ಬಸಪ್ಪನ ಜಮೀನು

- Advertisement -
- Advertisement -

ಅಷ್ಟು ಹೊತ್ತೂ ಶಾನುಭೋಗರಿಂದ ಕತೆ ಕೇಳಿ ತಲೆತೂಗುತ್ತಿದ್ದ ಶಂಕರಯ್ಯನವರು ಒಂದು ಚಿಟಿಕೆ ನೆಶ್ಯ ಏರಿಸಿ ಮೂಗೊರೆಸಿಕೊಳ್ಳುತ್ತಾ ತಾವೂ ಶುರು ಮಾಡಿದರು ಒಂದು ಕತೆಯನ್ನು:
`ಏನು ಶ್ಯಾನುಭೋಗರೇ, ನೀವೀಕತೆ ಹೇಳೀದಿರಲ್ಲ, ನಮ್ಮ ತಾತ ನನಗೆ ಹೇಳಿದ್ದ ಒಂದು ನಡೆದ ಕತೆ ಹೇಳ್ತೀನಿ ಕೇಳಿ. ನಮ್ಮ ಹಳ್ಳಿಗೆ ಪಡುವಲಲ್ಲಿ ಒಂದು ಗುಡ್ಡದ ಮೇಲೆ ಯಾವುದೋ ಒಂದು ದೊಡ್ಡ ಮನೆ ಮುರಿದು ಬಿದ್ದಿದೆ ನೋಡಿ’
`ಅದೇ ಮಸೀತಿಯೊ, ಚರ್ಚೋ ಇತ್ತಲ್ಲ’
`ಹೂಂ, ಅದರ ಮುಂದೆ ನೂರೈವತ್ತೆಕರೆಯೊ, ನೂರರವತ್ತೆಕರೆಯೊ ಒಂದು ಖುಷ್ಕಿ ಜಮೀನು ಪಾಳು ಬಿದ್ದಿತ್ತಂತೆ. ಈಗೇನೊ ಕಾವೇರಿಯಿಂದ ನಾಲೆ ತಂದ ಮೇಲೆ ಆದಷ್ಟು ಜಮೀನು ತರಿ ಆಗಿದೇನ್ನಿ. ಅದೇನು ಕಾರಣದಿಂದಲೋ ಏನೊ ಆ ಜಮೀನನ್ನು ಆಗ ಯಾರೂ ಸಾಗುವಳಿ ಮಾಡಿರಲಿಲ್ಲ. ಅಲ್ಲದೆ ಯಾರಿಗೆ ಸೇರಿದೆ ಅಂತಲೂ ಸರಿಯಾಗಿ ಯಾರಿಗೂ ತಿಳಿದೇ ಇರಲಿಲ್ಲ. ಒಂದು ಸಾರಿ ಯುದ್ದ ಕಳೆದ ಮೇಲೆ ದೇಶದಲ್ಲಿ ಎಲ್ಲೆಲ್ಲೂ ಮಳೆ ಬೆಳೆ ಇಲ್ಲದೆ ಕ್ಷಾಮ ಬಂದು, ಹೊಟ್ಟೆಗೆ ಹಿಟ್ಟಿಲ್ಲದೆ ಜನ ಸಾಯ್ತಾ ಇದ್ದರಲ್ಲ, ಆಗ ಕಂಗಾಲಾಗಿ ಸಾಯುತ್ತಿದ್ದ ಜನಗಳಿಗೆ ಸಮಾಧಾನ ತರುವುದಕ್ಕೋಸ್ಕರ ಸರ್ಕಾರದವರು `ಹೆಚ್ಚು ಆಹಾರ ಬೆಳೆಯಿರಿ’ ಅನ್ನೋ ಒಂದು ಸಂಸ್ಥೆಯನ್ನು ಸ್ಥಾಪಿಸಿ, ಎಲ್ಲೆಲ್ಲೂ ಬಾವಿಗಳನ್ನ ತೋಡಿಸೋದು, ಸಾಧ್ಯವಾದ ಕಡೆಯೆಲ್ಲೆಲ್ಲ ನದಿಗಳಿಂದ ಕಾಲುವೆ ಹರಿಸಿ ಬಂಜರು ಪ್ರದೇಶಗಳನ್ನೆಲ್ಲ ಸಾಗುವಳಿ ಮಾಡಿಸುವುದು, ಬೇಸಾಯಗಾರರಿಗೆ ಹೆಚ್ಚು ಆಹಾರ ಬೆಳೆಯಲಿ ಅಂತ ಒಳ್ಳೆ ಗೊಬ್ಬರ, ಬಿತ್ತನೆ, ಹೊಸತರದ ಉಪಕರಣಗಳು ಮೊದಲಾದುವನ್ನು ಕೊಡೋದು, ಅಲ್ಲದೆ ಹೆಚ್ಚು ಆಹಾರ ಬೆಳೆದವರಿಗೆ ಬಹುಮಾನ ಕೊಡೋದು ಹೀಗೆಲ್ಲ ಮಾಡಿದರು ನೋಡಿ! ಅದರಿಂದ ದೇಶದಲ್ಲಿ ಪಾಳು ಬಿದ್ದಿದ್ದ ಜಮೀನೆಲ್ಲ ಮತ್ತೆ ಸಾಗುವಳಿಗೆ ಬಂತು. ಜನಗಳಿಗೂ ಒಂದೆರಡು ವರ್ಷದಲ್ಲೇ ತುಂಬಾ ಅನುಕೂಲವಾಯ್ತು ಅನ್ನಿ. ಹಾಗೇ ಒಂದು ಸಾರಿ `ಹೆಚ್ಚು ಆಹಾರ ಬೆಳೆಯಿರಿ’ ಸಂಸ್ಥೆಯ ಅಧಿಕಾರಿಗಳು ರೈತರ ಕಷ್ಟ ಸುಖಗಳನ್ನೆಲ್ಲ ವಿಚಾರಿಸಿಕೊಳ್ಳುತ್ತಾ ನಮ್ಮ ಹಳ್ಳಿಗೂ ಬಂದಿದ್ದರು. ಆಗ ಆ ಗುಡ್ಡದ ಕೆಳಗೆ ಪಾಳು ಬಿದ್ದಿದ್ದ ಖುಷ್ಕಿ ಜಮೀನು ಅವರ ಕಣ್ಣಿಗೆ ಬಿತ್ತು. ಅಂತಹ ಕಷ್ಟ ಕಾಲದಲ್ಲಿ ಅಷ್ಟು ವಿಶಾಲವಾದ ಜಮೀನನ್ನು ಪಾಳು ಬಿಟ್ಟಿದ್ದರೆ ಯಾರು ತಾನೇ ಸಹಿಸ್ತಾರೆ? ಅವರು ತಮ್ಮ ಪಕ್ಕದಲ್ಲೇ ಇದ್ದ ರೆವಿನ್ಯೂ ಆಫೀಸರನ್ನು ಕರೆದು `ಯಾರದ್ರೀ ಈ ಜಮೀನು?’ ಎಂದು ಕೇಳಿದರು. ರೆವಿನ್ಯೂ ಆಫೀಸರು ಹಿಂತಿರುಗಿ ಪಟೇಲನ ಮುಖವನ್ನು ನೋಡಿದರು. ಪಟೇಲ ಕೈ ಎಣ್ಣೆ ಮುಖ ಮಾಡಿಕೊಂಡು, `ಶಾನುಭೋಗರ್ನ ಕರೆತತ್ತೀನಿ ಮಾಸ್ವಾಮಿ’ ಎಂದು `ಈ ಹಾಳ್ ಶಾನುಭೋಗ್ರು ಒಳ್ಳೇ ಸಮಯದಲ್ಲಿ ಕೈಕೊಡ್ತಾರಲ್ಲ? ಎಲ್ಲೋ ಊಟಾಂತ ಹೊರಟು ಬಿಟ್ಟವ್ರೆ’ ಅಂತ ಗೊಣಗಿಕೊಂಡು ಓಡಿದ. ಎರಡು ನಿಮಿಷದಲ್ಲೇ ಚಿತ್ತೈಸಿತು ಶಾನುಭೋಗರ ಸವಾರಿ! ಪಾಪ, ಸಾಹುಕಾರ್ ಸುಬ್ಬಣ್ಣನವರ ಮನೆ ಮದುವೆ ಊಟಕ್ಕೆ ಹೋಗಿದ್ದರು. ಅರೆಹೊಟ್ಟೆಯಾದರೂ ಊಟ ಮಾಡಿದ್ದರೋ ಇಲ್ಲವೋ ಕಾಣೆ. ಪಟೇಲ ಕರೆದಕೂಡಲೆ ಕೈಗೆ ನೀರು ಹಾಕಿದ್ದೇ ತಡ ಮೈಗೆ ಬನೀನು ತಗಲಿಸಿಕೊಂಡು, ಅದರ ಮೇಲೆ ಗುಂಡಿಯಿಲ್ಲದೆ ಕಾಗದಪತ್ರಗಳ ಭಾರದಿಂದ ಕೆಳಕ್ಕೆ ಜಗಿಯುತಿದ್ದ ಕೋಟೊಂದನ್ನು ಹಾಕಿಕೊಂಡು, ಕಂಕುಳಲ್ಲಿ ಕೆಲವು ಪುಸ್ತಕಗಳನ್ನು ಇರಿಸಿಕೊಂಡು, ಮೂಗಿನ ತುದಿಗೆ ದಾರಕಟ್ಟಿದ ಕನ್ನಡಕವನ್ನು ತೂಗಿಸಿಕೊಂಡು, ಬೊಜ್ಜು ದೇಹವನ್ನು ಹೊರಲಾರದೆ ಹೊತ್ತು ಸ್ವಲ್ಪ ಪ್ರಯಾಸದಿಂದಲೇ ಬಂದರು. ಅವರನ್ನು ನೋಡಿದ ಕೂಡಲೇ ರೆವಿನ್ಯೂ ಆಫೀಸರು ಸ್ವಲ್ಪವೂ ಕನಿಕರವಿಲ್ಲದೆ ಅವರ ಮೇಲೆ ಎಗರಿಬಿದ್ದರು.
`ಎಲ್ರಿ ಹೋಗಿದ್ರಿ ಇಷ್ಟು ಹೊತ್ತೂ? ಯಾರದ್ರಿ ಈ ಜಮೀನು?’
`ಇದು ಬಸಪ್ಪಂದು ಮಹಾಸ್ವಾಮಿ’ ಅಂದರು ಶಾನುಭೋಗರು.
`ಯಾವ ಬಸಪ್ಪಂದ್ರೀ? ಕರೀರಿ ಅವನ್ನ’
ಶಾನುಭೋಗರು ಕಕ್ಕಾಬಿಕ್ಕಿಯಾಗಿ ಹಿಂತಿರುಗಿ ನೋಡಿದರು. ಪಟೇಲ ಅಲ್ಲಿ ಸೇರಿದ್ದ ಎಲ್ಲ ಹಳ್ಳಿಗರನ್ನೂ ವಿಚಾರಿಸಿ ನೋಡಿದ. ಯಾರನ್ನು ಕೆಳೀದರೂ `ಬಸಪ್ಪ ಅನ್ನೋವ್ನು ನಮ್ಮಳ್ಳಿಲೇ ಇಲ್ವಲ್ಲ’ ಅಂದುಬಿಟ್ಟರು. ದೂರದಲ್ಲಿ ಕೋಲೂರಿ ನಿಂತಿದ ಒಬ್ಬ ಮುದುಕ ಮಾತ್ರ, `ಆ ಮೂಲೇ ಅಟ್ಟೀಲಿ ಬಸಣ್ಣ ಅಂತ ಒಬ್ಬ ಇದ್ದ ಅವನ್ ತೀರೋಗಾಗ್ಲೇ ಅದಿನೈದಿಪ್ಪತ್ತೊರ್ಷಕ್ ಬಂತು. ಆದ್ರೆ . . . . ಅವ್ನು ಜಮೀನ್ ಗಿಮೀನ್ ಮಾಡ್ಕೂಂಡಿದ್ದಂಗ್ ಕಾಣೆ. ಅತ್ವಾ ಇರಬವ್ದೋ ಏನೊ ನಂಗ್ ನೆಪ್ಪಿಲ್ಲ’ ಅಂದ. ರೆವಿನ್ಯೂ ಆಫೀಸರು ರೇಗಿ, `ಏನ್ರಿ ಶಾನುಭೋಗರೆ, ಇದೇ ಏನ್ರಿ ನೀವು ಮಾಡ್ತಿರೋ ಕೆಲಸ? ನೆಟ್ಟಗೆ ಜಮೀನು ಯಾವುದು, ಅದರ ವಾರಸುದಾರರು ಯಾರು ಅನ್ನೋದನ್ನೇ ತಿಳಿಕೊಳ್ಳುವ ಯೋಗ್ಯತೆಯಿಲ್ಲ ಏನ್ರಿ ನೀವು ಶಾನಭೋಗ್ಕೆ ಮಾಡೋದು? ಶುದ್ಧ ನಾಲಾಕ್ಕು. ಬಿಚ್ಚಿ ನೋಡ್ರಿ ನಿಮ್ಮ ಕಂತೇನ’ ಅಂದರು. ಶಾನುಭೋಗರು ಗಡಗಡ ನಡಗ್ತಾ ತಾವು ತಂದಿದ್ದ ಕಡತವನ್ನೆಲ್ಲ ಬಿಚ್ಚಿ ಒದರಿ ಮೊದಲು ಆ ಜಮೀನಿನ ಸರ್ವೇ ನಂಬರನ್ನು ಕಂಡುಹಿಡಿದರು. ಆ ಮೇಲೆ ಹಳೆ ದಾಖಲೆಗಳನ್ನೆಲ್ಲಾ ಹುಡುಕಿ ಅದು ಬಸಪ್ಪ ಎಂಬವನಿಗೇ ಸೇರಿದ್ದೆಂತಲೂ, ಅದರೆ ಅದೇನು ಕಾರಣದಿಂದಲೋ ಆ ಜಮೀನಿಗೆ ಬಹಳ ದಿನಗಳಿಂದ ಕಂದಾಯವೇ ಪಾವತಿಯಾಗುತ್ತಿಲ್ಲವೆಂತಲೂ ಕಂಡುಹಿಡಿದರು. ಅದರೆ ಅ ಬಸಪ್ಪ ಯಾರೋ ಯಾರಿಗೂ ತಿಳಿಯದು. ರೆವಿನ್ಯೂ ಆಫೀಸರು ಸ್ವಲ್ಪ ಹೊತ್ತು ಚರ್ಚೆಮಾಡಿ ಪುಸ್ತಕವನ್ನೆಲ್ಲ ಇನ್ನೊಂದು ಸಾರಿ ತಿರುವಿ ಹಾಕಿ, ಆಮೇಲೆ ಕಡಿಮೆ ಬೆಲೆಗೆ ಒಪ್ಪಿಸಿಕೊಡುವುದರ ಬದಲು ಹರಾಜು ಹಾಕಿಸಿಬಿಡಿ. ಯಾರಿಗೆ ಆಭಿಲಾಷೆ ಇದೆಯೋ ಅವರು ಇದನ್ನು ತೆಗೆದುಕೊಳ್ಳಲಿ. ಅದರಿಂದ ಸರ್ಕಾರಕ್ಕೂ ಲಾಭವಾಗುತ್ತೆ. ಅಲ್ಲದೆ ಸಾಗುವಳಿ ಮಾಡುವವರೂ ಪ್ರೀತಿಯಿಂದ ಮಾಡುತ್ತಾರೆ. ನಾವೂ ಬೇಕಾದರೆ ಎಲ್ಲಾ ರೀತಿಯ ಸಹಾಯ ಮಾಡಿ ಹೊಸ ರೀತಿ ಯಂತ್ರಗಳಿಂದ ಈ ಬಂಜರು ಭೂಮಿಯನ್ನ ಹಸನು ಮಾಡಿಸಿ ಒಳ್ಳೆ ಬೆಳೆ ತರಿಸಬಹುದು’ ಅಂತ ಸಲಹೆ ಕೊಟ್ಟರು. ರೆವಿನ್ಯೂ ಆಫೀಸರಿಗೂ ಅದು ಒಪ್ಪಿಗೆಯಾಯಿತು. ಆ ಗಳಿಗೆಯಲ್ಲೇ ಅದಕ್ಕೆ ಬೇಕಾದ ಏರ್ಪಾಡುಗಳನ್ನೆಲ್ಲಾ ಮಾಡುವಂತೆ ಶಾನುಭೋಗರಿಗೆ ಅಪ್ಪಣೆ ಕೊಡಿಸಿದರು.
“ಸರಿ ಆಮೇಲೆ ಶಾನುಭೋಗರು ಹರಾಜಿಗೆ ಒಂದು ಸರಿಯಾದ ದಿನ ಗೊತ್ತು ಮಾಡಿ ರೆವಿನ್ಯೂ ಆಫೀಸರು ಒಪ್ಪಿ ತಾಲ್ಲೋಕು ಧಣಿಗಳಿಗೆ ತಿಳಿಸಿದರು. ಎಲ್ಲ ಸಿದ್ದತೆಗಳೂ ಆಗತೊಡಗಿದವು. ಒಂದೆರಡು ದಿನ ಮುಂಚಿನಿಂದಲೇ ಸುತ್ತಮುತ್ತ ಇದ್ದ ಎಲ್ಲಾ ಹಳ್ಳಿಗಳಲ್ಲೂ ಡಂಗುರ ಹೊಡಿಸಿ ಹರಾಜಿನ ವಿಷಯವನ್ನೂ ಪ್ರಚಾರ ಮಾಡಿದರು. ಅಷ್ಟೇ ಅಲ್ಲದೆ ಪಟ್ಟಣ ವಾಸದವರಿಗೂ ತಿಳಿಯಲೆಂಬ ಉದ್ದೇಶದಿಂದ ಪತ್ರಿಕೆಗಳಲ್ಲೆಲ್ಲ ಅಚ್ಚು ಹಾಕಿಸಿದರು. ಹರಾಜಿನ ದಿನವೂ ಬಂತು. ಏನು, ಅಲ್ಲಿ ಒಂದು ದೊಡ್ಡ ಜಾತ್ರೆಯೇ ನಡೆಯಿತು. ಆಗ ತಾನೆ ಆ ಹಳ್ಳಿಯ ಮೂಲಕ ಕಾವೇರಿ ನಾಲೆ ಬಂದು ಸುತ್ತಮುತ್ತ ಇದ್ದ ಹೊಲಗಳೆಲ್ಲ ಬತ್ತದ ಗದ್ದೆಗಳಾಗಿದ್ದುದರಿಂದ ಎಲ್ಲರಿಗೂ ಆ ಜಮೀನಿನ ಮೇಲೆ ಕಣ್ಣು ಬಿತ್ತು. ಒಂದೇ ತಾಕಿನಲ್ಲಿ ನೂರೈವತ್ತೆಕರೆ ಜಮೀನು! ಯಾರು ತಾನೇ ಬಿಟ್ಟಾರು? ಎಲ್ಲ ಮೂಲೆಗಳಿಂದಲೂ ಹಣವಿದ್ದ ಹಳ್ಳಿಯ ಜನ ತಾವೂ ಒಂದು ಕೈ ನೋಡೋಣವೆಂದು ಅಲ್ಲಿಗೆ ಬಂದು ಸೇರಿದರು. ಪಟ್ಟಣದಿಂದ ಸಾಹುಕಾರರನೇಕ ಮಂದಿ ಮೂರೂವರಡಿ ರಸ್ತೆಯಲ್ಲೇ ಹೇಗೋ ತಮ್ಮ ಕಾರನ್ನ ನುಸುಳಿಸಿಕೊಂಡು ಬಂದು ನೆರೆದರು. ಕೇವಲ ಕುತೂಹಲದಿಂದ ನೋಡಬೇಕೆಂದು ಬಂದಿದ್ದವರಂತೂ ಸಾವಿರಾರು ಜನ. ಎಲ್ಲ ಆ ಜಮೀನಿನ ತುಂಬ ದಿಕ್ಕಾಪಾಲಾಗಿ ತುಂಬಿಕೊಂಡಿದ್ದಾರೆ. ಮಧ್ಯೆ ಒಂದು ವೇದಿಕೆಯ ಮೇಲೆ ಅಮಲ್ದಾರರು, ರೆವಿನ್ಯೂ ಆಫೀಸರು, ಸಂಸ್ಥೆಯ ಅಧಿಕಾರಿಗಳು ಕುರ್ಚಿಗಳಲ್ಲಿ ಕೂತಿದ್ದಾರೆ. ಪೊಲೀಸಿನವರು ಕೈಲಿ ಲಾಠಿ ಹಿಡಿದು ಜನ ಗಲಭೆ ಎಬ್ಬಿಸದಂತೆ ನೋಡಿಕೋತಿದಾರೆ. ಆಗ ಬರಬಹುದಾದ ಜನವೆಲ್ಲ ಬಂದಿರಬಹುದೆಂದು ತಿಳಿದ ಮೇಲೆ ಅಮಲ್ದಾರರು ಗಡಿಯಾರ ನೋಡಿಕೊಂಡು ಪಟೇಲನಿಗೆ ಅಪ್ಪಣೆ ಕೊಟ್ಟರು. ಪಟೇಲ ವೇದಿಕೆಯ ತುದಿಯಲ್ಲಿ ನಿಂತು ಜನಗಳ ಗಮನ ಸೆಳೆದು ಗಟ್ಟಿಯಾಗಿ, `ಈ ನೂರೈವತ್ತೆಕರೆ ಜಮೀನಿಗೆ ಸರ್ಕಾರಿ ಸವಾಲ್ ಐನೂರು ರೂಪಾಯಿ’ ಎಂದು ಹರಾಜು ಕೂಗುವುದಕ್ಕೆ ಶುರು ಮಾಡಿದ. ಜನಗಳ ಮಧ್ಯದಿಂದ ಒಬ್ಬ ಆರುನೂರಕ್ಕೆ ಕೇಳಿದ. ಇನ್ನೊಬ್ಬ ಏಳುನೂರು, ಇನ್ನೊಬ್ಬ ಎಂಟುನೂರು. ಮತ್ತೊಬ್ಬ ಸಾವಿರ. ಹೀಗೇ ಒಬ್ಬರೊಬ್ಬರಿಗೆ ಪೈಪೋಟಿ ಹತ್ತಿ ಮೊದಲು ಹದಿನೈದು ಸಾವಿರಕ್ಕೇರಿತು. ಆಮೇಲೆ ಅನೇಕರಿಗೆ ಸುಸ್ತಾಗಿ ಸುಮ್ಮನೆ ಬೇರೆಯವರ ಧಾರಣೆಯನ್ನೇ ಕೇಳ್ತಾ ನಿಂತರು. ಇಬ್ಬರಿಗೆ ಮಾತ್ರ ಒಳ್ಳೇ ಜೊತೆ ಬಿತ್ತು. ಇಬ್ಬರೂ ಲಕ್ಷಾಧೀಶ್ವರರೇ. ಒಬ್ಬ ಬಟ್ಟೆ ಕಾರ್ಖಾನೆ ಮಾಲಿಕ, ಇನ್ನೊಬ್ಬ ದಳ್ಳಾಳಿ ವ್ಯಾಪಾರದವನು. ಅವರಿಬ್ಬರೂ ಸಾವಿರ ಸಾವಿರವಾಗಿ ಧಾರಣೆ ಏರಿಸುತ್ತಿದ್ದುದನ್ನು ನೋಡಿದರೆ ಎಷ್ಟೇ ಹಣ ಖರ್ಚಾದರೂ ಒಬ್ಬರು ಇನ್ನೊಬ್ಬರಿಗೆ ಆ ಜಮೀನನ್ನು ಬಿಟ್ಟುಕೊಡುವಂತೆ ತೋರಲಿಲ್ಲ. ಹಾಗೂಹೀಗೂ ಧಾರಣೆ ಇಪ್ಪತೈದು ಸಾವಿರಕ್ಕೇರಿತು. ಅಲ್ಲಿಂದಾಚೆಗೆ ದಳ್ಳಾಳಿ ವ್ಯಾಪಾರದವನು ಯಾಕೋ ಸಾವಿರದ ಮಾತು ಬಿಟ್ಟು ನೂರಕ್ಕಿಳಿದ. ಕಾರ್ಖಾನೆ ಮಾಲಿಕ ಸ್ವಲ್ಪವೂ ಜಗ್ಗಲಿಲ್ಲ. ಇನ್ನೊಂದು ಸಾವಿರವನ್ನು ಸೇರಿಸಿಯೇ ಬಿಟ್ಟ! ದಳ್ಳಾಳಿ ಮತ್ತೆ ಉಸಿರೆತ್ತಲಿಲ್ಲ. ನೆರೆದಿದ್ದ ಜನವೆಲ್ಲ `ಹೊ’ ಎಂದು ಕೂಗಿ ಚಪ್ಪಾಳೆ ಹೊಡೆದರು. ವೇದಿಕೆಯ ಮೇಲಿದ್ದವರೆಲ್ಲ ಉಲ್ಲಾಸದಿಂದ ಹಿಗ್ಗಿ ಹೋದರು. ಪಟೇಲನೂ ಉತ್ಸಾಹದಿಂದ, `ಇಪ್ಪತ್ತಾರು ಸಾವಿರ ಒಂದು ಸಾರಿ… ಇಪ್ಪತ್ತಾರು ಸಾವಿರ ಎರಡು ಸಾರಿ…’ ಅಂದ. ಇನ್ನೂ `ಮೂರು ಸಾರಿ’ ಅಂದಿರಲಿಲ್ಲ. ಅಷ್ಟರಲ್ಲೇ ಎಲ್ಲಿಂದಲೋ ಬಂತು ನೋಡಿ ಒಂದು ಕಾರು. ವೇಗವಾಗಿ ಅರ್ಭಟ ಮಾಡಿಕೊಂಡು, ಎಲ್ಲರೂ ಕುತೂಹಲದಿಂದ ಆ ಕಡೆ ತಿರುಗಿದರು. ಕತ್ತಿನಿಂದ ಹಿಡಿದು ಕಾಲ ತುದಿಯವರೆಗೆ ಬಿಳಿ ನಿಲುವಂಗಿ ಹಾಕಿದ್ದ ಒಬ್ಬ ಎತ್ತರವಾದ ವ್ಯಕ್ತಿ ಆ ಕಾರಿನಿಂದ ಹೊರಕ್ಕೆ ಧುಮುಕಿ, ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಕಂಡಿತು. ಆತುರಾತುರವಾಗಿ ಅವನು ಬಂದದ್ದು ನೋಡಿ ಜಮೀನಿಗೆ ಇನ್ನೂ ಬೆಲೆ ಏರಬಹುದೆಂದು ನಿರೀಕ್ಷಿಸಿ ಜನರು ಅವನನ್ನೇ ನೋಡುತ್ತಿದ್ದರು. ಅಮಲ್ದಾರರಿಗೂ ಅದು ಸ್ವಲ್ಪ ತಮಾಷೆಯಾಗಿ ಕಂಡಿತು. ಪಟೇಲನಿಗೆ ನಿಧಾನಿಸುವಂತೆ ಸಂಜ್ಞೆ ಮಾಡಿದರು. ಅಷ್ಟು ಹೊತ್ತ್ತಿಗೆ ಆ ವ್ಯಕ್ತಿ ಜನಗಳನ್ನು ಆಚೆ ಈಚೆ ತಳ್ಳಿ ದಾರಿಮಾಡಿಕೊಂಡು ವೇದಿಕೆ ಹತ್ತಿ ಅಮಲ್ದಾರರ ಹತ್ತಿರ ಗಾಬರಿ ಗಾಬರಿಯಾಗಿ `ದಯವಿಟ್ಟು ಹರಾಜು ನಿಲ್ಲಿಸಬೇಕು ಸ್ವಾಮಿ’ ಅಂದ. ಅಮಲ್ದಾರರು ಗಾಬರಿಯಾಗಿ `ಯಾಕೆ?’ ಅಂದರು.
ಅದಕ್ಕೆ ಪಾದ್ರಿ, `ಈ ಜಮೀನು ನಮ್ಮದು ಸ್ವಾಮಿ, ತಾವು ಹರಾಜಿನ ವಿಷಯ ನಮ್ಮ ಗಮನಕ್ಕೆ ತರದೆ ಹೀಗೆ ಮಾಡುತ್ತಿದ್ದೀರಿ’ ಅಂದ.
ಅಮಲ್ದಾರರು ಆಶ್ಚರ್ಯದಿಂದ, `ಏನ್ರಿ ಹಾಗಂದ್ರೆ? ಯಾರ್ರಿ ನೀವು? ಏನ್ರಿ ನಿಮ್ಮ ಹೆಸರು?’ ಅಂದರು.
`ನನ್ನ ಹೆಸರು ಫಾದರ್ ರಿಚರ್ಡ್’ ಅಂದ.
`ಮತ್ತೆ ನಿಮಗೆ ಹೇಗ್ರಿ ಸೇರುತ್ತೆ ಈ ಜಮೀನು?’ ಎಂದು ಅಮಲ್ದಾರರು ಹತ್ತಿರವೇ ನಿಂತಿದ್ದ ಶಾನುಭೋಗರನ್ನು ನೋಡಿ, `ಏನ್ರಿ ಶಾನುಭೋಗರೆ, ಸರಿಯಾಗಿ ನೋಡಿದ್ದೀರೇನ್ರಿ ಈ ಜಮೀನು ಬಸಪ್ಪಂದು ಅಂತ?’ ಅಂತ ಕೇಳಿದರು.
ಶಾನುಭೋಗರು, `ಹೌದು ಮಹಾಸ್ವಾಮಿ, ಅದಕ್ಕೆ ಬೇಕಾದಷ್ಟು ದಾಖಲೆ ಇದೆ’ ಅಂದರು.
ಅದಕ್ಕೆ ಪಾದ್ರಿ `ಇಲ್ಲ ಸ್ವಾಮಿ ಈ ಜಮೀನು ನಮ್ಮ ಯೇಸುಸ್ವಾಮಿಗೆ ಸೇರಿದ್ದು’ ಅಂದ.
`ಅದಕ್ಕೆ ದಾಖಲೆ ಎಲ್ರಿ ?’ ಎಂತ ಅಮಲ್ದಾರರು ಕೇಳಿದರು.
ಪಾದ್ರಿ ಹಿಂದೆ ಮುಂದೆ ನೋಡಿ, ಅಲ್ಲೇ ಗುಡ್ಡದ ಮೇಲೆ ಮುರಿದು ಬಿದ್ದಿದ್ದ ಮನೆಯನ್ನು ತೋರಿಸುತ್ತಾ `ನೋಡಿ ಸ್ವಾಮಿ, ಅಲ್ಲಿದ್ದ ನಮ್ಮ ಯೇಸುವಿನ ಮಂದಿರಕ್ಕೆ ಬೆಂಕಿ ಬಿದ್ದಾಗಲೇ ಈ ಜಮೀನಿಗೆ ಸಂಬಂಧಿಸಿದ ಕಾಗದ ಪತ್ರಗಳೆಲ್ಲಾ ಸುಟ್ಟು ಬೂದಿಯಾಯಿತು. ಆಮೇಲೆ ಉಳಿದ ಚರಸ್ಥಿರ ಆಸ್ತಿಯನ್ನೆಲ್ಲ ಬೆಂಗಳೂರಿನ ಚರ್ಚಿಗೆ ಸೇರಿಸಿಕೊಂಡು ನಾವೇ ನೋಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಬೇರೆ ಯಾವ ದಾಖಲೆಯೂ ಇಲ್ಲ. ಸರ್ಕಾರದಲ್ಲೇ ಇರುವ ಹಳೇ ರಿಕಾರ್ಡುಗಳನ್ನು ತೆಗೆಸಿ ನೋಡಬಹುದು. ಹರಾಜಿನ ಸುದ್ದಿಯನ್ನು ಪೇಪರಿನಲ್ಲಿ ನೋಡಿದ ಕೂಡಲೆ ನಮ್ಮ ಗುರುಗಳು ನನ್ನನ್ನು ಕಳಿಸಿಕೊಟ್ಟಿದ್ದಾರೆ’ ಅಂದ.
ಅಷ್ಟು ಹೊತ್ತಿಗೆ ಶಾನುಭೋಗರು ತಾವು ತಂದಿದ್ದ ಕಾಗದ ಪತ್ರಗಳನ್ನೆಲ್ಲಾ ಅಮಲ್ದಾರರ ಮುಂದಿಟ್ಟರು. ಅಮಲ್ದಾರರು ಓದಿ ನೋಡಿದರು. ಬಗೆಹರಿಯಲಿಲ್ಲ. ಪಾದ್ರಿಯನ್ನು ಶುದ್ದ ಮೋಸಗಾರನಿರಬೇಕೆಂದು ಬೈದರು. ಆದರೆ ಪಾದ್ರಿ ಮಾತ್ರ ನಮ್ರನಾಗಿ `ನಾವು ಯೇಸುವಿನ ಭಕ್ತರು. ಸುಳ್ಳು ಹೇಳುವವರಲ್ಲ. ತಾವು ಸರಿಯಾಗಿ ಪರಿಶೀಲಿಸಿ ನೋಡಬೇಕು. ಇಲ್ಲದಿದ್ದರೆ ನಮ್ಮ ದೇವರಿಗೆ ಅನ್ಯಾಯ ಮಾಡಿದಂತಾಗುತ್ತೆ’ ಅಂದ. ಅವನ ಮಾತನ್ನು ಸುಲಭವಾಗಿ ತೆಗೆದು ಹಾಕುವಂತಿರಲಿಲ್ಲ. ಅಮಲ್ದಾರರಿಗೆ ಮಾತ್ರ ಏನು ಮಾಡುವುದಕ್ಕೂ ತೋಚಲಿಲ್ಲ. ಸ್ವಲ್ಪ ಹೊತ್ತು ಆಲೋಚನೆ ಮಾಡಿದರು. ಆಮೇಲೆ ಶಾನುಭೋಗರ ಕಡೆ ತಿರುಗಿ, `ನೀವು ಈಗ ತೋರಿಸಿದ ದಾಖಲೆ ಎಷ್ಟು ವರ್ಷದ್ರಿ?’ ಅಂತ ಕೇಳಿದರು. ಶಾನುಭೋಗರು `ಹೋದ ವರ್ಷದ್ದು ಮತ್ತು ಈ ವರ್ಷದ್ದು ಮಹಾಸ್ವಾಮಿ’ ಅಂದರು.
`ಬಾಕೀದು?’ ಎಂದು ಕೇಳಿದರು.
`ಬಾಕೀದೆಲ್ಲ ತಮ್ಮ ಆಫೀಸಿನಲ್ಲೇ ಇದೆಯಲ್ಲ ಮಹಾಸ್ವಾಮಿ’ ಅಂದರು.
`ಸರಿ’ ಅನ್ನುತ್ತಾ ಅಮಲ್ದಾರರು ಮೇಲೆದ್ದು, ತಮಾಷೆ ನೋಡುತ್ತಾ ಏನಿತ್ಯರ್ಥ ಮಾಡುವರೋ ಎಂದು ಎದುರು ನೋಡುತ್ತಿದ್ದ ಜನಗಳನ್ನು ನೋಡಿ, `ಈ ದಿನ ಹರಾಜನ್ನು ಇಲ್ಲಿಗೇ ನಿಲ್ಲಿಸಿದೆ. ಜಮೀನಿನ ಮಾಲೀಕರು ಯಾರೆಂದು ಖಚಿತವಾಗಿ ತಿಳಿದ ಮೇಲೆ, ಬೇರೆ ಯಾವ ಅಡಚಣೆಯೂ ಇಲ್ಲದಿದ್ದಲ್ಲಿ ಈ ದಿನ ಎಲ್ಲರಿಗಿಂತ ಹೆಚ್ಚು ಬೆಲೆಗೆ ಕೇಳಿದವರಿಗೆ ಈ ಜಮೀನನ್ನು ಕೊಡಲಾಗುತ್ತೆ. ಅವರು ಹಣದ ಸಮೇತ ನಾಳೆ ಮಧ್ಯಾಹ್ನ ಆಫೀಸಿನಲ್ಲಿ ಬಂದು ನನ್ನನ್ನು ಕಾಣಬಹುದು’ ಅಂದರು. ಜನರ ಗುಂಪೆಲ್ಲ ಕೋಲಾಹಲ ಮಾಡಿಕೊಂಡು ಹೊರಟು ಹೋಯಿತು. ಎಲ್ಲಾ ಸಂತೋಷದಿಂದ ಹೋದರೂ ಮಿಲ್ ಮಾಲಿಕನೊಬ್ಬ ಸ್ವಲ್ಪ ಅಸಮಾಧಾನದಿಂದಲೇ ಹೋದ.
ಅದುವರೆಗೆ ಕಂಬ ಒರಗಿಕೊಂಡು, ಕಣ್ಣು ಮಿಟುಕಿಸದೆ ಶಂಕರಯ್ಯನವರ ಮುಖವನ್ನೇ ನೋಡುತ್ತಾ, ಬಾಯಿ ಬಿಟ್ಟುಕೊಂಡು ಕತೆ ಕೇಳುತ್ತಿದ್ದ ಶಾನುಭೋಗರು, ಬೆನ್ನುಮೂಳೆ ನೆಟ್ಟಗೆ ಮಾಡಿಕೊಂಡು ಏನೋ ಸಂದೇಹ ನಿವಾರಣೆ ಮಾಡಿಕೊಳ್ಳುವವರಂತೆ `ಅದ್ಸರಿ, ಆ ಫಾದರ್ ರಿಚರ್ಡ್ ಚರ್ಚು ಸುಟ್ಟು ಹೋಯಿತು ಅಂದ್ನಲ್ಲ, ಅದೇನು ಕಾರಣವೊ?’ ಅಂತ ಕೇಳಿದರು.
ಶಂಕರಯ್ಯನವರು ಮುಂದುವರಿಸಿದರು. `ಅದೇ! ಅದೊಂದು ದೊಡ್ಡಕತೆ. ಇಂಗ್ಲಿಷರು ನಮ್ಮ ದೇಶಕ್ಕೆ ಬಂದಾಗ ಅವರ ಜೊತೆಯಲ್ಲೆ ಅವರ ಮತ ಹರಡೋದಿಕ್ಕೆ ಕೆಲವು ಜನ ಪಾದ್ರಿಗಳು ಬಂದ್ರಲ್ಲಾ, ಅವರು ಎಲ್ಲೆಲ್ಲೂ ಚರ್ಚುಗಳನ್ನು ಸ್ಥಾಪಿಸಿ ಸಿಕ್ಕಿಸಿಕ್ಕಿದವರನ್ನೆಲ್ಲ ತಮ್ಮ ಮತಗಳಿಗೆ ಸೇರಿಸಿಕೊಳ್ಳುತ್ತಿದ್ದ ವಿಷಯ ನಿಮಗೆ ಗೊತ್ತಿದೆಯಲ್ಲ! ಅವರು ನಮ್ಮ ಹಳ್ಳಿಗೆ ಬಂದು ಆ ಗುಡ್ಡದ ಮೇಲೆ ಒಂದು ಚರ್ಚು ಕಟ್ಟಿಸಿದರು. ಆಗೇನು, ಇಂಗ್ಲಿಷರದೇ ರಾಜ್ಯ, ಅವರಾಡಿದ್ದೇ ಆಟ. ಅವರನ್ನು ತಡೆಯೊದಕ್ಕೆ ಯಾರಿದ್ರು? ಅಂತು ಚರ್ಚು ಕಟ್ಟಿಸಿದ ಮೇಲೆ ಅಲ್ಲಿ ಮೂರು ಜನ ಪಾದ್ರಿಗಳು, ಅವರಿಗೊಬ್ಬ ಯಜಮಾನ ನಾಕು ಜನವೂ ವಾಸ ಮಾಡಿಕೊಂಡಿದ್ದರು. ತಿನ್ನೋದಕ್ಕೂ ಕುಡಿಯೊದಕ್ಕೂ ಅವರಿಗೆ ಯಥೇಚ್ಛವಾಗಿತ್ತು. ಅವರು ಪ್ರತಿನಿತ್ಯ ಸಾಯಂಕಾಲದ ಹೊತ್ತು ಸಂತೆ ಮಾಳದಲ್ಲಿ ನಿಂತು ಯೇಸು ಕ್ರಿಸ್ತನ ಮೇಲೆ ಕಟ್ಟಿದ ಹಾಡುಗಳನ್ನೆಲ್ಲಾ ಹಾಡುತ್ತಿದ್ದರು. ಕೇಳುವುದಕ್ಕೆ ಸುತ್ತ ಜನ ಬಂದು ಸೇರಿದರೆಂದರೆ ಭಾಷಣಕ್ಕಾರಂಭಿಸುತ್ತಿದ್ದರು. ಮೊದಮೊದಲು ಜನಗಳಿಗೆ ಬಲು ತಮಾಷೆಯಾಗಿ ಕಂಡಿತು. ಎಲ್ಲರೂ ಹೋಗಿ ಮುತ್ತಿಕೊಳ್ಳುತ್ತಿದ್ದರು. ಒಂದು ದಿನ ಆ ಪಾದ್ರಿಗಳು ತಮ್ಮ ಯೇಸು ಕ್ರಿಸ್ತನ ಮಹಿಮೆಯನ್ನು ಹೊಗಳುತ್ತಾ ಬೈಬಲಿನಲ್ಲಿ ಬರುವ ಸ್ವಾರಸ್ಯವಾದ ಕತೆಗಳನ್ನು ಹೇಳುತ್ತಾ ತಮ್ಮ ಧರ್ಮವೇ ಶ್ರೇಷ್ಠವಾದುದು ಎಂದೆಲ್ಲ ವಿವರಿಸಿ, ಆಮೇಲೆ ಜನಗಳಿಗೆ, `ನೋಡಿ, ನೀವು ಮೋಸಹೋಗುತ್ತಿದೀರಿ. ಕಲ್ಲು ಮಣ್ಣುಗಳನ್ನು ದೇವರೆಂದು ಪೂಜಿಸುತ್ತೀರಿ, ಗಿಡಗಳನ್ನು ಪ್ರಾಣಿಗಳನ್ನು ದೇವರೆಂದು ಪೂಜಿಸುತ್ತೀರಿ. ನಿಮಗೆ ತಿಳುವಳಿಕೆಯಿಲ್ಲ. ಪಾಪ, ತಿಳಿಯದೆ ನೀವು ತಪ್ಪು ದಾರಿಯಲ್ಲಿ ಹೋಗುತ್ತಿದ್ದೀರಿ. ಭಗವಂತನ ಪುತ್ರನಾದ ನಮ್ಮ ಯೇಸುವನ್ನು ನೋಡಿ! ಅವನು ಏತಕ್ಕೆ ಹುಟ್ಟಿದ? ನಿಮ್ಮಂಥವರ ಉದ್ಧಾರಕ್ಕಾಗಿಯೇ! ಅಷ್ಟೆಲ್ಲ ಏತ್ತಕ್ಕೆ ಕಷ್ಟಪಟ್ಟ? ನಿಮ್ಮಂಥವರ ಉದ್ದಾರಕ್ಕಾಗಿಯೇ! ತನ್ನನ್ನು ಶಿಲುಬೆಗೆ ಏರಿಸಿದರು ಯಾರಿಗಾಗಿ ಆ ಹಿಂಸೆಯನ್ನೆಲ್ಲ ಸಹಿಸಿಕೊಂಡ. ನಿಮ್ಮಂಥವರಿಗಾಗಿಯೇ! ಆದ್ದರಿಂದ ಅವನು ತೋರಿಸಿದ ಮಾರ್ಗದಲ್ಲಿ ನಡೆಯಿರಿ, ನಿಮಗೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ನೀವು ನಾಶವಾಗುತ್ತೀರಿ. ನರಕದಲ್ಲಿ ಬೀಳುತ್ತೀರಿ’ ಅಂದರು. ಓ ಎಂದರೆ ಠೋ ಗೊತ್ತಿಲ್ಲದ ನಮ್ಮ ಜನಗಳು ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಸುಮ್ಮನಿದ್ದರು.
`ಮಾರನೇ ದಿನ ಬೆಳಿಗ್ಗೆ ಮಾರಿಗುಡಿ ಚಾವಡಿ ಮುಂದೆ ಹಳ್ಳಿ ಜನಗಳು ಕೆಲವರು ಸೇರಿ ಬಿಸಿಲು ಕಾಯ್ತಾ, ಹಿಂದಿನ ದಿನದ ಮಾತುಗಳನ್ನೇ ಆಡ್ತಾ ನಿಂತಿದ್ದರು. ಅಷ್ಟು ಹೊತ್ತಿಗೆ ಮಠದ ಅಯ್ಗಳು ಆ ಕಡೆ ಬಂದರು. ಅವರಿಗೆ ತಾವು ಕೇಳಿದ ಭಾಷಣವನ್ನು ಚಾಚೂತಪ್ಪದೆ ವರದಿ ಒಪ್ಪಿಸಿದರು. ಪಾದ್ರಿಗಳಾಡಿದ ಮಾತೆಲ್ಲ ಕೇಳಿ ಅಯ್ಗಳಿಗೆ ಮೈ ಉರಿದು ಹೋಯಿತು! `ಆಹಾ, ಈ ಮ್ಲೇಚ್ಛರು ಇಷ್ಟೆಲ್ಲ ಮಾಡಿದರೋ? ನಮ್ಮ ದೇವರುಗಳನ್ನು ಬೈಯ್ಯುವುದಕ್ಕೆ ಬಂದರೋ ಚಂಡಾಲರು? ನೋಡಿ ಲೋಕಕಲ್ಯಾಣಕ್ಕಾಗಿ ಬಂಡೆಯಿಂದ ತಾನಾಗಿಯೇ ಉದ್ಭವಿಸುವ ಈ ನಮ್ಮ ಗ್ರಾಮ ದೇವತೆಯನ್ನೇ ಅವರು ಕಲ್ಲು ಎಂದು ಕರೀತಿರೋದು. ಸಾಕ್ಷಾತ್ ಸುಬ್ರಹ್ಮಣ್ಯೇಶ್ವರನ ವಾಸಸ್ಥಾನವಾದ ಹುತ್ತವನ್ನು ಪೂಜೆ ಮಾಡಿದರೆ ಮಣ್ಣನ್ನು ಪೂಜಿಸ್ತೀರಿ ಅಂತಿದಾರೆ. ನಮಗೆ ಅಮೃತ ಕೊಡೊ ಗೋಮಾತೆಯನ್ನ ಪೂಜಿಸಿದರೆ ಪ್ರಾಣಿಗಳನ್ನು ಪೂಜಿಸ್ತೀರಿ ಅಂತಾರೆ. ಮೂಲತೋ ಬ್ರಹ್ಮರೂಪಾಯ! ಮಧ್ಯತೋ ವಿಷ್ಣು ರೂಪಿಣೇ! ಅಗ್ರತಃ ಶಿವರೂಪಾಯ! ಅಂತ ಬ್ರಹ್ಮ ವಿಷ್ಣು ಮಹೇಶ್ವರರೂ ದೇವತೆಗಳೂ ನೆಲೆಸಿರುವ ವೃಕ್ಷರಾಜನಾದ ಅರಳಿ ಮರವನ್ನು ಪೂಜೆ ಮಾಡಿದರೆ ಗಿಡಗಳನ್ನು ಪೂಜೆ ಮಾಡ್ತೀರಿ ಅಂತಾರೆ. ಪಾಷಂಡಿಗಳು ಶುದ್ಧ ಅವಿವೇಕಿಗಳು! ಅವರ ಮಾತುಗಳನ್ನು ಕೇಳಿಗೀಳೀರಿ. ಅವರ ಮುಖವನ್ನೂ ಕೂಡ ನೋಡಬಾರದು ನಾವು. ಜಾತಿಯಲ್ಲಿ ನಮ್ಮ ಹೊಲೆಯರಿಗಿಂತ ಕಡೆ. ಅವರನ್ನು ನೋಡಿದರೆ ಸ್ನಾನ ಮಾಡಬೇಕು. ಇನ್ನು ಅವರ ಮಾತುಗಳನ್ನೇನಾದರೂ ಕೇಳಿದರೆ ನೀವು ಅನ್ಯಾಯವಾಗಿ ಹಾಳಾಗ್ತೀರಿ. ಎಚ್ಚರಿಕೆ ಕೊಟ್ಟಿದ್ದೇನೆ’ ಅಂದರು. ನಮ್ಮ ಹಳ್ಳಿ ಜನಗಳ ವಿಷಯ ನಿಮಗೆ ತಿಳಿದೇ ಇದೆಯಲ್ಲ. ಎತ್ತು ಈಯಿತು ಅಂದರೆ ಕೊಟ್ಟಿಗೇಲಿ ಕಟ್ಟು ಅನ್ನುವ ಜನ! ಅಯ್ಗಳು ಅಷ್ಟು ಹೇಳಿದ್ದೇ ಸಾಕು. ತುರುಕ ಮೆಣಸಿನಕಾಯಿ ಕಡಿದ ಹಾಗಾಯಿತು ಅವರಿಗೆ! `ಈ ಬಡ್ಡೀ ಮಕ್ಕಳ್ನ ಸುಮ್ಕೆ ಬಿಡ್ಬಾರ್ದು’ ಅಂದುಕೊಂಡರು.
“ಅದಾದ ಒಂದೆರಡು ದಿನಕ್ಕೇ ಪಾದ್ರಿಗಳು ಹಳ್ಳಿಯ ಕೆಲವು ಮಾದಿಗರನ್ನೂ ಹೊಲೆಯರನ್ನೂ ಅನ್ನ ಬಟ್ಟೆಯ ಆಸೆ ತೋರಿಸಿ, ಚರ್ಚಿಗೆಳೆದುಕೊಂಡು ಹೋಗಿ ಏಸುವಿನ ಶಿಲುಬೆಯಡಿ ನಿಲ್ಲಿಸಿ, ಅವರ ಕೈಲಿ ಬೈಬಲ್ ಕೊಟ್ಟು, ತಮ್ಮ ಒಡೆಯನಿಂದ ಆಶೀರ್ವಾದ ಮಾಡಿಸಿ ಅವರಿಗೆ ಸ್ವರ್ಗಕ್ಕೆ ನೇರವಾಗಿ ಟಿಕೆಟ್ ಕೊಟ್ಟರು! ಈ ವಿಷಯ ತಿಳಿದ ಮೇಲಂತೂ ಹಳ್ಳಿಯ ಜನಗಳಿಗೆ ರೋಷ ಮಿತಿಮೀರಿತು. ಎಲ್ಲರೂ ಒಂದೊಂದು ದೊಣ್ಣೆ ತೆಗೆದುಕೊಂಡು ಚರ್ಚಿನ ಕಡೆ ಹೊರಟು ಬಿಟ್ಟರು. ಆದರೆ ಅಯ್ಗಳು ದಾರಿಯಲ್ಲಿ ಸಿಕ್ಕಿ, `ಆ ಪಾದ್ರಿಗಳ ತಂಟೆಗೆ ಹೋಗಬೇಡಿ. ಅವರೆಲ್ಲ ಇಂಗ್ಲಿಷರ ಕಡೆಯವರು. ಅವರನ್ನೇನಾದರೂ ಮುಟ್ಟಿದರೆ ನಮ್ಮನ್ನು ಸುಮ್ಮನೆ ಬಿಟ್ಟಾರೆ? ಬೇಡ ಬನ್ನಿ’ ಎಂದು ಸಮಾಧಾನ ಮಾಡಿ ಹಿಂದಕ್ಕೆ ಕರೆತಂದರು. ಆದರೂ ಸಮಯ ಕಾದಿದ್ದು ಅವರಿಗೆ ತಕ್ಕ ಶಿಕ್ಷೆ ಮಾಡಬೇಕೆಂದು ಹಳ್ಳಿಯವರೆಲ್ಲ ನಿರ್ಧಾರ ಮಾಡಿಕೊಂಡರು.
“ಸ್ವಲ್ಪ ದಿನಗಳಲ್ಲೇ ಆ ವರ್ಷದ ಮಾರಮ್ಮನ ಜಾತ್ರೆ ಬಂತು. ಸುತ್ತಮುತ್ತ ಇದ್ದ ಹಳ್ಳಿಗಳಿಂದ ಸಾವಿರಾರು ಜನ ಬಂದು ಸೇರಿದ್ದರು. ಆಗ ಪಾದ್ರಿಗಳು ಮತ್ತಷ್ಟು ಜನ ತಮ್ಮ ಬಲೆಗೆ ಬೀಳ್ತಾರೇನೋ ಅಂತ ಬೈಬಲ್ಲು ಕಂಕುಳಲ್ಲಿಟ್ಟುಕೊಂಡು ಮಾರಿಗುಡಿ ಮುಂದೆ ಬಂದು ನಿಂತರು. ತಮ್ಮ ದೇವರ ಪೂಜೆ ಆಗುವಾಗ ಆ ಮ್ಲೇಚ್ಛರು ಎದುರಿಗೆ ಬಂದು ನಿಂತದ್ದು ಹಳ್ಳಿಯ ಜನಗಳಿಗೆ ಸರಿಯಾಗಿ ಕಾಣಲಿಲ್ಲ. ಆದರೂ ತಮ್ಮ ಗ್ರಾಮದೇವತೆಯ ಮಹಿಮೆಯನ್ನು ನೋಡಿ ಅವರು ನಾಚಿಕೊಳ್ಳಲಿ ಎಂದು ಸುಮ್ಮನಾದರು. ಆದರೆ ಯಾವಾಗ ಅವರು ತಮ್ಮ ಪುಸ್ತಕ ಬಿಚ್ಚಿ, `ಯೇಸು ಕ್ರಿಸ್ತನ ಭಜಿಸೋ . . . . . ‘ ಅಂತ ರಾಗ ತೆಗೆದು `ಕುರಿ ಕೋಣಗಳನ್ನು ಬಲಿತೆಗೆದುಕೊಳ್ಳುವ ನಿಮ್ಮ ದೇವರು ದೇವರಲ್ಲ. ಅದು ಸೈತಾನ, ಪಿಶಾಚಿ. ಅದನ್ನು ನಂಬಿ ನೀವು ಕೆಟ್ಟು ಹೋಗುತ್ತೀರಿ . . . . ‘ ಎಂದು ಬಾಯಿ ಬಿಟ್ಟರೋ ಇಲ್ವೋ ಜನಗಳ ರಕ್ತ ಕುದಿಯತೊಡಗಿತು. ಅವರು ತಾನೆ ಎಷ್ಟೋಂತ ಸಹಿಸ್ತಾರೆ ಅವರ ಅನಾಚಾರಾನ? ನಾಕು ಜನ ತುಂಡಾಡಿಗಳು ಹಿಂದಿನಿಂದ ದೊಣ್ಣೆ ಹಿಡಿದುಕೊಂಡು ಬಂದುಬಿಟ್ಟರು. ಚನ್ನಾಗಿ ಪಾದ್ರಿಗಳಿಗೆ! ಒಬ್ಬನಿಗೆ ತಲೇಗೆ ಪೆಟ್ಟು ಬಿದ್ದು ಅಲ್ಲೇ ಉರುಳಿಕೊಂಡ. ಇನ್ನಿಬ್ಬರು ಅರಚಿಕೊಂಡು ಓಡಿಹೋಗುವುದಕ್ಕೆ ನೋಡಿದರು, ಅಷ್ಟು ಜನಗಳಿರುವಾಗ ಎಲ್ಲಿಗೆ ಅವರು ತಪ್ಪಿಸಿಕೊಂಡು ಹೋಗೋದು? ಹೊಡೀರೋ ಬಡೀರೊ ಅಂತ ಎಲ್ಲ್ಲ ಮುತ್ತಿಕೊಂಡು ಆಳಿಗೊಂದು ಗುದ್ದು ಹಾಕಿದರು. ಮೂರು ಜನವೂ ಮಾರೆಮ್ಮನಿಗೆ ಬಲಿಯಾಗಿ ಬಿಟ್ಟರು! ಅಂತೂ ಗ್ರಾಮ ದೇವತೆಯನ್ನು ಬೈದುದಕ್ಕೆ ಅವರಿಗೆ ತಕ್ಕ ಶಿಕ್ಷೆಯಾಯಿತೆಂದು ಎಲ್ಲರಿಗೂ ಸಂತೋಷವಾಯಿತು. ಕೆಲವರಿಗೆ ಅಷ್ಟರಿಂದಲೇ ಸಮಾಧಾನವಾಗಲಿಲ್ಲ. ಆ ಮೂವರ ಹೆಣವನ್ನು ಮಾರಮ್ಮನ ಮುಂದಕ್ಕೆ ದರದರ ಎಳತಂದರು. ಗುಡಿಯ ಮುಂದೆ ಕೊಂಡ ಹಾಯುವುದಕ್ಕೆ ಸಿದ್ಧಮಾಡಿಟ್ಟಿದ್ದ ಬೆಂಕಿ ಧಗಧಗಾಂತ ಉರೀತಿತ್ತು. ಮಾರಮ್ಮನ ಪ್ರೀತ್ಯರ್ಥವಾಗಿ ಆ ಹೆಣಗಳನ್ನು ಒಂದೊಂದಾಗಿ ಬೆಂಕಿಗರ್ಪಿಸಿದರು. ಅಷ್ಟು ಹೊತ್ತಿಗೆ ಅದೇನೊ ಹೇಳ್ತಾರಲ್ಲ ಮೊದಲೇ ಕಪಿಗೆ ಹೆಂಡ ಕುಡಿಸಿ ಚೇಳು ಕಡಿಸಿದ ಹಾಗೆ ಅಂತ! ಹಾಗೆ ಇನ್ನೂ ಕೆಲವರು ಕೊಳ್ಳಿ ಹಿಡಕೊಂಡು ಹೋಗಿ ಚರ್ಚಿಗೆ ಬೆಂಕಿ ಇಟ್ಟುಬಿಟ್ಟರು! ಆ ಚರ್ಚು ಉರಿಯುವುದಕ್ಕೆ ಮೊದಲಾಯಿತು ನೋಡಿ, ಜ್ವಾಲೆ ಅಂತರಿಕ್ಷವನ್ನು ಮುಟ್ಟುತ್ತಿತ್ತು. ಜನ ಸಂತೋಷವಾಗಿ ಕುಣಿದಾಡ್ತಾ ಇದ್ದರು. ಚರ್ಚಿನಲ್ಲಿ ಪಾದ್ರಿಗಳ ಯಜಮಾನ ಒಬ್ಬನೇ ಇದ್ದ. ಹೊರಗಿನಿಂದ ಬಾಗಿಲು ಬೇರೆ ಹಾಕಿಕೊಂಡು ಬಿಟ್ಟಿದ್ದರು. ಚರ್ಚೆಲ್ಲ ಸುಟ್ಟು ಬೂದಿಯಾಗುವಾಗ ಪಾಪ, ಯೇಸುಕ್ರಿಸ್ತನ ಜೊತೆಯಲ್ಲಿ ಅವನೂ ಬೆಂದು ಹೋದ. ಗ್ರಾಮದೇವತೆಯನ್ನು ನಿಂದಿಸಿ ಜನ ಬದುಕುವುದಕ್ಕುಂಟೆ? ನೋಡಿ, ಹೇಗೆ ಸೇಡು ತೀರಿಸಿಕೊಂಡಳು ತನ್ನನ್ನು ಹಳಿದದ್ದಕ್ಕೆ!
“ಆಮೇಲೆ ಪೊಲೀಸಿನವರು ಅವರು ಇವರು ಎಲ್ಲಾ ಬಂದರು ನೋಡಿದರು. ಅವರೇನು ಮಾಡ್ತಾರೆ? ಯಾರನ್ನಾಂತ ಹಿಡಿತಾರೆ? ಹಾಗೂ ಸಿಕ್ಕಿದವರು ಒಬ್ಬಿಬ್ಬರನ್ನು ಹಿಡಕೊಂಡು ಹೋಗಿ ಲಾಕಪ್ಪಿಗೆ ಹಾಕಿದರು. ಮೊನ್ನೆಮೊನ್ನೆವರೆಗೂ ಕೋರ್ಟಿನಲ್ಲಿ ಅದರ ವ್ಯವಹಾರ ನಡೀತಲೇ ಇತ್ತು. ಆಮೇಲೆ ಅವರನ್ನೂ ಬಿಟ್ಟುಬಿಟ್ಟರು ಅನ್ನಿ !. . . . ನೋಡಿದ್ರಾ. ಇದೇ ಚರ್ಚು ಸುಟ್ಟು ಹೋದ ಕತೆ. ಆ ಸಂದರ್ಭದಲ್ಲೇ ಇರಬೇಕು ಚರ್ಚಿನಲ್ಲಿದ್ದ ಕಾಗದ ಪತ್ರಗಳೆಲ್ಲ ಸುಟ್ಟು ಹೋದದ್ದು’’.
ಕತೆ ನಿಲ್ಲಿಸಿ, ಶಂಕರಯ್ಯನವರು ಸೊಂಟದಿಂದ ಡಬ್ಬಿ ತೆಗೆದು, ಅದರ ತಲೆಯ ಮೇಲೆ ಬೆರಳಿನಿಂದ ಒಂದೇಟು ಹಾಕಿ, ಮುಚ್ಚಳ ತೆಗೆದು, ಶಾನುಭೋಗರಿಗೆ ಒಂದು ಚಿಟಿಕೆ ಕೊಟ್ಟು, ತಾವೂ ಒಂದು ಚಿಟಿಕೆ ನಶ್ಯ ಮೂಗಿಗೇರಿಸಿ, ಆಮೇಲೆ ಒಂದಾನೊಂದು ಕಾಲದಲ್ಲಿ ಬಿಳಿದೆನಿಸಿದ್ದು ನೆಶ್ಯದ ಸಂಪರ್ಕದಿಂದಲೇ ಒಂದು ಗ್ಯಾರಂಟಿ ಬಣ್ಣ ಬಂದಿದ್ದ ಕರವಸ್ತ್ರದಿಂದ ಮೂಗೊರೆಸಿಕೊಳ್ಳುತ್ತಾ, ಒಂದು ಸಾರಿ ಕೆಮ್ಮಿ ಗಂಟಲು ಸರಿಮಾಡಿಕೊಂಡು, ಮತ್ತೆ ಕತೆಯನ್ನು ಹರಿಯಬಿಟ್ಟರು.
“ಏನೋ ಹೇಳೋಕ್ಕೆ ಹೋಗಿ ಏನೋ ಆಯ್ತು! ಅವತ್ತು ಹರಾಜು ನಿಂತುಹೋಯ್ತು ಅಂದ್ನೆಲ್ಲ ಅದರ ಮಾರನೇ ದಿನ ಫಾದರ್ ರಿಚರ್ಡ್ ಹೊತ್ತಿಗೆ ಸರಿಯಾಗಿ ತಾಲೋಕ್ ಆಫೀಸಿಗೆ ಬಂದ. ಅಮಲ್ದಾರರು ಒಂದು ಕಡೆ ಕೂತಿದಾರೆ, ಫಾದರ್ ರಿಚರ್ಡ್ ಒಂದು ಕಡೆ ಕೂತಿದಾನೆ. ಅಮಲ್ದಾರನ ಎರಡು ಪಕ್ಕಗಳಲ್ಲೂ ರೆವಿನ್ಯೂ ಆಫೀಸರು `ಹೆಚ್ಚು ಆಹಾರ ಬೆಳೆಯಿರಿ’ ಸಂಸ್ಥೆಯ ಅಧಿಕಾರಿಗಳು ಕೂತಿದಾರೆ. ಪೊಲೀಸ್ ಇನ್ಸ್‍ಪೆಕ್ಟರು, ಆಫೀಸಿನ ಗುಮಾಸ್ತರುಗಳು ಅಮಲ್ದಾರರ ಕುರ್ಚಿ ಹಿಂದೆಯೇ ನಿಂತಿದಾರೆ. ಹೊರಗಡೆ ಬಾಗಿಲಲ್ಲಿ ಮಿಲ್‍ಮಾಲಿಕ, ಹಳ್ಳೀಜನಗಳು, ಶಾನುಭೋಗ, ಪಟೇಲ ಎಲ್ಲರೂ ಏನಾಗುತ್ತೋ ನೋಡಬೇಕೆಂದು ಕುತೂಹಲದಿಂದ ಕಾದಿದಾರೆ. ರಿಕಾರ್ಡ್ ಕೀಪರ್ ವೆಂಕಟಸುಬ್ಬಯ್ಯ – ಅವನೇ, ನನ್ನ ಸೋದರಳಿಯ. ಅಲ್ಲಿಗೆ ಬಂದು ನಾಕು ವರ್ಷವಾಗಿತ್ತು. ಈಗ ಹೊಸ ಮಂಗಲದಲ್ಲಿದ್ದಾನೆ. ಅವನು ಹಳೇ ರಿಕಾರ್ಡುಗಳನ್ನೆಲ್ಲ ಒಂದೊಂದು ವರ್ಷದ ಹಾಗೆ ತೆಗೆದು ತೆಗೆದು ಅಮಲ್ದಾರರ ಮುಂದೆ ಇಡುತ್ತಿದ್ದ. ಅಮಲ್ದಾರರು ಅವುಗಳನ್ನೆಲ್ಲ ಒಂದೊಂದಾಗಿ ತಿರುವಿಹಾಕುತಿದಾರೆ. ಒಂದು ವರ್ಷದ್ದು ನೋಡಿದರು. ಎರಡು ವರ್ಷದ್ದು ನೋಡಿದರು. ಜಮೀನು ಬಸಪ್ಪನದೇ ಎಂದಿದೆ! ನಮ್ಮ ವೆಂಕಟಸುಬ್ಬಯ್ಯನ ಅಕ್ಷರಗಳು ಗುಂಡಗೆ ಸ್ಫುಟವಾಗಿ ಮುತ್ತು ಪೋಣಿಸಿದ ಹಾಗಿತ್ತು. ಅದರಲ್ಲೇನೂ ತಪ್ಪು ಹುಡುಕುವಂತಿರಲಿಲ್ಲ. ಕಂದಾಯ ರಸೀತಿ ಪುಸ್ತಕವನ್ನು ತರಿಸಿಕೊಂಡು ನೋಡಿದರು. ಅದರ ಅಕ್ಕಪಕ್ಕದ ಜಮೀನಿನವರೆಲ್ಲ ಸರಿಯಾಗಿ ಕಂದಾಯ ಪಾವತಿ ಮಾಡಿದ್ದಾರೆ. ಆ ಜಮೀನಿನದು ಮಾತ್ರ ಬಂದಿಲ್ಲ! ಬೇರೊಂದು ಪುಸ್ತಕ ಎಳೆದುಕೊಂಡು ನೋಡಿದರು. ಒಂದು ಮೂಲೆಯಲ್ಲಿ ಕೆಂಪು ಶಾಯಿಯಲ್ಲಿ ಯಾವುದೋ ಆರ್ಡರಿನ ನಂಬರನ್ನೂ ತಾರೀಕನ್ನೂ ಗುರುತು ಹಾಕಿತ್ತು. ಫೈಲು ತೆಗೆದು ಆ ಆರ್ಡರನ್ನು ನೋಡಿದರು. ಆ ಜಮೀನಿಗೆ ಕಂದಾಯದ ರಿಯಾಯಿತಿ ಕೊಟ್ಟಿದೆ ಎಂದು ಬರೆದಿತ್ತು. ಅಂತೂ ಒಂದೇನೋ ನಿರ್ಧಾರವಾಯಿತು, ಜಮೀನು ಬಸಪ್ಪನದೇ ಮತ್ತು ಅವನು ಕಂದಾಯ ಕೊಡಬೇಕಾಗಿರಲಿಲ್ಲ. ಆಮೇಲೆ ಇನ್ನೂ ಒಂದು ವರ್ಷದ ಹಿಂದಿನ ರಿಕಾರ್ಡನ್ನು ನೋಡಿದರು. ಅದರಲ್ಲೂ ಅದೇ! ಮತ್ತೊಂದು ವರ್ಷದ್ದು ನೋಡಿದರು, ಅದರಲ್ಲೂ ಅದೇ! ಅಮಲ್ದಾರರಿಗೆ ಬಲು ಆಶ್ಚರ್ಯವಾಯಿತು. `ಇದಕ್ಕೇನು ಹೇಳ್ತೀರ್ರಿ?’ ಅಂತ ಪಾದ್ರಿಯನ್ನೊಂದು ಸಾರಿ ನೋಡಿ ನಕ್ಕರು. ಪಾದ್ರಿ ಮುಖ ಗಂಟುಹಾಕಿಕೊಂಡು ಸುಮ್ಮನೆ ಉಸಿರೆತ್ತದೆ ಕುಳಿತಿದ್ದ. ಅಮಲ್ದಾರರು ತಮ್ಮ ಮುಂದಿದ್ದ ರಿಕಾರ್ಡುಗಳ ಕಂತೆಯನ್ನೆಲ್ಲ ಪಕ್ಕಕ್ಕೆ ತಳ್ಳಿ ಅದಕ್ಕೂ ಹಿಂದಿನ ವರ್ಷದ ರಿಕಾರ್ಡನ್ನು ಎಳೆದುಕೊಂಡು ನೋಡಿದರು. ಬೇರೆಬೇರೆ ತರದ ಅಕ್ಷರಗಳು. ಆದರೂ ಬಿಡಿಬಿಡಿಯಾಗೇನೋ ಇತ್ತು. ಆ ಜಮೀನಿನ ದಾಖಲೆಯನ್ನೆಲ್ಲ ಮೊದಲಿಂದ ಕಡೆಯವರೆಗೆ ಓದಿ ನೋಡಿದರು. ಎಲ್ಲವೂ ಮೊದಲ ಹಾಗೇ ಇತ್ತು. ಆದರೆ ಒಂದೇ ಒಂದು ವ್ಯತ್ಯಾಸ. `ಬಸಪ್ಪ’ ಎನ್ನುವುದರ ಬದಲು `ಬಶಪ್ಪ’ ಎಂದಿತ್ತು. ಅದನ್ನು ನೋಡಿದ ಕೂಡಲೇ ಅಮಲ್ದಾರರಿಗೆ ನಗು ತಡೆಯುವುದಕ್ಕಾಗಲಿಲ್ಲ. `ಯಾರ್ರೀ ಅದನ್ನು ಬರೆದದ್ದು?’ ಅಂತ ಹಿಂದೆ ನಿಂತಿದ್ದ ಹೆಡ್ ಗುಮಾಸ್ತೆಯನ್ನು ಕೇಳಿದರು. ಆತ ಒಳಕ್ಕೆ ಓಡಿ ಹೋಗಿ ವರ್ಗಾವರ್ಗಿ ಸಮಾಚಾರವಿದ್ದ ಫೈಲೊಂದನ್ನು ತಂದು ಬಿಚ್ಚಿ ನೋಡಿ `ಶಿವಸ್ವಾಮಿ ಅನ್ನೋವ್ನು ಮಹಾಸ್ವಾಮಿ’ ಅಂದನು. ಅಮಲ್ದಾರರು ಮೊದಲೇ ಹಾಸ್ಯ ಪ್ರಿಯರು. ಅವನ ಹೆಸರು ಕೇಳಿದ್ದೇ ತಡ ಗೊಳ್ಳೆಂದು ನಗುತ್ತ `ಓಹೋ ಶಿವಶಾಮಿನೋ! ಅದಕ್ಕೆ ಬಶಪ್ನವರ ಮನೇಲಿ ಬಿಶಿಬಿಶಿ ಗಶಗಶೆ ಪಾಯಿಶಾಂತ ಬರೆದಿದಾನೆ!’ ಅಂದರು. ಶಿವಸ್ವಾಮಿ ನಮ್ಮ ವೆಂಕಟಸುಬ್ಬಯ್ಯನಿಗಿಂತ ಮುಂಚೆ ಇದ್ದವನು. ಕೆಲಸದಲ್ಲಿ ಗಟ್ಟಿಗ. ಆದರೆ ಏನೊ ಅವನ ಪ್ರಾರಬ್ಧಕರ್ಮ, ಮಾತಾಡುವಾಗ ಅವನಿಗೆ ಶ ಷ ಸ ಗಳಿಗೆ ವ್ಯತ್ಯಾಸವೇ ತಿಳೀತಿರಲಿಲ್ಲ. ಅವನೂ ಆ ಆಫೀಸಿನಲ್ಲಿ ಮೂರು ವರ್ಷ ಇದ್ದ. ಸರಿ, ಅವನ ಕೈಬರಹದ ರಿಕಾರ್ಡೆಲ್ಲ ಒಂದೇ ರೀತಿ ಇತ್ತು.
“ಅಷ್ಟು ಹೊತ್ತಿಗಾಗಲೇ ಎಂಟು ಹತ್ತು ವರ್ಷದ ರಿಕಾರ್ಡುಗಳನ್ನು ನೋಡಿದಂತಾಯಿತು. ಅಮಲ್ದಾರರಿಗೂ ಸಾಕಾಗಿತ್ತು. ಇನ್ನೆಷ್ಟು ಬೇಕು ರುಜುವಾತಿಗೆ? ಅನ್ನ ಆಗಿದೆಯೋ ಇಲ್ಲವೋ ನೋಡುವುದಕ್ಕೆ ಎಲ್ಲಾ ಅಗುಳನ್ನೂ ಹಿಚುಕಿ ನೋಡಬೇಕೆ? ಫಾದರ್ ರಿಚರ್ಡ್‍ನಿಗೆ ತುಂಬಾ ಬೇಸರವಾಯಿತು. ಅವನಿಗೆ ತನ್ನದೇ ತಪ್ಪಿರಬಹುದು ಅನ್ನಿಸಿತು. ಜೊತೆಗೆ ಗಾಬರಿಯೂ ಆಯಿತು. ಅಷ್ಟು ಜನಗಳ ಎದುರಿಗೆ ತನಗೆ ಅವಮಾನವಾಗುತ್ತದಲ್ಲ ಎಂದು ವ್ಯಥೆಯೂ ಆಯಿತು. ಯೇಸುವನ್ನು ಒಂದೇ ಮನಸ್ಸಿನಿಂದ ಧ್ಯಾನಿಸುತ್ತಿದ್ದ ಅಮಲ್ದಾರರು ಕಡೆಯದಾಗಿ ಇನ್ನು ಒಂದೇ ಒಂದು ವರ್ಷದ ರಿಕಾರ್ಡನ್ನು ನೋಡುವುದಾಗಿ ನಿರ್ಧರಿಸಿ, ಮಧ್ಯೆ ಮೂರು ವರ್ಷಗಳನ್ನು ಬಿಟ್ಟು ಹಿಂದಿನದನ್ನು ತರಿಸಿದರು. ಹಳೇ ಕಾಲದ ಬರವಣಿಗೆ ರಾಗಿ ಶಾಯಿಯಲ್ಲಿ ಬರೆದ ಮೂಡಿ ಅಕ್ಷರಗಳು. ಎಲ್ಲ ಒಂದಕ್ಕೊಂದು ಹೆಣೆದುಕೊಂಡು ಕಲಸುಮೇಲೋಗರವಾಗಿತ್ತು. ಅಲ್ಲಲ್ಲಿ ಶಾಯಿ ಬಿದ್ದು ಚಿತ್ತೂ ಆಗಿತ್ತು. ಅಮಲ್ದಾರರು ಸ್ವಲ್ಪ ಪ್ರಯಾಸದಿಂದಲೇ ಓದಿದರು. ಒಕ್ಕಣೆಯೆಲ್ಲ ಹಾಗೇ ಇತ್ತು. ಆದರೆ ಹೆಸರು ಮಾತ್ರ ಸ್ಪಷ್ಟವಾಗಿರಲಿಲ್ಲ. ನೋಡಿದರೆ `ಬಶಪ್ಪ’ ಎಂದು ಬರೆದಿದ್ದಂತೆ ತೋರಿತು. ಅದನ್ನು ಹೆಡ್ ಗುಮಾಸ್ತರ ಕೈಗೆ ಕೊಟ್ಟು `ಇದನ್ನು ಸರಿಯಾಗಿ ಓದಿ ನೋಡ್ರಿ’ ಅಂದರು. ಅವರು ಕಣ್ಣಿಗೆ ಕನ್ನಡಕ ಸಿಕ್ಕಿಸಿಕೊಂಡು, ಬಾಗಿಲ ಹತ್ತಿರ ಹೋಗಿ, ಹಾಳೆಯನ್ನು ಕೆಳಗೆ ಮೇಲೆ ಮಾಡಿ ಚನ್ನಾಗಿ ಪರಿಶೀಲಿಸಿ, `ಇದು ಬಿಷಪ್ಪ ಎಂದಾಗುತ್ತೆ ಮಹಾಸ್ವಾಮಿ’ ಅಂದರು. ಫಾದರ್ ರಿಚರ್ಡ್ ಇದ್ದಕ್ಕಿದ್ದಂತೆ ಒಂದು ಹಾರು ಹಾರಿ, `ಸ್ವಾಮಿ ನೋಡಿದಿರಾ ಬಿಷಪ್ ಬಿಷಪ್!’ ಅಂದ . . . (ಃishoಠಿ) ಅಂದ್ರೆ ಗೊತ್ತಿಲ್ವೇ, ಕ್ರೈಸ್ತ ಗುರು ಅಂತ! ಆಗ ಹೊಳೆಯಿತು ಎಲ್ಲರಿಗೂ, ಬಿಷಪ್ಪನ ಹೆಸರಿನಲ್ಲೇ ಜಮೀನಿದ್ದದ್ದು ಅಂತ. ಆ ಜಮೀನು ಚರ್ಚಿಗೆ ಸೇರಿದ್ದುದರಿಂದಲೇ ಬ್ರಿಟಿಷ್ ಸರ್ಕಾರದವರು ಅದಕ್ಕೆ ಕಂದಾಯದ ರಿಯಾಯ್ತಿ ಕೊಟ್ಟಿದ್ದು!
`ಸರಿ ಅಮಲ್ದಾರರು ಫಾದರ್ ರಿಚರ್ಡನ ಕ್ಷಮಾಪಣೆ ಕೇಳಿಕೊಂಡು, ಆ ಜಮೀನು ಚರ್ಚಿಗೇ ಸೇರಿದ್ದೆಂದು ನಿರ್ಧರಿಸಿದರು. ಆಮೇಲೆ ತಮ್ಮ ಗುಮಾಸ್ತರುಗಳ ಕಡೆ ತಿರುಗಿ ನಗುನಗುತ್ತಾ `ನೋಡಿದಿರೇನ್ರಿ! ಒಂದು ದೊಡ್ಡ ಯಂತ್ರದಲ್ಲಿ ಒಂದು ಸಣ್ಣ ತಿರುಪು ಕಳಚಿಕೊಂಡರೂ ಹೇಗೆ ಯಂತ್ರವೇ ಕೆಟ್ಟು ಹೋಗುತ್ತೋ ಹಾಗೆ ಒಬ್ಬ ಗುಮಾಸ್ತ ಒಂದು ಅಕ್ಷರ ತಪ್ಪು ಮಾಡಿದ್ದಕ್ಕೆ ಎಷ್ಟು ಅನಾಹುತ ಆಯ್ತು! ಇನ್ಮೇಲಾದರೂ ಎಚ್ಚರಿಕೆಯಿಂದಿರಿ’ ಅಂದರು. ಎಲ್ಲರೂ ಹಿಹಿಹಿ ಅಂತ ನಗುತ್ತಿದ್ದರು. ಆ ಮಿಲ್ ಮಾಲಿಕನೊಬ್ಬ ಪೆಚ್ಚುಮುಖ ಹಾಕಿಕೂಂಡು ಮನೆಗೆ ಹೋದ!’
ಕತೆ ಮುಗಿಯಿತು. ಶಾನುಭೋಗರು ಮೇಲೆದ್ದು `ಬಂದೆ ಬಂದೆ, ಕೈ ಕಾಲು ತೊಳಕೊಂಡು ಬರ್ತೀನಿ’ ಎನ್ನುತ್ತಾ ಮನೆಯೊಳಕ್ಕೆ ಹೊರಟರು.

– ನ. ಸುಬ್ರಹ್ಮಣ್ಯಂ
ಪ್ರಬುದ್ಧ ಕರ್ನಾಟಕ, ಸಂಪುಟ-34, ಸಂಚಿಕೆ-4, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. 1953

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...