Homeಎಕಾನಮಿನಮ್ಮ ದಾಖಲೆ ಕೇಳುತ್ತಿರುವ ಮೋದಿ ಸರ್ಕಾರ, ತಾನು ಮುಚ್ಚಿಟ್ಟ ದಾಖಲೆಗಳು - ಡಾಟಾಗಳು...

ನಮ್ಮ ದಾಖಲೆ ಕೇಳುತ್ತಿರುವ ಮೋದಿ ಸರ್ಕಾರ, ತಾನು ಮುಚ್ಚಿಟ್ಟ ದಾಖಲೆಗಳು – ಡಾಟಾಗಳು…

2019 ಡಾಟಾ ರಹಿತ ವರ್ಷವಾಗಿದ್ದರೆ, 2020 ಅಪಾಯಕಾರಿ ಹುಸಿ ಡಾಟಾ ವರ್ಷವಾಗಲಿದೆ. ವಿಷಯ ಯಾವುದೇ ಇರಲಿ, ನರೇಂದ್ರ ಮೋದಿ ಸರಕಾರವು ಅಂಕಿಅಂಶಗಳೊಂದಿಗೆ ಅನುಕೂಲ ಶಾಸ್ತ್ರದ ಸರ್ಕಸ್ ನಡೆಸುತ್ತಿದೆ.

- Advertisement -
- Advertisement -

ಮೋದಿ ಸರಕಾರದ ಗ್ರೇಟ್ ಇಂಡಿಯನ್ ಡಾಟಾ ಸರ್ಕಸ್!

ಜಾಹ್ನವಿ ಸೇನ್ (ಕೃಪೆ: ದಿ ವೈರ್‌)

ಅನುವಾದ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಸರಕಾರ ನಮ್ಮ ಕುರಿತು ಎಲ್ಲವನ್ನೂ ತಿಳಿಯಲು ಬಯಸುತ್ತಿದೆ- ನಾವು ಮತ್ತು ನಮ್ಮ ತಂದೆ-ತಾಯಿ ಹುಟ್ಟಿದ್ದು ಯಾವಾಗ, ಎಲ್ಲಿ, ನಾವು ವಾಸಿಸುತ್ತಿರುವುದು ಎಲ್ಲಿ, ನಾವು ಏನು ಮಾಡುತ್ತಿದ್ದೇವೆ, ನಮ್ಮ ಕುಟುಂಬದ ಸದಸ್ಯರ ವಿವರಗಳು, ನಮ್ಮ ಮೊಬೈಲ್ ನಂಬರ್… ಇತ್ಯಾದಿ ಇತ್ಯಾದಿ. 133 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಇದೊಂದು ಬೆಟ್ಟದಂತಹಾ,(ಬೆಟ್ಟದಷ್ಟು ಖರ್ಚಿನ) ಕಾರ್ಯಾಚರಣೆ. ಆದರೆ, ಈ ವೆಚ್ಚ ಅತ್ಯಂತ ಅಗತ್ಯ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)ಯನ್ನು 2020ರಲ್ಲಿ  ನವೀಕರಿಸಲೇಬೇಕು ಎಂದು ಕೇಂದ್ರವು ನಿರ್ಧರಿಸಿದೆ.

ಸರಕಾರವು ಕಣ್ಣುಹಾಕಿರುವ ವಿಷಯಗಳ ದೀರ್ಘ ಪಟ್ಟಿಯಲ್ಲಿ ಇರುವುದು ಇದೊಂದೇ ಅಲ್ಲ. ಇತ್ತೀಚಿನ ಭಾರೀ ಮತ್ತು ವ್ಯಾಪಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಕಾರ್ಯಕ್ರಮದ ತನ್ನ ಯೋಜನೆಯಿಂದ ಸರಕಾರ ಹಿಂದಡಿ ಇಟ್ಟಿದೆಯಾದರೂ, ಕೇಂದ್ರ ಗೃಹ ಸಚಿವಾಲಯವು ಹಿಂದೆಯೇ ಸಾರ್ವಜನಿಕವಾಗಿ ಎನ್‌ಪಿಆರ್ ಮತ್ತು ಎನ್‌ಆರ್‌ಸಿಯನ್ನು ತಳಕುಹಾಕಿದೆ.

ರಾಷ್ಟ್ರವ್ಯಾಪಿ ಎನ್ಆರ್‌ಸಿಯನ್ನು 2024ರ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ “ಭಾರತೀಯ ಜನತೆ”ಗೆ “ಭರವಸೆ” ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತನಗೆ ಈ ಯೋಜನೆಯ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿಕೊಳ್ಳಬಹುದು. ಆದರೆ, ಅದನ್ನು ನಂಬುವುದು ಅಸಾಧ್ಯ.

ಎನ್‌ಪಿಆರ್ ಮತ್ತು ಅದಕ್ಕೆ ತಳಕು ಹಾಕಲಾಗಿರುವ ಯೋಜಿತ ಎನ್‌ಆರ್‌ಸಿಯು ಭಾರೀ ಪ್ರಮಾಣದಲ್ಲಿ ಮಾಹಿತಿಯನ್ನು ಕಲೆಹಾಕುವ ಭಾರೀ ಕಾರ್ಯಾಚರಣೆಯಾಗಿದೆ. ದೇಶದಲ್ಲಿ ವಾಸಿಸುವ ಎಲ್ಲರ ವೈಯಕ್ತಿಕ ಮಾಹಿತಿಯನ್ನು ಅದು ಸರಕಾರಕ್ಕೆ ಎಟಕುವಂತೆ ಮಾಡಲಿದೆ. ಈ ಮಾಹಿತಿಯನ್ನು ಸರಕಾರ (ಆ ಮೂಲಕ ಆಳುವ ಪಕ್ಷ) ತಾನು ಬಯಸಿದಂತೆ ಬಳಸುವ ಸಾಧ್ಯತೆ ಇರುತ್ತದೆ- ಅದು ಹಲವರು ಭಯಪಡುತ್ತಿರುವಂತೆ, ಜನರಿಗೆ ಪೌರತ್ವ ನಿರಾಕರಿಸಲು ಆಗಿರಬಹುದು ಆಥವಾ ಜನಸಂಖ್ಯಾಧರಿತ ವಿಶ್ಲೇಷಣೆಯ ಮೂಲಕ ವಿವಿಧ ಪ್ರದೇಶಗಳ ಮತದಾರರನ್ನು ಗುರಿಪಡಿಸಲು ಅಥವಾ ಬೆದರಿಸಲು ಆಗಿರಬಹುದು.

ಆದರೆ, ಆಳುವ ಸರಕಾರ ಇಷ್ಟಪಡದ ಧಾರಾಳ ಅಂಕಿಅಂಶಗಳಿವೆ. 2019ರಲ್ಲಿ ಉತ್ತಮವಾದ ಯೋಜನೆಗಳನ್ನು ರೂಪಿಸಲು ನೆರವಾಗಬಲ್ಲ ಮತ್ತು ಆರ್ಥಿಕತೆಯು ಯಾವ ರೀತಿಯ ಸಾಧನೆಯನ್ನು ಮಾಡುತ್ತಿದೆ (ಅಥವಾ ಮಾಡುತ್ತಿಲ್ಲ) ಎಂಬ ಬಗ್ಗೆ ಭಾರತೀಯರಿಗೆ ಸ್ಪಷ್ಟವಾದ ಚಿತ್ರಣ ನೀಡಬಹುದಾದ ಅತ್ಯಂತ ನಿರ್ಣಾಯಕವಾದ ಅಂಕಿಅಂಶಗಳನ್ನು  ಮುಚ್ಚಿಹಾಕಿದ ಆರೋಪವನ್ನು ಮೋದಿ ಸರಕಾರ ಮತ್ತೆಮತ್ತೆ ಎದುರಿಸಿದೆ. ಸರಕಾರ ತನಗೆ ಕೆಲವು ಅಂಕಿಅಂಶಗಳು ಇಷ್ಟವಿಲ್ಲದೇ ಹೋದಾಗ, ನೇರವಾಗಿ ಅಂತಹಾ ಅಂಕಿಅಂಶಗಳು ಅಸ್ತಿತ್ವದಲ್ಲೇ ಇಲ್ಲ ಎಂದು ನಾಟಕವಾಡಲು ನಿರ್ಧರಿಸುತ್ತದೆ.

ಆದುದರಿಂದ, ಮೋದಿ ಮತ್ತು ಶಾ ಎನ್‌ಪಿಆರ್‌ನ ಮೇಲೆ ಗಮನ ಕೇಂದ್ರೀಕರಿಸುತ್ತಿರುವಾಗ, ಆ ಅಂಕಿಅಂಶಗಳನ್ನು ಅಪಾಯಕಾರಿ, ಬಹುಸಂಖ್ಯಾತ ಉದ್ದೇಶಗಳಿಗೆ ಬಳಸಲಾಗಬಹುದು ಎಂಬ ಭಯವನ್ನು ಹಲವರು ವ್ಯಕ್ತಪಡಿಸುತ್ತಿರುವಾಗ, ಅವುಗಳನ್ನು ಮುಖ್ಯವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮಾತ್ರ ಬಳಸಲಾಗುತ್ತದೆ ಎಂದು ಕೇಂದ್ರ ಸಚಿವರುಗಳು ಹೇಳಿಕೊಳ್ಳುತ್ತಿರುವಾಗ, ಸರಕಾರ ಗಮನಹರಿಸಲೇಬೇಕಾಗಿದ್ದ, ಆದರೆ ಕುರುಡಾಗಿರುವ ಇತರ ಕೆಲವು ಅಂಕಿಅಂಶಗಳ ಕುರಿತು ಇಲ್ಲಿ ಕಣ್ಣುಹಾಯಿಸಲಾಗಿದೆ.

ಈ ಅಂಕಿಅಂಶಗಳಲ್ಲಿ ಬಹಳಷ್ಟನ್ನು ಹಿಂದೆ ತಜ್ಞರು, ಅರ್ಥಶಾಸ್ತ್ರಜ್ಞರು, ವಿವಿಧ ಸರಕಾರಗಳು ಬಳಸಿ, ವಿಶ್ಲೇಷಿಸಿ, ನಮ್ಮ ಆರ್ಥಿಕತೆ ಹೇಗಿದೆ, ಹೀಗೇಕಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಆದರೆ, ಮೋದಿ ಸರಕಾರವು ಈ ಅಂಕಿಅಂಶಗಳು ಪರಿಶೀಲನೆಗೆ ಅನರ್ಹ ಎಂದು ನಂಬಿರುವಂತೆ ಕಾಣುತ್ತದೆ.

ನಿರುದ್ಯೋಗ

ಆರ್ಥಿಕ ಅಂಕಿಅಂಶಗಳೊಂದಿಗೆ ಮೋದಿ ಸರಕಾರದ ಸಂಬಂಧ 2019ರಲ್ಲಿ ಹಳಸಲು ಆರಂಭಿಸಿತು.

ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಓ) ತನ್ನ ಹೊಸ ನಿಯತಕಾಲಿಕ ಕಾರ್ಮಿಕ ಬಲದ ಸಮೀಕ್ಷೆಯನ್ನು 2017ರ ಜುಲೈ ಮತ್ತು 2018ರ ಜೂನ್ ನಡುವೆ ನಡೆಸಿತು. ಈ ಅವಧಿಯನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ ಏಕೆಂದರೆ, ಅದು ನೋಟು ಆಮಾನ್ಯೀಕರಣದ ಪರಿಣಾಮವು ಭಾರತದ ಕಾರ್ಮಿಕ ವರ್ಗದ ಮೇಲೆ ಏನಾಯಿತು ಎಂಬುದನ್ನು ತೋರಿಸಿಕೊಡುತ್ತಿತ್ತು. ಮೋದಿ ಸರಕಾರ ಈ ಆಂಕಿಅಂಶಗಳನ್ನು ಬಹಿರಂಗಪಡಿಸಲು ಹೆದರಿ ನಿರಾಕರಿಸಿದಾಗ, ರಾಷ್ಟ್ರೀಯ ಅಂಕಿಅಂಶ ಆಯೋಗದ ಇಬ್ಬರು ಸದಸ್ಯರು ರಾಜೀನಾಮೆ ನೀಡಿದರು. ಆದರೂ ಸರಕಾರ ಜಪ್ಪಯ್ಯ ಎನ್ನಲಿಲ್ಲ.

ಜನವರಿ 2019ರಲ್ಲಿ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆ ಈ ಸಮೀಕ್ಷೆಯ ಫಲಿತಾಂಶವನ್ನು ಸರಣಿ ಲೇಖನಗಳ ಮೂಲಕ ಸೋರಿಕೆ ಮಾಡಿತು. ನಿರುದ್ಯೋಗವು ಕಳೆದ 45 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದನ್ನು ಎನ್‌ಎಸ್‌ಎಸ್‌ಓ ಕಂಡುಕೊಂಡಿತ್ತು ಮತ್ತು ಯುವಜನರಲ್ಲಿ ನಿರುದ್ಯೋಗದ ಪ್ರಮಾಣವು ಹಿಂದಿನ ವರ್ಷಗಳಿಗಿಂತ ಗಣನೀಯವಾಗಿ ಹೆಚ್ಚಿತ್ತು.

ಕೇಂದ್ರವು ಕೊನೆಗೂ ಮೇ 2019ರಲ್ಲಿ, ಸಾರ್ವತ್ರಿಕ ಚುನಾವಣೆಗಳು ಮುಗಿದು, ನರೇಂದ್ರ ಮೋದಿ ಸರಕಾರ ಪುನರಾಯ್ಕೆಯಾದ ಬಳಿಕವಷ್ಟೇ ಈ ಅಂಕಿಅಂಶಗಳನ್ನು ಬಹಿರಂಗಗೊಳಿಸಿತು. ಆಗಲೂ ಸರಕಾರವು ಸಮೀಕ್ಷೆಯ ವಿಧಾನ ಬದಲಾಗಿರುವುದರಿಂದ ಅಂಕಿಅಂಶಗಳ ಹೋಲಿಕೆ ಮಾಡಲಾಗದು ಎಂಬ ಸಬೂಬು ನೀಡಿ, ವಿಷಯವನ್ನು ತಣ್ಣಗಾಗಿಸಿತು. ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಮೇಲೂ ಸರಕಾರದಲ್ಲಿ ಯಾರೂ ಈ ವಿಷಯದ ಬಗ್ಗೆ ಗಮನಹರಿಸಿಲ್ಲ ಆಥವಾ ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ತಾವೇನು ಮಾಡುತ್ತಿದ್ದೇವೆ ಎಂಬ ಬಗ್ಗೆ ತುಟಿ ಬಿಚ್ಚಿಲ್ಲ.

ಗ್ರಾಹಕ ಖರ್ಚುಗಳು

ತೀರಾ ಇತ್ತೀಚಿನ ವಿವಾದವು ಅಂಕಿಅಂಶಗಳ ಕುರಿತು ಮೋದಿ ಸರಕಾರದ ಪ್ರವೃತ್ತಿಯನ್ನು ಎತ್ತಿತೋರಿಸಿದ್ದು, ಗ್ರಾಹಕ ವೆಚ್ಚಗಳ ಕುರಿತು ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯ 2017-18ರ ಸಮೀಕ್ಷೆಯ ಮುಜುಗರ ಉಂಟುಮಾಡುವ ಅಂಕಿಅಂಶಗಳತ್ತ ಸರಕಾರ ಕುರುಡುಗಣ್ಣು ಬೀರಿದೆ. ಈ ಬಾರಿ ಕೂಡಾ ‘ಬಿಸಿನೆಸ್ ಸ್ಟ್ಯಾಂಡರ್ಡ್’ ಪತ್ರಿಕೆಯೇ ವಿಷಯವನ್ನು ಬಹಿರಂಗಗೊಳಿಸಿದ್ದು, ಗ್ರಾಹಕರು ಮಾಡುವ ಖರ್ಚು ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣಕ್ಕೆ ಕುಸಿದಿರುವುದನ್ನು ಅಂಕಿಅಂಶಗಳು ತೋರಿಸಿಕೊಡುತ್ತವೆ. ಇದಕ್ಕೆ ಕಾರಣ ಗ್ರಾಮೀಣ ಬೇಡಿಕೆ ಕುಸಿತವೆಂದು ಅಂಕಿಅಂಶಗಳು ಹೇಳುತ್ತವೆ.

ಇದನ್ನು ನಿಭಾಯಿಸಲು ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ಬದಲು ಸರಕಾರವು ಈ ಬಾರಿ, ದತ್ತಾಂಶಗಳ ಗುಣಮಟ್ಟ ಸರಿಯಿಲ್ಲವೆಂಬ ಸಬೂಬು ನೀಡಿ ಸಮೀಕ್ಷೆಯ ಫಲಿತಾಂಶವನ್ನು ತಿರಸ್ಕರಿಸಿದೆ. ಭಾರತದಲ್ಲಿ ಸರಕಾರವೊಂದು ರಾಷ್ಟ್ರೀಯ ಅಂಕಿಅಂಶ ಕಚೇರಿಯ ಸಮೀಕ್ಷೆಯನ್ನು ತಿರಸ್ಕರಿಸಿರುವುದು ಇದೇ ಮೊದಲ ಬಾರಿ.

ಜಿಡಿಪಿ ಬೆಳವಣಿಗೆ

ನಿಮಗೆ ಇಷ್ಟವಿಲ್ಲದ ಅಂಕಿಅಂಶಗಳನ್ನು ನಿಭಾಯಿಸುವ ಇನ್ನೊಂದು ವಿಧಾನವೆಂದರೆ ಅದನ್ನು ಸಂಪೂರ್ಣವಾಗಿ ಬದಲಿಸುವುದು ಎಂದು ಮೋದಿ ಸರಕಾರ ತೋರಿಸಿಕೊಟ್ಟಿದೆ. ಈ ರೀತಿ ಮಾಡುವುದರಿಂದ ನೀವು ಅಂಕಿಅಂಶಗಳನ್ನು ತಡೆಹಿಡಿದಿದ್ದೀರಿ ಎಂದು ಯಾರೂ ಆರೋಪಿಸುವಂತಿಲ್ಲ ಮತ್ತು ನಿಮ್ಮ ಸರಕಾರವು ಪರಿಸ್ಥಿತಿಯನ್ನು ಹದಗೆಡಿಸಿದೆ ಎಂಬ ಟೀಕೆಯನ್ನೂ ನಿಭಾಯಿಸುವ ಅಗತ್ಯವಿರುವುದಿಲ್ಲ!

2018ರ ಕೊನೆಯ ಭಾಗದಲ್ಲಿ ಸರಕಾರವು ಹೊಸ ‘ಹಿಂದಿನ ಸರಣಿ’ಯ ಜಿಡಿಪಿಯ ‘ಆಧಿಕೃತ’ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿತು. ಆದರ ಪ್ರಕಾರ, ಮನಮೋಹನ್ ಸಿಂಗ್ ಸರಕಾರದಲ್ಲಿ ಜಿಡಿಪಿ ಬೆಳವಣಿಗೆಯು ಹಿಂದೆಯೇ ದಾಖಲಿಸಲಾಗಿರುವುದಕ್ಕಿಂತ ಕಡಿಮೆಯಿತ್ತು! ಹಲವಾರು ತಜ್ಞರು ಈ ಅಂಕಿಅಂಶಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿದ್ದಾರೆ ಮಾತ್ರವಲ್ಲ; ಇದನ್ನು ಮೈಕ್ರೋ ಇಕನಾಮಿಕ್ಸ್‌ನ ಮೂಲಭೂತ ನಿಯಮಗಳನ್ನು ತಲೆಕೆಳಗೆ ಮಾಡಿ ನಿಲ್ಲಿಸುವುದು ಎಂದೂ ಟೀಕಿಸಿದ್ದಾರೆ.

ದೇಶದ ಜಿಡಿಪಿ ಬೆಳವಣಿಗೆ ಐದು ಶೇಕಡಾಕ್ಕಿಂತಲೂ ಕೆಳಮಟ್ಟಕ್ಕೆ ಇಳಿದಿರುವುದಕ್ಕೆ ಕಾರಣಗಳನ್ನು ಹುಡುಕುವ ಬದಲು, ಕೇಂದ್ರ ಸರಕಾರವು ಈ ಅಂಕಿಅಂಶಗಳು ಅಷ್ಟೊಂದು ಕೆಟ್ಟದಾಗಿ ಕಾಣದಂತೆ ಮಾಡಲು ಪ್ರಯತ್ನಿಸಿದಂತೆ ಕಾಣುತ್ತದೆ.

ಲಿಂಚಿಂಗ್

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಅರ್‌ಬಿ) ತನ್ನ 2016ರ “ಭಾರತದಲ್ಲಿ ಅಪರಾಧ” ಎಂಬ ವರದಿಯನ್ನು ಬರೋಬ್ಬರಿ ಮೂರು ವರ್ಷ ತಡವಾಗಿ ಪ್ರಕಟಿಸಿತು. ಆದರೂ, ತಾನು ಸಂಗ್ರಹಿಸಿದ ಎಲ್ಲಾ ಮಾಹಿತಿಗಳನ್ನು ಪ್ರಕಟಿಸದಿರಲು ನಿರ್ಧರಿಸಿತು. ಗುಂಪಿನಿಂದ ಹಲ್ಲೆ/ಹತ್ಯೆ, ಪ್ರಭಾವಿ ಜನರಿಂದ ನಡೆದ ಕೊಲೆಗಳು, ಖಾಪ್ ಪಂಚಾಯತ್‌ಗಳು ಆದೇಶಿಸಿದ ಹತ್ಯೆಗಳು ಇತ್ಯಾದಿ ಕೆಲವು ನಿರ್ದಿಷ್ಟ ಉಪ ಶೀರ್ಷಿಕೆಗಳ ಅಡಿಯಲ್ಲಿ ಯಾವುದೇ ಅಂಕಿಅಂಶಗಳನ್ನು ಪ್ರಕಟಿಸಲಿಲ್ಲ.

ಈ ಅಪೂರ್ಣ ಅಂಕಿಅಂಶಗಳನ್ನು ಪ್ರಕಟಿಸುವುದಕ್ಕೆ ಸ್ವಲ್ಪ ಮೊದಲು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ‘ಲಿಂಚಿಂಗ್’ ಒಂದು ಪಾಶ್ಚಾತ್ಯ ಕಲ್ಪನೆ ಮತ್ತದನ್ನು ಭಾರತದ ‘ಹೆಸರು ಕೆಡಿಸಲು’ ಬಳಸಬಾರದು ಎಂದು ಹೇಳಿದ್ದರು. ಅವರ ಹೇಳಿಕೆಯು ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಮುಚ್ಚಿಹಾಕುವ ಪ್ರಯತ್ನ ಎಂದು ವ್ಯಾಪಕವಾಗಿ ಟೀಕಿಸಲಾಗಿತ್ತು. ಬಿಜೆಪಿಯ ಹಲವಾರು ನಾಯಕರು ಲಿಂಚಿಂಗ್ ಪ್ರಕರಣಗಳ ಆರೋಪಿಗಳಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರಕಾರಿ ಸಂಸ್ಥೆಗಳು ಯಾರಿಗೂ ಶಿಕ್ಷೆಯಾಗದಂತೆ ಮಾಡಲು ತನಿಖೆಯನ್ನೇ ದುರ್ಬಲಗೊಳಿಸುತ್ತಿರುವ ಆರೋಪಕ್ಕೆ ಗುರಿಯಾಗಿವೆ.

ರೈತರ ಆತ್ಮಹತ್ಯೆಗಳು

ಮೇಲೆ ಉಲ್ಲೇಖಿಸಲಾಗಿರುವ ಎನ್‌ಸಿಅರ್‌ಬಿ ವರದಿಯಲ್ಲಿಯೇ ರೈತರ ಆತ್ಮಹತ್ಯೆ ಕುರಿತ ವಿಭಾಗವೊಂದಿದೆ. ವರದಿಯ ಉಳಿದ ಭಾಗಗಳಂತೆ, ಈ ವಿಭಾಗದ ಅಂಕಿಅಂಶಗಳು ಮೂರು ವರ್ಷಗಳ ಕಾಲ ತಡವಾಗಿರುವುದರ ಹೊರತಾಗಿಯೂ ಅಪೂರ್ಣವಾಗಿವೆ.

2016ರ ವರ್ಷಕ್ಕೆ ರೈತರ ಸಾವಿಗೆ ಕಾರಣಗಳ ವಿಭಾಗವನ್ನೇ ಎನ್‌ಸಿಅರ್‌ಬಿ ಕೈಬಿಟ್ಟಿದೆ. ಈ ಮಾಹಿತಿಯು ರೈತರ ಆತ್ಮಹತ್ಯೆಗಳು ಏಕೆ ಮುಂದುವರಿದಿವೆ ಮತ್ತು ರೈತರ ಸಂಕಷ್ಟಗಳ ನಿವಾರಣೆಗೆ ಏನು ಮಾಡಬಹುದು ಎಂಬ ಕುರಿತು ಒಳನೋಟವನ್ನು ಒದಗಿಸಬಹುದಾಗಿತ್ತು. ಈ ವರದಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಹೇಳಲಾಗಿದ್ದು,  ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಆತ್ಮಹತ್ಯೆ ಸೊನ್ನೆ ಎಂದು ಹೇಳಲಾಗಿದೆ. ಆದರೆ, ನೈಜ ವರದಿಗಳು ಇದಕ್ಕೆ ವ್ಯತಿರಿಕ್ತವಾಗಿವೆ.

(ಇಲ್ಲಿಗೆ ಮೋದಿ ಸರಕಾರದ ಗ್ರೇಟ್ ಇಂಡಿಯನ್ ಡಾಟಾ ಸರ್ಕಸ್ ಮುಕ್ತಾಯವಾಯಿತು.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...