Homeಅಂಕಣಗಳುಯಥಾಸ್ಥಿತಿ ವಾದಿ ಶಿಕ್ಷಣ ನೀತಿ: ಕಾಂಚ ಐಲಯ್ಯನವರ ಲೇಖನಕ್ಕೆ ಕೆ.ಪಿ ನಟರಾಜ್ ರವರ ಪ್ರತಿಕ್ರಿಯೆ

ಯಥಾಸ್ಥಿತಿ ವಾದಿ ಶಿಕ್ಷಣ ನೀತಿ: ಕಾಂಚ ಐಲಯ್ಯನವರ ಲೇಖನಕ್ಕೆ ಕೆ.ಪಿ ನಟರಾಜ್ ರವರ ಪ್ರತಿಕ್ರಿಯೆ

- Advertisement -
- Advertisement -

ಕೆ.ಪಿ.ನಟರಾಜ್ |

(ಕಳೆದ ಸಂಚಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಿಕೆ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಪ್ರೊ. ಕಾಂಚ ಐಲಯ್ಯನವರು `ಇನ್ನೆಷ್ಟು ದಿನ ತ್ರಿಭಾಷಾ ನೀತಿ ಶಿರೋಭಾರ’ ಎಂಬ ಲೇಖನದಲ್ಲಿ ಶಿಕ್ಷಣ ಮಾಧ್ಯಮ ನೀತಿಯ ಗೊಂದಲವನ್ನು ಚರ್ಚಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಕೆ.ಪಿ.ನಟರಾಜ್‍ರವರು ಈ ಲೇಖನದಲ್ಲಿ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ……..)

ಪ್ರಧಾನಿ ನರೇಂದ್ರ ಮೋದಿಯವರ ದ್ವಿತೀಯ ಇನ್ನಿಂಗ್ಸ್‍ನ ಪ್ರಾರಂಭದಲ್ಲೇ ಡಾ ಕಸ್ತೂರಿ ರಂಗನ್ ವರದಿಯನ್ನು ಜಾರಿಮಾಡುವ ತಯಾರಿ ಮಾಡಲಾಗಿತ್ತು. ಈ ವರದಿಯಲ್ಲಿ ಪ್ರತಿಪಾದಿತವಾದ ಹಿಂದಿಯ ರಾಷ್ಟ್ರವ್ಯಾಪಿ ಹೇರಿಕೆಯ ವಿಷಯ ಸಾಕಷ್ಟು ವಿರೋಧವನ್ನೆದುರಿಸಿತು. ಈಗ ಪರಿಷ್ಕರಣೆಗೊಳಗಾಗಿ ಇಂಗ್ಲಿಷ್ ಜೊತೆಗೆ ಮತ್ತೆರಡು ಭಾರತೀಯ ಭಾಷೆಗಳನ್ನು ಕಲಿಯುವ ಹೊಸ ಬಗೆಯ ತ್ರಿಭಾಷಾ ಸೂತ್ರವಾಗಿ ಜಾರಿಗೊಳ್ಳಲಿದೆ ಎನ್ನಲಾಗುತ್ತಿದೆ.

ಈ ಗ್ರಹಿಕೆಯ ಹಿನ್ನೆಲೆಯಲ್ಲಿಯೇ ಇಲ್ಲಿ ಪ್ರೊ. ಕಾಂಚ ಐಲಯ್ಯನವರು ಹೊಸ ಭಾಷಾ ನೀತಿಯನ್ನು ಚರ್ಚಿಸುತ್ತಲೇ ಶಿಕ್ಷಣ ಮಾಧ್ಯಮ ನೀತಿಯ ದ್ವಂದ್ವವನ್ನೂ ಇಲ್ಲಿ ಚರ್ಚಿಸಲು ಯತ್ನಿಸಿದ್ದಾರೆ. ಹೊಸ ಶಿಕ್ಷಣ ನೀತಿ ಇದೀಗ ಮೋದಿಯ ಶಿಕ್ಷಣ ನೀತಿ ಎಂದು ಕರೆಯಲು ಅರ್ಹವಾಗಿರುವಂತಿದೆ. ಯಾಕೆಂದರೆ ಇದು ಮೋದಿಯವರ ಆಡಳಿತದಂತೇ ಯಥಾಸ್ಥಿತಿ ವಾದಿಯೂ, ಕಾಣ್ಕೆಹೀನವೂ ಆಗಿದೆ.
ಮೋದಿ ಕಳೆದ ಚುನಾವಣೆಯಲ್ಲಿ ಅತಿ ಕುಲೀನ ಸಾಮಾಜಿಕ ಸ್ತರವನ್ನು “ಖಾನ್ ಮಾರ್ಕೆಟ್ ಗ್ಯಾಂಗ್” ಎಂದು ಪ್ರಸ್ತಾಪಿಸಿದ್ದರು. ಅವರು ತಮ್ಮ ಮಕ್ಕಳಿಗೆ ಕಲಿಸುತ್ತಿದ್ದ ಶಾಲೆಗಳಲ್ಲಿ ಇಂಗ್ಲಿಷ್ ಜೊತೆಗೆ ಇನ್ನೆರಡು ಯೂರೋಪಿನ ಭಾಷೆಗಳನ್ನು ಕಲಿಯುವ ಸ್ವಾತಂತ್ರ್ಯವನ್ನು ಮೋದಿಯ ನವ ನೀತಿ ಕಿತ್ತುಕೊಳ್ಳಲಿದೆ.

ಈಗ ಈ “ಕುಲೀನ“ ಶಾಲೆಗಳಲ್ಲಿ ಇಂಗ್ಲಿಷ್ ಜೊತೆಗೆ ಎರಡು ಭಾರತೀಯ ಭಾಷೆಗಳನ್ನು ಕಲಿಯಬೇಕಾಗಿದೆ. ಹೀಗಾಗಿ ಇನ್ನು ಮುಂದೆಯೂ ಕೂಡಾ ರಾಷ್ಟ್ರೀಯ ಭಾಷಾ ನೀತಿ ಈಗಿದ್ದಂತೇ ತ್ರಿಭಾಷಾ ಸೂತ್ರವೆ ಇರಲಿದೆ. ಆದರೆ ಹಿಂದಿಯ ಕಲಿಕೆ ಇನ್ನು ಮುಂದೆ ಐಚ್ಛಿಕವಾಗಲಿದೆ. ಕರ್ನಾಟಕದಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಹಾಗೂ ಮತ್ತೊಂದು ಭಾರತೀಯ ಭಾಷೆಯನ್ನು ಕಲಿಯುವ ಒತ್ತಡ ಮಕ್ಕಳ ಮೇಲೆ ಇದ್ದೆ ಇರುತ್ತದೆ.

ಇದು ಭಾಷೆಗೆ ಸಂಬಂದಿಸಿದ ಮೋದಿಯ ಹೊಸ ನೀತಿಯಾಗಲಿದೆ. ಇದು ಕಾಂಚ ಐಲಯ್ಯನವರು ಹೇಳುವಂತೆ ನೆಹ್ರೂ ಪ್ರತಿಪಾದಿತ ತ್ರಿಭಾಷಾ ನೀತಿಗಿಂತ ವಿಭಿನ್ನವಾಗಿಲ್ಲ. ಆದರೆ ಇಂಗ್ಲಿಷನ್ನು ಕಡ್ಡಾಯಗೊಳಿಸಿದ ಕಾರಣ ನೆಹರೂ ನೀತಿಗಿಂತ ಇದು ಪ್ರಗತಿಪರವಾಗಿದೆ ಎನ್ನುತ್ತಾರೆ.

ಇದನ್ನು ಓದಿ: ತ್ರಿಭಾಷಾ ಶಿರೋಭಾರ ಇನ್ನೆಷ್ಟು ದಿನ? – ಕಾಂಚ ಐಲಯ್ಯ

ಪ್ರಚ್ಛನ್ನ ಇಂಗ್ಲಿಷ್ ಮಾಧ್ಯಮ ವಾದಿಯಾದ ಕಾಂಚ ಐಲಯ್ಯನವರ ಪ್ರಕಾರ ಈ ನೀತಿಯಲ್ಲಿನ ಬಹುಮುಖ್ಯ ಸ್ವಾಗತಾರ್ಹ ಅಂಶವೆಂದರೆ ಇಲ್ಲಿನ ತ್ರಿಭಾಷಾ ಗುಚ್ಛದಲ್ಲಿ ಇಂಗ್ಲಿಷ್ ಭಾಷೆ ಇದ್ದೇ ಇರುತ್ತದೆ.

ನಿರ್ಲಕ್ಷ್ಯಕ್ಕೊಳಗಾದ ಕುವೆಂಪು ಅವರ ಬಹು ಭಾಷೆಗಳಲ್ಲಿ ದ್ವಿಭಾಷಾ ನೀತಿ

ಕುವೆಂಪು ಅವರು ಕಳೆದ ಶತಮಾನದ ಐವತ್ತರ ದಶಕದಲ್ಲಿಯೇ ಭಾಷಾ ನೀತಿಯ ಬಗೆಗೆ ಹಿಂದಿ ಹೇರಿಕೆಯ ಸುಳಿವುಗಳನ್ನು ಗುರುತಿಸಿ ಖಚಿತ ತೀರ್ಮಾನಗಳಿಗೆ ಬಂದಿದ್ದನ್ನು ನೋಡಬಹುದು. ತ್ರಿಭಾಷಾ ಸೂತ್ರ ತ್ರಿಶೂಲವಿದ್ದಂತೆ, ಅದು ಕನ್ನಡ ಮಕ್ಕಳಿಗೆ ಘಾತುಕವಾಗಿ ಪರಿಣಮಿಸುತ್ತದೆ ಎಂದವರು ಎಚ್ಚರಿಸಿದ್ದರು..

ಅವರ ಪ್ರಕಾರ ನಮ್ಮ ಭಾಷಾ ನೀತಿ, ಬಹು ಭಾಷೆಗಳಲ್ಲಿ ದ್ವಿಭಾಷೆ ಎನ್ನುವುದಾಗಿತ್ತು. ಇದರ ಪ್ರಕಾರ ಕನ್ನಡದ ಮಗು ತನ್ನ ಭಾಷೆಯ ಜೊತೆಗೆ ಇನ್ನೊಂದು ಲೌಕಿಕವಾಗಿ ಉಪಯುಕ್ತವಾದ, ನಮ್ಮ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸಲು ಅವಕಾಶ ಕಲ್ಪಿಸುತ್ತದೆ. ಈ ನೀತಿಯು ಕುವೆಂಪು ಪ್ರತಿಪಾದಿತ ಭಾಷಾನೀತಿ ರಾಜಕೀಯ ಪ್ರೇರಿತವಾಗಿರದೆ ಮಗುವಿನ ನೆಲೆಯಿಂದ ನೋಡಿದ ನುಡಿ ನೀತಿಯಾಗಿತ್ತು.
ಈ ಕಾರಣಕ್ಕೆ ಹೊಸ ಶಿಕ್ಷಣ ನೀತಿ ಅಮಾನವೀಯ ಹೇರಿಕೆಯಷ್ಟೆ ಅಲ್ಲ, ಅನಗತ್ಯವಾದ ಹೇರಿಕೆಯಾಗಿ ಕಾಣುತ್ತದೆ. ಕುವೆಂಪು ದೃಷ್ಟಿ ಇಲ್ಲೊಂದು ಕಳಂಕಪೂರ್ಣ ಮತ್ತು ರಾಜಕೀಯ ದುರುದ್ದೇಶ ಇರುವುದನ್ನು ಗುರ್ತಿಸುತ್ತದೆ.

ಈ ನೀತಿ ಮಗುವೊಂದನ್ನು ಅಥವಾ ವಿದ್ಯಾರ್ಥಿಯೊಬ್ಬನನ್ನು ಏಕಕಾಲಕ್ಕೆ ತನ್ನದಲ್ಲದ ಒಂದಕ್ಕಿಂತ ಹೆಚ್ಚು ನುಡಿಗಳನ್ನು ಕಲಿಯಲು ನೆರವಾಗದೆ, ಕಾಲಗತಿಯಲ್ಲಿ ತನ್ನ ಭಾಷೆಯನ್ನು ಅಲಕ್ಷಿಸಿ ಅಥವಾ ಕೀಳರಿಮೆಯನ್ನು ಬೆಳೆಸಿಕೊಂಡು ಇಂಗ್ಳಿಷ್, ಹಿಂದಿ ಅಥವಾ ಸಂಸ್ಕೃತದಂತಹ ಭಾಷೆಗಳ ಬಗೆಗೆ ಅನಗತ್ಯ ಹೆಚ್ಚುಗಾರಿಕೆ ಮತ್ತು ಗೌರವ ಭಾವ ಹೊಂದುವಂತೆ ಪ್ರೇರೇಪಿಸುತ್ತದೆ. ಕಳೆದ ಐವತ್ತು ವರ್ಷಗಳ ಹಿಂದಿ ಹೇರಿಕೆಯಿಂದ ಈಗಾಗಲೆ ಕನ್ನಡದ ಮನಸ್ಸುಗಳನ್ನು ಈ ವಿಘಟನೆ ಅಥವಾ ಒಡಕು ಇವತ್ತು ಢಾಳಾಗಿ ಕಾಣಿಸುತ್ತಿದೆ. ಕನ್ನಡಿಗ ಅಭಿಮಾನ ಶೂನ್ಯನಾಗಿದ್ದಾನೆ. ಹಿಂದಿಯ ಸಮರ್ಥಕನಂತೆ, ಹಿಂದಿಯ ವಾರಸುದಾರನಂತೆ ಅವನೀಗ ಮಾತಾಡುತ್ತಾನೆ.
ಆದ್ದರಿಂದ ಈ ತ್ರಿಭಾಷಾ ಸೂತ್ರ ಒಂದು ಬಗೆಯ ಸ್ವದ್ವೇಷವನ್ನು ಕನ್ನಡಿಗನಲ್ಲಿ ಬಿತ್ತಿಬಿಟ್ಟಿದೆ. ಇದು ಕನ್ನಡಿಗನನ್ನು ಸ್ವನಾಶಕನನ್ನಾಗಿ ಕಡೆದುನಿಲ್ಲಿಸಿದೆ. ಹೀಗಾಗಿಯೆ ತ್ರಿಭಾಷಾ ಸೂತ್ರವನ್ನು ಕನ್ನಡಿಗರು ತಿರಸ್ಕರಿಸಬೇಕು ಎಂದು ಕುವೆಂಪು ಅವರು ನೀಡಿದ ಎಚ್ಚರವನ್ನು ಕನ್ನಡಿಗ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಅತ್ತ ದಿವ್ಯ ನಿರ್ಲಕ್ಷ್ಯ ತೋರಿದ.

ಇದನ್ನು ಓದಿ: ಮಹಾಮಾನವ ಅಂಬೇಡ್ಕರ್ ಮತ್ತು ವಿಶ್ವಮಾನವ ಕುವೆಂಪು

ಆದರೆ ಈಗ ಮೋದಿಯ ಈ ದುರ್ನೀತಿ ದೇಶದ ಮಕ್ಕಳ ಮೇಲೆ ಎರಡು ಭಾಷೆಗಳನ್ನು ಕಲಿಯುವ ದೊಡ್ಡ ಹೊರೆಯನ್ನು ಹೊರಿಸುತ್ತದೆ. ಬಹುಪಾಲು ಮಕ್ಕಳು ತಮ್ಮ ಭಾಷೆಯನ್ನು ನಿರ್ಲಕ್ಷಿಸಿ ಇಂಗ್ಲಿಷ್ ಕಡ್ಡಾಯ ಭಾಷೆಯಾಗಿ ವಿಧಿಸಲ್ಪಡುವುದರಿಂದ ಇನ್ನೆರಡು ಭಾರತೀಯ ಭಾಷೆಗಳನ್ನು ಕಲಿಯಲು ಮುಂದಾದರು ಅಚ್ಚರಿಯಿಲ್ಲ..

ಪ್ರೊ. ಐಲಯ್ಯ ಅವರ ಕಣ್ಣು ಭಾಷಾ ನೀತಿಯ ಕಡೆಗಲ್ಲ, ಶಿಕ್ಷಣ ಮಾಧ್ಯಮದತ್ತ

ಪ್ರೊ. ಐಲಯ್ಯ ಅವರ ಬರಹದ ಮುಖ್ಯ ಆಗ್ರಹವಿರುವುದು ಭಾಷಾ ನೀತಿಯ ಬಗೆಗಾಗಿರದೆ ಶಿಕ್ಷಣ ಮಾಧ್ಯಮದಲ್ಲಿರುವ ಬಿರುಕಿನ ಕಡೆಗೆ. ‘ಖಾನ್ ಮಾರ್ಕೆಟ್ ಗ್ಯಾಂಗ್’ ಎಂಬದು ಸಂಘ ಪರಿವಾರದ ಅದರಲ್ಲೂ ಮೋದಿ ಹಿಂದೂಗಳನ್ನು ಕೆರಳಿಸಲು ಬಳಸಿದ ಪರಿಭಾಷೆ. ದೇಶದ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಮಕ್ಕಳು ಓದುವ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಮತ್ತು “ಮಂಡಿ ಬಜಾರ್“ ಅಂದರೆ ಮಾಸ್ ಅಥವಾ ಸಾಮಾನ್ಯರ ಮಕ್ಕಳು ಓದುವ ಪ್ರಾಂತಿಯ ಭಾಷಾ ಮಾಧ್ಯಮದಲ್ಲಿ ಓದುವ ಒಡಕಿನ ನೀತಿಯನ್ನು ಇವರು ವ್ಯಂಗ್ಯವಾಗಿ ಟೀಕಿಸುತ್ತಾ ಹೋಗುತ್ತಾರೆ.

ಹಾಗೆ ಹೇಳುವಾಗ “ಶಿಕ್ಷಣವನ್ನು ಹಿಂದಿ ಅಥವಾ ಭಾರತೀಯ ಭಾಷೆಗಳಲ್ಲಿ ಬೋಧಿಸಬೇಕೆಂದು ಹೇಳುವ ಲೋಹಿಯಾ ಸಂವಹನಾತ್ಮಕ ಸೋಷಲಿಷ್ಟ್ ಶಿಕ್ಷಣ ನೀತಿಯ ಜೊತೆ ಹೋಲಿಸಿದರೆ ಬಿಜೆಪಿ ಹೊಸ ಶಿಕ್ಷಣ ನೀತಿ ಸುಧಾರಿತವಾದದ್ದು“ ಎಂದು ಸರ್ಟಿಫಿಕೇಟ್ ಕೊಡುತ್ತಾರೆ.
ಅಷ್ಟೇ ಅಲ್ಲ, “ಲೋಹಿಯಾ ಸೋಷಲಿಸಂ ಪ್ರಕಾರ ಬಡವರ ಮಕ್ಕಳು ಸ್ಥಳೀಯ ಭಾಷಾ ಮಾಧ್ಯಮಕ್ಕೆ ಸೀಮಿತಗೊಳ್ಳಬೇಕು. ಶ್ರೀಮಂತರ ಮಕ್ಕಳಿಗೆ ಕೇಳಿದಷ್ಟು ಹಣ ಇರುತ್ತದೆ, ಹಾಗಾಗಿ ಅವರು ಒಳ್ಳೆಯ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಕೊಳ್ಳಬಹುದು” ಎಂದು ಲೋಹಿಯಾ ಕಾಳಜಿಯನ್ನು ಗೇಲಿಮಾಡುತ್ತಾರೆ.

ಇವೆರಡೂ ತಪ್ಪು ಉಲ್ಲೇಖಗಳಾಗಿವೆ ಮತ್ತು ಓದುಗರಲ್ಲಿ ಲೋಹಿಯಾ ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಲು ಕಾರಣವಾಗುತ್ತವೆ. ದೇಶದ ಒಕ್ಕೂಟ ವ್ಯವಸ್ಥೆ, ರಾಷ್ಟ್ರೀಯ ಏಕತೆಯೊಂದಿಗೆ ಜನ ಭಾಷೆಗಳ ಅಸ್ಮಿತೆಯು ಅವಿನಾಭಾವವಾಗಿ ತಳಕು ಹಾಕಿಕೊಂಡಿದೆ. ಇದನ್ನು ಸ್ವಾತಂತ್ರ್ಯ ಆಂದೋಲನದ 1920ರ ದಶಕದಿಂದಲೂ ತಮ್ಮ ಒಳನೋಟದಿಂದ ಬಲ್ಲವರಾಗಿದ್ದ ಗಾಂಧೀಜಿ ಭಾರತೀಯ ಜನ ಭಾಷೆಗಳ ಬಗೆಗೆ ತಮ್ಮದೇ ಆದ ಚಿಂತನೆಯನ್ನು ಹೊಂದಿದ್ದರು. ಈ ಸುಸಂಗತೆಯ ಜೊತೆ ತಾದಾತ್ಮ್ಯ ಹೊಂದಿದ್ದ ಲೋಹಿಯಾ, ಗಾಂಧಿಯ ಭಾಷಾ ಚಿಂತನೆಯನ್ನು ಸುಸಂಗತವಾಗಿ ವಿಸ್ತರಿಸಿ ಭಾರತೀಯ ಜನ ನುಡಿಗಳ ಮೀಮಾಂಸೆಯೊಂದನ್ನು ರೂಪಿಸಿದರು. ತಮ್ಮ ಸೋಷಲಿಸ್ಟ್ ಪಾರ್ಟಿಯ ಮೂಲಕ “ಇಂಗ್ಲಿಷ್ ಹಠಾವೋ“ ಅಥವಾ “ಅಂಗ್ರೇಜಿ ಹಠಾವೊ” ಎಂಬ ದೇಶ ವ್ಯಾಪಿ ಆಂದೋಲನವನ್ನು ಸಂಘಟಿಸುತ್ತಾರೆ.
ಇಂಗ್ಲಿಷ್ ಶಿಕ್ಷಣದ ಬಗ್ಗೆ ದೇಶದ ಮೇಲ್ವರ್ಗಗಳ ಹಿತಾಸಕ್ತಿಯನ್ನು ರಕ್ಷಿಸಿದ ನೆಹರೂ ಮತ್ತು ಸಿ.ರಾಜಗೋಪಾಲಾಚಾರಿಯವರಂತಹ ಇಂಗ್ಲಿಷ್ ವ್ಯಾಮೋಹಿಗಳ ವಿರುದ್ಧ ಕಿಡಿ ಕಾರುತ್ತ ಬಂಡಾಯವೇಳುತ್ತಾರೆ.

ಭಾರತೀಯ ಭಾಷೆಗಳ ಧಾರಣಾಶಕ್ತಿಯ ಬಗ್ಗೆ ಸಲ್ಲದ ಮಾತಾಡುತ್ತಿರುವ, ಭಾಷೆಗಳು ವಿಜ್ಞಾನ ತಂತ್ರಜ್ಞಾನದಂತಹ ಅಧುನಿಕ ಶಿಕ್ಷಣವನ್ನು ಬೋಧಿಸಲು ಸಮರ್ಥವಾಗುವ ತನಕ ಕಾಯಬೇಕೆಂದು ಸ್ವಘೋಷಿತ ಶಿಕ್ಷಣ ತಜ್ಞರು ಹೇಳುತ್ತಾರೆ. ಇಂತಹ ಇಂಗ್ಲಿಷ್‍ವಾದಿ ಪಟ್ಟ ಭದ್ರರನ್ನು ಅಜ್ಞಾನಿಗಳೆಂದು ಲೋಹಿಯಾ ಕರೆದಿದ್ದಾರೆ. ಭಾಷೆಯ ವಿಷಯದಲ್ಲಿ ನಿಧಾನಗತಿಯ ನಿಲುವು ಮತ್ತು ಧಾರಣಾಶಕ್ತಿಯನ್ನು ಸಂಶಯದಿಂದ ನೋಡುವುದು ಇಂಗ್ಲಿಷ್ ವ್ಯಾಮೋಹಿ ಜನ ಹಾಗೂ ಭಾಷಾ ವಿರೋಧಿಗಳ ನೀಚ ಮಸಲತ್ತು ಎಂದೇ ಅಸಹನೆ ಮತ್ತು ತೀವ್ರ ಕೋಪದಿಂದ ಈ ಇಂಗ್ಲಿಷ್ ಮಾಧ್ಯಮ ವಾದಿ ದುಷ್ಟರ ವಿರುದ್ದ ಸಮರ ಸಾರುತ್ತಾರೆ.

ಇದನ್ನು ಓದಿ: ಬಂಡವಾಳವಾದ, ಇತಿಹಾಸ ಕುರಿತು ಲೋಹಿಯಾ ಚಿಂತನೆಗಳು

ಲೋಹಿಯಾ, ಇಲ್ಲಿ ಕಾಂಚ ಐಲಯ್ಯನವರು ಪ್ರತಿಪಾದಿಸಿದಂತೆ ಉಳ್ಳವರಿಗೆ (ಖಾನ್ ಮಾರ್ಕೆಟಿಂಗ್ ಗ್ಯಾಂಗ್) ಇಂಗ್ಲಿಷ್ ಮಾಧ್ಯಮ ಮತ್ತು ಇಲ್ಲದವರಿಗೆ (ಮಂಡಿ ಬಜಾರ್) ಪ್ರಾಂತೀಯ ಭಾಷಾ ಮಾಧ್ಯಮವನ್ನು ಪ್ರತಿಪಾದಿಸಲಿಲ್ಲ. ಬದಲಾಗಿ ಇಡೀ ಭಾರತ ತನ್ನ ಜನ ಭಾಷೆಗಳನ್ನು ಕಲಿಕೆಯ ಮಾಧ್ಯಮವಾಗಿ ಬಳಸಬೇಕೆಂದು ಕರೆಕೊಟ್ಟಿದ್ದರು. ಅದಕ್ಕೆ ಬಹುದೊಡ್ಡ ತೊಡಕಾಗಿದ್ದ ಇಂಗ್ಲಿಷನ್ನು ಉಚ್ಚಾಟಿಸಲು “ಅಂಗ್ರೇಜಿ ಹಟಾವೋ” ಆಂದೋಲನವನ್ನು ಸಂಘಟಿಸುತ್ತಾರೆ.

ಕಾಂಚ ಐಲಯ್ಯ ಅವರು ಇಲ್ಲಿ ಲೋಹಿಯಾ ಕಾಳಜಿ ಮತ್ತು ಚಿಂತನೆಗಳೆರಡನ್ನೂ mis quote ಮಾಡುವ ಮೂಲಕ ಲೋಹಿಯಾ ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದು ಅವರ ಘನತೆಗೆ ತಕ್ಕುದಲ್ಲ ಎಂದು ನಾನು ಹೇಳಬಯಸುತ್ತೇನೆ.
ಇಲ್ಲಿ ಗಾಂಧಿ ಮತ್ತು ಲೋಹಿಯಾವಾದಿ ಸೋಷಲಿಸ್ಟರನ್ನು ಬಿಟ್ಟರೆ ನೆಹರುವಾದಿ ಕಾಂಗ್ರೆಸ್ಸಿಗರು ಮತ್ತು ಕಮ್ಯೂನಿಸ್ಟರು ಹಾಗೂ ಇಂಡಿಯಾದ ಮೇಲ್ಜಾತಿಗಳು ಇಂಗ್ಲಿಷ್ ಅನ್ನು ಈ ನೆಲದಲ್ಲಿ ಗಟ್ಟಿಯಾಗಿ ತಳವೂರುವಂತೆ ನೋಡಿಕೊಂಡ ಖಳರಾಗಿದ್ದಾರೆ ಅದನ್ನು ಲೋಹಿಯಾ ಅವರ ತಲೆಗೆ ಕಟ್ಟಲು ಹೊರಟ ಕಾಂಚ ಐಲಯ್ಯನವರ ಉದ್ದೇಶ ದುಷ್ಟತನದ್ದಾಗಿದೆ ಎನ್ನಲೇಬೇಕಾಗಿದೆ. ಇನ್ನು, ಆಂಧ್ರದ ಹೊಸ ಮುಖ್ಯಮಂತ್ರಿ ಜಗನ್ ಪ್ರಕಟಿಸಿರುವ ಸಾರ್ವತ್ರಿಕ ಇಂಗ್ಲಿಷ್ ಮಾಧ್ಯಮದ ಕುರಿತು ಉತ್ಸಾಹಿಯಾಗಿ ಚರ್ಚಿಸುವ ಲೇಖಕರ ಅಲೋಚನಾ ವಿನ್ಯಾಸವನ್ನೊಮ್ಮೆ ವಿಶ್ಲೇಷಿಸಿ ನೋಡಬೇಕಾಗಿದೆ..

ಗಾಂಧಿ, ಲೋಹಿಯಾ ಮತ್ತು ಕುವೆಂಪು ಅವರ ಭಾಷಾ ಚಿಂತನೆಯೆನ್ನುವುದು ಒಂದು ಭಾಷಿಕ ಸಮುದಾಯದ ಘನತೆಯ ನೆಲೆಯಿಂದ ಆತ್ಮ ಗೌರವದ, ಅಸ್ಮಿತೆಯ ನೆಲೆಯಿಂದ ಆಗ್ರಹಾತ್ಮಕವಾಗಿ ಚಿಮ್ಮಿದ್ದಾಗಿದೆ.
ನೆಹ್ರು ಮತ್ತು ಕಮ್ಯುನಿಸ್ಟ್ ಪ್ರಣೀತ ಅಲೋಚನೆಗಳು ಉಳ್ಳವರಿಗೆ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳು ಮತ್ತು ಇಲ್ಲದವರಿಗೆ ಸರ್ಕಾರಿ ಪ್ರಾಂತಿಯ ಭಾಷಾ ಮಾಧ್ಯಮದ ಶಾಲೆಗಳೆಂದು ಒಡಕಿನ ನಿಲುವಿನೊಂದಿಗೆ ಉಳ್ಳವರ ಪರ ನಿಂತರೆ, ಲೋಹಿಯಾ ಉನ್ನತ ಧ್ಯೇಯಕ್ಕಾಗಿ ದಿಟ್ಟ ಸಂಘರ್ಷವನ್ನು ಕಟ್ಟಿದರೆ, ಯಥಾಸ್ಥಿತಿವಾದಿ ಲಾಭ ಬಡುಕ, ಹುಸಿ ಪ್ರತಿಷ್ಠಿತ ಜನ ಈ ಹೋರಾಟವನ್ನು ದುರ್ಬಲಗೊಳಿಸುತ್ತ ಸಾಗಿದರು.

ದೇಶದ ಶಿಕ್ಷಣ ಕ್ರಮವನ್ನು ಮೂಲಭೂತವಾಗಿ ಬದಲಿಸಲು ಮನಸ್ಸು ಮಾಡದ ಮೋದಿಯ ಈ ನವ ಶಿಕ್ಷಣ ನೀತಿ ಮೂಲತಃ ಯಥಾಸ್ಥಿತಿವಾದಿಯದ್ದಾಗಿದೆ. ಕಾಂಚ ಐಲಯ್ಯನವರಂತಹ ಬುದ್ಧಿಜೀವಿಗಳು ಇದನ್ನು ಗಮನಿಸಿದರೂ ಈ ಸೀಳಿಕೊಂಡ ನೀತಿಯ ಒಡಕನ್ನು ಏಕರೂಪಿ ಪ್ರಾಂತೀಯ ಮಾಧ್ಯಮಕ್ಕೆ ಬದಲಿಸಬೇಕೆಂದು ಘನತೆಯ ಅಗ್ರಹ ಮಾಡುವುದಿಲ್ಲ, ಬದಲಾಗಿ ಸಾರ್ವತ್ರಿಕ ಇಂಗ್ಲಿಷ್ ಮಾಧ್ಯಮಕ್ಕೆ ಇಡೀ ಭಾರತ ಏಕರೂಪಿಯಾಗಿ ಬದಲಾಗಬೇಕೆಂದು ಆಗ್ರಹಿಸುತ್ತಾರೆ.

ಭಾರತೀಯ ಭಾಷೆಗಳ ಸಾರ್ವಭೌಮತೆಗೆ ಭಂಗ ಬಂದರೂ, ಅವುಗಳು ಜ್ಞಾನ ನಿರ್ಮಾಣದಲ್ಲಿ ಬಳಕೆಗೊಳ್ಳದೆ ನೆಲ ಕಚ್ಚಿದೆ. ಆದರೂ ಈ ಚಿಂತಕರಿಗೆ ಅಂತಹ ವಿನಾಶದಿಂದ ಏನೂ ಅನ್ನಿಸುವುದಿಲ್ಲ. ಇಂತಹ ಸಂಘರ್ಷ ಸತ್ತ ಮನಸ್ಸು ಸದಾ beneficiary ಆಗಿ ಉಳಿಯುವಂತಹದ್ದಾಗಿರುತ್ತದೆ ಮತ್ತು ಲಾಭ ಬಡುಕವಾಗಿರುತ್ತದೆ. ಡಾ. ಕಸ್ತೂರಿ ರಂಗನ್ ಅವರ ಈ ವರದಿಯು ಸಹ ಈ ಮೂಲಭೂತ ವಿಭಜನೆಯನ್ನು ನಿರ್ಲಕ್ಷಿಸಿದ್ದು ಇದು ಅಕ್ಷಮ್ಯವಾಗಿದೆ.

ದುರದೃಷ್ಟಕರ ಸಂಗತಿಯೆಂದರೆ, ಈ ಶಿಕ್ಷಣ ನೀತಿಯ ಸಂಬಂಧದಲ್ಲಿ ಎದ್ದ ಗದ್ದಲ ಕೇವಲ ಹಿಂದಿ ಹೇರಿಕೆಯನ್ನು ಖಂಡಿಸಿದ್ದು ಬಿಟ್ಟರೆ, ದೇಶದ ಶಿಕ್ಷಣದ ಕತ್ತು ಹಿಸುಕುತ್ತಿರುವ ಇಂಗ್ಲಿಷ್ ಮತ್ತು ಪ್ರಾಂತೀಯ ಭಾಷಾ ಮಾಧ್ಯಮಗಳ ನಡುವಿನ ಬಿರುಕನ್ನು ಜನ ಭಾಷೆಗಳನ್ನು ಸಾರ್ವಭೌಮ ಸ್ಥಾನಕ್ಕೇರಿಸುವ ಮೂಲಕ ಧೀಮಂತ ಶಿಕ್ಷಣ ಮಾಧ್ಯಮ ನೀತಿಯನ್ನು ಸಂಸ್ಥಾಪಿಸುವ ಆಗ್ರಹವನ್ನು ಎತ್ತಲಿಲ್ಲ.
ಈಗಿದ್ದಂತೆ ಯಥಾಸ್ಥಿತಿವಾದಿಯೂ, ಕಾಣ್ಕೆಹೀನವೂ ಆಗಿರುವ ಮೋದಿ ಶಿಕ್ಷಣ ನೀತಿಯು ಹೊಸ ಬಗೆಯ ತ್ರಿಭಾಷಾ ಸೂತ್ರದಿಂದ ಪೀಡಕವಾಗಿ ಪರಿಣಮಿಸಿದೆ ಬಿಟ್ಟರೆ ಅಧುನಿಕವೂ, ಧೀಮಂತವೂ ಅಗಿಲ್ಲ. ಇನ್ನು ಕಾಂಚ ಐಲಯ್ಯನವರಂತಹ ಚಿಂತನೆಯೂ ಕೂಡಾ ಮೂಲತಃ ಧ್ಯೇಯವಾದಿಯಾಗಿಲ್ಲ ಬದಲಾಗಿ ಭಾರತೀಯ ಭಾಷೆಗಳ ಉಳಿವು ಮತ್ತು ಸಂವರ್ಧನೆಗಾಗಿ ಶ್ರಮಿಸಿದ ಲೋಹಿಯಾ ಅವರ ತೇಜೋವಧೆಗಿಳಿದು ತನ್ನ ಚಿಂತನ ಮೌಲ್ಯವನ್ನು ಕಳೆದುಕೊಂಡಿದೆ. ಮತ್ತು ಇಂಗ್ಲಿಷ್ ಮಾಧ್ಯಮ ವಾದಿಯಾಗಿ ತನ್ನ ಹೊಣೆಗೆ ಬೆನ್ನು ತಿರುಗಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....