Homeಕರ್ನಾಟಕಮಾತೃಭಾಷೆ ಮೂಲಕವೇ ಜನರನ್ನು ತಲುಪಿದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್…

ಮಾತೃಭಾಷೆ ಮೂಲಕವೇ ಜನರನ್ನು ತಲುಪಿದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್…

- Advertisement -
- Advertisement -

ಮಾತೃಭಾಷೆ ಎಂಬುದು ತಾಯಿಯ ಹಾಲಿನ ಜೊತೆಜೊತೆಗೆ ಪ್ರತಿಯೊಬ್ಬರ ನರನಾಡಿಗಳಲ್ಲಿ ಬೆರೆಯುತ್ತದೆ. ಜೀವನದ ಕೊನೆಯವರೆಗೂ ಯಾರೂ ತಮ್ಮ ಮಾತೃಭಾಷೆಯನ್ನು ಮರೆಯುವುದು ಸಾಧ್ಯವಿಲ್ಲ. ಕೆಲವು ಸಮಯ ವಿದೇಶಗಳಲ್ಲಿ ಇರುವ ಪ್ರಸಂಗ ಬಂದಾಗ ಅಲ್ಲಿನ ಭಾಷೆ ಮಾತಾಡುವವರೂ ಮರಳಿ ತಮ್ಮ ನೆಲಕ್ಕೆ ಬಂದಾಗ ತಮ್ಮ ನುಡಿಯಲ್ಲಿಯೇ ವ್ಯವಹರಿಸುತ್ತಾರೆ. ಅವರ ಉಚ್ಛಾರಣೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗಬಹುದೇ ಹೊರತಾಗಿ ಅವರು ಭಾಷೆಯನ್ನು ಮರೆತಿರುವುದಿಲ್ಲ. ಅಲ್ಲದೆ ತಾಯಿ, ತಾಯಿನಾಡು, ತಾಯಿನುಡಿಯ ಮೇಲಿನ ಪ್ರೀತಿ ಯಾವುದನ್ನೂ ಮರೆಯಲು ಬಿಡುವುದಿಲ್ಲ.

ಜಯದೇವಿತಾಯಿ ಲಿಗಾಡೆಯವರ ಮಾತೃಭಾಷೆ ಕನ್ನಡ, ವ್ಯವಹಾರ ಭಾಷೆಯೂ ಅದೇ. ಆದರೆ ಅವರು ಮಹಾರಾಷ್ಟ್ರದಲ್ಲಿ ಇದ್ದ ಕಾರಣಕ್ಕೆ ಅಲ್ಲಿನ ಮರಾಠಿ ಭಾಷೆಯನ್ನು ಶಾಲಾಶಿಕ್ಷಣದಲ್ಲಿ ಕಲಿತರು. ಆದರೆ ಮಾತೃಭಾಷೆಯ ಮೇಲಿನ ಪ್ರೀತಿಯಿಂದ ಅವರು ಕನ್ನಡದತ್ತ ಹೊರಳಿದರು. ಬಹುಕಡಿಮೆ ಅವಧಿಯಲ್ಲಿಯೇ ಕನ್ನಡ ಕಲಿತರು. ಕನ್ನಡದಲ್ಲಿಯೇ ಉನ್ನತ ಅಧ್ಯಯನ ಮಾಡಿದರು. ಕನ್ನಡದಲ್ಲಿಯೇ ಮೇರು ಸಾಹಿತ್ಯ ಕೃತಿಗಳನ್ನು ರಚಿಸಿದರು. ಪಿ.ಎಚ್.ಡಿ. ಮತ್ತು ಡಿ.ಲಿಟ್. ಕೂಡ ಪಡೆದರು. ಭಾಷೆಯ ಮೇಲಿನ ಪ್ರೀತಿಯಿದು.

ಜಯದೇವಿತಾಯಿ ಲಿಗಾಡೆಯವರಂತೆಯೇ ಮಾತೃಭಾಷೆಯ ಪ್ರೀತಿ ಮತ್ತು ಪ್ರಭಾವಕ್ಕೊಳಗಾದವರು ಗೌರಿ ಲಂಕೇಶ್ ಅವರೂ ಕೂಡ. ವಿದೇಶದಲ್ಲಿ ಓದಿ, ಅಲ್ಲಿ ಇದ್ದು, ಅಲ್ಲಿನ ಪ್ರಗತಿಪರ ಅಂಶಗಳನ್ನು, ಅಲ್ಲಿನ ಸಮಾಜ ಜೀವನವನ್ನು ಕಂಡ ಗೌರಿ ಲಂಕೇಶ್ ಅವರು ಕನ್ನಡವನ್ನು ಮರೆತಿರಲಿಲ್ಲ. ಅವರು ದೇಶಕ್ಕೆ ಮರಳಿದ ಮೇಲೆ ಪುನಃ ಬಹುಆಸ್ಥೆಯಿಂದ ಕನ್ನಡ ಕಲಿತರು. ಕನ್ನಡದ ಪ್ರಮುಖ ಲೇಖಕರೂ, ಕನ್ನಡದ ಉಪನ್ಯಾಸಕರೂ ಆಗಿದ್ದ ಅವರ ತಂದೆ ಪಿ. ಲಂಕೇಶ್ ಅವರ ಪ್ರಭಾವ ಗೌರಿಯವರ ಮೇಲೆ ಇದ್ದೇ ಇತ್ತು. ಗೌರಿ ಬೇಕಿದ್ದರೆ ಹೈಪ್ರೋಫೈಲ್ ಜನರ ಸಲುವಾಗಿ ಒಂದು ಇಂಗ್ಲೀಷ್ ಪತ್ರಿಕೆಯನ್ನೂ ಹುಟ್ಟು ಹಾಕಬಹುದಿತ್ತು. ಆದರೆ ಅವರ ಕನ್ನಡ ಪ್ರೀತಿ ಹಾಗೆ ಮಾಡಗೊಡಲಿಲ್ಲ, ಜನಸಾಮಾನ್ಯರ ಮೇಲೆ ಅವರಿಗಿದ್ದ ಕಾಳಜಿ ಅವರನ್ನು ಇಂಗ್ಲೀಷ್ ಕಡೆಗೆ ಹೋಗದಂತೆ ತಡೆಯಿತು.

ಅವರು ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖಕರ, ಪತ್ರಿಕೆಯಲ್ಲಿ ಕೆಲಸಕ್ಕಿದ್ದವರ ಕನ್ನಡವನ್ನೂ ಶುದ್ಧಗೊಳಿಸುವಷ್ಟು, ಪ್ರೂಫ್ ನೋಡಿ ತಿದ್ದುವಷ್ಟು ಕನ್ನಡ ಕಲಿತರು. ಮುಂದೆ ತಾವೂ ಕೂಡ ಕನ್ನಡದಲ್ಲಿ ಬರೆದರು, ಪತ್ರಿಕೆ ನಡೆಸಿದರು. ತಮ್ಮ ವಿಚಾರಗಳನ್ನು ಕನ್ನಡದ ಮೂಲಕ ವ್ಯಕ್ತಪಡಿಸುವಷ್ಟು ಪ್ರಭಾವಿಯಾಗಿ ಹಾಗೂ ಕನ್ನಡದ ಮೂಲಕ ಓದುಗರಿಗೆ, ಜನಸಾಮಾನ್ಯರಿಗೆ ತಲುಪುವಷ್ಟು ವ್ಯಾಪಕವಾಗಿ ಅನ್ಯಭಾಷೆಯಿಂದ ತಲುಪುವುದು ಸಾಧ್ಯವಿಲ್ಲ ಎಂಬುದನ್ನು ಅವರು ಬಹುಬೇಗ ಮನಗಂಡಿದ್ದರು. ಅವರ ಹೋರಾಟದ ಹಿಂದಿನ ಶಕ್ತಿ ಕನ್ನಡ ನಾಡು, ನುಡಿಯೇ ಆಗಿತ್ತು. ಈ ನಾಡು, ನುಡಿ, ಗೌರಿಯವರೂ ಎಂದಿಗೂ ಅಮರ.

ಗಿರೀಶ ಜಕಾಪುರೆ, ಮೈಂದರ್ಗಿ, ಮಹಾರಾಷ್ಟ್ರ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...