ದೇವರಾಜ ಅರಸು ಪ್ರಶಸ್ತಿ ಪಡೆದ ಶಿವಾಜಿ ಕಾಗ್ಣೀಕರ್

0

ಭೀಮಣ್ಣ ಕಾನಡೆ |

ಈ ವರ್ಷದ ದೇವರಾಜ ಅರಸು ಪ್ರಶಸ್ತಿ ಪಡೆದುಕೊಂಡ ಶಿವಾಜಿ ಕಾಗ್ಣೀಕರ್ ನಿಜಕ್ಕೂ ‘ತೆರೆ-ಮರೆ’ಯ ಸಾಧಕರು. ಅವರ ಕುರಿತು ಪತ್ರಿಕೆಗಳು ಹೆಚ್ಚೇನೂ ಬರೆದಿಲ್ಲ. ಅವರ ದೋಸ್ತ ‘ಭೀಮಣ್ಣ ಕಾನಡೆ’ಯವರನ್ನು ಶಿವಾಜಿಯವರ ಕುರಿತು ಮಾತಾಡಲು ಕೇಳಿದಾಗ, ಅವರು ದೊಡ್ಡ ಸಾಧನೆಗಳ ಕುರಿತು ಮಾತಾಡಲೇ ಇಲ್ಲ. ಬದಲಿಗೆ ತಾನು ಕಂಡ ತನ್ನ ಗೆಳೆಯನ ವ್ಯಕ್ತಿತ್ವವನ್ನಷ್ಟೇ ವಿವರಿಸುತ್ತಾ ಹೋದರು. ಹಾಗೆ ನೋಡಿದರೆ ಭೀಮಣ್ಣಜ್ಜ ಸಹಾ ಒಬ್ಬ ತೆರೆಮರೆಯ ಸಾಧಕರೇ. ಜೀವನದುದ್ದಕ್ಕೂ ಒಂದಲ್ಲಾ ಒಂದು ರೀತಿಯ ಹೋರಾಟದಲ್ಲೇ ಇದ್ದ ಅವರು, ಇಳಿವಯಸ್ಸಿನಲ್ಲಿಯೂ ಬೆಳಗಾವಿಯ ವಡಗಾಂವ್‍ನಲ್ಲಿ ‘ಕಾಯಕಜೀವಿ ಕೂಲಿ ನೇಕಾರರ ಸಂಘ’ವನ್ನು ಕಟ್ಟಿಕೊಂಡು ಗುದ್ದಾಡಿದರು. ಶಿವಾಜಿ ಕಾಗ್ಣೀಕರ್‍ರು ಆ ಭಾಗದಲ್ಲಿ ನಡೆಸಿಕೊಂಡು ಬರುತ್ತಿರುವ ಅಪಾರವಾದ ರಚನಾತ್ಮಕ ಕೆಲಸಗಳ ವಿವರಗಳನ್ನು ಮುಂದೊಮ್ಮೆ ಈ ಅಂಕಣದಲ್ಲಿ ಪ್ರಕಟಿಸಲಾಗುವುದು.
ಈ ಸದ್ಯ ಭೀಮಣ್ಣರ ಮೊಮ್ಮಗಳು ನೇಮಿಚಂದ್ರ ಬರೆದುಕೊಂಡ, ಆಕೆಯ ಅಜ್ಜನ ಮಾತುಗಳಲ್ಲಿ ದೇವರಾಜ ಅರಸು ಪ್ರಶಸ್ತಿ ಪುರಸ್ಕøತ ಶಿವಾಜಿ ಕಾಗ್ಣೀಕರ್‍ರ ವ್ಯಕ್ತಿತ್ವದ ಬಗ್ಗೆ ಮಾತ್ರ ನಿಮ್ಮ ಮುಂದೆ.
“ಶಿವಾಜಿ ನನ್ನ ಬಾಲ್ಯದ ಗೆಳೆಯ. ಮಗುವಿನಂಥಾ ಮನಸ್ಸವನದ್ದು. ಬಾಳ ಸರಳ ಜೀವಿ ಆತ. ಹೋರಾಟದ ದಿನಗಳನ್ನ ನಾನು ಅವನ ಜೋಡಿ ಕಳೆದಿದ್ದೀನಿ. ಅವನ ಊರು ಬೆಳಗಾವಿಯಿಂದ 20, 25 ಕಿಲೋಮೀಟರ್ ದೂರದ ಒಂದು ಹಳ್ಳಿ. ನನಗಿಂತಲೂ ನಾಲ್ಕೈದು ವರ್ಷ ಸಣ್ಣವ. ನಮ್ಮ ಮನಿಗೆ ಬಂದಾಗ ನಮ್ಮ ಅವ್ವಾ ಮಾಡಿದ ಎಲ್ಲಾ ಅಡಗಿನೂ ಬಾಳ ಇಷ್ಟಾ ಅವನಿಗೆ. ಅದರಾಗೂ ಚುರುಮುರಿ ಒಗ್ಗರಣಿ ಮತ್ತ ಚಹಾ ಅಂದ್ರ ಹೇಳಿ ಮಾಡಿಸ್ಕೋಂಡು ತಿಂತಿದ್ದ. ನಮ್ಮನ್ಯಾಗ ಅವನೂ ಒಬ್ಬ ದೊಡ್ಡ ಮಗ ಆಗಿದ್ದ. ಎಲ್ಲಾರ ಜೋಡಿನೂ ಆತ್ಮೀಯವಾಗಿ ಮಾತಾಡ್ತಾನ. ಹೆಣ್ಮಕ್ಳು ಅಂದ್ರ ಬಾಳ ಪ್ರೀತಿ, ಗೌರವ ಅವನಿಗೆ. ನನ್ನ ಮಕ್ಕಳನ್ನ, ಮೊಮ್ಮಕ್ಳನ್ನ ತನ್ನಾವ್ರ ಗತೇನ ನೋಡ್ತಿದ್ದಾ. ನನ್ನ ಮಕ್ಳು, ಮೊಮ್ಮಕ್ಳೂ ಅಷ್ಟ ಶಿವಾಜಿನ ಬಾಬಾ ಅಂತ, ಅಜ್ಜಾ ಅಂತ ಕರಿತಾವ. ಬಾಳ ಸೂಕ್ಷ್ಮ, ಮುಜುಗರದ ಸ್ವಭಾವ. ಯಾವತ್ತೂ ಯಾರಿಗೂ ಮನಸ್ಸಿಗೆ ನೋವು ಕೊಡುವ ವ್ಯಕ್ತಿಯಲ್ಲ. ತನಗಾಗಿ ಆಗ್ಲೀ, ತನ್ನ ಮನೆಯವರಿಗಾಗಿ ಆಗ್ಲಿ ಏನೂ ಮಾಡಿಕೊಂಡಿಲ್ಲ.
ಈಗಲೂ ಅವ ಸೈಕಲ್ ಓಡಸ್ತಾನ. ತನ್ನ ಆರೋಗ್ಯವನ್ನ ಚನ್ನಾಗೇ ಕಾಪಾಡಿಕೊಂಡಾನ. ನಾವು ಸೇರಿಕೊಂಡಾಗೆಲ್ಲಾ ಬಾಳ ಆಳವಾಗಿ ಸಮಾಜದ ಬಗ್ಗೆ ಚರ್ಚೆ ಮಾಡ್ತಿದ್ವಿ. ಬೆಳಗಾವಿಯಲ್ಲಿ ಕಾರ್ಮಿಕ ಸಮಸ್ಯೆಗಳನ್ನ ಬಗೆಹರಿಸಬೇಕೆಂತ ಅನೇಕ ಕಾರ್ಮಿಕರ ಹೋರಾಟದಲ್ಲಿ ಮುಂಚೂಣಿ ಪಾತ್ರವನ್ನ ವಹಿಸಿದ್ದ. ಅಲ್ಲದೇ ಹೋರಾಟದಲ್ಲಿ ಅದೆಷ್ಟೊ ಸಲ ಜೈಲಿಗೆ ಹೋಗಿದ್ದೀವಿ. 1975ರಲ್ಲಿ ಕಾರ್ಮಿಕರ ಸಮಸ್ಯೆಗಳನ್ನ ತೆಗೆದುಕೊಂಡು ಸರ್ಕಾರದ ವಿರುದ್ಧ ದೊಡ್ಡ ಹೋರಾಟವನ್ನ ತೆಗೆದುಕೊಂಡ್ವಿ. ಅದರಾಗ ಬಹಳಷ್ಟು ಮಂದಿ ಮಹಿಳೆಯರು, ಪುರುಷ ಕಾರ್ಮಿಕರು ಭಾಗವಹಿಸಿದ್ದರು. ಆಗ ಡಿಸಿ ಕಚೇರಿಯನ್ನ ಮುತ್ತಿಗೆ ಹಾಕಬೇಕಂತ ತೀರ್ಮಾನ ತೆಗೆದುಕೊಂಡ್ವಿ. ಆದ್ರ ವಿಚಾರ ತಿಳಿದೂ ಡಿಸಿ ಬೇರೊಂದು ಕಾರ್ಯಕ್ರಮಕ್ಕೆ ಹೋಗಿದ್ದಾ. ನಾವು ಅಲ್ಲಿಗೆ ಹೋಗಿ ಡಿಸಿ ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ವಿ. ಡಿಸಿ ಇದ್ದ ಕಾರನ್ನ ಮುತ್ತಿಗೆ ಹಾಕಿ ಅವರನ್ನ ಕಾರಿನಿಂದ ಕೆಳಗಿಳಿದು ಬರುವಂತೆ, ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುವಂತೆ ಕೇಳಿಕೊಂಡ್ವಿ. ನಮ್ಮ ನ್ಯಾಯಯುತ ಹೋರಾಟಕ್ಕ ಮಣಿದು ನಿಮ್ಮೆಲ್ಲಾ ಬೇಡಿಕೆಗಳನ್ನ ಸರ್ಕಾರದ ಮುಂದೆ ತಂದಿಟ್ಟು, ಅದಕ್ಕೆ ಸೂಕ್ತ ಪರಿಹಾರ ರೂಪಿಸುವುದರ ಜವಾಬ್ದಾರಿ ನನ್ನದೆಂದು ಡಿಸಿ ಭರವಸೆಯನ್ನ ಕೊಟ್ರು. ಆಗ ನಮ್ಮ ಹೋರಾಟ ಅಲ್ಲಿಗೆ ನಿಂತು, ಜನರನ್ನ ಸಂಘಟಿಸುವುದರಾಗ ಹಳ್ಳಿಹಳ್ಳಿಗಳಿಗೂ ಹೋಯಿತು. ನಮ್ಮೆಲ್ಲರ ಯುವ ತಂಡವನ್ನ ನೋಡಿ ಹೋದ ಹಳ್ಳಿಗಳಲೆಲ್ಲಾ ಜನರ ಸ್ಪಂದನೆ ನಿರೀಕ್ಷೆಗೂ ಮೀರಿತ್ತು.
ಅದರಾಗ ಶಿವಾಜಿ ಕಾರ್ಮಿಕರ ಕುರಿತಾಗಿ, ಸಮಾಜದ ಕುರಿತು ಅದೆಷ್ಟೋ ವಿಚಾರಗಳನ್ನ ಓದ್ಕೊಂಡಿದ್ದಾ. ಸಮಾಜದ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡ್ತಾನ. ನಮ್ಮ ನಮ್ಮಲ್ಲೇ ವಿವಾದಗಳು ಶುರುವಾದ್ರೂ ನಾವು ಎಂದಿಗೂ ಜಗಳಾ ಮಾಡ್ಕೊಂಡಿಲ್ಲ. ನಮ್ಮ ಗುಂಪಿನ್ಯಾಗ ನಾನು, ಶಿವಾಜಿ, ದಿಲಿಪ್ ಕಾಮತ್ ಹಿಂಗ ಇನ್ನೂ ಮೂರ್ನಾಲ್ಕು ಮಂದಿ ಇದ್ವಿ. ಶಿವಾಜಿ ಎಂದಿಗೂ ಸಿಟ್ಟು ಮಾಡ್ಕೊಂಡವ ಅಲ್ಲಾ. ಆದ್ರ ವ್ಯವಸ್ಥೆಯ ಧೋರಣೆಗಳ ಬಗ್ಗೆ ಅವನಲ್ಲಿರೋ ಆ ಸಿಟ್ಟು ಅಷ್ಟಿಷ್ಟಿರಲಿಲ್ಲಾ. ಆಗ ಅವನ ಅಸಹಾಯಕತೆ ಅವನನ್ನ ಏನೂ ಮಾಡಾಕ ಕೊಡ್ತಿರ್ಲಿಲ್ಲ. ಆದ್ರೂ ಅನ್ಯಾಯ, ಶೋಷಣೆಗಳ ವಿರುದ್ಧವಾಗಿ ದ್ವನಿ ಎತ್ತೋದಂತೂ ಬಿಟ್ಟಿಲ್ಲ. ಪ್ರಾಮಾಣಿಕ ಮನುಷ್ಯ. ಎಲ್ಲರಿಗೂ ಬಾಳ ಬೇಗ ಹತ್ತಿರವಾಗ್ತಾನ. ಈಗಲೂ ಅವನ ಹಂತ್ಯೇಕ ಇರೋದು ಎರಡೋ ಮೂರೋ ಜೋಡಿ ಅರವಿ ಅಷ್ಟ. ಈಗ ಬಂದಿರೋ ದೇವರಾಜ್ ಅರಸ್ ಪ್ರಶಸ್ತಿ ಅದ್ಯಾವಾಗೋ ಬರಬೇಕಿತ್ತು. ಆದ್ರೂ ಪರವಾಗಿಲ್ಲ. ತಡವಾಗಿಯಾದ್ರೂ ಆ ಪ್ರಶಸ್ತಿಯನ್ನ ಪ್ರಾಮಾಣಿಕ ವ್ಯಕ್ತಿಗೆ ಕೊಡೋದರ ಮೂಲಕ ಆ ಪ್ರಶಸ್ತಿಗೊಂದು ಬೆಲೆ ಸಿಕ್ಕಂಗಾಗೇತಿ. ಅವನಿಗೆ ಪ್ರಶಸ್ತಿ ಬಂದೇತಿ ಅಂತ ವಿಚಾರ ತಿಳಿದಾಗ ನನಗೆ ಬಾಳ ಖುಷಿ ಆತು. ಇನ್ನೂ ಅವನ ಬಗ್ಗೆ ಹೇಳೋದು ಬಾಳ ಅದಾವ. ಅವನ ಜೀವನದುದ್ದಕ್ಕೂ ಸಮಾಜಕ್ಕಾಗಿ ಮಾಡಿದ ತ್ಯಾಗ., ಸಾಧನೆ ಪೆನ್ನು, ಪೇಪರಿನೊಳಗ ಬರಿಲಿಕ್ಕಾಗಲ್ಲ. ಅಂಥಾ ಬಾಲ್ಯದಿಂದ ಈಗಲೂ ಇದ್ದಂತ ಗೆಳೆಯ ಶಿವಾಜಿ.”

LEAVE A REPLY

Please enter your comment!
Please enter your name here