Homeಚಳವಳಿಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ? : ಭಾಗ 2

ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ? : ಭಾಗ 2

- Advertisement -
- Advertisement -

ಭಾಗ 1: ಸರಿಯಾದ ಮಾನದಂಡಗಳ ಮುಖಾಂತರ ನಮಗೆ ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ ನಿರ್ಧರಿಸೋಣ

ಮರಗಿಡಸಹಿತ ಕೃಷಿ ಪದ್ಧತಿ (ಫುಡ್ ಫಾರೆಸ್ಟ್): ನಮ್ಮ ವ್ಯವಸಾಯ ಭೂಮಿಯನ್ನು ಆಹಾರೋತ್ಪಾದನೆಯ ಕಾಡನ್ನಾಗಿ ಬದಲಾಯಿಸುವುದರಿಂದ ಕೃಷಿ ಬಿಕ್ಕಟ್ಟಿಗೆ ಒಂದಷ್ಟು ಪರಿಹಾರ ಸಿಗುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಒಂದು ಎಕರೆಯಲ್ಲಿ ಕನಿಷ್ಟ 500 ರಿಂದ 800 ಮರಗಿಡಗಳು, 20ರಿಂದ 30 ಜಾತಿಯ ಗಿಡಮರಗಳು, ತರಕಾರಿ, ಧಾನ್ಯಗಳು, ಕಾಳುಗಳು, ಹೀಗೆ ಎಲ್ಲಾ ಪದಾರ್ಥಗಳನ್ನು ಒಂದು ಎಕರೆಯಲ್ಲಿ ಆಯೋಜಿಸುವುದು ಫುಡ್ ಫಾರೆಸ್ಟ್ ನ ಮುಖ್ಯ ಪರಿಕಲ್ಪನೆ.

ನಮ್ಮ ವ್ಯವಸಾಯ ಭೂಮಿಯನ್ನು ಫುಡ್ ಫಾರೆಸ್ಟ್ ಆಗಿ ಬದಲಾಯಿಸುವುದರಿಂದ ಅಂದರೆ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದರಿಂದಾಗುವ ಅನುಕೂಲಗಳು ಅಥವಾ ಲಾಭಗಳನ್ನು ನೋಡುವುದಾದರೆ

  • ಹೆಚ್ಚು ಮಳೆ ಬರಲು ಸಹಕರಿಸುತ್ತವೆ – Tree makes their own Rain.
  • ಭೂಮಿಗೆ ನೆರಳನ್ನು ಒದಗಿಸುತ್ತವೆ
  • ಆಹಾರ ಪದಾರ್ಥದಲ್ಲಿ ಹೆಚ್ಚು ಪೌಷ್ಠಿಕಾಂಶಗಳನ್ನು ಪಡೆಯಲು ಸಹಕಾರಿಯಾಗುತ್ತದೆ
  • ಪ್ರತಿ ತಿಂಗಳು ಕನಿಷ್ಟ 7 ರಿಂದ 10 ಜಾತಿಯ ಹಣ್ಣುಗಳನ್ನು ಪಡೆಯಬಹುದಾಗಿದೆ
  • ಗಿಡಮರಗಳ ಬೇರುಗಳು ಜೀವಾಣುಗಳಿಗೆ ಆಹಾರವನ್ನು ಒದಗಿಸುತ್ತವೆ
  • ಬೆಳೆಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
  • ತಾಪಮಾನವನ್ನು ತಗ್ಗಿಸಲು ಸಹಕಾರಿಯಾಗುತ್ತವೆ
  • ಹೆಚ್ಚು ಆಮ್ಲಜನಕ, ಸಾರಜನಕವನ್ನು ಒದಗಿಸುತ್ತವೆ
  • ಪ್ರಾಣಿಪಕ್ಷಿಗಳಿಗಾಗಿ ಆಹಾರ ಒದಗಿಸುತ್ತಾ ಸಹಜೀವಿಗಳ ಸಂತತಿ ಹೆಚ್ಚಾಗಲು ಕಾರಣವಾಗುತ್ತದೆ.

ನಾಟಿ ತಳಿಗಳ ಬಳಕೆ: ಇತ್ತೀಚಿನ ದಿನಗಳಲ್ಲಿ ನಾಟಿಬೀಜಗಳ ಬಗ್ಗೆ ಒಂದು ಮಾತಿದೆ, ಇಳುವರಿ ನಾವು ನಿರೀಕ್ಷಿಸಿದ ಮಟ್ಟಕ್ಕಿಲ್ಲ ಎಂದು. ನಮ್ಮ ಭೂಮಿಯಲ್ಲಿ ಹ್ಯೂಮಸ್ ಮತ್ತು ಸಾವಯವ ಇಂಗಾಲವನ್ನು ವೃದ್ದಿಸಿದ್ದೆಯಾದಲ್ಲಿ ಬೇರೆ ಯಾವ ತಳಿಗಳಿಗೂ ಇಲ್ಲದ ಇಳುವರಿ, ರೋಗನಿರೋಧಕ ಶಕ್ತಿ, ಮಳೆ ಕಮ್ಮಿಯಾದರು ಬದುಕಬಲ್ಲ ಸಾಮಥ್ರ್ಯ ನಾಟಿತಳಿಗಳಿಗೆ ಇರುತ್ತದೆ. ಬಹುಮುಖ್ಯವಾಗಿ ನಮ್ಮ ಬಿತ್ತನೆ ಬೀಜಗಳನ್ನು ನಾವೆ ಆಯ್ಕೆ ಮಾಡಿಕೊಳ್ಳುವುದರಿಂದ ಒಂದಷ್ಟು ಖರ್ಚನ್ನು ಕಮ್ಮಿ ಮಾಡಿಕೊಳ್ಳಬಹುದಾಗಿದೆ.

ನಾಟಿ ಹಸುಗಳು: ನಾಟಿ ಹಸುವಿನ ಹಾಲು ಶ್ರೇಷ್ಠ ಎನ್ನುವುದು ವಾಸ್ತವ ಸತ್ಯ. ನಾಟಿತಳಿಗಳ ಸಗಣಿ ಮತ್ತು ಗಂಜಲ ಬೆಳೆಗಳಿಗೆ ಉತ್ಕೃಷ್ಟವಾದದ್ದು. ಸಸ್ಯಗಳ ಬೆಳವಣಿಗೆಗೆ ಕೋಟಿ ಕೋಟಿ ಜೀವಾಣುಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುತ್ತವೆ. ಇದರಲ್ಲಿ ಬಹುಮುಖ್ಯವಾಗಿ ಅವಶ್ಯವಿರುವ 72 ಜೀವಾಣುಗಳ ಹುಟ್ಟು ದೇಸಿ ಹಸುವಿನ ಸಗಣಿ ಮತ್ತು ಗಂಜಲದಲ್ಲಿ ಎನ್ನುವುದು ಹಲವಾರು ಪ್ರಯೋಗಗಳ ಮೂಲಕ ದೃಢಪಟ್ಟಿದೆ. ನಾಟಿ ಹಸುವಿನ ಸಗಣಿ ಮತ್ತು ಗಂಜಲವನ್ನು ಬಳಸಿ ತಯಾರಿಸುವ ಜೀವಾಮೃತವನ್ನು ಪ್ರತಿ 10-15 ದಿನಕ್ಕೊಂದು ಬಾರಿ ಭೂಮಿಗೆ ಹಾಕುವುದರಿಂದ ಜೀವಾಣುಗಳ ಸಂತತಿ ಹೆಚ್ಚಾಗುತ್ತದೆ. ಎರೆಹುಳುಗಳು ಅಸಂಖ್ಯಾತ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತವೆ. ಈ ಜೀವಾಣುಗಳು ಮತ್ತು ಎರೆಹುಳುಗಳು ಭೂಮಿಯೊಳಗಿರುವ ಸಸ್ಯ ಪೋಷಕಾಂಶಗಳನ್ನು ನಿರಂತರವಾಗಿ ಗಿಡಮರಗಳಿಗೆ ಒದಗಿಸುತ್ತವೆ. ಮತ್ತು ಯಾವುದೇ ಹೊರ ಗೊಬ್ಬರದ ಅಗತ್ಯವಿರುವುದಿಲ್ಲ. ಇದರಿಂದ ಖರ್ಚು ಕಮ್ಮಿಯಾಗುತ್ತಾ ಬರುತ್ತದೆ. ಇದು ರೈತನ ನೆಮ್ಮದಿಯ ಬದುಕಿಗೆ ದಾರಿಯಾಗುತ್ತದೆ.

ರಾಸಾಯನಿಕ ಮುಕ್ತ, ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥ: ರಾಸಾಯನಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳ ಇಳುವರಿ ಸರಾಸರಿಗಿಂತ ಹೆಚ್ಚಿರಬಹುದು. ಆದರೆ ಆ ಬೆಳೆಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ವಿಟಮಿನ್ಸ್, ಕಾರ್ಬೋಹೈಡ್ರೇಟ್ಸ್, ಮಿನರಲ್ಸ್ ಗಳ ಕೊರತೆಯಿದೆ ಮತ್ತು ಅಂತಹ ಬೆಳೆಗಳಲ್ಲಿ ರಾಸಾಯನಿಕ ಅಂಶವಿರುತ್ತದೆ ಎನ್ನುವುದು ದೃಢಪಟ್ಟಿದೆ. ಇದನ್ನು ಉಪಯೋಗಿಸುವ ನಮಗೂ ಸಹ ವಿಷ ಸೇರುವುದರಿಂದ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಕಳೆದ ವರ್ಷ ಭಾರತ ದೇಶದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಫ್ತಾದ ಭತ್ತವನ್ನು ಅತೀಹೆಚ್ಚು ರಾಸಾಯನಿಕಗಳ ಬಳಕೆಯಾಗಿರುವುದನ್ನು ದೃಢಪಡಿಸಿ ತಿರಸ್ಕರಿಸಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಬೆಳೆಗಳ ಆಯ್ಕೆ: ಪ್ರಸ್ತುತ ದಿನಮಾನಗಳಲ್ಲಿ ಶೇ.70 ಮಂದಿ ರೈತರು ಏಕ ಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ರಾಸಾಯನಿಕ ಕೃಷಿ ಪದ್ಧತಿಯಾದರು ಅಥವಾ ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಅನುಸರಿಸುತ್ತಿರುವ ರೈತರು, ಇಬ್ಬರೂ ಹಾಗೇ ಮಾಡುತ್ತಿದ್ದಾರೆ. ಆದ್ದರಿಂದ ನಾವು ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಥವಾ ಬೇರೆಯವರಿಗೆ ಬೆಳೆಗಳನ್ನು ಸೂಚಿಸುವಾಗ ಆಯಾ ವಾತಾವರಣಕ್ಕೆ, ಭೂಮಿಗೆ ಅನುಕೂಲವಾಗುವಂತಹ ಮರಗಿಡಗಳನ್ನು ಆಯ್ಕೆಮಾಡಿಕೊಳ್ಳಬೇಕು. ಇದಕ್ಕೊಂದು ಉದಾಹರಣೆ, ಅಡಿಕೆ, ತೆಂಗು ಮುಂತಾದ ಬೆಳೆಗಳು ಹೆಚ್ಚು ನೀರನ್ನು ಬೇಡುತ್ತವೆ. ಮಲೆನಾಡು, ಅರೆಮಲೆನಾಡು, ನದಿ ತೀರಲ್ಲಿ, ಸಮುದ್ರದ ದಡದಲ್ಲಿ ಈ ಜಾತಿಯ ಮರಗಳು ಹೆಚ್ಚು ಸದೃಢವಾಗಿ ಬೆಳೆಯುತ್ತವೆ. ಈ ತರಹದ ಬೆಳೆಗಳನ್ನು ಬಯಲುಸೀಮೆಯಲ್ಲಿ ಬೆಳೆಯುವ ಅಂಧಾನುಕರಣೆಯಿಂದಾಗಿ ನಮ್ಮ ಅಂತರ್ಜಲ ಮಟ್ಟ ಇನ್ನು ಇನ್ನು ಆಳಕ್ಕೆ ಕೊಂಡೊಯ್ದವು.

ರಾಸಾಯನಿಕಗಳ ಬಳಕೆ: ನಾನೊಮ್ಮೆ ರಾಸಾಯನಿಕಗಳನ್ನು ಮಾರುವ ಅಂಗಡಿಗೆ ಹೋಗಿದ್ದೆ. ಹತ್ತಾರು ರೈತರು ತಮ್ಮ ಬೆಳೆಗಳಿಗೆ ಅವಶ್ಯವಿರುವ ರಾಸಾಯನಿಕ ಗೊಬ್ಬರಗಳನ್ನು, ರೋಗಗಳನ್ನು ತಡೆಗಟ್ಟಲು ಔಷಧಿಗಳನ್ನು ತೆಗೆದುಕೊಂಡು ಹೋದರು. ನಾನು ಅಂಗಡಿಯ ಮಾಲೀಕನಿಗೆ ಕೇಳಿದೆ, ರೈತರು ಬಂದು ತಮಗೆ ಬೇಕಾದ್ದನ್ನು ಕೇಳುತ್ತಿದ್ದಾರೆ, ನೀವು ಯಾವ ರೀತಿ ಅವರಿಗಿರುವ ಸಮಸ್ಯೆಯನ್ನರಿತು ಗೊಬ್ಬರವನ್ನಾಗಲಿ, ಔಷಧಿಗಳನ್ನು ನೀಡುತ್ತಿರಿ ಎಂದು. ಅವರೆಂದರು, ಏನಿಲ್ಲಾ ಸಾರ್, ಕಮ್ಮಿಯೆಂದರೂ 3ರಿಂದ 5 ಔಷಧಿಯನ್ನು ನೀಡುತ್ತೇನೆ, ಅದರಲ್ಲಿ ಯಾವುದಕ್ಕಾದರೊಂದಕ್ಕೆ ರೋಗಗಳು ಸತ್ತು ಹೋಗುತ್ತವೆ ಅಂತ. ಎಂತಾ ದುರಂತ ಇದು. ಕೃಷಿಯ ಬಗ್ಗೆಯಾಗಲಿ, ರೋಗದ ಬಗ್ಗೆಯಾಗಲಿ ಯಾವುದೇ ಜ್ಞಾನವಿಲ್ಲದವರು ಬೆಳೆಗಳಿಗೆ ಔಷಧಿಯನ್ನು ನೀಡುತ್ತಾರೆ. ಈ ರೀತಿ ಔಷಧಿಗಳನ್ನು ಬಳಸಿದರೆ ಸಸ್ಯಗಳ ಬೆಳವಣಿಗೆಗೆ ಅವಶ್ಯವಿರುವ ಜೀವಾಣುಗಳು ಸಹ ಸಾಯುತ್ತವೆ. ಇದರ ನಷ್ಟವನ್ನು ತುಂಬುವವರು ಯಾರು? ಇಲ್ಲಿ ಯಾರು ಯಾವ ಮಾನದಂಡವನ್ನು ಅನುಸರಿಸುತ್ತಿದ್ದಾರೆ?

ಹತ್ತುಹದಿನೈದು ವರ್ಷಗಳ ಕೆಳಗೆ 1 ಬ್ಯಾಗ್ ಯೂರಿಯಾ ಉಪಯೋಗಿಸುತ್ತಿದ್ದವರು ಇಂದು 8ರಿಂದ 10 ಬ್ಯಾಗ್ ಉಪಯೋಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದುಕಡೆ ಹೆಚ್ಚು ಹೆಚ್ಚು ರಾಸಾಯನಿಕಗಳನ್ನು ಬಳಸಬೇಕಾದ ಪರಿಸ್ಥಿತಿ, ಇನ್ನೊಂದು ಕಡೆ ಖರ್ಚು ಕೂಡಾ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದೆ. ಹಾಗಾದರೆ ನಮ್ಮ ಕೃಷಿ ಪದ್ಧತಿ ಯಾವ ದಿಕ್ಕಿನ ಕಡೆ ಸಾಗುತ್ತಿದೆ?

ನಮಗರಿವಿರುವಂತೆ ರಾಸಾಯನಿಕಗಳ ಬಳಕೆಯಿಂದಾಗುತ್ತಿರುವ ದುಷ್ಪರಿಣಾಮ ಯಶಸ್ಸಿನ ಮಾಪನವಾಗಬೇಕೆ? ಜೀವಾಣುಗಳು ಕೊಲ್ಲಲ್ಪಡುತ್ತಿರುವುದು ಯಶಸ್ಸಿನ ಮಾಪನವಾಗಬೇಕೆ? ಅಂತರ್ಜಲಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗದ ಕೃಷಿ ಪದ್ಧತಿ ಯಶಸ್ಸಿನ ಮಾಪನವಾಗಬೇಕೆ? ಹ್ಯೂಮಸ್ ಮತ್ತು ಸಾವಯವ ಇಂಗಾಲದ ವೃದ್ಧಿಗೆ ಕಾರಣವಾಗದ ಕೃಷಿ ಪದ್ಧತಿ ಯಶಸ್ಸಿನ ಮಾಪನವಾಗಬೇಕೆ? ಯಾವುದು ನಮ್ಮ ಮಾಪನವೆನ್ನುವುದನ್ನು ಮೊದಲು ನಿರ್ಧರಿಸಬೇಕಾಗಿದೆ.

ಹಸಿರು ಕ್ರಾಂತಿಯ ಆರಂಭದ ದಿನಗಳಲ್ಲಿ ನಮಗೆ, ಅಂದರೆ ಭಾರತದಲ್ಲಿ ಆಹಾರದ ಕೊರತೆಯಿತ್ತು. ಅಂದಾಜು ಶೇ.50ಕ್ಕಿಂತ ಹೆಚ್ಚಿನ ಆಹಾರ ಪದಾರ್ಥಗಳು ಹೊರದೇಶದಿಂದ ರಫ್ತಾಗುತ್ತಿತ್ತು. ನಮ್ಮ ಕೃಷಿ ವಿಜ್ಞಾನಿಗಳು, ಸರ್ಕಾರ, ಕೃಷಿ ಇಲಾಖೆಯ ಅವಿರತ ಪರಿಶ್ರಮದಿಂದ ಅಂದಿನ ಸಂಕಷ್ಟದಿಂದ ನಾವು ಹೊರಬಂದೆವು ಎನ್ನುವುದು ಎಷ್ಟು ಸತ್ಯವೊ, ಈ ದಿನ ನಾವು ಅನುಸರಿಸುತ್ತಿರುವ ಕೃಷಿ ಪದ್ಧತಿಯಿಂದ ಅಂದರೆ ಹೆಚ್ಚು ರಾಸಾಯನಿಕಗಳ ಬಳಕೆ, ಮರಗಿಡಗಳಿಂದ ಕೂಡಿದ ಮಿಶ್ರಬೆಳೆ ಪದ್ಧತಿಯನ್ನು ಕಡೆಗಣಿಸಿರುವುದು, ಭೂಮಿ ತನ್ನ ಬಲವನ್ನು ಕಳೆದುಕೊಂಡಿರುವುದು, ಒಂದು ಬೆಳೆ ತೆಗೆಯಲು ಅಗತ್ಯವಿರುವ ಒಟ್ಟು ಪದಾರ್ಥಗಳಲ್ಲಿ ಶೇ.50ರಿಂದ 70 ಭಾಗದಷ್ಟು ಮಾರುಕಟ್ಟೆಯಿಂದ ಕೊಂಡು ತರುತ್ತಿರುವುದರಿಂದ ಖರ್ಚು ಹೆಚ್ಚಾಗುತ್ತಿರುವುದು, ಜೀವಾಣುಗಳ ಸಂಖ್ಯೆ ನಶಿಸುತ್ತಿರುವುದು, ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದು ಕೂಡ ಅಷ್ಟೇ ಸತ್ಯ.

ಹಾಗಾದರೆ ನಮ್ಮ ಅಲೋಚನಾ ವಿಧಾನ ಹೇಗಿರಬೇಕು? ಯಾವ ಕೃಷಿ ಪದ್ಧತಿಯು ಭೂಮಿಯ ಸಾವಯವ ಇಂಗಾಲದ ಪ್ರಮಾಣವನ್ನು ಮತ್ತೆ ಶೇ.8ಕ್ಕೆ ತಲುಪಿಸಿ, ನೆಲದ ಸತ್ವವನ್ನು ಮರುಪೂರಣ ಮಾಡುವುದೋ, ಅದು ಭೂಮಿಯ ಆರೋಗ್ಯಕ್ಕೂ, ಬೆಳೆಗಳ ಆರೋಗ್ಯಕ್ಕೂ, ಅದನ್ನು ಸೇವಿಸುವ ಜೀವಾಣುಗಳ ಆರೋಗ್ಯಕ್ಕೂ ಅಗತ್ಯ ಎನ್ನುವುದನ್ನು ಮೊದಲು ಮನದಟ್ಟು ಮಾಡಿಕೊಳ್ಳೋಣ. ನಾರಾಯಣರೆಡ್ಡಿಯವರ ಒಡಲ ಮಾತನ್ನು ಕೇಳಿಸಿಕೊಳ್ಳೋಣ… ಇದನ್ನು ಯಾವ ಕೃಷಿ ಪದ್ಧತಿ ಬೇಕು ಎನ್ನುವುದಕ್ಕೆ ಅಳತೆಗೋಲು ಮಾಡಿಕೊಳ್ಳೋಣ. ಇದರೊಡನೆ ಪ್ರೊ. ಶ್ರೀಪಾದ್ ಎ ದಾಭೋಲ್ಕರ್‍ರವರು ಪ್ರತಿಪಾದಿಸಿದ ಬೆಳಕಿನ ತೀವ್ರತೆಗೆ ಅನುಗುಣವಾಗಿ ವೈವಿಧ್ಯ ಬೆಳೆ ಪದ್ಧತಿ ಅನುಸರಿಸಿ ಕೃಷಿಯನ್ನು ಲಾಭದಾಯಕವಾಗಿಸಿ ರೈತರು ಉಸಿರಾಡುವಂತಹ ಕೃಷಿ ಪದ್ಧತಿ ನಮ್ಮದಾಗಲಿ.

ಮೊದಲು ಸಹಜ ಕೃಷಿ ಎಂದರೆ ಏನೆಂದು ಅರ್ಥ ಮಾಡಿಕೊಳ್ಳ ಬೇಕಿರುವುದರಿಂದ ಸದ್ಯಕ್ಕೆ ಇಷ್ಟು ಹೇಳಬೇಕೆನಿಸುತ್ತದೆ. ಮುಂದೆ ಈ ಕುರಿತು ಚರ್ಚೆಯನ್ನು ಮುಂದುವರೆಸೋಣ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ: ಮತಗಟ್ಟೆ ಬಳಿ ಗುಂಡಿನ ದಾಳಿ ನಡೆಸಿದ ಮೂವರ ಬಂಧನ

0
ಇಂಫಾಲ್ ಪೂರ್ವ ಜಿಲ್ಲೆಯ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ ಮೂವರನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಬಂಧಿತ ಮೂವರು ವ್ಯಕ್ತಿಗಳು ಶುಕ್ರವಾರ ಇಂಫಾಲ್ ಪೂರ್ವ ಜಿಲ್ಲೆಯ ಮೊಯಿರಂಗ್ಯಾಂಪು ಸಾಜೆಬ್‌ನಲ್ಲಿ ನಡೆದ...