Homeಅಂಕಣಗಳುರಾಜಕೀಯಾರ್ಥಿಕ ವಿಶ್ಲೇಷಕ ಧೃವ್ ರಾಠೀ ಬಗ್ಗೆ ನಿಮಗೆಷ್ಟು ಗೊತ್ತು?

ರಾಜಕೀಯಾರ್ಥಿಕ ವಿಶ್ಲೇಷಕ ಧೃವ್ ರಾಠೀ ಬಗ್ಗೆ ನಿಮಗೆಷ್ಟು ಗೊತ್ತು?

- Advertisement -
- Advertisement -

ಮುತ್ತುರಾಜ್ |

ಪುಲ್ವಾಮ ದಿ ಹಾರ್ಸ್ ರಿಯಾಲಿಟಿ! ಎಂಬ ಟೈಟಲ್‍ನಲ್ಲಿ ಪುಲ್ವಾಮ ಘಟನೆಯ ಸತ್ಯಾಸತ್ಯತೆಗಳ ಬಗ್ಗೆ ಅದರ ಸುತ್ತಾ ಎದ್ದಿರುವ ಪ್ರಶ್ನೆಗಳ ಕುರಿತು ಮಾತನಾಡಿದ ಯುವಕನೊಬ್ಬ ವಿಡಿಯೋವೊಂದನ್ನು ಮಾಡಿ, 15 ದಿನಗಳ ಹಿಂದೆ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡುತ್ತಾನೆ. ಅದನ್ನು ಎಷ್ಟು ಜನ ವೀಕ್ಷಣೆ ಮಾಡಿದ್ದಾರೆ ಗೊತ್ತಾ? ಬರೋಬ್ಬರಿ 41 ಲಕ್ಷ ಆ ವಿಡಿಯೋ ವೀಕ್ಷಿಸುವುದಲ್ಲದೇ ಅದು ಭಾರತದಲ್ಲೇ #3 ಆಗಿ ಟ್ರೆಂಡಿಂಗ್ ಆಗುತ್ತದೆ. ಈ ರೀತಿಯ 144 ವಿಡಿಯೋಗಳನ್ನು ಇದುವರೆಗೂ ತನ್ನ ಯೂ ಟೂಬ್ ಚಾನಲ್‍ನಲ್ಲಿ ಪೋಸ್ಟ್ ಮಾಡಿರುವ ಕೇವಲ 24 ವರ್ಷದ ಈ ಯುವಕನ ಯೂ ಟ್ಯೂಬ್ ಚಾನಲ್ ಅನ್ನು ಜಗತ್ತಿನಾದ್ಯಂತ ಹದಿನಾರು ಲಕ್ಷಕ್ಕೂ ಹೆಚ್ಚು ಜನ ಫಾಲೋ ಮಾಡುತ್ತಿದ್ದಾರೆ ಅಂದರೆ ನೀವು ನಂಬಲೇಬೇಕು.
ಆತನ ಹೆಸರು ಧೃವ್ ರಾಠೀ. ಹರಿಯಾಣದಲ್ಲಿ ಹುಟ್ಟಿ ಪ್ಲಸ್ ಟು ವರೆಗಿನ ಶಿಕ್ಷಣವನ್ನು ಪಡೆದ ನಂತರ, ಜರ್ಮನಿಯಲ್ಲಿ ಬಿ.ಇ ಮೆಕಾನಿಕಲ್ ಇಂಜಿನಿಯರ್ ಮುಗಿಸಿ ಸದ್ಯ ಮಾಸ್ಟರ್ಸ್ ಇನ್ ರಿನ್ಯುಬಲ್ ಎನರ್ಜಿ ಇಂಜಿನಿಯರಿಂಗ್ ಓದುತ್ತಿದ್ದಾನೆ. ಓದಿನ ನಡುವೆಯೇ ಸುಳ್ಳು ಸುದ್ದಿಗಳನ್ನು ಬಯಲು ಮಾಡುವುದು, ಪರಿಸರದ ಜಾಗೃತಿ ಮೂಡಿಸುವುದು, ಸಾಮಾಜಿಕ, ರಾಜಕೀಯ, ಆರ್ಥಿಕ ವಿಶ್ಲೇಷಣೆಗಳ ಕುರಿತು ಮುಖ್ಯವಾಗಿ ಮುಖ್ಯವಾಹಿನಿ ಮಾಧ್ಯಮ ಮಾತನಾಡದ ವಿಚಾರಗಳ ಕುರಿತು ವಿಡಿಯೋ ಮಾಡುವುದು ಇವನ ಕಾಯಕ. ಈತನ ವಿಡಿಯೋಗಳು ಲಕ್ಷಾಂತರ ಸಂಖ್ಯೆಯಲ್ಲಿ ವೀಕ್ಷಿಸಲ್ಪಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಈತನ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿಯುತ್ತಿದೆ.
ಈತನ ವಿಶೇಷತೆಯೇನು?
ಧೃವ್ ರಾಠೀ ವಿಡಿಯೋಗಳ ಬಗ್ಗೆ ಇಷ್ಟು ಮೆಚ್ಚುಗೆ ಬರಲು ಹಲವು ಕಾರಣಗಳಿವೆ. ಇಂದು ಮುಖ್ಯವಾಹಿನಿ ಮಾಧ್ಯಮಗಳೇ ಕೆಲವು ಪಕ್ಷಗಳ ವಕ್ತಾರರಂತೆ ವರ್ತಿಸಿ ನಾಚಿಕೆ ಮಾನಮರ್ಯಾದೆ ಇಲ್ಲದೇ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿರುವುದರಿಂದ ಬಹಳಷ್ಟು ಪ್ರಜ್ಞಾವಂತರಿಗೆ ಪರ್ಯಾಯ ನಂಬಿಕಾರ್ಹ ಮೂಲಗಳ ಅಗತ್ಯ ಬಿದ್ದಿದೆ. ಅಂತಹ ನಂಬಿಕಾರ್ಹ ಮೂಲಗಳಾಗಿ ಈಗಾಗಲೇ ಪ್ರತೀಕ್ ಸಿನ್ಹಾ ನಡೆಸುವ ಆಲ್ಟ್ ನ್ಯೂಸ್, ಸಿದ್ದಾರ್ಥ್ ವರದರಾಜನ್‍ರವರ ವೈರ್.ಇನ್, ನ್ಯೂಸ್ ಲ್ಯಾಂಡ್ರಿ ಮುಂತಾದ ಜಾಲತಾಣಗಳು ಕೆಲಸ ಮಾಡುತ್ತಿವೆ. ಇವುಗಳ ಜೊತೆಗೆ ಯಾವುದೇ ವಿಷಯದ ಬಗ್ಗೆ ಎಲ್ಲಾ ಕೋನಗಳಿಂದ ಸಾಕಷ್ಟು ಅಧ್ಯಯನ ನಡೆಸಿ, ಅತ್ಯಂತ ಕಡಿಮೆ ಪದಗಳಲ್ಲಿ ಸುಲಲಿತವಾಗಿ ಮತ್ತು ಸರಳವಾಗಿ ಅಷ್ಟೇ ಪರಿಣಾಮಕಾರಿಯಾಗಿ ಹಿಂದಿ ಭಾಷೆಯಲ್ಲಿ ಬಹಳ ಆತ್ಮವಿಶ್ವಾಸದಿಂದ ಮಾತನಾಡಿ ವಿಡಿಯೋ ಎಡಿಟ್ ಮಾಡುವುದು ಧೃವ್ ರಾಠೀಯ ಅಗ್ಗಳಿಕೆ.
ಪೂರ್ವಗ್ರಹಪೀಡಿತರಾಗದೇ ಎಲ್ಲಾ ಸಿದ್ಧಾಂತಗಳನ್ನು ನೋಡುವುದು, ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಳ್ಳದೇ ಎಲ್ಲಾ ಪಕ್ಷಗಳನ್ನು ಸಮಾನವಾಗಿ ವಿಮರ್ಶೆ ಮಾಡುವುದು, ಆ ಪಕ್ಷಗಳ ಮಾಡುವ ಒಳ್ಳೇಯ ಕೆಲಸಗಳನ್ನು ಮುಕ್ತಕಂಠದಿಂದ ಶ್ಲಾಘಿಸುವುದು ಧೃವ್ ರಾಠೀಯ ವಿಶೇಷತೆ. ಒಂದು ವಿಡಿಯೋ ಮಾಡಲು ಹೆಚ್ಚು ಕಮ್ಮಿ ಒಂದು ವಾರದಷ್ಟು ಸಮಯ ತೆಗೆದುಕೊಳ್ಳುವ ಈತ ಅರ್ಧಕ್ಕಿಂತ ಹೆಚ್ಚಿನ ಸಮಯವನ್ನು ಆ ವಿಷಯದ ಅಧ್ಯಯನಕ್ಕೆ ಮೀಸಲಿಡುತ್ತಾನೆ. ತನ್ನ ಐ ಫೋನ್ 8 ರಲ್ಲಿ ಸ್ವತಃ ರೆಕಾರ್ಡ್ ಮಾಡಿ ತಾನೇ ಎಡಿಟ್ ಮಾಡಿ ವಿಡಿಯೋ ತಯಾರಿಸುವುದು ಈತನ ಕುಶಲತೆಗೆ ಮತ್ತೊಂದು ಗರಿ. ವಿಡಿಯೋದ ಕ್ವಾಲಿಟಿ, ತನ್ನ ಸಮಚಿತ್ತದ ಮಾತಿಗೆ ಪೂರಕ ದಾಖಲೆಗಳ ಸ್ಲೈಡ್‍ಗಳು, ಸರಾಸರಿ 10 ನಿಮಿಷ ವಿಡಿಯೋ ಮಾಡುವುದು ಈ ಲಕ್ಷಣಗಳು ನೋಡುಗರಿಗೆ ಹೆಚ್ಚು ಇಷ್ಟವಾಗುತ್ತವೆ ಎನ್ನುವ ಸತ್ಯ ಧೃವ್‍ಗೆ ತಿಳಿದಿದೆ.
ಸಾರ್ವತ್ರಿಕ ಶಿಕ್ಷಣ, ಉತ್ತಮ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಕಾಳಜಿ ಈ ಮೂರು ಮುಖ್ಯ ವಿಷಯಗಳಿಗೆ ಒತ್ತುಕೊಡಬೇಕು ಎಂಬುದು ಈತನ ಆಶಯ. ಸಾಮಾಜಿಕ ಆರ್ಥಿಕ ಸರ್ವೇಗಳ ಆಧಾರದಲ್ಲಿ ಭಾರತದಲ್ಲಿ ಉತ್ತಮ ರಾಜ್ಯ ಯಾವುದು? ಪ್ರಪಂಚದಲ್ಲಿ ಉತ್ತಮ ರಾಷ್ಟ್ರ ಯಾವುದು ಎಂಬುದರ ಕುರಿತು ಉತ್ತಮ ವಿಶ್ಲೇಷಣೆಯ ವಿಡಿಯೋಗಳು ಈತನ ಬುಟ್ಟಿಯಲ್ಲಿವೆ.
ಬಹಳಷ್ಟು ಜನ ಇಂದು ಯಾವುದೇ ವಿಷಯದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಬೇಕಾದರೆ ಸಾಕಷ್ಟು ಅಧ್ಯಯನ ನಡೆಸಬೇಕಾಗುತ್ತದೆ. ಅಷ್ಟು ಕಷ್ಟ ತೆಗೆದುಕೊಳ್ಳುವ ಬದಲು ಈತನ ವಿಡಿಯೋ ನೋಡಿದರೆ ಸಾಕು ಎನ್ನುವವರಿದ್ದಾರೆ. 2013ರಿಂದ ಈ ಯೂಟ್ಯೂಬ್ ಚಾನಲ್ ನಡೆಸುತ್ತಿರುವ ಧೃವ್ ರಾಠೀ ಪ್ರಚಲಿತ ವಿಷಯಗಳ ಬಗ್ಗೆಯೇ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿದ್ದಾರೆ. ಅಂದರೆ ಸಹಜವಾಗಿ ಪ್ರಸ್ತುತ ಮೋದಿ ಸರ್ಕಾರದ ಸುಳ್ಳುಗಳನ್ನು ಆಧಾರ ಸಮೇತ ಬಯಲು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭಕ್ತರು ಮಾಡುವ ಟ್ರೋಲ್‍ಗಳಿಗೆ ತಲೆಕೆಡಿಸಿಕೊಳ್ಳದ ಧೃವ್ ನಾನು ಬಾಬರ್ ಏನು ಮಾಡಿದ, ನೆಹರು ಏನು ಮಾಡಿದರು ಎಂಬುದರ ಮೇಲೆ ಸಮಯ ವ್ಯರ್ಥ ಮಾಡುವುದಿಲ್ಲ. ಮುಂದೆ ಯಾವುದೇ ಸರ್ಕಾರ ಬಂದರೂ ಅವರ ಮಾಡುವ ಕೆಲಸಗಳ ಆಧಾರದ ಮೇಲೆ ಒಬ್ಬ ಪ್ರಜೆಯಾಗಿ ಸರಿ ತಪ್ಪುಗಳನ್ನು ವಿಶ್ಲೇಷಿಸುತ್ತೇನೆ ಅನ್ನುತ್ತಾರೆ.
ಈತನಿಗೆ ಯಾರು ಫಂಡ್ ಮಾಡುತ್ತಾರೆ?
ಧೃವ್‍ನ ಎಲ್ಲಾ ವಿಡಿಯೋಗಳ ಕಮೆಂಟ್‍ಗಳಲ್ಲಿ ಒಂದು ಸಾಮಾನ್ಯವಾದುದಿರುತ್ತದೆ. ಅದು ಈತನಿಗೆ ಯಾರು ಫಂಡ್ ಮಾಡುತ್ತಾರೆ ಎಂಬುದಾಗಿರುತ್ತದೆ. ಈತನ ಮಾತುಗಳನ್ನು ಸಹಿಸದ ಕೆಲವರು ಇವನಿಗೆ ಕಾಂಗ್ರೆಸ್ ಫಂಡ್ ಮಾಡುತ್ತದೆ, ಆಮ್ ಆದ್ಮಿ ಪಾರ್ಟಿ ಫಂಡ್ ಮಾಡುತ್ತದೆ ಎಂದು ಆರೋಪ ಮಾಡುತ್ತಾರೆ. ಬಿಬಿಸಿ ಸೇರಿದಂತೆ ಹಲವು ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಇದಕ್ಕೆ ಧೃವ್ ಸ್ಪಷ್ಟನೆ ನೀಡಿದ್ದಾರೆ. ಮೊದಲನೆಯದಾಗಿ ತನ್ನ ಓದಿಗಂತ ಆತನ ಕುಟುಂಬ ಹಣ ನೀಡಿದರೆ, ಆತನ ವಿಡಿಯೋಗಳಲ್ಲಿ ಬರುವ ಜಾಹೀರಾತು ವೀಕ್ಷಣೆಯ ಆಧಾರದಲ್ಲಿ ಯೂಟ್ಯೂಬ್ ಹಣ ನೀಡುತ್ತದೆ. (ಸರಾಸರಿ ಒಂದು ಲಕ್ಷ ಜಾಹೀರಾತು ವಿಡಿಯೋ ಮೇಲೆ ಕ್ಲಿಕ್ ಮಾಡಿದರೆ 100 ಡಾಲರ್) ಜೊತೆಗೆ ತನ್ನ ಕೆಲಸ ಇಷ್ಟವಾದಲ್ಲಿ ಪೇಟ್ರಿಯನ್.ಕಾಮ್ ಮೂಲಕ ಹಣ ನೀಡಿ ಬೆಂಬಲಿಸಿ ಎಂದು ಧೃವ್ ಮನವಿ ಕೂಡ ಮಾಡುತ್ತಾನೆ. ಯಾವ ಪಕ್ಷಗಳಿಂದಲೂ ಹಣ ಪಡೆಯಬಾರದು ಮತ್ತು ಜನರ ಹಣದಲ್ಲಿ ತನ್ನ ಕೆಲಸ ನಡೆಯಬೇಕು ಎಂಬುದು ಆತನ ಇಂಗಿತ.
ಬೆಂಬಲದ ಮಹಾಪೂರ
ಅತ್ಯಂತ ಕಡಿಮೆ ವಯಸ್ಸಿನಲ್ಲಿ ದೇಶಕ್ಕೆ ತುರ್ತಾಗಿರುವ ಅತಿ ಮಹತ್ವದ ಕೆಲಸ ಮಾಡುತ್ತಿರುವುದಕ್ಕಾಗಿ ಧೃವ್‍ರಾಠೀಗೆ ಬೆಂಬಲದ ಮಹಾಪೂರವೇ ಹರಿದುಬರುತ್ತಿದೆ. ಎನ್‍ಡಿಟಿವಿಯ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ತನ್ನ ಪ್ರೈಮ್‍ಟೈಮ್‍ನಲ್ಲಿ ಈತನ ಸಂದರ್ಶನ ಮಾಡಿದ್ದಾರೆ. ಉಳಿದಂತೆ ಖ್ಯಾತ ಪತ್ರಕರ್ತೆ ಮತ್ತು ಸಂಪಾದಕಿ ಫಯಾ ಡಿಸೋಜ, ಬಿಬಿಸಿ, ನ್ಯೂಸ್‍ಲಾಂಡ್ರಿ ಮುಂತಾದವರು ಈತನ ಸಂದರ್ಶನಗಳನ್ನು ಪ್ರಕಟಿಸಿದ್ದಾರೆ. ತನ್ನ ವಿಡಿಯೋಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಖ್ಯಾತಿಯಾಗಿರುವ ಬ್ರುಟ್ ಇಂಡಿಯಾ ಹಲವು ಜಾಗೃತಿ ವಿಡಿಯೋಗಳನ್ನು ಧೃವ್ ಸಹಯೋಗದಲ್ಲಿ ತಯಾರಿಸುತ್ತಿದೆ.
ಧೃವ್ ರಾಠೀ ಮಾತ್ರವಲ್ಲ
ಈ ರೀತಿ ಯೂಟ್ಯೂಬ್ ಚಾನಲ್ ವಿಡಿಯೋಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಧೃವ್ ಮಾತ್ರವಲ್ಲ. ನೂರಾರು ಜನ ಈ ರೀತಿಯ ಕೆಲಸದಲ್ಲಿ ತೊಡಗಿದ್ದಾರೆ. ಜೆಎನ್‍ಯು ಪ್ರಕರಣ ಮೂಲಕ ಬೆಳಕಿಗೆ ಬಂದು ತನ್ನ ಪ್ರಖರ ಭಾಷಣಗಳ ಮೂಲಕ ಪ್ರಸಿದ್ದರಾಗಿರುವ ಕನ್ನಯ್ಯ ಕುಮಾರ್ ಸಹ ತನ್ನೆಲ್ಲಾ ಭಾಷಣಗಳನ್ನು ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡುತ್ತಾರೆ. ಸದ್ಯಕ್ಕೆ 10 ಲಕ್ಷ ಜನ ಇವರನ್ನು ಫಾಲೋ ಮಾಡುತ್ತಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಈತನ ಭಾಷಣಗಳನ್ನು ವೀಕ್ಷಿಸಿದ್ದಾರೆ. ಆಕಾಶ್ ಬ್ಯಾನರ್ಜಿ ಎಂಬುವವರು ಸಹ ತಮ್ಮ ವಿಶಿಷ್ಟ ಮ್ಯಾನರಿಸಂನ ಮೂಲಕ ಟ್ರೋಲ್ ಮಾಡುತ್ತಾರೆ. ಟಿಆರ್‍ಪಿ ಹಿಂದೆ ಬಿದ್ದು ಬರೀ ಸುಳ್ಳು ಹೇಳುವ ಟಿವಿ ಚಾನಲ್‍ಗಳ ನಡುವೆ ಇಂತಹವರ ಪ್ರಯತ್ನಗಳು ಖಂಡಿತ ಮೆಚ್ಚತಕ್ಕದ್ದು. ಈಗಲೇ ಯೂಟ್ಯೂಬ್ ಒಪನ್ ಮಾಡಿ ವಿಡಿಯೋ ನೋಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...