Homeಸಂದರ್ಶನಭಾರತೀಯ ಅಂದರೆ ಯಾರು ಎಂಬುದೇ ಅಸಲೀ ಪ್ರಶ್ನೆ

ಭಾರತೀಯ ಅಂದರೆ ಯಾರು ಎಂಬುದೇ ಅಸಲೀ ಪ್ರಶ್ನೆ

- Advertisement -
ರಾಜದೀಪ್ ಸರ್‍ದೇಸಾಯಿ– ಸರ್, ‘ಮೋದಿ ಭಾರತದ ಪ್ರಧಾನ ಮಂತ್ರಿ ಆಗಿರುವುದನ್ನು ಒಬ್ಬ ಭಾರತೀಯ ಪ್ರಜೆಯಾಗಿ ನಾನು ಒಪ್ಪುವುದಿಲ್ಲ’ ಎಂದು ಮೂರು ವರ್ಷಗಳ ಹಿಂದೆ ಹೇಳಿದ್ದಿರಿ. ಈಗ 2019ರ ಚುನಾವಣೆ ಸಮೀಪಿಸುತ್ತಿದೆ. ನಿಮ್ಮ ಅನಿಸಿಕೆಯಲ್ಲಿ ಏನಾದರೂ ಬದಲಾವಣೆ ಇದೆಯೆ?
ಅಮರ್ತ್ಯ ಸೇನ್– ಇಲ್ಲ, ಯಾವ ಬದಲಾವಣೆಯೂ ಇಲ್ಲ. ಆ ಹೇಳಿಕೆಗೆ ಈಗ ಅಷ್ಟೊಂದು ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ. ಏಕೆಂದರೆ ಚುನಾವಣೆ ಕೇವಲ ಮೋದಿಯ ಬಗ್ಗೆ ಅಲ್ಲ, ಈ ಚುನಾವಣೆ ಭಾರತವೆಂಬ ಪರಿಕಲ್ಪನೆಯ ಕುರಿತದ್ದಾಗಿದೆ. ಹಾಗಾಗಿ ವಿರೋಧ ಪಕ್ಷಗಳ ಐಕ್ಯತೆ ತುಂಬಾ ಮುಖ್ಯವಾಗುತ್ತದೆ. ಆದರೆ ಅದು ಬರೀ ಚುನಾವಣೆಯಲ್ಲಿ ಗೆಲ್ಲಲು ಮಾತ್ರವಲ್ಲ, ಗೆಲ್ಲುವುದೂ ಕೂಡ ತುಂಬಾ ಮುಖ್ಯವೇ ಆದರೂ ವಿರೋಧ ಪಕ್ಷಗಳ ಪ್ರಾಮುಖ್ಯತೆ ಅಷ್ಟಕ್ಕೆ ಸೀಮಿತವಲ್ಲ. ಕಳೆದ ಮೂರು ಸಾವಿರ ವರ್ಷಗಳಲ್ಲಿ, ಒಬ್ಬ ಭಾರತೀಯನೆಂದರೆ ಯಾರು ಎನ್ನುವ ಒಂದು ಪರಿಕಲ್ಪನೆಯನ್ನು ನಾವು ರೂಪಿಸಿಕೊಂಡಿದ್ದೇವೆ. ಭಾರತದಲ್ಲಿ ನೆಲೆಸಿರುವವರು, ಭಾರತ ದೇಶಕ್ಕೆ ತಮ್ಮ ಮೊದಲ ನಿಷ್ಠೆ ಎನ್ನುವವರು, ಹೊರದೇಶಗಳಿಗೆ ಹೊರಡಲು ಉದ್ದನೆಯ ಸಾಲುಗಳಲ್ಲಿ ನಿಲ್ಲುವ ಜನರು, ಇವರೆಲ್ಲರೂ. ಇಲ್ಲಿ ಮುಖ್ಯವಾದ ಅಂಶವೆಂದರೆ ತನ್ನನ್ನು ತಾನು ಭಾರತೀಯ ಎಂದು ಗುರುತಿಸಿಕೊಳ್ಳುವ ಪ್ರತಿಯೊಬ್ಬನಿಗೂ ಆ ಹಕ್ಕಿದೆ. ಭಾರತೀಯತೆಯ ಪ್ರತಿಪಾದನೆ ಮೊದಲು ಮಾಡಿದ್ದು ಅಶೋಕ ಎಂದು ಹಲವರ ವಾದ. ಆದರೆ ಅಶೋಕನ ಗುರುವಾದ ಗೌತಮ ಬುದ್ಧನೂ ಇದನ್ನೇ ಹೇಳಿದ್ದ. ಆದರೆ ಬುದ್ಧನ ವಾದ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಅದು ಸಂಪೂರ್ಣ ಮಾನವತೆಯ ಬಗ್ಗೆ ಅಥವ ಅದಕ್ಕಿಂತಲೂ ಮಿಗಿಲಾದುದಾಗಿತ್ತು. ಅಂದರೆ ಅಲ್ಲಿ ಒಂದು ರೀತಿಯ ಒಳಗೊಳ್ಳುವಿಕೆ ಇತ್ತು, ಆಗ ‘ನೀನು ಸರಿಯಾದ ಭಾರತೀಯನಲ್ಲ’ ಎಂದು ಹೇಳುವವರಿದ್ದಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ವಾದಗಳು ಹೆಚ್ಚಾಗಿರುವುದು ಕಂಡುಬರುತ್ತಿದೆ.
ಪ್ರಶ್ನೆ : ಹಾಗಾದರೆ, ಎಲ್ಲರನ್ನೂ ಒಳಗೊಂಡಿರುವ, ವಿವಿಧತೆಯಲ್ಲಿ ಏಕತೆಯಿರುವ ಭಾರತ ಸಮಾಜದ ಪರಿಕಲ್ಪನೆ ಅಪಾಯದಲ್ಲಿದೆ ಎಂದು ಅರ್ಥವೆ?
ಅಮರ್ತ್ಯ ಸೇನ್- – ನಾನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೇಳುತ್ತೇನೆ, ಹೌದು, ಇದು ಈಗಾಗಲೇ ಅಪಾಯದಲ್ಲಿದೆ. ಭಾರತವೆಂಬ ಪರಿಕಲ್ಪನೆಯನ್ನು ಕಾಪಾಡಲು ನಾವು ಏನಾದರೂ ಮಾಡಲೇಬೇಕು. ಭಾರತದಲ್ಲಿ ಅನೇಕ ಸಮಸ್ಯೆಗಳಿವೆಯೆಂಬುದನ್ನು  ಒಪ್ಪಿಕೊಳ್ಳಬೇಕು. ಜಾತೀಯತೆಯ ಸಮಸ್ಯೆ ಇದೆ, ಬುಡಕಟ್ಟು ಜನರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಕಾಡಿನಲ್ಲಿರುವ ಜನರ ಹಕ್ಕಿನ ಬಗ್ಗೆ ಕ್ರಿಸ್ತಪೂರ್ವ 300ರಲ್ಲಿಯೇ ಅಶೋಕ ಮಾತನಾಡಿದ್ದ. ಅನೇಕ ಸಮಸ್ಯೆಗಳ ಬಗ್ಗೆ ಬುದ್ಧ ಹೇಳಿದ್ದಾನೆ. ಭಾರತದಲ್ಲಿ ಅನೇಕ ಸಮಸ್ಯೆಗಳೂ ಇನ್ನೂ ಹಾಗೇ ಉಳಿದುಕೊಂಡಿವೆ. ಆದರೆ ಹಿಂದೆ ಒಳಗೊಳ್ಳುವಿಕೆಯ ಧೋರಣೆ ಇತ್ತು, ಆದರೆ ಈಗ ಆ ಒಳಗೊಳ್ಳುವಿಕೆ ಗಂಭೀರ ಅಪಾಯದಲ್ಲಿದೆ.
ಪ್ರಶ್ನೆ :  ಕಳೆದ ನಾಲ್ಕು ವರ್ಷಗಳಿಂದ ಒಂದು ಪದ ಬಳಕೆಯಲ್ಲಿದೆ. ಬಹುಸಂಖ್ಯಾತತ್ವ (majoritarianism) . ಭಾರತವೆಂಬ ಪರಿಕಲ್ಪನೆಗೆ ಈ ಬಹುಸಂಖ್ಯಾತತ್ವ ಅಪಾಯಕಾರಿ… ನೀವೇನು ಹೇಳುತ್ತೀರಿ?
ಅಮರ್ತ್ಯ ಸೇನ್-ಇದು ಒಂದು ತಪ್ಪಾದ ಪರಿಕಲ್ಪನೆ. ವಿಚಾರವಾದಿಗಳಾದ ನಮ್ಮಂತವರು ಕೂಡ ಈ ತಪ್ಪಾದ ಪರಿಕಲ್ಪನೆಯನ್ನು ಹೇಗೆ ಒಪ್ಪಿಕೊಂಡಿದ್ದು ಅಂತ. ಬಿಜೆಪಿಯ ಗೆಲುವನ್ನೇ ನಾವು ಪರಿಗಣಿಸಿದರೂ, ಅವರು ಪಡೆದಿದ್ದು 31% ವೋಟುಗಳನ್ನು ಮಾತ್ರ. ಭಾರತದಲ್ಲಿ 80%ಕ್ಕಿಂತ ಹೆಚ್ಚು ಜನರು ಹಿಂದುಗಳಿದ್ದಾರೆ. ಹಿಂದುಗಳಲ್ಲೇ ತುಂಬಾ ಕಡಿಮೆ ಜನರು ಬಿಜೆಪಿಗೆ ವೋಟು ಮಾಡಿದ್ದಾರೆ, ಹಾಗಾಗಿ, ಬಹುಸಂಖ್ಯಾತ ಹಿಂದುಗಳು ಎಂದಿಗೂ ಈ ನಿಲುವನ್ನು ಒಪ್ಪಿಲ್ಲ. ಆದರೆ, ಚುನಾವಣೆಗಳಲ್ಲಿ ಬಿಜೆಪಿಯ ಯಶಸ್ಸು ಅದ್ಭುತವಾಗಿದೆ, ಅದನ್ನೇ ಮೆಜಾರಿಟೇರಿಯನಿಸಂ ಎನ್ನಲಾಗದು. ಹೀಗೆಂದಾಗ ಅದು ಕಡಿಮೆ ಅಪಾಯಕಾರಿ ಎಂದು ಅರ್ಥ ಮಾಡಿಕೊಳ್ಳಬಾರದು.
ಪ್ರಶ್ನೆ : ನೀವು ಎಲ್ಲರನ್ನೂ ಒಳಗೊಳ್ಳುವ ಭಾರತ ಸಮಾಜದ ಬಗ್ಗೆ ಮಾತನಾಡುತ್ತಿರುವ ಈ ಸಂದರ್ಭದಲ್ಲಿ ನಾವು ಐಡೆಂಟಿಟಿ ಪಾಲಿಟಿಕ್ಸ್‍ನ ಘಟ್ಟದಲ್ಲಿ ಜೀವಿಸುತ್ತಿದ್ದೇವೆ. ಜಾತಿ, ಧರ್ಮ, ಪ್ರದೇಶಗಳಿಂದ ಗುರುತಿಸಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ.
ಅಮರ್ತ್ಯ ಸೇನ್– ನೋಡಿ, ನಮ್ಮೆಲ್ಲರಿಗೂ ಅನೇಕ ಐಡೆಂಟಿಟಿಗಳಿವೆ. ನಾನೊಬ್ಬ, ಭಾರತೀಯ, ಬೆಂಗಾಲಿ, ಅರ್ಥಶಾಸ್ತ್ರಜ್ಞ,  ನಾನೊಬ್ಬ ಪುರುಷ, ನನಗೆ ಗಣಿತ ಇಷ್ಟ, ಸಂಸ್ಕøತ ಇಷ್ಟ. ಇವೆಲ್ಲವುಗಳೆಲ್ಲವೂ ನನಗೆ ಹಲವು ಐಡೆಂಟಿಟಿ ನೀಡುತ್ತವೆ. ನನಗೆ ಸಂದರ್ಭಕ್ಕನುಗುಣವಾಗಿ ಆಯಾ ಐಡೆಂಟಿಟಿಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ. ಐಡೆಂಟಿಟಿ ರಾಜಕೀಯದ ಸಮಸ್ಯೆಯೇನೆಂದರೆ, ಆ ಐಡೆಂಟಿಟಿಯಿಂದ ಹೊರಗಿರುವವರ ವಿರುದ್ಧ ತಮ್ಮ ಐಡೆಂಟಿಟಿಯನ್ನು ಒಂದು ಆಯುಧವನ್ನಾಗಿ ಬಳಸಿಕೊಳ್ಳುವುದು. ಇದು ಐಡೆಂಟಿಟಿ ರಾಜಕೀಯದ ಕೆಡಕು.
ಪ್ರಶ್ನೆ : ಅಮೇರಿಕದಲ್ಲಿ ಹೆಚ್ಚುತ್ತಿರುವ ಐಡೆಂಟಿಟಿ ರಾಜಕೀಯಕ್ಕೂ, ಭಾರತದಲ್ಲಿಯ ಬೆಳವಣಿಗೆಗಳಿಗೂ ಮತ್ತು ವಿಶ್ವದಾದ್ಯಂತ ಹೆಚ್ಚುತ್ತಿರುವ ಬಲಪಂಥಿಯ ರಾಜಕಾರಣಕ್ಕೂ ಸಾಮ್ಯತೆಗಳಿದೆಯೆಂದು ಅನೇಕರು ಗುರುತಿಸುತ್ತಿದ್ದಾರೆ.
ಅಮರ್ತ್ಯ ಸೇನ್– ಹೌದು, ಸಹಿಷ್ಣುತೆಯ ದೀರ್ಘವಾದ ಇತಿಹಾಸವುಳ್ಳಅಮರ್ತ್ಯ ಸೇನ್-, ಬಹುಸಂಸ್ಕøತಿಯ ಈ ದೇಶ ಇಂತಹ ಸವಾಲನ್ನು ಎದುರಿಸುತ್ತಿದೆ.  ಅಮೇರಿಕ, ಇಂಗ್ಲೆಂಡ್, ಹಂಗರಿ, ಪೋಲಂಡ್, ಆಸ್ಟ್ರಿಯಾ ಮತ್ತು ಇಟಲಿಯಂತಹ ದೇಶಗಳು ಕೂಡ ಇಂಥದೇ ಸಮಸ್ಯೆಯನ್ನು ಎದುರಿಸುತ್ತಿವೆ. ಆದರೆ ನಾವು ವಿವಿಧ ಧರ್ಮ, ಬುಡಕಟ್ಟು, ಜಾತಿ, ಭಾಷೆಗಳೊಂದಿಗೆ ಅನೇಕ ಕಾಲದಿಂದ ಜೀವಿಸುತ್ತಿದ್ದೇವೆ. ಹದಿನಾರನೇ ಶತಮಾನದ ಕೊನೆಯಲ್ಲಿ ಅಕ್ಬರ್ ಬಹುಸಂಖ್ಯಾತರು, ಅಲ್ಪಸಂಖ್ಯಾತರು, ಹಿಂದೂಗಳು, ಮುಸ್ಲಿಮರೊಂದಿಗೆ ಒಂದೇ ತೆರನಾಗಿ ನಡೆದುಕೊಳ್ಳಬೇಕೆನ್ನುವುದು ಸರಕಾರದ ಕರ್ತವ್ಯ ಎಂದು ಹೇಳಿದ್ದ. ಅದೇ ಕಾಲದಲ್ಲಿ ಜಿಯರ್ಡಾನೋ ಬ್ರುನೋನನ್ನು ರೋಮ್‍ನಲ್ಲಿ  ಧರ್ಮಭ್ರಷ್ಟತೆಯ ಆಪಾದನೆಯ ಮೇಲೆ ಜೀವಂತ ಸುಡಲಾಗಿತ್ತು. ನಾವು ಆ ಕಾಲದಲ್ಲಿಯೇ ಅವರೆಲ್ಲರಿಗಿಂತ ಮುಂದೆ ಇದ್ದೆವು ಎಂಬುದನ್ನು ನೆನಪಿನಲ್ಲಿಡಬೇಕು. ಹಾಗಾಗಿ, ಅಮೇರಿಕದಲ್ಲಿ ಟ್ರಂಪ್ ಏನೋ ಮಾಡುತ್ತಿದ್ದಾನೆ ಎಂದು ನಾವೂ ಅದನ್ನೇ ಮಾಡಬೇಕಿಲ್ಲ.
ಪ್ರಶ್ನೆ : ಒಂದರ್ಥದಲ್ಲಿ ಭಾರತ ವಿಶ್ವಕ್ಕೆ ದಾರಿ ತೋರಿಸಬೇಕಿದೆ. 
ಅಮರ್ತ್ಯ ಸೇನ್– ನಾವದನ್ನು ಮಾಡಿದ್ದೇವೆ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಆ ಇತಿಹಾಸವನ್ನು ನಾವು ಕಡೆಗಣಿಸಿದ್ದೇವೆ. ಎಂಬುದನ್ನು ಒಪ್ಪಿಕೊಳ್ಳಬೇಕು. ಇಂಥಾ ಸಾಧನೆಯ ಜೊತೆಜೊತೆಗೆ ಆಗಾಗ್ಗೆ ಕುಸಿತವನ್ನೂ ಕಂಡಿದ್ದೇವೆ, ನಾವು ಅದನ್ನೂ ಒಪ್ಪಿಕೊಳ್ಳಬೇಕು.
ಪ್ರಶ್ನೆ : 2014 ರಲ್ಲಿ ಮೋದಿ ಅಧಿಕಾರಕ್ಕೆ ಬರುವುದರೊಂದಿಗೆ ಪ್ರಾರಂಭವಾಗಲಿಲ್ಲ. ಅದಕ್ಕಿಂತ ಮುಂಚೆಯೂ ಕೋಮು ಗಲಭೆಗಳು ಆಗುತ್ತಿದ್ದವು, ಇತರ ಸಮಸ್ಯೆಗಳೂ ಇದ್ದವು.
ಅಮರ್ತ್ಯ ಸೇನ್– ಈ ವಿಷಯವನ್ನು ಹೀಗೆ ನೋಡಬಹುದು. ‘ಕಾಲರಾ ಹೊಸ ರೋಗವಲ್ಲ, ಅದು ಸಾವಿರಾರು ವರ್ಷಗಳಿಂದಲೂ ಇದ್ದೇ ಇದೆ. ಆದ್ದರಿಂದ ನಾನು ಕಾಲರಾ ರೋಗವನ್ನು ತಡೆಗಟ್ಟಲು ಪ್ರಯತ್ನಿಸುವುದಿಲ್ಲ’ ಎನ್ನಲಾಗುತ್ತದೆಯೆ? ಸಾವಿರಾರು ವರ್ಷಗಳಿಂದ ಇದ್ದರೇನಾಯಿತು, ಈಗ ಆ ರೋಗ ಸಾಂಕ್ರಾಮಿಕ ರೋಗವಾಗಿ ಹರಡುತ್ತಿದ್ದಾಗ ಅದನ್ನು ತಡೆಗಟ್ಟಲು ಹೋರಾಟ ಮಾಡಲೇಬೇಕಾಗುತ್ತದೆ. 
ಪ್ರಶ್ನೆ : ಈ ಹೋರಾಟ ಕೇವಲ ಮೋದಿಯ ವಿರುದ್ಧದ ಹೋರಾಟವಷ್ಟೇ ಆಗಬಾರದು, ಇದು ಭಾರತದ ಪರಿಕಲ್ಪನೆಯ ಹೋರಾಟವಾಗಬೇಕು ಎನ್ನುತ್ತೀರಿ. ಈಗಿರುವ ಪ್ರತಿಪಕ್ಷಗಳಿಗೆ ಇದು ಸಾಧ್ಯವಾ?
ಅಮರ್ತ್ಯ ಸೇನ್- ನಾನು ಈ ಹೋರಾಟ ಮೋದಿಯ ವಿರುದ್ಧ ಅಲ್ಲ ಎಂದು ಹೇಳುತ್ತಿಲ್ಲ. ವಿಶಾಲ ಅರ್ಥದಲ್ಲಿ, ಈ ಹೋರಾಟ ಮೋದಿಯ ವಿರುದ್ಧ ಮಾತ್ರವಲ್ಲ ಆದರೆ ಖಂಡಿತವಾಗಿಯೂ ಮೋದಿಯ ವಿರುದ್ಧವೂ ಇರಬೇಕು. ಏಕೆಂದರೆ ಅವರೇ ಬಿಜೆಪಿಯ ಸರಕಾರವನ್ನು ನಡೆಸುತ್ತಿರುವುದು ಹಾಗೂ ಇದೇ ಸರಕಾರ ಒಳ್ಳೆಯ ಆರ್ಥಿಕ, ಸಾಮಾಜಿಕ ನೀತಿಗಳನ್ನು ದಾರಿತಪ್ಪಿಸುತ್ತಿರುವುದು. ವಿಚ್ಛಿದ್ರಕಾರಿ ನೀತಿಗಳನ್ನು ಅಳವಡಿಸಿಕೊಂಡಿದೆ. ಇದೇ ‘ಹಿಂದುತ್ವ’ ಹೆಸರಿನ ರಾಜಕೀಯದ ಜೀವಾಳ. ಹಾಗಾಗಿ ಇದನ್ನು ಕೇವಲ ಮೋದಿಯ ವಿರುದ್ಧದ ಹೋರಾಟವಾಗದೆ, ಒಬ್ಬ ಭಾರತೀಯ ಎಂದರೆ ಯಾರು ಎಂದು ಒತ್ತಿ ಒತ್ತಿ ಹೇಳುವ ಹೋರಾಟವಾಗಬೇಕಿದೆ.
ಪ್ರಶ್ನೆ : ದುರ್ಬಲವಾಗುತ್ತಿರುವ ಎಡಪಕ್ಷಗಳು, ಪ್ರಾದೇಶಿಕ ಶಕ್ತಿಯಾಗಿರುವ ಮಮತಾ ಬ್ಯಾನರ್ಜಿ, ಕುಟುಂಬ ರಾಜಕೀಯದ  ಕಾಂಗ್ರೆಸ್ – ಇವುಗಳು ಉತ್ತರವಾಗಬಲ್ಲವೇ ಅಥವಾ ಭಾರತಕ್ಕೆ ಒಂದು ಹೊಸ ರಾಜಕೀಯ ಶಕ್ತಿಯ, ಪಕ್ಷದ ಅವಶ್ಯಕತೆಯಿದೆಯೇ? 
ಅಮರ್ತ್ಯ ಸೇನ್-ಹೊಸ ರೀತಿಯ ರಾಜಕೀಯ ಅಂದ ಕೂಡಲೇ, ಇದ್ದದ್ದನ್ನೆಲ್ಲ ಅಳಿಸಿಹಾಕಿ ಹೊಸದಾಗಿ ಪ್ರಾರಂಭಿಸುವ ಚಿತ್ರಣ ಕಣ್ಣಮುಂದೆ ಬರುತ್ತದೆ. ಆದರೆ ರಾಜಕೀಯ ಎಂದಿಗೂ ಆ ರೀತಿ ಮುಂದುವರೆಯುವುದಿಲ್ಲ. ಹಿಂದಿನ ಅನುಭವದ ಆಧಾರದ ಮೇಲೆ ಇಂದಿನ ರಾಜಕೀಯ ಮುಂದುವರೆಯುತ್ತದೆ. ಭಾರತೀಯ ಸ್ವಾತಂತ್ರ ಚಳುವಳಿಯ ದೀರ್ಘ ಇತಿಹಾಸ ಹೇಗೂ ನಮ್ಮೊಂದಿಗಿದೆ, ಆ ಚಳುವಳಿ ಯಾವುದೇ ರೀತಿಯಿಂದಲೂ ಕೋಮು ರಾಜಕೀಯವಾಗಿರಲಿಲ್ಲ. ಜಗತ್ತಿನ ಒಬ್ಬ ಶ್ರೇಷ್ಠ ವ್ಯಕ್ತಿಯಾದ ಮಹಾತ್ಮಾ ಗಾಂಧಿ ಇದಕ್ಕಾಗಿ ತಮ್ಮ ಜೀವವನ್ನೇ ತೆತ್ತರು. ಹಾಗಾಗಿ ನಾವುಗಳು ಹೊಸ ರಾಜಕೀಯವನ್ನು ಕಂಡುಹಿಡಿಯುವ, ಹುಟ್ಟುಹಾಕುವ ಪ್ರಶ್ನೆಯಿಲ್ಲ. ಹಾಗಾಗಿ ಈ ಎಲ್ಲ ಸಮಸ್ಯೆ, ಜಟಿಲತೆ, ಕೆಡಕುಗಳ ಹೊರತಾಗಿ ನಮಗೆ ಒಂದು ಸುದೀರ್ಘ ಹೋರಾಟದ ಪರಂಪರೆಯೂ ಇದೆ. ಆ ಪರಂಪರೆಯ ಲಾಭ ಪಡೆದುಕೊಳ್ಳಬೇಕಿದೆ.
ಪ್ರಶ್ನೆ : ಆದರೆ, ಮಹಾತ್ಮ ಗಾಂಧಿಗಿದ್ದ ನೈತಿಕ ಶಕ್ತಿ ಈಗ ಯಾರಲ್ಲಿದೆ? 
ಅಮರ್ತ್ಯ ಸೇನ್– ಇಲ್ಲ, ಆ ತರಹ ನೋಡುವುದು ಕೂಡ ತಪ್ಪಾಗುತ್ತದೆ. ಏಕೆಂದರೆ ಅದು ಒಬ್ಬ ವ್ಯಕ್ತಿ ತನ್ನ ದೌರ್ಬಲ್ಯಗಳ ಕಾರಣವೊಡ್ಡಿ ಏನನ್ನೂ ಮಾಡದೇ ಇರುವಂತಾಗುತ್ತದೆ. ಹೌದು, ನಮಗೆ ಮಹಾತ್ಮಾ ಗಾಂಧಿಯ ಶಕ್ತಿ ಇಲ್ಲ ನಿಜ. ಆದರೆ, ಅದು ನಮ್ಮ ನಿಷ್ಕ್ರಿಯತೆಗೆ ಕಾರಣವಾಗಬಾರದು. ಅಲ್ಲದೆ, ಗಾಂಧಿಜಿ ಹೇಳಿದ ಅನೇಕ ಕೆಲಸಗಳನ್ನು ಮಾಡಲು ನಾವು ಮಹಾತ್ಮಾ ಗಾಂಧಿಯಾಗಬೇಕಿಲ್ಲ. ಹೌದು, ನೀವು ಹೇಳುತ್ತಿರುವ ಕುಟುಂಬ ರಾಜಕಾರಣ, ಪಶ್ಚಿಮ ಬಂಗಾಳದ ಪಂಚಾಯತಿ ಚುನಾವಣೆಗಳಲ್ಲಾದ ಹಿಂಸೆ, ಇವೆಲ್ಲವುಗಳೂ ನಿಜವಾದ ಪ್ರಶ್ನೆಗಳೇ.  ಒಂದು ಐಕ್ಯತೆಯ ಭಾರತಕ್ಕಾಗಿ ನಾವು ಹೋರಾಡುತ್ತಿರಾವಾಗ ಇವುಗಳನ್ನು ಖಂಡಿತವಾಗಿಯೂ ಸಮರ್ಥಿಸಬೇಕಿಲ್ಲ. ಇವುಗಳನ್ನು ಖಂಡಿಸಬೇಕು. ಆದರೆ, ನಾನು ಇವುಗಳನ್ನು ಖಂಡಿಸುತ್ತೇನೆ, ಹಾಗಾಗಿ ವರ್ತಮಾನದ ಪ್ರಮುಖ ಕರ್ತವ್ಯವನ್ನು ಮರೆತುಬಿಡುತ್ತೇನೆ ಎನ್ನುವುದು ಸರಿಯಲ್ಲ. ನಮ್ಮ ಭಾರತದ ಐಕ್ಯತೆ ಮತ್ತು ಭಾರತೀಯರ ಐಕ್ಯತೆಯನ್ನು ಒತ್ತಿಹೇಳುವುದು ಇಂದಿನ ಪ್ರಮುಖ ಕರ್ತವ್ಯ.
ಪ್ರಶ್ನೆ : ಸಹೋದರತೆ, ಸಹಿಷ್ಣುತೆ, ಎಲ್ಲರನ್ನೂ ಒಳಗೊಳ್ಳುವ ಸಮಾಜ, ಸಮಾನತೆ, ಸಾಮಾಜಿಕ ನ್ಯಾಯದಂತಹ ಮೌಲ್ಯಗಳಿಗಾಗಿ ನಾವು ಹೋರಾಡಬೇಕಿದೆ. ಅದೇ ಸಮಯದಲ್ಲಿ ಕಲ್ಪನೆ, ಪರಿಕಲ್ಪನೆಗಳ ಬಗ್ಗೆ ಸಂವಾದಗಳನ್ನೂ ನಡೆಸಬೇಕು. ಅಮತ್ರ್ಯಸೇನ್ ಅವರ ಭಾರತದ ಪರಿಕಲ್ಪನೆಯ ವಿರುದ್ಧ ಮೋದಿಯ ಭಾರತದ ಪರಿಕಲ್ಪನೆಯ ಸಂವಾದ ನಡೆಯಬೇಕಿದೆ.  ಚರ್ಚೆಯಲ್ಲಿ ತೊಡಗುವವರು ಪರಸ್ಪರ ದ್ವೇಷಿಸದ ಆರೋಗ್ಯಕರ ಸಂವಾದವಾಗಬೇಕು. ಒಂದು ರೀತಿಯಲ್ಲಿ ಹೇಳಬೇಕೆಂದರೆ ನಮ್ಮ ಮೌಲ್ಯಗಳಿಗೆ ನಾವು ಮರಳಬೇಕಿದೆ…    
ಅಮರ್ತ್ಯ ಸೇನ್- ನೋಡಿ, ಮೌಲ್ಯಗಳು ತಮ್ಮಷ್ಟಕ್ಕೆ ತಾವೇ ಏನೂ ಮಾಡುವುದಿಲ್ಲ. ನಾವುಗಳು ಕ್ರಿಯೆಗಿಳಿಯಬೇಕು.  ಮೌಲ್ಯಗಳ ಆಧಾರದಲ್ಲಿ ಪರಿಶೀಲಿಸಲ್ಪಟ್ಟ, ಕೂಲಂಕಶವಾಗಿ ಪರೀಕ್ಷಿಸಲ್ಪಟ್ಟ ಕ್ರಿಯೆಗಳಿಗೆ ನಾವು ಮುಂದಾಗಬೇಕಿದೆ.
ಪ್ರಶ್ನೆ : ಅದನ್ನು ಮೋದಿ ಮಾಡಬಲ್ಲರು ಎಂದು ನಿಮಗನಿಸುತ್ತದೆಯೆ?
ಅಮರ್ತ್ಯ ಸೇನ್- ನೀವು ಪದೇಪದೇ ಮೋದಿಗೇ ಮರಳಿಬರುತ್ತೀರಿ. ಮೋದಿ ಇದನ್ನು ಮಾಡಬಲ್ಲರಾ ಅಂದರೆ ಖಂಡಿತಾ ಇಲ್ಲ. ಆದರೆ ಪ್ರಶ್ನೆ ಅದಲ್ಲ. ಮುಖ್ಯ ವಿಷಯವೆಂದರೆ, ಈ ಮೌಲ್ಯಗಳ ಬಗ್ಗೆ ಭಾರತ ಗಂಭೀರವಾಗಿ ಯೋಚಿಸಬೇಕಿದೆ. ಹಾಗಾಗಿ ಅತ್ಯಂತ ಪ್ರಮುಖ
ಪ್ರಶ್ನೆ – ಭಾರತೀಯ ಅಂದರೆ ಯಾರು?
ಪ್ರಶ್ನೆ : ಕೊನೆಯಲ್ಲಿ… ನೀವು ಈ ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಆಶಾವಾದಿಗಳಾಗಿದ್ದೀರಾ?
ಅಮರ್ತ್ಯ ಸೇನ್– ಹೌದು, ನಾನು ಆಶಾವಾದಿಯಾಗಿದ್ದೇನೆ. ಏಕೆಂದರೆ, ನಾನು ಕ್ರಿಯೆಗಳಲ್ಲಿ ನಂಬಿಕೆಯಿಟ್ಟಿದ್ದೇನೆ, ವಿಜ್ಞಾನದಲ್ಲಿ ನಂಬಿಕೆಯಿಟ್ಟಿದ್ದೇನೆ. ನನ್ನ ಹದಿನೆಂಟನೆಯ ವಯಸ್ಸಿನಲ್ಲಿ ವೈದ್ಯರು ನಾನು ಬದುಕುಳಿಯುವ ಛಾನ್ಸ್ ಕೇವಲ 15% ಎಂದು ಹೇಳಿದ್ದರು. ಆ 15% ಛಾನ್ಸ್‍ನಲ್ಲಿ ನಾನೇನು ಮಾಡಬೇಕು ಎಂದು ಕೇಳಿದೆ. ಹಾಗೂ ಅದನ್ನೇ ಮಾಡಿದೆ. ನೋಡಿ, ಈಗಲೂ ಜೀವಂತವಾಗಿದ್ದೇನೆ. ಹೀಗೆ ತನ್ನಿಂತಾನೆ ಎಲ್ಲವೂ ಆಗಿಬಿಡುತ್ತದೆ ಎನ್ನುವಂಥ ಆಶಾವಾದಿ ನಾನಲ್ಲ.  ಒಬ್ಬ ತತ್ವಜ್ಞಾನಿ ಹೇಳಿದ ಹಾಗೆ, ನಾವು ಅನೇಕ ವಿಷಯಗಳಲ್ಲಿ ಸೋಲುತ್ತೇವೆ. ಏಕೆಂದರೆ ನಾವು ಸರಿಯಾದ ರೀತಿಯಲ್ಲಿ ಯೋಚಿಸುವಲ್ಲೇ ಸೋತಿರುತ್ತೇವೆ. ನಮಗೆ ಸರಿಯಾದ ಕಾಳಜಿ ಇಲ್ಲದಿರುವುದರಿಂದ ಸೋಲುತ್ತಿರುತ್ತೇವೆ. ಹಾಗಾಗಿ ಭಾರತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರಿಯಾಗಿ ಚಿಂತಿಸಬೇಕಿದೆ. ಖಂಡಿತವಾಗಿಯೂ ಭಾರತ ಒಂದು ಗಂಭೀರ ಸವಾಲನ್ನು ಎದುರಿಸುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸರಿಯಾದ ದಿಕ್ಕಿನಲ್ಲಿ ನಾವು ಕ್ರಿಯೆಗಿಳಿದಿರುವಾಗ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆದು ನಿಮ್ಮ ಮನವೊಲಿಸುವಂತಹ, ನಿಮ್ಮನ್ನು ಆಕರ್ಷಿಸುವಂತಹ ವಿಷಯಗಳು ಬರುತ್ತವೆ. ಹೊರನೋಟಕ್ಕೆ ಅವು ಸರಿಯಾದುದ್ದೇ ಅನಿಸಬಹುದು. ಆದ್ದರಿಂದ ನಮ್ಮ  ಹೋರಾಟಗಳ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕಿದೆ. ಬರೀ ನಂಬಿಕೆಯಿಂದ ಏನೂ ಆಗುವುದಿಲ್ಲ, ಬರೀ ಮೌಲ್ಯಗಳಿಂದಲೂ ಏನೂ ಆಗುವುದಿಲ್ಲ. ಆದರೆ ಕೂಲಂಕಷವಾಗಿ ಪರಿಶೀಲಿಸಿದ ಪರಿಕಲ್ಪನೆಗಳ ಆಧಾರದ ಮೇಲೆ ಕೈಗೊಳ್ಳುವ ಕ್ರಿಯೆಗಳೇ ಮಾನವತೆಯ ಆಶಾಕಿರಣವಾಗಿವೆ ಹಾಗೂ ಭವಿಷ್ಯದಲ್ಲೂ ಆಶಾಕಿರಣಗಳಾಗಿರಲಿವೆ.
ರಾಜದೀಪ್ ಸರದೇಸಾಯಿ :  ಡಾಕ್ಟರ್ ಸೇನ್, ಭಾರತ ಎಂಬ ಪರಿಕಲ್ಪನೆಯ ಹೋರಾಟಕ್ಕಾಗಿ ಕ್ರಿಯಾಶೀಲರಾಗಬೇಕೆಂಬ ಆಶಯದೊಂದಿಗೆ ಈ ಸಂದರ್ಶನವನ್ನು ಮುಕ್ತಾಯಗೊಳಿಸುವ. ಧನ್ಯವಾದಗಳು.
ರಾಜದೀಪ್ ಸರ್‍ದೇಸಾಯಿ
ಕನ್ನಡಕ್ಕೆ: ರಾಜಶೇಖರ್ ಅಕ್ಕಿ
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೈದರಾಬಾದ್: ಮತದಾರರ ಪಟ್ಟಿಯಿಂದ 5.41 ಲಕ್ಷ ಮತದಾರರನ್ನು ಕೈ ಬಿಟ್ಟ ಚುನಾವಣಾ ಆಯೋಗ; ವರದಿ

0
ಮತದಾರರ ಪಟ್ಟಿಯ ಶುದ್ಧತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತೆಲಂಗಾಣದ ಹೈದರಾಬಾದ್ ಜಿಲ್ಲೆಯ 5.41 ಲಕ್ಷ ಮಂದಿಯ ಹೆಸರನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ ಎಂದು ದಿ ಹಿಂದೂ ವರದಿ ಮಾಡಿದೆ. 2023ರ ಜನವರಿಯಿಂದೀಚೆಗೆ...