ಮುಕ್ತಿಯಾರ್ ಅಲಿ ಗಾಯನ: ರಹಮತ್ ತರೀಕೆರೆಯವರ ಒಂದು ಆಪ್ತ ಬರಹ

| ರಹಮತ್ ತರೀಕೆರೆ |

ಇದೇ ಮೇ ನಾಲ್ಕರಂದು ಗದಗದಲ್ಲಿ ಮೇ ಸಾಹಿತ್ಯ ಸಮ್ಮೇಳನ ನಡೆಯಿತು. ಅದರಲ್ಲಿ ರಾಜಸ್ಥಾನದ ಕಲಾವಿದ ಮುಖ್ತಿಯಾರ್ ಅಲಿಯವರ ಸೂಫಿ ಗಾಯನವಿತ್ತು. ಅವರಂತಹ ಬಹುತ್ವದ ಹಿನ್ನೆಲೆಯ ಗಾಯಕ ಗದಗಕ್ಕೆ ಬರುವುದು ಅರ್ಥಪೂರ್ಣವಾಗಿತ್ತು. ಯಾಕೆಂದರೆ ಗದಗವು ಗೋವಿಂದ ಭಟ್ಟರ ಶಿಷ್ಯನಾದ ಶಿಶುನಾಳ ಶರೀಫರ ನೆಲ; ಹಿಂದೂಗಳು ಮುಸ್ಲಿಮರೂ ಒಟ್ಟಿಗೇ ನಡೆದುಕೊಳ್ಳುವ ಯಮನೂರಿನ ರಾಜಬಾಗಸವಾರನ ಸೀಮೆ; ಬಸವತತ್ವದ ಜತೆಗೆ ಸೂಫಿ ಚಿಂತನೆಗಳನ್ನು ಕೂಡಿಸಿ ನೋಡುತ್ತಿದ್ದ ತೋಂಟದಾರ್ಯ ಸ್ವಾಮಿಗಳ ಊರು; ಮಹಾಭಾರತದಂತಹ ಸಂಸ್ಕೃತ ಕ್ಲಾಸಿಕಲ್ ಕಾವ್ಯವನ್ನು ಕನ್ನಡದ ಷಟ್ಪದಿಯಲ್ಲಿ ಕಟ್ಟಿ ಜನಪದೀಕರಣಗೊಳಿಸಿದ ಕುಮಾರವ್ಯಾಸನ ಭೂಮಿಕೆ. ಈ ಸಂತ, ಕವಿ, ಗುರುಗಳಲ್ಲಿರುವ ಹಲವು ಲಕ್ಷಣಗಳು ಅವರ ಹಾಡುವ ಸೂಫಿ ಸಂಗೀತದಲ್ಲಿವೆ.

ಹಾಗೆ ಕಂಡರೆ, ಸೂಫಿಸಂಗೀತದ ಮಾತೃಕೆಯಾದ ಹಿಂದೂಸ್ತಾನಿ ಸಂಗೀತವು ಶುರುವಾಗುವುದೇ ಸಂಕರದಿಂದ; ಕ್ಲಾಸಿಕಲ್ ಪರಂಪರೆಯನ್ನು ಜನಪದದ ಜತೆ ಬೆಸೆಯುವುದರಿಂದ. ಪಂಪ ಹೇಳುವಂತೆ `ದೇಸಿಯೊಲ್ ಪೊಕ್ಕು ಮಾರ್ಗದೊಳೆ ತಳ್ವು’ವುದರಿಂದ. ಈ ಕಾರ್ಯವನ್ನು ಎಂಟು ನೂರುವರ್ಷಗಳ ಹಿಂದೆ ಅಮೀರ್‍ಖುಸ್ರೂ ಮಾಡಿದನು. ದೆಹಲಿಯ ನಿಜಾಮುದ್ದೀನ್ ಚಿಸ್ತಿಯವರ ಶಿಷ್ಯನಾದ ಈತನ ಹುಟ್ಟಿನಲ್ಲೇ ಸಂಕರವಿತ್ತು. ಈತನ ತಂದೆ ಟರ್ಕಿಮೂಲದವನು. ತಾಯಿ ಸ್ಥಳೀಯ ಬ್ರಾಹ್ಮಣ ಮಹಿಳೆ. ಖುಸ್ರೂ ಭಾರತದ ಎಲ್ಲ ಪ್ರದೇಶಗಳ ಸಂಗೀತ ಪರಂಪರೆಗಳನ್ನು ಅಧ್ಯಯನ ಮಾಡಿ ಬೆರೆಸಿ ಹೊಸ ಸಂಗೀತ ಪದ್ಧತಿಯನ್ನು ಆರಂಭಿಸಿದನು. ಸೂಫಿ ಸಂಗೀತವು ಇದರ ಒಂದು ಭಾಗ. ಈ ಸಂಗೀತವು ಅರಬ್‍ದೇಶಗಳಲ್ಲಿ ಇಲ್ಲ. ಭಾರತ ಬಾಂಗ್ಲಾ ಪಾಕಿಸ್ತಾನಗಳಲ್ಲಿ ಮಾತ್ರ ಇದೆ. ಸಾಂಪ್ರದಾಯಿಕ ಇಸ್ಲಾಂ ಸಂಗೀತವನ್ನು ನಿಷೇಧಿಸುತ್ತದೆ. ಆದರೆ ಕಳೆದ ಎಂಟುನೂರು ವರ್ಷಗಳಿಂದ ಸಹಸ್ರಾರು ಖಾನರೂ ಉಸ್ತಾದರೂ ಹಿಂದೂಸ್ತಾನಿ ಸಂಗೀತವನ್ನು ಹಾಡುತ್ತ ಬಂದಿದ್ದಾರೆ. ಆದ್ದರಿಂದ ಈ ಸಂಗೀತಕ್ಕೆ ಸಂಪ್ರದಾಯದ ವಿರುದ್ಧ ನಿಂತ ಬಂಡುಕೋರ ಗುಣವೂ ಇದೆ.

ಸೂಫಿ ಸಂಗೀತದಲ್ಲಿ ಹಲವು ಧಾರೆಗಳಿವೆ. ಖ್ಯಾಲ್ ಠುಮ್ರಿ ದಾದ್ರಾ ದ್ರುಪದ್ ಪ್ರಕಾರಗಳಿಂದ ಕೂಡಿರುವ ಹಿಂದೂಸ್ತಾನಿ ಸಂಗೀತವು ಮಾರ್ಗ ಪರಂಪರೆಯಾದರೆ; ಇದರ ಗರ್ಭದೊಳಗಿಂದಲೇ ಈ ಹಲವು ಧಾರೆಗಳು ಹುಟ್ಟಿವೆ. ಅವೆಂದರೆ, 1. ದರ್ಗಾಗಳಲ್ಲಿ ಸೂಫಿಗುರುಗಳ ಸಮ್ಮುಖದಲ್ಲಿ ಸಾಧಕರು ಸೇರುವ ಮೆಹಫಿಲ್‍ಗಳಲ್ಲಿ ಹಾಡಲಾಗುವ `ಸಮಾ’. ಇದನ್ನು ಹಾಡುವವರು ದರ್ಗಾದಲ್ಲೇ ಪಾರಂಪರಿಕವಾಗಿ ಇರುವ ಖವಾಲರ ಮನೆತನದವರೇ ಹಾಡುವರು. 2. ಉರುಸು ಮತ್ತು ಸಾರ್ವಜನಿಕ ಆಚರಣೆಯಾಗಿರುವ ಖವಾಲಿ. ಸಾಬ್ರಿ ಬ್ರದರ್ಸ್, ನುಸ್ರತ್‍ಫತೆ ಅಲಿಖಾನ್ ಈ ಪ್ರಕಾರವನ್ನು ಎತ್ತರಕ್ಕೆ ಒಯ್ದು ಮುಟ್ಟಿಸಿದರು. 3. ಪಶ್ಚಿಮದ ಸಂಗೀತದ ಜತೆ ಖವ್ವಾಲಿಯನ್ನು ಬೆಸೆದವರು. ಇದನ್ನು ನುಸ್ರತ್ ಫತೇಯಲಿಖಾನ್ ಮಾಡಿದ್ದರು. ಅವರ ಮಗ ರಾಹತ್ ಫತೇಅಲಿ ಇದನ್ನು ಮುಂದುವರೆಸುತ್ತಿದ್ದಾರೆ. 4. ಬೀದಿಗಳಲ್ಲಿ ಮದುವೆ ಸಮಾರಂಭಗಳಲ್ಲಿ ಜನ ಕರೆದಲ್ಲಿ ಹೋಗಿ ಹಾಡುವ ಸೂಫಿ ರಾಕ್ ಸಂಗೀತ. ಇದರಲ್ಲಿ ಕುಣಿತವೂ ಇದೆ. ಪಾಕಿಸ್ತಾನದ ಜುನೂನ್ ತಂಡ ಇದಕ್ಕಾಗಿ ಖ್ಯಾತವಾಗಿದೆ. 5. ದರ್ಗಾಗಳಲ್ಲಿ ಜಾತ್ರೆಗಳಲ್ಲಿ ಗುಡಿಗಳಲ್ಲಿ ಹಾಡುವ ಅಲೆಮಾರಿ ಜನಪದ ಸೂಫಿ ಖವಾಲಿ ಗಾಯಕರು. ರೇಶ್ಮಾ, ಪ್ರಹ್ಲಾದ್ ಟಿಪಾನಿಯ, ಅಬಿದಾ ಪರ್ವೀನ್, ಮುಕ್ತಿಯಾರ್ ಅಲಿ ಈ ಧಾರೆಯ ಗಾಯಕರು.

ಮುಖ್ತಿಯಾರ್ ಅಲಿ, ಮಿರಾಶಿ ಎಂಬ ಅಲೆಮಾರಿ ಗಾಯಕ ಸಮುದಾಯಕ್ಕೆ ಸೇರಿದವರು. ಬಿಕನೇರ್ ಜಿಲ್ಲೆಯ ಪೂಗಲ್ ಊರಿನವರು. ಅವರದೇ ಸಮುದಾಯಕ್ಕೆ ಮತ್ತು ಸೀಮೆಗೆ ಸೇರಿದ ಪ್ರಸಿದ್ಧ ಗಾಯಕಿ ರೇಷ್ಮಾ. ಈ ಗಾಯಕ ಸಮುದಾಯ ಶತಮಾನಗಳ ಕಾಲದಿಂದ ಸಿಂದ್ ಕರಾಚಿ ಲಾಹೋರ್ ಪಂಚಾಬ್ ರಾಜಸ್ಥಾನ್ ಮಧ್ಯಪ್ರದೇಶ ಒಳಗೊಂಡ ದೊಡ್ಡ ಸಾಂಸ್ಕೃತಿಕ ವಲಯದಲ್ಲಿ ಅಲೆಯುತ್ತ ಹಾಡುತ್ತಿತ್ತು. ಈ ವಲಯದಲ್ಲಿ ಅಜ್ಮೀರ್ ಸೆಹ್ವಾನ್ ಲಾಹೋರ್‍ನಂತಹ ಪ್ರಸಿದ್ಧ ದರ್ಗಾಗಳು ಬರುತ್ತವೆ. ಪಂಜಾಬಿ ಗುಜರಾತಿ ಪೂರ್ವಿ ಪರ್ಶಿಯನ್ ಉರ್ದು ಸಿಂಧಿ ಅರಬ್ಬಿ ಭಾಷೆಗಳಿರುವ ಈ ವಲಯದಲ್ಲಿ, ಈ ಗಾಯಕರು ಈ ಎಲ್ಲ ಭಾಷೆಯ ರಚನೆಗಳನ್ನು ಹಾಡುವವರು. ಈ ರಚನೆಗಳನ್ನು ದಾರ್ಶನಿಕ ಕವಿಗಳಾದ ಬುಲ್ಲೇಶಾ, ಕಬೀರ್, ಮೀರಾ, ಅಚಲರಾಮ್ ಮೊಯಿನುದ್ದೀನ್ ಚಿಸ್ತಿ, ಅಮೀರಖುಸ್ರೊ ರಚಿಸಿರುವರು. ಈ ಬಹುಭಾಷಿಕ ಬಹುಧಾರ್ಮಿಕ ಬಹುಸಾಂಸ್ಕೃತಿಕ ಬಹುಪ್ರಾಂತೀಯ ಹಾಡು ಪರಂಪರೆಯನ್ನು 1947ರ ದೇಶವಿಭನೆ ನಿರ್ದಯವಾಗಿ ಕತ್ತರಿಸಿ ಹಾಕಿತು. ಮಾತ್ರವಲ್ಲ, ಸಿಕ್ಖರ ಯಾತ್ರೆ, ವ್ಯಾಪಾರಿಗಳ ಕಾರವಾನು, ಲೇಖಕರ ಕೊಡುಕೊಳೆಗಳನ್ನು ಸಹ ತುಂಡರಿತು. ಬಿಕನೇರಿನ ಪಕ್ಕದ ಪಾಕಿಸ್ತಾನದ ಜಿಲ್ಲೆಯಲ್ಲಿ ಮುಕ್ತಿಯಾರರ ಬಂಧುಗಳಿದ್ದಾರೆ; ಆದರೆ ಅವರನ್ನು ಭೇಟಿಯಾಗಲು ಇವರಿಗೆ ಸಾಧ್ಯವಾಗುತ್ತಿಲ್ಲ.

ಹೀಗೆ ದೇಶ ವಿಭಜನೆಯ ಬಲಿಪಶುಗಳಾದ ಈ ಸಮುದಾಯ, ಅಗಲಿದ ಪ್ರೇಮಿಗಳನ್ನು, ಗುರುಶಿಷ್ಯರನ್ನು, ಜೀವಾತ್ಮ ಪರಮಾತ್ಮಗಳನ್ನು ಕುರಿತ ವಿರಹ-ಮಿಲನದ ಹಾಡುಗಳನ್ನು ಹಾಡುತ್ತದೆ. ಈ ಅಗಲಿಕೆಯ ನೋವಿನಲ್ಲಿ ತಮ್ಮ ಸಮುದಾಯ ಛಿದ್ರವಾಗಿರುವ ನೋವೂ ಇದೆ. ಮುಕ್ತಿಯಾರ ಹಾಡುವ `ಕೇಸರಿಯಾ ಬದಾರಿಯೋ ಹಮಾರ ದೇಶ್” ರಚನೆ ಇಂತಹುದು. ಈ ಗಾಯಕ ಪರಂಪರೆಯು ಭೂಪ್ರದೇಶ ಕೇಂದ್ರಿತ ರಾಷ್ಟ್ರೀಯತೆಗೆ ವಿರುದ್ಧವಾದುದು. ಕರಾಚಿಯ ಪ್ರಸಿದ್ಧ ಖವಾಲ್ ಫರೀದುದ್ದೀನ್ ಈಗಲೂ ತಮ್ಮನ್ನು ದೆಹಲಿ ಘರಾಣದವರು ಎಂದು ಹೇಳಿಕೊಳ್ಳುವರು.

ಲಾಹೋರಿನಲ್ಲಿದ್ದ ರೇಶ್ಮಾ ನಾನು ರಾಜಸ್ಥಾನದಲ್ಲಿ ಹುಟ್ಟಿದವಳು ಎಂದು ಹೇಳುತ್ತಿದ್ದರು. ರೇಶ್ಮಾ ತಮ್ಮದೊಂದು ಸಂದರ್ಶನದಲ್ಲಿ ನೀವು ಭಾರತದಲ್ಲಿ ಹುಟ್ಟಿದಿರಿ, ಪಾಕಿಸ್ತಾನದ ಪ್ರಜೆಯಾಗಿದ್ದೀರಿ. ಯಾವುದು ನಿಮಗೆ ಪ್ರಿಯ ಎಂದು ಕೇಳೀದಾಗ, ‘ನಾವು ಕಲಾವಿದರು. ನಮ್ಮ ಸಂಗೀತವನ್ನು ಕೇಳುವ ನಮಗೆ ಪ್ರೀತಿ ಕೊಡುವ ಎಲ್ಲರೂ ನಮ್ಮ ಜನರು. ಭೂಮಿಯ ಮೇಲಿನ ಎಲ್ಲ ಪ್ರದೇಶಗಳೂ ನಮ್ಮ ದೇಶಗಳೇ’ ಎಂದು ಉತ್ತರಿಸಿದರು. ರಾಜಕಾರಣಿಗಳು ಸೇನಾನಾಯಕರು ಯುದ್ಧದ ಪರಿಭಾಷೆಯಲ್ಲಿ ಮಾತಾಡುತ್ತಿರುವಾಗ, ಈ ಗಾಯಕರು ಪ್ರೇಮದ ಬೆಸೆಯುವ ಭಾಷೆಯಲ್ಲಿ ಮಾತಾಡುತ್ತಾರೆ. ಇದಕ್ಕೆ ಒಂದು ಕಾರಣ, ಸೂಫಿ ಹಾಡುಗಳಲ್ಲಿ ಪ್ರೇಮತತ್ವ ಇರುವುದು. ಈ ದೈವಿಕ ಪ್ರೇಮವು (ಇಶ್ಕೆ ಹಖೀಕಿ) ಮೂಲತಃ ಗಂಡುಹೆಣ್ಣಿನ ಸಂಬಂಧಗಳ (ಬಿಸಾಜಿ) ಹಾಗೂ ಲೌಕಿಕ ಆಸೆಗಳ (ದುನಿಯಾಯಿ) ಬುನಾದಿಯ ಮೇಲೇ ನಿಂತಿದೆ. ಶೃಂಗಾರ ಪರಿಭಾಷೆಯಲ್ಲೇ ಆನುಭಾವಿಕ ಅನುಭವವನ್ನು ಪ್ರಕಟಿಸುವ ಅಕ್ಕಮಹಾದೇವಿ, ಮೀರಾರನ್ನು ಬಲ್ಲವರಿಗೆ ಇದು ಹೊಸತಲ್ಲ.

ಏಶಿಯಾದ ದೇಶಗಳಲ್ಲಿ ಧರ್ಮ ರಾಷ್ಟ್ರೀಯತೆಗಳ ಹೆಸರಲ್ಲಿ ಪರಸ್ಪರ ಯುದ್ಧ ಮಾಡುವ ವಿಷ ಉಗುಳುವ ಸಂತಾನ ಸೃಷ್ಟಿಯಾಗಿದೆ. ಅದು ಗತಕಾಲದಲ್ಲಿ ರಾಜಕೀಯ ಪ್ರಭುತ್ವಗಳು ಮಾಡಿದ ಯುದ್ಧ, ಮತಾಂತರ, ಗುಡಿನಾಶಗಳ ಪಟ್ಟಿಯನ್ನು ಇಟ್ಟುಕೊಂಡು, ವರ್ತಮಾನವು ಅದರ ಬೆಲೆಯನ್ನು ತೆರಬೇಕು ಎನ್ನುತ್ತಿದೆ. ಕೇವಲ ಗಾಯಗಳನ್ನು ನೋಡುವವವರು ಈ ಉಪಖಂಡದಲ್ಲಿ ಧರ್ಮ ಭಾಷೆ ಪ್ರಾಂತ್ಯಗಳ ಭೇದಗಳಾಚೆ ಚಲಿಸಿ, ಸೂಫಿಗಳು ಸಂತರು ದೊರೆಗಳು ಕವಿಗಳು ಜನಸಮುದಾಯಗಳು ಮಾಡಿದ ಕೊಡುಕೊಳೆ ಮತ್ತು ಹೊಸಸೃಷ್ಟಿಗಳನ್ನು ಗಮನಿಸುವುದಿಲ್ಲ. ಉರ್ದುಭಾಷೆ, ಸೂಫಿಸಂಗೀತ, ಎರಡನೇ ಇಬ್ರಾಹಿಂ ರಚಿತ `ಕಿತಾಬೆ ನವರಸ್’ದಂತಹ ಕೃತಿಗಳನ್ನು, ಶಿಶುನಾಳ ಕಬೀರ ಬಂದೇನವಾಜರಂತಹ ಸಂತರನ್ನು ನೋಡುವುದಿಲ್ಲ. ಸೂಫಿಗಳಲ್ಲಿ ಎರಡು ಅಗಲಿದ ಸಂಗತಿಗಳು ಒಗ್ಗೂಡುವ ಅದ್ವೈತವಿದೆ. ಅವು ಬೇರೆಯಾಗಿಯೇ ಇಲ್ಲ. ಜತೆಯಲ್ಲಿಯೇ ಇವೆ. ಅವನ್ನು ನಾವು ಕಂಡುಕೊಳ್ಳಬೇಕಿದೆ ಎಂದು ಹೇಳುವ ಅದ್ವಯವಿದೆ. ಹೀಗಾಗಿ ಅದು ಎಲ್ಲ ವಿಭಜಕ ಸಿದ್ಧಾಂತಗಳನ್ನು ಆಳದಲ್ಲಿ ನಿರಾಕರಿಸುತ್ತದೆ. ಈ ಕಲಾವಿದರು ದೇಶವಿಭಜನೆಯ ರಾಜಕಾರಣದ ಟೀಕಾಕಾರರು. ಎರಡೂ ದೇಶದ ಸಮುದಾಯಗಳನ್ನು ಅಲ್ಲಿನ ಗುರುದ್ವಾರ ದರ್ಗಾ ಗುಡಿಗಳನ್ನು ಬೆಸೆಯುವಂತೆ ಹಾಡುವವರು.

ಈ ಹಿನ್ನೆಲೆಯಲ್ಲಿ ರೇಶ್ಮಾ ಮುಕ್ತಿಯಾರ್ ನುಸ್ರತ್‍ಫತೇಅಲಿ, ಮಹಮದ್ ರಫಿ, ಲತಾಮಂಗೇಶ್ಕರ್ ಕಬೀರ್, ಗುಲಾಮಲಿ, ಅಬಿದಾ ಪರ್ವೀನ್, ಫೈಜ್ ಅಹಮದ್ ಫೈಜ್ ಇವರೆಲ್ಲ ಗಡಿಗಳಾಚೆ ಸೀಮೋಲ್ಲಂಘನೆ ಮಾಡುವ ಕಲಾವಿದರು. ನುಸ್ರತ್‍ಫತೇ ಅಲಿ, ಅಬಿದಾ ಪರ್ವೀನ್, ಗುಲಾಮಲಿ ಅವರಿಗೆ ಭಾರತದಲ್ಲಿ; ಲತಾ ರಫಿ ಶಾರುಕ್‍ಖಾನ್‍ಗೆ ಪಾಕಿಸ್ತಾನದಲ್ಲಿ ಹೆಚ್ಚು ಅಭಿಮಾನಿಗಳಿದ್ದಾರೆ. ಹಿಂದೂಸ್ತಾನಿ ಸಂಗೀತವು ನಾದ, ದರ್ಶನ ಹಾಗೂ ಕಾವ್ಯಗಳ ಮುಪ್ಪುರಿತನ. ಕಾವ್ಯ ದರ್ಶನ ಸಂಗೀತ ವ್ಯಾಪಾರಗಳಿಗೆ ದೇಶಗಳಾಚೆ ಚಲಿಸುವ ಶಕ್ತಿಯಿದೆ. ಎಂತಲೇ ಕವಿಗಳು ದಾರ್ಶನಿಕರು ಸಂಗೀತಗಾರರು ವಣಿಕರು ಒಂದು ಬಗೆಯಲ್ಲಿ ಸೀಮಾತೀತರು. ಮುಕ್ತಿಯಾರ್ ಹಾಡುವ ಹಾಡುಗಳ ಭಾಷೆ ಪೂರ್ತಿ ತಿಳಿಯುವುದಿಲ್ಲ. ಆದರೆ ನಾದದ ಮೂಲಕ ವಿಶಿಷ್ಟ ಭಾವನೆ ಸಂವಹನವಾಗುತ್ತದೆ. ಭಾಷೆಗಿಲ್ಲದ ಚಲನಶೀಲ ಶಕ್ತಿ ನಾದಕ್ಕಿದೆ. ಸೂಫಿ ಗಾಯನ ಪರಂಪರೆಯು ವಿಶ್ವಮಾನವತಾವಾದಿ. ಎಂತಲೇ ಸೂಫಿ ಗಾಯನಕ್ಕೆ ಸಾಂಸ್ಕೃತಿಕ ಮಾತ್ರವಲ್ಲ, ರಾಜಕೀಯ ಮಹತ್ವವೂ ಇದೆ.

ಮುಕ್ತಿಯಾರ್ ಅವರದು 26ನೇ ತಲೆಮಾರು. ಶಬನಮ್ ವೀರಮಾನವಿಯವರು ಕಬೀರನ ಮೇಲೆ ಮಾಡಿದ `ಹದ್ ಅನಹದ್’ ಎಂಬ ಸುಪ್ರಸಿದ್ಧ ಡಾಕ್ಯುಮೆಂಟರಿಯ ಮೂಲಕ ಪ್ರಖ್ಯಾತರಾದರು. ಇವರು ಕರ್ನಾಟಕಕ್ಕೆ ಅನೇಕ ಸಲ ಬಂದಿದ್ದಾರೆ. ಗದಗಕ್ಕೆ ಪಂಚಾಕ್ಷರಿ ಗವಾಯಿಯವರ ಪುಣ್ಯತಿಥಿಗೊಮ್ಮೆ ಬಂದಿದ್ದೆ ಎಂದು ಹೇಳೀದರು. ಅವರಿಗೆ ರಾಮನಗರದ ಜಾನಪದ ಪರಿಷತ್ತಿನ ಎಚ್. ಎಲ್. ನಾಗೇಗೌಡ ಪ್ರಶಸ್ತಿ ಸಿಕ್ಕಿದೆ. ತಮಗೆ ಅತ್ಯಂತ ಪ್ರೀತಿಕೊಟ್ಟ ಶೋತೃಗಳು ಕರ್ನಾಟಕದವರು ಎಂದು ಹೇಳುತ್ತಾರೆ. ಅವರು ಪೊಲೆಂಡ್ ಫ್ರಾನ್ಸ್ ಬೆಲಜಿಯಂ ಸ್ವೀಡನ್ ಮೊರಾಕ್ಕೊ ಚೀನಾ ಕೆನಡರ ಸಿಂಗಪುರ ಮಲೇಶಿಯಾ ಶ್ರೀಲಂಕಾಗಳಲ್ಲಿ ಕಾರ್ಯಕ್ರಮ ಕೊಟ್ಟಿದ್ದಾರೆ. (ಮಧ್ಯ ಏಶಿಯಾದ ಇಸ್ಲಾಮಿಕ್ ದೇಶಗಳು ಅವರನ್ನು ಕರೆದಿಲ್ಲ ಎನ್ನುವುದು ಗಮನಾರ್ಹ.) ಇಂತಹ ಪರಂಪರೆಗೆ ಭಾರತದ ಇಸ್ಲಾಮಿಕ್ ಮೂಲಭೂತವಾದ ಹಾಗೂ ಕೋಮುವಾದಗಳು ಬೆದರಿಕೆಯಾಗಿವೆ. ಇವುಗಳ ನಡುವೆ ಇವರು ಈ ಪರಂಪರೆಯನ್ನು ರಕ್ಷಿಸಿಕೊಂಡು ಬಂದಿದ್ದಾರೆ.

ಮುಕ್ತಿಯಾರ್ ಜತೆ ಮಾತಾಡುತ್ತ ನಿಮಗೆ ಬಹಳ ತೃಪ್ತಿಕೊಟ್ಟ ಕಾರ್ಯಕ್ರಮ ಯಾವುದು ಎಂದು ಕೇಳಿದೆ. ಜರ್ಮನಿಯ ಕೋಲಿನ ನಗರದ ಚರ್ಚಿನಲ್ಲಿ ಹಾಡಿದ್ದು ಎಂದರು. ಮುಕ್ತಿಯಾರ್ ರಾಜಸ್ಥಾನದ ಹನುಮಾನ್ ಜಾಗರಣ ಕಾರ್ಯಕ್ರಮದಲ್ಲಿಯೂ ಹಾಡುವರು. ಅವರ ಹಾಡಿಕೆ ಶುರುವಾಗುವುದೇ ಖುಸ್ರೋ ಅವರ ಹರಿಓಂ ರಚನೆಯಿದೆ. ಅವರಿಗೆ `ನಿಮ್ಮ ಪ್ರಿಯ ಶಿಷ್ಯರು ಯಾರು ಎಂದು ಕೇಳಿದೆ. ಹಿಮಾಚಲ ಪ್ರದೇಶದ ಅನಾಹತಿ ಎಂಬ ಮಹಿಳೆ ಎಂದರು. ಅನಾಹತ ಎಂದರೆ ಯೋಗದ ತುರಿಯಾವಸ್ಥೆಯಲ್ಲಿ ಸಾಧಕನಿಗೆ ಕೇಳಿಬರುವ ಸಂಗೀತ ನಾದ. ಅನಾಹತನಾದ ಎಂದು ಅಲ್ಲಮ ಅದನ್ನು ಕರೆಯುತ್ತಾನೆ. ಈ ಅನಾಹತವು ಎಲ್ಲ ಹದ್ದುಗಳನ್ನು ಮೀರಿದಾಗ ಹುಟ್ಟುತ್ತದೆಯಂತೆ. ಎಂತಲೇ ಅದು ಅನಹದ್ ಅರ್ಥಾತ್ ಸೀಮಾತೀತ.

ಜಗತ್ತಿನ ಕಾರ್ಮಿಕರೇ ಒಂದಾಗಿ ಎಂದು ಹೇಳುವ ಮೇ ದಿನದ ನೆನಪಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಸೂಫಿಗಾಯನ ನಡೆದಿದ್ದು ಅರ್ಥಪೂರ್ಣ. ಮುಕ್ತಿಯಾರ್ ಮೂರು ತಾಸು ಬಹಳ ಲವಲವಿಕೆಯಲ್ಲಿ ಹಾಡಿದರು. ಸಮ್ಮೇಳನಕ್ಕೆ ಬಂದಿದ್ದ ಜನ ನಾದದ ಹೊಳೆಯಲ್ಲಿ ಕೊಚ್ಚಿಹೋದಂತೆ ಆನಂದಿಸಿದರು. ನೋವಿನ ಚೀತ್ಕಾರದಂತಹ ವಿಲ್ಸನ್ ಬೆಜವಾಡರ ಭಾಷಣದಿಂದ ಆರಂಭವಾದ ಕಾರ್ಯಕ್ರಮ, ಸಂಜೆಗೆ ತಣ್ಣಗೆ ಎಲ್ಲರೂ ಕೂತು ತನ್ಮಯರಾಗಿ ಸಂಗೀತವನ್ನು ಆಲಿಸುವ ಮೂಲಕ ಮುಕ್ತಾಯವಾಯಿತು. ಬೆಳಗಿನ ಪ್ರಖರ ವಿಚಾರಗಳಿಗೆ ಸಂಜೆಯ ಸಂಗೀತ ವಿರುದ್ಧವಾಗಿರಲಿಲ್ಲ. ಯಾಕೆಂದರೆ ಎರಡೂ ತರತಮ ಭೇದದ ವಿರುದ್ಧವಾಗಿದ್ದವು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here