Homeಅಂಕಣಗಳುಬಡವರಿಗೆ ಸಹಾಯವಾಗುವ ಸಂಶೋಧನಾ ಮಾರ್ಗೋಪಾಯಗಳಿಗೆ 2019ರ ಅರ್ಥವಿಜ್ಞಾನದ ನೊಬೆಲ್ ಪ್ರಶಸ್ತಿ

ಬಡವರಿಗೆ ಸಹಾಯವಾಗುವ ಸಂಶೋಧನಾ ಮಾರ್ಗೋಪಾಯಗಳಿಗೆ 2019ರ ಅರ್ಥವಿಜ್ಞಾನದ ನೊಬೆಲ್ ಪ್ರಶಸ್ತಿ

- Advertisement -
- Advertisement -

ಕಳೆದ ಡಿಸೆಂಬರ್‍ನಲ್ಲಿ ಸ್ಟಾಕ್‍ಹೋಮ್‍ನಲ್ಲಿ ನೊಬೆಲ್ ಪ್ರಶಸ್ತಿಗಳನ್ನು ಆಯಾ ಪುರಸ್ಕೃತರಿಗೆ ನೀಡಲಾಯಿತು. ಭಾರತೀಯರಾದ ಅಭಿಜಿತ್ ಬ್ಯಾನರ್ಜಿ ಅವರಿಗೆ ಅವರ ಪತ್ನಿ ಜೊತೆಗೆ ನೊಬೆಲ್ ಅವರ ನೆನಪಿನ ಪ್ರಶಸ್ತಿ ಬಂದಿತ್ತು. ಅವರು ಪ್ರಶಸ್ತಿ ಪಡೆಯಲು ಪಂಚೆಯುಟ್ಟಿದ್ದರೆ ಅವರ ಪತ್ನಿ ಸೀರೆಯುಟ್ಟಿದ್ದರು ಎನ್ನುವ ಸಂಗತಿಗಳೇ ನಮ್ಮ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದವು! ನಿಜಕ್ಕೂ ಭಾರತೀಯ ಸಂದರ್ಭದ ಸಂಶೋಧನೆಯ ಮಾರ್ಗಗಳ ಬಗೆಗೆ ಅವರು ಪಡೆದಿದ್ದ ಬಗೆಗೆ ಚರ್ಚೆಗಳಾಗಲೇ ಇಲ್ಲ. ಹಾಗಾದರೆ ಅದರ ವಿವರಗಳೇನು ಎಂಬುದನ್ನಷ್ಟು ನೋಡೋಣ.

ಜಗತ್ತಿನ ಬಡತನವನ್ನು ಕಡಿಮೆ ಮಾಡುವ ಕ್ರಮಗಳನ್ನು ವಿನ್ಯಾಸಗೊಳಿಸಲು ಉತ್ತಮ ಮಾರ್ಗ ಯಾವುದು? ಪ್ರಾಯೋಗಿಕ ಸಾಧ್ಯತೆಗಳುಳ್ಳ ನವೀನ ಮಾರ್ಗೋಪಾಯಗಳ ಸಂಶೋಧನೆಯನ್ನು ಕೈಗೊಂಡು ಮಾನವತೆಯ ಸಹಾಯಕ್ಕೆ ಉತ್ತರ ಕಂಡುಹಿಡಿಯುವ ಪ್ರಯತ್ನಕ್ಕಾಗಿ 2019ರ ನೊಬೆಲ್ ಅರ್ಥ ವಿಜ್ಞಾನದ ಬಹುಮಾನವನ್ನು ಭಾರತೀಯರಾಗಿ ಹುಟ್ಟಿ ಅಮೆರಿಕದಲ್ಲಿ ನೆಲೆಸಿರುವ ಪ್ರೊ.ಅಭಿಜಿತ್ ಬ್ಯಾನರ್ಜಿ ಅವರಿಗೆ ಮತ್ತು ಅವರ ಪತ್ನಿ ಫ್ರೆಂಚ್ ಮೂಲದ ಎಸ್ತರ್ ಡುಫ್ಲೊ ಅವರಿಗೆ, ಜೊತೆಗೆ ಮೈಕೆಲ್ ಕ್ರೆಮೆರ್ ಅವರಿಗೆ ನೀಡಲಾಗಿದೆ. ಅಭಿಜಿತ್ ಮೂಲತಃ ಪಶ್ಚಿಮ ಬಂಗಾಳದವರು, ನವದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪಡೆದವರು. ಇದೀಗ ತಮ್ಮ ಪತ್ನಿಯೊಡನೆ ಮೆಸಾಚುಸೇಟ್ಸ್ ತಾಂತ್ರಿಕ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ. ಮೈಕೆಲ್ ಕ್ರೆಮೆರ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ.

ಕಳೆದ ಎರಡು ದಶಕಗಳಿಂದ ಜಗತ್ತಿನೆಲ್ಲೆಡೆ ಗಮನಾರ್ಹವಾದ ಅಭಿವೃದ್ಧಿಯು ಸಾಧ್ಯವಾಗಿದೆ. ನಿರಂತರ ಬಡತನದಲ್ಲಿದ್ದ ದೇಶಗಳು 1995 ಮತ್ತು 2018 ಮಧ್ಯೆ ತಮ್ಮ ಆರ್ಥಿಕ ಸುಧಾರಣೆಯ ಸೂಚ್ಯಾಂಕದಲ್ಲಿ ದುಪ್ಪಟ್ಟು ಕಂಡಿವೆ. ಶಾಲೆಯನ್ನು ಸೇರಿ ಕಲಿಯುವ ಮಕ್ಕಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಇಷ್ಟಾದರೂ ಅತ್ಯಂತ ದೊಡ್ಡ ದೊಡ್ಡ ಸಮಸ್ಯೆಗಳಿನ್ನೂ ಬಗೆಹರಿಯದಾಗಿವೆ. 70 ಕೋಟಿಗೂ ಹೆಚ್ಚು ಜನರು ಇನ್ನೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಪ್ರತಿ ವರ್ಷವೂ 50 ಲಕ್ಷ ಮಕ್ಕಳು ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಅಸುನೀಗುತ್ತಿವೆ. ನವಜಾತ ಶಿಶುಗಳ ಮರಣವು ಬಡವರನ್ನೇ ಕಾಡುತ್ತಿದೆ. ಜಗತ್ತಿನ ಅರ್ಧದಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣವನ್ನೂ ಪೂರ್ತಿಗೊಳಿಸಲಾರದ ಸ್ಥಿತಿ ಇನ್ನೂ ಇದೆ. ಇಂತಹ ಸಂದರ್ಭವನ್ನು ಆರ್ಥಿಕ ಸುಧಾರಣೆಯ ಹಿನ್ನೆಲೆಯಲ್ಲಿ ಬಗೆಹರಿಸುವುದು ಹೇಗೆ? ಜಾಗತಿಕವಾಗಿ ಬಡತನವನ್ನು ಕಡಿಮೆ ಮಾಡಲು ಬಳಸಬೇಕಾದ ಕ್ರಮಗಳನ್ನು ಅದ್ಭುತ ರೂಪಕದಿಂದ ವಿವರಿಸಬಹುದು. ಅದನ್ನು Problem of the Last Mile (ಕೊನೆಯ ಕ್ಷಣದ ಸಮಸ್ಯೆ) ಎನ್ನುತ್ತಾರೆ. ಅಂದರೆ ಎಲ್ಲವೂ ಇದ್ದು ಇನ್ನೇನು ಕೊನೆಯನ್ನು ಮುಟ್ಟಬೇಕು ಆದರೆ ಅದು ಆಗದಿರುವುದೇ ದೊಡ್ಡ ಸಮಸ್ಯೆ. ನಿಜಕ್ಕೂ ಕೊನೆಯ ಕ್ಷಣವನ್ನು ತಲುಪಲಾಗದ್ದು!

ಅಕ್ಷರಶಃ ಕೊನೆಯ ಹಂತದ ಸೇತುವೆಯನ್ನು ಕಟ್ಟುವ ರೂಪಕವಾದ ಈ ಮಾತಿನಿಂದ ಇದನ್ನು ಉದಾಹರಿಸುತ್ತಾರೆ. ಶಾಲೆಗಳಿವೆ! ಆದರೆ, ಮಕ್ಕಳನ್ನು ಕಳಿಸಲು ಆಗುತ್ತಿಲ್ಲ. ಔಷಧಗಳಿವೆ, ಆದರೆ ಅವುಗಳನ್ನು ಕೊಟ್ಟು ರೋಗ ಬಂದ ಮಕ್ಕಳನ್ನು ಉಳಿಸಿಕೊಳ್ಳಲಾಗುತ್ತಿಲ್ಲ! ಹೀಗಿದ್ದಾಗ ಅವುಗಳ ಪರಿಹಾರವಾದರೂ ಹೇಗೆ? ಸಾಮಾನ್ಯವಾಗಿ ಆರ್ಥಿಕ ಅಧ್ಯಯನಗಳು ಅದರಲ್ಲೂ ಸಮುದಾಯದ ಸಮಸ್ಯೆಗಳ ಕುರಿತಾದವನ್ನು ವೈಯಕ್ತಿಕ ನೆಲೆಯಲ್ಲಿ ಉತ್ತರಿಸಲು ಆಗದು. ಹಾಗಂತ ಇಡಿಯಾಗಿಯೂ ಸೂಚಿಸಲೂ ಆಗದು. ಹಾಗಾದರೆ ಉತ್ತರಗಳನ್ನು ಕಂಡುಕೊಳ್ಳಬೇಕಾದರೂ ಹೇಗೆ ಮಾಡುವುದು? ಇದನ್ನೇ ಈ ಕೊನೆಯ ಕ್ಷಣದ ಸಮಸ್ಯೆಯಾಗಿ ನೋಡುವ ಕ್ರಮ. ಅದನ್ನು ಸೇತುವೆ ಕಟ್ಟಿಯೇ ತಲುಪುವುದು ತಾನೇ? ಜಾಗತಿಕ ಪರಿಹಾರಗಳನ್ನು ಹುಡುಕುವಾಗ ಇದನ್ನು ಸಣ್ಣಸಣ್ಣ ಆಯ್ಕೆಗಳಿಂದ ಪ್ರಶ್ನಿಸಿ ಉತ್ತರಗಳನ್ನು ಕಂಡುಕೊಂಡ ಜಾಣತನವನ್ನು ಸಂಶೋಧಕರು ಮಾಡಿದ್ದಾರೆ. ಅದಕ್ಕಾಗಿ ಪ್ರಾಯೋಗಿಕ ಮಾರ್ಗಗಳನ್ನು ಅನುಸರಿಸಿದ್ದಾರೆ.

ಭಾರತವೂ ಸೇರಿದಂತೆ ಆಫ್ರಿಕಾದ ಪ್ರಮುಖ ಪ್ರದೇಶಗಳಲ್ಲಿ ಪ್ರಯೋಗಗಳನ್ನು ಕೈಗೊಂಡು ಒಟ್ಟು ಎರಡು ದಶಕಗಳ ಕಾಲ ಅಧ್ಯಯನಗಳನ್ನು ಮಾಡಿ ಬಡತನವನ್ನು ಕಡಿಮೆ ಮಾಡುವ ಅಧ್ಯಯನಗಳನ್ನು ಮಾಡಬೇಕಾದ ಮಾರ್ಗ ಸೂಚಿಗಳನ್ನು ಕಂಡುಹಿಡಿದಿದ್ದಾರೆ. ಇದನ್ನೇ Experimental Economic Studies ಪ್ರಾಯೋಗಿಕ ಆರ್ಥಿಕ ಅಧ್ಯಯನಗಳು ಎಂಬುದಾಗಿ ವಿವರಿಸಿದ್ದಾರೆ. ಇದನ್ನೇ ಇದೀಗ Experimental Economics ಎಂಬ ಶಾಖೆಯಾಗಿಯೂ ನೋಡಲಾಗುತ್ತಿದೆ. ಹಾಗಂತ ಹೀಗೆ ಹೆಸರಿಟ್ಟರೆ ಸಾಕೇ? ನಿಜಕ್ಕೂ ಅವರು ಮಾಡಿ ತಳಪಾಯ ಹಾಕಿಕೊಟ್ಟ ಬಗೆಯಾದರೂ ಯಾವುದು? ಎಂಬ ಕುತೂಹಲವಂತೂ ಉಳಿಯುತ್ತದಲ್ಲವೆ? ಅದನ್ನೇ ಮುಂದೆ ಸ್ವಲ್ಪ ಹೆಚ್ಚಿನ ವಿವರಗಳಿಂದ ನೋಡೋಣ. ನೇರವಾಗಿ ಇದನ್ನು “Randomistas” ಅಥವಾ ವೈದ್ಯಕೀಯ ಅಧ್ಯಯನಗಳಲ್ಲಿ ಬಳಸುವ Randomizaion in Clinical Studies – (ಯಾದೃಚ್ಛೀಕರಣ ಅಥವಾ ಎಲ್ಲದಕ್ಕೂ ಸಮಾನ ಅವಕಾಶ ಕೊಡುವ ಬಗೆ ಅಥವಾ ಅಲ್ಲಲ್ಲಿ ಮಾಡಿದ ಆಯ್ಕೆಗಳನ್ನೊಳಗೊಂಡ ಬಗೆ) ವನ್ನು ಆರ್ಥಿಕ ಅಧ್ಯಯನಗಳಿಗೂ ಅಳವಡಿಸಿಕೊಂಡು ನಿಭಾಯಿಸಿದರು. ಅವರು ಆಯ್ಕೆ ಮಾಡಿದ ಮೂಲ ಸಂಗತಿಗಳು, 1) ಶಿಕ್ಷಣ ಮತ್ತು 2) ಆರೋಗ್ಯ.. ಅವನ್ನು ಮತ್ತಷ್ಟು ವಿವರಗಳಿಂದ ಮುಂದುವರೆಯೋಣ.

ಶಿಕ್ಷಣ

ಶಾಲೆಗೆ ಸೇರುವ ಸಮಸ್ಯೆಗಳು ಒಂದಾದರೆ ಸೇರಿದ ಮೇಲೆ ಕಲಿಯುವುದು ಮತ್ತೊಂದು ಸಮಸ್ಯೆ, ಕಲಿಯುವುವಾಗಲೂ ಎಲ್ಲರೂ ಸಾಧನೆಯ ಹಾದಿಯಲ್ಲೇ ಸಾಗಿ ಕಲಿಯುತ್ತಾರೆಯೇ ಎಂಬುದು ಮತ್ತೊಂದು ಸಮಸ್ಯೆ. ಆರ್ಥಿಕ ಪರಿಹಾರೋಪಾಯಗಳಲ್ಲಿ ಮುಫತ್ತಾಗಿ ಕೊಡುವುದು, ಭಾಗಶಃ ಸಹಾಯ ಮಾಡುವುದು, ಕೊಟ್ಟ ಭಾಗವನ್ನು ಬಳಸಿದ್ದಕ್ಕೆ ಮತ್ತೊಂದು ಇನಾಮು ಕೊಡುವುದು ಇತ್ಯಾದಿ ಮಾರ್ಗಗಳ ಪ್ರಯೋಗಗಳನ್ನು ಸಮುದಾಯಗಳಲ್ಲಿ ಅವಕಾಶಗಳನ್ನು ಸೃಜಿಸುವ ಮೂಲಕ ಅಧ್ಯಯನಗಳನ್ನು ಕೈಗೊಂಡರು. ಭಾರತೀಯರೇ ಆದ ಅಭಿಜಿತ್ (ಆಗಿನ್ನೂ) ತಮ್ಮ ವಿದ್ಯಾರ್ಥಿನಿಯಾದ ಎಸ್ತರ್ ಜೊತೆ ಭಾರತದಲ್ಲಿ ಅದರಲ್ಲೂ ಮುಂಬಯಿ, ಗುಜರಾತಿನ ವಡೋದರಾಗಳ ಶಾಲೆಗಳಲ್ಲಿ ಅಧ್ಯಯನ ಕೈಗೊಂಡರು. ಮೈಕೆಲ್ ಆಫ್ರಿಕಾದ ಕೀನ್ಯಾದಲ್ಲಿ ಅಧ್ಯಯನ ಮಾಡಿದರು. ಇದಾದ ನಂತರ ಈಗ ಒಂದು ಲಕ್ಷಕ್ಕೂ ಹೆಚ್ಚಿನ ಶಾಲೆಗಳಲ್ಲಿ ಫಲಿತಗಳ ಮಾರ್ಗವನ್ನು ಅನುಸರಿಸಲಾಗುತ್ತಿದೆ.

ಮಕ್ಕಳಿಗೆ ಹೆಚ್ಚು ಪುಸ್ತಕಗಳನ್ನು ಒದಗಿಸುವ ಮೂಲಕ ಸಂಪನ್ಮೂಲಗಳನ್ನು ಒದಗಿಸಿದರೆ ಮಾತ್ರ ಪರಿಹಾರ ಸಿಕ್ಕುವುದಿಲ್ಲ. ಅದಕ್ಕಾಗಿ ಮಧ್ಯಾಹ್ನದ ಉಪಹಾರವನ್ನು ಸಾಧ್ಯ ಮಾಡಿದರು. ಅವೆರಡರ ಜೊತೆ ತೀರ ಕಲಿಕೆಯು ಕಷ್ಟವೆನಿಸುತ್ತಿದ್ದ ಕೆಲವು ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಶಿಕ್ಷಣ ಸುಧಾರಣೆಯ ಮಾರ್ಗಗಳನ್ನು ಸಾಬೀತು ಮಾಡಿದರು. ಇದನ್ನು ಅನುವು ಮಾಡಲು ಸಣ್ಣಸಣ್ಣ ಸಮುದಾಯಗಳ ಮೂಲಕ ವಿಸ್ತರಿಸುವ ಬಗೆಯನ್ನು ವಿಶ್ಲೇಷಿಸಿದ್ದಾರೆ. ಅಂತೂ ಇವು ಮೂರೂ ಕ್ರಮಗಳನ್ನು ವಿವಿಧ ಹರಹುಗಳಲ್ಲಿ ಅನುವುಗೊಳಿಸುವುದರಿಂದ ಒಂದಷ್ಟು ಪರಿಹಾರಗಳನ್ನು ಕಾಣಬಹುದು ಎಂಬುದು ಸಂಶೋಧನೆಯ ಸಾರ.

ಆರೋಗ್ಯ

ಮುಂದುವರೆದಂತೆ ಮಕ್ಕಳ ಆರೋಗ್ಯದ ಚಿಂತನೆ. ಈಗಂತೂ ಇಮ್ಯುನೈಜೇಶನ್ – ಲಸಿಕೆ ಹಾಕುವುದು ಮಕ್ಕಳನ್ನು ಆರೋಗ್ಯವಾಗಿ ಬೆಳೆಸುವ ಉತ್ತಮ ತಂತ್ರಜ್ಞಾನ ಎಂಬುದು ತಿಳಿದೇ ಇದೆ. ಆದರೂ ಎಲ್ಲರೂ ಲಸಿಕೆಗೆ ಒಪ್ಪಿಕೊಳ್ಳಲು ತುಸು ಕಷ್ಟ ಪಡಬೇಕಾಗುತ್ತದೆ. ಮನೆಮನೆಗೆ ಹೋಗಿ ಲಸಿಕೆ ಹಾಕುವುದು. ಇದು ಕೆಲವೊಮ್ಮೆ ಸಾಧ್ಯವಾಗಬಹುದು. ಮಕ್ಕಳು ಹುಟ್ಟಿದಾಗೆಲ್ಲಾ ಹೀಗೆ ಮಾಡಲು ಆಗದು. ಅದಕ್ಕೆ ಒಂದು ವ್ಯವಸ್ಥೆ ಮಾಡಿ ಅಲ್ಲಿಗೆ ಬರಲು ಪ್ರೇರೇಪಿಸುವುದು. ಬಂದವರಿಗೆ ಇನಾಮು ಕೊಡುವುದು. ಜೊತೆಗೆ ಲಸಿಕೆ ಹಾಕುವ ಸಾಮುದಾಯಿಕ ವ್ಯವಸ್ಥೆಗೆ ಮೊಬೈಲ್ ಸಾಧನಗಳನ್ನು ಒದಗಿಸುವುದು. ಹೀಗೆ ಇರುವ ತಂತ್ರಜ್ಞಾನ ಅಥವಾ ಸಂಪನ್ಮೂಲಗಳನ್ನೇ ವ್ಯವಸ್ಥಿತವಾಗಿ ಕೊನೆಯ ಹಂತ ಅಥವಾ ಅಂತಿಮ ಬಳಕೆಯಾಗುವಿಕೆಯನ್ನು ಜಾಗೃತಗೊಳಿಸುವ ಬಗೆಗಳನ್ನು ಸಾಮುದಾಯಿಕವಾಗಿ ನಿರ್ವಹಿಸುವ ಮಾರ್ಗಗಳ ಸಂಶೋಧನೆಗಳನ್ನು ಮಾಡಿ ನಿರೂಪಗಳ ಸಾಕ್ಷೀಕರಿಸಿದರು.

ಇವೆಲ್ಲವೂ ಕಳೆದ 20 ವರ್ಷಗಳಲ್ಲಿ ಆದ ಬದಲಾವಣೆಗಳನ್ನು ನಾವೂ ನೋಡಿರಲು ಸಾಧ್ಯವಿದೆ. ಹಾಗಾಗಿ ಇವೆಲ್ಲವೂ ಸರಳ ಅನ್ನಿಸಬಹುದು. ಆದರೆ ಇವೆಲ್ಲವೂ ಸಾಧ್ಯವಾಗಲು ಲಕ್ಷಾಂತರ ಮಕ್ಕಳು ಸಾವಿರಾರು ಶಾಲೆಗಳು ವಿವಿಧ ದೇಶಗಳು ಇಲ್ಲೆಲ್ಲಾ ನೈಜವಾದ ಪ್ರಯೋಗಗಳಿಂದ ಲಾಭಗಳನ್ನು ಸಾಕ್ಷೀಕರಿಸಿ ಅರ್ಥವಿಜ್ಞಾನದ ಅಧ್ಯಯನ ಕ್ರಮಗಳನ್ನೇ ವಿಶ್ಲೇಷಿಸಿ ಜಾಗತಿಕ ಬಡತನವನ್ನು ಕಡಿಮೆ ಮಾಡುವತ್ತ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

ಬಹುಮಾನಿತರಲ್ಲಿ ಎಸ್ತರ್ ಫ್ರೆಂಚ್ ಗಣಿತಜ್ಞರಾದ ಮೈಕೆಲ್ ಡುಫ್ಲೊ ಅವರ ಮಗಳಾಗಿ ಪ್ಯಾರಿಸ್ ನಲ್ಲಿ ಜನಿಸಿದ್ದರು. ಮೂಲ ಶಿಕ್ಷಣವನ್ನು ಫ್ರಾನ್ಸಿನಲ್ಲೇ ಮಾಡಿ, ಪಿಎಚ್.ಡಿಗೆ ಮೆಸಾಚುಸೆಟ್ಸ್ ತಾಂತ್ರಿಕ ವಿದ್ಯಾಲಯಕ್ಕೆ ಬಂದು ಅಲ್ಲೇ ನೆಲೆ ನಿಂತವರು. ಮತ್ತೋರ್ವರಾದ ಮೈಕೆಲ್ ಕ್ರೆಮೆರ್ ಅವರು ಹಾರ್ವರ್ಡಿನ ವಿದ್ಯಾರ್ಥಿ. ಅಲ್ಲಿಯೇ ಶಿಕ್ಷಣ ಪಡೆದು ಅಲ್ಲಿಯೇ ಪ್ರಾಧ್ಯಾಪಕರಾಗಿದ್ದಾರೆ. ಕೆಲಕಾಲ ಮೆಸಾಚುಸೇಟ್ಸ್ ತಾಂತ್ರಿಕ ವಿದ್ಯಾಲಯದಲ್ಲೂ ಸೇವೆ ಮಾಡಿದ್ದಾರೆ.

ಅಮೆರಿಕದಲ್ಲೇ ನೆಲೆಯಾದರೂ ಭಾರತೀಯ ಸಂಜಾತರೆಂದು ನಾವೆಲ್ಲರೂ ಹೆಮ್ಮೆ ಪಡಲು ಅಭಿಜಿತ್ 2019 ರ ನೊಬೆಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅಮತ್ರ್ಯ ಸೇನ್ ನಂತರ ಭಾರತೀಯರೊಬ್ಬರಿಗೆ ಅರ್ಥವಿಜ್ಞಾನದ ನೊಬೆಲ್ ಬಹುಮಾನ ಬಂದುದಕ್ಕೆ ಭಾರತೀಯರೆಲ್ಲರೂ ಖುಷಿಗೊಂಡ ಈ ಸಮಯದಲ್ಲಿ ಅವರನ್ನು ವಿಶೇಷವಾಗಿ ಅಭಿನಂದಿಸೋಣ. ಹಾಗೆಯೇ ಅವರ ಪತ್ನಿಯಾದ ಎಸ್ತರ್ ಅವರನ್ನೂ ಜೊತೆಗೆ ಮೈಕೆಲ್ ಕ್ರೆಮೆರ್ ಅವರನ್ನೂ ಸಹಾ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...