Homeಡೇಟಾ ಖೋಲಿಎನ್ನಾರ್ಸಿ, ಸಿಎಬಿ ಹಾಗೂ ಎನ್‍ಪಿಆರ್ ಎನ್ನುವ ಮೂರು ಅಂಕದ ನಾಟಕ

ಎನ್ನಾರ್ಸಿ, ಸಿಎಬಿ ಹಾಗೂ ಎನ್‍ಪಿಆರ್ ಎನ್ನುವ ಮೂರು ಅಂಕದ ನಾಟಕ

- Advertisement -
- Advertisement -

ನಮ್ಮ ಘನ ಸರಕಾರದವರು ನೀನು ಯಾರು ಅನ್ನೋ ಪ್ರಶ್ನೆ ಸೀದಾ ಸೀದಾ ಕೇಳೋದನ್ನ ಬಿಟ್ಟು ನಮ್ಮೆಲ್ಲರ ಪೌರತ್ವದ ಪುರಾವೆ ಕೇಳಾಕ ಹತ್ಯಾರ. ನೀವು ಓದಿದ್ದು ಸರಿ. ನಮ್ಮೆಲ್ಲರನ್ನೂ ಕೇಳಲಿಕ್ಕೆ ಹತ್ಯಾರ. ಬರೇ ಮುಸಲಮಾನರದಲ್ಲ.

ಇದರದು ಮೂರು ರೂಪ ಅವ. ಒಂದೊಂದಾಗಿ ನಮ್ಮನ್ನ ಸೀಳಿ ನೋಡೋ ಇವನ್ನ ನಾವೂ ಸೀಳಿ ನೋಡೋಣ.

ಒಂದು ಎನ್‍ಪಿಆರ್
(ರಾಷ್ಟ್ರೀಯ ಜನಸಂಖ್ಯಾ ದಾಖಲೆಪಟ್ಟಿ)
ಇದು ಸರ್ವೇಸಾಧಾರಣ ರಹವಾಸಿಗಳ ಪಟ್ಟಿ. ಇದರ ಮೂಲ ದಾಖಲೆಗಳನ್ನು ಜನಗಣತಿಯಿಂದ ಪಡೆಯಲಾಗುತ್ತದೆ. ಆದರೆ ಮನೆಮನೆಗೆ ಭೇಟಿ ನೀಡಿ ಅದನ್ನು ಪರಿಶೀಲಿಸಲಾಗುತ್ತದ. 2015 ರಲ್ಲಿ ಇದರ ಮೊದಲ ಪ್ರಯತ್ನ ನಡೆಯಿತು. ಎರಡನೇ ಹಂತದಲ್ಲಿ ಇದು 2020ರ ಎಪ್ರಿಲ್‍ನಲ್ಲಿ ಆರಂಭ ಆಗತದ.
ಇದರ ಪ್ರಕಾರ ಕಳೆದ ಆರು ತಿಂಗಳಿಂದ ಭರತ ಖಂಡದಲ್ಲಿ ಇದ್ದವರು ಹಾಗೂ ಅಥವಾ ಮುಂದಿನ ಆರು ತಿಂಗಳು ಇಲ್ಲಿ ಇರಬೇಕೆನ್ನುವವರು ಇದರ ಪ್ರಕಾರ ಸರ್ವೇಸಾಧಾರಣ ರಹವಾಸಿಗಳು.

ನಿಮ್ಮ ಮನೆಯ ಬೆಲ್ಲು ಬಡಿದು ನಿಮ್ಮನ್ನು ಕೇಳುವ ಪ್ರಶ್ನೆಗಳು ಇವು- ಹೆಸರು, ಲಿಂಗ, ಹುಟ್ಟಿದ ಸ್ಥಳ, ದಿನಾಂಕ, ಮನೆಯ ಮುಖ್ಯಸ್ಥನೊಂದಿಗೆ ಸಂಬಂಧ, ಅಪ್ಪ, ಅವ್ವನ ಹೆಸರು, ಮದುವೆಯಾಗಿದ್ದರ ಹೆಂಡತಿ/ ಗಂಡನ ಹೆಸರು, ಕೆಲಸ, ಈಗ ಇರುವ ವಿಳಾಸ, ಇಲ್ಲಿ ಎಷ್ಟು ದಿವಸ ಉಳದೀರಿ? ಕಾಯಂ ವಿಳಾಸ, ವಿದ್ಯಾಭ್ಯಾಸ ಹಾಗೂ ಇತರ ವಿವರಗಳು. ನೀವು ಕೊಟ್ಟ ಮಾಹಿತಿ ಸರಕಾರದ ಹತ್ತಿರ ಇರೋ ಮಾಹಿತಿಗೆ ಹೊಂದಲಿಲ್ಲಾ ಅಂದರ ಬೇರೆಯವರು ಬರತಾರ. ಅವರು ನಿಮ್ಮ ಬೆಲ್ಲನ್ನೂ ಬಡಿಯಬಹುದು, ನಿಮ್ಮನ್ನೂ ಬಡಿಯಬಹುದು.

ಇನ್ನೊಂದು ಎನ್‍ಆರ್‍ಸಿ.
ಈ ದಸ್ತಾವೇಜಿನ ಹೆಸರು ರಾಷ್ಟ್ರೀಯ ನಾಗರಿಕರ ದಾಖಲೆಪಟ್ಟಿ. ಇದನ್ನು ಉಪಯೋಗಿಸಿ ಬೇರೆ ದೇಶದಿಂದ ಬಂದ ನುಸುಳುಕೋರರ ಹೆಸರು ಹಾಕಿ ಅವರನ್ನು ಅವರ ದೇಶಕ್ಕೆ ವಾಪಸು ಕಳಿಸಬಹುದು. ದಾಖಲೆ ಇಲ್ಲದ ಜನರನ್ನು ಗುರುತಿಸಿ ಅವರನ್ನು ಗೈರು ನಾಗರಿಕರು ಅಂತ ಬರೆಯೋದು. ಆಮ್ಯಾಲೆ ಅವರನ್ನು ಹಿಡದು ಇಡಲಿಕ್ಕೆ ದೊಡ್ಡ ದೊಡ್ಡ ಹಿಡಿದಿಟ್ಟುಕೊಳ್ಳುವ ಕೇಂದ್ರಗಳನ್ನು ಕಟ್ಟೋದು.

ಒಂದು ಸಲೆ ಅಸ್ಸಾಮಿನೊಳಗ ಇದನ್ನ ಮಾಡಿ 19 ಲಕ್ಷ ಜನರನ್ನ ಗೈರು ನಾಗರಿಕರು ಅಂತ ಗುರುತಿಸಿದರು. ಅದರೊಳಗ 11 ಲಕ್ಷ ಹಿಂದೂಗಳು, ಎಂಟು ಲಕ್ಷ ಮುಸಲಮಾನರು. ಈಗ ಅಲ್ಲಿ ಇಂಥಾ ಕೇಂದ್ರ, ಅಥವಾ ಬಯಲು ಜೈಲಿನ ತಯಾರಿ ನಡದದ.

ಎನ್ನಾರ್ಸಿ ಅಧಿಕಾರಿಗಳು
ನಿಮ್ಮನ್ನ ಬಂದು ಏನು ಕೇಳತಾರಪಾ ಅಂದರ ನಿಮ್ಮ ಆಧಾರ ಕಾರಡು ಅದೇನು? ಓದಿದ್ದರ ಎಸ್ಸೆಸೆಲ್ಸಿ ಅಂಕ ಪಟ್ಟಿ ಅದೇನು? ಮತ್ತ ಏನೇನ ಅದಾವ ಅಂತ ಕೇಳಬಹುದು.

ಎಲ್ಲಾಕ್ಕಿಂತ ಮುಖ್ಯವಾಗಿ ನಿಮಗೂ ನಿಮ್ಮಪ್ಪನಿಗೂ ಸಂಬಂಧ ಏನು, ಅದನ್ನ ಸಿದ್ಧ ಮಾಡಿ ತೋರಿಸೋ ಸಾಕ್ಷಿ ಏನು ಅಂತ ಕೇಳತಾರ.

ಮಹಾಮಹಿಮ ಅಮಿತ ಶಾ ಅವರು ಹೊರದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫಘಾನಿಸ್ತಾನದೊಳಗ ಧರ್ಮದ ಆಧಾರದ ಮ್ಯಾಲೆ ಹಿಂಸೆ ಅನುಭವಿಸಿ ಭಾರತಕ್ಕ ಓಡಿಬಂದ ಹಿಂದೂಗಳನ್ನ ಇಲ್ಲೇ ಇಟಗೋತೇವಿ, ಹೊಳ್ಳಿ ಕಳಸಂಗಿಲ್ಲಾ ಅಂತ ಹೇಳ್ಯಾರ. ಹಿಂದೂಗಳ ಸಂಗ್ತೆ ಜೈನ, ಬೌದ್ಧ, ಸಿಖ್, ಪಾರಸೀ, ಕ್ರಿಶ್ಚಿಯನ್‍ಗಳನ್ನೂ ಕರಕೋತೇವಿ ಅಂತ ಹೇಳ್ಯಾರ. ಇನ್ನೊಂದು ಧರ್ಮದವರನ್ನ ಜಾಣತನದಿಂದ ಕೈ ಬಿಟ್ಟಾರ. ಹಂಗನ, ಭಾರತದೊಳಗ ಧರ್ಮದ ಆಧಾರದ ಮ್ಯಾಲೆ ಹಿಂಸೆ ಅನುಭವಿಸಿದವರು ಎಲ್ಲೆ ಹೋಗಬೇಕು ಅಂತ ಹೇಳೋದು ಮರತ ಬಿಟ್ಟಾರ. ಬರೇ ಅಸಾಮಿನಂಥ ಗಡಿ ರಾಜ್ಯಗಳಲ್ಲೆ ಅಲ್ಲ, ದೇಶಾದ್ಯಂತ ಇದನ್ನ ಮಾಡಬೇಕು ಅಂತ ಶಾಜೀ ಅಪ್ಪಣೆ ಕೊಡಸ್ಯಾರ. ಅದನ್ನ ಕೇಳಿ ನಮ್ಮ ಗೃಹಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರೂ ಅದ ರಾಗ ಹಾಡ್ಯಾರ. ನಿಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಸೋಮಪ್ಪಾ ರಾಯಪ್ಪಾ ಬೊಮ್ಮಾಯಿ ಅವರು ಸಮಾಜವಾದಿಗಳು ಆಗಿದ್ದರು. ಎಮ್ ಎನ್ ರಾಯ ಅವರ ವಿಶ್ವ ಮಾನವತ್ವದ ಸಿದ್ಧಾಂತದ ಪ್ರತಿಪಾದಕರಾಗಿದ್ದರು ಅನ್ನೊದನ್ನ ಅವರಿಗೆ ಯಾರೂ ನೆನಪು ಮಾಡಿದಂಗ ಕಾಣಂಗಿಲ್ಲ.

ಉಪೇಂದ್ರ ಅವರ ಏಕೆ 47 ನಿಂದಾಗಿ ಒಂದು ಜೈಲು ಫೇಮಸ್ ಆತಲ್ಲಾ ಅದರ ಹೆಸರು ಪರಪ್ಪನ ಅಗ್ರಹಾರ ಅಂತ. ಅದರೊಳಗ 2200 ಕೈದಿಗಳನ್ನ ಇಡಬಹುದು. ಆದರ 4400 ಜನರನ್ನ ಇಟ್ಟಾರ. ಇನ್ನು 19 ಲಕ್ಷ ಜನರನ್ನು ಇಡೋ ಜೈಲು ಎಷ್ಟು ದೊಡ್ಡದಿರಬಹುದು, ಅದರಾಗ ಏಷ್ಟು ಅಡಿಗಿ ಮಾಡಬೇಕು, ಹೆಂಗ ಅವರೆಲ್ಲರಿಗೂ ಊಟಕ್ಕ ಹಾಕಬೇಕು, ವಿಚಾರ ಮಾಡರಿ. ಅದರ ಸಲುವಾಗಿ ಕೇಂದ್ರ ಸರಕಾರ ಈಗಾಗಲೇ 50 ಕೋಟಿ ರೂಪಾಯಿ ಕೊಟ್ಟಾರ. ಅವರನ್ನು ಹೊರಗ ಬಿಟ್ಟರ ಅವರು ದುಡಕೊಂಡ ತಿನ್ನತಿದ್ದರು. ಹಿಂಗ ಅವರನ್ನು ಕೂಡಿಸಿ ಊಟಕ್ಕ ಹಾಕೋ ಪರಿಸ್ಥಿತಿ ಬರತಿದ್ದಿಲ್ಲಾ.

ಇನ್ನ ಇಡೀ ದೇಶದೊಳಗ ಈ ಕೇಂದ್ರಗಳನ್ನ ಮಾಡಲಿಕ್ಕೆ ಹೋದರ ಗತಿ?
ಮೂರನೆಯ ಬಹು ಚರ್ಚಿತ ವಿಷಯ ಸಿಎಬಿ ಅಥವಾ ನಾಗರಿಕತೆ ತಿದ್ದುಪಡಿ ಮಸೂದೆ. ಅದು ತಿರಗಿ ಎರಡೂ ಸಂಸತ್ ಸಭೆಗಳಲ್ಲಿ ಪಾಸಾಗಿ ಮಧ್ಯರಾತ್ರಿಯೊಳಗ ರಾಷ್ಟ್ರಪತಿಗಳ ಅಂಕಿತ ಪಡದು ಕಾನೂನು ಆಗಿ ಹೋಗೇದ. ಅದು ಈಗ ಸಿಎಎ. ನಾಗರಿಕತೆ ತಿದ್ದುಪಡಿ ಕಾಯಿದೆ. ಅದರ ಪ್ರಕಾರ ನೈಸರ್ಗೀಕರಣದ ನಾಗರಿಕತೆ ಸಾಧ್ಯ ಇಲ್ಲ. ಅಂದರ ನಾನು ಭಾರತದ ಪ್ರಜೆ ಆಗಬೇಕು ಅಂತ ಅರ್ಜಿ ಹಾಕಿದರ ಅದು ಸಿಗೋದಿಲ್ಲ. ಇಷ್ಟು ದಿವಸ ಸಿಗತಿತ್ತು. ಈ ದೇಶದಾಗ 26 ತಿಂಗಳು ಅಥವಾ 5 ವರ್ಷ ಅಥವಾ 11 ವರ್ಷ ಕಳೆದವರು (ಕೆಲವು ಷರತ್ತುಗಳೊಂದಿಗೆ) ಮತ್ತು ಕಾಯಂ ಆಗಿ ಇಲ್ಲಿ ಉಳಿಯೋ ವಿಚಾರದವರು ಅರ್ಜಿ ಹಾಕಬಹುದಿತ್ತು. ಅವರಿಗೆ ನಾಗರಿಕತೆ ಸಿಗತಿತ್ತು. ಈಗ ಸಿಗಂಗಿಲ್ಲ. ಆದರ ಈ ಕಾಯಿದೆ ಎಲ್ಲ ಧರ್ಮದವರಿಗೆ ಲಾಗೂ ಆಗಂಗಿಲ್ಲ. ಹಿಂದೂಗಳು ಮತ್ತು ಜೈನ, ಬೌದ್ಧ, ಸಿಖ್, ಪಾರಸೀ, ಕ್ರಿಶ್ಚಿಯನ್ ಈ ಧರ್ಮದವರು ನೈಸರ್ಗೀಕರಣಗೊಳ್ಳಬಹುದು, ಮುಸಲಮಾನರಿಗೆ ಇದು ಸಾಧ್ಯ ಇಲ್ಲ.

ಇದು ಸಂವಿಧಾನ ವಿರೋಧಿ ಅಂತ ಕೆಲವರು ಹೇಳಲಿಕ್ಕೆ ಹತ್ಯಾರ. ಇಲ್ಲಾ, ಇದು ಬರೇ ಸಂವಿಧಾನ ವಿರೋಧಿ ಅಲ್ಲ. ಇದು ಮಾನವೀಯತೆಯ ಪರಿಕಲ್ಪನೆಗೆ ವಿರೋಧಿ ಅಂತ ಕೆಲವರು ಹೇಳಲಿಕ್ಕೆ ಹತ್ಯಾರ. ಅದು ಅರ್ಥ ಆಗಲಿಕ್ಕೆ ಸ್ವಲ್ಪ ಸಮಯ ಬೇಕಾಗಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...