ಇದ್ದು, ನೋಡಿ ಕಾಂಗ್ರೆಸ್, ಬಿಜೆಪಿ, ಇಂದಿರಾ, ಮೋದಿ ಎಲ್ಲ ಒಂದೇ ಎಂದು ಕಿಚಾಯಿಸುವ ಉದ್ದೇಶವಿರಬಹುದು. ಒಟ್ಟಿನಲ್ಲಿ ಎರಡೂ ಸಾಧ್ಯತೆಯಿವೆ.

ಈ ನಕಲಿ ಫೋಟೊದಲ್ಲಿ ಇಂದಿರಾ ಮತ್ತು ರಾಜ್ ಮಧ್ಯದಿಂದ ಮುಖ ಕಾಣುವಂತೆ ಹಿಂದಿನ ಸಾಲಿನಲ್ಲಿ ಮೋದಿ ಮುಖ ತುರುಕಲಾಗಿದೆ. ವೈರಲ್ ಮಾಡಿದವರು ರಾಜ್ ಹೆಸರನ್ನು ಎಲ್ಲೂ ಬಳಸಿಲ್ಲ. altnews ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‍ನಲ್ಲಿ ಪರಿಶೀಲಿಸಿದಾಗ, ದಿ ಕ್ವಿಂಟ್ ಪೋರ್ಟಲ್‍ನಲ್ಲಿ ‘Karnataka’s  reluctant politician: The Life and Times of ‘Annavru’ ಎಂಬ ಲೇಖನವಿದ್ದು ಅದರಲ್ಲಿ ಓರಿಜಿನಲ್ ಫೋಟೊ ಸಿಕ್ಕಿದೆ. ಸಂಗೀತ ಕಾರ್ಯಕ್ರಮವೊಂದರಲ್ಲಿ ತೆಗೆದ ಫೋಟೊ ಇದು. ಆ ಫೋಟೊದಲ್ಲಿ ಮೋದಿ ಮೂತಿ ಇಲ್ಲ. ಈ ಫೋಟೊವನ್ನು ಫೋಟೊಶಾಪ್ ಮಾಡಿ ಮೋದಿಯನ್ನು ತುರುಕಲಾಗಿದೆ.

ಓರಿಜಿನಲ್ ಫೋಟೊ

ನಮ್ಮ ಓದುಗರಿಗಾಗಿ ನಾನುಗೌರಿ ಡೆಸ್ಕ್ ಈ ಲೇಖನ ಹುಡುಕಿ ಓದಿದಾಗ, ಅದನ್ನು ದಿ ಕ್ವಿಂಟ್‍ಗೆ ಟಿ.ಎಂ. ವೀರರಾಘವನ್ 2018ರಲ್ಲಿ ಬರೆದಿದ್ದು 24-04-2019ರಂದು ಮತ್ತೆ ಅಪ್‍ಡೇಟ್ ಮಾಡಲಾಗಿದೆ. ದಕ್ಷಿಣದಲ್ಲಿ ಸಿನಿಮಾನಟರು ದಿಢೀರ್ ರಾಜಕೀಯ ನಾಯಕರಾದುದನ್ನು ಎನ್‍ಟಿಆರ್, ಎಂಜಿಆರ್ ಉದಾಹರಿಸಿ ಬರೆಯುವ ವೀರರಾಘವನ್ ಕರ್ನಾಟಕದಲ್ಲಿ ಅಂತಹ ಶಕ್ತಿ ಇದ್ದುದು ಡಾ ರಾಜ್‍ಗೆ ಮಾತ್ರ. ಹಲವಾರು ಸಲ ರಾಜಕೀಯ ಪಕ್ಷಗಳು ಅವರಿಗೆ ದುಂಬಾಲು ಬಿದ್ದರೂ ರಾಜ್ ಎಂದೂ ಒಪ್ಪಿಕೊಳ್ಳಲಿಲ್ಲ. 1978ರಲ್ಲಿ ಚಿಕ್ಕಮಗಳೂರು ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್‍ರನ್ನು ಕಣಕ್ಕಳಿಸಲು ಜನತಾ ಪಕ್ಷ ಯತ್ನಿಸಿತ್ತು ಎಂಬುದನ್ನು, ರಾಜ್ ಅದನ್ನು ನಿರಾಕರಿಸಿದ್ದರು ಎಂಬುದನ್ನು ಲೇಖನದಲ್ಲಿ ಬರೆಯಲಾಗಿದೆ.

ಫೋಟೊ ಕೃಪೆ ಸಂಗೀತಾ ಮ್ಯುಸಿಕ್ ಎಂದಿದ್ದು, ಅವರ ವೆಬ್‍ಸೈಟಿನ ಆಲ್ಬಮ್‍ನಲ್ಲಿ ಈ ಫೋಟೊ ಕಂಡುಬಂತು. ಸಂಗೀಯ ಮ್ಯೂಸಿಕ್‍ನವರ ಕಾರ್ಯಕ್ರಮಕ್ಕೆ ಇಂದಿರಾ ಗಾಂಧಿಯವರನ್ನು ಕರೆಸಿದಾಗ ಈ ಫೋಟೊ ಕ್ಲಿಕ್ಕಿಸಲಾಗಿದೆ. ಚಿತ್ರದಲ್ಲಿ ಪಾರ್ವತಮ್ಮ ರಾಜಕುಮಾರ್, ರಾಜ್ ಸಹೋದರಿ ಅವರನ್ನು ಕಾಣಬಹುದು.

Donate

ಸ್ವತಂತ್ರ ಪತ್ರಿಕೋದ್ಯಮವು ನಿಮ್ಮ ಬೆಂಬಲವಿಲ್ಲದೇ ನಡೆಯಲಾರದು. ವಂತಿಗೆ ನೀಡಲು ಕೆಳಗೆ ಕ್ಲಿಕ್ ಮಾಡಿ.
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here