ನೇಯಲಾಗುತ್ತಿದೆ ಹಿಂಸೆಯ ಎಳೆಯನ್ನು

ಹಿಂದೂ ಬಾಂಧವರೇ ಎಚ್ಚರ ಎಚ್ಚರ, ಆಘಾತಕಾರಿ ಸುದ್ದಿ- ಎಂಬ ತಲೆಬರಹದೊಂದಿಗೆ ಬಂದ ಪೋಸ್ಟ್

| ಡಾ. ವಿನಯಾ ಒಕ್ಕುಂದ |

ರಮ್ಜಾನಿನ ಹುಬ್ಬಳ್ಳಿ ಮಾರ್ಕೆಟ್ ಬಲು ಫೇಮಸ್ಸು. ಅವಳಿ ನಗರಗಳ ಹೆಂಗಸರು ತಂಡ-ತಂಡವಾಗಿ ಹೋಗಿ ಮಾರ್ಕೆಟ್ ಮಾಡಿ ಬರುವುದು, ಸಿದ್ಧಾರೂಢರ ಕೇರಿಗೆ ಹೋಗಿ ಬರುವಷ್ಟೇ ಮಾಮೂಲಿನ ಸಂಗತಿ. ವರ್ಷವಿಡೀ ಬೇಕಾಗುವ ಕೆಲವು ಸಣ್ಣಪುಟ್ಟ ಸರಂಜಾಮುಗಳು ಅಲ್ಲಿ ಬಿಟ್ಟರೆ ಮತ್ತೆಲ್ಲೂ ಸಿಗದು ಎಂಬ ಪ್ರತೀತಿಯೂ ಇದೆ. ಅದರಲ್ಲೂ ಹೆಣ್ಣುಗಳ ಲೋಕಕ್ಕೆ ಬೇಕು ಅನ್ನಿಸುವ ಪುಟ್ಟ ಪುಟ್ಟ ಸಾಮಾನುಗಳು, ಬೆಚ್ಚಗೆ ಬ್ಯಾಗುಗಳಲ್ಲಿ ಸೇರುವ ಬೇರೆಯದೇ ಆದ್ಯತೆಗಳ ಸಂತೆಯದು. ಇಂತಹ ದಿನಗಳಲ್ಲಿಯೇ ಒಂದು ವಾಟ್ಸಪ್ ಮೆಸೇಜ್ ಬೆಚ್ಚಿಬೀಳಿಸುವ ಹಾಗಿತ್ತು.

ಬೀದಿಬದಿಯಲ್ಲಿ ತಳ್ಳುಗಾಡಿಯ ಮೇಲೆ ಹಣ್ಣು-ಹಂಪಲು ಹೇರಿಕೊಂಡು ವ್ಯಾಪಾರ ಮಾಡುತ್ತಿರುವ, ಗಡ್ಡ-ಟೋಪಿಗಳ ಪಕ್ಕಾ ಮುಸಲ್ಮಾನ ಎನ್ನಿಸುವ ವ್ಯಾಪಾರಿಗಳ ಫೋಟೋ ಹಾಕಿ ಹೀಗೆ ಬರೆಯಲಾಗಿತ್ತು. ರೋಡ್ ಸೈಡಿನಲ್ಲಿರುವ ಬ್ಯಾರಿಗಳ/ಮುಸ್ಲಿಮರ ಹಣ್ಣು ಹಾಗೂ ತರಕಾರಿಗಳನ್ನು ದಯವಿಟ್ಟು ಖರೀದಿಸಬೇಡಿ, ಹಿಂದೂಗಳಿಗಾಗಿ ಮಾರಕ ರೋಗ ಅಥವಾ ಮಕ್ಕಳಾಗದಂತೆ ಹಣ್ಣು ತರಕಾರಿಗಳಿಗೆ ಒಂದು ಇಂಜೆಕ್ಷನ್ ಕೊಟ್ಟು ಹಿಂದೂಗಳನ್ನು ನಾಶಮಾಡಲು ಹೊರಟಿದ್ದಾರೆ. ಅದಕ್ಕಾಗಿ ಅವರಿಗೆ ಚೀನಾದಿಂದ ಹಣ ಬರುತ್ತಾಯಿದೆ. ಈಗ ಹಲವೆಡೆ ಗೊತ್ತಾಗಿದೆ, ದಯವಿಟ್ಟು ಎಲ್ಲಾ ಹಿಂದೂಗಳಿಗೆ ಕಳುಹಿಸಿ ಎಂಬ ಸೂಚನೆಯೊಂದಿಗೆ ಮುಕ್ತಾಯವಾಗುವ ಈ ಪೋಸ್ಟ್, ಹಿಂದೂ ಬಾಂಧವರೇ ಎಚ್ಚರ ಎಚ್ಚರ, ಆಘಾತಕಾರಿ ಸುದ್ದಿ- ಎಂಬ ತಲೆಬರಹದೊಂದಿಗೆ ಪೋಸ್ಟ್ ಆಗಿತ್ತು.

 

ಇದನ್ನು ಓದಿದ ಆ ದಿನವಿಡೀ, ನಾನು ಹಿಂದೂ ಎಂಬ ಕಾರಣಕ್ಕಾಗಿ ನನ್ನ ವಾಟ್ಸಾಪ್‍ಗೆ ಈ ಮೆಸೇಜ್ ಬಂದಿದೆಯೇ? ಎಂಬ ತೀವ್ರ ಕಳವಳ. ಹಿಂದೂ ಎಂಬ ಧರ್ಮವನ್ನು ಅಪಮಾನಿಸುತ್ತಿರುವ ಕ್ರೌರ್ಯದ ಬಗ್ಗೆ ಸಂಕಟ. ಮುಸ್ಲಿಮರು ಎಂಬ ಒಂದೇ ಒಂದು ಕಾರಣದಿಂದ ಇಲ್ಲಸಲ್ಲದ ಕ್ರೂರ ಆಪಾದನೆಗಳನ್ನು ಮಾಡಿ ನೋಯಿಸುವ ಮನಸ್ಥಿತಿಯ ಬಗ್ಗೆ ಗಾಬರಿ. ಆದರೀಗ ಅನ್ನಿಸುತ್ತಿದೆ. ಹೀಗೆ ಪೋಸ್ಟ್‍ಗಳನ್ನು ಕ್ರಿಯೇಟ್ ಮಾಡುವವರ ಉದ್ದೇಶ, ಮುಸ್ಲಿಮರನ್ನು ಅಪಮಾನಿಸುವುದು ನೋಯಿಸುವುದು ಮಾತ್ರವೇ? ಖಂಡಿತಾ ಇಲ್ಲ. ಮುಸ್ಲಿಮರು ಬಹುದೊಡ್ಡ ಸಂಖ್ಯೆಂiÀiಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವುದೇ ಸಣ್ಣ ವ್ಯಾಪಾರಿಗಳಾಗಿ, ಕುಶಲಕರ್ಮಿಗಳಾಗಿ ಶ್ರಮ ಜೀವಿಗಳಾಗಿ, ಮೆಕ್ಯಾನಿಕಲ್‍ಗಳಾಗಿ ಮೈಗೆಲ್ಲ ಗ್ರೀಸು ಹತ್ತಿದ ವೆಹಿಕಲ್ ರಿಪೇರರ್ಸ್‍ಗಳಲ್ಲಿ ಮೂರರಲ್ಲಿ ಒಬ್ಬರು ಮುಸ್ಲಿಮರೇ. ಕಾಯಿಪಲ್ಲೇ, ಹಣ್ಣು ಹೀಗೆ ತಳ್ಳುಗಾಡಿಯ ವ್ಯಾಪಾರಿಗಳಾಗಿ, ಈಗೀಗ ಎಗ್‍ರೈಸ್, ಮಂಚೂರಿಗಳ ವ್ಯಾಪಾರಿಗಳಾಗಿ ನಗರದ ರಸ್ತೆಯಂಚುಗಳನ್ನು ಆವರಿಸಿಕೊಂಡಿದ್ದಾರೆ. ಅತಿ ದೊಡ್ಡ ಸಂಖ್ಯೆಯಲ್ಲಿ ಪೇಂಟರ್‍ಗಳಾಗಿ, ಮನೆಕಟ್ಟುವ ಇಂಜಿನಿಯರರ ಕೈಕೆಳಗೆ ನಾನಾತರದ ಕೆಲಸಗಳಲ್ಲಿ ತೊಡಗಿಸಿಕೊಂಡ ಕಾರ್ಮಿಕರಾಗಿದ್ದಾರೆ. ಮಾವಿನಹಣ್ಣು, ಹುಣಸೆಹಣ್ಣು ಸೀಸನ್ ಬಂತು ಅಂದರೆ, ಮರಗಳನ್ನೇ ಗುತ್ತಿಗೆ ಪಡೆದು ಹಣ್ಣುಗಳನ್ನು ಮಾರ್ಕೆಟ್ ಮಾಡುವ ಕೆಲಸದಲ್ಲಿ ಬ್ಯುಸಿಯಾಗಿಬಿಡುತ್ತಾರೆ. ಎಲ್ಲೂ ಅವರ ಶ್ರಮನಿಷ್ಟೆ ಪ್ರಾಮಾಣಿಕತೆಗಳು ಪ್ರಶ್ನಾರ್ಹವೆನಿಸುವುದಿಲ್ಲ.

ನಮ್ಮ ಹಿಂದಿನ ಮನೆಯಲ್ಲಿ ಮನೆಯನ್ನು ಎತ್ತರಿಸುತ್ತಿರುವ ಕೆಲಸ ನಡೆದಿದೆ. ಅರೆಬರೆ ಉರ್ದು-ಕನ್ನಡ ಅರೇಬಿಕ್ ಏನೇನೋ ಸಂಕರಗೊಂಡ, ಯಾವುದೋ ಘರಾಣೆಯ ಸಂಗೀತದ ಏರಿಳಿತದಂತಹ ಮಾತುಕತೆಗಳು ನನ್ನ ಕಿವಿಗೆ ಬಡಿಯುತ್ತಲೇ ಇರುತ್ತದೆ. ಕಿವಿ ಕೊಯ್ದು ಹೋಗುವಂತಹ ಕರ್ರ$$ ಸದ್ದಿಗೆ ಅಡಿಗೆಮನೆ ಬಿಟ್ಟು ಓಡಿ ದೇಶಾಂತರ ಹೋಗಿಬಿಡಬೇಕು ಅನ್ನಿಸುತ್ತಿರುತ್ತದೆ. ಆದರೆ ಕೆಲಸಕ್ಕೆ ತ್ರಾಣ ತುಂಬಿಕೊಳ್ಳಲು ಅವರು ಕೇಳುವ ಹಿಂದಿ ಸಿನಿಮಾದ ಹಾಡುಗಳಿಗೆ ನಾನೂ ಮನಸ್ಸು ಕೊಟ್ಟಿದಿದ್ದೆ. ಎಂತೆಂಥದ್ದೋ ಮಾತುಕತೆಗಳ ಮಧ್ಯದಲ್ಲಿ ಒಬ್ಬನು ಇನ್ನೊಬ್ಬನಿಗೆ- ಕ್ಯಾಬಿ ಭಯ್ಯಾ, ಕಾಮ್ ಮೆ ಪಡಪೋಸಿ ಮತ್ ಕರನಾ ಎಂದು ಹೇಳಿಕೊಳ್ಳುತ್ತಿರುವುದನ್ನು ನನ್ನ ಮನಸ್ಸಿಗೂ ಆಲಿಸಲು ಹೇಳಿದ್ದೇನೆ. ಇಂದು ಮುಸ್ಲಿಮರ ಕರ್ತೃತ್ವಕ್ಷಮತೆಯನ್ನು ಹೊರತುಪಡಿಸಿದ ಜೀವನವಿಧಾನವನ್ನು ಯೋಚಿಸಲೂ ಸಾಧ್ಯವಿಲ್ಲ. ಆದರೆ ಅವರ ಇಂತಹ ದುಡಿಮೆಯ ಬಗ್ಗೆ ಆಕ್ಷೇಪಿಸುವ ಧೈರ್ಯ ಬಹುಸಂಖ್ಯಾತರಿಗಿಲ್ಲ. ಹಾಗೆ ತಕರಾರೆತ್ತಿದರೆ ತಮ್ಮ ಬದುಕಿನ ನಿಯತಿಯೇ ತಪ್ಪಿಹೋಗುತ್ತದೆ ಎಂಬ ಬಯ. ಜೊತೆಗೆ, ಮನೆಗಳನ್ನು ಕಟ್ಟಡಗಳನ್ನು ಕಟ್ಟಿಸುವವರು ನಾವು ಕಟ್ಟಲು ಬರುವ ಕೂಲಿಯಾಳುಗಳು ಅವರು. ಈ ಸ್ಪಷ್ಟ ಅಂತರ ಇದ್ದಷ್ಟು ಯಜಮಾನಶಾಹಿಯ ಅಹಂಕಾರ ತೃಪ್ತವಾಗಿರುತ್ತದೆ. ಆದರೆ ಅವರುಗಳು ಸಣ್ಣ ಮಟ್ಟದಲ್ಲಿಯೇ ಆಗಲಿ, ಸ್ವತಂತ್ರ ವ್ಯಾಪಾರ ಪ್ರಾರಂಭಿಸಿದರೆ ಅಸಹನೆಯ ಉರಿ ಏಳಲಾರಂಭಿಸುತ್ತದೆ. ನಮ್ಮ ಏರಿಯಾದಲ್ಲೊಬ್ಬ ಮುಸ್ಲಿಮ್ ಹುಡುಗ ಚಿಕನ್ ಕಬಾಬ್ ಮತ್ತು ಎಗ್‍ರೈಸ್‍ಗಳನ್ನು ರುಚಿಯಾಗಿ ಮಾಡುತ್ತಿದ್ದ. ಓಣಿಯ ಮಕ್ಕಳ ದಂಡು ಅವನ ಮೆಚ್ಚಿನ ಗಿರಾಕಿಗಳಾಗಿದ್ದರು. ನನ್ನ ಮಗಳೂ ಈಗೊಂದೆರಡು ವರ್ಷಗಳ ಹಿಂದೆ, ಅವನ ಅಂಗಡಿಗೆ ಮೇಲಿಂದ ಮೇಲೆ ಎಡತಾಕಿ, ಮನೆಮಂದಿಗಲ್ಲಾ ರುಚಿ ಹಬ್ಬಿಸಿಯೂ ಇದ್ದಳು.

ಆದರೆ ಅವನು ಮೂರ್ನಾಲ್ಕು ತಿಂಗಳಿಲ್ಲಿಯೇ ಅಂಗಡಿ ತೆಗೆದಿದ್ದ. ಏನಾಯಿತೋ, ಯಾಕೋ ತಿಳಿದಿರಲಿಲ್ಲ. ಮಕ್ಕಳು ಗುಣುಗುಣು ಅಂದುಕೊಂಡರು. ‘ಅವನಿಗೆ ಪಾಪ, ಸ್ವಂತ ಅಂಗಡಿಯಿರಲಿಲ್ಲ. ಆ ಮರದ ಅಡಿ, ಈ ಮರದ ಅಡಿ ಅಂತ ಅಂಗಡಿ ಓಡಾಡಿಸುತ್ತಿದ್ದ. ಆದರೆ ಯಾರ್ಯಾರೋ ಜಗಳಮಾಡಿದರಂತೆ. ಎಳನೀರು ಮಾರುವವನು ಆ ಮರದ ಅಡಿ ಕಾಯಂ ನಿಂತುಬಿಟ್ಟ ಮನೆಯಿಂದ ಮಸಾಲೆ ಎಲ್ಲ ಮಾಡಿಕೊಂಡು ಅಂಗಡಿ ತಳ್ಳಿಕೊಂಡು ಸಂಜೆಬಂದನಿಗೆ ಜಾಗವೇ ಇರುತ್ತಿರಲಿಲ್ಲವಂತೆ….’ ಹೀಗೆ, ಆಗ ಅಷ್ಟು ಗಮನ ಕೊಡದೆ ದಾಟಿಹೋದ ವಿಷಯ ಈಗ ಅರ್ಥವಾಗುತ್ತಿದೆ. ಎಗ್‍ರೈಸ್‍ನ ಅಂಗಡಿಯವ ಮುಸಲ್ಮಾನ, ಅವನನ್ನು ಅಲ್ಲಿಂದ ದೂರ ಮಾಡುವವರೆಗೆ ಸುತ್ತಲಿನವರಿಗೆ ಸಮಾಧಾನವಿಲ್ಲ. ಈ ಅಸಹನೆಗೆ ಕಾರಣವೇನೂ ಬೇಕಿರಲಿಲ್ಲ.

ಹಿಂದೂ ಬಾಂಧವರಿಗೆ ಎಚ್ಚರಿಕೆ ಕೊಡುವ ಆ ಪೋಸ್ಟ್ ಅದೆಷ್ಟು ಬಾಲಿಶವಾದದ್ದೆನ್ನುವುದು ಎಂಥವರಿಗೂ ಅರ್ಥವಾಗುತ್ತದೆ. ಹಣ್ಣಿನ ವ್ಯಾಪಾರಿ ತನ್ನ ಬಳಿಬರುವ ಹಿಂದೂಗಳಿಗೆ ಮಾತ್ರ ಇಂಜೆಕ್ಟ್ ಮಾಡಿದ ಹಣ್ಣು ಮಾರಲು ಸಾಧ್ಯವೇ? ಹಣ್ಣು-ಕಾಯಿಪಲ್ಲೆಗಳನ್ನು ಹಿಂದೂಗಳಿಗೆ ಮುಸ್ಲಿಮರಿಗೆ ಎಂದು ಪ್ರತ್ಯೇಕಿಸಿ ತೆಗೆದಿಡಲು ಆದೀತೆ? ಚೀನಾದಿಂದ ಹಣ ಬರುತ್ತದೆಯೇ? ಎಲ್ಲಿ ಇಂತಹ ಘಟನೆಗಳಾದ ಉದಾಹರಣೆಗಳಿವೆ? ಆದರೆ ಆರೋಪ ಮಾಢಲು ಪುರಾವೆಗಳ ಹಂಗೆಲ್ಲಿ? ವ್ಯರ್ಥ ಆರೋಪ, ಏರುದನಿಯ ಹಸಿಸುಳ್ಳಿನ ಆಕರ್ಷಣೆಯೇ ವಿಜೃಂಭಿಸುತ್ತಿರುವ ಸಮಾಜಕ್ಕೆ, ದ್ವೇಷದ ನಂಜಿನ ಮಾತುಗಳನ್ನು ತಕರಾರಿಲ್ಲದೆ ನಂಬುವ ಕಲೆ ಸಿದ್ದಿಸಿಬಿಟ್ಟಿರುತ್ತದೆ. ಹೀಗಂತೆ ಹಾಗಂತೆ ಎಂದು ದಿನಬೆಳಗಾಗುವುದರಲ್ಲಿ ಸುದ್ದಿ ಹಬ್ಬಿಸಿ ಹೌದಂತೆ ಎಂದು ಕಂತೆ ಕಟ್ಟುವ ನಿಸ್ಸೀಮತೆ ರೂಢಿಯಾಗಿದೆ. ಇಂತಹ ಕ್ರೂರತನವನ್ನು ಮಾಡುವವರ ಉದ್ದೇಶ ಅಷ್ಟರ ಮಟ್ಟಿಗೆ ಸಫಲವಾಗುತ್ತದೆ. ಹಣ್ಣು-ಕಾಯಿಪಲ್ಲೆ ನೋಡಿ ಕೊಂಡುಕೊಳ್ಳುವವರು ಇನ್ನುಮುಂದೆ ವ್ಯಾಪಾರಿಯ ಗಡ್ಡ-ಟೋಪಿ, ಹಣೆಯ ನಾಮ ಫುಂಡರಗಳನ್ನು ನೋಡಿ ಕೊಂಡುಕೊಳ್ಳುವ ಹಂತಕ್ಕೆ ತಲುಪುತ್ತಾರೆ. ಈಗಾಗಲೇ ಭಾರತೀಯ ಸಮಾಜ ಅಂತಹ ದುರಂತ ವಾಸ್ತವದ ಕಡೆಗೆ ವೇಗವಾಗಿ ಚಲಿಸುತ್ತಿದೆ. ನಗರಗಳಲ್ಲಿ ಅಪಾರ್ಟ್‍ಮೆಂಟ್‍ಗಳ ವಾಸ, ನಗರದ ಲೇಔಟ್‍ಗಳ ಹಂಚಿಕೆ, ಪ್ರವಾಸಕ್ಕೆ ತೆರಳುವ ಬಾಡಿಗೆ ವಾಹನಗಳ ಡ್ರೈವರ್‍ಗಳು, ಮಾಲೀಕರುಗಳ ಆಯ್ಕೆ ತಣ್ಣಗೆ ಜಾತಿ-ಧರ್ಮಗಳ ಚೌಕಟ್ಟಿಗೆ ಹೊಂದಿಕೊಳ್ಳುತ್ತಿದೆ. ನಾಗರಿಕತೆಯ ಚಹರೆಗೆ ಒಗ್ಗುವುದಿಲ್ಲ ಎಂದು ಕೈಬಿಟ್ಟಿದ್ದ ಧಾರ್ಮಿಕ ಗುರುತುಗಳು ಮತ್ತೀಗ ಸಂಸ್ಕøತಿಯ ಸೋಗಿನಲ್ಲಿ ನಮ್ಮ ನಮ್ಮ ನೆತಿÀ್ತ ಹಣೆಗಳನ್ನು ತುಂಬಿಕೊಂಡಿವೆ. ದೊಡ್ಡ ಲಾರ್ಜ್ ಲೆವೆಲ್ಲಿನ ಪ್ರೊಟೆಕ್ಟ್‍ಗಳ ಜಾಹಿರಾತುಗಳಲ್ಲಿಯೂ ಧರ್ಮದ ಗುರುತು ಮುಖ್ಯವಾಗುತ್ತಿರುವುದನ್ನು ಗಮನಿಸಿ ಖಂಡಿತ ಇದು ನಾಗರಿಕತೆಯ ವಿದ್ರೋಹದ ಸಂಗತಿಗಳು ಇಂತಹ ಅಗ್ನಿ.

ನಿರ್ದಿಷ್ಟ ಜಾತಿ-ಧರ್ಮಗಳ ಕುರಿತು ಅಸಹಿಷ್ಣುತೆ ಸಮುದಾಯದಲ್ಲಿ ಬೆಳೆಯಲು ಪ್ರಚೋದನೆ ನೀಡುವ ಸಂಗತಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತವೆ. ಮುಸ್ಲಿಮರನ್ನು ಅರೋಪಿಗಳಾಗಿ ಶಂಕಿಸುವ ಪೋಸ್ಟ್ ಮತ್ತು ಪೇಜಾವರ ಸ್ವಾಮಿಗಳು ಆಹಾರವನ್ನು ಸಂಸ್ಕøತೀಕರಣಗೊಳಿಸುವ ಅಹಂಕಾರವನ್ನು ಗೋಮಾಂಸ ಭಕ್ಷಕರನ್ನು ‘ರಾಕ್ಷಸರು’ ಎಂದು ಹೂಂಕರಿಸುವ ಸಂವಿಧಾನ ವಿರೋಧಿ ನಡೆಯನ್ನು ತೋರಿದರು. ವ್ಯಕ್ತಿಗೆ ಅವರು ಇಷ್ಟಪಡುವ ಆಹಾರವನ್ನು ಸ್ವೀಕರಿಸದಂತೆ ತಡೆಯುವುದು ಹಿಂಸೆ- ಎಂದಿದ್ದ ಬಾಪೂಜಿಯ ಧ್ವನಿಯನ್ನು; ಮನುಷ್ಯ ಪ್ರೇಮಕ್ಕೆ ಆಹಾರವು ಅಡ್ಡಿಯಾಗಬಾರದು – ಎಂಬುದನ್ನು ಪ್ರಾಯೋಗಿಕವಾಗಿಯೇ ನಿರೂಪಿಸಿದ್ದ ರಾಮಕೃಷ್ಣ ಪರಮಹಂಸರ ಸಂತ ತನವನ್ನು ಸಂಪೂರ್ಣವಾಗಿ ಅಳಿಸಿಬಿಡುವ ಧೋರಣೆ ಬೆಳೆಯುತ್ತಿದೆ. ಜಾತಿ-ಧರ್ಮಗಳ ಬುದ್ಧಿಹೀನ ರೋಗ ಬೆಳೆಯುತ್ತ-ಸ್ನಾತಕೋತ್ತರ ವೈದ್ಯಕೀಯವನ್ನು ಅಧ್ಯಯನ ಮಾಡುತ್ತಿದ್ದ ವೈದ್ಯೆ ಅಪಮಾನದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ರೋಹಿತ್ ವೇಮೂಲನನ್ನು, ಡಾ.ಪಾಯಲ್ ಟೆಡ್ವಿಯನ್ನು ಜನಾಂಗೀಯ ನಿಂದನೆಯ ವಿಪ್ಲವಕಾರಿ ವಿಷ ಬಲಿಹಾಕುತ್ತದೆ. ಕೊಲೆಗಡುಕರು ತಮ್ಮ ಕೈಗೆ ನೆತ್ತರಂಟಿಲ್ಲವೆಂದು ಸಾಕ್ಷೀಕರಿಸುತ್ತಲೇ ಇರುತ್ತಾರೆ. ಗಿರೀಶ್ ಕಾರ್ನಾಡರ ತುಘಲಕ್ ನಾಟಕದಲ್ಲಿ ಒಂದು ಮಾತಿದೆ – ಒಬ್ಬನನ್ನು ನಡುಬೀದಿಯಲ್ಲಿ ನಿಲ್ಲಿಸಿಕೊಂಡು ಬಡಿ, ಸುಲಿ, ಹೀಗೆ ಸುಲಿಸಿಕೊಂಡ ತಪ್ಪಿಗಾಗಿ ಶಿಕ್ಷೆ ಕೊಡು – ಈಗ ನಡೆಯುತ್ತಿರುವ ಸಾಮಾಜಿಕ ಅಸಹನೆಯನ್ನು ಹೀಗೆಯೇ ಹೇಳಬಹುದಲ್ಲವೇ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here