Homeಅಂಕಣಗಳುಐ ಯಾಮ್ ಬಾಯ್ ಕಟಿಂಗ್ ಯು

ಐ ಯಾಮ್ ಬಾಯ್ ಕಟಿಂಗ್ ಯು

- Advertisement -
- Advertisement -

ಯಾಹೂ|

ಗತಿಸಿಹೋದ ಗುಂಡುರಾಯರಂತೆ ಕುಮಾರಣ್ಣನವರು ಕೂಡ ಕರ್ನಾಟಕದ ಜನಾಭಿಪ್ರಾಯವಿಲ್ಲದ ಮುಖ್ಯಮಂತ್ರಿ! ಅಂದರೆ ಸ್ಪರ್ಧಿಸಿದ್ದ ಮೂರು ಪಾರ್ಟಿಗಳ ಪೈಕಿ. ಕೇವಲ ಮುವ್ವತ್ತೇಳು ಕ್ಷೇತ್ರ ಕುಮಾರಣ್ಣನನ್ನ ಒಪ್ಪಿವೆ. ಆದರೇನು ಅವರೇ ಮುಖ್ಯಮಂತ್ರಿಯಾಗಿ ಮೆರೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಮುಗಿದಿದೆ. ದುಸ್ವಪ್ನವೊಂದು ಕಾಡಿದಂತೆ, ಅದರ ಫಲಿತಾಂಶ ಮುಂದಿನ ತಿಂಗಳು 23ರವರೆಗೆ ತನ್ನ ಅವಧಿ ವಿಸ್ತರಿಸಿಕೊಂಡಿದೆಯಲ್ಲಾ. ಈ ಸಮಯದಲ್ಲಿ ಅಪಾಯಕಾರಿ ದೇಹವೊಂದಿರುವ ಅವರಿಗೆ ಸಾಂತ್ವನ ಹೇಳಿ, ಐದು ವರ್ಷ ಪೂರ್ತಿಯ ಆಯಸ್ಸು ಕೋರುವುದು ನಮ್ಮ ಕರ್ತವ್ಯವೆಂದು ಫೋನ್ ಮಾಡಲಾಗಿ ರಿಂಗಾಯ್ತು….
ರಿಂಗ್ ಠೋನ್: `ರಾಧಿಕೆ ನಿನ್ನ ಸರಸವಿದೇನೇ ರಾಧಿಕೆ ನಿನ್ನ ನಿನ್ನ ಸರಸವಿದೇನೆ……..’ “ಹಲೋ ಯಾರು”
“ನಾನು ಸಾರ್ ಯಾಹೂ.”
“ಐ ಯಾಮ್ ಬಾಯ್ ಕಾಟಿಂಗ್ ಯು.”
“ವೈ ಸಾರ್.”
“ಯು ಆಲ್‍ಸೊ ಪ್ರೆಸ್‍ಮ್ಯಾನ್.”
“ನೋ, ನೊ ಅಯಾಮ್ ನಾಟ್ ದಟ್ ಟೈಪ್ ಆಫ್ ಪ್ರೆಸ್ ಮ್ಯಾನ್.”
“ನೀವ್ಯಲ್ಲ ಒಂದೇ ಕಂಡ್ರೀ.”
“ಸಾರಿ ಸಾರ್, ನಾನು ರಂಗನಾಥ ಭಾರದ್ವಾಜ, ಮಾದೇವ ಪ್ರಸಾದ್ ತರ ಅಲ್ಲ. ಮೊದಲಿಂದ ನಿಮ್ಮ ಹಿತೈಶಿ.”
“ಏನು ಹಿತೈಸಿನೊ ಏನೊ, ಅದೇನು ಬರಕತ್ತಿರೊ ಬರಕಳಿ ನನಿಗೆ ಟೈಮಿಲ್ಲ ಈಗ.”
“ಸಾರ್ ಆ ಮೋದಿನೂ ಪತ್ರಕರ್ತರ ಜೊತೆ ಟೈಂ ವೇಸ್ಟ್ ಮಾಡಲಿಲ್ಲ, ನೀವೂ ಅಂಗೇ ಅಂತೀರಲ್ಲ ಸಾರ್.”
“ಆ ಮೋದಿ ಅನತಕ್ಕಂತ ವ್ಯಕ್ತಿ ಬೇರೆ, ನಾನು ಬೇರೆ ಕಂಡ್ರಿ, ಆತ ಪತ್ರಕರ್ತರನ್ನ ಬೇಟಿಮಾಡದೇ ಇದ್ರು, ಅವರೆಲ್ಲಾ ಅವರ ಪರವಾಗೇ ಬರದ್ರು. ಈಗ್ಲು ಬರಿತಾ ಅವುರೆ, ಅಂದ್ರೆ ನೀವೆ ತಿಳಕಳಿ!”
“ಸಾರ್ ಇಪ್ಪತ್ತೈದು ವರ್ಷದ ಹಿಂದೆ ಲಂಕೇಶ್ ಇದನ್ನೇ ಹೇಳಿದ್ರು ಸಾರ್.”
“ಏನೇಳಿದ್ರು.”
“ಬ್ರಾಹ್ಮಣ ಪತ್ರಕರ್ತರ ಅನಾಹುತ ಮುಂದೆ ಜರುಗ್ತವೆ ಎಚ್ಚರ ಅಂದಿದ್ರು.’’
“ಬ್ರಾಂಬ್ರು ಅಂತ ಅಲ್ಲ, ಹೊಟ್ಟೆಪಾಡಿನ ಪತ್ರಕರ್ತರಿಗೆ ಜಾತಿ ಇಲ್ಲ. ಮಂಡ್ಯದಲ್ಲಿ ನಮ್ಮ ಜಾತಿಯೋರೆ ಬರದ್ರು.”
“ಮೂರ್ಖರು ಸಾರ್ ಅವರು, ನೀವು ಅನಾರೋಗ್ಯದಲ್ಲಿದೀರಿ, ಯಾವ ಸಮಯದಲ್ಲಿ ಏನೋ ಅಂತೇಳಿ ನನ್ನ ಆಸರೆಗೆ ನನ್ನ ಮಗ ಬಂದವುನೆ ಅಂದ್ರೂ, ಮನಸಿಗೆ ಬಂದಿದ್ನೆ ಬರದ್ರು.”
“ಮಾನವೀಯತೆ ಇಲ್ದೆ ಇರತಕ್ಕಂತವರು ಪತ್ರಕರ್ತರಾದರೆ, ಈ ತರ ಬರೀತಾರೆ ಅನ್ನೊ ಅಭಿಪ್ರಾಯ ನನಿಗೆ ಮನದಟ್ಟಾಗದಕ್ಕೆ ಬಹಳ ಸಮಯ ಹಿಡೀತು.”
“ಎಲೆಕ್ಷನ್ನಿಗೆ ನಿಲ್ಲೋಕೆ ಮಂಡ್ಯದಲ್ಲೇ ಯಾರೂ ಇರಲಿಲ್ಲವೇ ಅಂತ ಬರದ್ರು ಸಾರ್.”
“ನೀವೆ ಹೇಳಿ ಯಾಹು, ಮಂಡ್ಯದಲ್ಲಿ ನಿಖಿಲ್ ತರ ಅಭ್ಯರ್ಥಿ ಇದ್ನಾ!”
“ದೇವರಾಣೆ ಇಲ್ಲ ಸಾರ್, ಜಾಗ್ವಾರಲ್ಲಿ ಪೈಟ್ ಎಷ್ಟು ಚೆನ್ನಾಗಿ ಮಾಡ್ಯವುನೆ, ಅವುನ ತರ ಪಂಚೆ ಉಡಕ್ಕೆ ಬತ್ತದ ಸಾ, ಆ ಮಂಡೆದವುಕೆ.”
“ನನ್ನ ಮಗ ಅನ್ನತಕ್ಕಂತ ಅಭಿಪ್ರಾಯವನ್ನ ಬದಿಗಿಟ್ಟು ನೋಡದಾದ್ರೆ, ಈ ವಯಸಿಗೆ ಅವುನು ಮಂಡ್ಯವನ್ನ ನಿಭಾಯಿಸೊ ಶಕ್ತಿಯನ್ನ ಪಡಕಂಡಿರತಕ್ಕಂತದನ್ನ ನೋಡಿ, ನಾವು ಅಭ್ಯರ್ಥಿ ಮಾಡದಕ್ಕೆ ಏನು ತೀರ್ಮಾನ ತಗಂಡೋ, ಅದಕ್ಕೆ ಮಂಡ್ಯದ ಜನಗಳೇ ಒಪ್ಪಿಗಂಡ್ರು.”
“ನಿಜ ಸಾರ್, ಎಷ್ಟು ಮುಗ್ದರು ಅಂದ್ರೆ, ನಿಮಗೆಲ್ಲಾ ಸೇಬಿನ ಹಾರ ಹಾಕಿದಾಗ, ಆ ಸೇಬಣ್ಣನ್ನ ಜನ ನೋಡ್ತಾಯಿದ್ದದ್ದು, ಆನಂತ್ರ ಹಾರನ ಚಿಂದಿ ಉಡಾಯಿಸಿ ತಿಂದಿದ್ದು, ಇನ್ನೂ ನನ್ನ ಕಣ್ಣೊಳಗದೆ ಸಾ. ಅಂಥವರ ಮನಸನ್ನ ಈ ಪತ್ರಕರ್ತರು ಅರ್ಥಮಾಡಿಕೊಬೇಕಾಗಿತ್ತು.”
“ಅದಿರ್ಲಿ ಕಂಡ್ರೀ, ಜಾಗ್ವಾರ್ ಸಿನಿಮಾ ಸಿಡಿ ಬಿಡುಗಡೆ ಮಾಡ್ತಕಂತ ವಿಷಯದಲ್ಲಿ ಏನು ಸ್ಟೇಡಿಯಂ ತುಂಬ ಜನ ಸೇರಿಕಂಡಿದ್ರು, ಆ ಸಂದರ್ಭದಲ್ಲಿ ನನಿಗೆ ನಮ್ಮ ನಿಖಿಲ್ ಕಾಣಿಸಲಿಲ್ಲ. ಆಗ ಎಲ್ಲಿದ್ದೀಯಪ್ಪಾ? ಅಂದೆ. ಅದು ತಪ್ಪೇನ್ರಿ, ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಇನ್ನು ತೋರುಸ್ತಾ ಅವುರೆ.”
“ಅದಕ್ಕೆ ನೀವು ಸರಿಯಾದುತ್ರ ಕೊಟ್ರಿ ಸಾರ್.”
“ಇನ್ನೇನು ಮತ್ತೆ, ನಿಖಿಲ್ ಎಲ್ಲಿದ್ದೀಯಪ್ಪಾ ಅಂದೋರಿಗೆ ನಿಮ್ಮ ಹೃದಯದಲ್ಲವುನೆ ಅಂದ್ರಾಯ್ತು.”
“ನಿಜ ಸಾರ್, ಸಗಣೀಲಿ ಹೊಡದೋರಿಗೆ ನೀವು ಬೆಲ್ಲದಲ್ಲಿ ಹೊಡುದ್ರಿ. ರಿಯಲಿ ಗ್ರೇಟ್ ಸಾರ್.”
“ಇನ್ನೊಂದೆರಡು ಕಳ್ಳೆತ್ತುಗಳಿಗೂ ಸರಿಯಾದ ಉತ್ರ ಕೊಟ್ಟಿದ್ದಿನಿ, ನಾನು ಸಿನುಮ ತಗದ್ರಲವೇನ್ರಿ ಇವುರು ಹೀರೋಗಳಾಗಿ ಮರೆಯೋದು.”
“ಯಾವ ಯಾವ ಸಿನುಮ ತಗದ್ರಿ.”
“ಮರತೋಗ್ಯವೆ ಕಂಡ್ರಿ, ಜಾಗ್ವಾರ್, ಸೀತೆರಾಮನ್ ಕಲ್ಯಾಣ ಮಾತ್ರ ನೆನಪಲ್ಲವೆ.”
“ಇರಲೇಬೇಕಲ್ಲ ಸಾ, ನಿಮ್ಮ ಮಗನ ಸಿನುಮಗಳು ಅಲುವೆ! ನಾನೊಂದು ಸಿನುಮ ನೋಡಿದ್ದೆ ಸಾ ನಿಮ್ದು.”
“ಯಾವುದ್ರಿ.”
“ಜಿತೇಂದ್ರ ಅಂತ ಉಪೇಂದ್ರನ್ನಾಡಿಕಂಡು ತಗದಿದ್ರಲ್ಲ, ಆ ಕೋತಿ ಮುಂಡೇದು ಜಗ್ಗೇಶ್ ಚೆನ್ನಾಗಿ ಮಾಡಿತ್ತು ಸಾರ್”
“ಅವನು ವಳ್ಳೆ ಆಕ್ಟರು ಕಂಡ್ರೀ.”
“ಮತ್ತೆ ಜೆಡಿಎಸ್ಸೆಲ್ಯಾಕೆ ಸಾರ್ ಮಡಿಕಳ್ಳಿಲ್ಲ ಅವುನ್ನ.”
“ಅವು ಯಾವಾಗ್ಲು ಕೈ ಬಾಯಿ ನೋಡ್ತವೆ ಕಂಡ್ರಿ. ಅಂಥವು ಕಂಡ್ರೆ ನಮ್ಮ ತಂದೆಗಾಗಲ್ಲ. ಅದ್ಕೆ ಹೋಗಿ ಬಿ.ಜೆ.ಪಿ ಸೇರಿಕಂಡ.”
“ಹೋಗ್ಲಿ ಬುಡಿ ಸಾ, ಅಂಥವಲ್ಲಿಗೆ ಸರಿ. ಈ ಯಶ್ ಮತ್ತೆ ದರ್ಶನ್, ಸುಮಲತ ಗಾಡಿ ಯಳಿಯಕ್ಕೆ ಸರಿ.”
“ಅದಕ್ಕೂ ಲಾಯಕ್ಕಲ್ಲ ಕಂಡ್ರಿ ಅವು. ಅವುರಾಡತಕ್ಕಂತ ಮಾತಿಗೆ ನನ್ನ ಅಭಿಮಾನಿಗಳು ಸಿಟ್ಟಾಗಿ ಸರಿಯಾಗಿ ಬುದ್ದಿ ಕಲುಸಕ್ಕೆ ಮಾಡಿದ್ರು. ನಾನೇ ಅವಾಯ್ಡು ಮಾಡಿದೆ.”
“ನಿಜ ಸಾರ್, ಆಗ ನೀವೊಂದು ಸೂಚನೆ ಕೊಟ್ಟ ಕೂಡ್ಳೆ, ಆ ಸಿದ್ದರಾಮಯ್ಯನ ಅಹಿಂದ ಸಭೆ ಏರ್ಪಡಿಸುತ್ತಿದ್ದೋರ ಕಾರನ್ನೇ ಸುಟ್ಟಾಕಿದ್ರು ನಿಂ ಅಭಿಮಾನಿಗಳು, ನಾನೆ ನೋಡಿದ್ದೆ.”
“ಈಗ್ಲು ನಾನು ಮುಖ್ಯಮಂತ್ರಿಯಾಗಿರದ್ರಿಂದ, ನನಿಗೆ ಕೆಟ್ಟ ಹೆಸರು ಬರತ್ತೆ ಅಂತ ಸೂಚನೆ ಕೊಡ್ಳಿಲ್ಲ.”
“ನಿಮ್ಮ ಸರಕಾರ ಕೆಡುವಕ್ಕೆ ಸಂಚು ಮಾಡ್ತಾಯಿರೊ ಎಮ್ಮೆಲ್ಲೆಗಳಿಗೆ ವಸಿ ವಿಚಾರಿಸಿಗಳಿ ಸಾ.”
“ಅದಕ್ಕೆಲ್ಲಾ ಟೈಂ ಬರತ್ತೆ ಇರಿ, ಈಗ ಬೇಡ.”
“ಕಿಡಿಗೇಡಿ ಪತ್ರಕರ್ತರಿಗೆ, ಏನಾರ ಮಾಡಬೇಕಲ್ಲ ಸಾ.”
“ನಮ್ಮ ತಂದೆ ಹೇಳಿದಾರೆ ನೆಗ್ಲೆಟ್ ಮಾಡು ಅಂತ, ಅಂಗೆ ಮಾಡ್ತಿನಿ.”
“ಒಳ್ಳೆ ಐಡಿಯಾ ಸಾರ್, ದೇವೇಗೌಡ್ರದು ಅನುಭವದ ಮಾತು.”
“ನಮ್ಮ ತಂದೆಯವರು ರಾಷ್ಟ್ರಮಟ್ಟದ ನಾಯಕರಾದ್ರೂ ಅವರ ಬಗ್ಗೆ ಒಳ್ಳೆದು ಬರೀಲಿಲ್ಲ ಇವುರು.”
“ನಾವು ಬರದಿದ್ದಿವಿ ಸಾರ್, ಅವುರೇನು ಅನ್ನದ ಇವತ್ತಿಗೂ ಜನಕ್ಕೆ ಹೇಳಿಕೊಂಡು ಬಂದಿದ್ದೀವಿ.”
“ಥ್ಯಾಂಕ್ಸ್ ಯಾಹೂ ಅವುರೆ, ಈ ಕಡೆ ಬನ್ನಿ ಈಗ ಟೈಮಿಲ್ಲ.”
“ಯಾಕ್ ಸಾರ್.”
“ಕುಕ್ಕೆ ಸುಬ್ರಮಣ್ಯಕ್ಕೆ ಚಿನ್ನದ ರಥ ಮಾಡಸೊ ಚರ್ಚೆಗೆ ಆ ದೇವಸ್ತಾನದೋರು ಬಂದವುರೆ”
“ಆಯ್ತು ಮಾಡಿಸಿ ಸಾರ್; ಕುಕ್ಕೆಗೆ ಚಿನ್ನದ ರಥ ಮಾಡಿಸೊ ತೀರ್ಮಾನದಿಂದ ನಿಖಿಲ್ ಎರಡೂವರೆ ಲಕ್ಷ ಲೀಡಲ್ಲಿ ಬರ್ತಾನೆ. ಗೌಡ್ರು ಪ್ರಜ್ವಲ್ ವಿಷಯ ಅಂಗಿರ್ಲಿ, ಅಮ್ಯಾಲೆ ಕರ್ನಾಟಕದ ಎಲ್ಲ ಹಳ್ಳಿಗಳಿಗೂ ಟ್ಯಾಂಕರಲ್ಲಿ ನೀರು ಹೊಡಿತಾ ಅವುರೆ. ಈ ಪೈಕಿ ಕಾಂಗ್ರೆಸ್ಸಿನವುರು ದಳದÀ ಕಡಿಯವರಿಗೆ ನೀರು ಕೊಡಲ್ಲ. ದಳದವುರು ಕಾಂಗ್ರೆಸ್ಸಿಗೆ ಓಟಾಕಿದೋರಿಗೆ ನೀರು ಕೊಡ್ತಾಯಿಲ್ಲ. ಇನ್ನ ಬಿಜೆಪಿಗಳು ಯಾರಿಗೂ ನೀರು ಕೊಡ್ತಾಯಿಲ್ಲ. ಇಂಥ ಧಾರುಣವಾದ ಜಲಕ್ಷಾಮ, ಸುಬ್ರಮಣ್ಯ ದೇವರಿಗೆ ಚಿನ್ನದ ರಥ ಮಾಡಿಸೋದ್ರಿಂದ ಪರಿಹಾರ ಕಾಣೋದಾದ್ರೆ, ಮಾಡಿಸಿ ಸಾ. ಇನ್ನೊಂದು ವಿಷಯ, ಆ ದೇವರಿಗೆ ಒಡವೆ ಕೊಟ್ಟ ಮಲ್ಯ ಕೂಡ್ಳೆ ಹಾಳಾದ ಗೊತ್ತ ಸಾ, ಹಲೋ…. ಹಲೋ…….. ಹಲೋ……..”
“ಥೂತ್ತೇರಿ”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...