ಜನವಾದಿ ಮಹಿಳಾ ಸಂಘಟನೆಯಿಂದ “ಪ್ರಜಾಪ್ರಭುತ್ವ ಉಳಿಸಿ” ಅಭಿಯಾನ: ಸ್ಪೀಕರ್ ಗೆ ಪತ್ರಚಳವಳಿ

ಜನವಾದಿ ಮಹಿಳಾ ಸಂಘಟನೆಯಿಂದ “ಪ್ರಜಾಪ್ರಭುತ್ವ ಉಳಿಸಿ” ಅಭಿಯಾನದ ಭಾಗವಾಗಿ ಕರ್ನಾಟಕದ ಸ್ಪೀಕರ್ ಅವರಿಗೆ ಜನರ ಆಗ್ರಹ ಕಳುಹಿಸಲು ಕರೆ ನೀಡಲಾಗಿದೆ.  ವೈಯಕ್ತಿಕವಾಗಿ, ಸಂಘ ಸಂಸ್ಥೆಗಳ ಹೆಸರಿನಲ್ಲಿಯೂ ಈ ಮೇಲ್ ಮೂಲಕ ಕಳಿಸಲು ಕೋರಿದ್ದು, ಮೌನ ಮುರಿದು ಎಲ್ಲ ಹಂತದಲ್ಲೂ ಮಾತಾಡೋಣ. ಹೆಜ್ಹೆಗಳು ಹೆಚ್ಚಲಿ ಎಂದು ಸಂಘಟನೆಯ ಮುಂದಾಳುಗಳಾದ ಕೆ.ನೀಲಾರವರು ತಿಳಿಸಿದ್ದಾರೆ.

ಸ್ಪೀಕರ್ ರವರಿಗೆ ಕಳಿಸಲು ಮಾದರಿ ಪತ್ರವೊಂದನ್ನು ಸಿದ್ದ ಮಾಡಲಾಗಿದ್ದು ಅದರ ಪೂರ್ಣ ಪಾಠ ಇಲ್ಲಿದೆ

ಮಾನ್ಯ ಸಭಾಧ್ಯಕ್ಷರು
ಕರ್ನಾಟಕ ವಿಧಾನಸಭೆ
ವಿಧಾನ ಸೌಧ
ಬೆಂಗಳೂರು

ಮಾನ್ಯರೆ

ವಿಶ್ವದೆದುರು ಕರ್ನಾಟಕ ನಾಚಿ ತಲೆ ತಗ್ಗಿಸುವ ಕೆಲಸ ಕರ್ನಾಟಕದಲ್ಲಿ ನಡೆಯುತ್ತಿದೆ. ಶಾಸಕರು ಮೂಕಪ್ರಾಣಿಗಳಂತೆ ಬಿಕರಿಗೊಳಗಾಗುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.

ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ, ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರುಗಳು ರಾಜಾರೋಷವಾಗಿ ‘ಅತೃಪ್ತ’ ಶಾಸಕರ ಜೊತೆ ನಿಂತಿರುವುದು, ಪಕ್ಷದ ಪ್ರಮುಖರ ವಿಶೇಷ ವಿಮಾನಗಳಲ್ಲಿ ಶಾಸಕರನ್ನು ಕರೆದೊಯ್ಯುತ್ತಿರುವುದು ಮಾಧ್ಯಮಗಳ ಮೂಲಕ ಜಗಜ್ಜಾಹಿರವಾಗಿದೆ.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕುಡಿಯುವ ನೀರಿಗೂ ತತ್ವಾರವಾಗಿದೆ. ಮಳೆ ಕೈಕೊಟ್ಟು ರೈತರು ಕೂಲಿಕಾರರು ಕಂಗಾಲಾಗಿ ಊರು ಕೇರಿ ಬಿಟ್ಟು ನಗರಗಳತ್ತ ತುತ್ತು ಕೂಳಿಗಾಗಿ ಗುಳೆ ಹೊರಟಿದ್ದಾರೆ. ಮಹಿಳೆಯರು ಮಕ್ಕಳ ಮೇಲೆ, ಹಿಂಸೆ ಅತ್ಯಾಚಾರಗಳು ಹೆಚ್ಚಿವೆ.
ದಲಿತರ ಮೇಲೆ,ಅಲ್ಪಸಂಖ್ಯಾತರ ಮೇಲೆ ಜಾತಿ ಕೋಮಿನ ನೆಲೆಯ ದೌರ್ಜನ್ಯಗಳು ವರದಿಯಾಗುತ್ತಲೇ ಇವೆ.

ಈ ಯಾವ ವಿಷಯಗಳ ಕುರಿತೂ ತಲೆ ಕೆಡಿಸಿಕೊಳ್ಳದೆ ಹೊಣೆಗೇಡಿತನದಿಂದ ವರ್ತಿಸುತ್ತಿರುವ ರೆಬೆಲ್(!?) ಶಾಸಕರು ಮತ್ತು ಭಾರತೀಯ ಜನತಾ ಪಕ್ಷದ ನಡವಳಿಕೆಗಳು ಪ್ರಜಾಪ್ರಭುತ್ವಕ್ಕೆ ಮತ್ತು ಮತದಾರರಿಗೆ ಮಾಡುತ್ತಿರುವ ಅವಮಾನವಾಗಿದೆ. ಈಗ ರಾಜಿನಾಮೆ ಕೊಟ್ಟಿರುವ ಯಾವ ಶಾಸಕರೂ ಜನಹಿತ ಅಥವಾ ತಮ್ಮ ಕ್ಷೇತ್ರದ ಮತದಾರರ  ಹಿತದ ದೃಷ್ಟಿಯಿಂದ ರಾಜಿನಾಮೆ ಕೊಟ್ಟಿರುವುದಿಲ್ಲ. ಅವರಲ್ಲಿ ಹಣ ಮತ್ತು ಅಧಿಕಾರದ ಲಾಲಸೆ ಇರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.

ಆದ್ದರಿಂದ ರಾಜ್ಯದ ಮತದಾರರಾದ ನಾವು ತಮ್ಮಲ್ಲಿ ಈ ಕೆಳಗಿನಂತೆ ಅರಿಕೆ ಮಾಡಿಕೊಳ್ಳುತ್ತಿದ್ದೇವೆ. ಯಾವುದೇ ಕಾರಣಕ್ಕೂ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬಾರದು. ಮತ್ತು ಅವರು ಜನಹಿತ ಕಾಪಾಡಲು ಬದ್ಧರಾಗಿಲ್ಲದ ಕಾರಣ ಅವರನ್ನು ಅನರ್ಹಗೊಳಿಸಬೇಕೆಂದೂ ವಿನಂತಿಸುತ್ತೇವೆ.

ಸಾರ್ವಜನಿಕ ಹಿತದೃಷ್ಟಿಯಿಂದ ಇನ್ನು ಮುಂದೆ ಈ ರೀತಿಯ ಕುದುರೆ ವ್ಯಾಪಾರಕ್ಕೆ ಶಾಸಕರು ಒಳಗಾಗದಂಥಹ ಒಂದು ಕಟ್ಟುನಿಟ್ಟಾದ ಕಾನೂನು ಬರುವಂತೆ ತಾವು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here