Homeಮುಖಪುಟ`ಮೋದಿ ಹೆಸರಿಂದ ಅಪಾಯವಿದೆ’ ಎಂಬ ಕಲ್ಲಡ್ಕ ಭಟ್ಟರ ಮಾತಿಗೆ ಅರ್ಥಗಳೇನು?

`ಮೋದಿ ಹೆಸರಿಂದ ಅಪಾಯವಿದೆ’ ಎಂಬ ಕಲ್ಲಡ್ಕ ಭಟ್ಟರ ಮಾತಿಗೆ ಅರ್ಥಗಳೇನು?

- Advertisement -
- Advertisement -

ಜೀವಬೆದರಿಕೆಯ ಕಾರಣದಿಂದ ಪೊಲೀಸರು ಅಜ್ಞಾತ ಸ್ಥಳದಲ್ಲಿಟ್ಟು ರಕ್ಷಣೆ ಕೊಟ್ಟ ಸುದೀರ್ಘ ಸಮಯದ ತರುವಾಯ ಕಲ್ಲಡ್ಕಭಟ್ಟರು ಆಡಿದ ಮಾತು ಹೊಸಹೊಸ ಅರ್ಥಗಳೊಂದಿಗೆ ಹರಿದಾಡುತ್ತಿದೆ. ಮಡಿಕೇರಿಯಲ್ಲಿ ಮಾಧ್ಯಮದವರ ಮುಂದೆ ‘ಬಿಜೆಪಿ ಅಭ್ಯರ್ಥಿಗಳು ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದು ಭವಿಷ್ಯದಲ್ಲಿ ಅಪಾಯಕಾರಿಯಾಗಲಿದೆ. ಓರ್ವ ವ್ಯಕ್ತಿಯ ಸಾಧನೆ ಬಿಂಬಿಸಿಕೊಂಡು ಮತ ಕೇಳುವುದು ಒಳ್ಳೆಯ ಪ್ರಕ್ರಿಯೆ ಅಲ್ಲ, ವ್ಯಕ್ತಿ ಪೂಜೆ ನಮ್ಮ ಸಂಸ್ಕೃತಿಯಲ್ಲ’ ಎಂದು ಅವರಾಡಿದ ಮಾತುಗಳು ಬಹಳಷ್ಟು ಜನರನ್ನು ಅಚ್ಚರಿಗೊಳಿಸಿದ್ದರೆ, ಬಿಜೆಪಿಗರನ್ನು ಆಘಾತಕ್ಕೀಡು ಮಾಡಿವೆ. ಇದಕ್ಕೆ ಕಾರಣಗಳುಂಟು.

ಭಟ್ಟರ ಈ ಮಾತುಗಳನ್ನು ಎರಡು ನೆಲೆಗಟ್ಟಿನಲ್ಲಿ ವಿಶ್ಲೇಷಿಸಲಾಗುತ್ತಿದೆ. ಮೇಲ್ನೋಟಕ್ಕೆ ಕಾಣುವಂತೆ, ಬಿಜೆಪಿಯಲ್ಲಿ ಮೋದಿ-ಶಾಜೋಡಿಯ ಸರ್ವಾಧಿಕಾರವನ್ನು, ಮೋದಿಯವರ ವ್ಯಕ್ತಿಪೂಜೆಯನ್ನು ಟೀಕಿಸುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಬಿಜೆಪಿ ರಾಜಕೀಯ ಪಕ್ಷವಾದರು ಅದನ್ನು ನಿಯಂತ್ರಿಸುತ್ತಿರುವುದು ಆರೆಸೆಸ್ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಬಿಜೆಪಿಯಲ್ಲಿ ಯಾವುದೇ ವ್ಯಕ್ತಿ, ಎಷ್ಟೇ ಉನ್ನತ ರಾಜಕೀಯ ಹುದ್ದೆಗೇರಿದರು ಆತ ತನ್ನ ಅಂಕೆಯಲ್ಲಿರಬೇಕೆಂದು ಆರೆಸೆಸ್ ಬಯಸುತ್ತದೆ, ಮತ್ತು ಹಾಗೇ ಹದ್ದುಬಸ್ತಿನಲ್ಲಿಡುತ್ತಾ ಬಂದಿದೆ. ಆದರೆ ಮೋದಿ ಅಧಿಕಾರಕ್ಕೇರಿದ ನಂತರ ಆರೆಸೆಸ್ ಅಂಕೆಯನ್ನೂ ಮೀರಿ ಏಕವ್ಯಕ್ತಿಕೇಂದ್ರಿತ ಶಕ್ತಿಯಾಗಿ ಬೆಳೆಯುತ್ತಿರುವುದು ಸಂಘ ಪರಿವಾರಕ್ಕೆ ನುಂಗಲಾರದ ತುತ್ತಾಗುತ್ತಿದೆ ಎಂಬ ವಾದ ಆಗಾಗ್ಗೆ ನಾಗ್ಪುರದ ಮೂಲಗಳಿಂದ ಕೇಳಿಬರುತ್ತಲೇ ಇತ್ತು. ಅದಕ್ಕೆ ಪೂರಕವಾಗಿ 2014ರ ಎಂಪಿ ಚುನಾವಣೆಯ ನಂತರ ನಡೆದ ಬಹುತೇಕ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಮೋದಿ-ಶಾ ನೇತೃತ್ವದಲ್ಲಿ ಗೆಲ್ಲುತ್ತಾ ಬಂದದ್ದು ಆರೆಸೆಸ್ ಅನ್ನು ಕಟ್ಟಿಹಾಕಿತ್ತು.

ಆದರೆ ಕಳೆದ ಡಿಸೆಂಬರ್‍ನಲ್ಲಿ ಮುಗಿದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ ಎಲೆಕ್ಷನ್‍ನಲ್ಲಿ ಬಿಜೆಪಿ ಸೋತು ಅಧಿಕಾರ ಕಳೆದುಕೊಂಡ ತರುವಾಯ ಆರೆಸೆಸ್ ವಲಯದೊಳಗಿನ ಆಂತರಿಕ ಲೆಕ್ಕಾಚಾರಗಳು ಬುಡಮೇಲಾಗಿವೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಮೋದಿ ಪ್ರಭುತ್ವವನ್ನು ಕುಗ್ಗಿಸಲು, ಪಕ್ಷದ ಮೇಲೆ ಮತ್ತೆ ನಾಗ್ಪುರ ಕೇಂದ್ರದ ಹಿಡಿತವನ್ನು ಬಿಗಿತಗೊಳಿಸಲು ಕಸರತ್ತುಗಳು ಶುರುವಾಗಿದ್ದವು. ಮೋದಿಯ ಪ್ರಭಾವ ತಗ್ಗಿಸುವುದರ ಜೊತೆಗೆ ಇದಕ್ಕೆ ಮತ್ತೂ ಒಂದು ಕಾರಣವಿತ್ತು. 2019ರ ಚುನಾವಣೆಯಲ್ಲಿ ಬಿಜೆಪಿಯಾಗಲಿ ಅಥವಾ ಎನ್‍ಡಿಎ ಆಗಲಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಷ್ಟು ಸೀಟುಗಳನ್ನು ಗೆಲ್ಲುವುದಿಲ್ಲ ಎಂಬ ಸುಳಿವು ಆರೆಸೆಸ್‍ಗೆ ಸಿಕ್ಕಾಗಿತ್ತು. ಅಂತಹ ಅತಂತ್ರದಲ್ಲಿ ಉಳಿದ ಸಣ್ಣಪುಟ್ಟ ಪಕ್ಷಗಳನ್ನು ಸೆಳೆದುಕೊಂಡು ಸರ್ಕಾರ ರಚಿಸುವ ಪರಿಸ್ಥಿತಿ ಎದುರಾಗಲಿದ್ದು, ಸರ್ವಾಧಿಕಾರಿ ಇಮೇಜಿನ ಮೋದಿಯನ್ನು ಮುಂದಿಟ್ಟುಕೊಂಡರೆ ಆ ಪಕ್ಷಗಳು ತಮಗೆ ಬೆಂಬಲ ಕೊಡದೇ ಹೋಗಬಹುದು, ಆಗ ಎಲ್ಲಾ ಪಕ್ಷಗಳಿಗೂ ಪ್ರಿಯವಾದ ಬೇರೊಂದು ಮುಖವನ್ನು ಪ್ರಧಾನಿ ಹುದ್ದೆಗೆ ಪ್ರಪೋಸ್ ಮಾಡಿ ಬೆಂಬಲ ಪಡೆದುಕೊಳ್ಳಬೇಕಾಗುತ್ತೆ. ಮೋದಿ ಇಷ್ಟೇ ಪ್ರಭಾವಿಯಾಗಿದ್ದರೆ ಬೇರೊಬ್ಬರನ್ನು ಪ್ರಧಾನಿ ಮಾಡಲು ಆತ ಅಡ್ಡಿಯಾಗಬಹುದು ಎಂಬ ದೂರಾಲೋಚನೆಯಿಟ್ಟುಕೊಂಡು ಆರೆಸೆಸ್ ಒಂದು ಕಾರ್ಯತಂತ್ರ ಹೆಣೆದಿತ್ತು. ಬಿಜೆಪಿಯೊಳಗೆಮೋದಿಗೆ ಪರ್ಯಾಯವಾಗಿ ಮತ್ತೊಬ್ಬ ನಾಯಕನನ್ನು ಪ್ರೊಜೆಕ್ಟ್ ಮಾಡುವುದು ಆ ತಂತ್ರವಾಗಿತ್ತು.

ಅದರ ಭಾಗವಾಗಿಯೇ ಹಾಲಿ ಕೇಂದ್ರ ಮಂತ್ರಿಯೂ, ಮಾಜಿ ಬಿಜೆಪಿ ಅಧ್ಯಕ್ಷರೂ ಆದ ನಾಗ್ಪುರ ನಂಟಿನ ನಿತಿನ್ ಗಡ್ಕರಿ ಮೋದಿ-ಶಾ ಜೋಡಿಗೆ ರೆಬೆಲ್ ಮಾತುಗಳನ್ನಾಡಲು ಶುರು ಮಾಡಿದ್ದರು. ಡಿಸೆಂಬರ್ ಚುನಾವಣೆಗಳ ಸೋಲನ್ನು ಬಿಜೆಪಿ ಅಧ್ಯಕ್ಷರೇ ಹೊತ್ತುಕೊಳ್ಳಬೇಕು ಎಂದದ್ದಾಗಲಿ, ತನ್ನ ಮನೆಯನ್ನೇ ಸರಿಯಾಗಿ ನೋಡಿಕೊಳ್ಳಲಾರದವ ದೇಶವನ್ನು ಹೇಗೆ ಸಂಭಾಳಿಸಿಯಾನು ಎಂದು ಪರೋಕ್ಷವಾಗಿ ಮೋದಿಯನ್ನು ಕುಟುಕಿದ್ದಾಗಲಿ, ಮೋದಿಯನ್ನು ನಖಾಶಿಖಾಂತ ಟೀಕಿಸುತ್ತಿದ್ದ ಶಿವಸೇನೆ ಮಹಾರಾಷ್ಟ್ರದಲ್ಲಿ ಹಠಾತ್ತನೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾಗಲಿ ಇವೆಲ್ಲವೂ ನಿತಿನ್ ಗಡ್ಕರಿಗೆ ಆರೆಸೆಸ್‍ನಿಂದ ಸಿಗುತ್ತಿದ್ದ ಪ್ರೋತ್ಸಾಹದ ಸೂಚಕಗಳಾಗಿದ್ದವು. ಆದರೆ ಇಂಥಾ ಪ್ರಯತ್ನ ಲೋಕಸಭಾ ಚುನಾವಣೆ ವೇಳೆ ಕಾರ್ಯಕರ್ತರ ಆತ್ಮವಿಶ್ವಾಸದ ಮೇಲೆಯೇ ಅಡ್ಡಪರಿಣಾಮ ಬೀರಬಹುದೆನ್ನುವ ಕಾರಣಕ್ಕೆ ಆರೆಸೆಸ್ ಕೊನೇ ಕ್ಷಣದಲ್ಲಿ ಅದನ್ನು ಮುಂದಕ್ಕೂಡಿತ್ತು.

ಈಗ ದೇಶದಲ್ಲಿ ಎರಡು ಹಂತದ ಚುನಾವಣೆಗಳು ಮುಗಿದ ಸಂದರ್ಭದಲ್ಲಿ ಕಲ್ಲಡ್ಕ ಭಟ್ಟರು ಇಂಥಾ ಮಾತುಗಳನ್ನು ಆಡುತ್ತಿರುವುದು ನೋಡಿದರೆ, ಆರೆಸೆಸ್‍ನ ಹಳೇ ಕಾರ್ಯತಂತ್ರ ಮತ್ತೆ ಚಾಲನೆ ಪಡೆದುಕೊಂಡಿದೆ ಎಂಬ ಅನುಮಾನ ಮೂಡುತ್ತಿದೆ. ಯಾಕೆಂದರೆ ಕಲ್ಲಡ್ಕ ಭಟ್ಟರು ಸಾಮಾನ್ಯ ಕಾರ್ಯಕರ್ತರಲ್ಲ. ಆರೆಸೆಸ್‍ನ ದಕ್ಷಿಣ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ.ಹೀಗೆ ದೇಶದ ಅಲ್ಲೊಂದು, ಇಲ್ಲೊಂದು ಮೂಲೆಯಲ್ಲಿ ಇಂಥಾ ಪ್ರಭಾವಿಗಳಿಂದ `ಮೋದಿ-ವಿರೋಧಿ’ ಹೇಳಿಕೆಗಳನ್ನು ನೀಡಿಸುವ ಮೂಲಕ ಹಂತಹಂತವಾಗಿ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ದೂರವಾಗಿಸಲು, ಬಿಜೆಪಿ ಕಾರ್ಯಕರ್ತರ ನಡುವೆ ಮೋದಿ-ಶಾವ್ಯಕ್ತಿ ಪೂಜೆಯನ್ನು ತಗ್ಗಿಸಲು ಆರೆಸೆಸ್ ಮುಂದಾಗಿರಬಹುದು ಎನ್ನಲಾಗುತ್ತಿದೆ.

ಇನ್ನೊಂದು ವಿಶ್ಲೇಷಣೆಯ ಪ್ರಕಾರ, ಬಿಜೆಪಿ ಪಕ್ಷದ ಆವರಣದಲ್ಲಿ ಕುಸಿಯುತ್ತಿರುವ ತನ್ನ ವೈಯಕ್ತಿಕ ವರ್ಚಸ್ಸಿನ ಹತಾಶೆಯಿಂದ ಭಟ್ಟರು ಹೀಗೆ ಮಾತಾಡಿದ್ದಾರೆ ಎನ್ನಲಾಗುತ್ತಿದೆ. ಉ.ಕನ್ನಡ, ದ.ಕನ್ನಡ, ಉಡುಪಿ-ಚಿಕ್ಕಮಗಳೂರು ಸೇರಿದಂತೆ ಕರಾವಳಿ ಭಾಗದ ಬಿಜೆಪಿಗೆ ಇದೇ ಭಟ್ಟರು ಅಧಿನಾಯಕರಂತಿದ್ದರು. ಇವರು ಹೇಳಿದ ಅಭ್ಯರ್ಥಿಗೇ ಟಿಕೇಟು ನಿಕ್ಕಿ ಎನ್ನುವಂತಿತ್ತು. ಆದರೆ ಈ ಸಲ,ತನಗೇ ತಿರುಮಂತ್ರ ಹಾಕುತ್ತಿರುವ ದಕ್ಷಿಣ ಕನ್ನಡದ ನಳೀನ್ ಕುಮಾರ್ ಕಟೀಲ್‍ಗೆ ಟಿಕೇಟ್ ಕೊಡಬಾರದು ಎಂಬುದು ಕಲ್ಲಡ್ಕಭಟ್ಟರ ಹಠವಾಗಿತ್ತು. ಆದರೆ ಅದಕ್ಕೆ ಸೊಪ್ಪು ಹಾಕದ ಬಿಜೆಪಿ ನಳೀನ್‍ರನ್ನೇ ಮತ್ತೆ ಕಣಕ್ಕಿಳಿಸಿದೆ. ತನ್ನ ನೆರವಿಲ್ಲದ ನಳೀನ್ ಈಚುನಾವಣೆಯಲ್ಲಿ ಮೋದಿ ಹೆಸರೇಳಿಕೊಂಡು ಮತ ಯಾಚಿಸುತ್ತಿರುವುದು ಭಟ್ಟರಿಗೆ ಕೋಪ ತರಿಸಿ ಹೀಗೆ ಹೇಳಿರಬಹುದು ಎನ್ನುವುದು ಎರಡನೇ ವಿಶ್ಲೇಷಣೆ. ಆದರೆ ಒಂದಂತೂ ಸತ್ಯ, ಭಟ್ಟರ ಮಾತುಗಳು ಸೂಚ್ಯವಾಗಿ ಮುಂದಿನ ರಾಜಕಾರಣದ ದಿಕ್ಕುತೋರುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...