Homeಮುಖಪುಟವಿಜ್ಞಾನ ಸಂಸ್ಕೃತಿಯ ಹುಡುಕಾಟ : ಡಾ. ಟಿ.ಎಸ್.ಚನ್ನೇಶ್...

ವಿಜ್ಞಾನ ಸಂಸ್ಕೃತಿಯ ಹುಡುಕಾಟ : ಡಾ. ಟಿ.ಎಸ್.ಚನ್ನೇಶ್…

- Advertisement -
- Advertisement -

ಅನುರಣನ: 1

ನಮ್ಮ ಬಹುಪಾಲು ಸಂಸ್ಕತಿಯ ಚರ್ಚೆಗಳಲ್ಲಿ ವಿಜ್ಞಾನವು ಸ್ಥಾನವನ್ನು ಪಡೆದಿರುವುದಿಲ್ಲ. ವಿಜ್ಞಾನವೂ ಸಹ ಮಾನವ ನಿರ್ಮಿತಿಯನ್ನು ಒಳಗೊಂಡಿದ್ದು, ವಿಜ್ಞಾನಿಗಳೂ ಸಹ ಮಾನವ ಸಮುದಾಯ ಜೀವನವನ್ನೇ ನಡೆಸಿದ್ದರೂ ವಿಜ್ಞಾನ ಸಂಸ್ಕೃತಿಯನ್ನು ನಾವು ಅದೇಕೋ ಒಪ್ಪಿಕೊಂಡಂತಿಲ್ಲ. ನಮ್ಮೊಳಗೊಬ್ಬ ವಿಜ್ಞಾನಿಯನ್ನು ಹುಡುಕಿಕೊಳ್ಳುವ ಬಗೆಯನ್ನು ಸಹಜವಾಗಿ ಗಮನಿಸದ ಹಲವು ಸಮುದಾಯಗಳಲ್ಲಿ ಭಾರತೀಯರನ್ನೂ ಗುರುತಿಸಲಾಗುತ್ತದೆ. ಸಂಸ್ಕೃತಿಯನ್ನು ಸಮೀಕರಿಸುವ ಸಂಗತಿಗಳಲ್ಲಿ ಪುಸ್ತಕ, ಮಾನವಿಕ ಸಂಗತಿಗಳು, ಕೆಲವೊಂದು ಆಚರಣೆಗಳು, ಸಂಗೀತ, ಕಲೆ ಹಾಗೂ ಸಾಹಿತ್ಯ ಮಾತ್ರವೇ ವಸ್ತುಗಳಾಗಿರುವುದುಂಟು. ಇದು ಈಗ ನಮ್ಮೊಳಗಿನ ಸಂದರ್ಭದ ಪ್ರಶ್ನೆ ಮಾತ್ರವಲ್ಲ. ಪಶ್ಚಿಮದ ಸಮಾಜವೂ ಹಾಗೆಯೆ! ಸುಮಾರು 70 ವರ್ಷಗಳ ಹಿಂದೆಯೇ 1959ರ ಮೇ ತಿಂಗಳಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನಿ ಹಾಗೂ ಖ್ಯಾತ ಕಾದಂಬರಿಕಾರ ಡಾ. ಸಿ.ಪಿ.ಸ್ನೊ. ಅವರು “ಎರಡು ಸಂಸ್ಕೃತಿಗಳು “(The Two Cultures) ಎಂಬ ಶೀರ್ಷಿಕೆಯ ತಮ್ಮ ಭಾಷಣದಲ್ಲಿ ಇಂಗ್ಲೆಂಡಿನ ಸಮಾಜವನ್ನೇ ಕುರಿತು ಪ್ರಸ್ತಾಪಿಸಿದ್ದರು. ಅದೇ ವರ್ಷ ಅಕ್ಟೋಬರ್ ವೇಳೆಗೆ ಅದು ಪುಸ್ತಕವಾಗಿಯೂ ಪ್ರಕಟವಾಗಿತ್ತು.

ಡಾ. ಟಿ.ಎಸ್.ಚನ್ನೇಶ್

ಡಾ. ಸ್ನೊ, ಅವರು ಮಾನವಿಕ ಸಂಸ್ಕೃತಿ ಮತ್ತು ವಿಜ್ಞಾನ ಸಂಸ್ಕೃತಿ ಎಂಬುದಾಗಿ ಎರಡು ನೆಲೆಯಲ್ಲಿ ಚರ್ಚಿಸುತ್ತಾ ಅವುಗಳು ಯೂರೋಪಿನಲ್ಲೂ ಭಿನ್ನವಾದ ಮಾರ್ಗದಲ್ಲಿ ನಡೆಯುತ್ತಾ ಒಂದನ್ನೊಂದು ಸಮೀಕರಿಸದೆ ಇಡೀ ಮಾನವಕುಲದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗುವ ಆತಂಕವನ್ನು ಎತ್ತಿಹಿಡಿದಿದ್ದರು. ಬ್ರಿಟಿಷರ ಆಳ್ವಿಕೆಯಲ್ಲೆ ಎರಡು ಶತಮಾನ ಸವೆಸಿದ ಭಾರತೀಯ ಸಮಾಜವೂ ಇಂದೂ ಕೂಡ ವಸಾಹತು ಧೋರಣೆಯಿಂದ ಹೊರಬರದಂತಹ ಶೈಕ್ಷಣಿಕ ಮಾದರಿಯ ಅನುಭವದಲ್ಲಿದ್ದು ಇಲ್ಲಿಯೂ ವಿಜ್ಞಾನವು ಸಂಸ್ಕೃತಿಯ ಭಾಗವಾಗಿಯೇ ಇಲ್ಲ. ಎರಡನೆಯ ಮಹಾಯುದ್ಧದ ನಂತರದ ಅಭಿವೃದ್ಧಿಯ ಚಿಂತನೆಗಳಲ್ಲಿ ಜರ್ಮನಿಯ ಸಾಮಾಜಿಕ ಧೋರಣೆಗಳು ಹಾಗೂ ಅಮೆರಿಕದ ಶಿಕ್ಷಣ ಮಾದರಿಗಳು ವಿಜ್ಞಾನ ಮತ್ತು ಮಾನವಿಕ ಸಂಗತಿಗಳ ಮಿಳಿತದಿಂದ ಅಭಿವೃದ್ಧಿಯ ಚಿಂತನಾಕ್ರಮದ ಶೈಕ್ಷಣಿಕ ಕಲಿಕೆ ಹಾಗೂ ಚಿಂತನೆಗಳನ್ನು ರೂಢಿಗೊಳಿಸಿದ್ದನ್ನು ಕಾಣಬಹುದು. ಬ್ರಿಟಿಷರ ದಾಸ್ಯದಲ್ಲಿ ಆಡಳಿತ ಕ್ರಮಗಳ ರೂಢಿಸಿಕೊಂಡ ನಮ್ಮಲ್ಲಿ ಇಂದಿಗೂ ಸಂಸ್ಕೃತಿಯಲ್ಲಿ ಸಾಮಾಜಿಕ ಸಂಗತಿಗಳಷ್ಟೇ ಚರ್ಚೆಯ ವಸ್ತುವಾಗುತ್ತಿವೆ. ಇದಕ್ಕೆ ವಿಜ್ಞಾನ ಅಥವಾ ವಿಜ್ಞಾನಿಗಳೂ ಕಾರಣವಿರಬಹುದು.ಅಷ್ಟೇ ಪ್ರಬಲವಾಗಿ ಮಾನವಿಕ ಶಿಸ್ತಿನ ನಿರ್ಣಾಯಕರೂ ಕೂಡ!ಎಲ್ಲರೂ ತಮ್ಮ ಮಿತಿಯನ್ನು ತಮ್ಮದೇ ಗಡಿಯೊಳಗೆ ಗುರುತಿಸಿಕೊಂಡು ತಮ್ಮದೇ ಸಮಾಜವನ್ನು ಬಯಸುವಂತೆ ನಿರ್ಮಿಸಿಕೊಂಡಿದ್ದಾರೆ.ಇದೀಗ ಅಂತಹ ಚರ್ಚೆಗಳು ವಿಜ್ಞಾನದ ಸಮಾಜೀಕರಣದ ಹಿನ್ನೆಲೆಯಲ್ಲಿ ಪ್ರಮುಖವಾಗುತ್ತವೆ.

ವಿಜ್ಞಾನದ ಸಮಾಜೀಕರಣವನ್ನು ಸಂವಹನಕ್ಕೆ ತಳುಕುಹಾಕಿ ಅನೇಕರು, ಜನಸಾಮಾನ್ಯರ ಆಡುಭಾಷೆಗೆ ಒಂದಷ್ಟು ಅನುವಾದಗಳ ಕುರಿತು ಮಾತನಾಡುತ್ತಾರೆ. ಬಹುಪಾಲು ವಿಜ್ಞಾನದ ಬರಹಗಾರರು ಹೈಸ್ಕೂಲಿನ ಮಕ್ಕಳಿಗೆ ಅಥವಾ ಹೈಸ್ಕೂಲ್ ಓದಿನ ಹಿನ್ನೆಲೆಯ ಅಗತ್ಯಕ್ಕೆ ಬರೆಯುವ ಸಾಧ್ಯತೆಗಳ ಬಗ್ಗೆಯೂ ಹೇಳುವುದುಂಟು.ಇನ್ನು ವಿಜ್ಞಾನಿಗಳಾದರೂ, ತಾವು ಕೆಲಸ ಮಾಡುವ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗೆ ಒಪ್ಪಿಸಿದರೆ ಸಾಕು ಎಂದುಕೊಂಡಿದ್ದಾರೆ. ವಿಜ್ಞಾನ ಸಂಸ್ಥೆಗಳು ತಮ್ಮ ಸಾರ್ವಜನಿಕ ಸಂಪರ್ಕದ ನೆರವಿಗೆ ಬೇಕಾದ ಹಸ್ತಪತ್ರಿಕೆಗಳನ್ನು ಹೊರತಂದು ಹಂಚುತ್ತಾರೆ. ಒಂದಷ್ಟು ಆಗಾಗ್ಗೆ ಕೇಳುವ ಪ್ರಶ್ನೋತ್ತರಗಳ ಮಾದರಿಗಳನ್ನು ಸಿದ್ಧಪಡಿಸಿ ಅಣಿಯಾಗಿಸಿಕೊಂಡಿರಬಹುದಷ್ಟೇ! ಇಷ್ಟೆಲ್ಲದರ ನಡುವೆ ಸಾರ್ವಜನಿಕರೋ ವಿಜ್ಞಾನದ ತಿಳಿವಳಿಕೆಗಿಂತಲೂ ವಿಜ್ಞಾನಿಗಳಲ್ಲಿ ವೈಯಕ್ತಿಕ ಅನುಮಾನಗಳಿದ್ದರೆ ಅವರ ಖರ್ಚುವೆಚ್ಚಗಳ, ಪ್ರಾಜೆಕ್ಟ್ ನಿರ್ವಹಣೆಯ ಬಗೆಗೆ ಮಾಹಿತಿ ಹಕ್ಕಿನಲ್ಲಿ (ಆರ್.ಟಿ.ಐ) ಕೇಳುವ ಮಾತನಾಡಿಯಾರು!ಒಟ್ಟಾರೆ ವಿಜ್ಞಾನವೂ ಸೃಜಿಸುವ ಸತ್ಯ ಹಾಗೂ ಸೌಂದರ್ಯದ, ಜೊತೆಗೆ ಅದರ ನಿರ್ಮಿತಿ ಮತ್ತು ವಿಕಾಸದ ಬೆರಗಿನ ಕುರಿತಂತೆ, ಮಾನವತೆಯ ಮಿಳಿತದ ಕುರಿತು, ಭಾರತೀಯ ಸಂದರ್ಭದಲ್ಲಿಯಂತೂ ಚರ್ಚೆಗಳು ಕಡಿಮೆಯೆ.ಇದಕ್ಕಿಂತಲೂ ಹೆಚ್ಚಿನ ಸಂಗತಿಗಳೆಂದರೆ ವಿಜ್ಞಾನವನ್ನು ಸುಲಭವಾದ ಭಾಷೆಗೆ ಒಗ್ಗಿಸುವ ಸಾಹಸ ಹಾಗೂ ಕಷ್ಟಗಳ ಬಗೆಗೆ ಬೇಕಾದಷ್ಟು ಸರಕುಗಳನ್ನು ಒದಗಿಸುವ ಜಾಣತನಗಳೂ ಸಿಗಬಹುದು.

ಮಾನವಿಕ ಸಂಗತಿಗಳನ್ನು ಸಾಂಸ್ಕೃತಿಕ ಚರ್ಚೆಗಳಲ್ಲಿ ಪರಿಭಾವಿಸುವ ಹಿನ್ನೆಲೆಯಲ್ಲಿ ಭಾಷೆಯ ಪ್ರಯೋಗಗಳು, ಆ ಮೂಲಕ ಸಾಹಿತ್ಯದ ಸಂಗತಿಗಳು ಪ್ರಮುಖವಾಗಿವೆ. ವಿಜ್ಞಾನದ ಭಾಷೆಯೆಂದೇ ಪರಿಭಾವಿಸುವ ಗಣಿತವನ್ನು ಸಾಮಾಜಿಕ ಧೋರಣೆಗಳಲ್ಲಿ ತೀರಾ ಒಣಸಂಖ್ಯೆಯ ಆಟಗಳಂತೆ ನೇರ ಉಪಯೋಗಗಳನ್ನು ತಿಳಿಯದ ಸಂದರ್ಭಗಳನ್ನು ಉಲ್ಲೇಖಿಸಬಹುದು.ಆದರೆ ನಿಸರ್ಗದ ಸೌಂದರ್ಯವೂ ಗಣಿತೀಯವಾದ ವಿವರಗಳನ್ನು ಒಳಗೊಂಡ ಬಗೆಗೆ ಚರ್ಚೆಗಳಾಗುವುದಿಲ್ಲ.ನಿಸರ್ಗದ ಜೋಡಣೆಗಳಲ್ಲಿ ತೆರೆದುಕೊಂಡ ಸೌಂದರ್ಯದ ವಿವರಗಳು ಗಣಿತೀಯ ಎಂಬುದು ತಿಳಿವಿನಲ್ಲಿಲ್ಲ.

ಖ್ಯಾತ ಗಣಿತಜ್ಞ ಹಾಗೂ ದಾರ್ಶನಿಕರಾದ ಬರ್ಟಂಡ್ ರಸೆಲ್ ಅವರು “ಗಣಿತವು ಕೇವಲ ಸತ್ಯ ಮಾತ್ರವಲ್ಲ, ಅದ್ವಿತೀಯ ಸೌಂದರ್ಯವುಳ್ಳದ್ದು – ಈ ಸೌಂದರ್ಯವು ಶಾಂತ ಹಾಗೂ ಗಂಭೀರ ಸ್ವಭಾವದ್ದು ಎನ್ನುತ್ತಾರೆ. ಒಂದು ಬಗೆಯಲ್ಲಿ ಶಿಲ್ಪದಂತೆ! ಅದನ್ನು ಆಸ್ವಾದಿಸುವ ಮನಸ್ಸಿರದ ಹೊರತು, ಖುಷಿಕೊಡದ ಸಂಗೀತದಂತೆ, ಕಲೆಯಂತೆ” ಎನ್ನುತ್ತಾರೆ.”ಇದನ್ನು ಆಘ್ರಾಣಿಸಲು ನಾವು ಕೇವಲ ಮಾನವರಾಗಿದ್ದರಷ್ಟೇ ಸಾಲದು!ನಮ್ಮೊಳಗಿನ ಹೃದಯ ಮತ್ತು ಆನಂದಿಸುವ ವಿಶಾಲ ಮನಸ್ಸನ್ನು ತೆರೆದಿಟ್ಟಿರಬೇಕು.ಗಣಿತವಂತೂ ನಿಜಕ್ಕೂ ಅತ್ಯದ್ಭುತ ಕಾವ್ಯ” ಎಂದು ಹೇಳುತ್ತಾರೆ.

ವಿಜ್ಞಾನವನ್ನು ದಾರ್ಶನಿಕತೆಯ ಹಿನ್ನೆಲೆಯಲ್ಲಿ ನೋಡುವ ಕ್ರಮದಿಂದಂತೂ ಹತ್ತು ಹಲವು ವೈಚಿತ್ರಗಳು ಇತಿಹಾಸದ ಉದ್ದಕ್ಕೂ ಜರುಗಿವೆ. ವಿಜ್ಞಾನವನ್ನು ಸೌಂದರ್ಯವನ್ನು ಅರಿಯದ ಒಣತಾತ್ಸಾರಗಳ ಪ್ರತಿಮೆಗಳಾಗಿಸಿ ಹಂಗಿಸುವವರಿದ್ದಾರೆ. ಅದನ್ನು ಹಟಮಾರಿ ಎನ್ನುವವರೂ ಇದ್ದಾರೆ.ಅದನ್ನು ಪ್ರತಿಷ್ಟೆಗಳ ಪರಾಕಾಷ್ಟೆ ಎಂದೂ ಪಕ್ಕಕ್ಕೆ ತಳ್ಳುವವರಿದ್ದಾರೆ. ಇಂತಹ ಮಾತುಗಳನ್ನು ತುಂಬಾ ಹಿಂದಿನ ವಿವೇಚನಾಶೀಲ ಮನಸ್ಸುಗಳಿಂದಲೂ ಕೇಳಿರುವ, ದಾಖಲಿಸಿರುವ ಉದಾಹರಣೆಗಳಿಗೇನೂ ಕಡಿಮೆ ಇಲ್ಲ. “Poetry is about feeling, science is about facts. They’re nothing to do with each other!”  ಇದು ರೂಢಿಗೆ ಬಂದದ್ದು ಖ್ಯಾತ ಕವಿ ಜಾನ್ ಕೀಟ್ಸ್ ಅವರಿಂದ!ಆತ ಮುಂದುವರೆದು “ವಿಜ್ಞಾನವು ನಿಗೂಢತೆಗಳನ್ನು ಒಡೆಯುವ ಕುತಂತ್ರವುಳ್ಳದೆಂದೂ, ಒಂದು ಬಗೆಯಲ್ಲಿ ಸೌಂದರ್ಯವನ್ನು ಹಾಳುಗೆಡಹಲು ದೇವತೆಯ ರೆಕ್ಕೆಗಳನ್ನು ಕತ್ತರಿಸುವ ಕೆಲಸ ಮಾಡುತ್ತದೆ” ಎಂದೂ ವಿವರಿಸಿದ್ದರು.ನ್ಯೂಟನ್ ಮಳೆಬಿಲ್ಲಿನ ವಿವರಗಳ ಪತ್ತೆ ಹಚ್ಚಿ ಕವಿಗಳಿಗೆ ನಿರಾಸೆ ಮಾಡಿದರೆಂದೇ ಕೀಟ್ಸ್ ಹಳಹಳಿಸುತ್ತಾರೆ.ಮಳೆಬಿಲ್ಲಿನ ವೈಜ್ಞಾನಿಕತೆಯ ರಸವತ್ತತೆಯನ್ನು ಬಿಡಿಸಿ ಬಣ್ಣಗಳಾಗಿಸುವ ಸೌಂದರ್ಯವನ್ನು ಅದ್ಭುತ ಕವಿಯಾದ ಕೀಟ್ಸ್ ಆಸ್ವಾದಿಸಲು ಅಸಾಧ್ಯವಾಗಿದ್ದು ಆತನ ಹಟಮಾರಿತನವೋ ಏನೋ, ಸದ್ಯಕ್ಕೆ ಇದನ್ನಿಲ್ಲಿಗೇ ಬಿಡೋಣ.

ವಿಜ್ಞಾನವಾಗಲಿ ಅಥವಾ ಕಾವ್ಯವಾಗಲಿ ಅವುಗಳೆರಡರ ಆಳದಲ್ಲಿ ಹುಡುಕಾಟದ ಬೆರಗೊಂದಿದೆ. ಎರಡೂ ತಮ್ಮ ವಿಕಾಸದಲ್ಲಿ ಉತ್ತೇಜಿಸುವ, ಉನ್ಮಾದ ತರುವ ಲಕ್ಷಣಗಳನ್ನು ಹೊತ್ತಿವೆ. ಕ್ರಿಸ್ತಪೂರ್ವ 6 ಹಾಗೂ 5ನೆಯ ಶತಮಾನದಲ್ಲೇ ಅಂದರೆ ಸಾಕ್ರಟೀಸ್, ಥೇಲ್ಸ್ ಮುಂತಾದವರ ಬದುಕಿನ ಮೊದಲ ದಿನಗಳಲ್ಲೇ ಸತ್ಯದ ಹುಡುಕಾಟಕ್ಕೆ ರೂಪಕಗಳ, ವೈವಿಧ್ಯಮಯ ಉದಾಹರಣೆಗಳ ಮೊರೆಹೊಕ್ಕಿರುವುದನ್ನು ಕಾಣುತ್ತೇವೆ. ತಮಗರಿವಿಲ್ಲದಂತೆ ಭೌತವೈಜ್ಞಾನಿಕ, ರಸಾಯನಿಕತೆಗಳ, ಭೂಮಿ ಕುರಿತ ಕೌತುಕಗಳ, ಅಷ್ಟೇಕೇ ಜಗತ್ತಿನ ಎಲ್ಲಾ ಆಗುಹೋಗುಗಳ ಊಹೆಗಳನ್ನೂ ಸೃಜಿಸಿ ಆನಂದಿಸಿದರು. ಕಾವ್ಯಗಳ ಮೂಲಕ ವಿಜ್ಞಾನದ ಸೃಷ್ಟಿಗೆ ಅಡಿಪಾಯವನ್ನು ಹಾಕಿದರು.ಇದನ್ನು ಅದರ ಆಳದ ಪ್ರೀತಿಯಿಂದ ಅರಿಯದೆ ಕೀಟ್ಸ್ ಅಲ್ಲದೆ ಚರ್ಚಿಲ್ ಅಂತಹವರೂ ಮುಂದುವರೆಸಿ ವಿಜ್ಞಾನವನ್ನು “ವಿಲನ್” ಆಗಿಸುವ ಚಟಕ್ಕೆ ಕಾರಣರಾದರು. 18ನೆಯ ಶತಮಾನದ ಎರಾಸ್ ಮಸ್ ಡಾರ್ವಿನ್ ಅವರಂತಹ ಚಿಂತಕರು “ನಿಸರ್ಗದ ದೇವಾಲಯ” ಎನ್ನುವಂತಹ ಪದ್ಯಗಳನ್ನೂ ಬರೆದರು. ಇದರಲ್ಲಿ ನಿಸರ್ಗದ ವಿಕಾಸದಂತಹ ವೈಜ್ಞಾನಿಕ ಸತ್ಯವನ್ನೂ ಕಾವ್ಯದ ರೂಪಕಗಳಲ್ಲಿ, ಹಿಡಿದಿಟ್ಟಿದ್ದಾರೆ.ಕಾಣದ ಸೂಕ್ಷ್ಮ ಜೀವಿಯಿಂದ, ಮಾನವನವರೆಗೂ ವಿಕಾಸದ ಹಾದಿಯ ಸೌಂದರ್ಯವನ್ನು ಕಂಡಿದ್ದಾರೆ.ಆಧುನಿಕ ಜಗತ್ತಿನ ಮನುಕುಲವು ಜ್ಞಾನದ ಹುಡುಕಾಟವನ್ನು ಭೌತವಿಜ್ಞಾನ, ರಸಾಯನಿಕ ವಿಜ್ಞಾನ ಜೀವಿವಿಜ್ಞಾನ, ಭೂವಿಜ್ಞಾನ ಮುಂತಾದ ದಾರಿಗಳ ವಿವಿಧತೆಯನ್ನು ನಿರ್ಮಿಸಿ ಹಲವು ಮಾರ್ಗೋಪಾಯಗಳನ್ನು ಹೇಳಿಕೊಟ್ಟಿದೆ.ಅಂತಿಮವಾಗಿ ಎಲ್ಲವೂ ಒಂದೇ ಗುರಿಯನ್ನು ಹೊಂದಿವೆ, ವಿವಿಧ ದಾರಿಗಳ ಸೌಂದರ್ಯವನ್ನು ವಿಕಾಸಗೊಳಿಸಿವೆ. ತೀರಾ ಒಣಸಂಗತಿಗಳ ಗಣಿತದಿಂದಲೇ ಮುಂದುವರೆಸಿ ನೋಡೋಣ.

(ಡಾ. ಟಿ.ಎಸ್.ಚನ್ನೇಶ್‌ರವರು ಸೆಂಟರ್‌ ಫಾರ್‌ ಪಬ್ಲಿಕ್‌ ಅಂಡರ್‌ ಸ್ಟ್ಯಾಂಡಿಂಗ್‌ ಆಫ್‌ ಸೈನ್ಸ್‌ ಬೆಂಗಳೂರಿನಲ್ಲಿ ಕಾರ್ಯನಿರತರು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...