Homeಮುಖಪುಟನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವದ ಬಗ್ಗೆ ನಿಮಗೆ ಗೊತ್ತೆ?

ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವದ ಬಗ್ಗೆ ನಿಮಗೆ ಗೊತ್ತೆ?

- Advertisement -
- Advertisement -

ಜೀವನ ಕಲೆಗಳು ಅಂಕಣ – 7 ಅನುಭೂತಿ (Empathy) -1

ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವ. ಅದರ ಮುಖ್ಯ ಲಕ್ಷಣ ಅನುಭೂತಿ. ಇದು ಮಾನವನಿಗೆ ಹುಟ್ಟುಗುಣ. ಕೇವಲ ಅನುಕಂಪ ಮತ್ತು ಸಹಾನುಭೂತಿಯ ಮಿಶ್ರಣ ಅನುಭೂತಿ ಅಲ್ಲ. ಅನುಭೂತಿಗೂ ಕನಿಕರಕ್ಕೂ ವ್ಯತ್ಯಾಸವಿದೆ; ಎರಡೂ ಬೇರೆ ಬೇರೆ. ಎಂಪಥಿ ನಮ್ಮ ಭಾವನಾತ್ಮಕ ಪ್ರಜ್ಞೆಯ ಒಂದು ಮುಖ್ಯ ಅಂಶ. ಇದು ನಮ್ಮ ಮತ್ತು ಇತರರ ನಡುವಿನ ಕೊಂಡಿ. ಇದರ ಶಕ್ತಿಯ ಆಧಾರದ ಮೇಲೆ ನಮ್ಮ ಅವರ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದು ಅಳೆಯಬಹುದು. ಅನುಭೂತಿ ನಮಗೆ ನಮಗಿಂತ ಭಿನ್ನವಾದ ವ್ಯಕ್ತಿಗಳನ್ನು ನಮ್ಮವರಂತೆ ಕಾಣಲು ಸಹಾಯಕವಾಗುತ್ತದೆ. ಅವರು ದಿವ್ಯಾಂಗರಾಗಿರಬಹುದು, ಬೇರೆ ದೇಶ, ಪ್ರಾಂತ್ಯ, ಭಾಷೆ, ವೇಷ-ಭೂಷ-ಆಹಾರ-ವಿಚಾರದವರಾಗಿರಬಹುದು. ಸರಳವಾಗಿ ಹೇಳಬೇಕೆಂದರೆ, ಬೇರೆಯವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ, ಹಂಚಿಕೊಳ್ಳುವುದರಲ್ಲಿ ನಾವು ಎಷ್ಟು ಸಮರ್ಥರು ಎನ್ನುವುದು ಅನುಭೂತಿ. ಇದರಲ್ಲಿ ಮೂರು ಬಗೆಗಳನ್ನು ಮನಶಾಸ್ತ್ರಜ್ಞರು ಗುರುತಿಸಿದ್ದಾರೆ.

ಕಾಗ್ನಿಟಿವ್ ಎಂಪಥಿ: ಇದನ್ನು ವೇದನಾ ಅನುಭೂತಿ ಎನ್ನಬಹುದು. ಇನ್ನೊಬ್ಬರ ಮುಖಚರ್ಯೆ, ಹಾವಭಾವದಲ್ಲಿ ಅವರ ಭಾವನೆಯನ್ನು ಗುರುತಿಸುವ ಕಲೆ. ಯಾರೋ ಹತ್ತಿರದವರು ದುಃಖದಲ್ಲಿದ್ದಾಗ ನಾವು ಸಂತಾಪ ಸೂಚಿಸುವ ಸಲುವಾಗಿ ಅವರಿಗೆ ಸಂತಾಪ ಸೂಚಕ ಪತ್ರ ಬರೆಯಬಹುದು, ಕರೆ ಮಾಡಬಹುದು, ಅನುಕಂಪ ಸೂಚಿಸಬಹುದು ಆದರೆ ಅವರ ದುಃಖವನ್ನು ಅರ್ಥಮಾಡಿಕೊಳ್ಳಲು ಅಥವಾ ಅವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಅದಕ್ಕಿಂತ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ದುಃಖದಲ್ಲಿರುವವರ ಹಾವಭಾವವನ್ನು ನಾವು ನಾವು ಬೇರೆ ಬೇರೆಯಾಗಿ ಅರ್ಥೈಸಬಹುದು. ಹೆಚ್ಚಾಗಿ ನಾವು ಅದನ್ನು ತಪ್ಪಾಗಿ ಅರ್ಥೈಸುತ್ತೇವೆ. ಅವರ ಮುಖದಲ್ಲಿ ಕಾಣುವ ಮುಗುಳ್ನಗೆ ಕೂಡ ದುಃಖಸೂಚಕವಾಗಿರಬಹುದು. ಚಿಕ್ಕ ಮಕ್ಕಳು ಕೂಡ ತಮ್ಮ ತಾಯಂದಿರ ದುಃಖ, ಕೋಪ, ಸಂತೋಷವನ್ನು ಕೂಡಲೇ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುತ್ತಾರೆ. ಇದು ಕೇವಲ ದುಃಖಕ್ಕೆ ಅಥವಾ ಸ್ತ್ರೀಯರಿಗೆ ಮೀಸಲಾದ ಪ್ರತಿಕ್ರಿಯೆಯಲ್ಲ, ಸುಖಕ್ಕೂ, ಪುರುಷರಿಗೂ ಅನ್ವಯಿಸುವ ಭಾವನಾತ್ಮಕ ಕಲೆ.

ಎಮೋಷನಲ್ ಎಂಪಥಿ: ಇದನ್ನು ಭಾವನಾತ್ಮಕ ಅನುಭೂತಿ ಎಂದು ಕರೆಯಬಹುದು. ಇದು ವ್ಯಕ್ತಿ ನಿಮ್ಮ ಎದುರಿಗೆ ಇಲ್ಲದಿದ್ದರೂ, ವಿಷಯ ತಿಳಿದ ಕೂಡಲೇ ಆಗುವ ನಿಮ್ಮ ಪ್ರತಿಕ್ರಿಯೆ. ಅವರ ಸ್ಥಳದಲ್ಲಿ ನಾವು ಇದ್ದು, ನಮಗೂ ಅದೇ ರೀತಿಯ ದುಃಖ ಅನುಭವಿಸಬೇಕಾಗಿದ್ದಲ್ಲಿ ನಮಗೆ ಆಗ ಹೇಗೆ ಅನಿಸುತ್ತದೆ ಅದನ್ನು ಊಹಿಸಿ (ಅಥವಾ ನೆನಪಿಸಿಕೊಂಡು) ನೀಡುವ ಪ್ರತಿಕ್ರಿಯೆ.

ಕಂಪ್ಯಾಷನೇಟ್ ಎಂಪಥಿ:  ಎಂದರೆ ಕನಿಕರದ ಅನುಭೂತಿ. ಇದು ನಮ್ಮನ್ನು ಭಾವನಾತ್ಮಕವಾಗಿ ವಿಚಲಿತ ಗೊಳಿಸುವುದರ ಜೊತೆಗೆ ಕ್ರಿಯಾಶೀಲರನ್ನಾಗಿಯೂ ಮಾಡುವಂತಹ ಶಕ್ತಿ. ಉದಾ: ಎಲ್ಲಾದರೂ ನೈಸರ್ಗಿಕ ದುರಂತ ಸಂಭವಿಸಿದಾಗ ನಾವು ನೀಡುವ ಸಹಾಯ ಹಸ್ತ. ಅಂತಹ ದುರಂತ ನಾವು ಅನುಭವಿಸಿರಲೇ ಬೇಕೆಂದಿಲ್ಲ. ಅದರ ಬಗ್ಗೆ ಕೇಳಿ, ತಿಳಿದು, ದೃಶ್ಯ ಮಾಧ್ಯಮದಲ್ಲಿ ನೋಡಿ ನಮಗೆ ಮನವರಿಕೆಯಾಗಿ ನಾವು ನೀಡುವ ಪ್ರತಿಕ್ರಿಯೆ ಇದಾಗಿರುತ್ತದೆ.

ಇವುಗಳನ್ನು ಬೆಳೆಸಿಕೊಳ್ಳುವುದು ಹೇಗೆ?

ವೇದನಾ ಅನುಭೂತಿ ನಮ್ಮ ಊಹಾಶಕ್ತಿಯನ್ನು ಆಧರಿಸಿರುತ್ತದೆ. ಇನ್ನೊಬ್ಬರ ಜೊತೆ ನಮ್ಮ ಸಂಬಂಧ ಎಷ್ಟು ಗಾಢವಾಗಿದೆ ಎನ್ನುವುದರ ಮೇಲೂ ಇದು ಹೋಗುತ್ತದೆ. ಉದಾ: ಸಿನಿಮಾ, ನಾಟಕ, ಟಿವಿ ಸೀರಿಯಲ್ಲಿನಲ್ಲಿ ಬರುವ ಭಾವನಾತ್ಮಕ ದೃಶ್ಯಗಳನ್ನು ಇವರು, ತಮ್ಮ ಮನೆಯಲ್ಲಿ ಕುಳಿತು, ನೋಡಿ, ಕಣ್ಣೀರು ಸುರಿಸುವವರೂ ಇರುತ್ತಾರೆ, ಅದು ಕೇವಲ ನಾಟಕೀಯ ಸನ್ನಿವೇಶ ಎಂದು ತಿಳಿದಿದ್ದರೂ ಸಹ. ಅವರಿಗೆ ಆ ಪಾತ್ರಧಾರಿಯ ಜೊತೆಗೆ ಇರುವ ಕಾಲ್ಪನಿಕ ಸಂಬಂಧ ಮತ್ತು ಪಾತ್ರದ/ಪಾತ್ರಧಾರಿಯ ಭಾವನೆಗೆ ಇವರು ನೀಡುವ ಸ್ವಂತ ಪ್ರತಿಕ್ರಿಯೆ ಆಗಿರುತ್ತದೆ. ಅವರ ಪಕ್ಕದಲ್ಲಿ ಕುಳಿತು ಅದೇ ದೃಶ್ಯವನ್ನು ನೋಡುತ್ತಿರುವ ಇನ್ನೋರ್ವ ವ್ಯಕ್ತಿ ಅದಕ್ಕೆ ತೀರಾ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಬಹುದು. ಪುರುಷರು ಕ್ರಿಕೆಟ್/ಫುಟ್ಬಾಲ್ ಪಂದ್ಯ ನೋಡುವಾಗ, ಅದರಲ್ಲಿ ಅವರ ಭಾಗವಹಿಸುವಿಕೆ/ತಲ್ಲೀನತೆಯೂ ಸಹಿತ ಅನುಭೂತಿಯನ್ನು ತೋರಿಸುತ್ತದೆ. ವೇದನಾ ಅನುಭೂತಿ ಬೆಳೆಸಿಕೊಳ್ಳಲು ಮೊದಲು ಇನ್ನೋರ್ವ ವ್ಯಕ್ತಿಯ/ಸನ್ನಿವೇಶದ ಬಗ್ಗೆ ನಾವು ಸಾಕಷ್ಟು ತಿಳಿದಿರಬೇಕು, ಇಲ್ಲದಿದ್ದಲ್ಲಿ ನಮ್ಮ ಊಹಾ ಶಕ್ತಿ ನಮಗೆ ಮೋಸ ಮಾಡಬಹುದು. ಎಷ್ಟೋ ಆತ್ಮಹತ್ಯೆ ಪ್ರಕರಣದಲ್ಲಿ ವ್ಯಕ್ತಿಗೆ ಹತ್ತಿರವಿದ್ದವರು ಅವರ ವೇದನೆಯನ್ನು ಅರ್ಥಮಾಡಿಕೊಳ್ಳದೇ, ಅವರ ನಗುವನ್ನು ಸಂತೋಷವೆಂದು ತಪ್ಪಾಗಿ ಗ್ರಹಿಸಿ, ಸಮಯವಿದ್ದಾಗ ಕ್ರಮ ವಹಿಸದೇ, ಪ್ರಸಂಗ ಕೈಮೀರಿ ಹೋಗಿರುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಇಂದಿನಿಂದ ಟಿವಿ ಸೀರಿಯಲ್ ನೋಡಿ ನೀವೂ ಸಹ ಕಣ್ಣೀರು ಸುರಿಸಿ ಎಂದು ನಾನು ಹೇಳುವುದಿಲ್ಲ, ಆದರೆ ಅಂತಹವರನ್ನು ಕಂಡರೆ ನೀವು ಅವರಿಂದ ಅನುಭೂತಿಯ ಬಗ್ಗೆ ಏನು ಕಲಿಯಬಹುದು ಯೋಚಿಸಿ.

ಭಾವನಾತ್ಮಕ ಅನುಭೂತಿ ಇನ್ನೊಬ್ಬರ ನೋವು ನಮಗೇ ಆದಂತೆ ಭಾವಿಸುವ ಕಲೆ. ಇಂಗ್ಲಿಷಿನಲ್ಲಿ ಇದನ್ನು “ವಾಕಿಂಗ್ ಇನ್ ಅದರ್ಸ್ ಶೂಸ್” ಎನ್ನುತ್ತಾರೆ. ಇದರಲ್ಲೂ ನಮ್ಮ ಕಲ್ಪನಾ ಶಕ್ತಿ ಕೆಲಸ ಮಾಡುತ್ತದೆ. ನಮಗೂ ಅಂತಹದೇ ಸನ್ನಿವೇಶ ಹಿಂದೆ ಎದುರಾಗಿದ್ದಾಗ, ನಾವು ಅದರಿಂದ ಆಗ ಹೇಗೆ ಪಾರಾದೆವು ಎಂಬುದನ್ನು ನೀವು ಅವರೊಂದಿಗೆ ಹಂಚಿಕೊಳ್ಳಬಹುದು. ಅಂತಹ ಸನ್ನಿವೇಶ ನಿಮ್ಮ ಜೀವನದಲ್ಲಿ ನಡೆಯದೇ ಇದ್ದರೂ, ಕಾಲ್ಪನಿಕವಾಗಿ ನೀವು ತೆಗೆದುಕೊಂಡ ಕ್ರಮ ಹೇಗೆ ಪ್ರಯೋಜನಕಾರಿಯಾಯಿತು, ಎಂಬುದು ನಿಮಗೆ ಹೇಳಿ-ಕೇಳಿ ತಿಳಿದಿದ್ದಲ್ಲಿ, ಅಂತಹ ಸಲಹೆ ಹಂಚಿಕೊಳ್ಳಬಹುದು. ಉದಾ: ಸ್ನೇಹಿತರೊಬ್ಬರು ಕೆಲಸದ ಸಮಯದಲ್ಲಿ ತಾವು ಮಾಡಿದ ತಪ್ಪಿನಿಂದ ಅವರಿಗಾದ ತೊಂದರೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ಆಗ ಅವರ ಸ್ಥಳದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ ಅಥವಾ ಅವರ ತೊಂದರೆ ಹೇಗೆ ಪರಿಹಾರವಾಯಿತು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಮಾಹಿತಿ ನಿಮಗೆ ಮುಂದೆ ಯಾವಾಗಲಾದರೂ ಪ್ರಯೋಜನಕ್ಕೆ ಬರಬಹುದು. ಇಂತಹ ಸಲಹೆ ಪ್ರತಿಯೊಂದು ಸಮಯ/ಸನ್ನಿವೇಷದಲ್ಲಿ ಕೆಲಸ ಮಾಡದಿರಬಹುದು ಎಂಬುದನ್ನು ನೆನಪಿಡಿ.

ಕನಿಕರದ ಅನುಭೂತಿ ರೂಢಿಸಿಕೊಳ್ಳುವುದು ಸುಲಭ. ದುಃಖದಲ್ಲಿರುವವರಿಗೆ ಸಹಾಯ ಹಸ್ತ ನೀಡಿ. ನಿಮ್ಮ ಹತ್ತಿರದವರಾಗಿದ್ದರೆ, ಸಮಯ-ಸಂದರ್ಭಕ್ಕನುಸಾರ, ಅವರಿಗೆ ಕುಡಿಯಲು ನೀರು ಕೊಡಿ, ಊಟ-ತಿಂಡಿ-ವಸತಿ ವ್ಯವಸ್ಥೆ ಮಾಡಿ. ಅವರು ಒಂಟಿಯಾಗಿರಲು ಇಷ್ಟಪಟ್ಟಲ್ಲಿ, ಇರಲು ಬಿಡಿ. ಅವರ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿಕೊಡಿ, ಅವರ ಮನೆಯ ಮಕ್ಕಳನ್ನು ವೃದ್ಧರನ್ನು ನೋಡಿಕೊಳ್ಳಿ. ನಿಮ್ಮ ಸಲಹೆಯನ್ನು ಅವರ ಮೇಲೆ ಹೇರಲು ಹೋಗಬೇಡಿ.

ಎಲ್ಲರೂ ತಮ್ಮ ತಮ್ಮ ಯುದ್ಧಗಳನ್ನು ತಾವೇ ಕಾದಾಡಿ ಗೆಲ್ಲಬೇಕು.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಟಿಎಂಸಿಯನ್ನು ಭಷ್ಟ ಎನ್ನುವ ಮೋದಿ ಕನ್ನಡಿ ನೋಡಿಕೊಳ್ಳಬೇಕು; ಅವರ ಪಕ್ಷ ಡಕಾಯಿತರಿಂದ ತುಂಬಿದೆ: ಮಮತಾ

0
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ತಂಡಗಳು ನಡೆಸಿರುವ ತನಿಖೆಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ತಮ್ಮ ಟಿಎಂಸಿ ಭ್ರಷ್ಟಾಚಾರದ ಆರೋಪ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಕನ್ನಡಿಯಲ್ಲಿ...