Homeಮುಖಪುಟ'ಆರ್‌ಎಸ್‌ಎಸ್ ಬ್ಯಾನ್‌ ಮಾಡಿ' - ಅಕಾಲ್ ತಖ್ತ್ ಮುಖ್ಯಸ್ಥ ಗಿಯಾನಿ ಹರ್ ಪ್ರೀತ್ ಸಿಂಗ್

‘ಆರ್‌ಎಸ್‌ಎಸ್ ಬ್ಯಾನ್‌ ಮಾಡಿ’ – ಅಕಾಲ್ ತಖ್ತ್ ಮುಖ್ಯಸ್ಥ ಗಿಯಾನಿ ಹರ್ ಪ್ರೀತ್ ಸಿಂಗ್

- Advertisement -
- Advertisement -

ವಿಜಯದಶಮಿಯ ದಿನ ಭಾರತ ‘ಹಿಂದೂ ರಾಷ್ಟ್ರ’ ಎಂದು ಆರ್.ಎಸ್.ಎಸ್ ಪ್ರಮುಖ್‌ ಮೋಹನ್ ಭಾಗವತ್ ಕರೆಕೊಟ್ಟಿದ್ದನ್ನು ಸಿಖ್ ನ ಅಕಲ್ ತಖ್ತ್ ನ ಕಾರ್ಯಕಾರಿ ಮುಖ್ಯಸ್ಥ ಗಿಯಾನಿ ಹರ್ ಪ್ರೀತ್ ಸಿಂಗ್ ಬಲವಾಗಿ ಖಂಡಿಸಿದ್ದು RSS ಅನ್ನು ಬ್ಯಾನ್‌ ಮಾಡಿ ಎಂದು ಆಗ್ರಹಿಸಿದ್ದಾರೆ.

ಆರ್.ಎಸ್.ಎಸ್ ನೀಡಿರುವ ವ್ಯಾಖ್ಯಾನ ಭಾರತದಲ್ಲಿ ಬದುಕುತ್ತಿರುವ ಬೇರೆ ಧರ್ಮೀಯರಿಗೆ ಮಾಡಿದ ಅಪಮಾನ. ಆರ್.ಎಸ್.ಎಸ್ ನೀಡುವ ತಲೆಬುಡವಿಲ್ಲದ, ಅರ್ಥರಹಿತ ಹೇಳಿಕೆಗಳು ಮುಂದೊಂದು ದಿನ ಸಮಗ್ರ ಭಾರತವನ್ನು ಒಡೆದು ಹಾಕಲಿದೆ ಎಂದು ಕಿಡಿಕಾರಿದ್ದಾರೆ.

ಆರ್.ಎಸ್.ಎಸ್‌ನ ಹಿಂದೂ ರಾಷ್ಟ್ರ ಸಿದ್ಧಾಂತ, ನೀತಿ ಮತ್ತು ಕಾರ್ಯಗಳು ದೇಶದ ಹಿತಾಸಕ್ತಿಗೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ಆರ್ ಎಸ್ ಎಸ್ ನ್ನು ನಿಷೇಧ ಮಾಡಬೇಕು ಎಂದು ಎಂದು ಗಿಯಾನಿ ಹರ್ ಪ್ರೀತ್ ಸಿಂಗ್ ಒತ್ತಾಯಿಸಿದ್ದಾರೆ.

ಪಂಜಾಬ್ ನ ಅಮೃತಸರದಲ್ಲಿ ಮಾಧ್ಯದೊಂದಿಗೆ ಮಾತನಾಡಿದ ಗಿಯಾನಿ ಹರ್ ಪ್ರೀತ್ ಸಿಂಗ್, ಆರ್.ಎಸ್.ಎಸ್ ನೀಡಿರುವ ‘ಹಿಂದೂ ರಾಷ್ಟ್ರ’ ಹೇಳಿಕೆ ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ವಿಜಯದಶಮಿಯ ದಿನ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ‘ಹಿಂದೂ ರಾಷ್ಟ್ರ’ ಎಂದು ಕರೆ ಕೊಟ್ಟಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ಆರ್.ಎಸ್.ಎಸ್ ಎಲ್ಲಾ ಧರ್ಮದವರನ್ನೂ ಹಿಂದೂಗಳೆಂದು ಬಿಂಬಿಸಲು ಹೊರಟಿದೆ. ದೇಶದಲ್ಲಿ ಬೇರೆ ಬೇರೆ ಧರ್ಮೀಯರು ಇದ್ದಾರೆ. ಅವರೆಲ್ಲಾ ಹಿಂದೂಗಳಾಗಲು ಹೇಗೆ ಸಾಧ್ಯ..? ಸಿಖ್ಖರು, ಜೈನರು, ಬೌದ್ಧರು ಸೇರಿದಂತೆ ಹಲವು ಧರ್ಮದವರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಎಲ್ಲರಿಗೂ ಸಂವಿಧಾನದ ಅಡಿಯಲ್ಲಿ ಸ್ವಾತಂತ್ರ್ಯ ನೀಡಲಾಗಿದೆ. ಆದರೆ ಆರ್.ಎಸ್.ಎಸ್ ಇದನ್ನೆಲ್ಲಾ ಅರ್ಥ ಮಾಡಿಕೊಂಡಿಲ್ಲ. ದೇಶದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಗಿಯಾನಿ ಆರೋಪಿಸಿದ್ದಾರೆ.

ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಬಿಜೆಪಿ ನಾಯಕರು ಸಾಕಷ್ಟು ಹೇಳಿಕೆಗಳನ್ನು ನೀಡಿದರು. ಅದರಲ್ಲಿ ಇನ್ನು ಮುಂದೆ ಕಾಶ್ಮೀರಿ ಹುಡುಗಿಯರನ್ನು ಮದುವೆಯಾಗಲು ಇರುವ ಅಡ್ಡಿಯೂ ಹೋಗುತ್ತದೆ ಎಂದು ಹೇಳಿದ್ದರು. ಇಂತಹ ಹೇಳಿಕೆಗಳು ಮಹಿಳೆಯರ ಗೌರವ, ಸ್ಥಾನಮಾನಕ್ಕೆ ಧಕ್ಕೆ ತರುವಂತವು. ಕಾಶ್ಮೀರಿ ಮಹಿಳೆಯರೂ ಕೂಡ ನಮ್ಮ ಸಮಾಜದ ಭಾಗವಾಗಿದ್ದಾರೆ. ಅವರ ಗೌರವ ಕಾಪಾಡುವುದು ನಮ್ಮ ಕರ್ತವ್ಯ. ಎಲ್ಲಾ ಕಾಶ್ಮೀರಿ ಮಹಿಳೆಯರ ಗೌರವ ಕಾಪಾಡಲು ಸಿಖ್ಖರು ಮುಂದೆ ಬರಬೇಕು ಎಂದು ಕರೆ ನೀಡಿದರು.

ಮೋಹನ್ ಭಾಗವತ್ ರ ಹೇಳಿಕೆ ನೀಡಿದ ದಿನವೇ ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು. ಆ ದಿನವೇ ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ (ಎಸ್.ಜಿ.ಪಿ.ಸಿ) ಗೋಬಿಂದ್ ಸಿಂಗ್ ಲಾಂಗೋವಲ್ ಖಂಡಿಸಿದ್ದರು. ಭಾರತ ಹಿಂದೂ ರಾಷ್ಟ್ರ ಎಂದು ನೀಡಿರುವ ಹೇಳಿಕೆ ಖಂಡನಾರ್ಹ. ಸಂವಿಧಾನದಲ್ಲಿ ಎಲ್ಲಾ ಧರ್ಮದವರಿಗೂ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಎಸ್.ಜಿ.ಪಿ.ಸಿ ಯನ್ನು ಸಿಖ್ ಧರ್ಮದ ಸಂಸತ್ತು ಎಂದೇ ಕರೆಯಲಾಗುತ್ತದೆ. ಅಲ್ಲದೇ ಸಮುದಾಯದ ಎಲ್ಲಾ ಗುರುದ್ವಾರಗಳು ಎಸ್.ಜಿ.ಪಿ.ಸಿ ಅಡಿಯಲ್ಲೇ ಧಾರ್ಮಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತವೆ. ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆ ಮೂಲಕ ಮಾಡಲಾಗುತ್ತದೆ. ಸಿಖ್ ಧರ್ಮದ ಮತದಾರರು ತಮ್ಮ ಪದಾಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇನ್ನು 2004ರಲ್ಲಿ ಅಕಾಲ್ ತಖ್ತ್ ಸಿಖ್ಖರು, ಆರ್.ಎಸ್.ಎಸ್ ಅಂಗಸಂಸ್ಥೆಯಾದ ರಾಷ್ಟ್ರೀಯ ಸಿಖ್ ಸಂಗತ್ ನಿಂದ ದೂರವಿರಬೇಕು ಎಂದು ಕೇಳಿಕೊಳ್ಳಲಾಗಿತ್ತು. ರಾಷ್ಟ್ರೀಯ ಸಿಖ್ ಸಂಗತ್, ಸಿಖ್ ಧರ್ಮದ ವಿಚಾರಧಾರೆಗಳ ವಿರುದ್ಧವಾಗಿದೆ. 2017ರಲ್ಲಿ ಅಕಾಲ್ ತಖ್ತ್ ನ ಮುಖ್ಯಸ್ಥ ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಸಿಖ್ ಸಂಗತ್ ಆಯೋಜಿಸಿತ್ತು. ಆದರೆ ಇದು ಸಿಖ್ಖರ ವಿರುದ್ಧವಾಗಿದೆ ಎಂದು ಅಕಾಲ್ ತಖ್ತ್ ಮುಖ್ಯಸ್ಥ ಗಿಯಾನಿ ಗುರುಬಚ್ಚನ್ ಸಿಂಗ್ ಟೀಕಿಸಿದ್ದರು.

ಸಿಖ್ಖರಿಗೆ ಪ್ರತ್ಯೇಕ ಇತಿಹಾಸ, ಆಚಾರ-ವಿಚಾರ, ಪದ್ಧತಿ, ಸಂಪ್ರದಾಯವಿದೆ. ಧರ್ಮದ ಆಚರಣೆಗಳು, ನಂಬಿಕೆಗಳು, ನೀತಿ ಸಂಹಿತೆಗಳೂ ಬೇರೆಯಾಗಿವೆ. ನಮ್ಮ ನಂಬಿಕೆ, ಮತ್ತು ರೀತಿ-ರಿವಾಜುಗಳಲ್ಲಿ ಇತರರು ಹಸ್ತಕ್ಷೇಪ ಮಾಡುವುದನ್ನು ಹೇಗೆ ತಾನೇ ಸಹಿಸಿಕೊಳ್ಳಲು ಸಾಧ್ಯ..? ಎಂದು ಗಿಯಾನಿ ಗುರುಬಚ್ಚನ್ ಸಿಂಗ್ ಪ್ರಶ್ನಿಸುತ್ತಾರೆ.

ಇತ್ತ ಕಾಂಗ್ರೆಸ್, ಬಿಜೆಪಿ, ಶಿರೋಮಣಿ ಅಕಾಲಿ ದಳದ ಮಧ್ಯೆ ಅಕಾಲ್ ತಖ್ತ್ ಸಿಕ್ಕಿಹಾಕಿಕೊಂಡಿದೆ. ಕೇಂದ್ರ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್, ಅಕ್ಟೋಬರ್ 12ರಂದು ಗುರುನಾನಕ್ ಅವರ 550ನೇ ಜನ್ಮ ದಿನಾಚರಣೆಯನ್ನು ಜಂಟಿಯಾಗಿ ಆಚರಿಸೋಣವೆಂದು ಕೇಳಿದ್ದ ಕಾಂಗ್ರೆಸ್ ನ್ನು ದೂಷಿಸಿದರು. ಕಾಂಗ್ರೆಸ್ ದುರಹಂಕಾರದ ದುರ್ವರ್ತನೆ ತೋರುತ್ತಿದೆ. ಅಕಾಲ್ ತಖ್ತ್ ಗಿಂತ ಮೇಲ್ಮಟ್ಟದಲ್ಲಿದೆ ಎಂಬ ಭಾವನೆಯಿಂದ ಮೆರೆಯುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಶಿರೋಮಣಿ ಅಕಾಲಿ ದಳ, ಉದ್ದೇಶಪೂರ್ವಕವಾಗಿ ಅವಮಾನ ಮಾಡುತ್ತಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.

ಒಟ್ಟಿನಲ್ಲಿ ಮೋಹನ್ ಭಾಗವತ್ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಸಂವಿಧಾನ ಮತ್ತು ದೇಶದ ಜನರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕೃಪೆ: ದಿ ವೈರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಕೊಲೆಗೆ ರಾಜಕೀಯ ಬಣ್ಣ ಬಳಿದ ಅಣ್ಣಾಮಲೈ: ಪ್ರಕರಣ ದಾಖಲು

0
ಮಹಿಳೆಯೋರ್ವರ ಸಾವಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ...