ನಾಸಾದಲ್ಲಿರುವ ಭಾರತೀಯರ ಸಂಖ್ಯೆ ಶೇ.58 ಅಲ್ಲ! ಅಲ್ಲಿರುವ ಏಶಿಯನ್ನರ ಸಂಖ್ಯೆಯೇ ಶೇ.8 ಮಾತ್ರ!

ಮಿಥ್ಯ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ದಲ್ಲಿ ಶೆ.58% ರಷ್ಟು ಭಾರತೀಯರಿದ್ದಾರೆ…
ಹೀಗೊಂದು ಅಂಕಿ-ಅಂಶ ಕಳೆದ ವಾರದಿಂದ ಹರಿದಾಡುತ್ತಿದೆ. ಭಾರತ ಮುಂದಿನ ಸೂಪರ್ ಪವರ್ ಎಂದು ಭ್ರಮೆ ಹೊತ್ತಿರುವ ಕೆಲವು ಭಕ್ತರು ಇದನ್ನು ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದ ಸಾವಿರಾರು ಜನ, ಸುಳ್ಳು ಎಂದು ಗೊತ್ತಿರುವ ಕೆಲವು ವೇಷಭಕ್ತರು ಫೇಸ್‍ಬುಕ್, ವ್ಯಾಟ್ಸಾಪ್‍ಗಳಲ್ಲಿ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ.

ಕಳೆದ ವಾರ 2030ಕ್ಕೆ ಚಂದ್ರನಲ್ಲಿ ಬಾಹ್ಯಾಕಾಶ ನಿಲ್ದಾಣ ಸಿದ್ಧ ಎಂದು ಇಸ್ರೋ ಮುಖ್ಯಸ್ಥ ಶಿವನ್ ಘೋಷಿಸಿದಾಗ ಬಹುಪಾಲು ಟಿವಿ ಪರದೆಗಳ ಮೇಲೆ ಚಂದ್ರಯಾನಕ್ಕೆ ಸಂಬಂಧಿಸಿದ ಅಥವಾ ಇಸ್ರೋದ ಫೋಟೊ ಪಕ್ಕ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಫೋಟೊವನ್ನು ತಗುಲಿಸಲಾಗಿತ್ತು. ಮೋದಿ ಈ ಘೋಷಣೆಯನ್ನೂ ಮಾಡಿಲ್ಲ, ಇಸ್ರೋ ತನ್ನ ಕಾರ್ಯ ಚಟುವಟಿಕೆಯ ಬಗ್ಗೆ ಎಂದಿನಂತೆ ಮಾಹಿತಿ ನೀಡಿದೆ. ಚಾನೆಲ್‍ಗಳ ಈ ಹುಚ್ಚಾಟವೇ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಹರಿದು ಬಂತು. ಮೋದಿ ಕಾರಣದಿಂದಾಗಿಯೇ ಇದೆಲ್ಲ ಆಗುತ್ತಿದೆ ಎಂಬ ಭಾವವನ್ನು ಬಿತ್ತುವ ಯತ್ನವದು.

ಯಾವುದೇ ಸಂಸ್ಥೆ ಸಾಧನೆ ಮಾಡಿದಾಗ ಅದರ ಕ್ರೆಡಿಟ್ ಆ ಸರ್ಕಾರ, ಮತ್ತು ಹಿಂದೆ ಆ ಯೋಜನೆಗೆ ನೆರವು ನೀಡಿದ ಸರ್ಕಾರಗಳಿಗೂ ಹೋಗುತ್ತದೆ. ಅದಕ್ಕೂ ಮೊದಲು ಆ ಸಂಸ್ಥೆಯ ನೌಕರರಿಗೆ ಸಲ್ಲಬೇಕು. ಆದರೆ ಇಲ್ಲಿ ಬಾಲಾಕೋಟ್ ದಾಳಿಯನ್ನು ಮೋದಿಯೇ ಆಯೋಜಿಸಿದರು ಎಂಬರ್ಥದಲ್ಲಿ ಫೇಕು ಸುದ್ದಿ ಹರಡಲಾಗಿತು. ಕನ್ನಡದ ಕೆಲವು ದಿನಪತ್ರಿಕೆಗಳು ದೇಶದ ಸೇನೆಯನ್ನು ಮೋದಿ ಸೇನೆ ಎಂದೆಲ್ಲ ಬರೆದವು.

ಇವತ್ತಿಗೂ ಭಾರತದ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಇರುವ ಬಹುಪಾಲು ಯುವ ಮತ್ತು ಮಧ್ಯಮವರ್ಗಗಳ ಇಂಜನಿಯರ್‍ಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (ನ್ಯಾಷನಲ್ ಏರೊಸ್ಪೇಸ್ ಮತ್ತು ಸ್ಪೇಸ್ ಅಡ್ಮಿನಿಷ್ಟ್ರೇಷನ್)ದಲ್ಲಿ ‘ಭಾರತೀಯರೇ ಅಧಿಕ’ ಎಂದು ಸುದ್ದಿ ಹಬ್ಬಿಸುತಿದ್ದಾರೆ. ಈ ವಾರ ಹರಿದಾಡುತ್ತಿರುವ ಸುಳ್ ಸುದ್ದಿಗಳಲ್ಲಿ ನಾಸಾದಲ್ಲಿ ಶೇ. 58% ರಷ್ಟು ಭಾರತೀಯರೇ ತುಂಬಿದ್ದಾರಂತೆ. ಇಲ್ಲಿ ಇಸ್ರೋ ಪ್ರಕಟಿಸಿದ ತನ್ನ ಮುಂದಿನ ಯೋಜನೆಯ ಪಕ್ಕ ಮೋದಿ ಫೋಟೊ ಹಾಕುವ ಸಂದರ್ಭದಲ್ಲಿಯೇ ಈ ಸುಳ್ ಸುದ್ದಿ ಓಡಾಡುತ್ತಿದೆ. ಬಹುಪಾಲು ಇಂಜಿನಿಯರ್‍ಗಳು ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಸತ್ಯ ಎಂದು ನಂಬಿದವರೇ ಹೆಚ್ಚು. ಇದನ್ನು ತಮ್ಮ ಸಂಗಾತಿಗೂ ಅವರು ದಾಟಿಸುತ್ತಾರೆ. ಮನೆಯ ಮಕ್ಕಳಿಗೂ ಇದನ್ನೇ ಬೋಧಿಸುತ್ತಾರೇನೋ?

ಸತ್ಯ: ಈಗಷ್ಟೇ ಅಲ್ಟ್‍ನ್ಯೂಸ್ ಮಾಡಿರುವ ಫ್ಯಾಕ್ಟ್ ಚೆಕ್ ಪ್ರಕಾರ, ಅಲ್ಲಿರುವುದು ಶೇ 8% ಏಶಿಯನ್ನರು ( ಪೆಸಿಫಿಕ್ ಐಸ್ ಲ್ಯಾಂಡರ್ಸ್) ಮಾತ್ರ. ಅಂದರೆ ಇರುವ ಶೇ.8%ರಷ್ಟಲ್ಲೂ ಭಾರತೀಯರಷ್ಟೇ ಅಲ್ಲ, ಇತರ ಏಶಿಯಾದ ದೇಶಗಳ ವಿಜ್ಞಾನಿಗಳು, ಇಂಜಿನಿಯರ್ಸ್ ಇದ್ದಾರೆ.

ನಾಸಾ ಅಲ್ಲಿ ನೇಮಕಾತಿ ಮಾಡುವಾಗ, ಎಲ್ಲ ಜನಾಂಗ ಮತ್ತು ಪ್ರ್ಯಾಂತ್ಯಗಳಿಗೆ ಆದ್ಯತೆ ನೀಡುತ್ತದೆ. ಇದಂತೂ ಮೀಸಲಾತಿ ವಿರೋಧಿ ಭಕ್ತರಿಗೆ ಗೊತ್ತಾಗಲಿ ಎಂಬುದು ನಮ್ಮ ಆಶಯ. ನಾಸಾ ಪ್ರಕಾರ, ಅದು ವೈವಿಧ್ಯ ಹಿನ್ನೆಲೆಯಿರುವ ಸುಮಾರು 17 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತದೆ: ನಾಸಾದ ಉದ್ಯೋಗಿಗಳಲ್ಲಿ ಶೇ.72ರಷ್ಟು ಬಿಳಿಯರು(Caussasians), ಶೇ 12ರಷ್ಟು ಕರಿಯರು ಅಥವಾ ಆಫ್ರಿಕನ್ ಅಮೆರಿಕನ್ನರು, ಶೇ. 7-8 ಏಶಿಯನ್ನರು ( ಪೆಸಿಫಿಕ್ ಐಸ್‍ಲ್ಯಾಂಡರ್ಸ್), ಶೇ 7ರಷ್ಟು ಹಿಸ್ಪಾನಿಕ್ ಅಥವಾ ಲಾಟಿನೊ, ಶೇ 1.1 ರಷ್ಟು ಅಮೆರಿಕನ್ ಇಂಡಿಯನ್ಸ್ ಇದ್ದಾರೆ. ನಾಸಾದ ಅಂಕಿಸಂಖ್ಯೆ ಪ್ರಕಾರ, 1996ರಲ್ಲಿ ಶೇ. 4.5ರಷ್ಟಿದ್ದ ಏಶಿಯನ್ನರು ಈಗ 7.4ರಷ್ಟಿದ್ದಾರೆ.

ಹತ್ತು ವರ್ಷದಿಂದಲೂ ಇಂತಹ ಸುದ್ದಿ ಚಾಲ್ತಿಯಲ್ಲಿದೆ. ಆಗ ಶೇ 33ರಷ್ಟು ನಾಸಾ ನಮ್ಮವರೆ ಅಂತಿದ್ದವರು ಈಗ ಶೇ 58ಕ್ಕೆ ಏರಿದ್ದಾರೆ. ನಮ್ಮ ಭಾರತೀಯರು ಪ್ರಪಂಚದೆಲ್ಲೆಡೆ ಕೆಲಸ ಮಾಡುತ್ತಿದ್ದಾರೆ. ಅದು ನಮ್ಮ ಹೆಮ್ಮೆಯೂ ಹೌದು ಜೊತೆಗೆ ಯಾಕೆ ಅವರು ಇಲ್ಲಿಯೇ ಕೆಲಸ ಮಾಡಿ, ನಮ್ಮ ದೇಶಕ್ಕೆ ಕೊಡುಗೆ ಕೊಡಬಹುದಿತ್ತಲ್ಲ ಎಂಬ ಕೊರಗು ಹೌದು.

ನಾವು ವಾಸ್ತವ ಅಂಶಗಳನ್ನು ಇಟ್ಟುಕೊಂಡು ಹೆಮ್ಮೆಪಡಬೇಕು. ಬದಲಿಗೆ ಈ ರೀತಿಯ 58% ಭಾರತೀಯರು ಎಂಬ ಸುಳ್ಳುಗಳನ್ನು ಇಟ್ಟು ಕೊಚ್ಚಿಕೊಂಡರೆ ಮುಂದೆ ನಮಗೆ ತೊಂದರೆ ಕಾದಿರುತ್ತದೆ. ಎಲ್ಲರಿಗೂ ಗೂಗಲ್ ನೆಟ್ ಕ್ಷಣಾರ್ಧದಲ್ಲಿ ಕೈಗೆ ಸಿಗುವುದರಿಂದ ಇದು ಸುಳ್ಳು ಎಂದು ಸುಲಭವಾಗಿ ಗೊತ್ತಾಗಿ ನಂತರ ನಮ್ಮ ದೇಶದವರನ್ನು ಅಪಹಾಸ್ಯ ಮಾಡುವುದನ್ನು ತಪ್ಪಿಸಿಕೊಳ್ಳಬೇಕಾದರೆ ಇಂತಹ ಸುಳ್ಳು ಸುದ್ದಿಗಳನ್ನು ನಿಲ್ಲಿಸಬೇಕು.
(ಆಧಾರ: ಅಲ್ಟ್‍ನ್ಯೂಸ್)

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here