ಸಿಎಂ ಆಗಲು ದರ್ಗಾಗೆ ಭೇಟಿ ನೀಡಿದ ಶಿವಸೇನೆಯ ಯುವರಾಜ ಆದಿತ್ಯ ಠಾಕ್ರೆ?

| ಮುತ್ತುರಾಜ್ |

1. ಐಸಿಸ್ ಸ್ಥಾಪಕ ಬಾಗ್ದಾದಿಯನ್ನು ಹುಡಕಿಕೊಟ್ಟ ನಾಯಿಗೆ ಸನ್ಮಾನಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್!!

ಹೌದು ಸ್ವತಃ ಡೊನಾಲ್ಡ್ ಟ್ರಂಪ್‌ರವರು ಟ್ವೀಟ್ ಮಾಡಿರುವ ಈ ಫೋಟೊ ನೋಡಿದಾಕ್ಷಣ ಎಲ್ಲರಿಗೂ ಹೌದಲ್ಲವೇ ಎನಿಸುತ್ತದೆ. ಆದರೆ ಸತ್ಯ ಏನೆಂದರೆ ಅದು ಫೋಟೊಶಾಪ್ ಮಾಡಿರುವ ಚಿತ್ರ.

ಅಕ್ಟೋಬರ್ 30ರಂದು ಟ್ರಂಪ್‌ರವರು ಕೇವಲ ಆ ನಾಯಿಯ ಫೋಟೊ ಹಾಕಿ ಟ್ವೀಟ್ ಮಾಡಿದ್ದರು. ನಂತರ ಅದೇ ಫೋಟೊವನ್ನು ಬಳಸಿ ದಿ ಡೈಲಿ ವೈರ್ ಎನ್ನುವ ಮಾಧ್ಯಮ ಸಂಸ್ಥೆಯೂ 2017ರಲ್ಲಿ ಟ್ರಂಪ್‌ರವರು ಯೋಧ ಮೆಕ್‌ಲ್ಹಾನ್ ಎಂಬುವವರಿಗೆ ಸನ್ಮಾನ ಮಾಡುತ್ತಿರುವ ಫೋಟೊದೊಂದಿಗೆ ಸೇರಿಸಿ ಫೋಟೊಶಾಪ್ ಮಾಡಿ ಟ್ವೀಟ್ ಮಾಡಿತ್ತು.

ಅದನ್ನು ನೇರ ಎತ್ತಿಕೊಂಡು ಟ್ರಂಪ್ ತಮ್ಮ ಟ್ವಿಟ್ಟರ್ ಅಕೌಂಟ್‌ನಿಂದ ಷೇರ್ ಮಾಡಿಬಿಟ್ಟರು. ಕನಿಷ್ಟ ಸ್ಪಷ್ಟನೆಯನ್ನು ಸಹ ಅವರು ನೀಡಲಿಲ್ಲ.

ಆ ಫೋಟೊ ಶಾಪ್ ಮಾಡಿದ ಫೋಟೊವನ್ನು ಜನ ನಿಜವೆಂದು ನಂಬಿ ಟ್ರಂಪ್‌ನನ್ನು ಹೊಗಳಿದ್ದೇ ಹೊಗಳಿದ್ದು. ನೋಡಿ ಒಂದು ನಾಯಿಗೂ ನಮ್ಮ ಟ್ರಂಪ್ ಎಷ್ಟು ಮಹತ್ವ ಕೊಡುತ್ತಾರೆ ಎಂದು ಬಹುಫರಾಕ್ ಹೇಳಿದರು. ಟ್ರಂಪ್ ಅದನ್ನು ಆಸ್ವಾದಿಸಿದರು.. ನೋಡಿ ಅಮೇರಿಕದ ದೊಡ್ಡಣ್ಣ ಸಹ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.

2. ಟಿಪ್ಪು ಸುಲ್ತಾನನ ಅಸಲಿ ಫೋಟೊ ಯಾವುದು?

ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್ ಕಂಡರೆ ಬಿಜೆಪಿಯವರಿಗೆ ಎಣ್ಣೆ ಸೀಗೆಕಾಯಿ ಇದ್ದಹಾಗೆ. ಟಿಪ್ಪು ಮಾಡಿರುವ ಅಸಂಖ್ಯ ಸಾಧನೆಗಳು ಕಣ್ಣಿಗೆ ರಾಚುತ್ತಿದ್ದರು ಅದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಸದಾ ಟಿಪ್ಪು ವಿರೋಧಿ ಭಾವನೆ ಮೂಡುವಂತೆ, ಟಿಪ್ಪುವಿನ ವಿರುದ್ಧ ಸುಳ್ಳುಗಳನ್ನು ಹಬ್ಬಿಸುತ್ತಿರುತ್ತಾರೆ. ಅದರಲ್ಲಿ ಆತನ ಫೋಟೊದು ಒಂದು.

ಟಿಪ್ಪುವಿನ ಫೋಟೊದ ಜೊತೆಗೆ ಇನ್ನೊಬ್ಬರ ಕಪ್ಪು ಬಣ್ಣದ ಫೋಟೊ ಕೊಲಾಜ್ ಮಾಡಿ ಅವರೇ ಟಿಪ್ಪು ಸುಲ್ತಾನ್ ಎಂದು ಬಿಜೆಪಿಯ ಹಲವಾರು ಸಂಸದರು, ಶಾಸಕರು ದೇಶಾದ್ಯಂತ ಸುಳ್ಳು ಹಬ್ಬಿಸುತ್ತಿದ್ದಾರೆ.

ಆದರೆ ಸತ್ಯ ಏನೆಂದರೆ ಫೋಟೊದಲ್ಲಿರುವ ಕಪ್ಪುವ್ಯಕ್ತಿ ಟಿಪ್ಪುವಲ್ಲ. ಆಫ್ರಿಕಾದ ಗುಲಾಮರ ಮಾರಾಟಗಾರ ಟಿಪ್ಪು ಟಿಪ್ ಎಂಬುವವರ ಫೋಟೊವನ್ನು ಬಳಸಿ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದಾರೆ ಅಷ್ಟೇ. ಗೂಗಲ್ ಸರ್ಚ್ನಲ್ಲಿ ಸಂಪೂರ್ಣ ವಿವರ ಸಿಕ್ಕಿಬಿಡುತ್ತದೆ. ಆದರೇನು ಮಾಡುವುದು ಟಿಪ್ಪು ಅನ್ಯಧರ್ಮೀಯ ಎಂಬ ಏಕೈಕ ಕಾರಣಕ್ಕೆ ಅಪಪ್ರಚಾರಕ್ಕೊಳಗಾಗಬೇಕಿದೆ.

3 ಭಾರತೀಯರ ಮನಕಲಕಿದ ಈ ಪುಟ್ಟ ಬಾಲೆ ರೋಹಿಂಗ್ಯ ಮುಸ್ಲಿಮಳೆ?

ಈಕೆ ರೋಹಿಂಗ್ಯ ಮುಸ್ಲಿ ಹುಡುಗಿ. ಯೋಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಎಡಪಂಥೀಯರು ಮತ್ತು ಜಾತ್ಯಾತೀತವಾದಿಗಳು ದೀಪಾವಳಿಯಂದು ಆಕೆಯನ್ನು ಅಯೋಧ್ಯೆಗೆ ತಂದು ಪಿತೂರಿ ನಡೆಸಿದ್ದಾರೆ ಎಂದೆಲ್ಲಾ ಸುಳ್ಳು ಸಂದೇಶಗಳನ್ನು ಹರಡಲಾಯಿತು.

ಹಿಂದೂ ಧರ್ಮ ಯೋಧ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಈ ಸಂದೇಶ 15 ಸಾವಿರ ಬಾರಿ ಷೇರ್ ಆಗಿದೆ.

ಸತ್ಯವೇನೆಂದರೆ ಉತ್ತರಪ್ರದೇಶದ ಸರ್ಕಾರ ಅಯೋಧ್ಯೆಯಲ್ಲಿ ದೀಪಾವಳಿಯ ಸಂಭ್ರಮಕ್ಕೆಂದು ಐದೂವರೆ ಲಕ್ಷ ಹಣತೆಗಳನ್ನು ಬೆಳಗಿಸಿತು. ಬಳಸಿದ ಎಣ್ಣೆ 20 ಸಾವಿರ ಲೀಟರುಗಳು. ಈ ಉತ್ಸವಕ್ಕೆ ತಗುಲಿದ ಅಂದಾಜು ವೆಚ್ಚ 133 ಕೋಟಿ ರುಪಾಯಿಗಳು. ಏಳೆಂಟು ವರ್ಷದ ವಯಸ್ಸಿನ ಬಡ ಬಾಲಕಿಯೊಬ್ಬಳು ತನ್ನ ಗುಡಿಸಿಲಿಗೆ ಒಯ್ಯಲು ಆರಿ ಹೋಗಿದ್ದ ಹಣತೆಗಳಿಂದ ಪ್ಲಾಸ್ಟಿಕ್ ಬಾಟಲಿಯೊಂದಕ್ಕೆ ಎಣ್ಣೆ ಬಸಿದುಕೊಳ್ಳುತ್ತಿದ್ದಳು. ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಪ್ರಶ್ನಿಸುತ್ತಿತ್ತು. ಒಂದು ರೀತಿಯಲ್ಲಿ ಉತ್ತರ ಪ್ರದೇಶ ಸರ್ಕಾರವನ್ನು ಚುಚ್ಚುತ್ತಿತ್ತು. ಹಗಾಗಿ ಸರ್ಕಾರದ ಭಕ್ತರು ಸುಳ್ಳು ಸುದ್ದಿ ಹರಡಿದ್ದಾರೆ ಅಷ್ಟೇ.

ಚಿತ್ರದಲ್ಲಿರುವ ಎರಡನೇ ಹುಡುಗಿ ಮಾತ್ರ ರೋಹಿಂಗ್ಯ ಮುಸ್ಲಿಂಳಾಗಿದ್ದಾರೆ.

4 ಸಿಎಂ ಆಗಲು ದರ್ಗಾಗೆ ಭೇಟಿ ನೀಡಿದ ಶಿವಸೇನೆಯ ಯುವರಾಜ ಆದಿತ್ಯ ಠಾಕ್ರೆ?

ಮಹಾರಾಷ್ಟ್ರ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದ ನಂತರ ಸಿಎಂ ಆಗುವ ಆಸೆಯಿಂದ ದರ್ಗಾಗೆ ತೆರಳಿದ ಶಿವಸೇನೆಯ ಯುವರಾಜ ಆದಿತ್ಯ ಠಾಕ್ರೆ. ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ ಎಂಬ ವಿಡಿಯೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಟ್ವಿಟ್ಟರ್‌ನಲ್ಲಿ ನರೇಂದ್ರ ಮೋದಿಯವರು ಸಹ ಫಾಲೋ ಮಾಡುವ ಗೌರವ್ ಪ್ರಧಾನ್ ಎಂಬ ಬಿಜೆಪಿ ನಾಯಕ ಕೂಡ ಇದೇ ಸುಳ್ಳನ್ನು ಹರಡಿದ್ದಾರೆ. ಜೊತೆಗೆ ಬಾಳಾಸಾಹೇಬ್ ಮತ್ತೊಮ್ಮೆ ಸತ್ತರು ಎಂದು ಉದ್ಘಾರ ತೆಗೆದಿದ್ದಾರೆ.

ಆದರೆ ಸತ್ಯ ಏನೆಂದರೆ ಅದು ಹಳೆಯ ವಿಡಿಯೋ. 2017ರಲ್ಲಿ ಆದಿತ್ಯ ಠಾಕ್ರೆ ದರ್ಗಾಗೆ ಭೇಟಿ ವಿಡಿಯೋವನ್ನು ಚುನಾವನಾ ಫಲಿತಾಂಶದ ನಂತರ ಪೋಸ್ಟ್ ಮಾಡಿ ಸುಳ್ಳು ಹರಡುತ್ತಿದ್ದಾರೆ ಅಷ್ಟೇ.

5. ನನ್ನ ಮತ್ತು ಆಕೆಯ ನಡುವೆ ನಡೆದಿರುವುದು ಅತ್ಯಾಚಾರವಲ್ಲ. ಕೊನೆಗೂ ಪವಿತ್ರ ಏಸುವಿನ ಮಾಂತ್ರಿಕ ಅಸ್ತಿತ್ವವನ್ನು ಅನುಭವಿಸುವ ಜ್ಞಾನೋದಯದ ಹೋಳಿ ಆಚರಣೆಯಾಗಿದೆ ಎಂದ ಕ್ರೈಸ್ತ ಪಾದ್ರಿ?

 

ಈ ರೀತಿಯ ಸಂದೇಶವನ್ನು, ಟಿವಿ ವಾಹಿನಿಯ ಚಿತ್ರವೊಂದನ್ನು ಷೇರ್ ಮಾಡಿ ಕ್ರೈಸ್ತರನ್ನು ದೂಷಿಸಲಾಗಿದೆ. ಜೊತೆಗೆ ಮತಾಂತರವನ್ನು ಹಳಿಯಲಾಗಿದೆ. ಟ್ವಿಟ್ಟರ್‌ನಲ್ಲಿ 20 ಲಕ್ಷ ಫಾಲೋವರ್‌ಗಳನ್ನು ಹೊಂದಿರುವ ಮಧುಪೂರ್ಣಿಮ ಕಿಶ್ವರ್ ಎಂಬುವವರು ಸಹ ಇದನ್ನು ಪೋಸ್ಟ್ ಮಾಡಿದ್ದಾರೆ.

ಆದರೆ ಇದನ್ನು ಮೊದಲ ಪೋಸ್ಟ್ ಮಾಡಿದ ‘ದಿ ಅನ್‌ಪೆಯ್ಡ್ ಟೈಮ್ಸ್’ ಎಂಬ ಅಕೌಂಟ್ ತಾನು ಸುಳ್ಳು ಸುದ್ದಿ ಹಬ್ಬಿಸಲು ಇರುವ ಅಕೌಂಟ್ ಎಂದು ಘೋಷಿಸಿಕೊಂಡಿದೆ. ಅದನ್ನು ಇವರೆಲ್ಲಾ ನಿಜ ಎಂದು  ನಂಬಿ ಷೇರ್ ಮಾಡಿದ್ದಾರೆ. ಇಡೀ ಪ್ರಕರಣೆ ಕಲ್ಪಿತವಾದುದ್ದೇ ವಿನಃ ಸತ್ಯವಲ್ಲ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here