ದೆಹಲಿಯ ಮಾಲಿನ್ಯಕ್ಕೆ ನಿಜವಾದ ಕಾರಣರಾರು? ಅವರಿಗೇಕೆ ಶಿಕ್ಷೆ ಇಲ್ಲ??

ದೆಹಲಿಯಲ್ಲೀಗ ಪರಿಸರ ಮಾಲಿನ್ಯ ವಿರುದ್ಧದ ಸಮರಕ್ಕೆ ಸೂಕ್ತ ಸಮಯ ಒದಗಿ ಬಂದಿದೆ. ಆದರೆ, ಯಾರೂ ಈ ಕುರಿತು ಮಾತನಾಡುತ್ತಿಲ್ಲ. ವಾಯು ಗುಣಮಟ್ಟದ ಸರಾಸರಿ (ಎಕ್ಯೂಐ) ಹಾಗೂ ಮಾಲಿನ್ಯದಿಂದ ರಕ್ಷಣೆ ಪಡೆಯುವ ಕವಚಗಳ ಬಗ್ಗೆ, ನ್ಯಾಯಾಂಗ, ಕಾನೂನು ಆಡಳಿತ ಹಾಗೂ ಮಾಧ್ಯಮಗಳಲ್ಲೂ ಪ್ರತಿ ನಿತ್ಯವೂ ಈ ಕುರಿತು ಸುದ್ದಿಯಾಗುತ್ತಿದೆ.

ವಿಶೇಷ ಹಾಗೂ ಸಾಮಾನ್ಯ ಅಂಶಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗಿ, ತೊಂದರೆ ಅನುಭವಿಸುವಂತೆ ಮಾಡುತ್ತಿವೆ. ಆದರೆ, ರೈತ ವಲಯವನ್ನೇ ಕೇಂದ್ರೀಕರಿಸಿ ಈ ಕುರಿತ ಚರ್ಚೆ ಪ್ರಧಾನವಾಗುತ್ತಿದೆ. ಭಾರತೀಯ ಮಾಧ್ಯಮದ ಮುಖ್ಯ ವಾಹಿನಿಗಳು ಪ್ರಸಕ್ತ ವರ್ಷ ಸರಕಾರಿ ಮಾಹಿತಿ ಆಧರಿಸಿ ದೆಹಲಿಯಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ಕುರಿತು ಚರ್ಚೆ ಆರಂಭಿಸಿವೆ.

‘ರಾಜಧಾನಿಯಲ್ಲಿ ಶೇ. 35 ರಷ್ಟು ಪರಿಸರ ಮಾಲಿನ್ಯ ಹೆಚ್ಚಳಕ್ಕೆ ಪಂಬಾಬ್, ಹರಿಯಾಣ ರಾಜ್ಯ ವ್ಯಾಪ್ತಿಯ ರೈತರೇ ಕಾರಣ. ಹೊಲದಲ್ಲಿ ರಾಶಿ ಪೂರ್ಣಗೊಂಡ ನಂತರ ಉಳಿದಿರುವ ಹುಲ್ಲು ಅಥವಾ ಗೋದಿ, ಭತ್ತದ ಬೆಳೆ ತ್ಯಾಜ್ಯವನ್ನು ಒಂದೆಡೆ ಬಣವೆ ಹಾಕಿ ನಂತರ ಸುಡುತ್ತಾರೆ. ವಾತಾವರಣದಲ್ಲಿ ಉಷ್ಣಾಂಶ ಅಧಿಕವಾಗಲು ಕಾರಣವಾಗುತ್ತಿದೆ’ ಎಂದು ಮಾಧ್ಯಮ ವರದಿಗಳು ಅಭಿಪ್ರಾಯಪಟ್ಟಿದ್ದವು. ಇದನ್ನೇ ದೆಹಲಿ ನಗರವಾಸಿಗಳು ಬಲವಾಗಿ ನಂಬಿದ್ದಾರೆ.

ಬಣವೆಗಳಿಗೆ ಬೆಂಕಿ ಹಚ್ಚಿ ಬೆಳೆಯ ಒಣ ತ್ಯಾಜ್ಯಗಳನ್ನು ಸುಡುವಾಗ ಕೆಲವೆಡೆ ಅನಾಹುತಗಳು ಸಂಭವಿಸುವುದೂ ಸಹಜ. ಅದರನ್ವಯ ಪ್ರಕರಣಗಳೂ ದಾಖಲಾಗುತ್ತವೆ ಎಂಬುದೂ ಸಾಮಾನ್ಯ. ಆರೋಪಿಗಳಿಗೆ ಶಿಕ್ಷೆಯಾಗುವುದೂ ಉಂಟು.

ಪರಿಸರ ಮಾಲಿನ್ಯದಲ್ಲಿ ರೈತರೇ ಆರೋಪಿಗಳು
ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಈ ಎರಡೂ ರಾಜ್ಯಕ್ಕೆ ಹೋಲಿಸಿದಲ್ಲಿ ಹರಿಯಾಣದ ಫತೇಬಾದ್ ಜಿಲ್ಲೆಯೊಂದರಲ್ಲೇ ಒಟ್ಟು ೧೭ ಪ್ರಕರಣಗಳು ದಾಖಲಾಗಿದ್ದವು. ಪರಿಸರ ಮಾಲಿನ್ಯ ಹೆಚ್ಚಿಸುವ ಈ ಪ್ರಕರಣಗಳು ದೆಹಲಿ ನಿವಾಸಿಗಳ ಉಸಿರಾಟಕ್ಕೆ ಕಲುಷಿತ ಗಾಳಿ ಸೃಷ್ಟಿಸುತ್ತಿವೆ. ಪರಿಸರ ಮಾಲಿನ್ಯದಲ್ಲಿ ಗೋಧಿ ಹಾಗೂ ಭತ್ತ ಬೆಳೆಯುವ ರೈತರೇ ಪ್ರಮುಖ ಆರೋಪಿಗಳು ಎಂದೂ ಹಾಗೂ ಇಂತಹವರ ಶೋಧಕ್ಕಾಗಿ ಹರಿಯಾಣ ಪೊಲೀಸರು ವಿಶೇಷ ತಂಡ ರಚಿಸಿದರು. ಇವರ ವರದಿ ಆಧರಿಸಿ, ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರೈತರನ್ನು ಶಿಕ್ಷೆಗೆ ಗುರಿಪಡಿಸಿದ್ದವು. 2017ರಲ್ಲಿ, ಒಂದು ಸಾವಿರಕ್ಕೂ ಅಧಿಕ ರೈತರು ದಂಡ ತೆತ್ತಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಾವು ರೈತರ ವಿರುದ್ಧ ಕ್ರಮ ಜರುಗಿಸುತ್ತಿರುವುದಾಗಿ ಸರ್ಕಾರ ಸಮಜಾಯಿಷಿ ನೀಡಿತ್ತು. ಪಂಜಾಬ್ ಸರಕಾರ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ವೇಳೆ, ಬೆಳೆಯ ತ್ಯಾಜ್ಯ ಸುಟ್ಟು ಹಾಕಲು ಮುಂದಾದರೆ ಅಂತಹ ರೈತರಿಗೆ ಕೃಷಿ ಮಾಡಲು ಅವಕಾಶ ನೀಡುವುದಿಲ್ಲ ಎಂದೇ ಎಚ್ಚರಿಸಿತ್ತು. ದೆಹಲಿಯಲ್ಲಿ 1/3ರಷ್ಟು ಪ್ರದೇಶದಲ್ಲಿ ಅಧಿಕವಾಗುತ್ತಿರುವ ಪರಿಸರ ಮಾಲಿನ್ಯಕ್ಕೆ ರೈತರೇ ಕಾರಣ ಎಂಬ ಸರ್ಕಾರಿ ಮಾಹಿತಿ ಆಧರಿಸಿದ ಸುಪ್ರೀಂಕೋರ್ಟ್ ಹಾಗೂ ಪರಿಸರಕ್ಕೆ ಸಂಬಂಧಿಸಿದ ಬಹುತೇಕ ಸಂಸ್ಥೆಗಳು ರೈತರ ವಿರುದ್ಧವೇ ತಮ್ಮ ಅಸ್ತ್ರಗಳನ್ನು ಪ್ರಯೋಗಿಸುತ್ತಾ ಬಂದಿವೆ. ಆದರೆ, ದೆಹಲಿಯಲ್ಲಿ ಉಳಿದ 2/3 ರಷ್ಟು ಪ್ರದೇಶದಲ್ಲಿ ಪರಿಸರ ಮಾಲಿನ್ಯವಿಲ್ಲವೆ?

ದೆಹಲಿಯ ವಾಯು ಮಾಲಿನ್ಯವು ಹಂಗಾಮು ಆಧರಿತವೆ?
ಭಾರತದ ಕೋರ್ಟ್‌ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾಯು ಮಾಲಿನ್ಯದ ನೈಜ ಅಪರಾಧಿಗಳನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸುವುದಿಲ್ಲವೇಕೆ? ರೈತರು ತಮ್ಮ ಹೊಲದಲ್ಲಿಯ ರಾಶಿ ಪೂರ್ಣಗೊಂಡ ನಂತರ ಹುಲ್ಲು ಅಥವಾ ಬೆಳೆಯ ತ್ಯಾಜ್ಯವನ್ನು ಸುಡುತ್ತಾರೆ. ಈ ಹಂಗಾಮು ಹೊರತು ಪಡಿಸಿ ಉಳಿದ ಹಂಗಾಮುಗಳಲ್ಲಿ ದೆಹಲಿಯ ಶ್ವಾಸಕೋಶವನ್ನು ಉಸಿರುಗಟ್ಟಿಸುವ ಅಪರಾಧಿಗಳನ್ನು ಏಕೆ ಪತ್ತೆ ಹಚ್ಚುತ್ತಿಲ್ಲ? ಸರಕಾರದ ನೀತಿಯೇ ಸರಿ ಎಂದಾದಲ್ಲಿ, ದೆಹಲಿಯಲ್ಲಿ ಪರಿಸರ ಮಾಲಿನ್ಯವು ಹಂಗಾಮು ಆಧರಿತವೆ? ಬೆಳೆಯ ತ್ಯಾಜ್ಯವನ್ನು ಸುಡಲಾರದ ಹಂಗಾಮಿನಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯಕ್ಕೆ ಕಾರಣರು ಯಾರು? ಎಂಬುದು ಪ್ರಶ್ನೆಯಾಗಿದೆ.

ಪರಿಸರ ಮಾಲಿನಕ್ಕೆ ನೇರ ಕಾರಣವಾಗುವ ಕೆಲ ಖಾಸಗಿ ಜನ ಸಮೂಹಕ್ಕೆ ದೆಹಲಿಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ. ನೆಲದಡಿಯ ನೀರಿನ ಟ್ಯಾಂಕ್‌ಗಳನ್ನು ಹೊಂದಿದ, ನಿರಂತರ ವಿದ್ಯುತ್‌ಗಾಗಿ ಜನರೇಟರ್ ಗಳನ್ನು ಅಳವಡಿಸಿಕೊಂಡ ಹಾಗೂ ಖಾಸಗಿಯಾಗಿ ಭದ್ರತೆಯ ಕೆಲ ಕ್ರಮಗಳನ್ನು ಕೈಗೊಂಡವರು ಪ್ರಮುಖರು. ಸರ್ಕಾರ ಹಾಗೂ ಅದರ ದೌರ್ಬಲ್ಯಗಳಿಂದ ಹೇಗೆ ಪಾರಾಗಬೇಕು ಎಂಬುದು ಇವರಿಗೆ ತಿಳಿದಿರುತ್ತದೆ. ದಂತಗೋಪರದ ಎಷ್ಟೇ ಎತ್ತರದ ಮಹಲಿನಲ್ಲಿದ್ದರೂ ಪರಿಸರ ಮಾಲಿನ್ಯದ ದುಷ್ಪರಿಣಾಮದಿಂದ ಪಾರಾಗುವಂತಿಲ್ಲ. ಪರಿಸರ ಮಾಲಿನ್ಯದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ತೋರಿಸಲು ಅವರು ಪರಿಸರ ಮಾಲಿನ್ಯ ಕುರಿತು ಧ್ವನಿ ಎತ್ತಿದ್ದಾರೆ. ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಹೆಚ್ಚಾಗಿರುವ ಪರಿಸರ ಮಾಲಿನ್ಯಕ್ಕೆ ರೈತರನ್ನು ಹೊಣೆಯಾಗಿಸಿದ್ದಾರೆ. ಈ ಸಂಗತಿಯು ನಮಗಾಗಲಿ, ಸರ್ಕಾರಕ್ಕಾಗಲಿ ತಿಳಿದಿಲ್ಲ ಎಂತಲ್ಲ. ರೈತರು ತಮ್ಮ ಹುಲ್ಲಿನ ಬಣವೆಗಳನ್ನು ಸುಡುವ ಮೂಲಕ ದೆಹಲಿಯಲ್ಲಿ ಶೇ. 35ರಷ್ಟು ಮಾಲಿನ್ಯಕ್ಕೆ ಕಾರಣರಾಗುತ್ತಾರೆ ಎಂದರೆ, ದೆಹಲಿ ನಗರ ನಿವಾಸಿಗಳು ಬಳಸುವ ಕಾರು ಹಾಗೂ ಹವಾ ನಿಯಂತ್ರಿತ ವ್ಯವಸ್ಥೆಯಿಂದ ಆಗುವ ಮಾಲಿನ್ಯದ ಪ್ರಮಾಣವೆಷ್ಟು ಎಂಬುದೂ ತಿಳಿದಿರಬೇಕಾಗುತ್ತದೆ.

ಮಾಲಿನ್ಯಕ್ಕೆ ನಗರವಾಸಿಗಳ ಪಾಲೆಷ್ಟು?
ವಾಹನ ದಟ್ಟಣೆಯಿಂದ ದೆಹಲಿಯಲ್ಲಿ ಶೇ. 40 ರಷ್ಟು ಪರಿಸರ ಮಾಲಿನ್ಯವಾಗುತ್ತಿದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣಾ ಪ್ರಾಧಿಕಾರ ಹೇಳುತ್ತಿದೆ. ದೆಹಲಿಯಲ್ಲಿ ಬಹುತೇಕ ವಾಣಿಜ್ಯ ವಾಹನಗಳು ಸಿಎನ್‌ಜಿ (ಕಾಂಪ್ರೆಸ್ಡ್ ನ್ಯಾಚುರಲ್ ಗ್ಯಾಸೆಸ್) ಹಾಗೂ ಖಾಸಗಿ ವಾಹನಗಳು (ಪೆಟ್ರೋಲ್-ಡೀಸೆಲ್ )ಇಂಧನ ಆಧರಿತವಾಗಿವೆ. ಇವು ನಗರದ ಪರಿಸರ ಮಾಲಿನಕ್ಕೆ ನೇರ ಕಾರಣವಾಗಿವೆ. ಒಂದು ವೇಳೆ, ಸಿಎನ್‌ಜಿ ಹಾಗೂ ಎಲ್‌ಪಿಜಿ ಆಧರಿತ ಕಾರುಗಳನ್ನು ಮಾತ್ರ ಬಳಸಬೇಕು ಎಂದು ಸರ್ಕಾರ ಇಲ್ಲವೇ ಕೋರ್ಟ್ ಆದೇಶಿಸಿದಲ್ಲಿ ಸಾರ್ವಜನಿಕರ ಆಕ್ರೋಶವನ್ನು ಊಹಿಸಬಹುದು.

ಪಟಾಕಿಗಳು ಕಾರಣರಹಿತವೆ?
ಕಳೆದ ವರ್ಷದ ದೀಪಾವಳಿಯ ಒಂದೇ ದಿನ ದೆಹಲಿಗರು 50 ಲಕ್ಷ ಕೆ.ಜಿ. ಪ್ರಮಾಣದಷ್ಟು ಪಟಾಕಿಗಳನ್ನು ಸುಟ್ಟಿದ್ದಾರೆ. ಭಾರತೀಯ ವಿಜ್ಞಾನ ಹಾಗೂ ಕೈಗಾರಿಕಾ ಸಂಶೋಧನಾ ಪರಿಷತ್ತು ತಯಾರಿಸಿದ ಹಾಗೂ ಹಸಿರು ಸ್ನೇಹಿ ಪಟಾಕಿಗಳನ್ನು ಹೊರತುಪಡಿಸಿ ದೆಹಲಿಯಲ್ಲಿ ಉಳಿದ ಪಟಾಕಿಗಳನ್ನು ಸುಡುವುದು ನಿಷೇಧಿಸಲಾಗಿದೆ. ಒಂದು ವೇಳೆ ನಿಷೇಧಿತ ಪಟಾಕಿಗಳ ಮಾರಾಟವಾಗುತ್ತಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಕುತೂಹಲದ ಸಂಗತಿ ಎಂದರೆ, ಹಸಿರು ಸ್ನೇಹಿ ಪಟಾಕಿಗಳಿಂದಲೂ ಪರಿಸರ ಮಾಲಿನ್ಯವಾಗುತ್ತದೆ. ಮೊನ್ನೆಯ ದೀಪಾವಳಿಯಲ್ಲಿ, 3500 ಪಟಾಕಿಗಳನ್ನು ಜಪ್ತಿ ಮಾಡಿ, 166 ಜನರನ್ನು ಬಂಧಿಸಲಾಗಿದೆ. 371 ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪಟಾಕಿ ಹಾಗೂ ಬಣವೆಗಳನ್ನು ಸುಡುವುದರ ಮೇಲೆ ಪರಿಸರ ಮಾಲಿನ್ಯವನ್ನು ಪತ್ತೆ ಹಚ್ಚುವ ಹಾಗೂ ಈ ಎರಡರ ಪೈಕಿ ಒಂದನ್ನು ಮಾತ್ರ ಗುರಿಯಾಗಿಸುವ ಸರಕಾರದ ಉದ್ದೇಶವನ್ನು ತಿಳಿಯಬಹುದು. ದೀಪಾವಳಿ ದಿನದ ರಾತ್ರಿ ದೆಹಲಿಯಲ್ಲಿ 999 ರಷ್ಟು ವಾಯು ಗುಣಮಟ್ಟದ ಸೂಚ್ಯಾಂಕವಿತ್ತು. ಟ್ವಿಟ್ಟಿಗರು ಪಟಾಕಿ ಸುಡುವ ಹಾಗೂ ಅವುಗಳಿಂದ ದಟ್ಟವಾಗಿ ಹೊರಹೊಮ್ಮುವ ವಿಷಕಾರಿ ಹೊಗೆಯ ದೃಶ್ಯಗಳನ್ನು ಪೋಸ್ಟ್ ಮಾಡಿ “ಫೈರ್ ಕ್ಯ್ರಾಕರ್ಸ್‌‌ವಾಲಿ ದೀಪಾವಳಿ’ ಎಂದು ಪೋಸ್ಟ್ ಮಾಡಿದ್ದರು. ಆದರೆ, ಮರುದಿನದ ಮಾಧ್ಯಮಗಳ ಸುದ್ದಿಯಲ್ಲಿ “ಪರಿಸರ ಸುರಕ್ಷಿತ ಮುಖ ಕವಚಗಳಿಗೆ ದೆಹಲಿಯಲ್ಲಿ ಭಾರಿ ಬೇಡಿಕೆ’ ಎಂದು ಬಿತ್ತರಿಸಿದ್ದವು. ಇದರ ಪರಿಣಾಮ, ದೆಹಲಿಯಲ್ಲಿಯ ಪರಿಸರ ಮಾಲಿನ್ಯಕ್ಕೆ ರೈತರೇ ಮೂಲ ಕಾರಣ ಎಂಬ ಆರೋಪ ಮತ್ತೊಮ್ಮೆ ಸಾಬೀತಾದಂತೆ ಆಯಿತು.

ಬೆಳೆಯ ಹುಲ್ಲನ್ನು ಸುಡುವುದು ರೈತರಿಗೆ ಮನರಂಜನೆಯಲ್ಲ!
ಪಟಾಕಿಗಳನ್ನು ಮನರಂಜನೆಗಾಗಿ ಸುಡಲಾಗುತ್ತದೆ. ಆದರೆ, ಬೆಳೆಯ ಹುಲ್ಲನ್ನು ರೈತರು ಸುಡುವುದು ಮನರಂಜನೆಗಾಗಿ ಅಲ್ಲ. ರಾಶಿ ನಂತರದ ಹುಲ್ಲು ಸುಡುವುದು ಅವರ ಕೃಷಿ ಪ್ರಕ್ರಿಯೆಯ ಒಂದು ಭಾಗ. ಬೀಜಬಿತ್ತನೆಗಾಗಿ ನೆಲವನ್ನು ಹಸನು ಮಾಡುವುದು ಇದರ ಉದ್ದೆಶ. ಹರಿಯಾಣ, ಪಂಜಾಬ್ ಹಾಗೂ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಬೀಜ ಬಿತ್ತನೆಗೆ ಸಮಯದ ಅಭಾವ ಇರುವ ಹಿನ್ನೆಲೆಯಲ್ಲಿ ಉಳಿದಿದ್ದ ಹುಲ್ಲಿನ ಬಣವೆಗಳನ್ನು ಸುಡುತ್ತಾರೆ. ಈ ಪ್ರಕ್ರಿಯೆಯು 1960ರ ನಂತರ ಬದಲಾಯಿತು. ಈ ಭಾಗದಲ್ಲಿ ರೈತರು ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ಬಿತ್ತನೆ ಮಾಡುತ್ತಾರೆ. ಇದರಿಂದಾಗಿ, ಮುಂದಿನ ಬೆಳೆ ಬೆಳೆಯಲು ಅವರಿಗೆ ಜಮೀನನ್ನು ಸಿದ್ಧವಾಗಿಟ್ಟುಕೊಳ್ಳುವುದು ಅನಿವಾರ್ಯವಾಗುತ್ತದೆ ಎನ್ನುತ್ತಾರೆ ಪಂಜಾಬ್ ಕೃಷಿ ಕಾರ್ಯದರ್ಶಿ ಕಹಾನ್ ಸಿಂಗ್ ಪನ್ನು.

ರಾಶಿ ಯಂತ್ರಗಳ ಮೂಲಕವೂ ತ್ಯಾಜ್ಯ ಹುಲ್ಲು ನಿಯಂತ್ರಣ ಮಾಡಬಹುದು. ಈ ವ್ಯವಸ್ಥೆಗಾಗಿ ಸರ್ಕಾರ ರೈತರಿಗೆ ಶೇ. 50ರಷ್ಟು ಸಬ್ಸಿಡಿ ನೀಡುತ್ತದೆ. ಇದರರ್ಥ, ರೈತರು ಈ ಯಂತ್ರಗಳನ್ನು ಖರೀದಿಸಬೇಕು. ಆಗಲೇ, ದೆಹಲಿ ವಾಸಿಗಳು ಸುಗಮವಾಗಿ ಉಸಿರಾಡುತ್ತಾರೆ ಎಂಬುದು. ದೆಹಲಿ ನಿವಾಸಿಗಳ ಪರಿಶುದ್ಧ ಗಾಳಿಗಾಗಿ ರೈತರು ದಂಡ ತೆರಬೇಕು ಎಂಬುದನ್ನು ಸರ್ಕಾರ ಹೇಳಿದಂತಿದೆ. ಪರಿಸರ ಮಾಲಿನ್ಯದಲ್ಲಿ ತಮ್ಮ ಪಾಲು ಇದೆ ಎಂಬುದನ್ನು ಒಪ್ಪಿಕೊಳ್ಳಲು ದೆಹಲಿ ವಾಸಿಗಳು ತಯಾರಿಲ್ಲ. ಆದರೆ, ಸಮಸ್ಯೆಗಳ ಸಂಖ್ಯೆ ಹೆಚ್ಚಿಸುತ್ತಿದ್ದಾರೆ.

ಪಟಾಕಿ ಸುಡುವುದು ದೆಹಲಿಗರಿಗೆ ಪ್ರತಿಷ್ಠೆ
ದೆಹಲಿಗರಿಗೆ ದೀಪಾವಳಿ ಇಲ್ಲವೇ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಸುಡುವುದು ಪ್ರತಿಷ್ಠೆಯ ಸಂಕೇತ. ಮನರಂಜನೆಯೂ ಹೌದು. ಭಾರತೀಯ ಸಂಸ್ಕೃತಿಯಲ್ಲಿ ಪಟಾಕಿ ಸಿಡಿಸುವುದು ಸತ್ ಸಂಪ್ರದಾಯ ಎನ್ನಲಾಗುತ್ತಿದೆ.

1830ರಲ್ಲಿ “ಮಾಡರ್ನ್ ಫೈರ್ ವರ್ಕರ್ಸ್’ ಹೆಸರಲ್ಲಿ ಸಿಡಿಮದ್ದುಗಳ ತಯಾರಿಕೆ ಆರಂಭವಾದರೂ ಕೋಲ್ಕತಾದಲ್ಲಿ 19ನೇ ಶತಮಾನದಲ್ಲಿ ಮೊದಲ ಬಾರಿ ಕಾರ್ಖಾನೆ ಆರಂಭವಾಯಿತು. ಆದರೆ, ಭಾರತೀಯ ಪ್ರಾಚೀನ ಯಾವುದೇ ಸಂಪ್ರದಾಯದಲ್ಲಿ ಸಿಡಿಮದ್ದುಗಳ ಸುಡುವಿಕೆ ಬಗ್ಗೆ ಉಲ್ಲೇಖಗಳಿಲ್ಲ. ದೆಹಲಿಯಂತಹ ಜನ-ವಾಹನ ದಟ್ಟಣೆ ಇರುವ ನಗರದಲ್ಲಿ ಪಟಾಕಿಗಳನ್ನು ಸುಡಬೇಕು ಎಂಬುದಕ್ಕೆ ಯಾವುದೇ ಸಮರ್ಥನೆಗಳಿಲ್ಲ. ಆದ್ದರಿಂದ, ರೈತರು ಹುಲ್ಲಿನ ಬಣವೆಗಳನ್ನು ಸುಡುವುದರಿಂದ ಪ್ರತಿ ವರ್ಷವೂ ದೆಹಲಿಯಲ್ಲಿ ಪರಿಸರ ಮಾಲಿನ್ಯ ವಾಗುತ್ತಿದೆ ಎಂಬ ವಾದಕ್ಕೂ ಸಮರ್ಥನೆಗಳಿಲ್ಲ.

ಕುತೂಹಲದ ಸಂಗತಿ ಎಂದರೆ, ಸುಪ್ರೀಂಕೋರ್ಟ್ ಸಹ ಎಲ್ಲ ಪಟಾಕಿಗಳ ಮಾರಾಟ ಹಾಗೂ ಸುಡುವುದನ್ನು ನಿಷೇಧಿಸಿಲ್ಲ. ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ’ಪರಿಸರ ಸ್ನೇಹಿ ಪಟಾಕಿಗಳು’ ಹೆಸರಿನೊಂದಿಗೆ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದೆ. ಆದರೆ, ದೀಪಾವಳಿ ದಿನದ ರಾತ್ರಿ ಹಾಗೂ ಮರುದಿನದ ಪರಿಸರದಲ್ಲಿ ಗಾಳಿಯ ಗುಣಮಟ್ಟ ಮಾಲಿನ್ಯ ಹೆಚ್ಚಿರುವ ಬಗ್ಗೆ ಸೂಚ್ಯಾಂಕಗಳು ತೋರುತ್ತವೆ. ಆದರೂ, ದೆಹಲಿ ನಗರ ವಾಸಿಗಳು ಇವುಗಳನ್ನು ಉಪೇಕ್ಷಿಸುತ್ತಾರೆ.

ತಮ್ಮ ಸುತ್ತಮುತ್ತಲಿರುವ ನಗರವಾಸಿಗಳ ಆರೋಗ್ಯವನ್ನೂ ನಿರ್ಲಕ್ಷಿಸಿ ದೆಹಲಿಯ ಶ್ರೀಮಂತರು ಸಂತೋಷವಾಗಿ ಹಬ್ಬದ ಆಚರಣೆ ನೆಪದಲ್ಲಿ ಪರಿಸರವನ್ನು ಮಲಿನ ಮಾಡುತ್ತಿದ್ದಾರೆ. ಆದರೆ, ಹುಲ್ಲಿನ ಬಣವೆಗಳಿಗೆ ಬೆಂಕಿ ಹಚ್ಚುವ ಹಾಗೂ ಕೃಷಿಗೆ ಅನಿವಾರ್ಯವೆನಿಸಿದ ರೈತರ ಚಟುವಟಿಕೆಗಳನ್ನು ಇವರು ಬಯಸುವುದಿಲ್ಲ.

ಸರ್ಕಾರ ಮಾತ್ರ, ಪರಿಸರ ಮಾಲಿನ್ಯದ ವಿರುದ್ಧ ದೆಹಲಿ ನಗರ ವಾಸಿಗಳಿಗೆ ಪರ್ಯಾಯ ಮಾರ್ಗ ಸೂಚಿಸಲು ತಯಾರಿಲ್ಲ. ದೆಹಲಿ ಸರ್ಕಾರ, ನ್ಯಾಯಾಂಗ ಹಾಗೂ ಪೊಲೀಸ್ ತನ್ನೆಲ್ಲ ಸಾಧನಗಳ ಬಲವನ್ನು ಬಳಸಿ, ರೈತರ ವಿರುದ್ಧವೇ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಪ್ರಾಚೀನ ಭಾರತದ ಕೆಲ ಸಮುದಾಯಗಳು ‘ಶ್ರಮ ವಿಭಜನೆ’ ತತ್ವದಡಿ, ದೆಹಲಿಯ ಪರಿಸರ ಮಾಲಿನ್ಯವನ್ನು ಸಹಿಸಿಕೊಂಡಿವೆ. ಆದ್ದರಿಂದ, ದೆಹಲಿಯಲ್ಲಿ ಕೆಲವರಿಗೆ ಮಾತ್ರವೇ ಪರಿಸರ ಮಲಿನ ಮಾಡುವ ವಿಶೇಷ ಹಕ್ಕು ಇದೆ, ಇನ್ನೂ ಕೆಲವರು, ಪರ್ಯಾಯ ಮಾರ್ಗಗಳತ್ತ ನೋಡುತ್ತಾ ಕುಳಿತುಕೊಳ್ಳುವ ಇಲ್ಲವೇ ದುಸ್ಥಿತಿಯನ್ನು ಎದುರಿಸುವ ಮನಸ್ಥಿತಿಯಲ್ಲಿದ್ದಾರೆ.

(ಮೂಲ: ದಿಲೀಪ್ ಮಂಡಲ್, ದಿ ಪ್ರಿಂಟ್)

ಕನ್ನಡಕ್ಕೆ: ವೆಂಕಟೇಶ್‌ ಮಾನು

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here