Homeಮುಖಪುಟಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!

ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!

ಭಾರತದ ಸೈನ್ಯ ಶ್ರೀನಗರ ತಲಪಿದ ದಿನವೇ ಪಟೇಲರ ಬೇಡಿಕೆಯನ್ನು ಮೌಂಟ್‌ಬ್ಯಾಟನ್ ಲಾಹೋರಿಗೆ ಕೊಂಡೊಯ್ದಿದ್ದರು. ಇತಿಹಾಸ ಅಥವಾ ಭೂಗೋಳದ ಗಂಧಗಾಳಿಯಿಲ್ಲದ ಲಿಯಾಕತ್ ಆಲಿ ಆಗುವುದಿಲ್ಲ ಎಂದರು- ಪತ್ರಕರ್ತ ಶೇಖರ್ ಗುಪ್ತ ಅವರ ಜೊತೆ ಮಾತನಾಡುತ್ತಾ ಹೀಗೆಂದಿದ್ದಾರೆ ಕಾಂಗ್ರೆಸ್‌ನ ಹಿರಿಯ ಮಾಜಿ ಸಚಿವ ಸೈಫುದ್ದೀನ್ ಸೋಝ್!

- Advertisement -
- Advertisement -

ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದವರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ! ಎಂದು ಮಾಜಿ ಸಚಿವ ಸೈಫುದ್ದೀನ್ ಸೋಝ್ ಹೇಳಿಕೆ ನೀಡಿದ್ದಾರೆ.

ಸ್ವತಂತ್ರ ಭಾರತದಲ್ಲಿ ಗೃಹಮಂತ್ರಿಯಾಗಿದ್ದ ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಹೈದರಾಬಾದಿಗೆ ಪ್ರತಿಯಾಗಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಸಿದ್ಧರಾಗಿದ್ದರು. ಆದರೆ, ನೆಹರೂ ಅವರ ಒತ್ತಾಯದ ಮೇರೆಗೆ ಕಾಶ್ಮೀರ ಭಾರತದಲ್ಲಿ ಉಳಿಯಿತು ಎಂಬ ದಂಗುಬಡಿಸುವ ಮಾಹಿತಿಯನ್ನು ನೀಡಿದ್ದಾರೆ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ, ಕಾಶ್ಮೀರದವರೇ ಆದ ಸೈಫುದ್ದೀನ್ ಸೋಝ್.

1947ರ ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನದ ನುಸುಳುಕೋರರನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಶ್ರೀನಗರವನ್ನು ಪ್ರವೇಶಿಸಿದ ದಿನವೇ ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು ವಲ್ಲಭಭಾಯ್ ಪಟೇಲ್ ಅವರ ಪ್ರಸ್ತಾಪವನ್ನು ಲಾಹೋರಿಗೆ ಕೊಂಡೊಯ್ದಿದ್ದರು ಎಂದು ಸೋಝ್ ಅವರು ‘ದಿ ಪ್ರಿಂಟ್’  ಪ್ರಧಾನ ಸಂಪಾದಕ ಶೇಖರ್ ಗುಪ್ತ ಅವರಿಗೆ ಎನ್‌ಡಿಟಿವಿಯ ‘ವಾಕ್ ದ ಟಾಕ್ ಶೋ’ದಲ್ಲಿ ತಿಳಿಸಿದ್ದಾರೆ.

“ಮೊದಲ ದಿನದಿಂದಲೇ ಕಾಶ್ಮೀರವು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಸರ್ದಾರ್ ಪಟೇಲ್ ಹಠಹಿಡಿದಿದ್ದರು. ಕಾಶ್ಮೀರವನ್ನು ತೆಗೆದುಕೊಂಡು ಹೈದರಾಬಾದ್-ದಖ್ಖಣವನ್ನು ಭಾರತಕ್ಕೆ ಬಿಟ್ಟುಕೊಡಬೇಕೆಂದು ಪಾಕ್ ನಾಯಕ ಲಿಯಾಕತ್ ಆಲಿಯವರ ಮನವೊಲಿಸಲು ಪಟೇಲ್ ಅವರು ದೇಶವಿಭಜನಾ ಮಂಡಳಿಯಲ್ಲಿ ಶತಾಯಗತಾಯ ಯತ್ನಿಸಿದ್ದರು” ಎಂದು ಸೋಝ್ ಹೇಳಿದ್ದಾರೆ.

“ಅಲ್ಲಿ ದೊಡ್ಡ ಗಲಾಟೆಯೇ ನಡೆಯಿತು. ಸರ್ದಾರ್ ಮೊಹಮ್ಮದ್ ಆಲಿ ಮತ್ತು ನಮ್ಮ ರೆಡ್ಡಿ ಉಪಸ್ಥಿತರಿದ್ದರು. ಹೈದರಾಬಾದ್-ದಖ್ಖಣದ ಬಗ್ಗೆ ಮಾತೆತ್ತುವುದೇ ಬೇಡ; ಅದು ಪಾಕಿಸ್ತಾನದ ಜೊತೆಗೆ ಸಂಬಂಧವನ್ನೇ ಹೊಂದಿಲ್ಲ. ಹೈದರಾಬಾದನ್ನು ನಮಗೆ ಬಿಡಿ. ಕಾಶ್ಮೀರವನ್ನು ತೆಗೆದುಕೊಳ್ಳಿ” ಎಂದು ಸರ್ದಾರ್ ಪಟೇಲ್ ಲಿಯಾಕತ್ ಆಲಿಯವರಿಗೆ ಹೇಳಿದರು.

“ನಾನು ನಿಮಗೆ ಕುತೂಹಲಕಾರಿ ಕತೆಯೊಂದನ್ನು ಹೇಳುವೆ. ನಮ್ಮ ಸೇನೆಯು ಶ್ರೀನಗರದಲ್ಲಿ ಬಂದಿಳಿದ ಮಧ್ಯಾಹ್ನವೇ ಮೌಂಟ್‌ಬ್ಯಾಟನ್ ಲಾಹೋರಿಗೆ ಹೋದರು. ಪಾಕಿಸ್ತಾನದ ಗವರ್ನರ್ ಲಿಯಾಕತ್ ಆಲಿ ಮತ್ತು ಇತರ ನಾಲ್ವರು ಸಚಿವರ ಜೊತೆ ಔತಣ ನಡೆಯಿತು. ನಾನು ಭಾರತದ ಶಕ್ತಿಶಾಲಿ ಮನುಷ್ಯ ಸರ್ದಾರ್ ಪಟೇಲರಿಂದ ಸಂದೇಶವೊಂದನ್ನು ತಂದಿದ್ದೇನೆ. ನೀವು ಹೈದರಾಬಾದ್-ದಖ್ಖಣವನ್ನು ಮರೆತುಬಿಡಿ; ಕಾಶ್ಮೀರವನ್ನು ತೆಗೆದುಕೊಳ್ಳಿ” ಎಂದು ಮೌಂಟ್‌ಬ್ಯಾಟನ್ ಹೇಳಿದರು.

“ಆದರೆ ಸರ್ದಾರ್ ಶೌಕತ್ ಹಯಾತ್ ಖಾನ್ ಅವರು ತಮ್ಮ ಪುಸ್ತಕದಲ್ಲಿ ಬರೆದಿರುವಂತೆ, ಲಿಯಾಕತ್ ಆಲಿಯವರಿಗೆ ಇತಿಹಾಸವೂ ಗೊತ್ತಿರಲಿಲ್ಲ; ಭೂಗೋಳವೂ ಗೊತ್ತಿರಲಿಲ್ಲ. ಆದುದರಿಂದ ಅವರು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳಲಿಲ್ಲ” ಎಂದು ಸೋಝ್ ಹೇಳಿದ್ದಾರೆ.

“ಪಟೇಲರ ಮಾತು ನಡೆಯಲಿಲ್ಲ ಏಕೆಂದರೆ ನೆಹರೂ ಬಲವಾಗಿ ನಿಂತಿದ್ದರು. ಕಾಶ್ಮೀರದ ಜೊತೆ ಅವರ ಸಂಬಂಧವೂ ಬಲವಾಗಿತ್ತು. ಕಾಶ್ಮೀರವು ಜಾತ್ಯತೀತ ಭಾರತಕ್ಕೆ ಬರಬೇಕು, ಅದು ಇಲ್ಲಿ ಸುರಕ್ಷಿತವಾಗಿರುತ್ತದೆ ಅವರು ನಂಬಿದ್ದರು. ಅವರು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೂ ತುಂಬಾ ಹತ್ತಿರವಿದ್ದರು. ಅವರು ನ್ಯಾಷನಲ್ ಕಾನ್ಫರೆನ್ಸ್‌ನ ಸೋಪುರ್ ಸಮಾವೇಶದಲ್ಲಿ ಭಾಷಣ ಕೂಡಾ ಮಾಡಿದ್ದರು. ಅವರಿಗೆ ಕಾಶ್ಮೀರದ ಇತಿಹಾಸ ಸಂಪೂರ್ಣವಾಗಿ ಗೊತ್ತಿತ್ತು” ಎಂದು ಸೋಝ್ ಹೇಳಿದ್ದಾರೆ.

“ಶೇಖ್ ಅಬ್ದುಲ್ಲಾ ಅವರು ಎರಡು ದೇಶ ವಾದವನ್ನು ತಿರಸ್ಕರಿಸಿದ್ದರು. 1947ರ ಅಗಸ್ಟ್ 15ರಿಂದ ಅಕ್ಟೋಬರ್ 22ರ ತನಕ ಕಾಶ್ಮೀರ ಸ್ವತಂತ್ರ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದರು ಕೂಡಾ. ಆದರೆ, ಪಾಕಿಸ್ತಾನದ ದಾಳಿಕೋರರು ಒಳನುಗ್ಗಿದಾಗ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿತ್ತು” ಎಂದವರು ಹೇಳಿದ್ದಾರೆ.

“ನಮ್ಮ ನೆರೆಯಲ್ಲಿರುವ ಐದು ದೇಶಗಳಾದ ಭಾರತ, ಪಾಕಿಸ್ತಾನ, ರಷ್ಯಾ, ಚೀನಾ ಮತ್ತು ಅಫಘಾನಿಸ್ತಾನ ಕಾಶ್ಮೀರದ ಸ್ವಾತಂತ್ರ್ಯವನ್ನು ಯಾವತ್ತೂ ಒಪ್ಪುವುದಿಲ್ಲ. ಆದುದರಿಂದ ಅದು ಸಾಧ್ಯವಿಲ್ಲ ಎಂದು ಶೇಖ್ ಅಬ್ದುಲ್ಲಾ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ” ಎಂದು ಸೋಝ್ ತಿಳಿಸಿದ್ದಾರೆ. ಅವರಿಗೆ ಭಾರತವು ಜಾತ್ಯತೀತ, ಬಹುಮುಖಿ ಮತ್ತು ಕಾಶ್ಮೀರದ ಕುರಿತು ಉದಾರಭಾವ ಹೊಂದಿರುವ ತನಕ ಭಾರತದಿಂದ ಹೊರಹೋಗುವ ಮನಸ್ಸೇ ಇರಲಿಲ್ಲ ಮತ್ತು ಇದರಿಂದಲೇ ದಿಲ್ಲಿ ಒಪ್ಪಂದ ಉಂಟಾಯಿತು ಎಂದೂ ಅವರು ಹೇಳಿದ್ದಾರೆ.

“ದುರದೃಷ್ಟವಶಾತ್ ನೆಹರೂ ಅವರಿಗೆ ಸ್ವಂತ ಸಂಪುಟದಲ್ಲಿಯೇ ಸೋಲಾಯಿತು. ಅದರಿಂದಾಗಿ ಅವರು ಶೇಖ್ ಅಬ್ದುಲ್ಲಾ ಅವರ ಸರಕಾರವನ್ನು ವಜಾಗೊಳಿಸಿ, ಅವರನ್ನು ಬಂಧನದಲ್ಲಿಡುವುದು ಅನಿವಾರ್ಯವಾಯಿತು. ಅವರಿಗೆ ಈ ಕುರಿತು ಪಶ್ಚಾತ್ತಾಪವಿತ್ತು. ಆದರೆ, ಅವರು ಏಕಾಂಗಿಯಾಗಿದ್ದರು” ಎಂದು ಸೋಝ್ ತಿಳಿಸಿದ್ದಾರೆ.

ಸರ್ದಾರ್ ಎ ರಿಯಾಸತ್ ಎಂದು ಕರೆಯಲ್ಪಡುವ  ಡಾ. ಕರಣ್ ಸಿಂಗ್ ಅವರು 1953ರಲ್ಲಿ ತನ್ನ ವಿರುದ್ಧ ಸಂಚು ಹೂಡಿದವರಲ್ಲಿ ಒಬ್ಬರು ಎಂದೂ ಶೇಖ್ ಅಬ್ದುಲ್ಲಾ ತನ್ನ ಪುಸ್ತಕದಲ್ಲಿ ಬರೆದಿರುವುದಾಗಿ ಅವರು ತಿಳಿಸಿದ್ದಾರೆ.

“ಕಾಶ್ಮೀರದ ಸಾಂವಿಧಾನಿಕ ವಿಧಾನಸಭೆಯನ್ನು ಮುಂದುವರಿಯಲು ಬಿಡಬೇಕಿತ್ತು. ನೀವು ಬೇಕಾದರೆ ರಾಮ್ ಜೇಠ್ಮಲಾನಿಯವರನ್ನು ಕೇಳಿ. ಅವರು ಕೂಡಾ ಅದನ್ನು ನಂಬಿದ್ದಾರೆ” ಎಂದು ಅವರು ಹೇಳಿದ್ದಾರೆ.

ಕಾಶ್ಮೀರದ ಪರಿಸ್ಥಿತಿಯು ರಫಿ ಆಹ್ಮದ್ ಕಿದ್ವಾಯಿ, ಅಜಿತ್ ಪ್ರಸಾದ್ ಜೈನ್ ಮುಂತಾದ ಅಲ್ಪ ಮನಸ್ಸುಗಳು ನೆಹರೂ ಅವರ ಸುತ್ತಲಿನ ವಾತಾವರಣವನ್ನು ವಿಷಮಯ ಮಾಡಿದುದರಿಂದಾಗಿ ಕೆಟ್ಟುಹೋಯಿತು ಎಂದೂ ಸೋಝ್ ಹೇಳಿದ್ದಾರೆ. ಆಗ ರಾಜಕೀಯ ಕೆಲಸವನ್ನು ಗುಪ್ತಚರ ಸಂಸ್ಥೆಗಳ ಅದಕ್ಕಿಂತಲೂ ಅಲ್ಪ ಮನಸ್ಸುಗಳಿಗೆ ವಹಿಸಲಾಗುತ್ತಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಸೋಝ್ ವಿಷಾದಿಸಿದ್ದಾರೆ.

ಈಗಲೂ ಸಮಸ್ಯೆಗೆ ಪರಿಹಾರ ಎಂದರೆ ಹುರಿಯತ್ ನಾಯಕರ ಜೊತೆ ಮಾತನಾಡುವುದು ಮಾತ್ರ ಎಂದು ಹೇಳಿರುವ ಸೈಫುದ್ದೀನ್ ಸೋಝ್, ಯುವ ಕಾಶ್ಮೀರಿಗಳು ಕೋಪಗೊಂಡಿದ್ದಾರೆ; ಕುಟುಂಬದ ಇಬ್ಬರು ಮಕ್ಕಳು ಈಗಾಗಲೇ ಸತ್ತು, ಮೂರನೆಯವನು ಉಗ್ರಗಾಮಿಗಳ ಜೊತೆ ಹೋಗಿರುವಾಗ ಬಲಪ್ರಯೋಗದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಕೃಪೆ: ದಿ ಪ್ರಿಂಟ್

ಅನುವಾದ: ನಿಖಿಲ್ ಕೋಲ್ಪೆ

ಇದನ್ನೂ ಓದಿ: ಪೆರಿಯಾರ್ ಹೇಳಿಕೆ ಉಲ್ಲೇಖಿಸಿ 370 ನೇ ವಿಧಿ ರದ್ದತಿಯನ್ನು ಖಂಡಿಸಿದ ನಟ ವಿಜಯ್ ಸೇತುಪಥಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ನಾಯಕ ಸುರ್ಜೇವಾಲಾಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ

0
ಬಿಜೆಪಿ ಸಂಸದೆಯ ವಿರುದ್ಧದ ಅವಹೇಳನಾಕಾರಿ ಹೇಳಿಕೆ ಆರೋಪದಲ್ಲಿ ಕಾಂಗ್ರೆಸ್‌ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿ ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿದೆ....