ಅಯೋಧ್ಯೆ ತೀರ್ಪು ಪ್ರಕಟಿಸಿದ ಐವರು ನ್ಯಾಯಾಧೀಶರ ಕಿರುಪರಿಚಯ

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು ರಾಮ ಜನ್ಮಭೂಮ- ಬಾಬ್ರಿ ಮಸೀದಿ ಪ್ರಕರಣದ ತೀರ್ಪನ್ನು ಶನಿವಾರ ನೀಡಿತು. ಈ ಐವರು ನ್ಯಾಯಾಧೀಶರ ಕಿರುಪರಿಚಯ ಇಲ್ಲಿದೆ.

ರಂಜನ್ ಗೊಗೋಯ್

1978ರಲ್ಲಿ ವೃತ್ತಿ ಆರಂಭಿಸಿದ ನ್ಯಾ. ರಂಜನ್ ಗೊಗೋಯ್ ಅವರು, ಮುಖ್ಯವಾಗಿ ಗುವಾಹಟಿ ಹೈಕೋರ್ಟಿನಲ್ಲಿ ವಕಾಲತ್ತು ಮಾಡುತ್ತಿದ್ದರು. ಫೆಬ್ರವರಿ 28, 2001ರಲ್ಲಿ ಅವರು ಗುವಾಹಟಿ ಹೈಕೋರ್ಟಿನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ಸೆಪ್ಟೆಂಬರ್ 9, 2010ರಲ್ಲಿ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಲಾಯಿತು. ಫೆಬ್ರವರಿ 12, 2011ರಲ್ಲಿ ಅವರು ಅಲ್ಲಿನ ಮುಖ್ಯ ನ್ಯಾಯಾಧೀಶರಾದರು. ಎಪ್ರಿಲ್ 23, 2012ರಲ್ಲಿ ಅವರು ಸುಪ್ರೀಂಕೋರ್ಟಿಗೆ ಭಡ್ತಿ ಹೊಂದಿದರು.

ಅಕ್ಟೋಬರ್ 3, 2018ರಂದು ಭಾರತದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು ಇದೇ ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ಈ ಪೀಠವು ಪ್ರಕರಣದ 40 ದಿನಗಳ ವಿಚಾರಣೆಯನ್ನು ಅಕ್ಟೋಬರ್ 16ರಂದು ಪೂರ್ಣಗೊಳಿಸಿ, ತೀರ್ಪನ್ನು ಕಾದಿರಿಸಿತ್ತು. ನಿವೃತ್ತಿಗೆ ಮುನ್ನ ಗೊಗೋಯ್ ಅವರು ಇನ್ನೂ ಮೂರು ಪ್ರಕರಣಗಳಲ್ಲಿ ತೀರ್ಪು ನೀಡಲಿದ್ದಾರೆ. ಅವುಗಳೆಂದರೆ ರಫೇಲ್ ಪುನರ್ವಿಮರ್ಶಾ ಅರ್ಜಿ, ಶಬರಿಮಲೆ ಪುನರ್ವಿಮರ್ಶಾ ಅರ್ಜಿ ಮತ್ತು ಭಾರತದ ಮುಖ್ಯ ನ್ಯಾಯಾಧೀಶರ (ಸಿಜೆಐ) ಕಚೇರಿಯು ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ವ್ಯಾಪ್ತಿಗೆ ಬರುತ್ತದೋ, ಇಲ್ಲವೋ ಎಂಬುದು.

ನ್ಯಾ. ಎಸ್.ಎ. ಬೋಬ್ಡೆ

ಅವರು ಭಾರತದ ನಿಯುಕ್ತ ಮುಖ್ಯ ನ್ಯಾಯಾಧೀಶರಾಗಿದ್ದು, ನವೆಂಬರ್ 18ರಂದು ಅಧಿಕಾರ ಸ್ವೀಕರಿಸುವರು. ಅವರು 1978ರಲ್ಲಿ ಮಹಾರಾಷ್ಟ್ರ ಬಾರ್ ಕೌನ್ಸಿಲ್‌ಗೆ ಸೇರ್ಪಡೆಯಾಗಿದ್ದು, ಬಾಂಬೆ ಹೈಕೋರ್ಟಿನ ನಾಗಪುರ ಪೀಠದಲ್ಲಿ ವಕಾಲತ್ತು ನಡೆಸುತ್ತಿದ್ದರು. 21 ವರ್ಷಗಳ ಕಾಲ ಅವರು ಬಾಂಬೆ ಹೈಕೋರ್ಟಿನ ಮುಖ್ಯ ಪೀಠ ಹಾಗೂ ಸುಪ್ರೀಂಕೋರ್ಟಿನಲ್ಲಿಯೂ ವಕಾಲತ್ತು ನಡೆಸಿದ್ದಾರೆ. 1998ರಲ್ಲಿ ಅವರು ಹಿರಿ ವಕೀಲರಾಗಿ ನಾಮಕರಣಗೊಂಡರು.

ಮಾರ್ಚ್ 29, 2000ದಲ್ಲಿ ಅವರು ಬಾಂಬೆ ಹೈಕೋರ್ಟಿನ ಹೆಚ್ಚುವರಿ ನ್ಯಾಯಾಧೀಶರಾಗಿ ಭಡ್ತಿ ಪಡೆದರು. ಅಕ್ಟೋಬರ್ 16, 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು. ಎಪ್ರಿಲ್ 12, 2013ರಂದು ಅವರು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಭಡ್ತಿ ಹೊಂದಿದರು. ಅವರು ಎಪ್ರಿಲ್ 23, 2021ರಂದು ಮುಖ್ಯ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಲಿದ್ದಾರೆ.

ನ್ಯಾ. ಡಿ.ವೈ. ಚಂದ್ರಚೂಡ್

ಅವರು ಅನೇಕ ಸಂವಿಧಾನ ಪೀಠಗಳ ಭಾಗವಾಗಿದ್ದು, ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿ ತಮ್ಮ ಉದಾರವಾದಿ ನಿಲುವುಗಳಿಗಾಗಿ ಹೆಸರಾಗಿದ್ದಾರೆ. ಅವರು ಮಹಾರಾಷ್ಟ್ರ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಬಾಂಬೆ ಹೈಕೋರ್ಟಿನಿಂದ ಜೂನ್ 1998ರಲ್ಲಿ ಹಿರಿಯ ವಕೀಲರಾಗಿ ನಿಯುಕ್ತರಾದರು. ಅವರು ಅಲ್ಲಿ ಮತ್ತು ಸುಪ್ರೀಂಕೋರ್ಟಿನಲ್ಲಿ ವಕಾಲತ್ತು ನಡೆಸುತ್ತಿದ್ದರು.

ಮಾರ್ಚ್ 29, 2000ರಂದು ಬಾಂಬೆ ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ತನಕ, 1998ರಿಂದ ಅವರು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದರು. ಅಕ್ಟೋಬರ್ 31, 2013ರಲ್ಲಿ ಅವರು ಅಲಹಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು. ಮೇ 13, 2016ರಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಭಡ್ತಿ ಹೊಂದಿದರು.

ನ್ಯಾ. ಅಶೋಕ್ ಭೂಷಣ್

ಅಲಹಾಬಾದ್ ವಿಶ್ವವಿದ್ಯಾಲಯದಿಂದ 1979ರಲ್ಲಿ ಪದವಿ ಪಡೆದ ಅವರು, ಅದೇ ವರ್ಷ ಎಪ್ರಿಲ್ 6ರಂದು ಉತ್ತರಪ್ರದೇಶ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಹೊಂದಿದರು. ಅವರು ನಂತರ ನ್ಯಾಯಾಧೀಶರಾಗಿ ಆಯ್ಕೆಯಾಗುವ ತನಕ ಅಲಹಾಬಾದ್ ಹೈಕೋರ್ಟಿನಲ್ಲಿಯೇ ವಕಾಲತ್ತು ಮಾಡುತ್ತಿದ್ದರು. ಅವರು ಅಲಹಾಬಾದ್ ವಿಶ್ವವಿದ್ಯಾನಿಲಯ, ಸ್ಟೇಟ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಲಿಮಿಟೆಡ್, ಹಲವು ಮುನಿಸಿಪಲ್ ಮಂಡಳಿಗಳು, ಬ್ಯಾಂಕುಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸ್ಥಾಯಿ ವಕೀಲರಾಗಿದ್ದರು.

ಭೂಷಣ್ ಅವರು ನಂತರ ಅಲಹಾಬಾದ್ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಅಲಹಾಬಾದ್ ಹೈಕೋರ್ಟಿನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು ನ್ಯಾಯಾಂಗ ಸೇವಾ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜುಲೈ 10, 2014ರಲ್ಲಿ ಅವರು ಕೇರಳ ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡು, ಆಗಸ್ಟ್ 1, 2014ರಲ್ಲಿ ಪ್ರಭಾರ ಮುಖ್ಯ ನ್ಯಾಯಾಧೀಶರಾಗಿಯೂ, ಮಾರ್ಚ್ 3, 2015ರಲ್ಲಿ ಮುಖ್ಯ ನ್ಯಾಯಾಧೀಶರಾಗಿಯೂ ಪ್ರಮಾಣವಚನ ಸ್ವೀಕರಿಸಿದರು.

ನ್ಯಾ. ಅಬ್ದುಲ್ ನಸೀರ್

ಅವರು ಈ ಪೀಠದಲ್ಲಿದ್ದ ಏಕೈಕ ಮುಸ್ಲಿಂ ನ್ಯಾಯಾಧೀಶರು. ಅವರು ಫೆಬ್ರವರಿ 18, 1983ರಂದು ಕರ್ನಾಟಕ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿಗೊಂಡು, ರಾಜ್ಯ ಹೈಕೋರ್ಟಿನಲ್ಲಿ ವಕಾಲತ್ತು ನಡೆಸುತ್ತಿದ್ದರು. ಮೇ 12, 2003ರಂದು ಅವರು ಕರ್ನಾಟಕ ಹೈಕೋರ್ಟಿನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡು, ಸೆಪ್ಟೆಂಬರ್ 24, 2004ರಲ್ಲಿ ಖಾಯಂಗೊಂಡರು. ಫೆಬ್ರವರಿ 17, 2017ರಂದು ಅವರು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಭಡ್ತಿ ಪಡೆದರು.

ಕೃಪೆ: ಹಿಂದೂಸ್ತಾನ್ ಟೈಮ್ಸ್

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here