ಕುರುಕ್ಷೇತ್ರ: ಇದು ತೆಲುಗಿನಿಂದ ಮುನಿರತ್ನ ಕದ್ದ ಮಾಲು…

ಸುಮಾರು ಒಂದು ದಶಕದ ಬಳಿಕ ಕನ್ನಡದಲ್ಲಿ ಒಂದು ಪೌರಾಣಿಕ ಚಿತ್ರ ಮಾಡಲಾಗಿದೆ. ಬಹುತಾರಾಗಣದ ಕನ್ನಡದ ಅತಿದೊಡ್ಡ ಚಿತ್ರವೆನಿಸಿರುವ ಕುರುಕ್ಷೇತ್ರ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಬಾಹುಬಲಿಯ ನಂತರ ಕೆಜಿಎಫ್ ಮತ್ತು ಈಗ ಕುರುಕ್ಷೇತ್ರ. ಹತ್ತಾರು ಕೋಟಿ ಸುರಿದು ಮಹಾಭಾರತವನ್ನು ಚಲನಚಿತ್ರವಾಗಿಸುವುದು ಸದಾಕಾಲ ನಡೆಯುವ ಮಾತಲ್ಲ. ಇದು ಖಂಡಿತವಾಗಿಯೂ ಕನ್ನಡದಲ್ಲಿ ಗಮನಿಸಬೇಕಾದ ಒಂದು ಮೈಲಿಗಲ್ಲು.

ಈ ಎಲ್ಲ ಕುತೂಹಲ, ಕೊಂಚ ಭಯ ಮತ್ತು ಬೆಟ್ಟದಷ್ಟು ಆಸೆಯೊಂದಿಗೆ ನಾನು ಕುರುಕ್ಷೇತ್ರ ಚಿತ್ರವನ್ನು ಬಿಡುಗಡೆಯಾದ ದಿನವೇ ನೋಡಿದೆ. ಆದರೆ ಚಿತ್ರದ ಮೊದಲ ಸನ್ನಿವೇಶದಲ್ಲಿಯೇ ನಾನು ಊಹಿಸದಿದ್ದ ನಿರಾಸೆ – ಇದು ತೆಲುಗಿನ ಕದ್ದ ಮಾಲು! ನಂತರ ಸಿನಿಮಾ ಉದ್ದಕ್ಕೂ ನಾನೆಣಿಸಿದ್ದು ಸುಳ್ಳಾಗಲಿ ಎಂಬ ಆಸೆ. ಆದರೆ ಚಿತ್ರ ಸಾಗಿದಂತೆಲ್ಲ, ನನ್ನ ನಿರಾಸೆ ಬಲಿಯುತ್ತಾ ಹೋಯಿತಷ್ಟೆ.

ಇಡೀ ಚಿತ್ರ – ಎರಡು ಸನ್ನಿವೇಶಗಳ ಹೊರತಾಗಿ – 1977ರ ತೆಲುಗಿನ ಎನ್. ಟಿ. ರಾಮರಾವ್‍ರ ದಾನವೀರ ಶೂರಕರ್ಣ ಚಿತ್ರದ ಪೇಲವ ಅವತರಣಿಕೆಯಷ್ಟೆ! ದಾನವೀರ ಶೂರಕರ್ಣ ಚಿತ್ರವು ತೆಲುಗು ಸಿನೇತಿಹಾಸದಲ್ಲಿಯೇ ಅಜರಾಮರವಾಗುಳಿದಿರುವ ರಾಮರಾವರೇ ನಿರ್ಮಿಸಿ, ನಿರ್ದೇಶಿಸಿ, ದುರ್ಯೋಧನ, ಕರ್ಣ ಮತ್ತು ಕೃಷ್ಣನಾಗಿ ತ್ರಿಪಾತ್ರಾಭಿನಯ ಮಾಡಿದ ಅವರ magnum opus. ಅತ್ಯುತ್ತಮ ತೆಲುಗು ಚಿತ್ರಗಳ ಸಾಲಿನಲ್ಲಿಯೂ ನಿಲ್ಲುವ ಸಿನಿಮಾ. ಇಡೀ ಸಿನಿಮಾ ನಿರ್ಮಾಣವೇ ಒಂದು ರೋಚಕ ಇತಿಹಾಸ. ಈ ಚಿತ್ರವನ್ನು ನೋಡಿರದ ತೆಲುಗರು ವಿರಳ ಎಂತಲೇ ಹೇಳಬಹುದು. ಕುರುಕ್ಷೇತ್ರ ಚಿತ್ರದ ಚಿತ್ರಕತೆಯು ನೇರವಾಗಿ ಈ ಚಿತ್ರದಿಂದ ಕದ್ದದ್ದೇ.

ದಾನವೀರ ಶೂರಕರ್ಣ ಚಿತ್ರವು ಮೂರು ಗಂಟೆ 56 ನಿಮಿಷ ಉದ್ದವಿದ್ದು ಭಾರತೀಯ ಚಿತ್ರರಂಗದಲ್ಲೇ ಆರನೇ ಅತಿ ಉದ್ದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕುರುಕ್ಷೇತ್ರ ಚಿತ್ರವು ಮೂರು ಗಂಟೆ ಉದ್ದವಿದ್ದು ಮೂಲ ಚಿತ್ರದ ಹಲವು ಸನ್ನಿವೇಶಗಳನ್ನು ಮುಖ್ಯವಾಗಿ ಕರ್ಣನ ಪಾತ್ರದ ಸನ್ನಿವೇಶಗಳನ್ನು ಕೈಬಿಟ್ಟು ದುರ್ಯೋಧನನದೇ ಮೇಲುಗೈ ಆಗುವಂತೆ ಚಿತ್ರಕತೆಯನ್ನು ಹೆಣೆದಿದ್ದಾರೆ ಅಷ್ಟೆ. ಇನ್ನುಳಿದಂತೆ ಎಲ್ಲವೂ ಪೇಲವ ರೀಮೇಕೇ ಸರಿ.

ಚಿತ್ರಕತೆಯಷ್ಟೇ ಅಲ್ಲ. ಸನ್ನಿವೇಶಗಳನ್ನು ಸ್ಟೇಜ್ ಮಾಡಿರುವುದು ಶಾಟ್ ಬೈ ಶಾಟ್ ಹಾಗೇ ಮಾಡಲಾಗಿದೆ. ಇನ್ನು ಸಂಭಾಷಣೆ. ರಾಮರಾವ್ ರ ಸಿನಿಮಾದ ಸಂಭಾಷಣೆ – ಸಂಸ್ಕೃತಭೂಯಿಷ್ಠ ಗ್ರಾಂಥಿಕ ತೆಲುಗಿನದು – ಎಷ್ಟು ವಿಖ್ಯಾತವೆಂದರೆ ಸಂಭಾಷಣೆಯ ಆಡಿಯೋ ಕ್ಯಾಸೆಟ್ಟುಗಳು ಕಡಲೆಪುರಿಯಂತೆ ಮಾರಾಟವಾಗಿದ್ದುವಂತೆ. ನಮ್ಮ ಮನೆಯಲ್ಲೂ ಇತ್ತು. ಈ ಚಿತ್ರದ ಹಲವು ಪಾತಕ ಸನ್ನಿವೇಶಗಳ ಸಂಭಾಷಣೆಗಳು ನನಗೆ ಕಂಠಪಾಠ ಬರುತ್ತೆ. ಕುರುಕ್ಷೇತ್ರ ಸಿನಿಮಾದಲ್ಲಿ ಈ ಸಂಭಾಷಣೆಗಳನ್ನು ನೇರವಾಗಿ ಅನುವಾದಿಸಿ ಇಲ್ಲವೇ ಕೆಲವೊಂದು ಸಣ್ಣ ಮಾರ್ಪಾಡುಗಳೊಂದಿಗೆ ಹಾಗೇ ಬಳಸಿಕೊಳ್ಳಲಾಗಿದೆ.

ರಾಮರಾವ್‍ರು ಬಳಸಿರುವ ಭಾಷಾಶೈಲಿ ಮತ್ತು ಓಘ ಕುರುಕ್ಷೇತ್ರದ ನಟರಾರಿಗೂ ನಾಲಿಗೆ ಹೊರಳದೆ ಅದನ್ನು ಇಂದಿನ ಕನ್ನಡಕ್ಕೆ ಇಳಿಸಿ ಬಳಸಿಕೊಳ್ಳಲಾಗಿದೆ. ಉದಾಹರಣೆಗೆ ಮಯಸಭೆಯಲ್ಲಿ ದುರ್ಯೋಧನಿಗಾದ ಅಪಮಾನ ಮತ್ತು ಅದ ನೋಡಿ ದ್ರೌಪದಿ ನಕ್ಕಿದ್ದನ್ನು ನೆನೆದು ತನ್ನ ಅರಮನೆಯಲ್ಲಿ ಹಳಹಳಿಸುತ್ತಿರುವಾಗ ಬರುವ ಸ್ವಗತ (ಇದು ತೆಲುಗಿನ ವಿಖ್ಯಾತ ಸನ್ನಿವೇಶ). ತೆಲುಗಿನಲ್ಲಿ ದುರ್ಯೋಧನ “ಪಾಂಚಾಲಿ ಪಂಚ ಭರ್ತುಕ.. ಏಮೇ ಏಮೇಮೇ ನೀ ಉನ್ನತ ವಿಕಟಾಟ್ಟಹಾಸಮು” ಎಂದರೆ, ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೊಧನನು “ಪಾಂಚಾಲಿ ಪಂಚ ಪಲ್ಲಂಗಿನಿ..ಏನೇ ನಿನ್ನ ಉನ್ನತ ವಿಕಟಾಟ್ಟಹಾಸದ ಧ್ವನಿಯು” ಎನ್ನುತ್ತಾನೆ. ಚಿತ್ರದ ಕೊನೆ ಸಹ ಅದೇ ಶಾಟ್ – ದುರ್ಯೋಧನ ಕರ್ಣರು ಆಕಾಶಮಾರ್ಗವಾಗಿ ಭೇಟಿಯಾಗುತ್ತಾರೆ! ದುರ್ಯೋಧನ-ಕರ್ಣರ ಸ್ನೇಹವೇ ಚಿತ್ರದ ಜೀವಾಳ.

ಪಂಪಭಾರತದಲ್ಲಿ ಒಂದು ಸನ್ನಿವೇಶವಿದೆ. ದುರ್ಯೋಧನನ ಪತ್ನಿ ಭಾನುಮತಿ ಮತ್ತು ಕರ್ಣ ಪಗಡೆಯಾಡುತ್ತಿದ್ದಾರೆ. ಒಂದು “ಮುತ್ತು” ಪಂದ್ಯ. ಭಾನುಮತಿ ಪಂದ್ಯ ಸೋಲುತ್ತಾಳೆ. ಕರ್ಣ ಭಾನುಮತಿಯ ಮುತ್ತಿನಹಾರಕ್ಕೆ ಕೈಹಾಕುತ್ತಾನೆ ಮುತ್ತುಗಳು ನೆಲಚೆಲ್ಲುತ್ತವೆ. ಆಗ ದುರ್ಯೋಧನ ಪ್ರವೇಶಿಸುತ್ತಾನೆ. ದುರ್ಯೋಧನನು ಕರ್ಣನಿಗೆ ಮುತ್ತು ಆರಿಸಿಕೊಡುತ್ತಾನೆ. ಇದರಲ್ಲಿ ಮುತ್ತು ಎಂಬ ಪದ ದ್ವಂದ್ವಾರ್ಥದ್ದೇ? ಈ ಪದ್ಯವು ಬಹುಶಃ ಕನ್ನಡ ಇತಿಹಾಸದಲ್ಲಿಯೇ ಅತ್ಯಂತ ವಿಮರ್ಶೆಗೊಳಗಾದ ಪದ್ಯ. ಈ ಎಲ್ಲ ವಿಮರ್ಶೆಯನ್ನೂ ಸೇರಿಸಿ ಭಾನುಮತಿಯ ನೆತ್ತ ಎಂಬ ಪುಸ್ತಕವೇ ಒಂದು ಬಂದಿದೆ. ಒಟ್ಟಾರೆ ಈ ಪ್ರಸಂಗವು ದುರ್ಯೋಧನ-ಕರ್ಣರ ಸ್ನೇಹಕ್ಕೆ, ದುರ್ಯೋಧನನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಈ ಪ್ರಸಂಗ ಕುರುಕ್ಷೇತ್ರದಲ್ಲಿ ಇಲ್ಲವೇ ಇಲ್ಲ. ಏಕೆಂದರೆ ತೆಲುಗಿನ ಶಾಹಿತ್ಯ ಪರಂಪರೆಯಲ್ಲಿ ಈ ಪ್ರಸಂಗ ಇಷ್ಟು ಮಹತ್ವ ಪಡೆದಿಲ್ಲ, ಹಾಗಾಗಿ ರಾಮರಾವ್ ರ ಚಿತ್ರದಲ್ಲಿಲ್ಲ!

ಎರಡು ಸನ್ನಿವೇಶಗಳ ಹೊರತಾಗಿ ದಾನವೀರ ಶೂರಕರ್ಣ ಎಂದೆನು. ಆ ಎರಡು ಸನ್ನಿವೇಶಗಳು – ದುರ್ಯೋಧನ ಗಾಂಧಾರ ದೇಶದ ರಾಜ ತನ್ನ ತಾತ ಮತ್ತು ಮಾವಂದಿರನ್ನು ಕೂಡಿಹಾಕಿ ಒಂದು ತುತ್ತು ಅನ್ನ ಹಾಕೋದು, ಅವರೆಲ್ಲರೂ ಸತ್ತು ಶಕುನೀನ ಬದುಕಿಸೋದು, ಅವನು ಸೇಡಿಗೆ ಸಂಕಲ್ಪಿಸೋದು ಮತ್ತು ಕುರುಕ್ಷೇತ್ರ ಯುದ್ಧ ಸಂದರ್ಭ ಅಭಿಮನ್ಯುವು ಮುತ್ತಾತ ಭೀಷ್ಮನ ಬಿಡಾರಕ್ಕೆ ಹೋಗಿ ಆಶೀರ್ವಾದ ಪಡೆಯುವುದು. ಶಕುನಿಯ ಇಡೀ ಪ್ರಸಂಗ ಮತ್ತೊಂದು ರಾಮರಾವರ ಚಿತ್ರದಿಂದ ಕದ್ದದ್ದು!

ರಾಮರಾಯರು ಮೊದಲ ಬಾರಿಗೆ ದುರ್ಯೋಧನನ ಪಾತ್ರ ನಿರ್ವಹಿಸಿದ್ದು 1966ರಲ್ಲಿ ಅವರೇ ನಿರ್ದೇಶಿಸಿದ ಶ್ರೀಕೃಷ್ಣಪಾಂಡವೀಯಂ ಚಿತ್ರದಲ್ಲಿ. ಇಡೀ ಶಕುನಿಯ ಪ್ರಸಂಗ ಮತ್ತೆ ಶಾಟ್-ಬೈ-ಶಾಟ್ ಈ ಚಿತ್ರದ್ದು! ಇನ್ನು ಅಭಿಮನ್ಯು ಭೀಷ್ಮರ ಪ್ರಸಂಗ ಮುಡುಪಾಗಿರುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ! ಅಭಿಮನ್ಯು-ಭೀಷ್ಮರು ಅರ್ಜುನನ ಅಷ್ಟೋತ್ತರ ಮಾಡುವುದೇ ಈ ಸನ್ನಿವೇಶ. ಹಾಗಾಗಿ ಈ ಭಾಗಶಃ ಅಸಂಬದ್ಧ ಸನ್ನಿವೇಶವೊಂದನ್ನು ನಮ್ಮವರೇ ಬರೆದಿರುವುದು ಎನ್ನಲು ವಿಷಾದಿಸಬೇಕಿದೆ. ಕಳೆದೊಂದೂವರೆ ವರ್ಷಗಳಿಂದಲೂ ತಯಾರಿಯಲ್ಲಿದ್ದ ಚಿತ್ರವಾದ್ದರಿಂದ ಅವತ್ತಿನ ರಾಜಕೀಯ ಸನ್ನಿವೇಶಕ್ಕನುಗುಣವಾಗಿ ಬರೆಯಲಾಗಿದೆ. ಆದರೆ ಈ ಅವಧಿಯಲ್ಲಿ ಎಷ್ಟೆಲ್ಲ ಬದಲಾವಣೆಗಳು! ಅಂಬರೀಷ್ ಸಾವಿನ ನಂತರ ನಿಖಿಲ್ ಮತ್ತು ಸುಮಲತಾ ಎದುರುಬದುರಾಗಿ ಮಂಡ್ಯದಲ್ಲಿ ಸೆಣೆಸಿದ್ದು, ಕುಮಾರಸ್ವಾಮಿ ಮಾಜಿಯಾಗಿದ್ದು ಅದಕ್ಕೆ ಚಿತ್ರ ನಿರ್ಮಾಪಕ ಮುನಿರತ್ನರೂ ಕಾರಣವಾಗಿದ್ದು!

ನಿರ್ಮಾಪಕ ಮುನಿರತ್ನ ಕಥೆಯನ್ನೂ ಬರೆದಿದ್ದಾರಂತೆ! ಹೀಗೆ ಒಂದು iconic ತೆಲುಗು ಸಿನಿಮಾದಿಂದ ಕದ್ದು ಸಿನಿಮಾ ಮಾಡಿ ಅದನ್ನು ಮತ್ತೆ ತೆಲುಗಿನಲ್ಲಿ ಬಿಡುಗಡೆ ಮಾಡಿದ್ದಾರೆ! BookMyShow ಅಲ್ಲಿ ಇದು ರನ್ನನ ಗದಾಯುದ್ಧ ಆಧಾರಿತ ಎಂದು ಸುಳ್ಳು ಹೇಳಿಕೊಂಡಿದ್ದಾರೆ.

ಚಿತ್ರತಂಡದೊಳಗಿನ ಮೂಲಗಳ ಪ್ರಕಾರ ಮೊದಲು ಸ್ಕ್ರಿಪ್ಟ್ ಬರೆದವರು ತೆಲುಗಿನ ಜಿ ಕೆ ಭಾರವಿ. ಇವರು ಅನ್ನಮಯ್ಯ, ಶ್ರೀ ಮಂಜುನಾಥ ಚಿತ್ರಗಳಿಗೆ ಸ್ಕ್ರಿಪ್ಟ್ ಬರೆದವರು. ಸ್ವತಃ ಮುನಿರತ್ನ ಅವರೇ ದಾನವೀರ ಶೂರಕರ್ಣನ ಮಾದರಿಯಲ್ಲೇ ಬರೆಸಿಕೊಂಡಿದ್ದಾರೆ. ನಂತರ ಅದನ್ನು ತಿದ್ದಿ ಕೊಟ್ಟವರು ಚಿತ್ರಸಾಹಿತಿ ವಿ. ನಾಗೇಂದ್ರಪ್ರಸಾದ್. ಇದು ಮುನಿರತ್ನ ಅವರ ರಾಜಕೀಯ ನಡೆಗಳು ಮತ್ತು ಅದನ್ನು ದಕ್ಕಿಸಿಕೊಳ್ಳುವ ಭಂಡತನಕ್ಕೂ ಉಪಮೆಯೇ ಸರಿ.

ಇದು ಕನ್ನಡದ್ದಲ್ಲ, ಕನ್ನಡ ಚಿತ್ರರಂಗದ ಬೌದ್ಧಿಕ ದಾರಿದ್ರ್ಯ. ನಖಶಿಖಾಂತ ಕೋಪ ಮತ್ತು ನಿರಾಸೆ ಮೂಡಿಸುವ ಬೌದ್ಧಿಕ ದಾರಿದ್ರ್ಯ.

ಕನ್ನಡದಲ್ಲಿ ಮಹಾಭಾರತ ಕಾವ್ಯದ ಭವ್ಯ ಪರಂಪರೆಯೇ ಇದೆ. ಆದಿಕವಿ ಪಂಪ ಮತ್ತು ರನ್ನ ಹತ್ತನೇ ಶತಮಾನದ ಕವಿಗಳು. ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಅರ್ಜುನ ನಾಯಕನಾದರೂ ಕರ್ಣ ಅತ್ಯಂತ ಉದಾತ್ತವಾಗಿ ಚಿತ್ರಿತನಾಗಿದ್ದಾನೆ. ರನ್ನನ ಗದಾಯುದ್ಧದಲ್ಲಿ ಭೀಮ ನಾಯಕನಾದರೂ ದುರ್ಯೋಧನ ಉದಾತ್ತವಾಗಿ ಚಿತ್ರಿತನಾಗಿದ್ದಾನೆ. ದುರ್ಯೋಧನನ ದೃಷ್ಟಿಯಿಂದ ಮಹಾಭಾರತ ಹೇಳುವುದೇ ಚಿತ್ರತಂಡದ ಉದ್ದೇಶವಾಗಿದ್ದರೆ ಗದಾಯುದ್ಧವಿತ್ತು.

ಇನ್ನು ಗದುಗಿನ ನಾರಣಪ್ಪನ ಕುಮಾರವ್ಯಾಸ ಭಾರತದಿಂದ ಹಿಡಿದು ಭೈರಪ್ಪನವರ ಪರ್ವ ಮತ್ತು ಮೊಯಿಲಿ ಅವರು ಶ್ರೀಮುಡಿಯವರೆಗೆ ಎಂತಹ ಭವ್ಯ ಪರಂಪರೆಯದು! ಎಚ್. ಎಸ್. ವೆಂಕಟೇಶಮೂರ್ತಿಗಳಾದಿಯಾಗಿ ಅನೇಕ ಹಿರಿಯ ವಿದ್ವಾಂಸರು ನಮ್ಮಲ್ಲಿರುವರು, ಈ ಕಾವ್ಯಗಳನ್ನು ಚಿತ್ರಕ್ಕೆ ಒಗ್ಗಿಸಿಕೊಡಬಲ್ಲವರು. ಚಿತ್ರದಲ್ಲಿ ಭಾಷೆಯೂ ಕಳಪೆ, ಪದ್ಯಗಳೇ ಇಲ್ಲ. ಅಸಲು ಕನ್ನಡ ಮೇಷ್ಟ್ರ ಪ್ರಮೇಯವೇ ಇಲ್ಲದೇ ತೆಗೆದ ಚಿತ್ರವಿದು. ಈ ನೆಲದ ಪರಂಪರೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಸಿನಿಮಾ.

ದಾನವೀರ ಶೂರಕರ್ಣ ರಾಮರಾವ್ ರ magnum opus

ತೆಲುಗರಿಗೆ ಸಂಕ್ರಾಂತಿ ದೊಡ್ಡ ಹಬ್ಬ. ಹಾಗಾಗಿ ಅಂದು ವರ್ಷದ ಅತಿ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತವೆ. 1977ರ ಸಂಕ್ರಾಂತಿ ಐತಿಹಾಸಿಕವಾದುದು. ಅಂದು ಮಹಾಭಾರತದ ಹೂರಣದ ಎರಡು ಅತಿ ದೊಡ್ಡ ಚಿತ್ರಗಳು ಬಿಡುಗಡೆಯಾದವು. ರಾಮರಾಯರ ದಾನವೀರ ಶೂರಕರ್ಣ ಒಂದೆಡೆಯಾದರೆ ಸೂಪರ್‍ಸ್ಟಾರ್ ಕೃಷ್ಣ ನೇತೃತ್ವದ ಬಹುತೇಕ ಇಡೀ ತೆಲುಗು ಚಿತ್ರರಂಗವೇ ನೆರೆದಿದ್ದ ಕುರುಕ್ಷೇತ್ರಂ ಮತ್ತೊಂದೆಡೆ!

ಎಪತ್ತರ ದಶಕದ ಮಧ್ಯಭಾಗದಷ್ಟರಲ್ಲಿ ರಾಮರಾಯರು ಮತ್ತು ನಾಗೇಶ್ವರರಾಯರಿಗೂ ವಯಸ್ಸಾಗುತ್ತಾ ಬಂದಿತ್ತು. ನಾಗೇಶ್ವರರಾಯರಿಗೆ ಅಮೆರಿಕೆಯಲ್ಲಿ ಬೈಪಾಸ್ ಸರ್ಜರಿ ಆಗಿ ಅವರು ಕೊಂಚ ವಿಶ್ರಮಿಸಿದ್ದರು. ಆಗ ಅನೇಕ ಯುವ ನಾಯಕನಟರು ಪ್ರವರ್ಧಮಾನಕ್ಕೆ ಬಂದಿದ್ದರು – ಸೂಪರ್ ಸ್ಟಾರ್ ಕೃಷ್ಣ, ಮೋಹಕ ನಟ ಶೋಭನ್ ಬಾಬು, ರೆಬೆಲ್ ಸ್ಟಾರ್ ಕೃಷ್ಣಂರಾಜು….ಹೀಗೆ. ಅದಿನ್ನೂ ಚಿರಂಜೀವಿಯ ಕಾಲವಲ್ಲ. ಕೃಷ್ಣರಿಗೆ ರಾಮರಾಯರು-ನಾಗೇಶ್ವರರಾಯರನ್ನು ಹಿಂದಿಕ್ಕಿ ತಾನು ಏಕಮೇವಾದ್ವಿತೀಯನಾಗಿ ಮೆರೆಯಬೇಕೆಂಬ ಆಸೆ.

1973ರಲ್ಲಿ ಕೃಷ್ಣ ಮತ್ತು ರಾಮರಾಯರು ಕೂಡಿ ದೇವುಡು ಚೇಸಿನ ಮನುಷುಲು ಎಂಬ ಸಿನಿಮಾ ಮಾಡಿದ್ದರು. ಅದರ ಶತದಿನೋತ್ಸವಾಚರಣೆಗೆ ರಾಮರಾಯರು ಬರಲೇ ಇಲ್ಲ. ಆ ಸಿನಿಮಾ ತನ್ನಿಂದಲೇ ಓಡಿದ್ದು ಎಂದು ಇಬ್ಬರೂ ನಾಯಕನಟರು ಗರ್ವಿಸಿ ಕೂತಿದ್ದರು. ಅಲ್ಲಿಂದಲೇ ಹಳೆಯ ತಲೆಮಾರು ಮತ್ತು ಹೊಸ ತಲೆಮಾರು ಎಂಬ ಭೇದ ಘರ್ಷಣೆಗಳು ಮೊದಲಾದವು. ಅದು 1973. ಮುಂದಿನ ವರ್ಷ ಅಂದರೆ 1974 ಕೃಷ್ಣ ರಾಮರಾಯರು ಮತ್ತು ನಾಗೇಶ್ವರರಾಯರಿಗೆ ಸೆಡ್ಡು ಹೊಡೆದು ನಿಂತ ವರ್ಷ. ತೆಲುಗಿನಲ್ಲಿ ದೇವದಾಸು ಎಂದರೆ ಅದು ನಾಗೇಶ್ವರರಾಯರೇ! ಹಿಂದಿಯಲ್ಲಿ ಈ ಪಾತ್ರ ನಿರ್ವಹಿಸಿದ ದಿಲೀಪ್ ಕುಮಾರ್ ಸಹ ವರನಟನೆಗೆ ತಲೆದೂಗಿದ್ದರು. ಅಂತಹ ದೇವದಾಸು ಚಿತ್ರವನ್ನು ಕೃಷ್ಣ ಪುನರ್ ನಿರ್ಮಿಸಿದರು. ಈಸ್ಟಮನ್‍ಕಲರ್‍ನಲ್ಲಿ ಕೃಷ್ಣ ದೇವದಾಸು ಪಾತ್ರದಲ್ಲಿ ನಟಿಸಿದರೆ ಅವರ ಪತ್ನಿ ವಿಜಯನಿರ್ಮಲಾ ಪಾರು ಪಾತ್ರದಲ್ಲಿ ನಟಿಸಿ ಚಿತ್ರವನ್ನು ನಿರ್ದೇಶಿಸಿದರು. ಇವತ್ತು ಮರಳಿ ಈ ಚಿತ್ರವನ್ನು ವಿಕ್ಷಿಸಿದರೆ ಶರತ್‍ಚಂದ್ರ ಚಟ್ಟೋಪಾಧ್ಯಾಯರ ಕಾದಂಬರಿಯ ಹಲವು ಚಿತ್ರಾವತರಣಿಕೆಗಳಲ್ಲಿ ಇದು ಚೆನ್ನಾಗಿಯೇ ಇತ್ತೆಂದು ಹೇಳಬೇಕು.

ಆದರೆ ಅವತ್ತು ದೇವದಾಸು ಚಿತ್ರವನ್ನು ಕೃಷ್ಣ ಪುನರ್ನಿಮಿಸಿ ತನ್ನ ಸ್ಥಾನಕ್ಕೆ ಕುತ್ತು ತರುವರೆಂದೆಣಿಸಿದರೋ ಇಲ್ಲ ಅವತ್ತು ಕೃಷ್ಣರು ನಡಕೊಂಡ ರೀತಿನೀತಿಗಳಿಗೆ ಕೃದ್ಧರಾಗಿಯೋ ನಾಗೇಶ್ವರರಾಯರು ಈ ಚಿತ್ರಕ್ಕೆ ಎದುರಾಗಿ ರಾಜ್ಯಾದ್ಯಂತ ಹೊಸ ಪ್ರಿಂಟುಗಳೊಂದಿಗೆ ತಮ್ಮ 50ರ ದಶಕದ ದೇವದಾಸು ಚಿತ್ರವನ್ನು ಬಿಡುಗಡೆಗೊಳಿಸಿದರು. ಕೃಷ್ಣರ ದೇವದಾಸು ಕುಂಟುತ್ತಾ ನಾಲ್ಕು ವಾರಕ್ಕೆ ಥಿಯೇಟರುಗಳಿಂದ ಹೊರಹೋದರೆ, ನಾಗೇಶ್ವರರಾಯರ ದೇವದಾಸು ಶತದಿನೋತ್ಸವ ಆಚರಿಸಿತು! ರಾಮರಾವ್‍ರು ತೆಲುಗಿನ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮರಾಜುವಿನ ಬಗ್ಗೆ ಚಿತ್ರ ನಿರ್ಮಿಸುವ ಯೋಚನೆಯಲ್ಲಿದ್ದರು ಎಂಬುದನ್ನರಿತವರೇ ಅದೇ ಚಿತ್ರವನ್ನು ಕೃಷ್ಣ ಘೋಷಿಸಿಬಿಟ್ಟರು. ಕೆಲವೇ ತಿಂಗಳುಗಳಲ್ಲಿ ಅದನ್ನು ಮುಗಿಸಿ ಬಿಡುಗಡೆಗೊಳಿಸಿದರು ಕೂಡಾ. ಈ ಚಿತ್ರ ಸೂಪರ್ ಹಿಟ್‍ಆಯಿತು. ಇವತ್ತಿಗೂ ಇದು ಕೃಷ್ಣರ ವೃತ್ತಿ ಬದುಕಿನ ಮಹೋನ್ನತ ಚಿತ್ರಗಳಲ್ಲೊಂದು. ಆದರೆ ರಾಮರಾವ್‍ರು ಕುದ್ದುಹೋದರು.

ಇತ್ತ ರಾಮರಾವ್‍ರಿಗೆ ವರಸೆ ಸೋಲುಗಳು! ಅವರನ್ನು ಮೇಲೆತ್ತುವಂತಹ ಒಂದು ದಿಗ್ವಿಜಯ ಬೇಕಾಗಿತ್ತು. ಆಗ ಅವರು ಮೊರೆ ಹೋಗಿದ್ದು ಪೌರಾಣಿಕ ಚಿತ್ರಕ್ಕೇ. 1964ರಲ್ಲಿ ಬಿ.ಆರ್. ಪಂತುಲು ಅವರು ತಮಿಳಿನಲ್ಲಿ ಕರ್ಣನ್ ಎಂಬ ಸಿನಿಮಾ ಮಾಡಿದ್ದರು. ಅದರಲ್ಲಿ ಶಿವಾಜಿ ಗಣೇಶನ್ ಕರ್ಣನ ಪಾತ್ರ ಮಾಡಿದರೆ, ರಾಮರಾಯರು ಕೃಷ್ಣನ ಪಾತ್ರ ಮಾಡಿದ್ದರು. ಅಂದಿನಿಂದ ಅವರಿಗೆ ಕರ್ಣನ ಪಾತ್ರ ಕೊರೆಯುತ್ತಲೇ ಇತ್ತು. ಹಾಗಾಗಿ ಈಗ ಆ ಪಾತ್ರವನ್ನು ಕೈಗೆತ್ತಿಕೊಂಡವರೇ ದಾನ ವೀರ ಶೂರ ಕರ್ಣ ಎಂಬ ಚಿತ್ರವನ್ನು ಘೋಷಿಸಿದರು.

ಅವರು ಮೊದಲು ನೇರವಾಗಿ ಹೋಗಿದ್ದು ತಮ್ಮ ಮಿತ್ರ ನಾಗೇಶ್ವರರಾಯರ ಮನೆಗೆ. ಈ ಚಿತ್ರವನ್ನು ಅವರೀರ್ವರೂ ಮಾಡಿ ಹೊಸ ತಲೆಮಾರಿನ ನಾಯಕರಿಗೆ ತಾವಿನ್ನೂ ಕಸುವು ಕಳೆದುಕೊಂಡಿಲ್ಲ ಎಂದು ತೋರಿಸಬೇಕೆಂಬುದು ಅವರ ಆಸೆ. ನಾಗೇಶ್ವರರಾಯರಿಗೆ ತಾವು ಕೃಷ್ಣನ ಪಾತ್ರ ಮಾಡಬೇಕೆಂದೂ ತಾನು ದುರ್ಯೋಧನ-ಕರ್ಣರ ಪಾತ್ರ ಮಾಡುವೆನೆಂದೂ ಹೇಳುತ್ತಾರೆ. ಈ ಪ್ರಸಂಗವನ್ನು ಇತ್ತೀಚೆಗೆ ಬಿಡುಗಡೆಯಾದ ಎನ್‍ಟಿಆರ್ – ಕಥಾನಾಯಕುಡು ಚಿತ್ರದಲ್ಲಿ ಮನೋಜ್ಞವಾಗಿ ಬಿಡಿಸಿದ್ದಾರೆ. ಪೌರಾಣಿಕ ಚಿತ್ರದಲ್ಲಿ ರಾಮರಾಯರ ಜೊತೆ ನಟಿಸುವುದಿಲ್ಲ ಎಂದು ನಾಗೇಶ್ವರರಾಯರು ಅವರ ಪಶ್ನೆಗೆ ಮಾತು ಕೊಟ್ಟಿರುತ್ತಾರೆ. ಕಾರಣ ರಾಮರಾಯರ ಮುಂದೆ ಪೌರಾಣಿಕದಲ್ಲಿ ಸೆಣಸಲಾರರೆಂದು! ಅದರಲ್ಲೂ ಕೃಷ್ಣನ ಪಾತ್ರ! ನಾಗೇಶ್ವರರಾಯರು ಒಲ್ಲೆನೆನ್ನುತ್ತಾರೆ. ಸರಿ ಇನ್ನೇನು ಮಾಡುವುದು ಕೃಷ್ಣನ ಪಾತ್ರವನ್ನೂ ತಾವೇ ಮಾಡುತ್ತಾರೆ. ಅಲ್ಲಿಗೆ ತ್ರಿಪಾತ್ರಾಭಿನಯ! ನಾಗೇಶ್ವರರಾಯರು ಬದಲಿಗೆ ರಾಮರಾಯರ ಬಳಿ ಇದ್ದ ಚಾಣಕ್ಯ ಚಂದ್ರಗುಪ್ತ ಸ್ಕ್ರಿಪ್ಟ್‍ನಲ್ಲಿ ಆಸಕ್ತಿ ತೋರುತ್ತಾರೆ. ಅದೇ ವರ್ಷ ಆ ಚಿತ್ರವೂ ತೆರೆಗೆ ಬರುತ್ತದೆ. ಚಾಣಕ್ಯನಾಗಿ ನಾಗೇಶ್ವರರಾಯರ ನಟನೆ ಅಮೋಘ.

ಚಿತ್ರದ ತಯಾರಿ ಇನ್ನೂ ಮೊದಲಾಗಿಲ್ಲ. ಆಗಲೇ ಸೂಪರ್ ಸ್ಟಾರ್ ಕೃಷ್ಣ ಕುರುಕ್ಷೇತ್ರಂ ಎಂಬ ಸಿನಿಮಾ ಘೋಷಿಸಿಬಿಟ್ಟರು. ಅದೇ ಕಥೆ! ಅವರದು ಇಡೀ ಯುವತಲೆಮಾರಿನ ನಾಯಕ ನಟರೆಲ್ಲರೂ ಕೂಡಿದ ಚಿತ್ರ, ಹಿರಿಯ ಬರಹಗಾರ ಸಮುದ್ರಾಲ ಮತ್ತು ಪೌರಾಣಿಕ ಚಿತ್ರಬ್ರಹ್ಮ ಎಂದೇ ಬಿರುದಾಂಕಿತರಾದ ರಾಮರಾಯರ ಹಲವು ಪ್ರಸಿದ್ಧ ಪೌರಾಣಿಕ ಚಿತ್ರಗಳನ್ನು ನಿರ್ದೇಶಿಸಿದ ಕಮಲಾಕರ ಕಾಮೇಶ್ವರ ರಾವ್ ನಿರ್ದೇಶನ! ಕೃಷ್ಣರು ಅರ್ಜುನನ ಪಾತ್ರ ವಹಿಸುತ್ತಿದ್ದರಿಂದ ಕುರುಕ್ಷೇತ್ರಂ ಸಿನಿಮಾ ಪಾಂಡವರ ದೃಷ್ಟಿಯಿಂದ ಇತ್ತು. ಇತ್ತ ರಾಮರಾಯರದು ಕರ್ಣ-ದುರ್ಯೋಧನರ ದೃಷ್ಟಿಕೋನ. ಎರಡು ಚಿತ್ರಗಳು ಒಂದೇ ಕಥೆಯ ಎರಡು ದೃಷ್ಟಿಕೋನಗಳು! ರಸಿಕರಿಗೆ ಹಬ್ಬ.

ದಾನವೀರ ಶೂರಕರ್ಣ ಚಿತ್ರಕ್ಕೆ ಇನ್ನೂ ಸ್ಕ್ರಿಪ್ಟ್ ಸಿದ್ಧವಾಗಿರಲಿಲ್ಲ. ಈ ಸ್ಕ್ರಿಪ್ಟ್ ಅನ್ನು ಬರೆಯುವುದು ಯಾರು ಎಂದು ಹುಡುಕಾಟ ನಡೆಸಿ ಕಡೆಗೆ ರಾಮರಾಯರು ಕೊಂಡವೀಟಿ ವೆಂಕಟಕವಿ ಎಂಬ ತೆಲುಗು-ಸಂಸ್ಕೃತ ಪಂಡಿತರ ಕೈಲಿ ಬರೆಸಬೇಕೆಂದು ನಿಶ್ಚಯಿಸಿದರು. ವೆಂಕಟಕವಿಗಳು ಅವತ್ತು ಸಂಸ್ಕೃತ ಕಾಲೇಜೊಂದರ ಪ್ರಾಂಶುಪಾಲರು. ಅದುವರೆಗೂ ಯಾವತ್ತೂ ಸಿನಿಮಾಗೆ ಕೆಲಸ ಮಾಡದವರು. ಗುಂಟೂರಿನವರಾದ ಇವರು ವಿಶಿಷ್ಟರು. ನಾಸ್ತಿಕರಾಗಿದ್ದ ವೆಂಕಟಕವಿಗಳು ಬಾಬಾಗಳು, ಸನ್ಯಾಸಿಗಳ ವಿರುದ್ಧ ಸ್ವಾತಂತ್ರ್ಯಪೂರ್ವದಿಂದಲೂ ಹೋರಾಟ ನಡೆಸಿಕೊಂಡು ಬಂದವರು. ಕಾಂಗ್ರೆಸ್ಸಿಗರು. ಬುದ್ಧ, ವೇಮನ ಮತ್ತು ಗಾಂಧಿ ಅವರ ಮೇಲೆ ತೆಲುಗಿನಲ್ಲಿ ತ್ರಿಶತಕವನ್ನು ರಚಿಸಿದವರು, ನೆಹರು ಅವರ ಜೀವನಚರಿತ್ರೆಯನ್ನು ಬರೆದವರು. ರಾಮರಾಯರು ಹೇಳಿಕಳಿಸಿದರೆ ವೆಂಕಟಕವಿಗಳು ಒಲ್ಲೆ ಎನ್ನುತ್ತಾರೆ. ಆದರೆ ಒಂದು ಬಾರಿ ಏನನ್ನಾದರೂ ಎಣಿಸಿದರೆ ಬಿಡುವವರಲ್ಲ ರಾಮರಾಯರು. ಸ್ವತಃ ಅವರೇ ವೆಂಕಟಕವಿಗಳ ಮನೆಗೆ ಹೋಗಿ ವಿನಂತಿಸಿಕೊಂಡಾಗ ಇಲ್ಲ ಅನ್ನಲಾಗದೇ ವೆಂಕಟಕವಿಗಳು ಒಪ್ಪುತ್ತಾರೆ.

ವೆಂಕಟಕವಿಗಳು ಇಡೀ ಕಥೆಗೆ ಸಮಕಾಲೀನ ಅನುರಣನವನ್ನು ತರುತ್ತಾರೆ. ಅವರ ಕರ್ಣನ ಪಾತ್ರಚಿತ್ರಣದಲ್ಲಿ ಜಾತಿ ದಬ್ಬಾಳಿಕೆಯ ಕುರಿತು ತಮ್ಮ ಆಕ್ರೋಶವನ್ನು ಪ್ರಕಟಿಸುತ್ತಾರೆ. ದುರ್ಯೋಧನ-ಕರ್ಣರು ಚಿತ್ರದುದ್ದಕ್ಕೂ ಜಾತಿ ಎಲ್ಲೆಗಳ ಮೀರಿ ಸ್ನೇಹ, ಸಮಾನತೆಗಳ ಬಗ್ಗೆ ಮಾತಾಡುತ್ತಾರೆ, ಜಾತ್ಯಹಂಕಾರದ ಸೊಲ್ಲಡಗಿಸುತ್ತಾರೆ. ಈ ಚಿತ್ರದಲ್ಲಿ ಏಕಲವ್ಯನು ತನ್ನ ಹೆಬ್ಬೆರಳ ಕೊಯ್ದು ದ್ರೋಣನಿಗೆ ಗುರುದಕ್ಷಿಣೆಯಾಗಿ ಕೊಡುವಾಗ ಕರ್ಣ ಅಲ್ಲಿಗೆ ಬರುತ್ತಾನೆ. ಈ ಬ್ರಾಹ್ಮಣತ್ವದ ದಬ್ಬಾಳಿಕೆಯ ವಿರುದ್ಧ ಬಂಡೇಳುತ್ತಾನೆ. ಏಕಲವ್ಯನ ಸೋದರಿ ಪ್ರಭಾವತಿ ಇದನ್ನು ನೋಡಿ ಮನಸೋಲುತ್ತಾಳೆ. ಮುಂದೆ ದುರ್ಯೋಧನ ಕರ್ಣ-ಪ್ರಭಾವತಿಯರ ಮದುವೆ ಮಾಡಿಸುತ್ತಾನೆ. ಇದು ತುಳಿತಕ್ಕೊಳಗಾದವರೆಲ್ಲರೂ ಭ್ರಾತೃತ್ವದ ಹಿನ್ನೆಲೆಯಲ್ಲಿ ಒಗ್ಗೂಡಬೇಕೆಂದು ಸಾರುತ್ತಿದೆ. ಈ ಚಿತ್ರವು ಇವತ್ತಿಗೂ ಅತ್ಯಂತ ಬೋಲ್ಡ್ ಮತ್ತು ಪ್ರಗತಿಪರವೆನ್ನಿಸುವುದು ದುರಂತ. ಅದುವರೆಗೂ ಬಹುತೇಕ ಪೌರಾಣಿಕ ಚಿತ್ರಗಳು ಸಾಧಾರಣ ಭಾಷೆಯನ್ನೇ ಬಳಸುತ್ತಿದ್ದವು. ಆದರೆ ವೆಂಕಟಕವಿಗಳು ಗ್ರಾಂಥಿಕ ತೆಲುಗನ್ನು ಬಳಸುತ್ತಾರೆ. ಅದು ಇಡೀ ಚಿತ್ರಕ್ಕೆ ವಿಶೇಷ ಮೆರುಗು ನೀಡಿದೆ.

ಅತ್ತ ಕುರುಕ್ಷೇತ್ರಂ ಚಿತ್ರ ತಯಾರಿ ಜೋರಾಗಿ ನಡೆಯುತ್ತಿದ್ದರೆ ಇತ್ತ ರಾಮರಾಯರ ಚಿತ್ರವು ತಡವಾಗಿ ಹೋಗಿತ್ತು. ಈರ್ವರೂ 77ರ ಸಂಕ್ರಾಂತಿಯಂದು ಚಿತ್ರ ಬಿಡುಗಡೆ ಎಂದು ಘೋಷಿಸಿಯಾಗಿತ್ತು. ಅಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ.ಜಿ. ರಾಮಚಂದ್ರನ್ ಅವರು ತೆಂಗಿನಕಾಯಿ ಹೊಡೆದು ಶುರುಮಾಡಿದ ಚಿತ್ರವನ್ನು ರಾಮರಾಯರು ತಮ್ಮದೇ ಸ್ಟುಡಿಯೋ ರಾಮಕೃಷ್ಣ ಸಿನೀ ಸ್ಟುಡಿಯೋಸ್‍ನಲ್ಲಿ ಕೇವಲ 43 ದಿನಗಳಲ್ಲು ಮಾಡಿ ಮುಗಿಸಿದರು. ಇಡೀ ಚಿತ್ರದ ಸಂಕಲನ ಮೂರು-ನಾಲ್ಕು ದಿನಗಳಲ್ಲಿ ಮಾಡಲಾಗಿತ್ತು. ಹಾಗಾಗಿಯೇ ಕೆಲವು ಕಡೆ ಕಂಟಿನ್ಯುಟಿಯ ಸಮಸ್ಯೆಗಳು ಉಳಿದಿವೆ. ಸಂಕ್ರಾಂತಿಯಂದು ಎರಡೂ ಚಿತ್ರಗಳು ಬಿಡುಗಡೆಗೊಂಡವು. ಕೃಷ್ಣರ ಕುರುಕ್ಷೇತ್ರಂ ಕುಂಟುತ್ತಾ ಸಾಗಿ ಎರಡು ವಾರಕ್ಕೆ ಇಲ್ಲವಾಯಿತು. ರಾಮರಾವ್ ರ ದಾನವೀರ ಶೂರಕರ್ಣ ಆ ಕಾಲಕ್ಕೆ ಎರಡು ಕೋಟಿ ಸಂಪಾದಿಸಿತಂತೆ, ಚಿತ್ರದ ಬಜೆಟ್ಟಿನ 20 ಪಟ್ಟು!

ಅವತ್ತು ಇಬ್ಬರು ನಾಯಕನಟರ ನಡುವಿನ ತುರುಸಿನ ಸ್ಪರ್ಧೆಯೂ ಸೊಗಸಾಗಿತ್ತು.

ದುಡ್ಡಿರುವವರೆಲ್ಲರೂ ನಿರ್ಮಾಪಕರಾದರೆ?

ಕುರುಕ್ಷೇತ್ರ ನಿರ್ಮಿಸಲು ಹತ್ತಾರು ಕೋಟಿ ದುಡ್ಡು ಸುರಿಯುವ ತಾಕತ್ತಿದ್ದರೆ ಸಾಕೇ? ಒಂದು ಸದಭಿರುಚಿಯ ಚಿತ್ರ ನಿರ್ಮಾಣಕ್ಕೆ ದುಡ್ಡು ಅವಶ್ಯ ನಿಜ, ಆದರೆ ಅದರ ಹೊರತಾಗಿ ನಿರ್ಮಾಪಕನ ಪಾತ್ರವೇನು ಎಂಬ ಪ್ರಶ್ನೆಗಳನ್ನು ಕುರುಕ್ಷೇತ್ರ ಮತ್ತು ಮುನಿರತ್ನ ಎತ್ತಿದ್ದಾರೆ. 2000ದಿಂದೀಚೆಗೆ ಮೊದಲಿನ ಹಾಗೆ ವೃತ್ತಿಪರ ನಿರ್ಮಾಪಕರ ಸಂಖ್ಯೆ ಇಳಿಮುಖವಾಗಿ ರಾಜಕೀಯ-ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ದುಡ್ಡು ಮಾಡಿರುವವರು ನಿರ್ಮಾಪಕರಾಗುವುದನ್ನು ನಾವು ಗಮನಿಸಿದ್ದೇವೆ. ಆದಿಕವಿ ಪಂಪ ಮತ್ತು ರನ್ನರು, ಇತ್ತ ಹೋಗಲಿ ಭೈರಪ್ಪನವರ ಪರ್ವ ಮುನಿರತ್ನರಿಗೆ ತಿಳಿದಿದೆಯೇ? ಹತ್ತಾರು ಕೋಟಿ ಸುರಿದು ಚಿತ್ರ ನಿರ್ಮಿಸುವಾಗ ಅದೇಕೆ ಈ ನಿರ್ಮಾಪಕರು 5-10 ಲಕ್ಷ ಕೊಟ್ಟು ಬರಹಗಾರರ ಕೈಲಿ ದುಡಿಸಿಕೊಳ್ಳುವುದಿಲ್ಲ? ಅದೇಕೆ ಈ ಬಗೆಯ anti-intellectualism? ಅರ್ಥವಾಗದು. ಆದರೆ ಇದು ಕನ್ನಡ ಚಿತ್ರರಂಗದ ದುರಂತವೇ ಸರಿ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

2 COMMENTS

  1. ಇದು ಈ ಚಿತ್ರದ ಅತ್ಯುತ್ತಮ ವಿಮರ್ಶೆ. ಸಿನಿಮಾ ನೋಡ್ತಾ ಅಳು ಬರುತ್ತಿತ್ತು. ಪುಸ್ತಕ ಕೊಟ್ಟು , ಚಾಪ್ಟರ್ ತೋರಿಸಿ , ಉತ್ತರಗಳನ್ನು ಅಂಡರ್ ಲೈನ್ ಮಾಡಿದ್ದರೂ ತಪ್ಪುತಪ್ಪು ಕಾಪಿ ಮಾಡಿದರೆ evaluate ಮಾಡುವ ಮೇಷ್ಟ್ರಿಗೆ ಬರಬಹುದಾದ ಅಳು:(:(:(

  2. ಸಿನಿಮಾ ಅಷ್ಟಾಗಿ ಚೆನ್ನಾಗಿಲ್ಲ ದರ್ಶನ್ ಆಕ್ಟಿಂಗ್ ಸ್ವಲ್ಪ ಕಮ್ಮಿನೆ ಕರ್ಣನ ಆಕ್ಟಿಂಗ್ ಅರ್ಜುನ್ ಸರ್ಜಾ ಸೂಪರ್ ಮಾಡಿದ್ದಾರೆ ಒಳ್ಳೆ ಧಾರಾವಾಹಿ ನೋಡುವ ಹಾಗಿದೆ ದುರ್ಯೋಧನ ವಾಯ್ಸ್ ಹೆಂಗಿರಬೇಕು ಆದರೆ ದುರ್ಯೋಧನನ ವಾಯ್ಸ್ ಇದರಲ್ಲಿಲ್ಲ ಕಮ್ಮಿ ಇದೆ

LEAVE A REPLY

Please enter your comment!
Please enter your name here