Homeನ್ಯಾಯ ಪಥಪೌರತ್ವ ಕಾಯ್ದೆ: ಭಾರತೀಯ ಪ್ರಜಾಸತ್ತೆಗೆ ಗಂಡಾಂತರ - ಡಾ.ಬಿ.ಪಿ.ಮಹೇಶ ಚಂದ್ರಗುರು

ಪೌರತ್ವ ಕಾಯ್ದೆ: ಭಾರತೀಯ ಪ್ರಜಾಸತ್ತೆಗೆ ಗಂಡಾಂತರ – ಡಾ.ಬಿ.ಪಿ.ಮಹೇಶ ಚಂದ್ರಗುರು

- Advertisement -
- Advertisement -

ಮೋದಿ-ಷಾ ನೇತೃತ್ವದ ಕೇಂದ್ರ ಸರ್ಕಾರ ಸಾಂಸ್ಕøತಿಕ ಸಾಮ್ರಾಜ್ಯಶಾಹಿಯ ಹುನ್ನಾರಗಳಿಗೆ ಮಣಿದು ಪೌರತ್ವ ತಿದ್ದುಪಡಿ ಮಸೂದೆಯಂತಹ ಅಪ್ರಜಾಸತ್ತಾತ್ಮಕ ಕ್ರಮದಿಂದ ದೇಶದಲ್ಲಿ ಅರಾಜಕತೆಗೆ ಕಾರಣವಾಗಿದೆ. ಇವರ ಹಲವಾರು ಸಂವಿಧಾನ ವಿರೋಧಿ ನಡವಳಿಕೆಗಳಿಂದಾಗಿ ದೇಶದ ಅರ್ಥವ್ಯವಸ್ಥೆ, ಪ್ರಜಾಸತ್ತೆ, ಪರಿಸರ ಮತ್ತು ಜನರ ಬದುಕು ಹೀನಾಯ ಸ್ಥಿತಿಗೆ ತಲುಪುತ್ತಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ಪರಿಚ್ಛೇದ ರದ್ದು, ಏಕರೂಪ ನಾಗರಿಕ ಸಂಹಿತೆ, ಧಾರ್ಮಿಕ ನಂಬಿಕೆ ಆಧಾರದ ಮೇಲೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಕ್ಕೆ ಒಳಪಡಿಸಿ ಮೀಸಲಾತಿಯನ್ನು ಪರೋಕ್ಷವಾಗಿ ರದ್ದುಮಾಡುವುದು, ಜಿಎಸ್‍ಟಿ ಕಾಯ್ದೆಯಿಂದ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರನ್ನು ನಾಶಮಾಡುವುದು, ನೋಟು ಅಮಾನ್ಯೀಕರಣದಿಂದ ಬೀದಿಬದಿಯಲ್ಲಿ ಸಾವಿರಾರು ಜನರ ಸಾವು, ದೇಶದ ಸೈನಿಕರ ಹೆಸರಿನಲ್ಲಿ ಯುವಕರಿಂದ ಮತ ಪಡೆದು ಗರಿಷ್ಟ ನಿರುದ್ಯೋಗ ಸೃಷ್ಟಿಸಿ ಯುವಕರನ್ನು ಅತಂತ್ರಗೊಳಿಸಿರುವುದು, ಕೃಷಿ ಕ್ಷೇತ್ರವನ್ನು ಕಡೆಗಣಿಸಿ ರೈತರನ್ನು ಆತ್ಮಹತ್ಯೆಗೆ ದೂಡಿರುವುದು, ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ಕಾನೂನನ್ನು ಉಲ್ಲಂಘಿಸಿ ಪ್ರಬಲರಲ್ಲದ ಆರೋಪಿಗಳನ್ನು ಎನ್‍ಕೌಂಟರ್ ಮಾಡುವುದು ಮೊದಲಾದ ನಡೆಗಳಿಂದಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಪ್ರಜಾಸತ್ತೆಯನ್ನು ದುರ್ಬಲಗೊಳಿಸಿದೆ.

ಪಾಕಿಸ್ತಾನ ಧರ್ಮದ ರಾಜಕಾರಣಕ್ಕೆ ಕಟ್ಟುಬಿದ್ದು ಮೌಲ್ವಿಗಳು – ಜನರಲ್‍ಗಳ ಅಟ್ಟಹಾಸದಡಿ ನಾಶವಾಗಿದ್ದರೆ, ಭಾರತ ಧರ್ಮಾಂಧತೆಯ ನಿಶೆಯಲ್ಲಿ ಮೋದಿ-ಷಾ ನಾಯಕತ್ವದಲ್ಲಿ ಅದೇ ಅವನತಿಯ ಹಾದಿಯಲ್ಲಿ ಸಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಭಾರತೀಯ ಸಂವಿಧಾನ ಒಳಗೊಳ್ಳುವ ಅಭಿವೃದ್ಧಿಗೆ ಪೂರಕವಾಗಿದ್ದರೆ ಹಿಂದುತ್ವದ ಗೌಪ್ಯ ಕಾರ್ಯಸೂಚಿಯನ್ನು ಜಾರಿಗೊಳಿಸಿ ಪ್ರಜಾಪ್ರಭುತ್ವವನ್ನು ‘ಶ್ರೀಮಂತರ ಪ್ರಭುತ್ವ’ವನ್ನಾಗಿ ಪರಿವರ್ತಿಸಿದ ಮೋದಿ ಸರ್ಕಾರದ ಇಂದಿನ ‘ಅಚ್ಛೇದಿನ್’ ಗಳಿಗಿಂತ ಹಿಂದಿನ ಕೆಟ್ಟದಿನಗಳೇ ಎಷ್ಟೋ ವಾಸಿಯಾಗಿತ್ತು ಎಂಬ ನಿಲುವನ್ನು ಪ್ರಭುತ್ವದಿಂದ ಹೊರದಬ್ಬಲ್ಪಟ್ಟ ದಮನಿತ ಸಮುದಾಯಗಳು ಹೊಂದಿವೆ. ಬಡತನ ನಿರ್ಮೂಲನೆ ಮಾಡುವುದರ ಬದಲಿಗೆ ಬಡವರನ್ನೇ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎನ್‍ಡಿಎ ಸರ್ಕಾರ ಕಾರ್ಯನಿರತವಾಗಿದೆ.

ಮೂಲಭೂತವಾದಿಗಳ ನಿರ್ದೇಶನ ಹಾಗೂ ನಿಯಂತ್ರಣದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯಿಂದ ಭಾರತದ ಪ್ರಜಾಸತ್ತೆಗೆ ಬಹುದೊಡ್ಡ ಗಂಡಾಂತರ ಉಂಟಾಗಿದೆ. ಶಕ್ತಿ ರಾಜಕಾರಣದಿಂದಾಗಿ ಭಾರತದ ಪ್ರಜಾಸತ್ತೆ ದುರ್ಬಲಗೊಂಡಿರುವುದಕ್ಕೆ ಈ ಮಸೂದೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ಮಸೂದೆಗಳನ್ನು ವಿರೋಧಿಸಿ ಈಶಾನ್ಯ ಭಾರತವೂ ಸೇರಿದಂತೆ ದೇಶದ ಎಲ್ಲೆಡೆ ವ್ಯಾಪಕ ಪ್ರತಿಭಟನೆಗಳು ಮುಂದುವರೆದಿವೆ. ಅಸ್ಸಾಂ, ಪಶ್ಚಿಮ ಬಂಗಾಳ, ದೆಹಲಿ ಮೊದಲಾದೆಡೆ ಪರಿಸ್ಥಿತಿ ಉದ್ರಿಕ್ತವಾಗಿದ್ದರೂ ನಿಯಂತ್ರಣದಲ್ಲಿದೆ. ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಮತ್ತು ಭಾರತದ ಪ್ರಗತಿಪರ ಸಂಘಟನೆಗಳು ಈ ಬೆಳವಣಿಗೆಯನ್ನು ಆತಂಕದಿಂದ ಗಮನಿಸುತ್ತಿವೆ. ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸಲು, ದೇಶದ ಬಹುತ್ವವನ್ನು ರಕ್ಷಿಸಲು ಮತ್ತು ಪ್ರಜಾಸತ್ತೆಯನ್ನು ಅರಾಜಕತೆಯಿಂದ ಪಾರು ಮಾಡಲು ಮುಸಲ್ಮಾನ ಬಾಂಧವರನ್ನೂ ಒಳಗೊಂಡಂತೆ ಸಮಸ್ತ ಭಾರತೀಯರ ಹಿತವನ್ನು ಅಹಿಂಸಾತ್ಮಕವಾಗಿ ರಕ್ಷಿಸುವುದು ಇಂದು ಅನಿವಾರ್ಯವಾಗಿದೆ.

ಬಹುತ್ವ ವಿರೋಧಿ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಈಶಾನ್ಯ ಭಾರತ, ಪಶ್ಚಿಮ ಬಂಗಾಳ, ದೆಹಲಿ ಮೊದಲಾದೆಡೆ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿರುವುದನ್ನು ದೇಶದ ಜನ ಆತಂಕದಿಂದ ಗಮನಿಸುತ್ತಿದ್ದಾರೆ. ಈ ಮಸೂದೆಗೆ ವಿದೇಶಗಳಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಬಿಜೆಪಿಯೇತರ ರಾಜ್ಯಗಳಾದ ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಛತ್ತೀಸ್‍ಘಡಗಳಲ್ಲಿಯೂ ಭಾರತದ ಧರ್ಮ ನಿರಪೇಕ್ಷತೆಗೆ ಮಸೂದೆಯಿಂದ ತೀವ್ರ ಧಕ್ಕೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಬಲ ಪ್ರತಿರೋಧ ವ್ಯಕ್ತವಾಗಿದೆ. ಏನೇ ಆಗಲಿ ನಾವು ಕೈಗೊಂಡಿರುವ ಕ್ರಮ ಸಾವಿರ ಪರ್ಸೆಂಟ್ ಸರಿಯಾಗಿದೆ ಮತ್ತು ಈ ಕಾಯ್ದೆ ಜಾರಿಯನ್ನು ಯಾವುದೇ ರಾಜ್ಯ ತಡೆಯುವಂತಿಲ್ಲ ಎಂದು ಪ್ರತಿಕ್ರಿಯಿಸುವುದರ ಮೂಲಕ ಕೇಂದ್ರ ಸರ್ಕಾರ ತನ್ನ ಪಾಳೆಗಾರಿಕೆ ಮನೋಧರ್ಮವನ್ನು ಪ್ರಕಟಿಸಿರುವುದು ದೇಶದ ಒಕ್ಕೂಟ ತತ್ವಕ್ಕೆ ತದ್ವಿರುದ್ಧವಾಗಿದೆ. ಅಲ್ಲದೆ ನ್ಯಾಯೋಚಿತವಾಗಿ ಪ್ರತಿಭಟಿಸುತ್ತಿರುವ ಪ್ರಜ್ಞಾವಂತ ಪ್ರಜೆಗಳ ದನಿಗಳನ್ನು ಅಡಗಿಸಲು ವಿವಿಧೆಡೆ ಸಾವಿರಾರು ಸೈನಿಕರನ್ನು ಭದ್ರತೆಗಾಗಿ ನಿಯೋಜಿಸಿರುವ ಕೇಂದ್ರ ಸರ್ಕಾರದ ಕ್ರಮ ದಮನಕಾರಿ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಸಂವಿಧಾನದ ಪ್ರಮುಖ ಆಶಯಗಳಾದ ಧರ್ಮ ನಿರಪೇಕ್ಷತೆ ಮತ್ತು ಒಕ್ಕೂಟ ತತ್ವಗಳಿಗೆ ವಿರುದ್ಧವಾಗಿ ವರ್ತಿಸಬಾರದೆಂದು ‘ಮೋ-ಷಾ’ ಜೋಡಿಗೆ ಹೇಳುವವರೇ ಇಂದು ಇಲ್ಲವಾಗಿದ್ದಾರೆ.

ಮೋದಿ-ಷಾ ನೇತೃತ್ವದ ಕೇಂದ್ರ ಸರ್ಕಾರ ಸಾಂಸ್ಕøತಿಕ ಸಾಮ್ರಾಜ್ಯಶಾಹಿಯ ಹುನ್ನಾರಗಳಿಗೆ ಮಣಿದು ಪೌರತ್ವ ತಿದ್ದುಪಡಿ ಮಸೂದೆಯಂತಹ ಅಪ್ರಜಾಸತ್ತಾತ್ಮಕ ಕ್ರಮದಿಂದ ದೇಶದಲ್ಲಿ ಅರಾಜಕತೆಗೆ ಕಾರಣವಾಗಿದೆ. ಇವರ ಹಲವಾರು ಸಂವಿಧಾನ ವಿರೋಧಿ ನಡವಳಿಕೆಗಳಿಂದಾಗಿ ದೇಶದ ಅರ್ಥವ್ಯವಸ್ಥೆ, ಪ್ರಜಾಸತ್ತೆ, ಪರಿಸರ ಮತ್ತು ಜನರ ಬದುಕು ಹೀನಾಯಸ್ಥಿತಿಗೆ ತಲುಪುತ್ತಿವೆ. ಕೇಂದ್ರ ಸರ್ಕಾರದ ಒಡೆದು ಆಳುವ ನೀತಿಯಿಂದಾಗಿ ಅಲ್ಪಸಂಖ್ಯಾತರು, ದುರ್ಬಲ ವರ್ಗಗಳು ಮತ್ತು ಮಹಿಳೆಯರು ಇಂದು ಸುರಕ್ಷಿತವಾಗಿಲ್ಲ. ಯೂರೋಪಿನ ವಸಾಹತುಶಾಹಿಯಿಂದ ಭಾರತೀಯರು ಬಿಡುಗಡೆಯಾಗಿದ್ದರೂ ಸಹ ಅರ್‍ಎಸ್‍ಎಸ್ ಪ್ರಾಯೋಜಿತ ಸಾಂಸ್ಕøತಿಕ ದಾಳಿ ಮತ್ತು ಬಂಡವಾಳಶಾಹಿ ಕೇಂದ್ರಿತ ಆರ್ಥಿಕ ದಾಳಿಗಳಿಂದ ಭಾರತದ ಬಹುಜನರು ಇಂದಿಗೂ ಬಿಡುಗಡೆಯಾಗಿಲ್ಲ.

ಅಂದಿನ ನಮ್ಮ ರಾಷ್ಟ್ರ ನಾಯಕರು ವಿಶಾಲ ಮನೋಧರ್ಮ ಹೊಂದಿದ್ದು ಬಹುತ್ವ ಮತ್ತು ದೇಶದ ಸಮಗ್ರತೆಗಳನ್ನು ಸುಸ್ಥಿರಗೊಳಿಸುವ ಸಲುವಾಗಿ ಭಾರತವನ್ನು ಒಂದು ದೇಶ ಮತ್ತು ಒಂದು ಧರ್ಮಕ್ಕೆ ಸೀಮಿತಗೊಳಿಸದೇ ಅತ್ಯಂತ ಪ್ರಜ್ಞಾಪೂರ್ವಕವಾಗಿ ಹಿಂದೂ-ಹಿಂದಿ-ಹಿಂದೂಸ್ಥಾನ ಪರಿಕಲ್ಪನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಭಾರತೀಯ ಸಂವಿಧಾನದ ಮೌಲ್ಯಗಳಾದ ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯಗಳನ್ನು ರಕ್ಷಿಸುವ ಜವಾಬ್ದಾರಿಯಿಂದ ಇಂದು ನಮ್ಮನ್ನು ಆಳುವವರು ವಿಮುಖರಾಗಿದ್ದಾರೆ ಎಂಬ ಸತ್ಯ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ, ರಾಜ್ಯಸಭೆ ಮತ್ತು ರಾಷ್ಟ್ರಪತಿಗಳಿಂದ ರಚನಾತ್ಮಕ ಪ್ರತಿರೋಧವಿಲ್ಲದೆ ಅಂಗೀಕಾರಗೊಂಡಿರುವುದರಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ. ಪೌರತ್ವ ತಿದ್ದುಪಡಿ ಮಸೂದೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಸಲುವಾಗಿಯೇ ಮನುವಾದಿಗಳಿಂದ ನಿಯಂತ್ರಿಸಲ್ಪಟ್ಟಿರುವ ಕೇಂದ್ರ ಸರ್ಕಾರದಿಂದ ಜಾರಿಗೊಳಿಸಲ್ಪಟ್ಟಿದೆ.

ನಾವು ಸಾಮಾಜಿಕ ನ್ಯಾಯದ ವಕ್ತಾರರೆಂದು ಬೊಗಳೆ ಬಿಡುವ ಮಾಯಾವತಿ ನೇತೃತ್ವದ ಬಿಎಸ್‍ಪಿ, ರಾಮವಿಲಾಸ್ ಪಾಸ್ವಾನ್‍ರ ಎಲ್‍ಜೆಪಿ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ, ನಿತೀಶ್‍ಕುಮಾರ್ ಮತ್ತು ಶರದ್‍ಯಾದವ್ ನೇತೃತ್ವದ ಸಂಯುಕ್ತ ಜನತಾ ದಳ, ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‍ಆರ್ ಕಾಂಗ್ರೆಸ್, ಎಂ.ಜಿ.ರಾಮಚಂದ್ರನ್ ಕಟ್ಟಿ ಬೆಳೆಸಿದ ಅಣ್ಣಾ ಡಿಎಂಕೆ ಪಕ್ಷಗಳು ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲದ ರಾಜ್ಯ ಸಭೆಯಲ್ಲಿ ಮಸೂದೆಗೆ ಬೆಂಬಲ ನೀಡಿರುವುದು ಸಂವಿಧಾನ ವಿರೋಧಿ ಅವಕಾಶವಾದಿ ರಾಜಕಾರಣಕ್ಕೆ ಶರಣಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಭಾರತದ ರಾಷ್ಟ್ರಪತಿ ಹಾಗೂ ಮೂಲನಿವಾಸಿಗಳ ಪ್ರತಿನಿಧಿ ಶ್ರೀ ರಾಮನಾಥಕೋವಿಂದ್‍ರವರು ಇಂತಹ ಸಂವಿಧಾನ ವಿರೋಧಿ ನಡೆಯನ್ನು ಪ್ರತಿಭಟಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರೆ ಅವರು ಬಹುದೊಡ್ಡ ಮುತ್ಸದ್ದಿಯಾಗಿ ಎಲ್ಲರ ಗೌರವಕ್ಕೆ ಪಾತ್ರರಾಗುತ್ತಿದ್ದರು. ಆದರೆ ಅವರು ತಾನೊಬ್ಬ ರಬ್ಬರಸ್ಟಾಂಪ್ ರಾಷ್ಟ್ರಪತಿ ಎಂಬುದನ್ನು ಮಸೂದೆಗೆ ಸಹಿ ಹಾಕುವುದರ ಮೂಲಕ ಸಾಬೀತುಪಡಿಸಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಂಬೇಡ್ಕರ್ ನೀಡಿದ ರಾಜಕೀಯ ಮೀಸಲಾತಿ ಫಲಾನುಭವಿಗಳಾದ ಬಹುಸಂಖ್ಯಾತ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಸಂಸದರು ಪಕ್ಷಾತೀತವಾಗಿ ಸಂವಿಧಾನನಿಷ್ಠೆ, ಸಾಮಾಜಿಕ ನ್ಯಾಯ ಮತ್ತು ಧರ್ಮ ನಿರಪೇಕ್ಷತೆಗಳನ್ನು ಬದಿಗೊತ್ತಿ ಮಸೂದೆಗೆ ಒಪ್ಪಿಗೆ ನೀಡಿರುವುದು ಇವರು ಅಪ್ಪಟ ‘ಚಮಚಾಶ್ರೀ’ಗಳೆಂಬುದಕ್ಕೆ ಪುರಾವೆಯಾಗಿದೆ. ಅಂಬೇಡ್ಕರ್ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಸೂಪರ್ ಆಗಿ ಮಾತನಾಡುವವರು ಪ್ರಸ್ತುತ ಸಂದರ್ಭದಲ್ಲಿ ನಮ್ಮ ನಡುವೆ ‘ಸೂಪರ್ ಸ್ಲೇವ್ಸ್’ ಆಗಿ ಉಳಿದಿರುವುದು ಆಘಾತಕಾರಿ ಸಂಗತಿಯಾಗಿದೆ. ಇವರೇ ನಮ್ಮ ಕಾಲದ ಅತ್ಯಂತ ‘ಅನರ್ಹ / ಹೃದಯಹೀನ ಜನಪ್ರತಿನಿಧಿಗಳು’! ಭಾರತಕ್ಕೆ ಇಂದು ಬೇಕಿರುವುದು ಎಲ್ಲ ಪ್ರಜೆಗಳನ್ನು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಒಗ್ಗೂಡಿಸಿ ದೇಶದ ಪ್ರಜಾಸತ್ತೆಯ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯತೆ ಮತ್ತು ಧರ್ಮ ನಿರಪೇಕ್ಷತೆಗಳಿಗೆ ಬದ್ಧವಾದ ಪರಿಶುದ್ಧ ರಾಜಕಾರಣ ಮತ್ತು ಆರ್ಥಿಕತೆಗಳು.

ಸ್ವತಃ ಸಂಘಪರಿವಾರದವೇ ರಾಷ್ಟ್ರಪ್ರೇಮಿ ಹಾಗೂ ಸಂವಿಧಾನನಿಷ್ಠ ಪ್ರಧಾನಮಂತ್ರಿ ಎಂದು ಹೆಮ್ಮೆಯಿಂದ ಕರೆಯುವ ಅಟಲ್ ಬಿಹಾರಿ ವಾಜಪೇಯಿ ‘ಭಾರತವು ಧರ್ಮ ನಿರಪೇಕ್ಷತೆಯನ್ನು ಬಿಟ್ಟುಕೊಟ್ಟರೆ ಅದು ಭಾರತ ದೇಶವೇ ಅಲ್ಲ’ ಎಂದು ನುಡಿದ ವಿಚಾರಧಾರೆಯನ್ನು ಇಂದು ನಮ್ಮನ್ನು ಆಳುವವರು ಅರಿತಿದ್ದರೆ ಅವರು ಪೌರತ್ವ ತಿದ್ದುಪಡಿ ಮಸೂದೆ ಜಾರಿಗೊಳಿಸಲು ಮುಂದಾಗುತ್ತಿರಲಿಲ್ಲ. ಅಕ್ರಮ ವಲಸಿಗರ ಸಮಸ್ಯೆಯನ್ನು ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಅಸಹಾಯಕ ಸನ್ನಿವೇಶಗಳಲ್ಲಿ ಭಾರತಕ್ಕೆ ವಲಸೆ ಬಂದ ಹಿಂದೂಗಳು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಸಿಖ್ ಸಮುದಾಯಗಳಿಗಷ್ಟೇ ಸೀಮಿತಗೊಳಿಸಬಾರದು. ಹಳ್ಳಿಗಳಿಂದ ನಗರಗಳಿಗೆ, ಒಂದು ದೇಶದಿಂದ ಬೇರೆ ದೇಶಗಳಿಗೆ ವಲಸೆ ಹೋಗುವವರು ಹೊಟ್ಟೆ ತುಂಬಿದ ಜನರಲ್ಲ, ಬದಲಾಗಿ ಅನ್ನ, ಆಶ್ರಯ, ವಿದ್ಯೆ, ಉದ್ಯೋಗ, ಸುರಕ್ಷತೆ ಮೊದಲಾದ ಮೂಲ ನಾಗರಿಕ ಸೌಲಭ್ಯಗಳಿಂದ ವಂಚಿತರಾದ ಅಸಹಾಯಕ ಬಡಜನರು, ಇಂತಹ ಶೋಷಿತ ಮತ್ತು ಸಂದರ್ಭದ ಬಲಿಪಶುಗಳಾಗಿರುವ ವಲಸೆ ಹೋದವರನ್ನು ಕೇವಲ ಒಂದು ಧಾರ್ಮಿಕ ಮಸೂರದಿಂದ ನೋಡುವುದು ಮಾನವೀಯತೆಗೆ ಬಗೆದ ಬಹುದೊಡ್ಡ ಅಪಚಾರ. ಈ ಸಂದರ್ಭದಲ್ಲಿ ‘ಕಣ್ಣಿಗೆ ಕಣ್ಣು ಎಂಬ ನ್ಯಾಯ ಬಂದರೆ ಈ ಜಗತ್ತೇ ಕುರುಡರ ಜಗತ್ತಾದಿತು’ ಎಂದು ಬಹಳ ಹಿಂದೆಯೇ ಎಚ್ಚರಿಸಿದ ಮಹಾತ್ಮ ಗಾಂಧಿಯವರ ಮಾತುಗಳು ಗಂಭೀರ ಆತ್ಮಾವಲೋಕನಕ್ಕೆ ಎಡೆಮಾಡಿಕೊಡುತ್ತವೆ.

ಬಹುತ್ವ, ಧರ್ಮ ನಿರಪೇಕ್ಷತೆ ಮತ್ತು ಒಕ್ಕೂಟ ತತ್ವಗಳಿಂದಾಗಿ ಜಗತ್ತಿನಲ್ಲಿಯೇ ಪ್ರಬಲ ಪ್ರಜಾಪ್ರಭುತ್ವವಾದಿ ರೂಪುಗೊಂಡಿದ್ದ ಭಾರತವು ಇಂದು ದಾರಿತಪ್ಪಿರಲು ‘ಮೋ-ಷಾ’ ಜೋಡಿಯ ಮನಸ್ಸು, ಹೃದಯ ಮತ್ತು ನಡವಳಿಕೆಗಳನ್ನು ನಿಯಂತ್ರಿಸುತ್ತಿರುವ ಪುರೋಹಿತಶಾಹಿ-ಬಂಡವಾಳಶಾಹಿಗಳು ನೇರವಾಗಿ ಕಾರಣವಾಗಿವೆ. ಇಂದು ನಿಜಕ್ಕೂ ಗಾಂಧಿ, ನೆಹರು, ಅಂಬೇಡ್ಕರ್, ಲೋಹಿಯಾ, ವಾಜಪೇಯಿ ಮೊದಲಾದ ಮಹಾತ್ಮರ ಆತ್ಮಗಳು ಭಾರತೀಯ ಪ್ರಜಾಪ್ರಭುತ್ವ ಹಿಡಿದಿರುವ ಅವನತಿಯ ಹಾದಿಯನ್ನು ನೋಡಿ ನೊಂದು ಒದ್ದಾಡುತ್ತಿವೆ. ಭಾರತೀಯ ಪ್ರಜಾಪ್ರಭುತ್ವವನ್ನು ಇಂದು ಮೌಢ್ಯತೆಗಿಂತ ಮತಾಂಧತೆ ತೀವ್ರವಾಗಿ ಬಾಧಿಸುತ್ತಿರುವ ವ್ಯಾಧಿಯಾಗಿದೆ. ಅಂದು ಮೌಢ್ಯದ ಎದೆಗೆ ಗುಂಡು ಹೊಡೆಯಿರಿ ಎಂದು ಮಹಾನ್ ದಾರ್ಶನಿಕ ಕುವೆಂಪು ಕರೆ ನೀಡಿ ಜನರನ್ನು ಎಚ್ಚರಿಸಿದ್ದರೆ, ಇಂದು ಮತಾಂಧತೆ ವಿರುದ್ಧ ಪ್ರಬಲ ಜನಾಂದೋಲನ ರೂಪಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸುವ ಚಿಂತಕರು ಮತ್ತು ಹೋರಾಟಗಾರರನ್ನು ದಮನಗೊಳಿಸುವ ಶಕ್ತಿಗಳೇ ಭಾರತವನ್ನು ಆಳುತ್ತಿರುವುದು ಎಂತಹ ವಿಪರ್ಯಾಸ!

ವಿಶ್ವದ ಬೃಹತ್ ಪ್ರಜಾಸತ್ತೆ ಎಂಬ ಹೆಗ್ಗಳಿಕೆ ಹೊಂದಿರುವ ಅಂಬೇಡ್ಕರ್ ವಿರಚಿತ ಭಾರತದ ಧರ್ಮ ನಿರಪೇಕ್ಷತೆ ಕೇಂದ್ರಿತ ಸಂವಿಧಾನಕ್ಕೆ ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ಗಂಭೀರ ಬೆದರಿಕೆ ಒಡ್ಡಿರುವುದಲ್ಲದೆ ಭಾರತದಲ್ಲಿ ಏಕಶ್ರೇಣಿಯ ಪೌರತ್ವವನ್ನು ರೂಪಿಸಿ ಮನುಕುಲದ ಅವಿಭಾಜ್ಯ ಅಂಗವೇ ಆಗಿರುವ ಮುಸಲ್ಮಾನರನ್ನು ಈ ಏಕಶ್ರೇಣಿಯಿಂದ ದೂರವಿಡಲು ಕೇಂದ್ರ ಸರ್ಕಾರ ಹೊರಟಿರುವುದು ಮಾನವೀಯತೆಗೆ ಬಗೆದ ಬಹುದೊಡ್ಡ ಅಪಚಾರವಾಗಿದೆ. ‘ಈ ಮಸೂದೆಯಿಂದ ಭಾರತದ ಮುಸಲ್ಮಾನರ ಪೌರತ್ವಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ, ಭಾರತೀಯ ಮುಸಲ್ಮಾನರ ಸುರಕ್ಷತೆಗೆ ನಮ್ಮ ಸರ್ಕಾರ ಬದ್ಧವಾಗಿದೆ’ ಎಂಬ ‘ಮೋ-ಷಾ’ರ ಮಾತುಗಳು ನಂಬಲರ್ಹವಲ್ಲ. ಧರ್ಮ ನಿರಪೇಕ್ಷತೆಗೆ ಅನುಗುಣವಾಗಿ ಪಟ್ಟಭದ್ರ ಹಿತಾಸಕ್ತಿಗಳಿಂದ ಅಮಾನವೀಯವಾಗಿ ದೇಶದಿಂದ ಹೊರದಬ್ಬಲ್ಪಟ್ಟ ಭೂಮಿ ತಾಯಿಯ ತಬ್ಬಲಿ ಮಕ್ಕಳಿಗೆ ಪೌರತ್ವ ನೀಡಿ ಮಾನವೀಯ ನೆಲೆಗಟ್ಟಿನಲ್ಲಿ ಪುನರ್ವಸತಿಗೊಳಿಸುವುದಕ್ಕೆ ಯಾರೂ ಅಡ್ಡಬರುವುದಿಲ್ಲ. ಆದರೆ ಕೇವಲ ಧರ್ಮವೊಂದನ್ನೇ ಆಧಾರವಾಗಿಟ್ಟುಕೊಂಡು ಮುಸಲ್ಮಾನರನ್ನು ಹೊರತುಪಡಿಸಿ ಉಳಿದ ಧರ್ಮೀಯರಿಗೆ ಪೌರತ್ವ ನೀಡುವ ಕೇಂದ್ರ ಸರ್ಕಾರದ ಈ ನಡೆ ಒಪ್ಪತಕ್ಕದ್ದಲ್ಲ. ಸಾಂಸ್ಕøತಿಕ ಸಾಮ್ರಾಜ್ಯಶಾಹಿ, ಪುರೋಹಿತಶಾಹಿ ಮತ್ತು ಬಂಡವಾಳಶಾಹಿಗಳ ಸಂವಿಧಾನ ವಿರೋಧಿ ಮೈತ್ರಿ ಹಾಗೂ ನಡವಳಿಕೆಗಳಿಂದಾಗಿ ಭಾರತದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ಮತ್ತು ನಾಗರಿಕ ಸಮಾಜಗಳ ಸ್ವಾಸ್ಥ್ಯ ಮತ್ತು ಸಾಮಥ್ರ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ದೇಶವನ್ನು ರಕ್ಷಿಸಲು ಅಹಿಂಸಾತ್ಮಕ ಮತ್ತು ಸಂಘಟಿತ ‘ಭಾರತ್ ಬಚಾವೋ’ ಜನಾಂದೋಲನ ಇಂದು ಅನಿವಾರ್ಯವಾಗಿದೆ.

(ಲೇಖಕರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು ಮತ್ತು ಪ್ರಗತಿಪರ ಚಿಂತಕರು. ಲೇಖನದಲ್ಲಿರುವ ಅಭಿಪ್ರಾಯಗಳು ವ್ಯಕ್ತಿಗತವಾದವು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...