ರಾಜತಂತ್ರ ಮತ್ತು ಭಾಷೆ

ರಹಮತ್ ತರೀಕೆರೆ |

ಪ್ರಾಚೀನ ಪಠ್ಯಗಳನ್ನು ಅವುಗಳ ಕಾವ್ಯಶಕ್ತಿಗಾಗಿ, ಭಾಷಿಕ ವಿಶಿಷ್ಟತೆಗಾಗಿ ಓದುವ ಪದ್ಧತಿ ಮೊದಲಿಂದಲೂ ಇದೆ. ಇದರ ಜತೆಯಲ್ಲಿ ಅವುಗಳ ಲೋಕದೃಷ್ಟಿಗಾಗಿ ಓದುವ ಸಾಂಸ್ಕøತಿಕ ಅಧ್ಯಯನಗಳೂ ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ನೋಡುವಾಗ ಬಹುತೇಕ ಸಾಹಿತ್ಯಕ ಪಠ್ಯಗಳು ಪ್ರಭು, ಪ್ರಭುತ್ವ ಯುದ್ಧ ಪಿತೂರಿ ಸೋಲುಗೆಲುವು ಇತ್ಯಾದಿ ಅಂಶಗಳನ್ನು ಒಳಗೊಂಡಿದ್ದು ರಾಜಕೀಯ ಪಠ್ಯಗಳಾಗಿವೆ. ಅದರಲ್ಲೂ ಎರಡು ವ್ಯಕ್ತಿಗಳ ಅಥವಾ ರಾಜ್ಯಗಳ ನಡುವೆ ನಡೆಯುವ ಪತ್ರವ್ಯವಹಾರ ಇಲ್ಲವೇ ಮಾತುಕತೆಯ ಪ್ರಸಂಗಗಳನ್ನು ಅವು ನಿರ್ವಹಿಸುವ ಬಗೆ ವಿಶಿಷ್ಟವಾಗಿದೆ. ಈ ಪ್ರಸಂಗಗಳಲ್ಲಿ ತೀಕ್ಷ್ಣವಾದ ರಾಜಕೀಯ ಕಟಕಿ ಧ್ವನಿ ವ್ಯಂಗ್ಯಗಳು ಪ್ರಕಟವಾಗುತ್ತವೆ. ಮುಖ್ಯವಾಗಿ ರಾಜಕೀಯ ತಂತ್ರಗಾರಿಕೆ ಭಾಷೆಯನ್ನು ಹೇಗೆ ಧ್ವನಿಪೂರ್ಣವಾಗಿ ಬಳಸುತ್ತದೆ ಎಂದು ತಿಳಿಯುತ್ತದೆ. ಇಂಥ ರಾಜತಾಂತ್ರಿಕ ಒಕ್ಕಣೆಯುಳ್ಳ ಪತ್ರಗಳನ್ನು ಬಳಸಿಕೊಂಡು ವಸಾಹತುಶಾಹಿ ಕಾಲದ ಆಧುನಿಕ ಗದ್ಯಸಾಹಿತ್ಯವು ಬೆಳೆದಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ಮೈಸೂರಿನ ಜೀವನ್ನು ಕುರಿತ ಪುಟ್ಟಣ್ಣನವರ `ಮಾಡಿದ್ದುಣ್ಣೋ ಮಹಾರಾಯ’ ಕೂಡ ಇಂಥ ಪತ್ರಗಳನ್ನು ಅಳವಡಿಸಿಕೊಂಡಿದೆ; ಕೊಡಗಿನ ದೊರೆಯನ್ನು ಕುರಿತು ಮಾಸ್ತಿಯವರು ಬರೆದ `ಚಿಕವೀರರಾಜೇಂದ್ರ’ ಕಾದಂಬರಿಯಲ್ಲಿ, ಇಂಥ ಪತ್ರಗಳನ್ನು ನೋಡಬಹುದು. ಮಾಸ್ತಿಯವರ `ಡೂಬಾಯಿ ಪಾದ್ರಿಯ ಒಂದು ಪತ್ರ’ ಕತೆಯು, ಹೆಸರೇ ಸೂಚಿಸುವಂತೆ, ಇಡಿಯಾಗಿ ಒಂದು ಪತ್ರವಾಗಿದೆ. ಈ ಪತ್ರಗಳು ಆಯಾ ಕಾಲದ ರಾಜಕೀಯ ಸಂಕಥನದಲ್ಲಿದ್ದ ಒಕ್ಕಣೆಗಳಿಂದ ಗಾಢವಾಗಿ ಪ್ರಭಾವಿತವಾಗಿರುವ ಸಾಧ್ಯತೆಯಿದೆ. ನಿದರ್ಶನಕ್ಕೆ ಬ್ರಿಟಿಷರ ಜತೆ, ಟಿಪ್ಪು, ಮೈಸೂರು ಒಡೆಯರು, ಕೊಡಗಿನ ದೊರೆಗಳು ಮಾಡಿರುವ ಪತ್ರಗಳನ್ನು ಗಮನಿಸಬಹುದು. ಅವು ಸೌಮ್ಯಭಾಷೆಯಲ್ಲಿ ಸುಪ್ತವಾದ ಆಕ್ರೋಶ, ಕ್ರೌರ್ಯ, ದಬ್ಬಾಳಿಕೆ ಮಹತ್ವಾಕಾಂಕ್ಷೆಯನ್ನು ಅಭಿವ್ಯಕ್ತಿಸುತ್ತವೆ. ಇಂಥ ಪತ್ರಗಳು ಓದಿ ಚರ್ಚಿಸಲ್ಪಡುವ ತಾವಿನಲ್ಲಿ ಅನೇಕ ಲೇಖಕರಿದ್ದರು. ಹೀಗಾಗಿ ಈ ಕಾಲದ ಕೃತಿಗಳಲ್ಲಿ ಪತ್ರಧಾಟಿಯು ಕಥನಕ್ಕೆ ಒಂದು ಬಗೆಯ ಅಥೆಂಟಿಸಿಟಿಯನ್ನು ಒದಗಿಸಿತು. `ರಂಗಾಚಾರ್ಲು’ವಿನಲ್ಲಿ ದೊರೆ ದಿವಾನರಿಗೆ ಆರೋಗ್ಯ ಕಾಪಾಡಿಕೊಳ್ಳುವಂತೆ ಬರೆದ ಪತ್ರವನ್ನು ಗಮನಿಸಬಹುದು. ಅದು ದಿವಾನರ ಮೇಲಿನ ಗೌರವ ಸಡಲಿಸದೆ, ತನ್ನ ಸೌಜನ್ಯದ ಎಲ್ಲೆಯನ್ನು ಮೀರದೆ, ಅವರ ಕಾರ್ಯನಿರ್ವಹಣೆಯ ಬಗ್ಗೆ ಭಿನ್ನಮತ ಹೇಳುವುದಕ್ಕಾಗಿ ಹುಟ್ಟಿರುವ ಧಾಟಿಯಲ್ಲಿದೆ. ದಿವಾನರ ದಕ್ಷಾಡಳಿತದಷ್ಟೇ ಅವರ ಆರೋಗ್ಯವು ಮುಖ್ಯ ಎಂಬ ದೊರೆಯ ಕಾಳಜಿಯನ್ನು ಈ ಪತ್ರವು ಹೊಂದಿದೆ.
ಈ ಬಗೆಯ ರಾಜತಾಂತ್ರಿಕ ನಿಪುಣತೆಯ ಪತ್ರಗಳು ಪ್ರಾಚೀನ ಕಾವ್ಯಗಳಲ್ಲೂ ಇವೆ. ಉದಾಹರಣೆಗೆ ಪಂಪನ `ಆದಿಪುರಾಣ’ ದಲ್ಲಿ ಇರುವ ಪತ್ರ. ಇದರಲ್ಲಿ ತಾನು ಚಕ್ರವರ್ತಿಯಾಗಲು ಅಡ್ಡಿಯಾಗಿರುವ ಸ್ವತಂತ್ರರಾಜರಾಗಿರುವ ಸೋದರರನ್ನು ಸೋದರಪ್ರೇಮ ನಟಿಸುತ್ತಲೇ ನಾಜೂಕು ನುಡಿಯಲ್ಲಿ ಧಮಕಿ ಹಾಕುವ ಭರತನು ಬರೆದ ಪತ್ರವಿದು. ಭರತನು ಚಕ್ರವರ್ತಿ ಆಗಬೇಕಾದರೆ, ತಮ್ಮ ಸ್ವತಂತ್ರ ಪುಟ್ಟ ರಾಜ್ಯಗಳಲ್ಲಿರುವ ಎಲ್ಲರೂ ಸೋಲಬೇಕು. ಆದರೆ ಇಲ್ಲಿರುವ ರಾಜರು ಭರತನಿಗೆ ಸ್ವತಃ ತಮ್ಮಂದಿರು. ಅವರ ಮೇಲೆ ಯುದ್ಧಸಾರುವಂತಿಲ್ಲ. ಪ್ರೇಮದಿಂದ ಕೇಳಿದರೆ ರಾಜ್ಯ ಕೊಡುವುದಿಲ್ಲ. ಹೀಗಾಗಿ ಪ್ರೇಮದ ಪರಿಭಾಷೆಯಲ್ಲಿ ರಾಜಕೀಯ ಧಮಕಿಯನ್ನು ಹಾಕುವ ಒಂದು ಪತ್ರವನ್ನು ಅವನು ಕಳಿಸುತ್ತಾನೆ. ಅದು ಹೀಗಿದೆ:
ಎನಗೊರ್ವಂಗುಪಭೋಗ್ಯಮಲ್ತು ವಸುಧಾ ಸಾಮ್ರಾಜ್ಯಮೋರಂತೆ
ನಿಮ್ಮನಿಗರ್ಬಂ ಪಿರಿಯಣ್ಣನೇಂ ಜನಕನೇನೆಂಬೊಂದು ಕೊಂಡಾಟದಿಂದ
ವಿನಯಂ ಸಲ್ವುದು ತಾಮುಮಾಮುಮೊಡನಿರ್ಪಂ ಬರ್ಪುದೆಂಬೀಶಶಾ
ಸನಮಂ ನೆತ್ತಿಯೊಳಾಂತು ಬನ್ನಿಮೆರಗಿಂ ಚಕ್ರೇಶ ಪಾದಾಬ್ಜದೊಳ್ (14-31)
ಈ ರಾಜ್ಯ ನನಗೊಬ್ಬನಿಗೇ ಅಲ್ಲ. ನಿಮಗೂ ಸೇರಿದ್ದು. ದೊಡ್ಡಣ್ಣನೇನು ಅಪ್ಪನೇನು ಇಬ್ಬರೂ ಒಂದೇ ಎಂಬ ಭಾವದಿಂದ ಬಂದು ವಿನಯ ತೋರಿಸಿರಿ. ನಾವೆಲ್ಲರೂ ಒಟ್ಟಿಗೆ ಇರೋಣ ಎಂಬುದು ಈ ಪತ್ರದ ಸಾರಾಂಶ. ಇದರಲ್ಲಿ ಮೇಲುನೋಟಕ್ಕೆ ಪ್ರೀತಿವಾತ್ಸಲ್ಯದ ಪರಿಭಾಷೆಯಿದೆ. ಆದರೆ ಒಳಗೆ ನಿಮ್ಮ ರಾಜವನ್ನು ನನ್ನದರಲ್ಲಿ ವಿಲೀನಗೊಳಿಸಿರಿ, ಇಲ್ಲದಿದ್ದರೆ ಅದನ್ನು ಬಲಾತ್ಕಾರವಾಗಿ ಕಿತ್ತುಕೊಳ್ಳಬೇಕಾಗುವುದು ಎಂಬ ಬಲಿಷ್ಠನ ಎಚ್ಚರಿಕೆಯಿದೆ. ಎಂತಲೇ ಪದ್ಯದ ಮೊದಲ ಭಾಗದಲ್ಲಿ `ವಿನಯ’ದ ಮಾತು ಬಂದರೂ ನಂತರ `ಈಶಶಾಸನ’ದ (ರಾಜಾಜ್ಞೆ) ಮಾತು ಬರುತ್ತದೆ. ಪತ್ರವು ಬರೆಹದಲ್ಲಿ ಹೇಳಲಾರದ ಮಾತುಗಳನ್ನು, ಪತ್ರ ತಂದ ದೂತರು ಮೌಖಿಕವಾಗಿ ಸ್ಪಷ್ಟಪಡಿಸುತ್ತಾರೆ-ಈ ಆದೇಶವನ್ನು ತಲೆಯ ಮೇಲೆ ಹೊತ್ತುಕೊಂಡು ಬಂದು ನಮ್ಮ ಚಕ್ರವರ್ತಿಯ ಪಾದಗಳಿಗೆ ಎರಗಿರಿ ಎಂದು. ಪಂಪನು ಸಾಮಂತನೊಬ್ಬನ ಆಸ್ಥಾನದಲ್ಲಿಯೇ ಇದ್ದವನು. ಅಧೀನ ದೊರೆಯೊಬ್ಬನ ಕಷ್ಟಗಳನ್ನು ಕಂಡವನು. ಅಧಿಕಾರದ ದಾಹವು, ಮನುಷ್ಯ ಸಂಬಂಧಗಳನ್ನು ನಿರ್ದಯವಾಗಿ ಹೊಸಕಿ ಹಾಕುತ್ತದೆ ಎಂದು ಬಲ್ಲವನು. ಹೀಗಾಗಿ ಪತ್ರದ ಭಾಷೆಗೆ ಪ್ರೀತಿಲೇಪಿತ ಕ್ರೌರ್ಯವಿರುವ ಭಾಷೆಯನ್ನು ಅವನು ಕಾಣಿಸುತ್ತಾನೆ. ಇಂಥ ಅಧಿಕಾರಸ್ಥರ ಅಮಾನುಷತೆಯನ್ನು ಮೊಗಲರ ವಿಜಯನಗರ ಆದಿಲಶಾಹಿ ಬಹಮನಿ ಮೈಸೂರೊಡೆಯರ ಅರಮನೆಯ ಒಳಗಿನ ಫಿತೂರಿಗಳಲ್ಲಿ ನೋಡಬಹುದು. ಆಧುನಿಕ ರಾಜಕೀಯ ಪಕ್ಷಗಳಲ್ಲಿಯೂ ನೋಡಬಹುದು. ರಾಜಕೀಯ ಅಧಿಕಾರದ ಒಂದು ಮುಖ ಲೋಕಕಲ್ಯಾಣವಾದರೆ, ಇನ್ನೊಂದು ಮುಖ ಪಿತೂರಿ, ಕಪಟ, ಕ್ರೌರ್ಯವಾಗಿದೆ.
ರಾಜಕೀಯ ಒಕ್ಕಣೆ ಇರುವಂಥ ಪತ್ರಗಳನ್ನು ಬ್ರಿಟಿಷರ ಕಾಲದಲ್ಲಿ ಸೃಷ್ಟಿಯಾದ ಕನ್ನಡ ಪಠ್ಯಗಳಲ್ಲಿ ವಿಶೇಷವಾಗಿ ಕಾಣಬಹುದು. ಭಾರತವನ್ನು ವಶಪಡಿಸಿಕೊಂಡು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದ, ದೇಶೀಯ ರಾಜರಲ್ಲಿದ್ದ ರಾಜಕೀಯ ಭಿನ್ನಮತಗಳನ್ನೇ ಬಳಸಿಕೊಂಡು, ಒಡೆದಾಳುವ ನೀತಿಯನ್ನು ಜಾರಿಗೆ ತಂದ ಬ್ರಿಟಿಷರು, ತಮ್ಮ ಕಾಲದ ರಾಜಕೀಯ ವ್ಯವಹಾರದ ಭಾಷೆಗೆ ಇನ್ನಿಲ್ಲದ ಡಿಪ್ಲೊಮಸಿಯನ್ನು ತಂದುಕೊಟ್ಟರು. ಹತ್ತನೇ ಚಾಮರಾಜ ಒಡೆಯರನ್ನು ಪಟ್ಟಕ್ಕೆ ತರುವಾಗ ಬ್ರಿಟಿಷರು ವಿಧಿಸುವ ಕರಾರುಪತ್ರದ ಪೂರ್ಣಪಾಠವನ್ನು ಎಂ.ಶಿಂಗ್ರಯ್ಯ ತಮ್ಮ `ಚಾಮರಾಜ ಒಡೆಯರ್ ಅವರ ಚರಿತ್ರೆ’ಯಲ್ಲಿ ಕೊಡುತ್ತಾರೆ. ಅದೊಂದು ಅಪಮಾನಕಾರಕ ಕರಾರುಗಳುಳ್ಳ ಪತ್ರವಾಗಿದ್ದು, ಅಧಿಕಾರವನ್ನು ಕೊಡುವಂತೆ ಮಾಡಿ, ನಿಯಂತ್ರಣವನ್ನು ತಮ್ಮಲ್ಲಿ ಇರಿಸಿಕೊಳ್ಳಲೆಂದೇ ರೂಪಿಸಿದ ಆಶಯವನ್ನು ಒಳಗೊಂಡಿದೆ. ಅದರ ಭಾಷೆಯು ಮಾತ್ರ ನಾಜೂಕಾಗಿದೆ. ಈ ಹಿನ್ನೆಲೆಯಲ್ಲಿ ಚಂದ್ರಗುಪ್ತ ಚಾಣಕ್ಯರ ಕಥನವಾಗಿರುವ ಕೆಂಪುನಾರಾಯಣನ `ಮುದ್ರಾ ಮಂಜೂಷ’ದಲ್ಲಿ (1823) ಬರುವ ಪತ್ರವೊಂದನ್ನು ಗಮನಿಸಬಹುದು. ಇದು ತೀರ್ಥಯಾತ್ರೆಯಲ್ಲಿರುವ ತಂದೆಗೆ ನವನಂದರು ತಮ್ಮ ಮಲಸೋದರನಾದ ಮೌರ್ಯನನ್ನೂ ಅವನ ನೂರು ಮಕ್ಕಳನ್ನು ಕುತಂತ್ರದಲ್ಲಿ ಕೊಂದ ಬಳಿಕ ಬರೆದು ಅಟ್ಟಿದ ಪತ್ರವಾಗಿದೆ:
“ಶ್ರೀಮತು, ಅಪ್ಪಾಜಿಯವರ ಪಾದಪದ್ಮಂಗಳಿಗೆ ಬಾಲಕ ವಿನಂದನು ಮಾಡುವ ಭಿನ್ನಹ. ನೀವು ಇಲ್ಲಿಂದ ಚಿತ್ತೈಸಿದ ಬಳಿಕ ಇಲ್ಲಿ ನಡೆದ ಅನರ್ಥವಂ ಹೇಳುವುದಕ್ಕೆ ಶಕ್ಯವಲ್ಲ; ಏನೆಂದರೆ ಒಂದು ದಿವಸ ಮೌರ್ಯಪುತ್ರರು ಮೃಗಗಳ ಬೇಟೆಯನ್ನು ಆಡಬೇಕೆಂದು ನಮ್ಮನ್ನು ನಿರ್ಬಂಧಪಡಿಸಲು, ನಾವೆಲ್ಲರೂ ಹೋಗಿ ಮೃಗಗಳ ಬೇಂಟೆಯಂ ಮಾಡಿದ ಮೇಲೆ ವಿಶ್ರಾಂತ್ಯರ್ಥವಾಗಿ ಪುರದ ಉದ್ಯಾನದಲಿ ನಿಂತು ಅಲ್ಲಿಯೇ ಪಾಕವಂ ಮಾಡಿಸಿ ಪುಷ್ಟವಾಟಿಕೆಯಂ ನೋಡುತ್ತಿರುವ ಸಮಯದಲ್ಲಿ, ಮೌರ್ಯಪುತ್ರನು ಹಸಿವಂ ಸಹಿಸಲಾರದೆ ನಾವು ಬರುವುದಕ್ಕೆ ಮುಂಚಿತವಾಗಿಯೇ ಮಾಡಿದ ಭಕ್ಷ್ಯಂಗಳಂ ಭಕ್ಷಿಸಿ, ತೀವ್ರವಾದ ಕಾಪಿಶಾಯಿನವೆಂಬ ಮದ್ಯವಂ ತರಿಸಿ ಅಮಿತವಾಗಿ ಪಾನವಂ ಮಾಡಿದುದರಿಂದ ದೇಹಸ್ಮøತಿ ತಪ್ಪಿ, ಪಾಕಶೇಷವಂ ಎಂಜಲು ಮಾಡಿ ಪಾಚಕರಂ ಪ್ರಹರಿಸಿ, ಒಬ್ಬರೊಬ್ಬರು ಬಡಿದಾಡುತ್ತಾ ಹೆಣಗಾಡುತ್ತಾ ಅಲ್ಲಿ ಜೀರ್ಣವಾಸ ಸ್ತಂಭಗಳಿಗೆ ಬೇರೆಕಂಬಗಳನ್ನು ಕೊಡುವುದಕ್ಕೆ ನಿಲ್ಲಿಸಿದ್ದ ಸನ್ನೇಮರಗಳಿಗೆ ಬಂಧಿಸಿದ್ದ ಹಗ್ಗಗಳಂ ಹರಿದು ಆ ಮರಗಳಿಗೆ ಕಯ್ಯಂನೀಡಲು, ಅವು ಸಡಲಿ ಬೀಳುವಷ್ಟರಲ್ಲಿಯೇ ಮಕ್ಕಳ ಕೋಲಾಹಲವಿದೇನೆಂದು ಮೌರ್ಯನು ಒಳಪೊಕ್ಕನು. ಆಗಲೇ ಭಾರವಾಸಿಯಾದ ಮೇಲಿನಂತಸ್ತು ಮುರಿದು ಮೇಲೆ ಬಿದ್ದುದರಿಂದ ಮೌರ್ಯನೂ ಅವನ ಪುತ್ರರಲ್ಲಿ ಚಂದ್ರಗುಪ್ತನೊಬ್ಬನು ಹೊರತು ಮಿಕ್ಕವರೆಲ್ಲರೂ ಸತ್ತುಹೋದರು. ಅವನಿಗೂ ಬಹುಘಾತ ತಗುಲಿರುವುದರಿಂದ ಆತನ ಸಹ ಮುಂದೆ ಜೀವಿಸುವುದು ಸಂಶಯವೆಂದು ತೋರುತ್ತದೆ. ಎಂದಿಗೂ ಅಗಲದೇ ಇದ್ದ ಮೌರ್ಯಪುತ್ರರಂ ವಿಂಗಡಿಸಿ ಸಂಹರಿಸಿ ನಮ್ಮನ್ನು ಮಾತ್ರ ಉಳಿಸಿರುವ ದೈವಸಂಕಲ್ಪಕ್ಕೆ ಎಷ್ಟು ಆಶ್ಚರ್ಯಪಡಬೇಕು! ತಾವು ಇಲ್ಲಿ ಇಲ್ಲದುದರಿಂದ ಎಷ್ಟುಮಂದಿ ಧೈರ್ಯವನ್ನು ಹೇಳಿದಾಗ್ಗೂ ನಮ್ಮ ಮನಸ್ಸಿನಲ್ಲಿ ಹುಟ್ಟಿರುವ ಭೀತಿಯು ಅಡಗುವುದಿಲ್ಲ. ಅಪ್ಪಣೆಯಾದರೆ ನಾವೂ ಅಲ್ಲಿಗೆ ಬರುತ್ತಿದ್ದೇವೆ. ಈ ವರ್ತಮಾನವನ್ನು ಬರೆಯುವುದಕ್ಕೆ ಭೀತಿ ಚಿಂತಾವಿಷ್ಟರಾಗಿದಾಗ್ಗೂ ಹಾಗೆ ಬರೆಯದಿದ್ದರೆ ಸನ್ನಿಧಿಯಲ್ಲಿ ಪೂರ್ಣಾಪರಾಧಿ ಗಳಾದೇವೆಂಬ ಶಂಕೆಯಿಂದ ಬರೆದು ಬಿನ್ನೈಸಿದೆವು.’’
ಇಲ್ಲಿನ ವಿಶೇಷತೆಯೆಂದರೆ ಕಪಟ ಭಾವನೆಯನ್ನು ಅಡಗಿಸಲು ಭಾಷೆಯನ್ನು ಎಚ್ಚರಿಕೆಯಿಂದ ಬಳಸಿರುವ ಜಾಣ್ಮೆ. ಕೊಂದವರೇ ಕೊಲೆಯಾದವ ಸಾವಿನ ಬಗ್ಗೆ ಮರುಕ ಸೂಚಿಸುತ್ತಿದ್ದಾರೆ.ಕೊಂದವರು ಕೊಲೆಯಾದವರ ಮೇಲೆ ಅನುಕಂಪ ಸೂಚಿಸುವ ವಿಚಿತ್ರವು ಜರುಗುತ್ತಲೇ ಇರುತ್ತದೆ. ಇಲ್ಲಿ ಕವಿ ಜಂಬಣ್ಣ ಅಮರಚಿಂತರ ಕಾವ್ಯದ ಎರಡು ಸಾಲು ನೆನಪಾಗುತ್ತವೆ: “ರಕ್ತಸಿಕ್ತ ಖಡ್ಗ ನಿಮ್ಮ ಒರೆಯಲ್ಲಿ. ಕೊಂದವರು ಯಾರೆಂದು ನಮ್ಮ ಕೇಳುವಿರಿ.”
ನಮ್ಮ ಕಾಲದ ರಾಜಕಾರಣಿಗಳು ಮಾಡುತ್ತಿರುವ ಚುನಾವಣ ಭಾಷಣಗಳನ್ನು ಗಮನಿಸಿ. ಅದರಲ್ಲಿ ಆಮಿಷಗಳ ಪಾಲು ಒಂದಿದ್ದರೆ, ಬೆದರಿಕೆಯ ಪಾಲು ಎರಡರಷ್ಟಿದೆ. ಮೇನಕಾ ಗಾಂಧಿಯವರು ತಮ್ಮ ಮತಕ್ಷೇತ್ರದ ಮುಸ್ಲಿಂ ಮತದಾರರಿಗೆ ನೀವು ಮತ ಹಾಕದಿದ್ದರೆ ನಿಮ್ಮ ಯಾವ ಕೆಲಸವನ್ನು ನಾನು ಮಾಡಿಕೊಡುವುದಿಲ್ಲ ಎಂದು ಧಮಕಿ ಹಾಕುತ್ತಿದ್ದಾರೆ. ನಮ್ಮ ನಾಯಕನಿಗೆ ಬೆಂಬಲಿಸದಿದ್ದರೆ ನೀವು ದೇಶಕ್ಕೆ ವಿರುದ್ಧವಾಗಿದ್ದೀರಿ ಎಂದೇ ತಿಳಿಯಲಾಗುವುದು ಎಂದು ಮೋದಿಯವರ ಭಕ್ತರು ನುಡಿಯುತ್ತಿದ್ದಾರೆ. ಸೆಪ್ಟÀಂಬರ್ 11ರಂದು ವಿಶ್ವವಾಣಿಜ್ಯ ಕೇಂದ್ರಗಳಿಗೆ ವಿಮಾನಗಳು ಅಪ್ಪಳಿಸಿದಾಗ, ಅಮೆರಿಕ ಅಧ್ಯಕ್ಷರು “ಈಗ ನೀವು ನಮ್ಮ ಜತೆಯಿಲ್ಲವಾದರೆ ನಮ್ಮ ವಿರೋಧಿಗಳ ಜತೆಯಿದ್ದೀರಿ ಎಂದೇ ತಿಳಿಯಲಾಗುವುದು” ಎಂದು ಹೇಳಿದ್ದರು. ಇದು ನೀವು ರಾಜ್ಯ ಒಪ್ಪಿಸದಿದ್ದರೆ, ಅದನ್ನು ಕಿತ್ತುಕೊಳ್ಳಲಾಗುವುದು ಎಂಬ ಭರತನ ನಯಭರಿತ ಎಚ್ಚರಿಕೆಯಂತೆಯೇ ಇದೆ. ಭರತನೂ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿ ಚಕ್ರವರ್ತಿಯಾಗಲು ಹೊರಟವನು. ಅಮೆರಿಕವು ತನ್ನ ಕಟ್ಟಿಕೊಂಡಿರುವ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲುವುದಕ್ಕಾಗಿ ಹೊರಟಿರುವುದು. ಭಾರತದಲ್ಲಿ ಚುನಾವಣ ಕಾಲದಲ್ಲಿ ಧಮಕಿ ಹಾಕುತ್ತಿರುವ ರಾಜಕಾರಣಿಗಳು, ಕೂಡ ಹೊಸ ಸಾಮ್ರಾಜ್ಯವನ್ನು ಕಟ್ಟುವುದಕ್ಕೆ ಹೊರಟವರು. ಅವರ ಭಾಷೆಯಲ್ಲಿ ಈಗೀಗ ಔಪಚಾರಿಕವಾದ ನಯಗಾರಿಕೆಯೂ ಕಾಣಿಸುತ್ತಿಲ್ಲ. ನೇರವಾದ ಬೆದರಿಕೆಯ ಭಾಷೆಯಲ್ಲೇ ಮಾತಾಡುತ್ತಿದ್ದಾರೆ. ನವನಂದರ ಪತ್ರದಲ್ಲಿ ಬೇಟೆಯ ಪ್ರಸ್ತಾಪವಿದೆ. ಆದರೆ ಸ್ವತಃ ಅವರೇ ಬೇಟೆಯಾಡುತ್ತಿದ್ದಾರೆ. ಈ ಬೇಟೆಗೆ ಸೋದರರು ಮಾತ್ರವಲ್ಲ, ಅವರ ಅಪ್ಪಾಜಿಯೂ ಗುರಿಯಾಗಿದ್ದಾನೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here