ಅಸ್ಪೃಶ್ಯತೆ ತಡೆಗೆ ಮುಂದಾದ ದಲಿತ ಹೋರಾಟಗಾರರು: ಮಧುಗಿರಿಯಲ್ಲೊಂದು ಆಶಾದಾಯಕ ಬೆಳವಣಿಗೆ

ಕೆಲವು ದಿನಗಳ ಹಿಂದಷ್ಟೇ ಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಸಾರ್ವಜನಿಕ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿ ಮಾಡಿದ್ದರು. ಘಟನೆ ಹೊರ ಬೀಳುತ್ತಿದ್ದಂತೆಯೇ ದಲಿತ ಒಕ್ಕೂಟವು ಸ್ಥಳಕ್ಕೆ ತೆರಳಿತ್ತು. ಅಧಿಕಾರಿಗಳ ಗಮನಕ್ಕೆ ತಂದುದ್ದಲ್ಲದೇ, ತಾಲೂಕು ಅಧಿಕಾರಿಗಳ ಜೊತೆ ಗ್ರಾಮಕ್ಕೆ ಧಾವಿಸಿ ಬಂದು ಅಸ್ಪೃಶ್ಯತೆ ಆಚರಣೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ನಂತರ ಸಾರ್ವಜನಿಕ ರುದ್ರಭೂಮಿಯಲ್ಲಿ ದಲಿತ ಹೆಣ್ಣುಮಗಳ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

ಇದರ ಬೆನ್ನಲ್ಲೇ ಅದೇ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದ್ದು ಘಟನೆ ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಾಗಾಗಿ ದಲಿತ ಸಂಘಟನೆಗಳು ತಾಲ್ಲೂಕು ದಂಡಾಧಿಕಾರಿಗಳ ಜೊತೆಗೆ ಮತ್ತೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದಾರೆ.

ತಹಸೀಲ್ದಾರ್ ನಂದೀಶ್ ರವರು ಕ್ಷೌರಿಕನು ಅಂಗಡಿಯನ್ನು ಎರಡು ದಿನಗಳಿಂದ ಬಂದ್ ಮಾಡಿರುವುದು ಗಮನಿಸಿ ಅತನಿಗೆ ದೂರವಾಣಿ ಕರೆ ಮಾಡಿ ಕೂಡಲೇ ಅಂಗಡಿ ಬಳಿ ಬರಲಿಲ್ಲವೆಂದರೆ ನಿನ್ನ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ತಕ್ಷಣವೇ ಕ್ಷೌರಿಕ ಲಕ್ಷ್ಮಿ ನಾರಾಯಣಪ್ಪ ದಂಡಾಧಿಕಾರಿಗಳ ಬಳಿ ಬಂದು ಕ್ಷಮೆಯಾಚಿಸಿ ನಾನು ಎಲ್ಲ ಸಮುದಾಯದವರಿಗೂ ಕ್ಷೌರ ಮಾಡಲು ಸಿದ್ಧನಿದ್ದು ಈ ಗ್ರಾಮದ ಪೂಜಾರಪ್ಪ ಮತ್ತು ಮೆಂಬರ್ ರಾಯಪ್ಪ ಎನ್ನುವವರು ದಲಿತರಿಗೆ ಕ್ಷೌರ ಮಾಡಕೂಡದೆಂದು ನನಗೆ ಹೆದರಿಸಿದ್ದರು. ಇದರಿಂದ ನಾನು ದಲಿತರಿಗೆ ಕ್ಷೌರ ಮಾಡುತ್ತಿರಲಿಲ್ಲ. ಬೇರೆ ಹಳ್ಳಿಗಳಲ್ಲಿ ನಾನು ದಲಿತರಿಗೂ ಸಹ ಕಟಿಂಗ್ ಶೇವಿಂಗ್ ಮಾಡುತ್ತಿದ್ದೆ ಎಂದು ಘಟನೆಯನ್ನು ವಿವರಿಸಿದ್ದಾರೆ.

ಇದನ್ನು ಆಲಿಸಿದ ತಹಸೀಲ್ದಾರರು ಅಂತವರ ವಿರುದ್ಧ ದೂರು ಪಡೆದು ಅಟ್ರಾಸಿಟಿ ಕೇಸ್ ದಾಖಲಿಸಲಾಗುವುದು. ನಾಳೆಯಿಂದ ದಲಿತರಿಗೆ ಕ್ಷೌರ ಮಾಡಲಿಲ್ಲವೆಂದರೆ ನಿನ್ನ ಅಂಗಡಿಯನ್ನು ಶಾಶ್ವತವಾಗಿ ಮುಚ್ಚಿಸಿ ಅಟ್ರಾಸಿಟಿ ಕೇಸ್ ದಾಖಲಿಸಲಾಗುವುದು ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಚಂದ್ರನ್ ಗೆ ನಾಳೆ ಇದೇ ಅಂಗಡಿಯಲ್ಲಿ ದಲಿತರಿಗೆ ಕ್ಷೌರ ಮಾಡಿಸಿ ಅದರ ಫೋಟೋ ಸಮೇತ ದಾಖಲೆ ನೀಡಬೇಕು ಎಂದು ಕಟ್ಟುನಿಟ್ಟಾಗಿ ಆದೇಶ ನೀಡಿದ್ದಾರೆ. ಮತ್ತೆ ಇಂತಹ ಘಟನೆಗಳು ನಡೆಯದಂತೆ ಈ ಗ್ರಾಮದಲ್ಲಿ ಅಸ್ಪೃಶ್ಯತಾ ಆಚರಣೆ ಅರಿವು ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕಗಳ ಮೂಲಕ ಜನರಿಗೆ ಅರಿವು ಮೂಡಿಸಬೇಕೆಂದು ತಿಳಿಸಿದ್ದಾರೆ.

ಭೀಮ್ ಆರ್ಮಿ ದಕ್ಷಿಣ ವಿಭಾಗೀಯ ರಾಜ್ಯಾಧ್ಯಕ್ಷ ಜೆಟ್ಟಿಅಗ್ರಹಾರ ನಾಗರಾಜು ಮಾತನಾಡಿ, ಈ ಹಿನ್ನೆಲೆಯಲ್ಲಿ ದಲಿತರು ಮತ್ತು ಸವರ್ಣೀಯರ ಮದ್ಯದಲ್ಲಿ ಯಾವುದೇ ಭೇದ ಭಾವವಿಲ್ಲವೆಂಬ ಸಂದೇಶವನ್ನು ಇಡೀ ಗ್ರಾಮಕ್ಕೆ ಸಾರುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು ಅಸ್ಪೃಶ್ಯತೆ ಆಚರಣೆ ಮಾಡುವುದಿಲ್ಲವೆಂಬ ಪ್ರತಿಜ್ಞಾವಿಧಿಯನ್ನು ಇತರೆ ಮೇಲ್ವರ್ಗದವರಿಗೆ ಬೋಧಿಸುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಅಗ್ರಹಿಸಿದರು.

ಆದಿಜಾಂಬವ ಮಹಾಸಭಾ ಅಧ್ಯಕ್ಷ ಮಹರಾಜು ಘಟನೆಯನ್ನು ಖಂಡಿಸಿ ಮಾತನಾಡಿ, ಇಂದು ಸಹ ಅನೇಕ ಗ್ರಾಮಗಳಲ್ಲಿ ದೇವಾಸ್ಥನ , ಹೋಟೆಲ್ ಹಾಗೂ ಮನೆಗಳಿಗೆ ಪ್ರವೇಶವಿಲ್ಲವಾಗಿದೆ. ಇಂದು ಬಹುತೇಕ ದಲಿತರು ಅಸ್ಪೃಶ್ಯತೆಯ ಭೀಕರತೆಗೆ ಮಾನಸಿಕವಾಗಿ ನೊಂದು ಪಟ್ಟಣ ಸೇರುತ್ತಿದ್ದಾರೆ. ಕೆಲವು ಜನರು ಅಸ್ಪೃಶ್ಯತೆ ಇಲ್ಲವೇ ಇಲ್ಲ ಎಂದು ವಾದಿಸುವ ಬದಲು ವಾಸ್ತವಾಂಶವನ್ನು ಅರ್ಥಮಾಡಿಕೊಂಡು ಸಮ ಸಮಾಜಕ್ಕೆ ಪ್ರತಿಯೊಬ್ಬರು ಪಣತೊಟ್ಟು ಆಂದೋಲನ ರೂಪದಲ್ಲಿ ಮನಸ್ಸು ಬದಲಾವಣೆ ಮಾಡಿದರಷ್ಟೇ ಉತ್ತಮ ಸಮಾಜ ಕಾಣಲು ಸಾಧ್ಯ ಎಂದಿದ್ದಾರೆ.

ಘಟನಾ ಸ್ಥಳದಲ್ಲಿ ಮಧುಗಿರಿ ಪಿಎಸ್‍ಐ ರವೀಂದ್ರ, ತಾಲ್ಲೂಕು ಸಮಾಜ ಕಲ್ಯಾಣಧಿಕಾರಿ ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಖಜಾಂಚಿ ಚಿಕ್ಕರಂಗಪ್ಪ (ಚಿಕ್ರಿ), ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಗಂಜಲಗುಂಟೆ ಗ್ರಾಪಂ ಅಧ್ಯಕ್ಷ ಜಿ.ಎನ್. ನಾಗರಾಜು, ಪಿಡಿಓ ರವಿಚಂದ್ರನ್, ಮಣೆಗಾರ ಸಂಘದ ತಾಲೂಕು ಅಧ್ಯಕ್ಷ ಶಂಕರಪ್ಪ , ಪೇದೆ ನಟರಾಜು, ದಲಿತಪರ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

ಕ್ಷೌರ, ಶವ ಸಂಸ್ಕಾರಕ್ಕೆ ಶ್ಮಶಾನ ಇವು ಎಲ್ಲಾ ಜನವರ್ಗಗಳಿಗೂ ಮೂಲಭೂತವಾಗಿ ಸಿಗಬೇಕಾದ ಸೌಲಭ್ಯಗಳು. ಆದರೆ ಅವುಗಳಿಗಾಗಿ ದಲಿತರು ಇನ್ನೂ ಹೋರಾಟ ಮಾಡಬೇಕಾಗಿರುವುದು ನಮ್ಮ ದೇಶದ ದುರಂತ. ಆಧುನಿಕ ಕಾಲದಲ್ಲಿಯೂ ಅಸ್ಪೃಶ್ಯತೆ ಮುಂದುವರೆಯುತ್ತಿರುವುದು ಅಕ್ಷಮ್ಯ ಅಪರಾಧ. ಇಲ್ಲಿನ ದಲಿತ ಹೋರಾಟಗಾರರ ಮಧ್ಯಪ್ರವೇಶ ಮತ್ತು ಸೂಕ್ಷ್ಮ ತಹಶೀಲ್ದಾರ್ ರವರಿಂದ ಮಧುಗಿರಿಯ ಈ ಘಟನೆ ಸದ್ಯಕ್ಕೆ ಸುಖಾಂತ್ಯ ಕಂಡಿದೆ. ಆದರೆ ದೇಶದ ಇನ್ನೂ ಲಕ್ಷಾಂತರ ಗ್ರಾಮಗಳಲ್ಲಿ ಅಸ್ಪೃಶ್ಯತೆ ಕೊನೆಗೊಳ್ಳುವುದು ಯಾವಾಗ ಎಂದು ದಲಿತ ಯುವಜನರು ಪ್ರಶ್ನಿಸುತ್ತಿದ್ದಾರೆ…

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.