Homeಚಳವಳಿಎಡಪಕ್ಷಗಳ ವಿಲೀನದ ಪ್ರಸ್ತಾಪ: ಅಗತ್ಯವೇ, ಸಾಧ್ಯವೇ? ಮುಖಂಡರು ಏನಂತಾರೆ..

ಎಡಪಕ್ಷಗಳ ವಿಲೀನದ ಪ್ರಸ್ತಾಪ: ಅಗತ್ಯವೇ, ಸಾಧ್ಯವೇ? ಮುಖಂಡರು ಏನಂತಾರೆ..

- Advertisement -
- Advertisement -

| ಮಲ್ಲನಗೌಡರ್ |
ಫ್ಯಾಸಿಸ್ಟ್ ಆಡಳಿತದ ಲಕ್ಷಣಗಳನ್ನು ದೇಶಾದ್ಯಂತ ಬಿತ್ತಲು ಆರಂಭಿಸಿರುವ ಈ ಹೊತ್ತಿನಲ್ಲಿ ಅದಕ್ಕೆ ಕಾಂಗ್ರೆಸ್ ಸೇರಿದಂತೆ ಇತರ ಪ್ರಮುಖ ರಾಜಕೀಯ ಪಕ್ಷಗಳು ಅದರ ಓಟಕ್ಕೆ ತಡೆ ಹಾಕುವುದು ಕಷ್ಟ ಎಂಬ ಸ್ಥಿತಿಯಿದೆ. ಈ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಎಡಪಕ್ಷಗಳು, ಸಂಘಟನೆಗಳು ಮತ್ತು ಚಳವಳಿಗಳ ವಿಲೀನದ ಕುರಿತ ಮಾತುಗಳು, ಕಳೆದ ಸಂದರ್ಭಗಳಿಗಿಂತ ಹೆಚ್ಚು ಕೇಳಿ ಬರುತ್ತಿದೆ. ಒಂದೆಡೆ ಬಿಜೆಪಿ/ಆರೆಸ್ಸೆಸ್‍ನ ಅಪಾಯವನ್ನು ಎದುರಿಸಲು ಇದು ಅಗತ್ಯ ಎಂಬ ಚರ್ಚೆಯಿದ್ದರೆ, ಎಡ ಪಕ್ಷ ಮತ್ತು ಸಂಘಟನೆಗಳು ಈ ಸಲ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲೂ ವಿಲೀನವಾಗಬೇಕು ಎಂದು ಹೇಳುವವರಿದ್ದಾರೆ.
1964ರಲ್ಲಿ ಸಿಪಿಐನಿಂದ ಸಿಪಿಎಂ ಹೊರಬಂದಾದ ಮೇಲೂ ಈ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಒಗ್ಗಟ್ಟಾಗಿ ಚುನಾವಣೆ ಎದುರಿಸಿವೆ. ಬಿಕ್ಕಟ್ಟಿನ ಸಮಯದಲ್ಲಿ ಈ ಎರಡು ಪ್ರಮುಖ ಪಕ್ಷಗಳು ಮತ್ತು ಇತರ ಎಡಪಕ್ಷಗಳ ವಿಲೀನದ ಚರ್ಚೆ ಪ್ರಸ್ತಾಪವಾಗಿ ಅದು ವಿಫಲವಾಗುತ್ತಲೇ ಬಂದಿದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕಮ್ಯುನಿಸ್ಟ ಸಿದ್ಧಾಂತದ ಹಿನ್ನೆಲೆಯ ಸಂಘಟನೆಗಳು ವ್ಯಕ್ತಿಗಳು 1920ರ ದಶಕದ ಆರಂಭದಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐ) ಪಕ್ಷವನ್ನು ಸ್ಥಾಪಿಸಿಕೊಂಡವು. 1964ರಲ್ಲಿ ಈ ಪಕ್ಷದ ಗಣನೀಯ ಪ್ರಮಾಣದ ಮುಖಂಡರು, ಕಾರ್ಯಕರ್ತರು ಸಿಪಿಐನಿಂದ ಹೊರಬಂದು ಸಿಪಿಎಂ ಪಕ್ಷ ರಚಿಸಿಕೊಂಡರು. 1967ರಲ್ಲಿ ಐತಿಹಾಸಿಕ ನಕ್ಸಲ್ಬರಿ ಕ್ರಾಂತಿಯ ನಂತರ, 1969ರಲ್ಲಿ ಸಿಪಿಎಂಎಲ್ ಪಕ್ಷ ರಚನೆ ಆಗಿತು. ಸದ್ಯ ಕಮ್ಯೂನಿಸ್ಟ್ ಸಿದ್ಧಾಂತದಡಿ ಹೋರಾಡುತ್ತಿರುವ 30-40 ಪಕ್ಷಗಳು ಭಾರತದಲ್ಲಿ ಇವೆ. ಫಾರ್ವರ್ಡ್ ಬ್ಲಾಕ್, ಆರ್‍ಎಸ್‍ಪಿ ಮತ್ತು ಎಸ್‍ಯುಸಿಐ ಪಕ್ಷಗಳು ಪ್ರತ್ಯೇಕ ಅಸ್ತಿತ್ವ ಹೊಂದಿದ್ದರೂ, ಪಶ್ಚಿಮ ಬಂಗಾಲ, ಕೇರಳ ಮತ್ತು ತ್ರಿಪುರಗಳಲ್ಲಿ ಸಮನ್ವಯದಿಂದ ಒಕ್ಕೂಟ ರಚಿಸಿಕೊಂಡು ಹೋರಾಟ ನಡೆಸಿವೆ ಮತ್ತು ಅಧಿಕಾರವನ್ನು ನಡೆಸಿವೆ. ಮಾವೋವಾದಿ ಸಿದ್ಧಾಂತದಡಿ ಕೆಲಸ ಮಾಡುವ ಕಮ್ಯುನಿಸ್ಟ್ ಪಕ್ಷ ಸಶಸ್ತ್ರ ಹೋರಾಟದಲ್ಲಿ ಇದೆ.
ಸಿಪಿಐ ಮತ್ತು ಸಿಪಿಎಂಗಳ ನಡುವೆ ಹಲವಾರು ಬಾರಿ ವಿಲೀನದ ಪ್ರಸ್ತಾಪ ಬಂದಿದ್ದರೂ ಆ ವಿಷಯದಲ್ಲಿ ಇಲ್ಲಿವರೆಗೆ ಸಹಮತ ಮೂಡಿರಲಿಲ್ಲ. ಮೂಲಪಕ್ಷವಾದ ತನ್ನಲ್ಲೇ ಸಿಪಿಎಂ ವಿಲೀನವಾಗಲಿ ಸಿಪಿಐ ಬಯಸಿದರೆ, ಸಂಘಟನಾತ್ಮಕವಾಗಿ ವಿಸ್ತಾರ ಮತ್ತು ಪ್ರಾಬಲ್ಯತೆ ಹೊಂದಿರುವ ಮತ್ತು ಹಲವಾರು ರಾಜ್ಯಗಳಲ್ಲಿ ಅಧಿಕಾರ ನಡೆಸಿರುವ ಸಿಪಿಎಂ ತನ್ನೊಂದಿಗೆ ಸಿಪಿಐ ವಿಲೀನವಾಗಬೇಕು ಎಂದು ಪ್ರತಿಪಾದಿಸಿದ್ದವು. ಎಸ್‍ಯುಸಿಐ ಬಂಗಾಳದಲ್ಲಿ ಸಿಪಿಎಂ ಕಾರ್ಯಶೈಲಿಯ ವಿರುದ್ಧವೇ ಹೋರಾಡುತ್ತ ಬಂದಿದೆ. ಈ ಎಲ್ಲದರ ನಡುವೆಯೂ ನಿರ್ಣಾಯಕ ಸಂದರ್ಭಗಳಲ್ಲಿ ಸಮಾನ ತಾತ್ವಿಕೆಯ ಆದರದಡಿ ಈ ಪಕ್ಷಗಳು ಒಟ್ಟಾಗಿ ಹೋರಾಟವನ್ನು ರೂಪಿಸಿವೆ ಮತ್ತು ಅಧಿಕಾರವನ್ನು ನಡೆಸಿವೆ.

ಸದ್ಯ ದೇಶ ಆತಂಕಕಾರಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸನ್ನಿವೇಶದ ಕಡೆ ಸಾಗಿರುವ ಈ ಹೊತ್ತಿನಲ್ಲಿ ಮತ್ತೆ ಎಡಪಕ್ಷ, ಸಂಘಟನೆಗಳ ವಿಲೀನದ ಮಾತು ಕೇಳಿ ಬರುತ್ತಿದೆ. ಈ ವಿಲೀನ ಅಥವಾ ಮಿಳಿತದ ಇಂದಿನ ತುರ್ತು ಅಗತ್ಯ, ಅದಕ್ಕಿರುವ ಸೈದ್ಧಾಂತಿಕ ಮತ್ತು ತಾಂತ್ರಿಕ ಅಡೆತಡೆಗಳನ್ನು ಬಗೆಹರಿಸುವ ದಾರಿ- ಈ ವಿಷಯಗಳ ಸುತ್ತ ಎಡಪಕ್ಷ/ ಎಡ ಚಳವಳಿಗಳ ನಾಯಕರು ತಮ್ಮ ಅಭಿಪ್ರಾಯವನ್ನು ‘ಪತ್ರಿಕೆ’ಯೊಂದಿಗೆ ಹಂಚಿಕೊಂಡಿದ್ದಾರೆ.

ಮೊದಲು ಎಡಪಕ್ಷಗಳ ವಿಲೀನ, ನಂತರ ಬಿಜೆಪಿ ವಿರೋಧಿ ಮೈತ್ರಿಕೂಟ -ಡಾ.ಸಿದ್ದನಗೌಡ ಪಾಟೀಲ ಸಿಪಿಐ ಮುಖಂಡರು
ಸಿಪಿಐ ಮತ್ತು ಸಿಪಿಎಂ ಪಕ್ಷಗಳ ವಿಘಟನೆ ಸಿದ್ಧಾಂತದ ಕಾರಣಕ್ಕೆ ನಡೆದುದಲ್ಲ. ಮಾಕ್ರ್ಸ್‍ವಾದಿ ಸಿದ್ಧಾಂತದ ಅಳವಡಿಕೆಯಲ್ಲಿನ ಭಿನ್ನತೆಯ ಕಾರಣಕ್ಕೆ. ಸಿಪಿಐನಲ್ಲಿದ್ದ ತೀವ್ರವಾದಿ ಮಾಕ್ರ್ಸಿಸ್ಟರು ನೆಹರೂ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಬಾಲಬಡುಕ ಎಂದು ಆರೋಪಿಸಿ ಕಾರ್ಮಿಕ ವರ್ಗದ ಕ್ರಾಂತಿ ಆಧಾರದಲ್ಲಿ ಸಿಪಿಎಂ ಪಕ್ಷವನ್ನು ರಚಿಸಿಕೊಂಡರು. ಇಲ್ಲಿವರೆಗೆ ಈ ಎರಡೂ ಪ್ರಮುಖ ಪಕ್ಷಗಳ ಜೊತೆಗೆ ಹಲವಾರು ಎಡ ಸಿದ್ಧಾಂತದ ಧಾರೆಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗಾಗಿ ಒಕ್ಕೂಟದ ರೀತಿಯಲ್ಲಿ ಕೆಲಸ ಮಾಡುತ್ತಾ ಬಂದಿವೆ.

ಆದರೆ, ಈಗ ದೇಶವು ಫ್ಯಾಸಿಸ್ಟ್ ಮತ್ತು ಕೋಮುವಾದಿ ಶಕ್ತಿಗಳ ಹಿಡಿತಕ್ಕೆ ಸಿಕ್ಕು ಅಪಾಯದತ್ತ ಸಾಗಿದೆ. ಎಡಪಕ್ಷಗಳೂ ತಮ್ಮ ಅಸ್ತಿತ್ವದ ಭೀತಿಯನ್ನು ಎದುರಿಸುತ್ತಿವೆ. ಹೀಗಾಗಿ ಮತ್ತೆ ಸಿಪಿಐ ಪಕ್ಷವು ಎಲ್ಲ ಎಡಪಕ್ಷಗಳು ತನ್ನಲ್ಲಿ ವಿಲೀನವಾಗಲಿ ಎಂಬ ಪ್ರಸ್ತಾಪವನ್ನು ಮುಂದಿಟ್ಟಿದೆ. 1996ರಲ್ಲಿ ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಮತ್ತು 2004ರಲ್ಲಿ ಯುಪಿಎ ನೇತೃತ್ವದ ಸರ್ಕಾರಕ್ಕೆ ಬೆಂಬಲಿಸುವ ಮೂಲಕ ಎಡಪಕ್ಷಗಳು ದೇಶದ ರಾಜಕೀಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿವೆ.

ಜನಾಂದೋಲನಗಳನ್ನು ಮುಖ್ಯವಾಗಿ ಎಡ ಮತ್ತು ಸಮಾಜವಾದಿ ಚಳವಳಿಗಳನ್ನು ನಾಶ ಮಾಡುವ ದಬ್ಬಾಳಿಕೆ ಚಾಲ್ತಿಯಲ್ಲಿದೆ. ಕಾಂಗ್ರೆಸ್ ಪಕ್ಷ ನಿತ್ರಾಣದಲ್ಲಿದೆ. ಅದು ಗಾಂಧಿ ಕಾಂಗ್ರೆಸ್‍ನಿಂದ ಎಂದೋ ಹೊರಬಂದಿದೆ. ಬಿಜೆಪಿಯ ಎದುರಾಗಿ ಅದು ಮೃದು ಹಿಂದೂತ್ವದತ್ತ ಚಲಿಸಿ ತಪ್ಪು ಎಸಗುತ್ತ ಬಂದಿದೆ. ಜಾಗತೀಕರಣವನ್ನು ಜಾರಿಗೆ ತರುವ ಮೂಲಕ ಅದು ಕಾರ್ಪೊರೇಟ್ ಪರ ನೀತಿಗಳಿಗೆ ಆದ್ಯತೆ ನೀಡುತ್ತ ಬಂದಿದೆ. ಎಲ್ಲಕ್ಕೂ ಮುಖ್ಯವಾಗಿ ಈಗ ಅದು ಸಮರ್ಥ ನಾಯಕತ್ವದ ಕೊರತೆಯಿಂದ ಬಳಲುತ್ತಿದೆ.

ಇಂತಹ ಸಂದರ್ಭದಲ್ಲಿ ಎಡಪಕ್ಷಗಳು ಮತ್ತು ಎಡ ಸಂಘಟನೆಗಳು ವಿಲೀನವಾಗಿ ಹೋರಾಟ ಮತ್ತು ರಾಜಕೀಯ ಮಾಡುವ ಅಗತ್ಯವಿದೆ. ಎಡಪಕ್ಷಗಳ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ನಂತರದಲ್ಲಿ ಬಿಜೆಪಿ ವಿರೋಧಿ ಪಕ್ಷಗಳ ಒಕ್ಕೂಟ ಕಟ್ಟುವತ್ತ ಹೆಜ್ಜೆ ಇಡಬಹುದು.

ವಿಲೀನ ಆಗಲಿದೆ ಎಂಬ ನಿರೀಕ್ಷೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ – ಸಾತಿ ಸುಂದರೇಶ.  ಸಿಪಿಐ ರಾಜ್ಯ ಕಾರ್ಯದರ್ಶಿ

ಫ್ಯಾಸಿಸ್ಟ್ ಮತ್ತು ಕೋಮುವಾದಿ ಪಕ್ಷ್ಚ ದೊಡ್ಡ ಗೆಲುವಿನ ಮೂಲಕ ತನ್ನ ಜನವಿರೋಧಿ ಅಜೆಂಡಾವನ್ನು ರಾಷ್ಟ್ರವಾದದ ಹೆಸರಲ್ಲಿ ಬಿತ್ತುತ್ತ ಜನಸಾಮಾನ್ಯರ ಬದುಕನ್ನು ನಾಶ ಮಾಡುವತ್ತ ಹೆಜ್ಜೆ ಇಡಲು ಆರಂಭಿಸಿದೆ. ಇಂತಹ ಕಾಲಘಟ್ಟದಲ್ಲಿ ಎಲ್ಲ ಎಡಪಕ್ಷಗಳು ವಿಲೀನವಾಗಿ ಒಂದು ಫ್ಯಾಸಿಸ್ಟ್ ವಿರೋಧಿ ಶಕ್ತಿಯನ್ನು ಕಟ್ಟುವ ಕೆಲಸಕ್ಕೆ ಮುಂದಾಗುವ ದೃಷ್ಟಿಯಿಂದ ನಮ್ಮ ನಾಯಕ ಸುಧಾಕರರೆಡ್ಡಿ ಅವರು ಈ ಪ್ರಸ್ತಾಪವನ್ನು ಸಿಪಿಎಂ ನಾಯಕ ಸೀತಾರಾಮ ಯೆಚೂರಿಯವರ ಮುಂದೆ ಇಟ್ಟಿದ್ದಾರೆ.


ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನರ ಹಿತಾಸಕ್ತಿಗಳನ್ನು ಕಾಪಾಡಲು ಇದು ಈಗ ಅಗತ್ಯವಾಗಿದೆ ಎಂದು ಪಕ್ಷವು ಭಾವಿಸಿದೆ. ಎಲ್ಲ ಎಡ ಪಕ್ಷಗಳ ಕಾರ್ಯಕರ್ತರಲ್ಲೂ ಇಂತಹ ಒಂದು ಆಶಯ ಹುಟ್ಟಿರುವ ಈ ಸಂದರ್ಭದಲ್ಲಿ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಇದು ತುರ್ತಾಗಿ ಆಗಬೇಕಾದ ಕೆಲಸವೂ ಹೌದು, ಅದು ಎಲ್ಲ ಎಡ ಶಕ್ತಿಗಳ ಜವಾಬ್ದಾರಿಯೂ ಹೌದು. ಪರ್ಯಾಯ ರಾಜಕಾರಣ ಹುಟ್ಟು ಹಾಕಲು ಇದು ಸಂಭವಿಸಲೇಬೇಕಿದೆ. ಸಿಪಿಐ ನೆಹರೂ ಸಿದ್ದಾಂತದ ಪರ, ಕಾಂಗ್ರೆಸ್ ಪರ ಎಂಬ ಹಿಂದಿನ ನಿಲುವಿನಿಂದ ಸಿಪಿಎಂ ಹೊರಬಂದು ಕೈಜೋಡಿಸಬೇಕಿದೆ. ಈಗ ಅದರ ಆ ಪ್ರಶ್ನೆ ಪ್ರಸ್ತುತವೂ ಅಲ್ಲ. ವಿಲೀನ ಆಗಲಿದೆ ಎಂಬ ನಿರೀಕ್ಷೆಯಲ್ಲಿ ನಮ್ಮ ಪಕ್ಷ ಮುಂದಿನ ಪ್ರಕ್ರಿಯೆಗಳಲ್ಲಿ ನಿರತವಾಗಿದೆ.

ಎಡಪಕ್ಷಗಳಷ್ಟೇ ಒಂದಾದರೆ ಸಾಲದು, ಮತ್ತಿತರ ಪ್ರಜಾತಂತ್ರವಾದಿಗಳೂ ಒಂದೇ ವೇದಿಕೆಗೆ ಬರಬೇಕು – ನೂರ್ ಶ್ರೀಧರ್, ಹಿಂದೆ ಮಾವೋವಾದಿ ಚಳವಳಿಯಲ್ಲಿದ್ದು ಸದ್ಯ ಪ್ರಜಾತಾಂತ್ರಿಕ ಚಳವಳಿ ಕಟ್ಟುವಲ್ಲಿ ನಿರತರು

ಎಡಪಕ್ಷಗಳು, ಸಂಘಟನೆಗಳು ಮತ್ತು ಎಡ ಸಿದ್ಧಾಂತಗಳಲ್ಲಿ ನಂಬಿಕೆ ಇರುವರರೆಲ್ಲ ಒಂದಾಗಲೇಬೇಕು ಎಂಬುದರಲ್ಲಿ ಎರಡನೆ ಮಾತೇ ಇಲ್ಲ. ಆದರೆ ದೇಶದ ಸಂಕಷ್ಟದ ಪರಿಹಾರಕ್ಕೆ ಇದೊಂದೇ ಮಾರ್ಗ ಸಾಕಾಗುವುದಿಲ್ಲ. ಈ ವಿಲೀನ ಕೇವಲ ಎಡಪಕ್ಷಗಳಲ್ಲದೇ ಅಂಬೇಡ್ಕರ್ ವಾದಿ ಸಂಘಟನೆಗಳನ್ನು ಒಳಗೊಂಡು ಎಲ್ಲ ಪ್ರಜಾಸತ್ತಾತ್ಮಕ ಪಕ್ಷ ಮತ್ತು ಸಂಘಟನೆಗಳನ್ನು ಒಳಗೊಳ್ಳುವುದು ಅಗತ್ಯವಾಗಿದೆ.

ಹಳೆಯ ರೀತಿಯಲ್ಲಿ ಬಿಟ್ಟು, ರವೀಶ್‍ಕುಮಾರ ಹೇಳಿರುವಂತೆ ಎಲ್ಲ ಜೀವಪರ ಶಕ್ತಿಗಳು ವಿಲೀನವಾಗಬೇಕಾದ ಅಗತ್ಯವಿದೆ. ಇವು ಒಂದು ಹೊಸ ಐಡೆಂಟಿಟಿ ಕಟ್ಟಿಕೊಂಡು, ಜನರ ಎದುರು ಒಂದು ಹೊಸ ದೃಷ್ಟಿಕೋನ-ವಿಷನ್, ಹೊಸ ಭರವಸೆಗಳನ್ನು ಮುಂದಿಡಬೇಕಾಗಿದೆ. ಪ್ರಮುಖ ಎಡಪಕ್ಷಗಳ ವಿಲೀನ ಸುಲಭವಲ್ಲವಾದರೂ ಆ ನಿಟ್ಟಿನಲ್ಲಿ ಹೆಜ್ಜೆ ಇಡುವ ಸಂದರ್ಭ ಇದಾಗಿದೆ. ಇದು ಕೇವಲ ಕಾಲ್ಪನಿಕ, ಆಶಾವಾದ ಅನಿಸಬಹುದು. ಆದರೆ ಅದನ್ನು ಸಾಧ್ಯಗೊಳಿಸುವ ಎಲ್ಲ ಅವಕಾಶಗಳೂ ಇವೆ. ಈ ನಿಟ್ಟಿನಲ್ಲಿ ಎಲ್ಲಾ ಎಡ ಪಕ್ಷಗಳು ಒಂದಾಗಿ ಪುನರ್ ಸಂಘಟನೆಯನ್ನು ರೂಪಿಸಿ ನಿಜವಾದ ಪರ್ಯಾಯ ಶಕ್ತಿಯನ್ನು ಕಟ್ಟಬೇಕಿದೆ.

ಈಗ ಭಾರತದಲ್ಲಷ್ಟೇ ಅಲ್ಲ ಜಗತ್ತಿನ ಎಲ್ಲ ಭಾಗಗಳಲ್ಲೂ ಮಾಕ್ಸ್‍ವಾದಕ್ಕೆ ಹಿನ್ನಡೆಯಾಗುತ್ತಿದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಅದನ್ನು ವರ್ತಮಾನದ ಸವಾಲುಗಳಿಗೆ ಎದುರಾಗಿ ಪುನರ್ ಕಟ್ಟುವ ಅಗತ್ಯತೆ ಇದೆ. ಅದರ ಮರು ಪರಿಷ್ಕರಣೆ ಮತ್ತು ಎಲ್ಲ ಎಡಪಕ್ಷ ಮತ್ತು ಸಂಘಟನೆಗಳ ಆತ್ಮಾವಲೋಕನ ಇಂದಿನ ಸಂದರ್ಭದ ಜರೂರತ್ತಾಗಿದೆ.

ಹಾಗಾಗಿ ಇಂದು ಮೇಲ್ಮಟ್ಟದ ಚರ್ಚೆ, ನೀತಿ ನಿರೂಪಣೆ ಸಾಕಾಗಲ್ಲ. ಅದನ್ನು ತಳಮಟ್ಟದಲ್ಲಿ ಜನರ ಅಗತ್ಯತೆಗಳ ಮೇಲೆ ಕೇಂದ್ರೀಕರಣ ಮಾಡುವ ಮೂಲಕ ಸಂಭವಿಸಬೇಕಿದೆ. ಎಡಪಕ್ಷಗಳು, ಸಂಘಟನೆಗಳು ಮತ್ತು ಬಿಡಿಬಿಡಿ ಚಳವಳಿಗಳು ಐಕ್ಯವಾಗುವ ಸಂದರ್ಭ ಈಗ ಬಂದಿದೆ. ಈ ದೇಶದ ಜನರ ಒಳಿತಿನ ದೃಷ್ಟಿಯಿಂದ ಈಗಲೇ ತೀವ್ರ ವೇಗದಲ್ಲಿ ಕಾರ್ಯ ಪ್ರವೃತ್ತವಾಗಬೇಕಿದೆ.

ಸಿಪಿಐ-ಸಿಪಿಎಂ ಪಕ್ಷಗಳು ವಿಲೀನವಾಗಿ ಮುನ್ನುಡಿ ಬರೆಯಲಿ – ಶಂಕರ್, ಕೇಂದ್ರ ಸಮಿತಿ ಸದಸ್ಯರು, ಸಿಪಿಐ ಎಂಎಲ್-ಲಿಬರೇಷನ್
ಸದ್ಯ ನಮ್ಮನ್ನು ಆಳುತ್ತಿರುವುದು ಜನವಿರೋಧಿ ಸರ್ಕಾರವಾಗಿದ್ದು ಅದು ಈಗ ಕಾರ್ಮಿಕ ವಿರೋಧಿ ನೀತಿ ತಂದು ಕಾರ್ಪೊರೇಟ್ ಶಕ್ತಿಗಳಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದೆ. ಭಾರತದ ಜನಪರ ಸಾಂಸ್ಕೃತಿಕ ಪರಂಪರೆಯನ್ನು ಕಿತ್ತು ಹಾಕಿ ಅಲ್ಲಿ ಬ್ರಾಹ್ಮಣಶಾಹಿ ವ್ಯವಸ್ಥೆಯನ್ನು ತರುವ ಉದ್ದೇಶದಿಂದಲೇ ಈ ಹೊಸ ಸರ್ಕಾರ ತನ್ನ ಅಜೆಂಡಾಗಳನ್ನು ಜಾರಿಗೆ ತರಲು ಹೊರಟಿದೆ. ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಈ ನಿಟ್ಟಿನಲ್ಲಿ ವಿಲೀನಕ್ಕೆ ಮುಂದಡಿ ಇಡುವ ಮೂಲಕ ಎಲ್ಲ ಎಡಪಕ್ಷಗಳನ್ನು ಒಂದಾಗಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಬೇಕಾಗಿದೆ.

ವಿಲೀನ ಸಾಧ್ಯವಿಲ್ಲ, ಜಂಟಿ ಹೋರಾಟ ಮಾಡಬಹುದು – ಕೆ.ಉಮಾ, ಎಸ್‍ಯುಸಿಐ

ಇಂದು ವಿವಿಧ ಎಡಪಕ್ಷಗಳು ದೇಶದಲ್ಲಿ ಅಸ್ತಿತ್ವದಲ್ಲಿವೆ. ಆದರೆ ಪರಿಪೂರ್ಣ ಎಡಪಕ್ಷ ಒಂದೇ ಇರಲು ಸಾಧ್ಯ. ಸಿದ್ದಾಂತದಲ್ಲಿ ಸಾಮ್ಯತೆಯಿದ್ದು, ಆದರೆ ಮಾರ್ಗಗಳು ಭಿನ್ನವಾಗಿದ್ದಾಗ ಅವು ಒಂದೇ ಆಗಲು ಸಾಧ್ಯವಿಲ್ಲ. ಸಿದ್ದಾಂತದಲ್ಲಿ ವಿಭಿನ್ನವಾಗಿರುವಾಗ ಅದು ಕಾರ್ಯರೂಪಕ್ಕೆ ಬರುವುದು ಸಾಧ್ಯವಿಲ್ಲ. ಹಾಗಾಗಿ ಇವತ್ತು ವಿಲೀನ ಎಂಬುದು ಪ್ರಾಕ್ಟಿಕಲ್ ಎನಿಸುವುದಿಲ್ಲ. ಇಂತಹ ಸಂದರ್ಭದಲ್ಲಿ, ಇವತ್ತಿನ ಕಾಲಘಟ್ಟದ ಅನಿವಾರ್ಯತೆಯಲ್ಲಿ ಇಶ್ಯೂಗಳ ಆಧಾರದಲ್ಲಿ ಒಂದು ಸಮಾನ ಅಜೆಂಡಾ ಇಟ್ಟುಕೊಂಡು ಒಟ್ಟಾಗಿ ನಡೆಯುವ, ಹೋರಾಡುವ ಅಗತ್ಯವಿದೆ.

ಬಂಡವಾಳಶಾಹಿ ವಿರೋಧಿ ನೆಲೆಯಲ್ಲಿ ಸಾಮಾಜಿಕ ಕ್ರಾಂತಿಯನ್ನು ಮುಂದಕ್ಕೆ ಒಯ್ಯಲು ಸಾಧ್ಯವಿದೆ. ಕಾರ್ಮಿಕ ವರ್ಗವನ್ನು ಅಧಿಕಾರಕ್ಕೆ ತರಲು ಈ ಮಾರ್ಗ ಸದ್ಯಕ್ಕೆ ಕಾರ್ಯಸಾಧುವಾಗಿದೆ ಎಂಬುದು ನಮ್ಮ ಪಕ್ಷದ ನಿಲುವಾಗಿದೆ. ಕ್ರಾಂತಿಕಾರಿ ಬದಲಾವಣೆ ಕೇವಲ ಪಾರ್ಲಿಮೆಂಟಿನಿಂದ ಮತ್ತು ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ಒತ್ತಾಸೆಯಾಗಿ ಜನರ ನಡುವೆ ನಿಂತು ಹೋರಾಟಗಳನ್ನು ಕಟ್ಟುವ ಮೂಲಕ ಈ ದೇಶದ ತುಳಿತಕ್ಕೆ ಒಳಗಾದವರಲ್ಲಿ ಆತ್ಮಸ್ಥೈರ್ಯ, ವಿಶ್ವಾಸ ತುಂಬಿ ಅವರನ್ನೆಲ್ಲ ಒಟ್ಟಿಗೆ ಕರೆದುಕೊಂಡುಹೋಗುವ ಅಗತ್ಯ ಇಂದಿನ ತುರ್ತು ಕರೆಯಾಗಿದೆ. ಆ ನಿಟ್ಟಿನಲ್ಲಿ ಎಡ ಸಿದ್ದಾಂತದ ಪಕ್ಷಗಳು, ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...