ಸರ್ಕಾರ ಬೀಳಿಸುವ ಕಲೆ ದೇವೇಗೌಡರ ಕುಟುಂಬಕ್ಕೆ ಕರಗತವಾಗಿದೆ: ಸಿದ್ದರಾಮಯ್ಯ ತಿರುಗೇಟು

ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ಕಾರಣ, ಅವರು ವಿರೋಧ ಪಕ್ಷದ ನಾಯಕರಾಗಲು ಹೀಗೆ ಮಾಡಿದ್ದರು ಎಂದು ಎರಡು ದಿನದ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ.

ಸಮ್ಮಿಶ್ರ ಸರ್ಕಾರ ಬೀಳಿಸುವ ನೀಚ ರಾಜಕಾರಣ ನಾನು ಯಾವತ್ತೂ ಮಾಡುವುದಿಲ್ಲ. ಅದೇನಿದ್ದರೂ ದೇವೇಗೌಡ ಮತ್ತು ಅವರ ಮಕ್ಕಳ ಹುಟ್ಟುಗುಣ.. ಮೈತ್ರಿ ಸರ್ಕಾರ ಬೀಳಲು ನಾನಲ್ಲ, ದೇವೇಗೌಡರ ಕುಟುಂಬವೇ ಕಾರಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ,

ಇಂದು ಅವರ ನಿವಾಸದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರೀತಿ ಸರ್ಕಾರಗಳನ್ನು ಬೀಳಿಸುವ ಅವರ ಹುನ್ನಾರಕ್ಕೆ ದೊಡ್ಡ ಇತಿಹಾಸವಿದೆ. 2004ರಲ್ಲಿ ಧರ್ಮಸಿಂಗ್ ರವರಿಗೆ ಬೆಂಬಲ ಕೊಟ್ಟಿದ್ದರು. ನಂತರ ಕೆಡವಿಬಿಟ್ಟರು. ಬೊಮ್ಮಾಯಿ ಸರ್ಕಾರ ಬೀಳಿಸಿದವರು ಯಾರು? ಇದೇ ದೇವೇಗೌಡರಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಕ್ಕೆ ಕುಮಾರಸ್ವಾಮಿ, ರೇವಣ್ಣ ಮತ್ತು ದೇವೇಗೌಡರು ಕಾರಣವೆಂದು ಎಲ್ಲರೂ ಹೇಳುತ್ತಾರೆ. ಇದು ನಾನು ಹೇಳುತ್ತಿಲ್ಲ. ಎಲ್ಲಾ ಶಾಸಕರ ವಿಶ್ವಾಸ ತೆಗೆದುಕೊಂಡು ಅವರ ಕ್ಷೇತ್ರಗಳಲ್ಲಿ ಅಭಿವೃದ್ದಿ ಕೆಲಸ ಮಾಡಿದ್ದರೆ ಯಾರು ಅತೃಪ್ತರು, ಅಸಮಾಧಾನಿತರು ಆಗುತ್ತಿರಲಿಲ್ಲ ಎಂದು ಹಲವು ಶಾಸಕರು ಹೇಳಿದ್ದಾರೆ. ಏಕಪಕ್ಷೀಯವಾದ ನಿರ್ಧಾರ ಮಾಡುವುದು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋಗಿರುವುದೇ ಸರ್ಕಾರದ ಪತನಕ್ಕೆ ಕಾರಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನಾನು ಸಂಪೂರ್ಣವಾಗಿ 5 ವರ್ಷ ಮುಖ್ಯಮಂತ್ರಿಯಾಗಿದ್ದಾಗ ಏಕೆ ಒಬ್ಬ ಶಾಸಕ ನನ್ನ ವಿರುದ್ಧ ಮಾತಾಡಲಿಲ್ಲ. ಯಾಕೆ ಯಾರು ಅಸಮಾನಧಾ ತೋರಿಸಲಿಲ್ಲ? ದೇವೇಗೌಡರ ಅವರ ತಪ್ಪು ಮುಚ್ಚಿಕೊಳ್ಳಲ್ಲಿಕ್ಕೆ ನನ್ನ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವೇಗೌಡರು ಯಾರನ್ನು ಬೆಳೆಸುವುದಿಲ್ಲ. ತನ್ನ ಮಕ್ಕಳು ಮತ್ತು ಕುಟುಂಬ ಮಾತ್ರ ಬೇಕು ಅವರಿಗೆ. ಅವರು ಸ್ವಜಾತೀಯವರನ್ನೇ ಬೆಳೆಸುವುದಿಲ್ಲ. ಇವರು ಯಾರನ್ನು ಬೆಳೆಸಿಲ್ಲ. ವೈ.ಕೆ ರಾಮಯ್ಯ, ನಾಗೇಗೌಡ ಚಂದ್ರೇಗೌಡ, ಗೋವಿಂದೇಗೌಡ, ಜೀವರಾಜ್ ಆಳ್ವ, ಭೈರೆಗೌಡ ಇವರದೆಲ್ಲಾ ಏನಾಯ್ತು? ಇವರನ್ನೆಲ್ಲ ಯಾರು ತುಳಿದವರು? ನಾನು ತುಳಿದನೆ? ಹೊಸಕೋಟೆಯ ಬಿ.ಎನ್ ಬಚ್ಚೆಗೌಡ ರನ್ನು ಕೇಳಿ ಅವರು ಜಾಸ್ತಿ ಹೇಳುತ್ತಾರೆ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು ಎಂದರು.

ನನಗೆ ಎಲ್ಲಾ ಜಾತಿಯವರು ಸ್ನೇಹಿತರಿದ್ದಾರೆ. ಎಲ್ಲಾ ಪಾರ್ಟಿಯಲ್ಲಿಯೂ ಸ್ನೇಹಿತರಿದ್ದಾರೆ.

ಅವರು ನಿಖಿಲ್ ಸೋಲಬೇಕದಾರೆ ಸಿದ್ದರಾಮಯ್ಯ ಕಾರಣ ಎಂದಿದ್ದಾರೆ. ಹಾಗಾದರೆ ಚಾಮರಾಜನಗರ, ಮೈಸೂರು, ಬೆಂಗಳೂರು ಉತ್ತರ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಮ್ಮ ಅಭ್ಯರ್ಥಿಗಳು ಸೋಲಲು ಯಾರು ಕಾರಣ?

ಜಿ.ಟಿ ದೇವೇಗೌಡ ನೇರವಾಗಿ ಹೇಳಿದ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ಗೆ ಹಾಕದೇ ಬಿಜೆಪಿಗೆ ಹಾಕಿಬಿಟ್ಟರು ಅಂತ ನೇರವಾಗಿ ಹೇಳಿದರು. ಅವರಿ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ನಾವು ಕ್ರಮ ತೆಗೆದುಕೊಂಡಿದ್ದೇವೆ. ಮಂಡ್ಯದಲ್ಲಿ, ತುಮಕೂರು, ಕೋಲಾರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಇವರು ಏಕೆ ತೆಗೆದುಕೊಳ್ಳಲಿಲ್ಲ?

ಹಾಗಾದರೆ ಹಾಸನದಲ್ಲಿ ಇವರ ಇನ್ನೊಬ್ಬ ಮೊಮ್ಮಗ ಹೇಗೆ ಗೆದ್ದಿದ್ದಾನೆ. ನಮ್ಮ ಪಾರ್ಟಿ ಕೆಲಸ ಮಾಡಲಿಲ್ಲವೇ ಅಲ್ಲಿ? ಹೇಗೆ ಗೆದ್ದ?

ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು, ಅಳುವುದು, ಜಾತಿ ತರುವುದು ಮಾಡುತ್ತಾರೆ. ಇವೆಲ್ಲ ಇವರ ಹಳೇ ಗಿಮಿಕ್ ಗಳು. ಹೊಸದೇನೂ ಇಲ್ಲ. ಹಾಗಾಗಿ ಸರ್ಕಾರ ಬೀಳಲು ನಾನು ಕಾರಣ ಎಂದು ಆರೋಪ ಮಾಡಿದ್ದಾರೆ.

ಅವರ ಆರೋಪಗಳೆಲ್ಲವೂ ಟೋಟಲ್ ಪೊಲಿಟಿಕಲಿ ಮೋಟಿವೇಟೆಡ್, ಬೇಸ್ ಲೆಸ್, ಅನ್ ಸ್ಕೂಪ್ ಲೆಸ್ , ಹಿ ವಾಂಟೆಂಡ್ ಟು ಟೇಕ್ ಪೊಲಿಟಿಕಲಿ ಅಡ್ವಾಂಟೇಜ್.. ಆದರೆ ಜನ ಬುದ್ದಿವಂತರಿದ್ದಾರೆ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕಿಡಿ ಕಾರಿದರು.

ಮೈತ್ರಿ ಮುಂದುವರಿಯಬೇಕಾ ಬೇಡವ ಎಂಬುದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇಲ್ಲಿ ವಯಕ್ತಿಕ ಪ್ರಶ್ನೆ ಬರುವುದಿಲ್ಲ.

ಇವತ್ತು ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ನೇರವಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಕಾರಣ.. 2006ರಲ್ಲಿ ಕಾಂಗ್ರೆಸ್ ಬಿಟ್ಟು ರಾತ್ರೋರಾತ್ರಿ ಬಿಜೆಪಿ ಕ್ಯಾಂಪ್ ಗೆ ಸೇರಿಕೊಂಡವರು ಯಾರು? ದೇವೇಗೌಡರು ದೊಡ್ಡ ನಾಟಕ ಆಡುತ್ತಿದ್ದಾರೆ ಎಂದರು.

ಬಿಜೆಪಿಯವರ ಜೊತೆ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಮಾಡಬೇಕು ಅಂತ ದೇವೇಗೌಡರು ಹೇಳಿದ್ದರು. ಅವರು ದೊಡ್ಡ ಸುಳ್ಳು ಹೇಳುತ್ತಿದ್ದಾರೆ. ದೇವೇಗೌಡರ ಒಪ್ಪಿಗೆ ಇಲ್ಲದೇ ಅಂದು ಕುಮಾರಸ್ವಾಮಿ ಬಿಜೆಪಿ ಜೊತೆ ಸರ್ಕಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.

20 ತಿಂಗಳು ಯಡಿಯೂರಪ್ಪನವರಿಗೆ ಅಧಿಕಾರ ಕೊಟ್ಟಿದ್ದಾರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಹೊರಟು ಹೋಗುತ್ತಿದ್ದರು. 2008 ರಲ್ಲಿ bjp ಗೆಲ್ಲಲು, ಈಗ ಅಧಿಕಾರದಲ್ಲಿ ಅವರು ಕಾಲೂರಲು ದೇವೇಗೌಡರು ಮತ್ತು ಕುಮಾರಸ್ವಾಮಿ ಕಾರಣ. ವಚನ ಭ್ರಷ್ಟರು ಯಾರು? 20 ತಿಂಗಳ ಅಧಿಕಾರ ಕೊಡದೇ ಇವರು ಈ ಸ್ಥಿತಿ ತಂದಿದ್ದಾರೆ.

ನಾವು ರಾಜಕಾರಣ ಎಂದರೆ ಜನಸೇವೆ ಮಾಡಲು ಬಂದಿದ್ದೇನೆ. ಜನ ಅವಕಾಶ ಕೊಟ್ಟರೆ ಮಾಡಬೇಕು ಇಲ್ಲ ಅಂದ್ರೆ ಮನೆಲೀರಬೇಕು ಅಷ್ಟೇ. ನಾನು ಅಳುವುದಿಲ್ಲ. ಕಣ್ಣೀರು ಹಾಕೋದು ದೇವೇಗೌಡರ ಗಿಮಿಕ್. ನನ್ನ ಮೇಲೆ ದೇವೇಗೌಡರಿಗೆ ರಾಜಕೀಯ ದ್ವೇಷ ಇದೆ, ಸೇಡು ತೀರಿಸಿಕೊಳ್ಳಲು ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕುತ್ತಿದ್ದಾರೆ. ನಾನು ಮುಗಿದರೆ ಕಾಂಗ್ರೆಸ್ ಮುಗಿಸುವುದು ಸುಲಭ ಎಂಬುದು ಅವರ ಲೆಕ್ಕಾಚಾರ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here