Homeಮುಖಪುಟತುಮಕೂರಿನಲ್ಲಿ SP ಗ್ರಾಮ ವಾಸ್ತವ್ಯ: ಪ್ರಯೋಜನವೇನು, ಮಾಡಬೇಕಾದುದ್ದೇನು?

ತುಮಕೂರಿನಲ್ಲಿ SP ಗ್ರಾಮ ವಾಸ್ತವ್ಯ: ಪ್ರಯೋಜನವೇನು, ಮಾಡಬೇಕಾದುದ್ದೇನು?

ಹುತ್ತವ ಬಡಿದರೆ ಹಾವು ಸಾಯದು, ವಾಸ್ತವ್ಯ ಹೂಡಿದರೆ ಸಮಸ್ಯೆ ಬಗೆಹರಿಯದು ಎನ್ನುತ್ತಿವೆ ನಿದರ್ಶನಗಳು

- Advertisement -
- Advertisement -

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನಂ ವಂಶಿಕೃಷ್ಣ ಗ್ರಾಮ ವಾಸ್ತವ್ಯ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಮಾಡಬಹುದಾದ ಒಬ್ಬ ಪೊಲೀಸ್ ವರಿಷ್ಠಾಧಿಕಾರಿ ಹೀಗೆ ಗ್ರಾಮ ವಾಸ್ತವ್ಯದ ಮೂಲಕ ಜನರೊಂದಿಗೆ ಬೆರೆತು ಸಮಸ್ಯೆ ತಿಳಿದುಕೊಳ್ಳುವ ಪ್ರಯತ್ನ ಮಾಡಿರುವುದು ಮೆಚ್ಚುವ ಸಂಗತಿಯಾದರೂ ನಿಜದ ಸಮಸ್ಯೆಗಳ ‘ಶಸ್ತ್ರಚಿಕಿತ್ಸೆ’ ಪರಿಹಾರ ದೊರಕುತ್ತದೆಯೇ? ಜನರು ಕೇಳುವ ಎಲ್ಲಾ ರೋಗಗಳಿಗೆ, ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿಯಿಂದ ಪರಿಹಾರ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಶೂನ್ಯ.

ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಬೇಕೆಂಬ ಪ್ರಯತ್ನಗಳು ಇಂದು ನಿನ್ನೆಯವಲ್ಲ. ಅಧಿಕಾರ ಮತ್ತು ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ಪೊಲೀಸ್ ಠಾಣೆಗಳನ್ನು ಮುಕ್ತಗೊಳಿಸಬೇಕೆಂಬ ಮಾತುಗಳು ಹಿಂದಿನಿಂದ ಕೇಳಿಕೊಂಡೇ ಬರಲಾಗುತ್ತಿದೆ. ಆದರೆ ಇದುವರೆಗೂ ಪೊಲೀಸ್ ವ್ಯವಸ್ಥೆಯನ್ನು ರಾಜಕಾರಣದಿಂದ ಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಪೊಲೀಸ್ ವ್ಯವಸ್ಥೆ ಮುಕ್ತಗೊಳ್ಳಲು ಮುಂದಾದಷ್ಟು ರಾಜಕಾರಣದ ಕಪಿಮುಷ್ಟಿಗೆ ಮತ್ತಷ್ಟು ಸಿಲುಕಿಕೊಳ್ಳುತಲಿದೆ. ಇನ್ನು ಪೊಲೀಸ್ ವ್ಯವಸ್ಥೆಯೇ ರಾಜಕಾರಣದ ಕಪಿಮುಷ್ಠಿಯಿಂದ ಬಿಡುಗಡೆಗೊಳ್ಳಲು ಹಿಂದೇಟು ಹಾಕುತ್ತಲೇ ಬರುತ್ತಿದೆ. ಎರಡು ಅಧಿಕಾರ ಕೇಂದ್ರಗಳು ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಕೊಡುಕೊಳುವ ಮಾರ್ಗ ಸಹಜವೇ ಇರಬಹುದು.

ಠಾಣೆಗಳು ಜನಸ್ನೇಹಿಯಾಗಬೇಕು. ದೂರು ನೀಡಲು ಬರುವ ಜನರ ಸಮಸ್ಯೆಗಳನ್ನು ಆಪ್ತವಾಗಿ ಆಲಿಸಬೇಕು. ಸಂತ್ರಸ್ಥರಿಗೆ ನ್ಯಾಯಕೊಡಿಸಿಕೊಡುವ ನಿಟ್ಟಿನಲ್ಲಿ ಸಮರ್ಪಕ ಕೆಲಸ ಮಾಡಬೇಕು, ನೊಂದು ನ್ಯಾಯ ಅರಸಿ ಪೊಲೀಸ್ ಠಾಣೆಗೆ ಬರುವವರು ತೀರ ಬಡವರು, ಅಧಿಕಾರ ಬಲವುಳ್ಳವರಿಂದ ಶೋಷಣೆಗೆ ಒಳಗಾದವರು, ದೌರ್ಜನ್ಯಕ್ಕೆ ಒಳಗಾಗುವ ದಲಿತರು ನ್ಯಾಯಕ್ಕಾಗಿ ಠಾಣೆಗಳಿಗೆ ಬರುತ್ತಾರೆ. ಅವರ ದೂರನ್ನು ಠಾಣಾ ಅಧಿಕಾರಿಗಳು ದಾಖಲಿಸಬೇಕು. ಎಷ್ಟೇ ಪ್ರಭಾವಿಗಳಾದರೂ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಜರುಗಿಸಬೇಕು – ಹೀಗೆ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹೇಳುತ್ತಿದ್ದಾರೆಯೇ ವಿನಃ ಒಂದೂ ಅನುಷ್ಠಾನಕ್ಕೆ ಬಂದಿಲ್ಲ.

ಜಮೀನು ಗಲಾಟೆ, ದಾರಿ-ರಸ್ತೆ ವಿವಾದದ ಬಗ್ಗೆ ಹತ್ಯೆಗಳು ನಡೆಯುವ ಮಟ್ಟಕ್ಕೆ ಹೋಗುತ್ತವೆ. ಈ ಕುರಿತು ಎರಡು ಪಕ್ಷದವರು ನ್ಯಾಯಕ್ಕಾಗಿ ಪೊಲೀಸರ ಮೊರೆಹೋಗುತ್ತಾರೆ. ಸಂಬಂಧಪಟ್ಟ ಠಾಣಾ ಅಧಿಕಾರಿ ಪಕ್ಷಾತೀತ ನ್ಯಾಯ ಒದಗಿಸಲು ಪ್ರಯತ್ನಿಸಿದರೆ, ರಾಜಕಾರಣವೆಂಬುದು ಅಡ್ಡಿಯಾಗುತ್ತದೆ. ಪೋನ್ ಮೂಲಕವೇ ಎಲ್ಲವೂ ನಡೆದುಹೋಗುತ್ತದೆ. ಪೊಲೀಸರಿಂದ ಅರೆಸ್ಟ್ ಆದ ಗಂಟೆಯೊಳಗೆ ಆರೋಪಿಗಳು ಹೊರಗೆ ಓಡಾಡುತ್ತಾರೆ. ಇದೆಲ್ಲವೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿದಿರುವ ಸಂಗತಿಯೇ ಆಗಿದೆ. ಪೊಲೀಸ್ ವರಿಷ್ಠಾಧಿಕಾರಿ ಜನರ ಸ್ನೇಹ ಸಂಪಾದಿಸಲು ಗ್ರಾಮ ವಾಸ್ತವ್ಯ ಹೂಡುವುದು ಸರಿಯಾದ ಕ್ರಮವಾದರೂ ಅದು ತಾತ್ಕಾಲಿಕ ಶಮನವಷ್ಟೇ. ಅದರಿಂದ ಶಾಶ್ವತ ಪರಿಹಾರಗಳು ಕಂಡುಬರುವುದಿಲ್ಲ ಎಂದು ಸಾಮಾನ್ಯರು ಮಾತನಾಡಿಕೊಳ್ಳುವಂತೆ ಆಗಿದೆ.

ತುಮಕೂರು ಜಿಲ್ಲೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಬೆಂಗಳೂರಿಗೆ ಸೀಮಿತವಾಗಿದ್ದ ರಿಯಲ್ ಎಸ್ಟೇಟ್ ವ್ಯವಹಾರ ತುಮಕೂರಿಗೆ ಅಡಿಯಿಟ್ಟು ಸಣ್ಣಪುಟ್ಟ ರೌಡಿಗಳನ್ನು ಸೃಷ್ಟಿ ಮಾಡಿದೆ. ವ್ಯವಹಾರದ ಕಾರಣಕ್ಕಾಗಿ ಮಾಜಿ ಮೇಯರ್ ರವಿಯ ಹತ್ಯೆಯಾಯಿತು. ಅದು ಹಾಡುಹಗಲೇ. ಕಳೆದೊಂದು ವರ್ಷದಲ್ಲಿ ತುಮಕೂರಿನಲ್ಲಿ ನಡೆದಿರುವ ಹತ್ಯೆಗಳು ಇದೇ ಕಾರಣಕ್ಕಾಗಿಯೇ ನಡೆದವು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ನಿಜ. ಆದರೆ ರೌಡಿಗಳ ಉಪಟಳ ನಿಂತಿಲ್ಲ. ಪುಂಡುಪೋಕರಿಗಳು ನಿತ್ಯದ ಜೂಜು, ಕುಡಿತಕ್ಕೆ ಹಣ ಹೊಂದಿಸಲು ಮಾಂಗಲ್ಯ ಸರಗಳಿಗೆ ಅಪಹರಿಸುತ್ತಿರುವುದು ನಗರದಲ್ಲಿ ನಡೆಯುತ್ತಲೇ ಇದೆ. ಪ್ರಭಾವಿ ವ್ಯಕ್ತಿಗಳ ಮಕ್ಕಳು ಇಸ್ಪೀಟ್, ಜೂಜಿನಲ್ಲಿ ಭಾಗಿಯಾಗಿದ್ದರೂ ಅವರನ್ನು ಬಂಧಿಸದೇ ಬಿಟ್ಟ ಸಾಕಷ್ಟು ಉದಾಹರಣೆಗಳು ಇವೆ ಎನ್ನುತ್ತಾರೆ ಹಿರಿಯ ಪತ್ರಕರ್ತರು.

ಪಾವಗಡ ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಮಟ್ಕಾ, ಇಸ್ಪೀಟ್, ಜೂಜು ನಡೆಯುತ್ತಲೇ ಇದೆ. ‘ಹೊಂದಾಣಿಕೆ’ ಮನೋಭಾವವು ಅದು ನಿರಂತರವಾಗಿ ನಡೆಯಲು ಕಾರಣ. ಹೊಂದಾಣಿಕೆ ಎರಡು ಕಡೆಯಿಂದಲೂ ನಡೆಯುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಇಸ್ಪೀಟ್ ಆಡುವವರು, ಮಟ್ಕಾ ಚೀಟಿ ಬರೆಯುವವರು ಮತ್ತು ರಕ್ಷಕರು ‘ಹಸ್ತಲಾಘವ’ ಮಾಡಿದ್ದರಿಂದಲೇ ಎಲ್ಲವೂ ಅಡೆತಡೆಯಿಲ್ಲದೆ ನಡೆಯುತ್ತಿದೆ. ಹೇಮಾಹೇಮಿ ಅಧಿಕಾರಿಗಳು ಬಂದುಹೋದರೂ ಮಟ್ಕಾ ನಿಲ್ಲಿಸಲು ಸಾಧ್ಯವಾಗಿಲ್ಲ. ‘ಪಾಲುದಾರಿಕೆ’ ‘ಗುಡ್ಡೆ ಬಾಡು’ ಮೈತ್ರಿ, ಸುಸೂತ್ರವಾಗಿ ನಡೆಯುತ್ತಿದೆ. ಮಟ್ಕ ದೋಸ್ತಿಗಳ ಬಂಧನ, ಬಿಡುಗಡೆ, ಗಡಿಪಾರು ಎಲ್ಲವೂ ಆಗುತ್ತದೆ. ಆದರೂ ‘ವ್ಯವಹಾರ’ ಮಾತ್ರ ರಕ್ಷಕರ ನೆರಳಿನಲ್ಲೇ ನಡೆಯುತ್ತಿದೆ. ಕೋಟ್ಯಂತರ ವಹಿವಾಟು ನಡೆಯುವುದರಿಂದ ಪಾವಗಡ ಒಳ್ಳೆ ‘ಹುಲ್ಲುಗಾವಲು’ ಎಂಬ ಹೆಸರು  ಪಡೆದಿದೆ. .

ಅನಗತ್ಯವಾಗಿ ಪಾವಗಡ ತಾಲೂಕನ್ನು ಇಲ್ಲದ ಸಮಸ್ಯೆಗಳನ್ನು ಬಿಂಬಿಸುತ್ತಲೇ ‘ಲೂಟಿ’ಗೆ ಪರವಾನಗಿ ಪಡೆಯುತ್ತಲೇ ಇದ್ದಾರೆ. ಹೋದವರು ದುಂಡಗಾಗಿದ್ದಾರೆ. ಪನಿಷ್ಮೆಂಟ್ ಟ್ರಾನ್ಸಫರ್ ಒಂದು ರೀತಿಯಲ್ಲೇ ಒಳ್ಳೆಯದೇ ಆಗಿದೆ. ತಾಲೂಕು ಅಭಿವೃದ್ಧಿ ಕಾಣದಿದ್ದರೂ ಜೇಜುಗಳು ಅಭಿವೃದ್ಧಿ ಕಾಣುತ್ತಿವೆ. ಹೀಗಾಗಿ ಎಲ್ಲಾ ಹಂತದಿಂದಲೂ ಪಾವಗಡ ತಾಲೂಕಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...