Homeಕರ್ನಾಟಕಟಿವಿ ಜ್ಯೋತಿಷ್ಯ ನಂಬದೆ ತುಮಕೂರಿನ ವಿವಿಧೆಡೆ ಸಾವಿರಾರು ಜನರಿಂದ ಸೂರ್ಯಗ್ರಹಣ ವಿಕ್ಷಣೆ

ಟಿವಿ ಜ್ಯೋತಿಷ್ಯ ನಂಬದೆ ತುಮಕೂರಿನ ವಿವಿಧೆಡೆ ಸಾವಿರಾರು ಜನರಿಂದ ಸೂರ್ಯಗ್ರಹಣ ವಿಕ್ಷಣೆ

- Advertisement -
- Advertisement -

ಜ್ಯೋತಿಷ್ಯವ್ಯಾದಿಗಳ ಅರಚುವಿಕೆಯ ನಡುವೆಯೂ ಮನೆಯಿಂದ ಹೊರಬಂದ ಸಾವಿರಾರು ಮಂದಿ ಜನರು ಕಂಕಣ ಸೂರ್ಯಗ್ರಹಣದ ನೆರಳು ಬೆಳಕಿನ ಆಟವನ್ನು ವೀಕ್ಷಿಸಿ ಆನಂದಪಟ್ಟರು. ತುಮಕೂರಿನ ಬಹುತೇಕ ಭಾಗಗಳಲ್ಲಿ ವಿಜ್ಞಾನ ಕೇಂದ್ರದ ಪದಾಧಿಕಾರಿಗಳು ಸುರಕ್ಷಿತ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರು. ಮಕ್ಕಳು, ವಿದ್ಯಾರ್ಥಿಗಳು, ಪೊಲೀಸರು, ಪೌರಕಾರ್ಮಿಕರು, ಆಟೋಚಾಲಕರು, ವೃದ್ಧರು ಹೀಗೆ ಎಲ್ಲಾ ಜನವಿಭಾಗದವರು ಕಂಕಣ ಸೂರ್ಯಗ್ರಹಣ ವೀಕ್ಷಿಸಿ ಪುರಿ, ತಿಂಡಿ ತಿಂದು ಕಾಫಿ ಕುಡಿದು ಮೌಢ್ಯದಿಂದ ಹೊರಬರುವಂತೆ ಎಲ್ಲರಿಗೂ ಮನವಿ ಮಾಡಿದರು.

ಬ್ರಾಹ್ಮಣರು ವಾಸಿಸುವ ಚಿಕ್ಕಪೇಟೆ, ಸೋಮೇಶ್ವರ ಹೀಗೆ ಹಲವು ಭಾಗಗಳಲ್ಲಿ ಜನ ಮನೆಯಿಂದಲೂ ಹೊರಗೆ ಬರಲು ಹೆದರಿಕೊಂಡಂತೆ ಕಂಡುಬಂತು. ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗಿತ್ತು. ಸನಾತನವಾದಿಗಳು ಗ್ರಹಣ ಬಿಡುವವರೆಗೂ ಏನೂ ತಿನ್ನದೆ ಮೌಢ್ಯವನ್ನು ಆಚರಿಸಿದರು. ಗ್ರಹಣ ಬಿಟ್ಟಮೇಲೆ ಸ್ನಾನ ಮಾಡಿದರು. ಆದರೆ ವಿಜ್ಞಾನ ಕೇಂದ್ರದ ಪದಾಧಿಕಾರಿಗಳನ್ನು ಇಂತಹ ಮೌಢ್ಯದಿಂದ ಹೊರಬರುವಂತೆ ಮನವಿ ಮಾಡಿಕೊಂಡರು. ಹೀಗಾಗಿ ಕೆಲಮಟ್ಟಿಗೆ ಜನರು ಸುರಕ್ಷಿತ ಸಾಧನಗಳಿಂದ ಸೂರ್ಯಗ್ರಹಣ ವೀಕ್ಷಿಸಿದರು. ಪದಾಧಿಕಾರಿಗಳು ಕೂಡ ಸೂರ್ಯಗ್ರಹಣ ವೀಕ್ಷಿಸುವುದರಿಂದ ಯಾವುದೇ ಅಪಾಯವಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿದರು.

ವಿಜ್ಞಾನ ಕೇಂದ್ರದ ಆವರಣದಲ್ಲಿ ದೂರದರ್ಶಕ, ಸೂಜಿರಂಧ್ರ ಬಿಂಬಗ್ರಾಹಿ, ಸನ್ ಪ್ರೊಜೆಕ್ಟರ್ ಹಾಗೂ ಸೋಲಾರ್ ಫಿಲ್ಟರ್ ಗಳ ಮೂಲಕ ಕಂಕಣ ಸೂರ್ಯಗ್ರಹಣ ನೋಡಲು ವ್ಯವಸ್ಥೆ ಮಾಡಿದ್ದರು. ಹಿರೀಮಠದ ಡಾ.ಶಿವಾನಂದಶಿವಾಚಾರ್ಯ ಸ್ವಾಮಿ, ಮಹಿಳಾ ಪೊಲೀಸ್ ಅಧಿಕಾರಿಗಳು ಬಂದು ಸೂರ್ಯಗ್ರಹಣ ವೀಕ್ಷಿಸಿದರು.  ವಿಜ್ಞಾನ ಕೇಂದ್ರದ ಸಿ.ವಿಶ್ವನಾಥ್, ಸಿ.ಯತಿರಾಜ್, ಮಾಮ ರವಿ, ನಿತ್ಯಾನಂದ, ಸಾರ್ವಜನಿಕರಿಗೆ ವೈಚಾರಿಕ, ವೈಜ್ಞಾನಿಕವಾಗಿ ಸೂರ್ಯಗ್ರಹಣದ ಬಗ್ಗೆ ವಿವರಿಸಿ ಹೇಳಿದರು. ಪರಿಸರವಾದಿ ಸಿ.ಯತಿರಾಜು ಮಾತನಾಡಿ ಕೆಲವರು ಟಿವಿಗಳಲ್ಲಿ ಕುಳಿತು ಜನರಲ್ಲಿ ಮೌಢ್ಯವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಕಿವಿಗೊಡದೆ ಜನರು ಹೊರಬಂದು ಸೂರ್ಯಗ್ರಹಣ ವೀಕ್ಷಿಸಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಹೇಳಿದರು.

ಖಾಸಗಿ ಬಸ್ ನಿಲ್ದಾಣದಲ್ಲಿ ಸೈಯದ್ ಮುಜೀಬ್ ಅವರು ಸೋಲಾರ್ ಫಿಲ್ಟರ್ ಗಳನ್ನು ಹಿಡಿದರು. ಆಟೋ ರಿಕ್ಷಾ ಚಾಲಕರು, ವೃದ್ದೆಯರು, ಪೌರಕಾರ್ಮಿಕರು, ಸಾರ್ವಜನಿಕರಿಗೆ ಸೂರ್ಯಗ್ರಹಣ ವೀಕ್ಷಿಸಲು ಮತ್ತು ವೈಜ್ಞಾನಿಕತೆಯನ್ನು ಹರಡಲು ಅವಕಾಶ ಮಾಡಿಕೊಟ್ಟರು. ರಾಮಾಜೋಯಿಸ್ ನಗರದಲ್ಲಿ ಆನಂದ್ ಅವರು ಮಕ್ಕಳಿಗೆ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ ಅಕ್ಕಮ್ಮ ಎಲ್ಲಾ ಸಾವಿರ ವಿದ್ಯಾರ್ಥಿಗಳಿಗೆ ಸೂರ್ಯಗ್ರಹಣ ವೀಕ್ಷಿಸಲು ಅನುಕೂಲ ಮಾಡಿಕೊಟ್ಟರು.

ಇಂದು ಬೆಳಗ್ಗೆ 8.06 ಗಂಟೆಗೆ ಗ್ರಹಣದ ಪ್ರಥಮ ಸ್ಪರ್ಶ ನಂತರ ಗರಿಷ್ಠ ಗ್ರಹಣವು 9.27ರಿಂದ 9.30ರವರೆಗೆ ಶೇಕಡ 89.1ರಷ್ಟು ಗ್ರಹಣ ಆವರಿಸಿಕೊಂಡಿತು. 11 ಗಂಟೆ, 9 ನಿಮಿಷ 48 ಸೆಕೆಂಡ್ ಗೆ ಗ್ರಹಣ ಮುಕ್ತಾಯಗೊಂಡಿತು. ಮತ್ತೊಮ್ಮೆ ಇಂತಹ ಗ್ರಹಣ ನೋಡಲು 17ನೇ ಫೆಬ್ರವರಿ 2064ನೇ ಇಸವಿಯವರೆಗೆ ಕಾಯಬೇಕಾಗುತ್ತದೆ ಎಂದು ರವಿಶಂಕರ್ ತಿಳಿಸಿದರು.

ಬೆಳಗ್ಗೆ 8 ರಿಂದ 11 ಗಂಟೆಯವರೆಗೆ ವಾಹನಗಳ ಓಡಾಟ ವಿರಳವಾಗಿತ್ತು. ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬೆಳಗಿನ ಚಹ, ಕಾಫಿ ಹೀರಲು ತುಂಬಿರುತ್ತಿದ್ದ ಹೋಟೆಲ್, ಕೆಫೆಗಳು ಖಾಲಿ ಖಾಲಿ ಇದ್ದುದು ಕಂಡು ಬಂತು. ಟಿವಿಯಲ್ಲಿ ಕುಳಿತ ಜ್ಯೋತಿಷಗಳು ಬ್ರಹ್ಮಾಂಡ ಮೌಢ್ಯ ಬಿತ್ತುವುದರಲ್ಲಿ ತೊಡಗಿದ್ದರು. ಆದರೆ ಲಕ್ಷಾಂತರವಲ್ಲದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಜನ ಮನೆಗಳಿಂದ ಹೊರಬಂದಿದ್ದರು. ವಾಹನಗಳ ಚಾಲಕರು ಗ್ರಹಣವನ್ನು ನಂಬಿರಲಿಲ್ಲ. ಆದರೆ ನಗರವಾಸಿಗಳಲ್ಲೇ ಮೌಢ್ಯ ಹೆಚ್ಚಾಗಿರುವುದಂತು ಸತ್ಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...