Homeಮುಖಪುಟಏಕೈಕ ‘ಪತ್ರಿಕಾಗೋಷ್ಠಿ’ಯಲ್ಲಿ ಒಂದೂ ಪ್ರಶ್ನೆಯನ್ನು ತೆಗೆದುಕೊಳ್ಳದ ಪ್ರಧಾನಿ.

ಏಕೈಕ ‘ಪತ್ರಿಕಾಗೋಷ್ಠಿ’ಯಲ್ಲಿ ಒಂದೂ ಪ್ರಶ್ನೆಯನ್ನು ತೆಗೆದುಕೊಳ್ಳದ ಪ್ರಧಾನಿ.

ಇಂದಿನ ಅಮಿತ್‍ಷಾ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿಯದ್ದು ಉಪಸ್ಥಿತಿ ಮಾತ್ರ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರಿದ ನಂತರ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನರೇಂದ್ರ ಮೋದಿ ನಡೆಸಲಿಲ್ಲವೆಂಬ ಆರೋಪವನ್ನು ಉದ್ದಕ್ಕೂ ಎದುರಿಸಿದ್ದರು. ಅದಕ್ಕೆ ಉತ್ತರ ಕೊಡಲೆಂಬಂತೆ, ಚುನಾವಣಾ ಪ್ರಚಾರದ ಕಡೆಯ ದಿನವಾದ ಇಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಅದರಲ್ಲಿ ಸ್ವತಃ ನರೇಂದ್ರ ಮೋದಿಯವರು ಉಪಸ್ಥಿತರಿದ್ದರು. ಆದರೆ, ಅವರು ಒಂದೇ ಒಂದು ಪ್ರಶ್ನೆಯನ್ನೂ ತೆಗೆದುಕೊಳ್ಳಲಿಲ್ಲ. ಆ ಮೂಲಕ ಪತ್ರಿಕಾಗೋಷ್ಠಿಯಲ್ಲದ ಪತ್ರಿಕಾಗೋಷ್ಠಿ ಮಾಡಿದರು; ಅಥವಾ ಅಮಿತ್‍ಷಾ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು ಎಂದು ಹೇಳಬಹುದು.

ಪತ್ರಿಕಾಗೋಷ್ಠಿಯಲ್ಲಿ ಮೊದಲಿಗೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್‍ಷಾ ದೀರ್ಘವಾಗಿ ಮಾತಾಡಿದರು. ಅದರಲ್ಲಿ ಇಂದು ನಮ್ಮ ಜೊತೆ ಪ್ರಧಾನಿ ನರೇಂದ್ರ ಮೋದಿ ಇರುವುದು ನಮ್ಮೆಲ್ಲರಿಗೆ ಸಂತಸದ ಮತ್ತು ಆಶ್ಚರ್ಯಕರವಾದ ವಿಚಾರ ಎಂದು ಅಮಿತ್‍ಷಾ ಶುರು ಮಾಡಿದರು. ಅದಕ್ಕೆ ನರೇಂದ್ರ ಮೋದಿ ನಗುವಿನ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಮೊದಲು ಬಿಜೆಪಿ ಪಕ್ಷ ಸಂಘಟನೆ ಹಾಗೂ ಬೂತ್ ಕಮಿಟಿಗಳ ಬಲದ ಕುರಿತು ಅಮಿತ್‍ಷಾ ವಿವರಿಸಿದರು. ಆ ನಂತರ ಐದು ವರ್ಷಗಳ ಸರ್ಕಾರದ ಸಾಧನೆಗಳು ಹಾಗೂ ಯೋಜನೆಗಳನ್ನು ಮುಂದಿಟ್ಟರು. ಸರ್ಕಾರ ರಚಿಸಿದಾಗ ಕೇವಲ 6 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ, ಈಗ 16 ರಾಜ್ಯಗಳಲ್ಲಿದೆ ಎಂದು ಹೆಮ್ಮೆ ಪಟ್ಟರು. ಈ ರೀತಿ ಸರ್ಕಾರ ರಚಿಸಿದ್ದನ್ನು ನಾವು ‘ನರೇಂದ್ರ ಮೋದಿ ಪ್ರಯೋಗ’ ಎಂದು ಕರೆಯುತ್ತೇವೆ ಮತ್ತು ಅದು ಯಶಸ್ವಿಯಾಗಿದೆ ಎಂಬುದು ಅಮಿತ್‍ಷಾ ಅಭಿಪ್ರಾಯವಾಗಿತ್ತು. ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ 3,000 ಪೂರ್ಣಾವಧಿ ಕಾರ್ಯಕರ್ತರು 2 ವರ್ಷಗಳ ಕಾಲ ಕೆಲಸ ಮಾಡಿದ್ದು, ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಹಾಗಾಗಿ ನಮಗೆ ಪೂರ್ಣಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದು ನುಡಿದರು.

ಇದರ ನಂತರ ಅಮಿತ್‍ಷಾರಿಗಿಂಥ ಕಡಿಮೆ ಸಮಯ ನರೇಂದ್ರ ಮೋದಿ ಮಾತಾಡಿದರು. ನಿರ್ದಿಷ್ಟವಾದ ಅಂಶಗಳಿಗೆ ಹೋಗದೇ, ಜನರಲ್ ಆದ ಮಾತುಗಳನ್ನು ಆಡಿದರು. ಆದರೆ ಪ್ರಜಾತಂತ್ರದ ವಿಶೇಷವನ್ನು ಹೊಗಳಿದರು. ಭಾರತದ ಪ್ರಜಾತಂತ್ರವನ್ನು ಇಡೀ ಪ್ರಪಂಚಕ್ಕೆ ನಾವು ಎತ್ತಿ ತೋರಿಸಬಹುದಾದ ಹೆಮ್ಮೆಯ ಸಂಗತಿ ಎಂದರು. 2014ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭವನ್ನು ನೆನೆಯುತ್ತಾ, ಆಗ ಬೆಟ್ಟಿಂಗ್ ಕಟ್ಟಿದ್ದವರೆಲ್ಲರೂ ಸೋಲುವಷ್ಟು ಪ್ರಮಾಣದಲ್ಲಿ ನಮಗೆ ಸೀಟುಗಳು ಬಂದಿದ್ದವು ಎಂದು ತಮಾಷೆ ಮಾಡಿದರು.

ನಂತರ ಪ್ರಶ್ನೆಗಳನ್ನು ಎದುರಿಸಿದ್ದು ಅಮಿತ್‍ಷಾ ಮಾತ್ರ. ಬಿಜೆಪಿಗೆ ಬಹುಮತ ಬರದಿದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆ ಪದೇ ಪದೇ ಬಂದಿತು. ‘ನಮಗೆ 300ಕ್ಕೂ ಹೆಚ್ಚು ಸೀಟುಗಳು ಬರುತ್ತವೆ, ಆದರೆ ಸರ್ಕಾರ ಎನ್‍ಡಿಎದಾಗಿರುತ್ತದೆ’ ಎಂದು ಅವರು ಪ್ರತಿ ಬಾರಿಯೂ ಹೇಳಿದರು. ಪಶ್ಚಿಮ ಬಂಗಾಳದಲ್ಲಿ ನಿಮ್ಮ ಪಕ್ಷದಿಂದ ಹಿಂಸಾಚಾರ ನಡೆದಿದೆ ಎಂದಾಗ ಅಮಿತ್‍ಷಾ ಕಿಡಿಯಾದರು. ನಮ್ಮ 80 ಕಾರ್ಯಕರ್ತರು ಅಲ್ಲಿ ಕೊಲೆಯಾಗಿದ್ದಾರೆ. ದೇಶಾದ್ಯಂತ ನಾವು ಚುನಾವಣೆ ನಡೆಸಿದ್ದೇವೆ, ಎಲ್ಲೂ ಏಕೆ ಹೀಗೆ ಆಗಿಲ್ಲ? ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.

ಇದನ್ನು ಓದಿ: ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ಈ ಮಧ್ಯೆ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಎರಡೆರಡು ಬಾರಿ ಪತ್ರಕರ್ತರು ಪ್ರಶ್ನೆ ಕೇಳಲು ಯತ್ನಿಸಿದರು. ಆದರೆ, ಅಮಿತ್‍ಷಾರತ್ತ ಕೈ ತೋರಿಸಿದರು. ಒಮ್ಮೆ ‘ನಾನು ಪಕ್ಷದ ಶಿಸ್ತಿನ ಸಿಪಾಯಿ, ನಮ್ಮಲ್ಲಿ ಎಲ್ಲವೂ ಅಧ್ಯಕ್ಷರೇ. (ಅವರೇ ಉತ್ತರ ಕೊಡುತ್ತಾರೆ)’ ಎಂದರು. ಅಲ್ಲಿಗೆ ಮೋದಿಯವರು ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲ ಎಂಬುದು ಗೊತ್ತಾಗಿ ಪತ್ರಕರ್ತರು ಸುಮ್ಮನಾದರು.

ಹೆಚ್ಚಿನ ಪ್ರಶ್ನೆಗಳು ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದಿರುವ ಪ್ರಗ್ಯಾ ಠಾಕೂರ್, ಅನಂತಕುಮಾರ್ ಹೆಗಡೆ ಮತ್ತು ನಳಿನ್ ಕುಮಾರ್ ಕಟೀಲರ ಕುರಿತಾಗಿ ಬಂದವು. ಅವರಿಗೆ ಷೋಕಾಸ್ ನೋಟೀಸ್ ಕೊಡಲಾಗಿದೆ. ಪಕ್ಷದ ಶಿಸ್ತು ಸಮಿತಿ ಕ್ರಮ ಕೈಗೊಳ್ಳುತ್ತದೆ ಎಂದು ಅಮಿತ್‍ಷಾ ಹೇಳಿದರು. ಅದೇ ಸಂದರ್ಭದಲ್ಲಿ ‘ಕೇಸರಿ ಭಯೋತ್ಪಾದನೆ’ ಎಂಬ ಸುಳ್ಳು ಆರೋಪಕ್ಕೆ ಪ್ರಗ್ಯಾರನ್ನು ಅಭ್ಯರ್ಥಿಯಾಗಿಸಿ ಉತ್ತರ ಕೊಟ್ಟಿದ್ದೇವೆ ಎಂದು ಸಮರ್ಥನೆ ಸಹಾ ಮಾಡಿಕೊಂಡರು.

ಇದನ್ನು ಓದಿ: ಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

ರಾಫೇಲ್ ಬಗ್ಗೆ ಬಂದ ಪ್ರಶ್ನೆಗಳಿಗೆ, ‘ಅದರಲ್ಲಿ ಯಾವ ತಪ್ಪೂ ನಡೆದಿಲ್ಲ’ ಎಂದು ಅಮಿತ್‍ಷಾ ಹೇಳಿದರು. ಕರ್ನಾಟಕವೂ ಸೇರಿದಂತೆ ದಕ್ಷಿಣ ರಾಜ್ಯಗಳು, ಒರಿಸ್ಸಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಎಲ್ಲಾ ಕಡೆಯೂ ಹಿಂದಿಗಿಂತ ಹೆಚ್ಚಿನ ಮತ ಹಾಗೂ ಸೀಟುಗಳನ್ನು ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿ ಕುರಿತು ವಿಶ್ಲೇಷಿಸಿದ ಕ್ವಿಂಟ್‍ನ ಆದಿತ್ಯಾ ‘ಇದು ಪತ್ರಿಕಾಗೋಷ್ಠಿಯಲ್ಲದ ಪತ್ರಿಕಾಗೋಷ್ಠಿ’ ಎಂದರಲ್ಲದೇ, ಇದನ್ನು ಮೀಡಿಯಾ ಬ್ರೀಫಿಂಗ್ ಎನ್ನಬಹುದೇ ಹೊರತು ಪತ್ರಿಕಾಗೋಷ್ಠಿ ಎನ್ನಲಾಗದು ಎಂಬ ಅಭಿಪ್ರಾಯ ಮುಂದಿಟ್ಟರು.

ಪತ್ರಿಕಾಗೋಷ್ಠಿಯ ಕುರಿತು ರಾಹುಲ್ ಗಾಂಧಿ ವ್ಯಂಗ್ಯ ಮಾಡಿ ಕೂಡಲೇ ಟ್ವೀಟ್  ಮಾಡಿದರು. ‘ಅಭಿನಂದನೆಗಳು ಮೋದೀಜಿ. ಮುಂದಿನ ಸಾರಿ ಒಂದೆರಡು ಪ್ರಶ್ನೆಗಳಿಗೆ ಉತ್ತರ ಕೊಡಲು ಅಮಿತ್ ಷಾ ನಿಮಗೆ ಬಿಡಬಹುದು’ ಎಂದು ಟ್ವೀಟ್ ಹೇಳುತ್ತದೆ.

ಈ ಪತ್ರಿಕಾಗೋಷ್ಠಿಯ ಕುರಿತು ಬರಹಗಾರರಾದ ಭೀಮನಗೌಡರ್ ಕಾಶಿರೆಡ್ಡಿ ಅವರು ‘ಹೇಳಿಕೊಟ್ಟ ಮಾತು; ಕಟ್ಟಿಕೊಟ್ಟ ಬುತ್ತಿ ಬಹಳ ದಿನ ಉಳಿಯುವುದಿಲ್ಲ ಎಂಬಂತಾಗಿದೆ’ ಎಂದು ಹೇಳಿದರು. ಪತ್ರಕರ್ತ ಮಲ್ಲನಗೌಡರ್ ‘ಕಡೆಯ ದಿನದ ಮೊದಲ ಪ್ರೆಸ್‍ಮೀಟ್ ಸಹಾ ಪ್ರೆಸ್‍ಮೀಟ್ ಆಗದೇ ಮೀಟ್ ದಿ ಪ್ರೆಸ್ ಪೀಪಲ್ ಅಷ್ಟೇ ಆಯಿತು’ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣಾ ಬಾಂಡ್’ ಯೋಜನೆ ಬಿಜೆಪಿ ಮತ್ತೆ ಜಾರಿಗೆ ತರಲಿದೆ?

0
ಸುಪ್ರೀಂಕೋರ್ಟ್‌ ಅಸಾಂವಿಧಾನಿಕ ಎಂದು ರದ್ದುಗೊಳಿಸಿದ್ದ 'ಚುನಾವಣಾ ಬಾಂಡ್ ಯೋಜನೆ'ಯನ್ನು ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ಪ್ರತಿಪಕ್ಷಗಳು 'ಸ್ವತಂತ್ರ ಭಾರತದ...