Homeಅಂಕಣಗಳುತ್ರಿವಳಿ ತಲಾಖ್ ಮತ್ತು ಮುಸ್ಲಿಂ ಮಹಿಳೆಯರ ವ್ಯಥೆ

ತ್ರಿವಳಿ ತಲಾಖ್ ಮತ್ತು ಮುಸ್ಲಿಂ ಮಹಿಳೆಯರ ವ್ಯಥೆ

- Advertisement -
- Advertisement -

ಡಾ. ಸಾರಾ ಅಬೂಬಕ್ಕರ್ |

ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ಮರುಮದುವೆಯಾಗುವ ಮುಸ್ಲಿಂ ಮಹಿಳೆಯರ ಹಕ್ಕನ್ನು ಕೇಂದ್ರ ಸರಕಾರ ಕಿತ್ತುಕೊಂಡಿದೆ ಎಂದು ಕೆಲವು ಪುರುಷರು ಮುಸ್ಲಿಂ ಮಹಿಳೆಯರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇಂತಹ ವಿಷಯಗಳ ಕುರಿತು ಪುರುಷರು ಭಾಷಣ ಮಾಡುವಾಗ ಇಡೀ ಸಮಾಜದ ಮುಸ್ಲಿಂ ಮಹಿಳೆಯರ ಕುರಿತು ಆಳವಾಗಿ ಚಿಂತಿಸಬೇಕಾಗುತ್ತದೆ.
ಮುಸ್ಲಿಂ ಸಮಾಜದಲ್ಲಿ ಮಹಿಳೆಯರಿಗೆ ಬದುಕಿನಲ್ಲಿ ಯಾವ ಹಕ್ಕುಗಳಿವೆ? ತನ್ನ ಮದುವೆಯಲ್ಲಿಯೇ ಆಕೆಗೆ ಯಾವ ಹಕ್ಕುಗಳೂ ಇಲ್ಲ. ವಿವಾಹ(ನಿಖಾಹ್)ದ ಮುಖ್ಯ ನಿಯಮ ನೆರವೇರುವುದೇ ಈರ್ವರು ಪುರುಷರ ನಡುವೆ ತಾನೇ? ವಧುವಿನ ತಂದೆ ವರನ ಕೈ ಹಿಡಿದು “ನನ್ನ ಮಗಳನ್ನು ಇಂತಿಷ್ಟು ಹಣ ಮೆಹರ್‍ಗಾಗಿ ನಿನಗೆ ನಿಖಾಹ್ ಮಾಡಿ ಕೊಡುತ್ತೇನೆ ಎನ್ನುತ್ತಾನೆ. ಆಗ ವರನಾದವನು “ಅಷ್ಟು ಹಣ ಮೆಹರ್‍ಗೆ ಬದಲಾಗಿ ನಿಮ್ಮ ಮಗಳನ್ನು ನಾನು ಸ್ವೀಕರಿಸುತ್ತೇನೆ” ಎನ್ನುತ್ತಾನೆ. ಮದುವೆಯಾಗುತ್ತಿರುವ ವಧುವಿಗೆ ಈ ಯಾವ ವಿಷಯವೂ ಗೊತ್ತೇ ಇರುವುದಿಲ್ಲ. ಹಾಗೆ ಕಟ್ಟಿಕೊಂಡವನು ನಾಲ್ಕು ದಿನಗಳಲ್ಲಿ ಅಥವಾ ಒಂದು ವಾರದಲ್ಲಿ “ಈ ಹುಡುಗಿ ನನಗೆ ಬೇಡ” ಎಂದು ತ್ರಿವಳಿ ತಲಾಖ್ ನೀಡಿ ಅವಳನ್ನು ತವರಿಗಟ್ಟಿದ ಉದಾಹರಣೆಗಳು ಬೇಕಾದಷ್ಟಿವೆ. ನಿಖಾಹ್ ಸಂದರ್ಭದಲ್ಲಿ ನೂರಾರು ಜನರ ನಡುವಿನಲ್ಲೇ ನಿಖಾಹ್ ಆಗುತ್ತದೆ. ಆದರೆ ತಲಾಖ್ ನೀಡುವಾಗ ಒಂದಿಬ್ಬರು ಸಾಕ್ಷಿಗಳು ಮಾತ್ರ ಇರುತ್ತಾರೆ.
ನನ್ನ ಸಮೀಪದ ಕುಟುಂಬದಲ್ಲಿ ಹುಡುಗಿಯೊಬ್ಬಳಿಗೆ ಮದುವೆಯಾಯಿತು. ಆ ಹುಡುಗನು ಮೊದಲೊಬ್ಬಳನ್ನು ಮದುವೆಯಾಗಿ ಓರ್ವ ಮಗನೂ ಆದಮೇಲೆ ಆಕೆಗೆ ತಲಾಖ್ ನೀಡಿದ್ದನು. ಆ ಮಗನಿಗೆ ಏಳೆಂಟು ವರ್ಷಗಳಾಗಿವೆ. ಆತನು ಇಂಜಿನಿಯರಾಗಿ ಕೊಲ್ಲಿ ರಾಷ್ಟ್ರದಲ್ಲಿ ಉತ್ತಮ ಉದ್ಯೋಗದಲ್ಲಿದ್ದನು. ನಮ್ಮ ಹುಡುಗಿಗೆ ಪ್ರಾಯ ಮೀರುತ್ತಾ ಬಂದಿರುವುದರಿಂದ ಮೊದಲೊಮ್ಮೆ ಮದುವೆಯಾದರೂ ಪರವಾಗಿಲ್ಲ ಆಕೆಗೆ ತಲಾಖ್ ನೀಡಿಯಾಗಿದೆಯಲ್ಲ ಎಂದು ಹಿರಿಯರೆಲ್ಲರೂ ಮದುವೆ ತೀರ್ಮಾನಿಸಿ ನಿಖಾಹ್ ಮಾಡಿದರು. ಮದುವೆಯಾದ ಮೂರನೇ ದಿನ ಹೆಂಡತಿಯೊಂದಿಗೆ ಅವಳ ತವರಿಗೆ ಬಂದವನು, ಮರುದಿನ ಬೆಳಗ್ಗೆ ತನ್ನ ಮನೆಗೆ ಹೊರಟವನು ಮಧ್ಯಾಹ್ನದ ಹೊತ್ತಿಗೆ ತ್ರಿವಳಿ ತಲಾಖ್ ಕಳುಹಿಸಿದನು! ಇದು ಕೆಲವು ವರ್ಷಗಳ ಹಿಂದಿನ ಘಟನೆ, ಆಕೆಗೆ ಈ ವರೆಗೆ ಬೇರೆ ಮದುವೆಯಾಗಿಲ್ಲ.

ಮಕ್ಕಳಿಲ್ಲದ ಸಂದರ್ಭದಲ್ಲಿ ಇನ್ನೋರ್ವ ಹುಡುಗನನ್ನು ಹುಡುಕಬಹುದಷ್ಟೆ. ಅದು ಅಷ್ಟು ಸುಲಭವಲ್ಲ ಒಂದು ಮದುವೆ ನೆರವೇರಿಸುವಾಗಲೇ ಹೆತ್ತವರು ಅರೆಜೀವವಾಗಿರುತ್ತಾರೆ. ಅವರಿಗೆ ಇನ್ನೂ ಒಂದೆರಡು ಹೆಣ್ಣು ಮಕ್ಕಳೂ ಇದ್ದರೆ ಹೆತ್ತವರ ಪರಿಸ್ಥಿತಿ ಏನಾಗಬಹುದು?
ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರಿಗೆ ಕೂಡಾ ವಿಚ್ಛೇದನಗೊಂಡ ಮಗಳಿಗೆ ಇನ್ನೋರ್ವ ವರನನ್ನು ಹುಡುಕುವುದು ಸುಲಭದ ಮಾತೇನೂ ಅಲ್ಲ. ತ್ರಿವಳಿ ತಲಾಖ್‍ನ ನಿಷೇಧದ ಕುರಿತು ಪತ್ರಿಕೆಗಳಲ್ಲೂ ಇತರೆಡೆಗಳಲ್ಲೂ ಸಾಕಷ್ಟು ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಕೇರಳದಲ್ಲಿ ಒಂದು ಘಟನೆ ನಡೆದಿದೆ. ತಂದೆಯೋರ್ವನು ತಮ್ಮ ಮಗಳಿಗೆ ಸಾಕಷ್ಟು ಚಿನ್ನಾಭರಣ, ವರದಕ್ಷಿಣೆ ಮಾತ್ರವಲ್ಲದೆ ಅವಳ ಹೆಸರಿಗೆ ಒಂದು ಸೈಟನ್ನು ನೀಡಿದರು. ಕೆಲವೇ ದಿನಗಳಲ್ಲಿ ಆ ಗಂಡನು ಅವಳು ತಂದ ಎಲ್ಲ ವಸ್ತುಗಳನ್ನೂ ಎತ್ತಿಕೊಂಡು ಹೆಂಡತಿಯನ್ನು ತವರಿಗೆ ಕಳುಹಿಸಿ ತ್ರಿವಳಿ ತಲಾಖ್ ನೀಡಿದನು. ಆಕೆಯಿಂದ ಪಡೆದ ಯಾವ ವಸ್ತುಗಳನ್ನೂ ಹಿಂತಿರುಗಿಸಲಿಲ್ಲ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಇನ್ನು ತನಗೆ ತವರಿನಿಂದ ದೊರೆತ ವಸ್ತುಗಳಿಗಾಗಿ ಆಕೆ ನ್ಯಾಯಾಲಯದಲ್ಲಿ ಹೋರಾಡಬೇಕಾಗಿದೆ.
ಈಗ ಹೇಳಿ, ಮುಸ್ಲಿಂ ಮಹಿಳೆಯರ ಪುನರ್‍ವಿವಾಹದ ಹಕ್ಕನ್ನು ಕೇಂದ್ರ ಸರಕಾರ ಕಿತ್ತುಕೊಂಡಿದೆಯೇ? ಈಗ ಈ ಪುರುಷರು ಅವಳಿಗೆ ತಂದೆ ನೀಡಿದ ವಸ್ತುಗಳಿಗಾಗಿ ಅವಳು ನ್ಯಾಯಾಲಯದಲ್ಲಿ ಹೋರಾಡಬಹುದಲ್ಲಾ? ಆ ಹಕ್ಕು ಆಕೆಗಿದೆಯಲ್ಲಾ? ಎಂದು ಹೇಳಬಹುದು!
ಒಂದೆರಡು ಮಕ್ಕಳಿದ್ದಾಗಲೂ ತಲಾಖ್ ನೀಡಿ ಹೆಂಡತಿಯನ್ನು ತವರಿಗಟ್ಟುವವರಿದ್ದಾರೆ. ಆದರೆ ಆ ಮಕ್ಕಳ ಹಕ್ಕು ಗಂಡನದಾಗಿರುತ್ತದೆ. ಹೆಂಡತಿಯ ಮೇಲೆ ಗಂಡ ಅತ್ಯಾಚಾರ ಮಾಡಿದರೂ ಮಕ್ಕಳು ಹುಟ್ಟುತ್ತಾರೆ. ಆ ಮಗುವಿಗಾಗಿ ಮತ್ತು ತನ್ನ ಆರೋಗ್ಯಕ್ಕಾಗಿ ಆ ಮಹಿಳೆ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಕೆಲವೊಮ್ಮೆ ಆ ಗಂಡನು ತಿರುಗಿಯೂ ನೋಡಿರುವುದಿಲ್ಲ. ಆದರೆ ವಿಚ್ಛೇದನದ ಸಂದರ್ಭದಲ್ಲಿ ಮಕ್ಕಳ ಹಕ್ಕಿನ ಅವಕಾಶ ಗಂಡನದೇ ಆಗಿರುತ್ತದೆ. ಎಲ್ಲ ಧಾರ್ಮಿಕ ನಿಯಮಗಳೂ ಎಲ್ಲ ಸಮಾಜಗಳೂ ಮಕ್ಕಳ ಹಕ್ಕುಗಳನ್ನು ಗಂಡಸರಿಗೇ ಒಪ್ಪಿಸಿದೆ. ನಿಯಮಗಳನ್ನು ರೂಪಿಸುವವರು ಪುರುಷರು ತಾನೇ?
ತ್ರಿವಳಿ ತಲಾಖ್ ರದ್ದುಪಡಿಸಿದರೆ ಮಹಿಳೆಯರ ಪುನರ್ವಿವಾಹದ ಹಕ್ಕನ್ನು ಕೇಂದ್ರ ಸರಕಾರ ಕಿತ್ತುಕೊಂಡಿದೆ ಎಂದು ಮುಸ್ಲಿಂ ಪುರುಷರು ಮಹಿಳೆಯರಿಂದಲೂ ಹೇಳಿಸುತ್ತಾರೆ. ಪುರುಷರು ಹೇಳುವುದೆಲ್ಲವನ್ನೂ ಮಹಿಳೆಯರು ಎದುರಾಡದೆ ಒಪ್ಪಿಕೊಳ್ಳುತ್ತಾರೆ. ಕಾಗದದಲ್ಲಿ ಬರೆದು ಮಹಿಳೆಯರ ಮುಂದಿಟ್ಟರೆ ಅವರು ಹೇಳಿದ ಜಾಗದಲ್ಲಿ ಹೆಬ್ಬೆಟ್ಟು ಒತ್ತಲು ಈ ಮಹಿಳೆಯರು ಸಿದ್ಧರಿರುತ್ತಾರೆ!
ಈಗಲೂ ಖುಲಾದ ವಿಷಯದ ಕುರಿತು ಮಹಿಳೆಯರಿಗೆ ತಿಳಿವಳಿಕೆಯೇನೂ ಇಲ್ಲ. ಹೆಂಡತಿಗೂ ಗಂಡನನ್ನು ಖುಲಾ ಮಾಡಿ ವಿಚ್ಛೇದಿಸುವ ಹಕ್ಕು ಇದೆ ಎಂದು ತಮ್ಮ ಮಹಿಳೆಯರನ್ನು ಪುರುಷರು ನಂಬಿಸಿದ್ದಾರೆ. ತಲಾಖ್ ಎಂಬ ಶಬ್ದ ಗಂಡನ ಬಾಯಿಯಿಂದಲೇ ಬರಬೇಕು ಎಂಬುದನ್ನು ನಾನು ಈ ಹಿಂದೆಯೇ ಬರೆದಿದ್ದೇನೆ. ಹಿರಿಯರು ಸೇರಿ ಚರ್ಚೆ ಮಾಡಿ ಆತನಿಂದ ತಲಾಖ್ ಕೊಡಿಸಲು ಪ್ರಯತ್ನಿಸಬಹುದು ಪುರುಷನೊಬ್ಬನು ತಾನು ತಲಾಖ್ ನೀಡಲಾರೆ; ತನಗೆ ಆ ಹೆಂಡತಿ ಬೇಕೇಬೇಕು ಎಂದರೆ ಆತನಿಂದ ತಲಾಖ್ ಪಡೆಯಲು ಸಾಧ್ಯವೇ ಇಲ್ಲ. ಅಬ್ದುಲ್ ರೆಹಮಾನ್ ಪಾಷಾ ಈ ಕುರಿತು ಕಳೆದ ವರ್ಷ ಪತ್ರಿಕೆಯಲ್ಲಿ ಉತ್ತಮ ಲೇಖನ ಬರೆದು ಪ್ರಕಟಿಸಿದ್ದಾರೆ.

ಮುಸ್ಲಿಂ ಮಹಿಳೆಯರಿಗೆ ವೈವಾಹಿಕ ಬದುಕಿನಲ್ಲಿ ಯಾವ ಹಕ್ಕುಗಳೂ ಇಲ್ಲ. ತಮ್ಮ ನಿಖಾಹ್‍ನಲ್ಲಿಯೇ ಆಕೆ ಪರಕೀಯಳಂತೆ ಇರಬೇಕಾಗುತ್ತದೆ. ತಲಾಖ್ ಆದ ಬಳಿಕ ಆಕೆ ಅದೇ ಗಂಡನನ್ನು ಪುನರ್ವಿವಾಹವಾಗಬೇಕಾದರೆ ಆಕೆ ಬೇರೊಬ್ಬ ಪುರುಷನನ್ನು ನಿಖಾಹ್ ಆಗಿ ಆತನೊಡನೆ ಒಂದು ರಾತ್ರಿಯನ್ನು ಕಳೆಯುವುದು ನಿರ್ಬಂಧವಾಗಿದೆ. ಆದರಿಂದಾಗಿ ಮೊದಲ ಗಂಡನೊಡನೆ ಬಾಳುವ ಹಕ್ಕು ಇಲ್ಲ. ಇತ್ತೀಚೆಗೆ ಈ ಪದ್ಧತಿಯನ್ನು ವಿರೋಧಿಸಿ ಕೆಲವು ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟಿನಲ್ಲಿ ದೂರು ನೀಡಿದ್ದಾರೆ. ಚಿಕ್ಕ ಹೆಣ್ಣುಮಕ್ಕಳಿಗೆ ಆರೇಳು(ಇನ್ನೂ ಚಿಕ್ಕವರಾಗಿರುವಾಗ) ವರ್ಷದ ಪ್ರಾಯದಲ್ಲಿ ಒಂದು ಅತೀ ಕ್ರೂರವಾದ ಶಸ್ತ್ರಕ್ರಿಯೆಯನ್ನು ನೆರವೇರಿಸಲಾಗುತ್ತದೆ. ಆಕೆಗೆ ಲೈಂಗಿಕ ಕ್ರಿಯೆಯಲ್ಲಿ ಯಾವುದೇ ರೀತಿಯ ಸುಖ ಪಡೆಯಲಾಗದಂತೆ ಆಕೆಯ ಮರ್ಮಸ್ಥಾನದಿಂದ ಆಕೆಯ ಒಂದು ಅಂಗವನ್ನೇ ತೀರಾ ಅನಾಗರಿಕ ರೀತಿಯಲ್ಲಿ ಬ್ಲೇಡಿನಿಂದಲೋ ಗಾಜಿನ ಚೂರಿನಿಂದಲೋ ಕತ್ತರಿಸಿ ತೆಗೆಯಲಾಗುತ್ತದೆ. ಈ ಹೆಣ್ಣು ಮಕ್ಕಳು ನೋವಿನಿಂದ ಜೋರಾಗಿ ಕಿರುಚುತ್ತಾರೆ. ಗಂಭೀರವಾಗಿ ರಕ್ತಸ್ರಾವವಾಗಿ ಕೆಲವೊಮ್ಮೆ ಮಕ್ಕಳು ಸಾವನ್ನಪ್ಪುವುದೂ ಇದೆ. ‘ಫಿಮೇಲ್ ಜೆನಿಟಲ್ ಮ್ಯೂಟಿಲೇಷನ್’ ಎಂಬುದು ಈ ಶಸ್ತ್ರಕ್ರಿಯೆಯ ಹೆಸರಾಗಿದೆ. ಹೆಣ್ಣನ್ನು ಗಂಡಿನ ಸುಖಕ್ಕಾಗಿಯಷ್ಟೇ ದೇವರು ಸೃಷ್ಟಿಸಿದ್ದಾನೆ ಎಂಬುದು ಈ ಪುರುಷರ ಮನೋಭಾವವಾಗಿದೆ. ಈ ಶಸ್ತ್ರಕ್ರಿಯೆಯಿಂದಾಗಿ ಈ ಹೆಣ್ಣುಮಕ್ಕಳು ಹೆರಿಗೆಯಲ್ಲಿ ಬಹಳ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆಫ್ರಿಕಾ ಖಂಡದ ಉತ್ತರ ಭಾಗದ ಹಲವು ದೇಶಗಳಲ್ಲಿ ಈ ಶಸ್ತ್ರಕ್ರಿಯೆ ತೀರಾ ಸಾಮಾನ್ಯ ಎಂಬಂತಾಗಿದೆ. ಕೊಲ್ಲಿ ರಾಷ್ಟ್ರಗಳ ಹಲವೆಡೆಗಳಲ್ಲೂ ಈ ಪದ್ದತಿ ಇದೆ. ಈ ಪದ್ದತಿ ಈ ಭಾಗದ ಮುಸ್ಲಿಮರಲ್ಲಿ ಎಷ್ಟೊಂದು ಆಳವಾಗಿ ಬೇರೂರಿದೆಯೆಂದರೆ ಅಮೇರಿಕಾದಲ್ಲಿ ವಾಸಿಸುತ್ತಿರುವ ಕೆಲವರು ಈ ಶಸ್ತ್ರಕ್ರಿಯೆಯನ್ನು ವೈದ್ಯರ ನೆರವಿನಿಂದ ತಮ್ಮ ಮಕ್ಕಳ ಮೇಲೆ ಕೈಗೊಳ್ಳುತ್ತಾರೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದಲೂ ವಿದೇಶದ ಮಹಿಳೆಯರು ಈ ಪದ್ದತಿಯನ್ನು ರದ್ದುಪಡಿಸಬೇಕೆಂದು ಹೋರಾಡುತ್ತಿದ್ದಾರೆ. ನಮ್ಮ ದೇಶದ ಶಿಯಾ ಮುಸ್ಲಿಂ ಸಮುದಾಯದಲ್ಲಿ ಕೂಡಾ ಈ ಶಸ್ತ್ರಕ್ರಿಯೆ ನೆರವೇರಿಸಲಾಗುತ್ತಿದೆಯೆಂದು ಕೇಳಿದ್ದೇನೆ. ಎಫ್.ಎಂ.ಜಿ (ಫಿಮೇಲ್ ಜೆನಿಟಲ್ ಮ್ಯೂಟಿಲೇಶನ್) ಎಂದು ಈ ಶಸ್ತ್ರಕ್ರಿಯೆಯನ್ನು ಕರೆಯಲಾಗುತ್ತದೆ.
ಮಹಿಳೆಯರನ್ನು ದೈಹಿಕವಾಗಿ, ಮಾನಸಿಕವಾಗಿ ಕೂಡಾ ಎಷ್ಟೊಂದು ನೋವಿಗೊಳಪಡಿಸಲು ಪುರುಷರು ಸಿದ್ಧರಾಗುತ್ತಾರೆ ಎಂಬ ವಿವರಣೆ ನೀಡಬೇಕಾಗಿಲ್ಲ. ಇಂತಹ ಎಲ್ಲ ನೋವುಗಳನ್ನೂ ಮಹಿಳೆಯರಿಗೆ ಧರ್ಮದ ಹೆಸರಿನಲ್ಲಿ ನೀಡಲಾಗುತ್ತದೆ. ಅಂತಹ ಹೊಸ ಹೊಸ ಪ್ರಯೋಗಗಳನ್ನೂ ಕಂಡುಹಿಡಿಯಲಾಗುತ್ತದೆ.
ಎಲ್ಲಾ ವಿವಾಹಗಳೂ ನೊಂದಣಿಯಾಗಬೇಕು; ವಿಚ್ಛೇದನವು ನ್ಯಾಯಾಲಯದಲ್ಲೇ ಆಗಬೇಕು. ನ್ಯಾಯಾಲಯವು ವಿವಾಹ ವಿಚ್ಛೇದನ ತೀರ್ಪನ್ನು ಒಂದು ವರ್ಷದಲ್ಲಿ ನೀಡುವಂತಾಗಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...