Homeಎಲೆಮರೆಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಈ ಇನಫ್ಲೇಷನ್ ಅಥವಾ ಹಣದುಬ್ಬರ ಅಂದರೇನು? ಬೈ ಡೇಟಾಮ್ಯಾಟಿಕ್ಸ್

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ

- Advertisement -
- Advertisement -

ಖರೇ ಹೇಳಬೇಕಂದರ ಇನಫ್ಲೇಷನ್ ಅಂದರೆ ಬರೇ ಉಬ್ಬರ ಅಥವಾ ಗಾಳಿ ಹಾಕಿಯೋ, ಮತ್ಯಾವುದೋ ರೀತಿಯಿಂದ ಉಬ್ಬಿಸೋದು. ಅದರ ಅರ್ಥ ವ್ಯವಸ್ಥಾದ ಬಗ್ಗೆ ಮಾತಾಡೋ ಮುಂದ ಅದು ಹಣದುಬ್ಬರ ಅಂತ ಅರ್ಥ.

ಅಂದರ ಏನು? ಸರಳ ಹೇಳಬೇಕಂದರ ಅದು ನಮ್ಮ ರೊಕ್ಕಕ್ಕ ಬೆಲೆ ಕಮ್ಮಿ ಆಗೇದ, ನಮ್ಮ ರೂಪಾಯಿಗೆ ಮೊದಲಿನಷ್ಟು ಸಾಮಾನು ಬರ್ತಾ ಇಲ್ಲ. ಈಗ ಕಮ್ಮಿ ಆಗೇದ ಅಂತ ಅರ್ಥ. ನಮ್ಮ ಮನ್ಯಾಗ ಅಜ್ಜಿಗಳು ಹೇಳತಿರತಾರಲ್ಲ, ನಮ್ಮ ಕಾಲ ಸೋವಿ ಕಾಲ, ಆವಾಗ ಒಂದು ಚೀಲ ಜೋಳ ಕೊಟ್ಟರ ಒಂದು ತೊಲಿ ಬಂಗಾರ ಬರ್ತಿತ್ತು ಅಂತ, ಅವರು ತಮಗ ಅರಿವಿರಲಾರದಂಗ ಹಣದ ಉಬ್ಬರದ ಬಗ್ಗೆ ಮಾತಾಡತಿರತಾರ. ಅಂದರ ಅವತ್ತಿಗೆ ರೂಪಾಯಿಗೆ ಕಿಮ್ಮತ್ತು ಇತ್ತು. ಈಗ ಇಲ್ಲ ಅಂತ.

ಖರೇ ಹೇಳಬೇಕಂದರ ಆ ಕಾಲ ಸೋವಿ ಕಾಲ ಅಲ್ಲ. ಅದು ಗಟ್ಟಿ ಕಾಲ. ಈಗಿನ ಕಾಲನೇ ಸೋವಿ.

ಈ ವಾರದ ರಿಸರ್ವ್ ಬ್ಯಾಂಕಿನ ವರದಿ ಪ್ರಕಾರ ಭಾರತದ ಉಬ್ಬರದ ಪ್ರಮಾಣ 7.35 ಆಗೇದಂತ. ಹಂಗಂದರ ಏನು?

ಅಂದರ- ಹಿಂದಿನ ಯಾವುದೋ ಒಂದು ವರ್ಷವನ್ನು ಮೂಲ ಅಳತೆಯ ವರ್ಷ ಅಂತ ಹಿಡಕೊಂಡರ ಆ ಲೆಕ್ಕದ ಮ್ಯಾಲೆ ಈ ವರ್ಷ ಕೆಲವು ನಿರ್ದಿಷ್ಟ ಸಾಮಾನುಗಳ ಬೆಲೆ ಎಷ್ಟು ಹೆಚ್ಚಾಗೇದ ಅಂತ.

ಪಂತ ಪ್ರಧಾನ ನರೇಂದ್ರ ಮೋದಿ ಅವರ ಸರಕಾರ ಬರೋ ಮುಂಚೆ ಇದು 1999 ಆಗಿತ್ತು. ಈಗ ಅದು ಬದಲಾಗಿ ಬದಲಾಗಿ ಈಗ 2017- 18 ಆಗೇದ. ಅಂದರ ಒಂದು ವರ್ಷದಾಗ ವಸ್ತುಗಳ ಬೆಲೆ 7.35 ಶೇಕಡಾ ಆಗೇದ ಅಂತ ಅರ್ಥ.

ಅಂದರ ಒಂದು ವರ್ಷದ ಹಿಂದೆ ಯಲ್ಲಪ್ಪ ಅನ್ನೋ ಮನಿಷಾ ಒಂದು ನೂರು ರೂಪಾಯಿಗೆ ಯಾವ ವಸ್ತು ಖರೀದಿ ಮಾಡತಿದ್ದನೋ ಅದನ್ನು ಖರೀದಿಸಲಿಕ್ಕೆ ಈಗ ಅವನಿಗೆ 107.35 ರೂಪಾಯಿ ಬೇಕಾಗತದ.

ಹಂಗಾರ 10 ವರ್ಷದ ಉಬ್ಬರದ ಪ್ರಮಾಣ ಎಷ್ಟು ಅಂತ ನೀವು ಕೇಳಿದರ ಶಾಕ್ ಆಗ್ತೀರಿ. ಅದು ಸುಮಾರು 105 ಶೇ. ಅಂದರ ಹತ್ತು ವರ್ಷದ ಹಿಂದ ನೂರು ರೂಪಾಯಿಗೆ ಇದ್ದ ಬೆಲೆ ಈಗ 205 ರೂಪಾಯಿಗೆ.

ಹಂಗಂತ ನಿರ್ಮಲಾ ಸೀತಾರಾಮನ್ ಅವರ ಕಾಲಕ್ಕೆ ಮಾತ್ರ ಆಪತ್ಕಾಲ ಅಂತ ಅಲ್ಲ. ಹಿಂದಿನವರೂ ಹಿಂಗ ಇದ್ದರು. ನಮ್ಮ ದೇಶದಾಗ ಶೇಕಡಾ 10 ಕ್ಕಿಂತ ಹೆಚ್ಚು ಉಬ್ಬರ ಇದ್ದ ವರ್ಷಗಳು- 1983, 1990, 1996, 1998, 2009 ಹಾಗೂ 2012. ಮತ್ತು ಅತ್ಯಂತ ಹೆಚ್ಚು ಉಬ್ಬರ ಇದ್ದ ವರ್ಷಗಳು 1974 – (25 ಶೇ). 1973 -(21. ಶೇ).

ಈ ವರ್ಷ ಅಮೆರಿಕೆ ಉಬ್ಬರ ಶೇ. 2.1 ಇದ್ದರ ಚೈನಾದ್ದು 2 ಅದ. ಜಪಾನಿನದು 0.9 ಅದ. ಅತ್ಯಂತ ಹೆಚ್ಚು ಇರೋದು ವಿಶ್ವ ಸುಂದರಿಗಳ ನಾಡಾದ ವೆನೆಜೂವೆಲಾದಾಗ ಶೇ. 255 ಅದ. ನಂತರ ಸ್ಥಾನ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಾದ ದೇಶಗಳದು. ನಾವು ಸದ್ಯ ಈ ಬಡ ದೇಶಗಳ ಜೊತೆ ಸ್ಪರ್ಧೆ ಮಾಡಲಿಕ್ಕೆ ಹತ್ತೇವಿ.

ಇದರ ದುಷ್ಪರಿಣಾಮ ಏನಪಾ ಅಂದರ ರೂಪಾಯಿಯ ಬೆಲೆ ಕಮ್ಮಿ ಆದಂತೆಲ್ಲಾ ಜನಸಾಮಾನ್ಯರ ಖರೀದಿಸುವ ಶಕ್ತಿ ಕಮ್ಮಿ ಆಗತದ. ಇದು ದೇಶದ ಆರ್ಥಿಕ ವ್ಯವಸ್ಥೆಯ ಮ್ಯಾಲೆ ಕೆಟ್ಟ ಪರಿಣಾಮ ಬೀರತದ.

ಅದು ಹೆಂಗಂತ ಹೇಳತೇನಿ. ಇಡೀ ಜಗತ್ತಿನ್ಯಾಗ ಮೂರು ರೀತಿ ಜನ ಇರತಾರ. ಉತ್ಪಾದಕರು, ಮಾರಾಟಗಾರರು ಹಾಗೂ ಬಳಕೆದಾರರು. ಇನ್ನು ಉತ್ಪಾದಕರು ಅಂದರ ರೈತರ ಹಂಗ ಆಹಾರ ಉತ್ಪಾದಕರು ಇರಬಹುದು, ಯಂತ್ರ ತಯಾರಿಸೋ ಉದ್ದಿಮೆದಾರರು ಇರಬಹುದು. ಇವೆರಡೂ ಇರದ ಸೇವೆ ನೀಡುವವರು ಇರಬಹುದು. ನಮ್ಮ ಮನಿಗೆ ಬರೋ ನೀರು ಸರಕು ಅಂತ ಆದರ, ಆ ನೀರು ಬಿಡೋ ನೀರುಗಂಟಿ ಸೇವೆ ಪೂರೈಕೆದಾರ. ಇವರ ಪ್ರಯತ್ನಕ್ಕ ನಾವು ಹಣದೊಳಗ ಬೆಲೆ ಕಟ್ಟತೇವಿ. ಅದು ಅವರ ವರಮಾನ. ಅದನ್ನು ಅವರು ತಮಗ ಬೇಕಾದ್ದನ್ನ ತೊಗೊಳ್ಳಲಿಕ್ಕೆ ಬಳಸಿಕೊಳ್ಳತಾರ.

ಇನ್ನು ವ್ಯಾಪಾರಸ್ಥರು ಏನನ್ನೂ ಉತ್ಪಾದಿಸದಿದ್ದರೂ ಎಲ್ಲಾನೂ ಮಾರಾಟ ಮಾಡತಾರ. ಅವರಿಗೆ ತಮ್ಮ ಬಂಡವಾಳ ಬಿಟ್ಟು ಮಿಕ್ಕೊ ಹಣನ ಲಾಭ. ಅದನ್ನು ಬಳಸಿ ಅವರು ಸರಕನ್ನೋ, ಸೇವೆಯನ್ನೋ ಖರೀದಿ ಮಾಡತಾರ. ಕೆಲವರ ಸೇವೆ ಸೋವಿಯಾಗಿ, ಇನ್ನು ಕೆಲವರದು ತುಟ್ಟಿಯಾಗಿ ಇರತದ. ಇದ ಸಮಸ್ಯೆ.

ಹಂಗಂತ ಇದು ಉಳ್ಳವರಿಗೆ ಒಳ್ಳೆಯದು. ಯಾಕಂದರ ಅವರ ಹತ್ತರ ಆಸ್ತಿ ಇರತದ. ಉಳ್ಳವರಿಗೆ ಇರಂಗಿಲ್ಲ. ಅವರ ಹತ್ತಿರ ಇರೋ ರೂಪಾಯಿಯ ಬೆಲೆ ಸವಿಸಿಗೋತ ಹೋಗತದ. ಆಸ್ತಿ ಸವಿಯಂಗಿಲ್ಲ. ಅದು ಯಾವಾಗಲೂ ಸವಿ -ಸವಿಯಾಗೇ ಇರತದ.

ಉಬ್ಬರದ ಕಾರಣಗಳು ಹಲವು ಅದರಾಗ ಬೇಡಿಕೆ ಎಳೆಯುವಿಕೆ, ಬೆಲೆ ತಳ್ಳುವಿಕೆ ಹಾಗೂ ಸಾಂಸ್ಥಿಕ ಅಂತ ಮೂರು ಪ್ರಮುಖ. ಆ ಅರೇಬಿಯಾದ ಮಹಾರಾಜರೆಲ್ಲ ವರ್ಷಕ್ಕೊಮ್ಮೆ ಸಭೆ ಸೇರಿ ತಮ್ಮ ಪೆಟ್ರೊಲ್ – ಡೀಸಲ್ ಉತ್ಪನ್ನ ಕಮ್ಮಿ ಮಾಡಿ ಅದರ ಬೆಲೆ ಜಾಸ್ತಿ ಮಾಡತಾರಲ್ಲ, ಅದು ಬೇಡಿಕೆ ಎಳೆಯುವಿಕೆ ಉದಾಹರಣೆ. ಇನ್ನೊಂದು ಉದಾಹರಣೆ ಅಂದರ ಇಂಟರ ನೆಟ್ಟಿನ್ಯಾಗ ಹೊಸಾ ಮೊಬೈಲ್ ಫೋನ್ ಮಾರಾಟಕ್ಕ ಬಂದಾಗ ಹತ್ತು ಸೆಕೆಂಡಿನ್ಯಾಗ ಖಾಲಿ ಆಗಿ ಮುಂದಿನ ಬಾರಿ ಅದರ ಬೆಲೆ ಹೆಚ್ಚಾಗತದಲ್ಲಾ ಅದು.

ಬೆಲೆ ತಳ್ಳುವಿಕೆ ಅಂದರ ಯಾವುದೇ ವಸ್ತು ಅಥವಾ ಸೇವೆಯ ಬೇಡಿಕೆ ಕಮ್ಮಿ ಇದ್ದರೂ ಬೆಲೆ ಯಾವುದೇ ಕಾರಣಕ್ಕೆ ಹೆಚ್ಚಾಗುವುದು. ಕುಶಲಿ ವೈದ್ಯರೊಬ್ಬರು ಹೃದಯ ಚಿಕಿತ್ಸೆಗೆ ಜಾಸ್ತಿ ಹಣ ತೊಗೊಳ್ಳೋದು, ಯಾರೂ ಕೊಳ್ಳದೇ ಇದ್ದರೂ ಪ್ಲಾಟಿನಂ ಉಂಗುರದ ಬೆಲೆ ಹೆಚ್ಚಾಗೋದು, ಇದಕ್ಕೆ ಉದಾಹರಣೆ.

ಇನ್ನು ಸಾಂಸ್ಥಿಕ ಅಂದರ, ಒಂದು ದೇಶ ಅಭಿವೃದ್ಧಿ ಹೊಂದಿದಂತೆ ಅಲ್ಲಿನ ಕುಶಲ ಕೂಲಿ ಹಾಗೂ ಕೌಶಲ್ಯ ರಹಿತ ಕೂಲಿ ಹೆಚ್ಚಾಗುವುದು. ಇದನ್ನು ಅರ್ಥ ಶಾಸ್ತ್ರಜ್ಞರು ಆರೋಗ್ಯವಂತ ಉಬ್ಬರ ಅಂತ ಕರೀತಾರ. ಉದಾಹರಣೆಗೆ ಭಾರತದಾಗ ಮನೆ ಕೆಲಸ ಮಾಡೋರಿಗೆ ತಿಂಗಳಿಗೆ ಐನೂರೋ , ಸಾವಿರನೋ ಕೊಟ್ಟರೆ ಅದೇ ಕೆಲಸಕ್ಕೆ ಅಮೆರಿಕಾದಾಗ ತಾಸಿಗೆ ಏಳು ನೂರು ರೂಪಾಯಿ ಕೊಡೋದು. ಉಳಿದ ಎರಡೂ ಥರದ ಉಬ್ಬರಗಳು ಆರೋಗ್ಯಕರ ಅಲ್ಲ.

ಜಗತ್ತಿನಾದ್ಯಂತ ತಜ್ಞರು ಶಿಫಾರಸು ಮಾಡುವ ಉಬ್ಬರದ ಪ್ರಮಾಣ ಶೇ. 2- 4. ಇದರಿಂದ ಜನ ಉಳಿಕೆ ಮಾಡೋಕಿಂತಾ ಖರೀದಿ ಮಾಡಲಿಕ್ಕೆ ಆಸಕ್ತಿ ತೋರಸತಾರ. ಆದರ ಭಾರತದ ಅಭಿವೃದ್ಧಿ ದರ ಶೇ. 5 ಇದ್ದು, ಉಬ್ಬರ 7.35 ಇದ್ದರ ಅದರ ಅರ್ಥ ದೇಶ ಹಿಮ್ಮುಖವಾಗಿ ನಡದದ ಅಂತ. ಇದು ಒಳ್ಳೆಯದಲ್ಲ ಅಂತ ಕೆಲವರು ಹೇಳತಾರ.

ಒಂದು ದೇಶದ ಕೇಂದ್ರ ಬ್ಯಾಂಕು ಸರಕಾರ ಇ‌ಷ್ಟೇ ನೋಟು ಪ್ರಿಂಟು ಮಾಡಬೇಕು. ಇದಕ್ಕಿಂತ ಹೆಚ್ಚು ಮಾಡಿದರ ಅದು ಉಬ್ಬರಕ್ಕ ಕಾರಣವಾಗಿ ರೂಪಾಯಿಯ ಬೆಲೆ ಕಮ್ಮಿ ಆಗತದ ಅಂತ ಸಲಹೆ ಕೊಡತದ. ಬಡವರ ಖರೀದಿ ಶಕ್ತಿ ಹೆಚ್ಚುವಂತಹಾ ಇನ್ನೂ ಕೆಲವು ಕ್ರಮಗಳನ್ನೂ ಕೈಕೊಳ್ಳಬೇಕು.

ಆದರ ಈಗ ನಮ್ಮ ದೇಶದಾಗ ಸರಕಾರಕ್ಕ ಸಲಹೆ ಕೊಡೋವಷ್ಟು ಧೈರ್ಯವಂತರು ಯಾರಿಲ್ಲ. ಅವರು ಕೊಡೋ ಸ್ವಲ್ಪ ಸಲಹೆಯನ್ನೂ ಕೇಳೋ ಕಿವಿಗಳೂ ಇದ್ದಂತಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...