Homeಮುಖಪುಟಕುಂದಗೋಳ, ಚಿಂಚೋಳಿ ಉಪಚುನಾವಣೆ ಎರಡು, ಮೂರು ಪಕ್ಷಗಳಿಗೂ ಎಡರು-ತೊಡರು!

ಕುಂದಗೋಳ, ಚಿಂಚೋಳಿ ಉಪಚುನಾವಣೆ ಎರಡು, ಮೂರು ಪಕ್ಷಗಳಿಗೂ ಎಡರು-ತೊಡರು!

- Advertisement -
- Advertisement -

 | ಮಲ್ಲಿ |

ಎರಡು ಉಪಚುನಾವಣೆಗಳು ಈಗ ಉತ್ತರ ಕರ್ನಾಟಕದಲ್ಲಿ ಮೇ 19ರಂದು ಜರುಗಲಿವೆ. ಇವಕ್ಕೀಗ ಸರ್ಕಾರವನ್ನೇ ‘ನಿರ್ಧರಿಸಬಲ್ಲ’ ಚುನಾವಣೆಗಳು ಎಂಬ ಮಾನ್ಯತೆಯನ್ನು ನಮ್ಮ ಮೂರೂ ರಾಜಕೀಯ ಪಕ್ಷಗಳು ತಂದು ಕೊಟ್ಟಿವೆ. ಪಕ್ಷಾಂತರಕ್ಕೆ, ಕುಟುಂಬ ರಾಜಕಾರಣಕ್ಕೆ ಅಸ್ತು… ಭಿನ್ನಮತ ಶಮನಗೊಳಿಸಲು ಸುಸ್ತು… ಇದೆಲ್ಲದರ ಹೊರತಾಗಿ ‘ರೊಕ್ಕ’ವೇ ಇವೆರಡೂ ಕ್ಷೇತ್ರಗಳಲ್ಲಿ ಕುಣಿಯುತ್ತಿದೆಯಾದರೂ, ಮತದಾರ ಮಾತ್ರ ಗಲಿಬಿಲಿಗೊಂಡಿಲ್ಲ….

ಚಿಂಚೋಳಿ: ಪಕ್ಷಾಂತರದ ದಂಧೆ, ಲಂಬಾಣಿಗಳ ಹೆಸರು!
ಚಿಂಚೋಳಿಯ ಜನತೆ ಎದುರಿಸುತ್ತಿರುವ ಅಸಹ್ಯ ಇಲೆಕ್ಷನ್ ಇದು. ಇಲ್ಲಿ ಪಕ್ಷಾಂತರ ಮಾಡಿದವರಿಗೇ ಮಣೆ ಹಾಕಲಾಗಿದೆ. ಭಿನ್ನಮತ ಎತ್ತಿದ ಮಹಾಶಯರೂ ಪಕ್ಷಾಂತರಿಗಳೇ. ಬಿಜೆಪಿಯ ಮಾನಗೆಟ್ಟ ( ಸ್ವತ: ಪ್ರಧಾನಿಯೇ ತಮ್ಮ ಪಕ್ಷ ಸೇರಲು 40 ಟಿಎಂಸಿ ಸದಸ್ಯರು ರೆಡಿಯಾಗಿದ್ದು, ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳಿಯೂ ಬಚಾವಾಗುತ್ತಾರೆ ಎಂದರೆ, ಇದನ್ನು ಮಾನಗೆಟ್ಟ ಕೆಲಸ ಅನ್ನವುದಾದರೂ ಹೇಗೆ?) ‘ಆಪರೇಷನ್ ಕಮಲ’ದ ಕಾರಣಕ್ಕಾಗಿ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ.

ಸಂಸತ್ತಿನಲ್ಲಿ ಹಲವು ಸಲ ಪ್ರಧಾನಿ ಮತ್ತು ಅವರ ಸರ್ಕಾರದ ಬೆವರು ಇಳಿಸಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಲು ನಾನಾ ತಂತ್ರ-ಕುತಂತ್ರ ಮಾಡಿದ ಬಿಜೆಪಿ, ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್‍ನ ಡಾ. ಉಮೇಶ್ ಜಾಧವರನ್ನು ತನ್ನತ್ತ ಬರ ಮಾಡಿ-‘ಕೊಂಡು’ ಬೀಗಿತು. ಇಲ್ಲಿ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಹುದ್ದೆ ಪ್ರಾಪ್ತ ಮಾಡಲು ಶುರು ಮಾಡಿದ ಆಪರೇಷನ್ ಕಮಲ ಬಕ್ಕಬರಲು ಮಲಗಿತಾದರೂ, ಖರ್ಗೆ ವಿರುದ್ಧ ಒಬ್ಬ ಅಭ್ಯರ್ಥಿಯನ್ನು ತರಲು ಯಶಸ್ವಿಯಾಯಿತು.

ಈಗ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಸೋಲುವ ಎಲ್ಲ ಲಕ್ಷಣಗಳನ್ನೂ ಮುಖದ ಮೇಲೆ ಹೊತ್ತುಕೊಂಡೇ ತಿರುಗುತ್ತಿರುವ ಉಮೇಶ್ ಜಾಧವ್, ‘ಎಲ್ಲ ತುಂಬಿ’ ತಾವು ತೆರವು ಮಾಡಿದ ಕ್ಷೇತ್ರಕ್ಕೆ ತಮ್ಮ ಮಗ ಡಾ. ಅವಿನಾಶ್ ಜಾಧವರನ್ನು ಬಿಜೆಪಿ ಅಭ್ಯರ್ಥಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪರ ಶಿಷ್ಯ, ಮಾಜಿ ಸಚಿವ ಸುನೀಲ್ ವಲ್ಯಾಪುರೆಯವರನ್ನು ಹಿಮ್ಮೆಟ್ಟಿಸಿ ಉಮೇಶ್ ಜಾಧವ್ ತಮ್ಮ ಮಗನಿಗೆ ಟಿಕೆಟ್ ತಂದಿದ್ದಾರೆ! ಮುಖಭಂಗವಾದರೂ ತೆಪ್ಪಗೆ ಇರಬೇಕಾದ ಸ್ಥಿತಿಯಲ್ಲಿರುವ ಯಡಿಯೂರಪ್ಪ ಸುನೀಲ್ ವಲ್ಯಾಪುರೆ ಕಡೆ ಜೋಲು ಮುಖ ಮಾಡಿ ಮೌನವಾಗಿದ್ದಾರೆ.

ಆದರೆ, ಸುನೀಲ್ ವಲ್ಯಾಪುರೆ ಬಹಿರಂಗವಾಗಿ, ‘ನಾನು ಜಾಧವ್ ಪರ ಕೆಲಸ ಮಾಡುತ್ತೇನೆ’ ಎಂದಿದ್ದರೂ ಅದನ್ನು ನಂಬುವುದು ಕಷ್ಟವೇ. ಇದರ ಹೊರತಾಗಿ ಅವರು (ಬೇಕೆಂತಲೇ) ಹೇಳಿರುವ ಅಭಿಪ್ರಾಯವೊಂದು ರಾಜ್ಯದ ಕುಲಗೆಟ್ಟ ರಾಜಕಾರಣಕ್ಕೆ, ಅದಕ್ಕೂ ಮುಖ್ಯವಾಗಿ ಬಿಜೆಪಿಯ ನಿರ್ಲಜ್ಜತನಕ್ಕೆ ಕನ್ನಡಿ ಹಿಡಿಯುವಂತಿದೆ: ‘ನಾನು ಆಪರೇಷನ್ ಕಮಲಕ್ಕಾಗಿ ತ್ಯಾಗ ಮಾಡಿದ್ದೇನೆ. ಉಮೇಶ್ ಜಾಧವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲು ಕಾರಣವಾದ ಆಪರೇಷನ್ ಕಮಲದ ಬಗ್ಗೆ ಬೇರೆಯವರಲ್ಲಿ ತಪ್ಪು ಭಾವನೆ ಹುಟ್ಟಬಾರದು. ಆಪರೇಷನ್ ಕಮಲಕ್ಕೆ ಒಳಗಾದವರನ್ನು ಬಿಜೆಪಿ ನಿರ್ಲಕ್ಷಿಸುವುದಿಲ್ಲ ಎಂಬುದನ್ನು ತೋರಿಸಲು ನಾನು ಜಾಧವರಿಗೆ ಟಿಕೆಟ್ ಕೊಟ್ಟಿದ್ದನ್ನು ಸಮರ್ಥಿಸಿ ಅವರ ಪರ ನಿಂತಿದ್ದೇನೆ… ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜಾಧವರ ಕುಟುಂಬಕ್ಕೆ ಟಿಕೆಟ್ ನೀಡುವ ವಾಗ್ದಾನ ಮಾಡಿದ್ದರು. ಹಾಗಾಗಿ ನಾನು ಪಕ್ಷದ ನಿಲುವಿಗೆ ಬದ್ಧ… ಮುಂದೆ ಲೋಕಸಭಾ ಚುನಾವಣೆ ನಂತರ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬರಲಿರುವ ಶಾಸಕರಿಗೆ ಬಿಜೆಪಿ ಅನ್ಯಾಯ ಮಾಡುವುದಿಲ್ಲ ಎಂದು ತೋರಿಸಲು ನಾನು ತ್ಯಾಗ ಮಾಡಿದ್ದೇನೆ……’

ಎಲ್ಲಿಗೆ ಬಂತು ರಾಜ್ಯದ ರಾಜಕಾರಣ? ಯಾವ ಲೆವೆಲ್ಲಿಗೆ ಇಳಿಯಿತು ಬಿಜೆಪಿಯ ದಂಧೆ!
ಇನ್ನೊಂದು ಕಡೆ, ಡಿಎನ್‍ಎ ಮತ್ತು ವಂಶವಾಹಿನಿ ಆಧಾರದ ಮೇಲೆ ಟಿಕೆಟ್ ಕೊಡಲಾಗಲ್ಲ ಎಂದೆಲ್ಲ ‘ಆದರ್ಶ’ದ ಡ್ರಾಮಾ ಆಡಿದ್ದ ಬಿ.ಎಲ್. ಸಂತೋಷ್ ಎಂಬ ಮುಖೇಡಿ ನಾಯಕನೂ ಇಲ್ಲಿ ಬೆತ್ತಲಾಗಿದ್ದಾರೆ. ದಶಕಗಳ ಕಾಲ ಬಿಜೆಪಿಗೆ ದುಡಿದ ತೇಜಸ್ವಿನಿ ಅನಂತಕುಮಾರರನ್ನು ಧಿಕ್ಕರಿಸಿ, ‘ಪಾಲ್ತು ಪಾಪು’ ತೇಜಸ್ವಿಗೆ ಟಿಕೆಟ್ ನೀಡಿದ್ದ ಸಂತೋಷ್ ವಿರುದ್ಧ ಈಗ ಪಕ್ಷದಲ್ಲೇ ಅಸಮಾಧಾನವಿದ್ದರೂ ಅದನ್ನು ಬಹಿರಂಗವಾಗಿ ಹೊರ ಹಾಕದ ಸ್ಥಿತಿಯಲ್ಲಿ ಬಿಜೆಪಿಯ ನಾಯಕರಿದ್ದಾರೆ! ಏಕೆಂದರೆ ಸಂತು ಕೇಶವಕೃಪಾ ಅಖಾಡಕ್ಕೆ ಬಿಟ್ಟಿರುವ ‘ಲೀಡರ್’!
ಕೊಳ್ಳುವ ದಂಧೆಯಿಂದಲೇ ಕಳೆದು’ಕೊಳ್ಳುವ’ ಭಯ!

ಅವಿನಾಶ್ ಜಾಧವ್

ಈಗ ಚಿಂಚೋಳಿ ಕ್ಷೇತ್ರದ ಕಡೆ ಬಂದರೆ, ಅತ್ಯದಿಕ ಸಂಖ್ಯೆಯಲ್ಲಿರುವ ಲಂಬಾಣಿಗರು ತಾಂಡಾಗಳಲ್ಲಿ ನಿರ್ದಿಷ್ಟ ಆದಾಯವಿಲ್ಲದೇ ಬದುಕುತ್ತಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಗಿತು. ಗದಗ, ಧಾರವಾಡ, ವಿಜಯಪುರ, ಬಾಗಲಕೋಟೆಯಲ್ಲಿ ಇದು ಒಂದಷ್ಟು ಮಟ್ಟಿಗೆ ಫಲಕಾರಿಯಾಯಿತು. ಆದರೆ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಚಿಂಚೋಳಿಯ ತಾಂಡಾಗಳಲ್ಲಿ ಇನ್ನೂ ಎಷ್ಟೋ ನಾಗರಿಕ ಸೇವೆಗಳು ಅಲಭ್ಯ. ಕೆಲ ವರ್ಷಗಳ ಹಿಂದೆ ಇಲ್ಲಿನ ಕೊಂಚಾವರಂ ಸುತ್ತಲಿನ ತಾಂಡಾಗಳು ಅಭಿಜಾತ ಶಿಶುಗಳ ಮಾರಾಟದ ಜಾಲದಲ್ಲಿ ಸಿಕ್ಕಿ ನರಳಿದ್ದ ವರದಿಗಳು ಬಂದಿದ್ದವು. ಸರ್ಕಾರಗಳ ಬೇಕಾಬಿಟ್ಟಿ ಕ್ರಮಗಳಿಂದಾಗಿ ಈಗಲೂ ಅಲ್ಲಿನ ತಾಂಡಾಗಳಲ್ಲಿ ಇದು ನಡೆಯುತ್ತಲೇ ಇದೆ. 2013 ಮತ್ತು 2018ರಲ್ಲಿ ಕಾಂಗ್ರೆಸ್‍ನಿಂದ ಶಾಸಕರಾದ ಡಾ. ಉಮೇಶ್ ಜಾಧವ್ ತಮ್ಮದೇ ಸಮುದಾಯದ ಲಂಬಾಣಿಗಳ ಬಗ್ಗೆ ಹೇಳಿಕೊಳ್ಳುವ ಕೆಲಸ ಮಾಡಲೇ ಇಲ್ಲ.

ಈಗವರು, ರಾಜಕೀಯ ಅಥವಾ ಸಮಾಜಸೇವೆಯ ಸಂಪರ್ಕವೇ ಇಲ್ಲದ ತಮ್ಮ ಮಗ ಡಾ ಅವಿನಾಶ್ ಜಾಧವರನ್ನು ಶಾಸಕರನ್ನಾಗಿ ಮಾಡಲು ಹೊರಟಿದ್ದಾರೆ. ಎರಡು ಅವಧಿಯವರೆಗೆ ಶಾಸಕರಾಗಿದ್ದ ವೇಳೆ ಜನತೆಯ ಕುಂದುಕೊರತೆ ಬಗ್ಗೆ ವಿಚಾರಿಸದೇ ಬಿಜೆಪಿಯ ಗಾಳಕ್ಕೆ ಬಿದ್ದು ರೆಸಾರ್ಟುಗಳಲ್ಲಿ ವಾಸ್ತವ್ಯ ಮಾಡುತ್ತ ಕಾಲ ಹಾಕಿದವರು. ಕೊನೆಗೆ ಖರ್ಗೆ ವಿರುದ್ಧ ಕ್ಯಾಂಡಿಡೇಟ್ ಸಿಗದೇ ಇದ್ದಾಗ ಈ ಜಾಧವರನ್ನು ದೊಡ್ಡ ಡೀಲ್ ಮೂಲಕ ಬಿಜೆಪಿಗೆ ತಂದು ಕಲಬುರ್ಗಿಯ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅದರ ಪ್ರತಿಫಲವಾಗಿ ಮಗನಿಗೆ ಟಿಕೆಟ್ ತಂದಿದ್ದಾರೆ!
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪ ಶಿಷ್ಯ, ಮಾಜಿ ಸಚಿವ ಸುನೀಲ್ ವಲ್ಯಾಪುರೆ ಕೂಡ ಲಂಬಾಣಿ ಸಮುದಾಯದವರೇ. 2008ರಲ್ಲಿ ಗೆದ್ದು ಸಚಿವರಾಗಿದ್ದ ವಲ್ಯಾಪುರೆ 2013ರಲ್ಲಿ ಕೆಜೆಪಿಯಿಂದ, 2018ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‍ನ ಉಮೇಶ್ ಜಾಧವ್ ವಿರುದ್ಧ ಸೋತಿದ್ದರು.

ಸುಭಾಷ್ ರಾಠೋಡ್

ಕಾಂಗ್ರೆಸ್ ಕೂಡ ಪಕ್ಷಾಂತರಕ್ಕೆ ಮಣೆ ಹಾಕಿದೆ. ಆದರೆ ಅದು ಲಂಬಾಣಿ ಸಂಘಟನೆಯಲ್ಲಿ ಪರಿಣಾಮಕಾರಿ ಕೆಲಸ ಮಾಡಿರುವ ಸುಭಾಷ್ ರಾಠೋಡರಿಗೆ ಟಿಕೆಟ್ ನೀಡಿದೆ. ಸುಭಾಷ್ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಅದರ ಟಿಕೆಟ್ ಪಡೆಯುವಲ್ಲಿ ವಿಫಲರಾಗಿ ಕಾಂಗ್ರೆಸ್ ಕಡೆ ಬಂದವರೇ! ಮೊದಲು ಕಾಂಗ್ರೆಸ್‍ನಲ್ಲಿ ಮಂತ್ರಿಯಾಗಿದ್ದ, ನಂತರ ಬಿಜೆಪಿ ಸೇರಿದ್ದ ಬಾಬುರಾವ್ ಚೌಹಾಣ್ ಇತ್ತೀಚೆಗಷ್ಟೇ ಮತ್ತೆ ಕಾಂಗ್ರೆಸ್‍ಗೆ ಬಂದು ಟಿಕೆಟ್ ಬಯಸಿದ್ದರು. ಈಗ ನಿರಾಶೆಗೊಂಡಿರುವ ಇವರು ಮುನಿಸಿಕೊಂಡಿದ್ದಾರೆ.

ಇಲ್ಲಿ ಲಂಬಾಣಿ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಎರಡೂ ಪಕ್ಷಗಳೂ ಲಂಬಾಣಿ ಅಭ್ಯರ್ಥಿಗಳನ್ನೇ ಹಾಕಿವೆ. ಎಸ್‍ಸಿ ಮೀಸಲು ಕ್ಷೇತ್ರವಾದ ನಂತರ ಮೂರು ಸಲ ಗೆದ್ದವರು, ರನ್ನರ್ ಅಪ್ ಆದವರೂ ಲಂಬಾಣಿ ನಾಯಕರೇ. ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಇತರ ದಲಿತರಿಗೆ ಯಾವ ಪಕ್ಷವೂ ಮಹತ್ವ ನೀಡಿಲ್ಲ. ಖರ್ಗೆ ಕಾರಣದಿಂದ ದಲಿತರು ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದಾರೆ. ಈಗ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಲಿಂಗಾಯತರು ಮತ್ತು ಮುಸ್ಲಿಮರ ಮತಗಳು ನಿರ್ಣಾಯಕ.

ಕಾಂಗ್ರೆಸ್‍ನ ಲೋಕಲ್ ಸಚಿವರಾದ ಪ್ರಿಯಾಂಕ್ ಖರ್ಗೆ, ರಹಿಂಖಾನ್, ರಾಜಶೇಖರ್ ಪಾಟೀಲ್, ಜೆಡಿಎಸ್ ಸಚಿವ ಕಾಶೆಪ್ಪ ಬಂಡೆಂಪುರ್ ಅಲ್ಲದೇ ಬಳ್ಳಾರಿಯ ಸಚಿವ ತುಕಾರಾಂ ಕೂಡ ಕಾಂಗ್ರೆಸ್ ಅಭ್ಯರ್ಥಿಯ ಪರ ಹಾರ್ಡ್‍ವರ್ಕ್ ಮಾಡುತ್ತಿದ್ದಾರೆ. ಆಪರೇಷನ್ ಕಮಲದ ಮೂಲಕ ಹೆಸರು ಬೇನಾಮ್ ಮಾಡಿಕೊಂಡಿರುವ ಉಮೇಶ್ ಜಾಧವ್ ಈಗ ಮಗನಿಗಾಗಿ ಮತ ಕೇಳಲೂ ನೈತಿಕತೆ ಕಳೆದುಕೊಂಡಿದ್ದಾರೆ.
ಸದ್ಯಕ್ಕೆ ಇಲ್ಲಿ ಕಾಂಗ್ರೆಸ್ ಈ ಸ್ಥಾನವನ್ನು ಉಳಿಸಿಕೊಳ್ಳುವ ಲಕ್ಷಣಗಳಿದ್ದು, ಹಾಗಾದರೆ, ಬಿಜೆಪಿಗೆ ಆಪ್ ಕಮಲಕ್ಕಾಗಿ ಖರ್ಚು ಮಾಡಿದ ಕೋಟಿಗಳು ವ್ಯರ್ಥವಾದಂತೆಯೇ…..

ಕುಂದಗೋಳ: ಮೆಣಸಿನಕಾಯಿ ಬೆಳೆವ ಕರಿನೆಲದಲ್ಲಿ ರಾಜಕೀಯದ ಉರಿ…
ಕಾಂಗ್ರೆಸ್ ಶಾಸಕ ಚನ್ನಬಸಪ್ಪ ಶಿವಳ್ಳಿ (ಸಿ.ಎಸ್ ಶಿವಳ್ಳಿ) ನಿಧನದ ಕಾರಣಕ್ಕೆ ಇಲ್ಲಿ ಮತ್ತೆ ಉಪ ಚುನಾವಣೆ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಂತೆ ಅನುಕಂಪದ ಲಾಭ ಪಡೆಯಲು ಇಲ್ಲಿ ಕಾಂಗ್ರೆಸ್ ಶಿವಳ್ಳಿಯವರ ಪತ್ನಿ ಕುಸುಮಾವತಿಯವರಿಗೆ ಟಿಕೆಟ್ ನೀಡಿದೆ. ಈ ಕಾರಣಕ್ಕೆ ಕಾಂಗ್ರೆಸ್‍ನಲ್ಲಿ ಭಿನ್ನಮತ ಶುರುವಾಗಿ ಏಳೆಂಟು ಜನ ನಾಮಪತ್ರ ಸಲ್ಲಿಸಿದ್ದಾರೆ. ಕುಸುಮಾ ಅವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಸಿದ್ದರಾಮಯ್ಯ ಭಿನ್ನಮತ ಶಮನ ಮಾಡಲು ಎಲ್ಲ ಯತ್ನ ಮಾಡಿ ಹೋಗಿದ್ದಾರೆ.

ಸಿ.ಎಸ್ ಶಿವಳ್ಳಿ

ಇಲ್ಲಿ ಮುಖ್ಯವಾಹಿನಿಗಳು ಗುರುತಿಸದ ಒಂದಂಶ ಎಂದರೆ, ಸುಮಲತಾ ಅಂಬರೀಷ್‍ಗೆ ಕಾಂಗ್ರೆಸ್ ಬೆಂಬಲಿಸಬೇಕಿತ್ತು ಎನ್ನುವ ವಾದವೊಂದು ಈಗಲೂ ತೇಲಾಡುತ್ತಿದೆ. ಅದಕ್ಕೆ ನಿಖಿಲ್ ಎಂಬ ವಂಶದ ಕುಡಿಯನ್ನು ಜೆಡಿಎಸ್ ಕಣಕ್ಕೆ ದೂಕಿದ್ದೂ ಕಾರಣವಿರಬಹುದು. ಅದು ಬಿಡಿ, ಇಲ್ಲಿ ಸುಮಲತಾರಿಗಿಂತ ಕುಸುಮಾ ಹೇಗೆ ಭಿನ್ನವೆಂದರೆ, ಸುಮಲತಾರಂತೆ ಯಾವ ಲೈಮ್‍ಲೈಟೂ ಇಲ್ಲದೇ ಕುಸುಮಾ ಕುಂದಗೋಳದ ಜನತೆಯ ಪ್ರೀತಿಗೆ ಪಾತ್ರವಾಗಿದ್ದರು. ಕುಂದಗೋಳದ ಯರಗುಪ್ಪಿ ನಿವಾಸಿ ಸಿ.ಎಸ್ ಶಿವಳ್ಳಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹುಬ್ಬಳ್ಳಿಯಲ್ಲೂ ಒಂದು ಮನೆ ಮಾಡಿದ್ದರು. ಆ ಮನೆಗೆ ಶಾಸಕರನ್ನು ಭೇಟಿಯಾಗಲು ಬಂದವರಿಗಷ್ಟೇ ಅಲ್ಲ, ಶಾಸಕರ ಜೊತೆ ಭಿನ್ನಮತ ವ್ಯಕ್ತ ಮಾಡಲು, ಜಗಳ ಮಾಡಲು ಬಂದ ಕುಂದಗೋಳದ ಜನತೆಗೆ ಉಪಹಾರ, ಊಟ ಮತ್ತು ವಸತಿ ವ್ಯವಸ್ಥೆ ಮಾಡುವ ಮೂಲಕ ಕುಸುಮಾ ‘ಗೃಹಿಣಿ’ಯಾಗಿಯೇ ತಮ್ಮ ಜನಸೇವೆ ಮಾಡಿದ್ದು ಬಹುತೇಕ ಮಾಧ್ಯಮಗಳಿಗೆ ಗೊತ್ತಿಲ್ಲ ಎನ್ನುವುದನ್ನು ಅಲ್ಲಿಯ ಮುಖ್ಯ ವರದಿಗಾರರು ಹೇಳುತ್ತಾರೆ.

ಹಾಗಂತ ಪಾರ್ಟಿಯ ಇತರ ಹಿರಿಯ ಕಾರ್ಯಕರ್ತರನ್ನು ತಳ್ಳಿ ಕುಸುಮಾಗೆ ಟಿಕೆಟು ಕೊಡಬೇಕೆಂದೇನೂ ಅವರ ವಾದವಲ್ಲ. ಆದರೆ, ಸುಮಲತಾಗಿಂತ ಕುಸುಮಾವತಿ ಶಿವಳ್ಳಿ ಬೆಟರ್ ಎಂಬುದನ್ನು ಅವರು ಸೂಚ್ಯವಾಗಿ ಹೇಳಿದರು.

ಅದಿರಲಿ, ರಾಜಕೀಯಕ್ಕೆ ಬಂದರೆ, ನಿಕಟಪೂರ್ವ ಶಾಸಕ, ಸಚಿವ ಶಿವಳ್ಳಿ ನಿಧನ ಹೊಂದಿದಾಗ ಜನಪ್ರಿಯ ಮಾಧ್ಯಮಗಳು ಬರೆದಂತೆ ಅವರು ಸರಳ ಜೀವಿಯಾಗಿದ್ದರು. ಎಷ್ಟು ಸಾಧ್ಯವೋ ಅಷ್ಟು ಜನರ ಕಷ್ಟಗಳಿಗೆ ಮಿಡಿಯುತ್ತಿದ್ದರು. ಜನಪ್ರಿಯ ಮಾಧ್ಯಮಗಳು ಮರೆತ ವಿಷಯವೇನೆಂದರೆ, ಎಸ್ ಎಂ ಕೃಷ್ಣ ಅವಧಿಯಲ್ಲಿ ಎಚ್.ಕೆ. ಪಾಟೀಲರನ್ನು ‘ಹಣಿಯಲು’ ಉತ್ತರ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಛೂ ಬಿಟ್ಟಿದ್ದಾಗ ಅದಕ್ಕೆ ಬಲಿಯಾದ 4-5 ಕಾಂಗ್ರೆಸ್ ರಾಜಕಾರಣಿಗಳಲ್ಲಿ ಶಿವಳ್ಳಿ ಕೂಡ ಒಬ್ಬರು… ಆದರೆ ಹೀಗೆ ಈ ಬಲೆಗೆ ಬಿದ್ದ ನವಲಗುಂದದ ಮಾಜಿ ಶಾಸಕ ಕೆ.ಎನ್ ಗಡ್ಡಿ, ಹುಬ್ಬಳ್ಳಿಯ ರೌಡಿ ಎಲಿಮೆಂಟು, ಹು-ಧಾ ಕಾರ್ಪೊರೇಷನ್ ಮಾಜಿ ಅಧ್ಯಕ್ಷ ಅನಿಲ್‍ಕುಮಾರ್ ಪಾಟೀಲ, ಗದಗಿನ ಚಿಲ್ಟು ಅನಿಲ್ ಮೆಣಸಿನಕಾಯಿ ನಂತರದ ಕಾಲಘಟ್ಟದಲ್ಲಿ ರಾಜಕೀಯವಾಗಿ ಬೆಳೆಯಲೇ ಇಲ್ಲ. ಆದರೆ, ಆ ವ್ಯೂಹದಿಂದ ಹೊರಬಂದ ಶಿವಳ್ಳಿ ಮತ್ತೆ ಶಾಸಕರಾದರು, ಮಂತ್ರಿಯೂ ಆದರು. ತಮ್ಮ ತಪ್ಪುಗಳ ಅರಿವು ಅವರಿಗೆ ಇತ್ತು. ಅದಕ್ಕಿಂತ ಮುಖ್ಯವಾಗಿ ಶಿವಳ್ಳಿ ಜನಸ್ನೇಹಿಯಾಗಿದ್ದರು.

ಕುಸುಮಾ ಶಿವಳ್ಳಿ

ಈಗ ಅವರ ಪತ್ನಿ ಇಲ್ಲಿ ಅಭ್ಯರ್ಥಿ. ಬಿಜೆಪಿಯಿಂದ ಎಸ್ ಐ ಚಿಕ್ಕನಗೌಡರ್ ಅಭ್ಯರ್ಥಿಯಾಗಿದ್ದು, ಇವರು ಯಡಿಯೂರಪ್ಪನವರ ಖಾಸಾ ಸಂಬಂಧಿ, ಬೀಗ. ಯಡಿಯೂರಪ್ಪ ವಿರೋಧಿಯಾದ ಸಂಸದ ಪ್ರಹ್ಲಾದ್ ಜೋಶಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣ ಎಂದು ಚಿಕ್ಕನಗೌಡರ್ ಧ್ವನಿ ಎತ್ತುತ್ತಲೇ ಬಂದಿದ್ದರು. ಅಲ್ಲಿ ಚಿಂಚೋಳಿಯಲ್ಲಿ ಯಡಿಯೂರಪ್ಪ ಶಿಷ್ಯ ಸುನೀಲ್ ವಲ್ಯಾಪುರೆಗೆ ಟಿಕೆಟ್ ತಪ್ಪಿಸಿದ ಸಂತೋಷ್-ಜೋಶಿ ಗ್ಯಾಂಗ್‍ಗೆ ಇಲ್ಲಿ ಯಡಿಯೂರಪ್ಪ ಬೀಗ ಚಿಕ್ಕನಗೌಡರಿಗೆ ಟಿಕೆಟ್ ತಪ್ಪಿಸಲು ಆಗಿಲ್ಲ. ಆದರೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಂ.ಎಸ್ ಅಕ್ಕಿ, ಎಂ.ಆರ್ ಪಾಟೀಲ್ ಸೆಟಗೊಂಡಿರುವ ಲಕ್ಷಣಗಳಿವೆ…

ಇಲ್ಲಿ ಕ್ರಮವಾಗಿ ಕುರುಬರು, ಲಿಂಗಾಯತರು ಮತ್ತು ಮುಸ್ಲಿಮರ ಮತಗಳು ಜಾಸ್ತಿಯಿವೆ. ಸಿದ್ದರಾಮಯ್ಯ ಈ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈ ಕ್ಷೇತ್ರದ ಹೊಣೆಯನ್ನು ಡಿಕೆ ಶಿವಕುಮಾರ್‍ಗೆ ವಹಿಸಲಾಗಿದ್ದು, ಕುರುಬ ಸಮುದಾಯದ ಶಾಸಕ ಎಂ.ಟಿ.ಬಿ ನಾಗರಾಜ್, ಲಿಂಗಾಯತ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲರಿಗೂ ಜವಾಬ್ದಾರಿ ನೀಡಲಾಗಿದೆ.

ಚಿಕ್ಕನಗೌಡರ್

ಇಲ್ಲಿನ ಫಲವತ್ತಾದ ಕರಿಮಣ್ಣಿನ ಭೂಮಿಯಲ್ಲಿ ಉತ್ತಮ ದರ್ಜೆಯ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಯಾವುದನ್ನು ಬ್ಯಾಡಗಿ ಮೆಣಸಿನಕಾಯಿ ಅಂತಿವೋ ಅದು ಈ ನೆಲದಲ್ಲೇ ಬೆಳೆಯುವಂತದ್ದು. ಆದರೆ ಹಸಿ ಮೆಣಸಿನ ಕಾಯಿಯನ್ನು ಕೆಂಪು ಮಾಡಿ ಬ್ಯಾಡಗಿ ಮಾರುಕಟ್ಟೆಗೆ ಒಯ್ಯುವ ರೈತರು ಅಲ್ಲಿ ಕಮೀಷನ್ ಕೊಟ್ಟೇ ಸೊರಗುತ್ತ ಬದುಕಿಯೂ ಸಾಯುತ್ತಿದ್ದಾರೆ.. ಈ ಭಾಗದ ಯಾವ ಜನಪ್ರತಿನಿಧಿಗೂ ಈ ಬಗ್ಗೆ ಗಂಭೀರ ಕಾಳಜಿಯಿಲ್ಲ…

ಸದ್ಯದ ಚುನಾವಣೆಗೆ ಬರುವುದಾದರೆ, ಅನುಕಂಪವಷ್ಟೇ ಅಲ್ಲ, ಅವರ ಉದಾರ ತಾಯಿ ಹೃದಯವೂ ಕುಸುಮಾ ಶಿವಳ್ಳಿಯವರ ಕೈ ಹಿಡಿಯಲಿವೆ ಎನ್ನುತ್ತಾರೆ ಜನ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...